Old/New Testament
ಗಾಯಕವೃಂದ
25 ದಾವೀದನೂ ಸೇನಾಪತಿಗಳೂ ಆಸಾಫನ ಸಂತತಿಯವರನ್ನು ವಿಶೇಷವಾದ ಸೇವೆಗೆ ಪ್ರತ್ಯೇಕಿಸಿದರು. ಆಸಾಫನ ಗಂಡುಮಕ್ಕಳು ಹೇಮಾನ್ ಮತ್ತು ಯೆದುತೂನ್. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸುತ್ತಾ ದೇವರ ಸಂದೇಶವನ್ನು ಪ್ರವಾದಿಸುವುದೇ ಇವರ ಸೇವೆಯಾಗಿತ್ತು. ಈ ರೀತಿಯಾಗಿ ದೇವರ ಸೇವೆಯನ್ನು ಮಾಡಿದವರು ಯಾರೆಂದರೆ:
2 ಆಸಾಫನ ಸಂತತಿಯಲ್ಲಿ: ಜಕ್ಕೂರ್, ಯೋಸೇಫ್, ನೆತನ್ಯ ಮತ್ತು ಅಶರೇಲ, ಅರಸನಾದ ದಾವೀದನು ಆಸಾಫನನ್ನು ಪ್ರವಾದಿಸುವುದಕ್ಕಾಗಿ ಆರಿಸಿಕೊಂಡನು. ಆಸಾಫನು ತನ್ನ ಮಕ್ಕಳಿಗೂ ಮಾರ್ಗದರ್ಶನ ನೀಡಿದನು.
3 ಯೆದುತೂನನ ಸಂತತಿಯವರಲ್ಲಿ: ಗೆದಲ್ಯ, ಜೇರಿ, ಯೆಶಾಯ, ಶಿಮ್ಮೀ, ಹಷಬ್ಯ ಮತ್ತು ಮತ್ತಿತ್ಯ. ಒಟ್ಟು ಅವನ ಆರು ಮಂದಿ ಮಕ್ಕಳು ತಮ್ಮ ತಂದೆಯಾದ ಯೆದುತೂನನೊಂದಿಗೆ ಹಾರ್ಪ್ ವಾದ್ಯಗಳನ್ನು ಬಾರಿಸಿ ದೇವರ ಸಂದೇಶವನ್ನು ತಿಳಿಸಿದರು ಮತ್ತು ದೇವರಿಗೆ ಕೃತಜ್ಞತಾಸ್ತುತಿಯನ್ನು ಅರ್ಪಿಸಿದರು.
4 ಹೇಮಾನನ ಸಂತತಿಯವರಲ್ಲಿ ಗಾಯನವೃಂದದಲ್ಲಿ ಸೇವೆ ಮಾಡಿದವರು ಯಾರೆಂದರೆ: ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೂಬಾಯೇಲ್ ಮತ್ತು ಯೆರೀಮೋತ; ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ ಮತ್ತು ರೋಮಮ್ತಿ ಯೆಜೆರ್; ಯೊಷ್ಬೆಕಾಷ, ಮಲ್ಲೋತೀ, ಹೋತೀರ್ ಮತ್ತು ಮಹಜೀಯೋತ್. 5 ಇವರೆಲ್ಲರೂ ಹೇಮಾನನ ಮಕ್ಕಳು. ಹೇಮಾನನು ದಾವೀದನ ಪ್ರವಾದಿಯಾಗಿದ್ದನು. ಅವನನ್ನು ಬಲಿಷ್ಠನನ್ನಾಗಿ ಮಾಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳೂ ಮೂವರು ಹೆಣ್ಣುಮಕ್ಕಳೂ ಹುಟ್ಟಿದರು.
6 ಹೇಮಾನನು ತನ್ನ ಮಕ್ಕಳೆಲ್ಲರನ್ನು ದೇವಾಲಯದಲ್ಲಿ ಹಾಡುವದಕ್ಕಾಗಿ ಬಳಸಿಕೊಂಡನು. ಅವರು ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ತಾಳಗಳನ್ನೂ ಬಾರಿಸಿದರು. ಹೀಗೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಅರಸನಾದ ದಾವೀದನು ಅವರನ್ನು ಆರಿಸಿಕೊಂಡನು. 7 ಅವರೂ ಅವರ ಸಂಬಂಧಿಕರೂ ಹಾಡುಗಳನ್ನು ಹಾಡಲು ತರಬೇತಿ ಹೊಂದಿದವರಾಗಿದ್ದರು. ಒಟ್ಟು ಇನ್ನೂರ ಎಂಭತ್ತೆಂಟು ಮಂದಿ ಗಾಯಕರು ದೇವರಿಗೆ ಸ್ತುತಿಗೀತೆ ಹಾಡಲು ತರಬೇತಿ ಹೊಂದಿದವರಾಗಿದ್ದರು. 8 ಪ್ರತಿಯೊಬ್ಬರಿಗೂ ಕೆಲಸಗಳನ್ನು ಗೊತ್ತುಪಡಿಸಲು ಚೀಟುಹಾಕಿ ನೇಮಕ ಮಾಡಿದರು. ಅವರು ಯಾವ ಪಕ್ಷಪಾತವನ್ನೂ ಮಾಡಲಿಲ್ಲ. ದೊಡ್ಡವರು, ಚಿಕ್ಕವರು, ಉಪಾಧ್ಯಾಯರು, ವಿದ್ಯಾರ್ಥಿಗಳು ಎಂಬ ಬೇಧಭಾವವಿಲ್ಲದೆ ಆರಿಸಲ್ಪಟ್ಟರು.
9 ಮೊದಲನೆಯದಾಗಿ, ಆಸಾಫ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
ಎರಡನೆಯದಾಗಿ, ಗೆದಲ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
10 ಮೂರನೆಯದಾಗಿ, ಜಕ್ಕೂರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
11 ನಾಲ್ಕನೆಯದಾಗಿ, ಇಚ್ರೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
12 ಐದನೆಯದಾಗಿ, ನೆತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
13 ಆರನೆಯದಾಗಿ, ಬುಕ್ಕೀಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
14 ಏಳನೆಯದಾಗಿ, ಯೆಸರೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
15 ಎಂಟನೆಯದಾಗಿ, ಯೆಶಾಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
16 ಒಂಭತ್ತನೆಯದಾಗಿ, ಮತ್ತನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
17 ಹತ್ತನೆಯದಾಗಿ, ಶಿಮ್ಮೀಯನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.
18 ಹನ್ನೊಂದನೆಯದಾಗಿ, ಅಜರೇಲನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.
19 ಹನ್ನೆರಡನೆಯದಾಗಿ, ಹಷಬ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
20 ಹದಿಮೂರನೆಯದಾಗಿ, ಶೂಬಾಯೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
21 ಹದಿನಾಲ್ಕನೆಯದಾಗಿ, ಮತ್ತಿತ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
22 ಹದಿನೈದನೆಯದಾಗಿ, ಯೆರೆಮೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
23 ಹದಿನಾರನೆಯದಾಗಿ, ಹನನ್ಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
24 ಹದಿನೇಳನೆಯದಾಗಿ, ಯೊಷ್ಬೆಕಾಷನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
25 ಹದಿನೆಂಟನೆಯದಾಗಿ, ಹನಾನೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
26 ಹತ್ತೊಂಭತ್ತನೆಯದಾಗಿ, ಮಲ್ಲೋತಿಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
27 ಇಪ್ಪತ್ತನೆಯದಾಗಿ, ಎಲೀಯಾತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
28 ಇಪ್ಪತ್ತೊಂದನೆಯದಾಗಿ, ಹೋತೀರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
29 ಇಪ್ಪತ್ತೆರಡನೆಯದಾಗಿ, ಗಿದ್ದಲ್ತಿಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
30 ಇಪ್ಪತ್ತಮೂರನೆಯದಾಗಿ, ಮಹಜೀಯೋತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
31 ಇಪ್ಪತ್ತನಾಲ್ಕನೆಯದಾಗಿ, ರೋಮಮ್ತಿಯೆಜೆರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.
ದ್ವಾರಪಾಲಕರ ವರ್ಗಗಳು
26 ಕೋರಹಿಯ ವಂಶದವರಲ್ಲಿ ದ್ವಾರಪಾಲಕರು ಯಾರೆಂದರೆ:
ಮೆಷೆಲೆಮ್ಯ ಮತ್ತು ಅವನ ಗಂಡುಮಕ್ಕಳು. (ಮೆಷೆಲೆಮ್ಯನು ಕೋರಹಿಯನ ಮಗ. ಕೋರಹಿಯನು ಆಸಾಫನ ಕುಲದವನಾಗಿದ್ದನು.) 2 ಜೆಕರ್ಯನು ಮೆಷೆಲೆಮ್ಯನ ಮೊದಲನೆಯ ಮಗ; ಎದೀಯಯೇಲನು ಎರಡನೆಯ ಮಗ; ಜೆಬದ್ಯನು ಮೂರನೆಯ ಮಗ; ಯತ್ನಿಯೇಲನು ನಾಲ್ಕನೆಯ ಮಗ; 3 ಏಲಾಮನು ಐದನೆಯ ಮಗ; ಯೆಹೋಹಾನನು ಆರನೆಯ ಮಗ; ಮತ್ತು ಎಲೈಹೋಯೇನೈ ಏಳನೆಯ ಮಗ.
4 ಓಬೇದೆದೋಮ್ ಮತ್ತು ಅವನ ಮಕ್ಕಳು: ಶೆಮಾಯನು ಚೊಚ್ಚಲಮಗ; ಎರಡನೆಯವನು ಯೆಹೋಜಾಬಾದ್; ಮೂರನೆಯವನು ಯೋವಾಹ, ನಾಲ್ಕನೆಯವನು ಸಾಕಾರ್, ಐದನೆಯವನು ನೆತನೇಲ್; 5 ಆರನೆಯವನು ಅಮ್ಮೀಯೇಲ; ಏಳನೆಯವನು ಇಸ್ಸಾಕಾರ್; ಎಂಟನೆಯವನು ಪೆಯುಲ್ಲೆತೈ. ದೇವರು ಓಬೇದೆದೋಮನನ್ನು ಅತಿಯಾಗಿ ಆಶೀರ್ವದಿಸಿದನು. 6 ಶೆಮಾಯನಿಗೂ ಗಂಡುಮಕ್ಕಳಿದ್ದರು. ಅವರು ಧೈರ್ಯಶಾಲಿಗಳೂ ಬಲಶಾಲಿಗಳೂ ಆಗಿದ್ದದರಿಂದ ತಂದೆಯ ಕುಲದಲ್ಲಿ ನಾಯಕರಾಗಿದ್ದರು. 7 ಶೆಮಾಯನ ಮಕ್ಕಳು ಯಾರೆಂದರೆ: ಒತ್ನೀ, ರೆಫಾಯೇಲ್, ಓಬೇದ್, ಎಲ್ಜಾಬಾದ್, ಎಲೀಹು ಮತ್ತು ಸಮಕ್ಯ. ಎಲ್ಜಾಬಾದನ ಸಂಬಂಧಿಕರು ಕುಶಲ ಕರ್ಮಿಗಳು. 8 ಈ ಎಲ್ಲಾಜನರೂ, ಓಬೇದೆದೋಮನ ಸಂತತಿಯವರು. ಇವರೆಲ್ಲಾ ಬಲಶಾಲಿಗಳಾಗಿದ್ದರು. ಒಳ್ಳೆಯ ಅನುಭವಸ್ಥ ದ್ವಾರಪಾಲಕರಾಗಿದ್ದರು. ಓಬೇದೆದೋಮನ ಸಂತತಿಯವರ ಒಟ್ಟು ಸಂಖ್ಯೆ ಅರವತ್ತೆರಡು ಮಂದಿ.
9 ಮೆಷೆಲೆಮ್ಯನ ಗಂಡುಮಕ್ಕಳು ಮತ್ತು ಸಂಬಂಧಿಕರು ಬಲಾಢ್ಯರಾಗಿದ್ದರು. ಅವನಿಗೆ ಒಟ್ಟು ಹದಿನೆಂಟು ಗಂಡುಮಕ್ಕಳು ಮತ್ತು ಸಂಬಂಧಿಕರು ಇದ್ದರು.
10 ಮೆರಾರೀ ಕುಲದವರ ದ್ವಾರಪಾಲಕರು ಯಾರೆಂದರೆ: ಹೋಸ ಮತ್ತು ಅವನ ಗಂಡುಮಕ್ಕಳಲ್ಲಿ ಆರಿಸಲ್ಪಟ್ಟ ಶಿಮ್ರಿ. (ಇವನು ಚೊಚ್ಚಲ ಮಗನಲ್ಲದಿದ್ದರೂ ತಂದೆಯು ಅವನನ್ನು ಪ್ರಧಾನನ್ನಾಗಿ ಆರಿಸಿದನು.) 11 ಅವನ ಎರಡನೆಯ ಮಗನು ಹಿಲ್ಕೀಯ; ಮೂರನೆಯವನು ಟೆಬಲ್ಯ. ನಾಲ್ಕನೆಯ ಮಗನು ಜೆಕರ್ಯ. ಹೀಗೆ ಒಟ್ಟು ಅವನಿಗೆ ಹದಿಮೂರು ಗಂಡುಮಕ್ಕಳೂ ಸಂಬಂಧಿಕರೂ ಇದ್ದರು.
12 ಇವರೆಲ್ಲಾ ದೇವಾಲಯದ ದ್ವಾರಪಾಲಕರಾಗಿದ್ದರು. ಅದರಲ್ಲಿ ಸೇವೆಮಾಡುತ್ತಿರುವ ಇತರರಂತೆಯೇ ಇವರೂ ದೇವಾಲಯದ ದ್ವಾರಗಳನ್ನು ಕಾಯುತ್ತಿದ್ದರು. 13 ಪ್ರತಿಯೊಂದು ಕುಟುಂಬಕ್ಕೆ ಒಂದೊಂದು ದ್ವಾರದ ಜವಾಬ್ದಾರಿಕೆಯನ್ನು ಚೀಟುಹಾಕಿ ಕೊಡಲಾಯಿತು.
14 ಶೆಲೆಮ್ಯನಿಗೆ ಪೂರ್ವದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು; ಅವನ ಮಗನಾದ ಜೆಕರ್ಯನಿಗೆ ಉತ್ತರ ದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನು ಒಳ್ಳೆಯ ಸಲಹೆಗಾರನಾಗಿದ್ದನು. 15 ಓಬೇದೆದೋಮನಿಗೆ ದಕ್ಷಿಣದಿಕ್ಕಿನ ಬಾಗಿಲನ್ನು ಕಾಯುವ ಜವಾಬ್ದಾರಿ ದೊರೆಯಿತು. ಇವನ ಮಕ್ಕಳಿಗೆ ಬೆಲೆಬಾಳುವ ಸಾಮಾಗ್ರಿಗಳ ಉಗ್ರಾಣದ ಕೋಣೆಯನ್ನು ಕಾಯುವ ಕೆಲಸ ದೊರೆಯಿತು. 16 ಶುಪ್ಪೀಮ್ ಮತ್ತು ಹೋಸ ಎಂಬವರಿಗೆ ಪಶ್ಚಿಮದ ಬಾಗಿಲನ್ನು ಮತ್ತು ಮೇಲ್ದಾರಿಯಲ್ಲಿದ್ದ ಶೆಲ್ಲೆಕೆತ್ ಬಾಗಿಲನ್ನು ಕಾಯುವ ಕೆಲಸ ದೊರೆಯಿತು.
ಕಾವಲುಗಾರರು ಪಕ್ಕಪಕ್ಕದಲ್ಲಿಯೇ ನಿಂತುಕೊಳ್ಳುತ್ತಿದ್ದರು. 17 ಪ್ರತಿದಿನ ಪೂರ್ವದಿಕ್ಕಿನ ಬಾಗಿಲಿನಲ್ಲಿ ಆರು ಮಂದಿ ಲೇವಿಯರು ಕಾವಲಿಗಿದ್ದರು; ಉತ್ತರದಿಕ್ಕಿನ ಬಾಗಿಲಿನಲ್ಲಿ ಪ್ರತಿದಿನ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ದಕ್ಷಿಣದ ಬಾಗಿಲಿನಲ್ಲಿ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ಇಬ್ಬರು ಲೇವಿಯರು ಬೆಲೆಬಾಳುವ ವಸ್ತುಗಳ ಕೋಣೆಗೆ ಕಾವಲಾಗಿದ್ದರು. 18 ಪಶ್ಚಿಮದ ಅಂಗಳದಲ್ಲಿ ನಾಲ್ಕು ಮಂದಿ ಕಾವಲುಗಾರರಿದ್ದರು.
19 ಅಂಗಳಕ್ಕೆ ಹೋಗುವ ದಾರಿಯನ್ನು ಕಾಯಲು ಇಬ್ಬರು ಕಾವಲುಗಾರರಿದ್ದರು. ಹೀಗೆ ಇವರೆಲ್ಲಾ ದ್ವಾರಪಾಲಕರ ತಂಡಗಳು. ಇವರು ಕೋರಹ ಮತ್ತು ಮೆರಾರೀಯ ವಂಶದವರು.
ಖಜಾಂಚಿಗಳು ಮತ್ತು ಇತರ ಅಧಿಕಾರಿಗಳು
20 ಅಹೀಯನು ಲೇವಿ ಕುಲದವನಾಗಿದ್ದನು. ಇವನು ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಯಾಗಿದ್ದನು. ಅಲ್ಲದೆ ಪವಿತ್ರ ಸಾಮಾಗ್ರಿಗಳನ್ನು ಇಡುವ ಸ್ಥಳದ ಮೇಲೆಯೂ ಇವನು ಅಧಿಕಾರಿಯಾಗಿದ್ದನು.
21 ಲದ್ದಾನ್ಯನು ಗೇರ್ಷೋಮ್ ಕುಲದವನಾಗಿದ್ದನು. ಯೆಹೀಯೇಲೀಯು ಲದ್ದಾನ್ ಕುಲದ ನಾಯಕರಲ್ಲೊಬ್ಬನು. 22 ಯೆಹೀಯೇಲೀಯ ಗಂಡುಮಕ್ಕಳು: ಜೀತಾಮ್ ಮತ್ತು ಅವನ ತಮ್ಮನಾದ ಯೋವೇಲ. ಇವರು ಸಹ ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಗಳಾಗಿದ್ದರು.
23 ಇವರಲ್ಲದೆ ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಇವರ ಕುಲಗಳಿಂದ ಬೇರೆ ನಾಯಕರನ್ನು ಆರಿಸಿಕೊಂಡರು.
24 ಶೆಬೂವೇಲನು ದೇವಾಲಯದ ಅಮೂಲ್ಯ ವಸ್ತುಗಳಿಗೆ ಅಧಿಕಾರಿಯಾಗಿದ್ದನು. ಇವನು ಗೇರ್ಷೋಮನ ಮಗ. ಗೇರ್ಷೋಮನು ಮೋಶೆಯ ಮಗ. 25 ಶೆಬೂವೇಲನ ಸಂಬಂಧಿಕರು ಯಾರೆಂದರೆ: ಎಲೀಯೆಜೆರನ ಮಗನಾದ ರೆಹಬ್ಯ; ರೆಹಬ್ಯನ ಮಗನಾದ ಯೆತಾಯ; ಯೆತಾಯನ ಮಗನಾದ ಯೋರಾಮ್; ಯೋರಾಮನ ಮಗನಾದ ಜಿಕ್ರೀ; ಮತ್ತು ಜಿಕ್ರೀಯ ಮಗನಾದ ಶೆಲೋಮೋತ್. 26 ದಾವೀದನು ದೇವಾಲಯಕ್ಕೋಸ್ಕರ ಸಂಗ್ರಹಿಸಿದ ಎಲ್ಲಾ ವಸ್ತುಗಳಿಗೆ ಶೆಲೋಮೋತನೂ ಅವನ ಸಂಬಂಧಿಕರೂ ಅಧಿಕಾರಿಗಳಾಗಿದ್ದರು.
ಸೈನ್ಯಾಧಿಕಾರಿಗಳು ದೇವಾಲಯವನ್ನು ಕಟ್ಟಲು ಸಾಮಾಗ್ರಿಗಳನ್ನು ಒದಗಿಸಿದರು. 27 ಯುದ್ಧದಲ್ಲಿ ಗೆದ್ದ ವಸ್ತುಗಳಲ್ಲಿ ಕೆಲವನ್ನು ದೇವಾಲಯ ಕಟ್ಟಲು ಎತ್ತಿಡಲು ತೀರ್ಮಾನಿಸಿದರು. 28 ಶೆಲೋಮೋತ್ ಮತ್ತು ಅವನ ಸಂಬಂಧಿಕರೂ ಪ್ರವಾದಿಯಾದ ಸಮುವೇಲನೂ ಕೀಷನ ಮಗನಾದ ಸೌಲನೂ ನೇರನ ಮಗನಾದ ಅಬ್ನೇರನೂ ಚೆರೂಯಳ ಮಗನಾದ ಯೋವಾಬನೂ ದೇವರಿಗೆಂದು ಕೊಟ್ಟಿದ್ದ ಪವಿತ್ರವಸ್ತುಗಳ ಮೇಲ್ವಿಚಾರಕರಾಗಿದ್ದರು.
29 ಕೆನನ್ಯನು ಇಚ್ಹಾರ್ಯ ವಂಶದವನಾಗಿದ್ದನು. ಕೆನನ್ಯನೂ ಅವನ ಮಕ್ಕಳೂ ನ್ಯಾಯಾಧೀಶರಾಗಿಯೂ ಕಾನೂನು ಪಾಲಕರಾಗಿಯೂ ಇಸ್ರೇಲಿನ ಅನೇಕ ಕಡೆಗಳಲ್ಲಿ ಕೆಲಸ ಮಾಡಿದರು. 30 ಹಷಬ್ಯನು ಹೆಬ್ರೋನ್ ಸಂತಾನದವನಾಗಿದ್ದನು. ಇವನೂ ಇವನ ಸಂಬಂಧಿಕರೂ ಜೋರ್ಡನ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ಯೆಹೋವನ ಸೇವೆಗೂ ಅರಸನ ಕಾರ್ಯಕ್ಕೂ ಅಧಿಕಾರಿಗಳಾಗಿದ್ದರು. ಹಷಬ್ಯನ ವರ್ಗದಲ್ಲಿ ಒಟ್ಟು ಒಂದು ಸಾವಿರದ ಏಳುನೂರು ಮಂದಿ ಸಾಮರ್ಥ್ಯಶಾಲಿಗಳಿದ್ದರು. 31 ಹೆಬ್ರೋನ್ ಸಂತಾನದ ಚರಿತ್ರೆಗನುಸಾರವಾಗಿ ಯೆರೀಯನು ಅವರ ಅಧಿಪತಿಯಾಗಿದ್ದನು. ದಾವೀದನು ನಲವತ್ತು ವರ್ಷ ಇಸ್ರೇಲಿನ ಅರಸನಾಗಿದ್ದ ಕಾಲದಲ್ಲಿ ತನ್ನ ಜನರ ಚರಿತ್ರೆಯನ್ನು ಕಂಡುಹಿಡಿದು ದಾಖಲೆ ಮಾಡಲು ಆಜ್ಞೆಯಿತ್ತಿದ್ದನು. ಗಿಲ್ಯಾದಿನ ಯಾಜೇರ್ ಎಂಬಲ್ಲಿ ಹೆಬ್ರೋನ್ ಸಂತಾನಕ್ಕೆ ಸೇರಿದವರಲ್ಲಿ ಬಹಳ ಮಂದಿ ಅನುಭವಶಾಲಿಗಳಾದ ಕಾರ್ಮಿಕರು ದೊರಕಿದರು. 32 ಯೆರೀಯನಿಗೆ ಎರಡು ಸಾವಿರದ ಏಳುನೂರು ಮಂದಿ ಸಂಬಂಧಿಕರಿದ್ದರು. ಇವರೆಲ್ಲಾ ಬಲಾಢ್ಯರೂ ಕುಟುಂಬಕ್ಕೆ ನಾಯಕರುಗಳೂ ಆಗಿದ್ದರು. ದಾವೀದನು ಇವರೆಲ್ಲರಿಗೂ ರೂಬೇನ್, ಗಾದ್, ಅರ್ಧಮನಸ್ಸೆಯವರ ಪ್ರಾಂತ್ಯಗಳಲ್ಲಿ ಯೆಹೋವನಿಗೆ ಸಂಬಂಧಿಸಿದ ಕಾರ್ಯಗಳನ್ನು, ರಾಜನಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲು ನೇಮಕ ಮಾಡಿದನು.
ಸೈನಿಕ ತಂಡಗಳು
27 ಅರಸನ ಸೈನ್ಯದಲ್ಲಿ ಸೇವೆಮಾಡಿದವರ ಪಟ್ಟಿ. ಒಂದೊಂದು ತಂಡದವರು, ಇಸ್ರೇಲಿನ ಸೈನ್ಯಾಧಿಕಾರಿಗಳು, ಸಹಸ್ರಾಧಿಪತಿಗಳು ಮತ್ತು ಇತರ ಅಧಿಕಾರಿಗಳು ವರ್ಷದ ಆಯಾ ತಿಂಗಳಲ್ಲಿ ತಮ್ಮ ತಂಡದ ಸರದಿಯ ಪ್ರಕಾರ ಅರಸನ ವಿವಿಧ ಸೇವೆಮಾಡುತ್ತಿದ್ದರು. ಸೈನ್ಯದ ಪ್ರತಿಯೊಂದು ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಪುರುಷರಿದ್ದರು.
2 ಮೊದಲನೆಯ ತಿಂಗಳಲ್ಲಿ ಕಾರ್ಯಾಚರಣೆಯಲ್ಲಿರಬೇಕಾದ ತಂಡಕ್ಕೆ ಯಾಷೊಬ್ಬಾಮನು ಮುಖ್ಯಸ್ತನಾಗಿದ್ದನು. ಇವನು ಜಬ್ದೀಯೇಲನ ಮಗನಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು. 3 ಯಾಷೊಬ್ಬಾಮನು ಪೆರೆಚನ ಸಂತತಿಯವನಾಗಿದ್ದನು. ಇವನು ವರ್ಷದ ಮೊದಲನೆಯ ತಿಂಗಳಲ್ಲಿ ಸೇವೆಮಾಡುವ ಸೈನ್ಯಾಧಿಕಾರಿಯಾಗಿದ್ದನು.
4 ಎರಡನೆಯ ತಿಂಗಳಿನ ಸೈನ್ಯಾಧಿಕಾರಿ ಅಹೋಹೀಯನಾದ ದೋದೈ. ಮಿಕ್ಲೋತ್ ಎಂಬವನು ಈ ತಂಡದ ನಾಯಕನಾಗಿದ್ದನು. ಒಟ್ಟು ಇಪ್ಪತ್ತನಾಲ್ಕು ಸಾವಿರ ಮಂದಿ ದೋದೈನ ತಂಡದಲ್ಲಿದ್ದರು.
5 ಮೂರನೆಯ ಸೈನ್ಯಾಧಿಪತಿಯು ಬೆನಾಯ. ಇವನು ಯೆಹೋಯಾದನ ಮಗನಾಗಿದ್ದನು. ಇವನು ಮಹಾಯಾಜಕನಾಗಿದ್ದನು. ಇವನೊಂದಿಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಕಾಲಾಳುಗಳು ಇದ್ದರು. 6 ಮೂವತ್ತು ವೀರರಲ್ಲಿ ಒಬ್ಬನಾದ ಬೆನಾಯನೇ ಇವನು. ಬೆನಾಯನು ಅವರ ನಾಯಕನಾಗಿದ್ದನು. ಬೆನಾಯನ ಮಗ ಅಮ್ಮೀಜಾಬಾದನು ಬೆನಾಯನ ತಂಡದ ಅಧಿಪತಿಯಾಗಿದ್ದನು.
7 ನಾಲ್ಕನೆಯ ಸೇನಾಪತಿಯು ಅಸಾಹೇಲ. ಇವನು ವರ್ಷದ ನಾಲ್ಕನೆಯ ತಿಂಗಳಿನಲ್ಲಿ ರಾಜ್ಯದ ಸೈನ್ಯದ ಅಧಿಪತಿಯಾಗಿದ್ದನು. ಇವನು ಯೋವಾಬನ ಸೋದರ. ಇವನ ನಂತರ ಅಸಾಹೇಲನ ಮಗನಾದ ಜೆಬದ್ಯನು ಸೈನ್ಯಾಧಿಕಾರಿಯಾದನು. ಅಸಾಹೇಲನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.
8 ಐದನೆಯ ಸೈನ್ಯಾಧಿಕಾರಿಯು ಶಮ್ಹೂತ. ಇವನು ಇಜ್ರಾಹ್ಯನ ಸಂತತಿಯವನಾಗಿದ್ದನು. ವರ್ಷದ ಐದನೆಯ ತಿಂಗಳಿನ ಸೈನ್ಯದ ಮುಖ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
9 ಆರನೆಯ ಸೈನ್ಯಾಧಿಪತಿಯು ಐರನು. ಇವನು ವರ್ಷದ ಆರನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನು ತೆಕೋವನದ ಇಕ್ಕೇಷನ ಮಗ. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
10 ಹೆಲೆಚನು ಏಳನೆಯ ಸೈನ್ಯಾಧಿಕಾರಿ. ವರ್ಷದ ಏಳನೆಯ ತಿಂಗಳಲ್ಲಿ ಇವನು ಸೈನ್ಯಾಧಿಕಾರಿಯಾಗಿದ್ದನು. ಇವನು ಎಫ್ರಾಯೀಮ್ ಸಂತತಿಯ ಪೆಲೋನ್ಯನಾಗಿದ್ದನು. ಇವನ ತಂಡದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
11 ಎಂಟನೆಯ ಸೇನಾಧಿಪತಿಯ ಹೆಸರು ಸಿಬ್ಬಕೈ. ಇವನು ಹುಷ ಊರಿನ ಜೆರಹನ ಸಂತತಿಯವನು. ವರ್ಷದ ಎಂಟನೆಯ ತಿಂಗಳಿನ ಸೇನಾಧಿಪತಿ. ಇವನ ಕೈ ಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
12 ಒಂಭತ್ತನೆಯ ಸೇನಾಪತಿ ಅಬೀಯೆಜೆರ್. ಇವನು ಅನತೋತ್ ಊರಿನ ಬೆನ್ಯಾಮೀನ್ ಕುಲದವನು. ವರ್ಷದ ಒಂಭತ್ತನೆಯ ತಿಂಗಳಲ್ಲಿ ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
13 ಹತ್ತನೆಯ ಸೇನಾಪತಿ ಮಹರೈ. ಇವನು ನೆಟೋಫದ ಜೆರಹನ ಸಂತತಿಯವನು. ವರ್ಷದ ಹತ್ತನೆಯ ತಿಂಗಳಿಗೆ ಇವನು ಸೈನ್ಯಾಧಿಕಾರಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಮಂದಿ ಸೈನಿಕರಿದ್ದರು.
14 ಹನ್ನೊಂದನೆಯ ಸೇನಾಪತಿ ಪಿರ್ರಾತೋನ್ಯನಾದ ಬೆನಾಯ. ಇವನು ಎಫ್ರಾಯೀಮ್ ಕುಲದ ಪಿರ್ರಾತೋನ್ ಎಂಬಲ್ಲಿಂದ ಬಂದವನು. ವರ್ಷದ ಹನ್ನೊಂದನೆಯ ತಿಂಗಳಿಗೆ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಸೈನಿಕರಿದ್ದರು.
15 ಹನ್ನೆರಡನೆಯ ಸೇನಾಪತಿ ಹೆಲ್ದೈ. ಇವನು ನೆಟೋಫ ಊರಿನ ಒತ್ನೀಯೇಲನ ಸಂತತಿಯವನು. ವರ್ಷದ ಹನ್ನೆರಡನೆಯ ತಿಂಗಳಿನಲ್ಲಿ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಗೆ ಇಪ್ಪತ್ತನಾಲ್ಕು ಸಾವಿರ ಸೈನಿಕರಿದ್ದರು.
ಕುಲಪ್ರಧಾನರು
16 ಇಸ್ರೇಲ್ ಕುಲಗಳ ನಾಯಕರು ಯಾರೆಂದರೆ:
ರೂಬೇನ್ಯರಲ್ಲಿ ಜಿಕ್ರೀಯ ಮಗ ಎಲೀಯೆಜರ್.
ಸಿಮೆಯೋನ್ಯರಲ್ಲಿ ಮಾಕನ ಮಗನಾದ ಶೆಫಟ್ಯ.
17 ಲೇವಿಯರಲ್ಲಿ ಕೆಮುವೇಲನ ಮಗನಾದ ಹಷಬ್ಯ.
ಆರೋನ್ಯರಲ್ಲಿ ಚಾದೋಕ್.
18 ಯೆಹೂದ್ಯರಲ್ಲಿ ಎಲೀಹು (ದಾವೀದನ ಅಣ್ಣಂದಿರಲ್ಲೊಬ್ಬನು.)
ಇಸ್ಸಾಕಾರರಲ್ಲಿ ಮೀಕಾಯೇಲನ ಮಗ ಒಮ್ರಿ.
19 ಜೆಬೂಲೂನ್ಯರಲ್ಲಿ ಓಬದ್ಯನ ಮಗನಾದ ಇಷ್ಮಾಯ.
ನಫ್ತಾಲ್ಯರಲ್ಲಿ ಅಜ್ರೀಯೇಲನ ಮಗನಾದ ಯೆರೀಮೋತ್.
20 ಎಫ್ರಾಯೀಮ್ಯರಲ್ಲಿ ಅಜಜ್ಯನ ಮಗನಾದ ಹೊಷೇಯನು.
ಪಶ್ಚಿಮ ಮನಸ್ಸೆಯವರಲ್ಲಿ ಪೆದಾಯನ ಮಗ ಯೋವೇಲ್.
21 ಪೂರ್ವ ಮನಸ್ಸೆಯವರಲ್ಲಿ ಜೆಕರ್ಯನ ಮಗ ಇದ್ದೋ.
ಬೆನ್ಯಾಮೀನ್ಯರಲ್ಲಿ ಅಬ್ನೇರನ ಮಗ ಯಗಸೀಯೇಲ್.
22 ದಾನ್ಯರಲ್ಲಿ ಯೆರೋಹಾಮನ ಮಗ ಅಜರೇಲ್.
ಇವರು ಇಸ್ರೇಲ್ ಗೋತ್ರಪ್ರಧಾನರು.
ದಾವೀದನು ಇಸ್ರೇಲರನ್ನು ಲೆಕ್ಕಿಸಿದ್ದು
23 ದೇವರು ಇಸ್ರೇಲರನ್ನು ಆಕಾಶದ ನಕ್ಷತ್ರದಷ್ಟು ಹೆಚ್ಚಿಸುವೆನೆಂದು ವಾಗ್ದಾನ ಮಾಡಿದ್ದ ಪ್ರಕಾರ ಇಸ್ರೇಲರ ಸಂಖ್ಯೆ ಅಪರಿಮಿತವಾಗಿತ್ತು. ಆದ್ದರಿಂದ ದಾವೀದನು ಇಪ್ಪತ್ತು ವರ್ಷ ಪ್ರಾಯದ ಮೇಲ್ಪಟ್ಟ ಗಂಡಸರನ್ನು ಮಾತ್ರ ಲೆಕ್ಕಿಸುವ ಆಲೋಚನೆ ಮಾಡಿದನು. 24 ಚೆರೂಯಳ ಮಗನಾದ ಯೋವಾಬನು ಲೆಕ್ಕಿಸುವ ಕಾರ್ಯ ಪ್ರಾರಂಭಿಸಿದನು. ಆದರೆ ಅವನು ಪೂರ್ಣಗೊಳಿಸಲಿಲ್ಲ. ದೇವರು ಇಸ್ರೇಲರ ಮೇಲೆ ಕೋಪಗೊಂಡನು. ಇದರಿಂದಾಗಿ ಇಸ್ರೇಲರ ಜನಸಂಖ್ಯೆಯನ್ನು ದಾವೀದನ ಚರಿತ್ರಾ ಪುಸ್ತಕದಲ್ಲಿ ದಾಖಲೆ ಮಾಡಲಿಲ್ಲ.
ಅರಸನ ಆಡಳಿತ ವರ್ಗದವರು
25 ಅರಸನ ಆಸ್ತಿಗೆ ಜವಾಬ್ದಾರರಾಗಿದ್ದವರ ಪಟ್ಟಿ:
ಅದೀಯೇಲನ ಮಗನಾದ ಅಜ್ಮಾವೆತ್ ರಾಜನ ಉಗ್ರಾಣಗಳ ಅಧಿಕಾರಿಯಾಗಿದ್ದನು.
ಉಜ್ಜೀಯನ ಮಗನಾದ ಯೋನಾತಾನ್ ಚಿಕ್ಕ ಊರುಗಳಲ್ಲಿ, ಹಳ್ಳಿಗಳಲ್ಲಿ, ಹೊಲಗಳಲ್ಲಿ ಮತ್ತು ಗೋಪುರಗಳಲ್ಲಿ ಇದ್ದ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.
26 ಕೆಲೂಬನ ಮಗನಾದ ಎಜ್ರೀಯು ರಾಜನ ವ್ಯವಸಾಯಗಾರರಿಗೆ ಅಧಿಕಾರಿಯಾಗಿದ್ದನು.
27 ರಾಮಾದ ಶಿಮ್ಮೀಯು ರಾಜನ ದ್ರಾಕ್ಷಿತೋಟಗಳ ಅಧಿಕಾರಿಯಾಗಿದ್ದನು.
ಶಿಪ್ಮೀಯದ ಜಬ್ದೀಯು ರಾಜನ ದ್ರಾಕ್ಷಿತೋಟಗಳಿಂದ ದೊರಕಿದ ದ್ರಾಕ್ಷಾರಸದ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.
28 ಗೆದೆರಿನ ಬಾಳ್ಹಾನಾನ್ ಪಶ್ಚಿಮದ ಬೆಟ್ಟಪ್ರದೇಶದಲ್ಲಿ ಆಲಿವ್ ಮರಗಳ ಮತ್ತು ಸಿಖಮೊರ್ ಮರಗಳ ತೋಪುಗಳಿಗೆ ಅಧಿಕಾರಿಯಾಗಿದ್ದನು.
ಯೋವಾಷನು ಆಲಿವ್ ಎಣ್ಣೆಯ ಉಗ್ರಾಣಗಳಿಗೆ ಅಧಿಕಾರಿಯಾಗಿದ್ದನು.
29 ಶಾರೋನಿನ ಶಿಟ್ರೈಯು ಶಾರೋನಿನ ಸುತ್ತಮುತ್ತಲಿದ್ದ ರಾಜನ ಕುರಿದನಗಳ ಹಿಂಡುಗಳ ಅಧಿಕಾರಿಯಾಗಿದ್ದನು.
ಅದ್ಲ್ಯೆಯ ಮಗನಾದ ಶಾಫಾಟನು ತಗ್ಗುಪ್ರದೇಶಗಳಲ್ಲಿದ್ದ ರಾಜನ ಪಶುಗಳ ಹಿಂಡುಗಳಿಗೆ ಅಧಿಕಾರಿಯಾಗಿದ್ದನು.
30 ಇಷ್ಮಾಯೇಲ್ಯನಾದ ಓಬೀಲನು ಒಂಟೆಗಳ ಮೇಲೆ ಅಧಿಕಾರಿಯಾಗಿದ್ದನು. ಮೇರೊನೋತ್ಯನಾದ ಯೆಹ್ದೆಯು ರಾಜನ ಕತ್ತೆಗಳ ಹಿಂಡಿಗೆ ಅಧಿಕಾರಿಯಾಗಿದ್ದನು.
31 ಹಗ್ರೀಯನಾದ ಯಾಜೀಜನು ರಾಜನ ಕುರಿಹಿಂಡುಗಳ ಮೇಲೆ ಅಧಿಕಾರಿಯಾಗಿದ್ದನು.
ಇವರೆಲ್ಲರೂ ರಾಜನ ಆಸ್ತಿಪಾಸ್ತಿಗಳ ಮೇಲ್ವಿಚಾರಕರಾಗಿದ್ದರು.
32 ದಾವೀದನ ಚಿಕ್ಕಪ್ಪನಾದ ಯೋನಾತಾನನು ಉತ್ತಮ ಸಲಹೆಗಾರನಾಗಿದ್ದನು. ಹಕ್ಮೋನಿಯ ಮಗನಾದ ಯೆಹೀಯೇಲನು ರಾಜನ ಗಂಡುಮಕ್ಕಳನ್ನು ಪಾಲನೆ ಮಾಡುತ್ತಿದ್ದನು. 33 ಅಹೀತೋಫೆಲನು ರಾಜನ ಮಂತ್ರಾಲೋಚಕನಾಗಿದ್ದನು. ಹೂಷೈ ರಾಜನ ಮಿತ್ರನಾಗಿದ್ದನು. ಇವನು ಅರ್ಕೀಯ ಜನರಿಗೆ ಸೇರಿದವನಾಗಿದ್ದನು. 34 ಬೆನಾಯನ ಮಗನಾದ ಯೆಹೋಯಾದವನೂ ಎಬ್ಯಾತಾರನೂ ಅಹೀತೋಫೆಲನ ತರುವಾಯ ರಾಜನ ಮಂತ್ರಾಲೋಚಕರಾದರು. ರಾಜನ ಸೈನ್ಯಕ್ಕೆ ಯೋವಾಬನು ಪ್ರಧಾನಸೇನಾಪತಿಯಾಗಿದ್ದನು.
ಯೇಸು ಹುಟ್ಟು ಕುರುಡನನ್ನು ಗುಣಪಡಿಸುವನು
9 ಯೇಸು ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡನು. 2 ಯೇಸುವಿನ ಶಿಷ್ಯರು ಆತನಿಗೆ, “ಗುರುವೇ, ಈ ಮನುಷ್ಯನು ಹುಟ್ಟು ಕುರುಡನಾಗಲು ಯಾರ ಪಾಪ ಕಾರಣ? ಅವನ ಸ್ವಂತ ಪಾಪವೇ ಅಥವಾ ಅವನ ತಂದೆತಾಯಿಗಳ ಪಾಪವೇ?” ಎಂದು ಕೇಳಿದರು.
3 ಯೇಸು, “ಅವನ ಪಾಪವಾಗಲಿ ಅವನ ತಂದೆತಾಯಿಗಳ ಪಾಪವಾಗಲಿ ಇದಕ್ಕೆ ಕಾರಣವಲ್ಲ. ದೇವರ ಕಾರ್ಯವು ಅವನಲ್ಲಿ ತೋರಿಬಲೆಂದು ಹೀಗಾಗಿದ್ದಾನೆ. 4 ನನ್ನನ್ನು ಕಳುಹಿಸಿದಾತನ ಕಾರ್ಯವನ್ನು ಹಗಲಿರುವಾಗಲೇ ನಾವು ಮಾಡಬೇಕು. ರಾತ್ರಿ ಬರುತ್ತದೆ. ಆಗ ಯಾವನೂ ಕೆಲಸ ಮಾಡಲಾರನು. 5 ನಾನು ಈ ಲೋಕದಲ್ಲಿರುವಾಗ, ನಾನೇ ಈ ಲೋಕಕ್ಕೆ ಬೆಳಕಾಗಿದ್ದೇನೆ” ಎಂದು ಹೇಳಿದನು.
6 ಯೇಸು ಈ ಮಾತನ್ನು ಹೇಳಿದ ಮೇಲೆ ನೆಲದ ಮೇಲೆ ಉಗುಳಿ ಅದರಿಂದ ಕೆಸರನ್ನು ಮಾಡಿಕೊಂಡು ಆ ಮನುಷ್ಯನ ಕಣ್ಣುಗಳಿಗೆ ಹಚ್ಚಿದನು. 7 ಯೇಸು ಆ ಮನುಷ್ಯನಿಗೆ, “ಹೋಗಿ ಸಿಲೋವ ಕೊಳದಲ್ಲಿ ತೊಳೆದುಕೊ” ಎಂದು ಹೇಳಿದನು. (ಸಿಲೋವ ಅಂದರೆ “ಕಳುಹಿಸಲ್ಪಟ್ಟವನು.”) ಅಂತೆಯೇ ಅವನು ಹೋಗಿ ತೊಳೆದುಕೊಂಡನು. ಆ ಕೂಡಲೇ ಅವನಿಗೆ ದೃಷ್ಟಿಬಂದಿತು.
8 ಈ ಮನುಷ್ಯನು ಮೊದಲು ಭಿಕ್ಷೆ ಬೇಡುತ್ತಿದ್ದುದನ್ನು ನೋಡಿದ್ದ ಕೆಲವರು ಮತ್ತು ಅವನ ನೆರೆಯವರು, “ನೋಡಿ! ಯಾವಾಗಲೂ ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ” ಎಂದು ವಿಚಾರಿಸಿದರು.
9 ಕೆಲವು ಜನರು, “ಹೌದು ಅವನೇ” ಎಂದು ಹೇಳಿದರು. ಇನ್ನು ಕೆಲವರು, “ಇಲ್ಲ, ಇವನು ಆ ಮನುಷ್ಯನಲ್ಲ. ಇವನು ಅವನಂತಿದ್ದಾನಷ್ಟೇ” ಎಂದು ಹೇಳಿದರು.
ಅದಕ್ಕೆ ಆ ಮನುಷ್ಯನು, “ನಾನೇ ಅವನು” ಎಂದು ಹೇಳಿದನು.
10 ಜನರು, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.
11 ಆ ಮನುಷ್ಯನು, “ಯೇಸು ಎಂಬವನು ಸ್ವಲ್ಪ ಕೆಸರನ್ನು ಮಾಡಿ ನನ್ನ ಕಣ್ಣುಗಳಿಗೆ ಹಚ್ಚಿ, ಸಿಲೋವ ಕೊಳಕ್ಕೆ ಹೋಗಿ ತೊಳೆದುಕೊಳ್ಳಲು ಹೇಳಿದನು. ಅಂತೆಯೇ ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
12 ಜನರು ಆ ಮನುಷ್ಯನಿಗೆ, “ಆ ವ್ಯಕ್ತಿ ಎಲ್ಲಿದ್ದಾನೆ?” ಎಂದು ಕೇಳಿದರು.
ಆ ಮನುಷ್ಯನು, “ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.
ಗುಣಹೊಂದಿದ ವ್ಯಕ್ತಿಗೆ ಫರಿಸಾಯರಿಂದ ವಿಚಾರಣೆ
13 ಬಳಿಕ ಜನರು ಆ ಮನುಷ್ಯನನ್ನು ಫರಿಸಾಯರ ಬಳಿಗೆ ಕರೆದು ತಂದರು. ಮೊದಲು ಕುರುಡನಾಗಿದ್ದವನು ಅವನೇ. 14 ಯೇಸು ಕೆಸರು ಮಾಡಿ ಅವನ ಕಣ್ಣುಗಳನ್ನು ಗುಣಪಡಿಸಿದ್ದನು. ಯೇಸು ಈ ಕಾರ್ಯವನ್ನು ಮಾಡಿದ್ದು ಸಬ್ಬತ್ದಿನದಲ್ಲಿ. 15 ಆದ್ದರಿಂದ ಅವರು ಆ ಮನುಷ್ಯನಿಗೆ, “ನೀನು ದೃಷ್ಟಿಯನ್ನು ಹೇಗೆ ಪಡೆದುಕೊಂಡೆ?” ಎಂದು ಕೇಳಿದರು.
ಆ ಮನುಷ್ಯನು, “ಆತನು ನನ್ನ ಕಣ್ಣುಗಳಿಗೆ ಕೆಸರನ್ನು ಹಚ್ಚಿದನು. ನಾನು ತೊಳೆದುಕೊಂಡೆನು. ಈಗ ನನಗೆ ಕಣ್ಣು ಕಾಣಿಸುತ್ತಿದೆ” ಎಂದು ಉತ್ತರಕೊಟ್ಟನು.
16 ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು (ಯೇಸು) ಸಬ್ಬತ್ದಿನದ ವಿಷಯದಲ್ಲಿ ಧರ್ಮಶಾಸ್ತ್ರಕ್ಕೆ ವಿಧೇಯನಾಗುವುದಿಲ್ಲ. ಆದ್ದರಿಂದ ಇವನು ದೇವರಿಂದ ಬಂದಿಲ್ಲ” ಎಂದು ಹೇಳಿದರು.
ಇತರರು, “ಇವನು ಪಾಪಿಯಾಗಿದ್ದರೆ ಇಂಥ ಅದ್ಭುತಕಾರ್ಯಗಳನ್ನು ಹೇಗೆ ಮಾಡಲಾದೀತು?” ಎಂದರು. ಹೀಗೆ ಯೆಹೂದ್ಯರಲ್ಲೇ ಭಿನ್ನಾಭಿಪ್ರಾಯ ಉಂಟಾಯಿತು.
17 ಯೆಹೂದ್ಯನಾಯಕರು ಗುಣಹೊಂದಿದವನಿಗೆ, “ಆ ಮನುಷ್ಯನು (ಯೇಸು) ನಿನ್ನನ್ನು ಗುಣಪಡಿಸಿದನು ಮತ್ತು ನಿನಗೆ ಕಣ್ಣು ಕಾಣಿಸುತ್ತಿದೆ. ಆದರೆ ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ಕೇಳಿದರು.
ಅದಕ್ಕೆ ಅವನು, “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
18 ಈ ಮನುಷ್ಯನು ಮೊದಲು ಕುರುಡನಾಗಿದ್ದನು. ಆದರೆ ಈಗ ಇವನಿಗೆ ಗುಣವಾಗಿದೆ ಎಂದು ಯೆಹೂದ್ಯನಾಯಕರುಗಳು ನಂಬಲಿಲ್ಲ. ಆದ್ದರಿಂದ ಅವರು ಅವನ ತಂದೆತಾಯಿಗಳನ್ನು ಕರೆಯಿಸಿದರು. 19 ಅವರು ಅವನ ತಂದೆತಾಯಿಗಳಿಗೆ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೆಂದು ನೀವು ಹೇಳುತ್ತೀರಿ. ಹಾಗಾದರೆ ಇವನಿಗೆ ಈಗ ಹೇಗೆ ಕಣ್ಣು ಕಾಣಿಸುತ್ತದೆ?” ಎಂದು ಕೇಳಿದರು.
20 ತಂದೆತಾಯಿಗಳು, “ಇವನು ನಮ್ಮ ಮಗನೆಂದು ನಮಗೆ ಗೊತ್ತು. ಇವನು ಹುಟ್ಟುಕುರುಡನೆಂಬುದೂ ನಮಗೆ ಗೊತ್ತು. 21 ಆದರೆ ಈಗ ಅವನಿಗೆ ಹೇಗೆ ಕಣ್ಣು ಕಾಣಿಸುತ್ತದೆಯೋ ಯಾರು ಗುಣಪಡಿಸಿದರೋ ನಮಗೆ ತಿಳಿಯದು. ಅವನನ್ನೇ ಕೇಳಿ. ಇವನು ತನ್ನ ವಿಷಯವಾಗಿ ಹೇಳುವಷ್ಟು ಪ್ರಾಯಸ್ಥನಾಗಿದ್ದಾನೆ” ಎಂದು ಉತ್ತರಕೊಟ್ಟರು. 22 ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಹೆದರಿಕೊಂಡಿದ್ದರಿಂದ ಹಾಗೆ ಹೇಳಿದರು. ಯೇಸುವನ್ನು ಕ್ರಿಸ್ತನೆಂದು ಹೇಳುವ ಯಾರನ್ನೇ ಆಗಲಿ ಸಭಾಮಂದಿರದಿಂದ ಬಹಿಷ್ಕರಿಸುವುದಾಗಿ ಯೆಹೂದ್ಯನಾಯಕರುಗಳು ಪ್ರಕಟಿಸಿದ್ದರು. 23 ಆದಕಾರಣವೇ ಅವನ ತಂದೆತಾಯಿಗಳು, “ಅವನು ಪ್ರಾಯಸ್ಥನಾಗಿದ್ದಾನೆ. ಅವನನ್ನೇ ಕೇಳಿ” ಎಂದು ಹೇಳಿದರು.
Kannada Holy Bible: Easy-to-Read Version. All rights reserved. © 1997 Bible League International