Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 10-12

ಸಮಾರ್ಯದ ನಾಯಕರಿಗೆ ಯೇಹು ಬರೆಯುವನು

10 ಸಮಾರ್ಯದಲ್ಲಿ ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಯೇಹುವು ಇಜ್ರೇಲಿನ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಪತ್ರಗಳನ್ನು ಬರೆದು ಸಮಾರ್ಯಕ್ಕೆ ಕಳುಹಿಸಿದನು. ಅಹಾಬನ ಮಕ್ಕಳನ್ನು ಬೆಳೆಸಿದ ಪಾಲಕರಿಗೂ ಅವನು ಪತ್ರಗಳನ್ನು ಕಳುಹಿಸಿದನು. ಯೇಹುವು ಪತ್ರಗಳಲ್ಲಿ, 2-3 “ನಿಮ್ಮ ಕೈಗೆ ಈ ಪತ್ರವು ತಲುಪಿದ ತಕ್ಷಣ, ನಿಮ್ಮ ಒಡೆಯನ ಕುಟುಂಬದಲ್ಲಿ ಬಹಳ ಉತ್ತಮನಾದ ಮತ್ತು ಸಮರ್ಥನಾದ ಒಬ್ಬ ವ್ಯಕ್ತಿಯನ್ನು ಆರಿಸಿರಿ. ನಿಮ್ಮ ಬಳಿ ರಥಗಳೂ ಕುದುರೆಗಳೂ ಇವೆ. ನೀವು ಬಲಾಢ್ಯವಾದ ನಗರದಲ್ಲಿ ವಾಸಿಸುತ್ತಿರುವಿರಿ. ನಿಮ್ಮ ಬಳಿ ಆಯುಧಗಳಿವೆ. ನೀವು ಆರಿಸಿದವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕುಳ್ಳಿರಿಸಿರಿ. ನಂತರ ನಿಮ್ಮ ಯಜಮಾನನ ಕುಟುಂಬಕ್ಕಾಗಿ ಹೋರಾಡಿ” ಎಂದು ಬರೆದಿದ್ದನು.

ಆದರೆ ಇಜ್ರೇಲಿನ ಅಧಿಕಾರಿಗಳು ಮತ್ತು ನಾಯಕರು ಬಹಳ ಭಯಗೊಂಡಿದ್ದರು. ಅವರು, “ಇಬ್ಬರು ರಾಜರು (ಯೋರಾವ್ ಮತ್ತು ಅಹಜ್ಯ) ಯೇಹುವನ್ನು ತಡೆಯಲಾಗಲಿಲ್ಲ. ನಾವು ಅವನನ್ನು ತಡೆಯಲಾಗುವುದಿಲ್ಲ” ಎಂದು ಹೇಳಿದರು.

ಅಹಾಬನ ಮನೆಯನ್ನು ನೋಡಿಕೊಳ್ಳುವ ಗೃಹಾಧಿಕಾರಿ, ನಗರವನ್ನು ನಿಯಂತ್ರಿಸುವ ನಗರಾಧಿಕಾರಿ, ಹಿರಿಯರು ಮತ್ತು ಅಹಾಬನ ಮಕ್ಕಳ ಪಾಲಕರಾದ ಜನರೆಲ್ಲರೂ ಯೇಹುವಿಗೆ ಈ ಸಂದೇಶವನ್ನು ಕಳುಹಿಸಿದರು: “ನಾವು ನಿನ್ನ ಸೇವಕರು. ನೀನು ನಮಗೆ ಹೇಳುವುದನ್ನೆಲ್ಲಾ ನಾವು ಮಾಡುತ್ತೇವೆ. ನಾವು ಯಾರನ್ನೂ ರಾಜನನ್ನಾಗಿ ಮಾಡುವುದಿಲ್ಲ. ನಿನಗೆ ಒಳ್ಳೆಯದೆಂದು ತೋಚಿದ್ದನ್ನು ಮಾಡು.”

ಸಮಾರ್ಯದ ನಾಯಕರು ಅಹಾಬನ ಮಕ್ಕಳನ್ನು ಕೊಂದುಹಾಕುವರು

ನಂತರ ಯೇಹು ಈ ನಾಯಕರಿಗೆ ಎರಡನೆಯ ಪತ್ರವನ್ನು ಬರೆದನು. ಯೇಹುವು, “ನೀವು ನನಗೆ ಬೆಂಬಲ ಕೊಡುವುದಾದರೆ ಮತ್ತು ವಿಧೇಯರಾಗಿರುವುದಾದರೆ ಅಹಾಬನ ಮಕ್ಕಳ ತಲೆಗಳನ್ನು ಕತ್ತರಿಸಿ ಹಾಕಿ. ನಾಳೆ ಇದೇ ಸಮಯಕ್ಕೆ ಇಜ್ರೇಲಿಗೆ ನನ್ನ ಬಳಿಗೆ ಅವುಗಳನ್ನು ತನ್ನಿ.”

ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಅವರು ತಮ್ಮ ಪಾಲಕರಾದ ನಗರದ ನಾಯಕರ ಬಳಿಯಲ್ಲಿದ್ದರು. ನಗರದ ನಾಯಕರಿಗೆ ಈ ಪತ್ರವು ಬಂದು ತಲುಪಿದಾಗ, ಅವರು ರಾಜನ ಎಪ್ಪತ್ತುಮಂದಿ ಮಕ್ಕಳನ್ನು ಕರೆದುಕೊಂಡು ಹೋಗಿ ಕೊಂದುಹಾಕಿದರು. ನಂತರ ಆ ನಾಯಕರು ರಾಜನ ಮಕ್ಕಳ ತಲೆಗಳನ್ನು ಬುಟ್ಟಿಗಳಲ್ಲಿ ಹಾಕಿ ಇಜ್ರೇಲಿನಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು. ಸಂದೇಶಕನೊಬ್ಬನು ಯೇಹುವಿನ ಬಳಿಗೆ ಬಂದು ಅವನಿಗೆ, “ಅವರು ರಾಜನ ಮಕ್ಕಳ ತಲೆಗಳನ್ನು ತಂದಿದ್ದಾರೆ!” ಎಂದು ಹೇಳಿದನು.

ಆಗ ಯೇಹು, “ನಗರದ ಬಾಗಿಲಿನ ಬಳಿ ನಾಳೆ ಮುಂಜಾನೆಯ ತನಕ ಆ ತಲೆಗಳನ್ನು ಎರಡು ರಾಶಿಗಳನ್ನಾಗಿ ಹಾಕಿ” ಎಂದು ಹೇಳಿದನು.

ಮುಂಜಾನೆ, ಯೇಹು ಹೊರಗೆ ಬಂದು ಜನರ ಮುಂದೆ ನಿಂತು ಅವರಿಗೆ, “ನೀವು ನಿರಪರಾಧಿಗಳು. ನಾನಾದರೋ ನನ್ನ ಒಡೆಯನ ಮೇಲೆ ಒಳಸಂಚು ಮಾಡಿದವನು. ನಾನು ಅವನನ್ನು ಕೊಂದೆನು. ಆದರೆ ಅಹಾಬನ ಮಕ್ಕಳನ್ನೆಲ್ಲ ಕೊಂದವರು ಯಾರು? ನೀವು ಅವರನ್ನು ಕೊಂದಿದ್ದೀರಿ! 10 ಯೆಹೋವನು ಹೇಳಿದ್ದೆಲ್ಲವೂ ಸಂಭವಿಸುತ್ತದೆ ಎಂಬುದನ್ನು ನೀವು ತಿಳಿದಿರಬೇಕು. ಅಹಾಬನ ಕುಟುಂಬಕ್ಕೆ ಇವುಗಳು ಸಂಭವಿಸುತ್ತವೆಯೆಂದು ಯೆಹೋವನು ಎಲೀಯನ ಮೂಲಕ ತಿಳಿಸಿದ್ದನು. ಅಂತೆಯೇ ಆತನು ಮಾಡಿದ್ದಾನೆ” ಅಂದನು.

11 ಇಜ್ರೇಲಿನಲ್ಲಿ ವಾಸಿಸುತ್ತಿದ್ದ ಅಹಾಬನ ಕುಟುಂಬದ ಉಳಿದವರನ್ನೆಲ್ಲ ಯೇಹು ಕೊಂದುಹಾಕಿದನು. ಅಹಾಬನ ಆಪ್ತಮಿತ್ರರು, ಯಾಜಕರು ಮತ್ತು ಪ್ರಮುಖರನ್ನೆಲ್ಲ ಯೇಹುವು ಕೊಂದುಹಾಕಿದನು. ಅಹಾಬನ ಜನರಲ್ಲಿ ಯಾರನ್ನೂ ಉಳಿಸಲಿಲ್ಲ.

ಅಹಜ್ಯನ ಬಂಧುಗಳನ್ನು ಯೇಹು ಕೊಂದುಹಾಕುವನು

12 ಯೇಹು ಇಜ್ರೇಲನ್ನು ಬಿಟ್ಟು ಸಮಾರ್ಯಕ್ಕೆ ಹೋದನು. ಯೇಹುವು ದಾರಿಯಲ್ಲಿ ಕುರುಬರ ಪಾಳ್ಯವೆಂದು ಕರೆಯುವ ಸ್ಥಳದಲ್ಲಿ ತಂಗಿದನು. ಅವನು ಬೆತ್‌ಎಕೇಡ್‌ನ ರಸ್ತೆಯಲ್ಲಿ, ಕುರುಬರು ಕುರಿಗಳಿಂದ ತುಪ್ಪಟವನ್ನು ಕತ್ತರಿಸುವ ಒಂದು ಮನೆಗೆ ಹೋದನು. 13 ಯೇಹು ಯೆಹೂದದ ರಾಜನಾದ ಅಹಜ್ಯನ ಬಂಧುಗಳನ್ನು ಭೇಟಿಮಾಡಿ ಅವರಿಗೆ, “ನೀವು ಯಾರು?” ಎಂದು ಕೇಳಿದನು.

ಅವರು, “ನಾವು ಯೆಹೂದದ ರಾಜನಾದ ಅಹಜ್ಯನ ಬಂಧುಗಳು. ನಾವು ರಾಜನ ಮಕ್ಕಳನ್ನು ಮತ್ತು ರಾಜಮಾತೆಯ ಮಕ್ಕಳನ್ನು ನೋಡಲು ಬಂದಿದ್ದೇವೆ” ಎಂದರು.

14 ಆಗ ಯೇಹುವು ತನ್ನ ಜನರಿಗೆ, “ಅವರನ್ನು ಜೀವಸಹಿತ ಹಿಡಿದು ತನ್ನಿ!” ಎಂದು ಹೇಳಿದನು.

ಯೇಹುವಿನ ಜನರು ಅಹಜ್ಯನ ಬಂಧುಗಳನ್ನು ಜೀವಸಹಿತ ಹಿಡಿದು ತಂದರು. ಅಲ್ಲಿ ನಲವತ್ತೆರಡು ಮಂದಿ ಜನರಿದ್ದರು. ಯೇಹು ಬೆತ್‌ಎಕೇಡ್‌ನ ಬಾವಿಯ ಹತ್ತಿರ ಅವರನ್ನು ಕೊಂದುಹಾಕಿದನು. ಯೇಹುವು ಯಾರನ್ನೂ ಜೀವಸಹಿತ ಉಳಿಸಲಿಲ್ಲ.

ಯೇಹು ಯೆಹೋನಾದಾಬನನ್ನು ಸಂಧಿಸಿದನು

15 ಯೇಹುವು ಅಲ್ಲಿಂದ ಹೋದ ಮೇಲೆ, ರೇಕಾಬನ ಮಗನಾದ ಯೆಹೋನಾದಾಬನನ್ನು ಸಂಧಿಸಿದನು. ಯೆಹೋನಾದಾಬನು ಯೇಹುವನ್ನು ಸಂಧಿಸಲು ಬರುತ್ತಿದ್ದನು. ಯೇಹು ಯೆಹೋನಾದಾಬನನ್ನು ಅಭಿನಂದಿಸಿ ಅವನಿಗೆ, “ನಾನು ನಿನಗೆ ನಂಬಿಗಸ್ತನಾಗಿರುವಂತೆ ನೀನು ನನಗೆ ನಂಬಿಗಸ್ಥನಾದ ಸ್ನೇಹಿತನಾಗಿರುವಿಯಾ?” ಎಂದು ಕೇಳಿದನು.

ಯೆಹೋನಾದಾಬನು, “ಹೌದು, ನಾನು ನಿನಗೆ ನಂಬಿಗಸ್ಥನಾದ ಸ್ನೇಹಿತನು” ಎಂದು ಉತ್ತರಿಸಿದನು.

ಯೇಹು, “ನೀನು ನಂಬಿಗಸ್ಥನಾದರೆ, ನಿನ್ನ ಕೈಯನ್ನು ಕೊಡು” ಎಂದನು.

ನಂತರ ಯೇಹು ಹೊರಬಂದು, ಯೆಹೋನಾದಾಬನನ್ನು ರಥದೊಳಕ್ಕೆ ಎಳೆದುಕೊಂಡನು.

16 ಯೇಹು, “ನನ್ನ ಸಂಗಡ ಬಾ. ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೀನು ನೋಡುವಿಯಂತೆ” ಎಂದು ಹೇಳಿದನು.

ಯೇಹುವಿನ ರಥದಲ್ಲಿ ಯೆಹೋನಾದಾಬನೂ ಹೋದನು. 17 ಯೇಹು ಸಮಾರ್ಯಕ್ಕೆ ಬಂದು, ಅಹಾಬನ ಕುಟುಂಬದಲ್ಲಿ ಜೀವಸಹಿತರಾಗಿ ಸಮಾರ್ಯದಲ್ಲಿ ಉಳಿದಿದ್ದವರನ್ನೆಲ್ಲಾ ಕೊಂದುಹಾಕಿದನು. ಯೆಹೋವನು ಎಲೀಯನಿಗೆ ಹೇಳಿದ್ದಂತೆಯೇ ಯೇಹು ಮಾಡಿದನು.

ಯೇಹು ಬಾಳನ ಭಕ್ತರನ್ನು ಕರೆದನು

18 ಯೇಹು ಜನರನ್ನೆಲ್ಲ ಒಟ್ಟಾಗಿ ಸೇರಿಸಿ, “ಅಹಾಬನು ಬಾಳನನ್ನು ಸ್ವಲ್ಪ ಮಾತ್ರ ಸೇವಿಸಿದನು. ಆದರೆ ಯೇಹು ಬಾಳನನ್ನು ಅಧಿಕವಾಗಿ ಸೇವಿಸುತ್ತಾನೆ! 19 ಬಾಳನ ಎಲ್ಲಾ ಯಾಜಕರನ್ನೂ ಪ್ರವಾದಿಗಳನ್ನೂ ಕರೆಯಿರಿ. ಬಾಳನನ್ನು ಆರಾಧಿಸುವ ಜನರೆಲ್ಲರನ್ನೂ ಒಟ್ಟಾಗಿ ಕರೆಯಿರಿ. ಯಾರೂ ಈ ಸಭೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ. ನಾನು ಬಾಳನಿಗೆ ಮಹಾಯಜ್ಞವನ್ನು ಅರ್ಪಿಸಬೇಕೆಂದಿದ್ದೇನೆ. ಈ ಸಭೆಗೆ ಯಾರಾದರೂ ಬಾರದೆ ಇದ್ದರೆ ಅವರನ್ನು ನಾನು ಕೊಂದುಹಾಕುತ್ತೇನೆ!” ಎಂದು ಹೇಳಿದನು.

ಆದರೆ ಅದು ಯೇಹುವಿನ ತಂತ್ರವಾಗಿತ್ತು. ಬಾಳನ ಭಕ್ತರನ್ನು ನಾಶಪಡಿಸಬೇಕೆಂಬುದೇ ಅವನ ಅಪೇಕ್ಷೆಯಾಗಿತ್ತು. 20 ಯೇಹುವು, “ಬಾಳನಿಗೆ ಒಂದು ಪವಿತ್ರ ಸಭೆಯನ್ನು ಸೇರಿಸಿರಿ” ಎಂದು ಹೇಳಿದನು. 21 ಬಳಿಕ ಅವನು ಇಸ್ರೇಲಿನ ಪ್ರದೇಶದಲ್ಲೆಲ್ಲಾ ಒಂದು ಸಂದೇಶವನ್ನು ಕಳುಹಿಸಿದನು. ಬಾಳನ ಆರಾಧಕರೆಲ್ಲರೂ ಬಂದರು. ಮನೆಯಲ್ಲಿ ಯಾರೂ ಉಳಿಯಲಿಲ್ಲ. ಬಾಳನ ಆರಾಧಕರೆಲ್ಲ ಬಾಳನ ಆಲಯಕ್ಕೆ ಬಂದರು. ಜನರಿಂದ ಆಲಯವು ತುಂಬಿಹೋಯಿತು.

22 ಯೇಹು ನಿಲುವಂಗಿಗಳ ಮೇಲ್ವಿಚಾರಕನಿಗೆ, “ಬಾಳನ ಭಕ್ತರಿಗೆಲ್ಲ ನಿಲುವಂಗಿಗಳನ್ನು ತಂದುಕೊಡು” ಎಂದು ಹೇಳಿದನು. ಅವನು ಬಾಳನ ಭಕ್ತರಿಗೆ ನಿಲುವಂಗಿಗಳನ್ನು ತಂದುಕೊಟ್ಟನು.

23 ಆಗ ಯೇಹು ಮತ್ತು ರೇಕಾಬನ ಮಗನಾದ ಯೆಹೋನಾದಾಬನು ಬಾಳನ ಆಲಯದೊಳಕ್ಕೆ ಹೋದರು. ಯೇಹು ಬಾಳನ ಭಕ್ತರಿಗೆ, “ಯೆಹೋವನ ಸೇವಕರು ಯಾರೂ ನಿಮ್ಮೊಡನೆ ಇಲ್ಲವೆಂಬುದನ್ನು ಸುತ್ತಲೂ ನೋಡಿ ಖಚಿತಪಡಿಸಿಕೊಳ್ಳಿ. ಬಾಳನ ಭಕ್ತರಾದ ಜನರು ಮಾತ್ರ ಇಲ್ಲಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ” ಎಂದು ಹೇಳಿದನು. 24 ಬಾಳನ ಆರಾಧಕರು ಯಜ್ಞಗಳನ್ನು ಮತ್ತು ಸರ್ವಾಂಗಹೋಮಗಳನ್ನು ಅರ್ಪಿಸಲು ಬಾಳನ ಆಲಯದೊಳಕ್ಕೆ ಹೋದರು.

ಆದರೆ ಹೊರಗಡೆ ಯೇಹುವಿನ ಎಂಭತ್ತು ಜನರು ಕಾಯುತ್ತಿದ್ದರು. ಯೇಹು ಅವರಿಗೆ, “ಯಾರೂ ತಪ್ಪಿಸಿಕೊಂಡು ಹೋಗಲು ಬಿಡಬೇಡಿ. ಯಾರಾದರೂ ಒಬ್ಬ ಮನುಷ್ಯನನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟರೆ, ಅವನು ತನ್ನ ಜೀವವನ್ನು ಬೆಲೆಯಾಗಿ ಕೊಡಬೇಕಾಗುತ್ತದೆ” ಎಂದು ಹೇಳಿದನು.

25 ಯೇಹುವು ಸರ್ವಾಂಗಹೋಮಗಳನ್ನು ಅರ್ಪಿಸಿದ ತಕ್ಷಣ, ಕಾವಲುಗಾರರಿಗೂ ಸೇನಾಧಿಪತಿಗಳಿಗೂ, “ಒಳಕೋಣೆಗೆ[a] ಹೋಗಿ ಬಾಳನ ಆರಾಧಕರನ್ನೆಲ್ಲ ಕೊಂದುಹಾಕಿ! ಜೀವಸಹಿತ ಯಾರೂ ಆಲಯದಿಂದ ಹೊರಕ್ಕೆ ಬರಲು ಬಿಡಬೇಡಿ!” ಎಂದು ಹೇಳಿದನು.

ಸೇನಾಧಿಪತಿಗಳು ಚೂಪಾದ ಖಡ್ಗದಿಂದ ಬಾಳನ ಭಕ್ತರನ್ನೆಲ್ಲ ಕೊಂದುಹಾಕಿದರು. ಬಾಳನ ಭಕ್ತರ ದೇಹಗಳನ್ನು ಕಾವಲುಗಾರರು ಮತ್ತು ಸೇನಾಧಿಪತಿಗಳು ಹೊರಕ್ಕೆ ಎಸೆದರು. ನಂತರ ಆ ಕಾವಲುಗಾರರು ಮತ್ತು ಸೇನಾಧಿಪತಿಗಳು ಬಾಳನ ಆಲಯದ ಒಳಕೋಣೆಯನ್ನು ಪ್ರವೇಶಿಸಿದರು. 26 ಅವರು ಬಾಳನ ಆಲಯದಲ್ಲಿದ್ದ ಸ್ಮಾರಕಸ್ತಂಭಗಳನ್ನು ಹೊರತಂದು, ಆಲಯವನ್ನು ಸುಟ್ಟುಹಾಕಿದರು. ನಂತರ ಅವರು ಬಾಳನ ಸ್ಮಾರಕಸ್ತಂಭಗಳನ್ನು ಚೂರುಚೂರು ಮಾಡಿದರು. 27 ಬಾಳನ ಆಲಯವನ್ನೂ ಅವರು ಹಾಳುಗೆಡವಿದರು. ಅವರು ಬಾಳನ ಆಲಯವನ್ನು ಶೌಚಗೃಹವನ್ನಾಗಿ ಮಾಡಿದರು. ಇಂದೂ ಸಹ ಅದನ್ನು ಶೌಚಗೃಹವಾಗಿ ಬಳಸುತ್ತಾರೆ.

28 ಯೇಹುವು ಇಸ್ರೇಲಿನಲ್ಲಿ ಬಾಳನ ಪೂಜೆಯನ್ನು ನಿಲ್ಲಿಸಿದನು. 29 ಆದರೂ ಇಸ್ರೇಲಿನ ಪಾಪಗಳಿಗೆ ಪ್ರೇರಕನಾದ, ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಂದ ಯೇಹುವು ಸಂಪೂರ್ಣವಾಗಿ ವಿಮುಖನಾಗಲಿಲ್ಲ. ಬೇತೇಲ್ ಮತ್ತು ದಾನ್‌ಗಳಲ್ಲಿದ್ದ ಬಂಗಾರದ ಕರುಗಳನ್ನು ಯೇಹುವು ನಾಶಗೊಳಿಸಲಿಲ್ಲ.

ಇಸ್ರೇಲನ್ನು ಯೇಹು ಆಳುವನು

30 ಯೆಹೋವನು ಯೇಹುವಿಗೆ, “ನೀನು ಒಳ್ಳೆಯದನ್ನು ಮಾಡಿದೆ. ನಾನು ಒಳ್ಳೆಯದೆಂದು ಹೇಳಿದ್ದನ್ನೇ ನೀನು ಮಾಡಿದೆ. ನನ್ನ ಅಪೇಕ್ಷೆಯಂತೆ ನೀನು ಅಹಾಬನ ಕುಟುಂಬವನ್ನು ನಾಶಗೊಳಿಸಿದೆ. ಆದ್ದರಿಂದ ನಿನ್ನ ಸಂತತಿಯವರು ಇಸ್ರೇಲನ್ನು ನಾಲ್ಕು ತಲೆಮಾರುಗಳವರೆಗೆ ಆಳುತ್ತಾರೆ” ಎಂದು ಹೇಳಿದನು.

31 ಆದರೆ ಯೇಹು ಇಸ್ರೇಲಿನ ದೇವರಾದ ಯೆಹೋವನ ನಿಯಮಗಳನ್ನು ಪೂರ್ಣಮನಸ್ಸಿನಿಂದಲೂ ಎಚ್ಚರಿಕೆಯಿಂದಲೂ ಪಾಲಿಸಲಿಲ್ಲ. ಇಸ್ರೇಲಿನ ಪಾಪಗಳಿಗೆ ಪ್ರೇರಕನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ಮಾಡುವುದನ್ನು ನಿಲ್ಲಿಸಲೇ ಇಲ್ಲ.

ಹಜಾಯೇಲನು ಇಸ್ರೇಲನ್ನು ಸೋಲಿಸಿದನು

32 ಆ ಸಮಯದಲ್ಲಿ, ಯೆಹೋವನು ಇಸ್ರೇಲಿನ ಭಾಗಗಳನ್ನು ಕುಗ್ಗಿಸತೊಡಗಿದನು. ಅರಾಮ್ಯರ ರಾಜನಾದ ಹಜಾಯೇಲನು ಇಸ್ರೇಲಿನ ಪ್ರತಿಯೊಂದು ಗಡಿಯಲ್ಲಿಯೂ ಇಸ್ರೇಲರನ್ನು ಸೋಲಿಸುತ್ತಿದ್ದನು. 33 ಹಜಾಯೇಲನು ಜೋರ್ಡನ್ ನದಿಯ ಪೂರ್ವಕ್ಕಿರುವ ಪ್ರದೇಶವನ್ನೆಲ್ಲ ಗೆದ್ದುಕೊಂಡನು. ಅವನು ಗಾದ್, ರೂಬೇನ್ ಮತ್ತು ಮನಸ್ಸೆ ಕುಲಗಳಿಗೆ ಸೇರಿದ ಎಲ್ಲಾ ಪ್ರದೇಶವನ್ನು, ಗಿಲ್ಯಾದ್‌ನ ಎಲ್ಲಾ ಪ್ರದೇಶವನ್ನು ಗೆದ್ದನು. ಹಜಾಯೇಲನು ಆರ್ನೋನ್ ಕಣಿವೆಯಿಂದ ಗಿಲ್ಯಾದ್, ಬಾಷಾನ್‌ವರೆಗಿನ ಅರೋಯೇರ್ ಪ್ರದೇಶವನ್ನೆಲ್ಲ ಗೆದ್ದುಕೊಂಡನು.

ಯೇಹುವಿನ ಸಾವು

34 ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೇಹು ಮಾಡಿದ ಇತರ ಉತ್ತಮಕಾರ್ಯಗಳನ್ನೆಲ್ಲ ಬರೆಯಲಾಗಿದೆ. 35 ಯೇಹು ಸತ್ತುಹೋದನು. ಅವನನ್ನು ಅವನ ಪೂರ್ವಿಕರ ಬಳಿ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೇಹುವಿನ ನಂತರ ಅವನ ಮಗನಾದ ಯೇಹೋವಾಹಾಜನು ಇಸ್ರೇಲಿನ ನೂತನ ರಾಜನಾದನು. 36 ಯೇಹುವು ಸಮಾರ್ಯದಲ್ಲಿ ಇಸ್ರೇಲನ್ನು ಇಪ್ಪತ್ತೆಂಟು ವರ್ಷ ಆಳಿದನು.

ಯೆಹೂದದಲ್ಲಿ ರಾಜನ ಮಕ್ಕಳನ್ನೆಲ್ಲ ಅತಲ್ಯಳು ನಾಶಗೊಳಿಸಿದಳು

11 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗ ಸತ್ತದ್ದನ್ನು ನೋಡಿದಳು. ಅವಳು ಮೇಲೆದ್ದು ರಾಜನ ಕುಟುಂಬವನ್ನೆಲ್ಲ ಕೊಂದುಬಿಟ್ಟಳು.

ಯೆಹೋಷೆಬಳು ರಾಜನಾದ ಯೋರಾಮನ ಮಗಳಾಗಿದ್ದಳು ಮತ್ತು ಅಹಜ್ಯನ ಸೋದರಿಯಾಗಿದ್ದಳು. ಯೆಹೋವಾಷನು ರಾಜನ ಮಕ್ಕಳಲ್ಲಿ ಒಬ್ಬನಾಗಿದ್ದನು. ಅತಲ್ಯಳು ಇತರ ಮಕ್ಕಳನ್ನು ಕೊಲ್ಲುವಾಗ ಯೆಹೋಷೆಬಳು ಯೆಹೋವಾಷನನ್ನು ತೆಗೆದುಕೊಂಡು ಹೋದಳು. ಅವಳು ಯೆಹೋವಾಷನನ್ನು ಮತ್ತು ಅವನ ದಾದಿಯನ್ನು ತನ್ನ ಮಲಗುವ ಕೊಠಡಿಯಲ್ಲಿ ಅಡಗಿಸಿದಳು. ಯೆಹೋವಾಷನನ್ನು ಅವನ ದಾದಿಯು ಮತ್ತು ಯೆಹೋಷೆಬಳು ಅತಲ್ಯಳಿಂದ ತಪ್ಪಿಸಿ ಅಡಗಿಸಿಟ್ಟರು. ಈ ರೀತಿ ಯೆಹೋವಾಷನನ್ನು ಕೊಲ್ಲಲಾಗಲಿಲ್ಲ.

ನಂತರ ಯೆಹೋವಾಷ ಮತ್ತು ಯೆಹೋಷೆಬಳು ಯೆಹೋವನ ಆಲಯದಲ್ಲಿ ಅಡಗಿಕೊಂಡರು. ಯೆಹೋವಾಷನು ಆರು ವರ್ಷಗಳ ಕಾಲ ಅಡಗಿಕೊಂಡಿದ್ದನು. ಅತಲ್ಯಳು ಯೆಹೂದ ದೇಶವನ್ನು ಆಳಿದಳು.

ಏಳನೆ ವರ್ಷದಲ್ಲಿ, ಪ್ರಧಾನ ಯಾಜಕನಾದ ಯೆಹೋಯಾದಾವನು ಕೆರೇತ್ಯರ ಸೇನಾಧಿಪತಿಗಳನ್ನು ಮತ್ತು ಕಾವಲುಗಾರರನ್ನು ಕರೆಸಿಕೊಂಡನು. ಯೆಹೋಯಾದಾವನು ಅವರನ್ನೆಲ್ಲ ಯೆಹೋವನ ಆಲಯದಲ್ಲಿ ಒಟ್ಟಾಗಿ ಸೇರಿಸಿದನು. ನಂತರ ಯೆಹೋಯಾದಾವನು ಅವರೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಯೆಹೋಯಾದಾವನು ಆಲಯದಲ್ಲಿ ಅವರು ವಾಗ್ದಾನ ಮಾಡುವಂತೆ ಬಲತ್ಕಾರಗೊಳಿಸಿದನು. ನಂತರ ಅವನು ಅವರಿಗೆ ರಾಜನ ಮಗನನ್ನು (ಯೆಹೋವಾಷನನ್ನು) ತೋರಿಸಿದನು.

ಯೆಹೋಯಾದಾವನು ಅವರಿಗೆ, “ನೀವು ಈ ಕಾರ್ಯವನ್ನು ಮಾಡಲೇಬೇಕು. ನಿಮ್ಮಲ್ಲಿ ಸಬ್ಬತ್‌ದಿನದಂದು ಬರುವ ಮೂರನೆ ಒಂದು ಭಾಗದ ಜನರು ರಾಜನನ್ನು ಅವನ ಅರಮನೆಯಲ್ಲಿ ರಕ್ಷಿಸಬೇಕು. ಇನ್ನೊಂದು ಮೂರನೆಯ ಒಂದು ಭಾಗವು ಸೂರ್ ಬಾಗಿಲಿನಲ್ಲಿರಬೇಕು. ಮತ್ತೊಂದು ಮೂರನೆಯ ಒಂದು ಭಾಗವು ಕಾವಲುಗಾರನ ಹಿಂದೆ ಬಾಗಿಲಿನಲ್ಲಿರಬೇಕು. ಈ ರೀತಿ ನೀವು ಗೋಡೆಯಂತೆ ನಿಂತು ಯೆಹೋವಾಷನನ್ನು ರಕ್ಷಿಸುತ್ತಿರಬೇಕು. ಸಬ್ಬತ್‌ದಿನದಂದು ಕಾಯಲು ಬರುವ ನಿಮ್ಮೆಲ್ಲರ ಎರಡು ಪಡೆಗಳು ಯೆಹೋವನ ಆಲಯವನ್ನು ಕಾಯುತ್ತಾ ರಾಜನಾದ ಯೆಹೋವಾಷನನ್ನು ಕಾಯಬೇಕು. ರಾಜನಾದ ಯೆಹೋವಾಷನು ಎಲ್ಲಿಗಾದರೂ ಯಾವಾಗಲಾದರೂ ಹೋದರೆ ಅವನೊಂದಿಗೆ ನೀವು ಇರಲೇಬೇಕು. ನೀವೆಲ್ಲರೂ ರಾಜನನ್ನು ಸುತ್ತುವರಿದಿರಬೇಕು. ಪ್ರತಿಯೊಬ್ಬ ಕಾವಲುಗಾರನೂ ಆಯುಧವನ್ನು ತನ್ನ ಕೈಯಲ್ಲಿ ಹಿಡಿದಿರಲೇಬೇಕು. ನಿಮ್ಮ ಸಮೀಪಕ್ಕೆ ಯಾರಾದರೂ ಬಂದರೆ ಅವರನ್ನು ಕೊಲ್ಲಬೇಕು” ಎಂದನು.

ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಸಂಗತಿಗಳಿಗೆಲ್ಲ ಸೇನಾಧಿಪತಿಗಳು ವಿಧೇಯರಾಗಿದ್ದರು. ಪ್ರತಿಯೊಬ್ಬ ಸೇನಾಧಿಪತಿಯೂ ತನ್ನ ಕಾವಲುಗಾರರನ್ನು ಅಂದರೆ ಸಬ್ಬತ್‌ದಿನದಂದು ಕಾಯಲು ಬರಬೇಕಾಗಿದ್ದ ಮತ್ತು ಸಬ್ಬತ್‌ದಿನದಂದು ಕೆಲಸದಿಂದ ಹೋಗಬೇಕಾಗಿದ್ದ ಸಿಪಾಯಿಗಳನ್ನು ಕರೆದೊಯ್ದನು. ಅವರೆಲ್ಲರೂ ಯಾಜಕನಾದ ಯೆಹೋಯಾದಾವನ ಹತ್ತಿರಕ್ಕೆ ಹೋದರು. 10 ಸೇನಾಧಿಪತಿಗಳಿಗೆ ಬರ್ಜಿಗಳನ್ನು ಮತ್ತು ಗುರಾಣಿಗಳನ್ನು ಯಾಜಕನು ಕೊಟ್ಟನು. ರಾಜನಾದ ದಾವೀದನು ಯೆಹೋವನ ಆಲಯದಲ್ಲಿ ಈ ಬರ್ಜಿಗಳನ್ನು ಮತ್ತು ಗುರಾಣಿಗಳನ್ನು ಇಟ್ಟಿದ್ದನು. 11 ಈ ಕಾವಲುಗಾರರು ಆಲಯದ ಬಲಗಡೆಯ ಮೂಲೆಯಿಂದ ಎಡಗಡೆಯ ಮೂಲೆಯವರೆಗೆ ತಮ್ಮ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ನಿಂತರು. ರಾಜನು ಆಲಯದೊಳಕ್ಕೆ ಹೋದಾಗ ಅವರು ಅವನ ಸುತ್ತಲೂ, ಯಜ್ಞವೇದಿಕೆಯ ಮತ್ತು ಆಲಯದ ಸುತ್ತಲೂ ನಿಂತುಕೊಂಡರು. 12 ಈ ಜನರು ಯೆಹೋವಾಷಾನನ್ನು ಹೊರಗೆ ತಂದರು. ಅವರು ಯೆಹೋವಾಷನ ಮೇಲೆ ಕಿರೀಟವನ್ನಿಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟರು. ನಂತರ ಅವರು ಅವನನ್ನು ಅಭಿಷೇಕಿಸಿ, ನೂತನ ರಾಜನನ್ನಾಗಿ ಮಾಡಿದರು. ಅವರು ಚಪ್ಪಾಳೆ ತಟ್ಟುತ್ತಾ “ರಾಜನು ಚಿರಂಜೀವಿಯಾಗಿರಲಿ!” ಎಂದು ಆರ್ಭಟಿಸಿದರು.

13 ಕಾವಲುಗಾರರ ಮತ್ತು ಜನರ ಗದ್ದಲವು ರಾಣಿಯಾದ ಅತಲ್ಯಳಿಗೆ ಕೇಳಿಸಿತು. ಅವಳು ಯೆಹೋವನ ಆಲಯದಲ್ಲಿದ್ದ ಜನರ ಬಳಿಗೆ ಹೋದಳು. 14 ರಾಜನು ಪದ್ಧತಿಯಂತೆ ಸ್ತಂಭದ ಬಳಿ ನಿಂತಿರುವುದನ್ನೂ ಜನರು ಮತ್ತು ನಾಯಕರು ರಾಜನಿಗಾಗಿ ತುತ್ತೂರಿ ಊದುತ್ತಿರುವುದನ್ನೂ ಜನರೆಲ್ಲರೂ ಬಹಳ ಸಂತೋಷದಿಂದಿರುವುದನ್ನೂ ಅವಳು ನೋಡಿ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು “ದ್ರೋಹ, ದ್ರೋಹ!” ಎಂದು ಕೂಗಿಕೊಂಡಳು.

15 ಯಾಜಕನಾದ ಯೆಹೋಯಾದಾವನು ಸೈನಿಕರ ಮೇಲ್ವಿಚಾರಕರಾದ ಸೇನಾಧಿಪತಿಗಳಿಗೆ ಆಜ್ಞಾಪಿಸಿದನು. ಯೆಹೋಯಾದಾವನು ಅವರಿಗೆ, “ಅತಲ್ಯಳನ್ನು ಆಲಯದ ಆವರಣದಿಂದ ಹೊರಗೆ ತೆಗೆದುಕೊಂಡು ಹೋಗಿ. ಅವಳ ಹಿಂಬಾಲಕರು ಯಾರೇ ಆಗಿದ್ದರೂ ಕೊಂದುಬಿಡಿ. ಆದರೆ ಅವರನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿ” ಎಂದು ಹೇಳಿದನು.

16 ಆದ್ದರಿಂದ ಸೈನಿಕರು ಅವಳನ್ನು ಹಿಡಿದುಕೊಂಡು ಹೊರಗೆ ಕರೆದೊಯ್ದರು, ಆಕೆಯು ಕುದುರೆಗಳ ಪ್ರವೇಶದ್ವಾರದ ಮೂಲಕ ಅರಮನೆಗೆ ಹೋದಳು. ಸೈನಿಕರು ಅತಲ್ಯಳನ್ನು ಅಲ್ಲಿ ಕೊಂದುಹಾಕಿದರು.

17 ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಆತನಿಗೆ ಪ್ರಮಾಣಮಾಡಿದರು.

18 ಆಗ ಜನರೆಲ್ಲರೂ ಸುಳ್ಳುದೇವರಾದ ಬಾಳನ ಗುಡಿಗೆ ಹೋಗಿ ಬಾಳನ ವಿಗ್ರಹವನ್ನೂ ಮತ್ತು ಅವನ ಯಜ್ಞವೇದಿಕೆಯನ್ನೂ ಚೂರುಚೂರು ಮಾಡಿದರು. ಬಾಳನ ಯಾಜಕನಾದ ಮತ್ತಾನನನ್ನು ಜನರು ಯಜ್ಞವೇದಿಕೆಯ ಎದುರಿನಲ್ಲಿಯೇ ಕೊಂದುಹಾಕಿದರು.

ಯಾಜಕನಾದ ಯೆಹೋಯಾದಾವನು ಯೆಹೋವನ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು. 19 ಯಾಜಕನು ಜನರನ್ನೆಲ್ಲ ಕರೆದುಕೊಂಡು ಹೋದನು. ಅವರು ಸಿಪಾಯಿಗಳ ದ್ವಾರದ ಮೂಲಕ ಅರಮನೆಗೆ ಹೋದರು. ರಾಜನ ವಿಶೇಷ ಅಂಗರಕ್ಷಕರು ಮತ್ತು ಸೇನಾಧಿಪತಿಗಳು ರಾಜನ ಜೊತೆಯಲ್ಲಿ ಹೋದರು. ಅವರನ್ನು ಇತರ ಜನರೆಲ್ಲರೂ ಹಿಂಬಾಲಿಸಿದರು. ಅವರು ರಾಜನ ಅರಮನೆಯ ಬಾಗಿಲಿಗೆ ಹೋದರು. ನಂತರ ರಾಜನಾದ ಯೆಹೋವಾಷನು ಸಿಂಹಾಸನದ ಮೇಲೆ ಕುಳಿತುಕೊಂಡನು. 20 ಜನರೆಲ್ಲರೂ ಬಹಳ ಹರ್ಷಗೊಂಡರು. ನಗರದಲ್ಲಿ ಸಮಾಧಾನವಿತ್ತು. ರಾಜನ ಅರಮನೆಯ ಹತ್ತಿರ ರಾಣಿಯಾದ ಅತಲ್ಯಳನ್ನು ಖಡ್ಗದಿಂದ ಕೊಂದಿದ್ದರು.

21 ಯೆಹೋವಾಷನು ರಾಜನಾದಾಗ ಅವನಿಗೆ ಏಳು ವರ್ಷ ವಯಸ್ಸಾಗಿತ್ತು.

ಯೆಹೋವಾಷನು ತನ್ನ ಆಳ್ವಿಕೆಯನ್ನು ಆರಂಭಿಸಿದನು

12 ಯೇಹುವು ಇಸ್ರೇಲಿನ ರಾಜನಾಗಿದ್ದ ಏಳನೆಯ ವರ್ಷದಲ್ಲಿ ಯೆಹೋವಾಷನು ಆಳಲಾರಂಭಿಸಿದನು. ಯೆಹೋವಾಷನು ಜೆರುಸಲೇಮಿನಲ್ಲಿ ನಲವತ್ತು ವರ್ಷ ಆಳಿದನು. ಬೇರ್ಷೆಬದ ಚಿಬ್ಯಳು ಯೆಹೋವಾಷನ ತಾಯಿ. ಯೆಹೋವಾಷನು ಯೆಹೋವನು ಸರಿಯೆಂದು ಹೇಳಿದ ಕಾರ್ಯಗಳನ್ನು ಮಾಡಿದನು. ಯೆಹೋವಾಷನು ತನ್ನ ಜೀವಮಾನವೆಲ್ಲ ಯೆಹೋವನಿಗೆ ವಿಧೇಯನಾಗಿದ್ದನು. ಯಾಜಕನಾದ ಯೆಹೋಯಾದಾವನು ಉಪದೇಶಿಸಿದ್ದ ಕಾರ್ಯಗಳನ್ನೆಲ್ಲ ಯೆಹೋವಾಷನು ಮಾಡಿದನು. ಆದರೆ ಅವನು ಉನ್ನತ ಪೂಜಾಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಇನ್ನೂ ಆ ಸ್ಥಳಗಳಲ್ಲಿ ಯಜ್ಞಗಳನ್ನು ಅರ್ಪಿಸುತ್ತಾರೆ ಮತ್ತು ಧೂಪಗಳನ್ನು ಸುಡುತ್ತಾರೆ.

ದೇವಾಲಯವನ್ನು ಸರಿಪಡಿಸಲು ಯೆಹೋವಾಷನ ಆಜ್ಞೆ

4-5 ಯೆಹೋವಾಷನು ಯಾಜಕರಿಗೆ, “ದೇವಾಲಯದಲ್ಲಿ ಬಹಳ ಹಣವಿದೆ. ಜನರು ಅನೇಕ ವಸ್ತುಗಳನ್ನು ಆಲಯಕ್ಕೆ ಕೊಟ್ಟಿದ್ದಾರೆ. ಜನಗಣತಿಯಲ್ಲಿ ಲೆಕ್ಕಿಸಲ್ಪಟ್ಟ ಜನರು ಆಲಯದ ತೆರಿಗೆಯನ್ನು ಕೊಟ್ಟಿದ್ದಾರೆ. ಜನರು ತಮ್ಮ ಸ್ವ ಇಚ್ಛೆಯಿಂದ ಹಣವನ್ನು ಕೊಟ್ಟಿದ್ದಾರೆ. ಯಾಜಕರಾದ ನೀವು ಆ ಹಣವನ್ನು ತೆಗೆದುಕೊಂಡು, ಯೆಹೋವನ ಆಲಯವನ್ನು ಸರಿಪಡಿಸಿ. ಪ್ರತಿಯೊಬ್ಬ ಯಾಜಕನೂ ತಾನು ಜನರ ಸೇವೆಯಿಂದ ಪಡೆದ ಹಣವನ್ನು ಉಪಯೋಗಿಸಲೇಬೇಕು. ಅವನು ಆ ಹಣವನ್ನು ದೇವಾಲಯದ ಶಿಥಿಲತೆಯನ್ನು ಸರಿಪಡಿಸಲು ಉಪಯೋಗಿಸಲೇಬೇಕು” ಎಂದು ಹೇಳಿದನು.

ಆದರೆ ಯಾಜಕರು ಸರಿಪಡಿಸಲಿಲ್ಲ. ಯೆಹೋವಾಷನು ರಾಜನಾದ ಇಪ್ಪತ್ತಮೂರನೆಯ ವರ್ಷದಲ್ಲಿ, ಯಾಜಕರಿನ್ನೂ ದೇವಾಲಯವನ್ನು ಸರಿಪಡಿಸಲಿಲ್ಲ. ಆದ್ದರಿಂದ ರಾಜನಾದ ಯೆಹೋವಾಷನು ಯಾಜಕನಾದ ಯೆಹೋಯಾದಾವ ಮತ್ತು ಇತರ ಯಾಜಕರನ್ನು ಕರೆಸಿ, “ನೀವು ಆಲಯವನ್ನು ಸರಿಪಡಿಸಲಿಲ್ಲವೇಕೆ? ನಿಮ್ಮಿಂದ ಸೇವೆ ಹೊಂದುವ ಜನರು ಕೊಡುವ ಹಣವನ್ನು ಉಪಯೋಗಿಸಬೇಡಿ. ಆಲಯವನ್ನು ಸರಿಪಡಿಸುವುದಕ್ಕಾಗಿ ಆ ಹಣವನ್ನು ಉಪಯೋಗಿಸಬೇಕು” ಎಂದು ಹೇಳಿದನು.

ಆಗ ಯಾಜಕರು ಅವನಿಗೆ, “ನಾವು ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ ಮತ್ತು ಆಲಯವನ್ನು ಸರಿಪಡಿಸುವುದಕ್ಕೆ ಕೈ ಹಾಕುವುದಿಲ್ಲ” ಎಂದು ಹೇಳಿದರು. ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು, ಅದರ ಮೇಲೆ ಒಂದು ರಂಧ್ರ ಮಾಡಿದನು. ನಂತರ ಯೆಹೋಯಾದಾವನು ಆ ಪೆಟ್ಟಿಗೆಯನ್ನು ಯಜ್ಞವೇದಿಕೆಯ ಬಲಗಡೆಯಲ್ಲಿ ಇಟ್ಟನು. ದೇವಾಲಯಕ್ಕೆ ಜನರು ಬರುವ ಬಾಗಿಲಿನಲ್ಲಿ ಈ ಪೆಟ್ಟಿಗೆಯಿತ್ತು. ಕೆಲವು ಮಂದಿ ಯಾಜಕರು ಆಲಯದ ಬಾಗಿಲಿನಲ್ಲಿ ರಕ್ಷಕರಾಗಿ ನಿಂತರು. ಆ ಯಾಜಕರು ಜನರು ಯೆಹೋವನಿಗೆಂದು ಕೊಡುವ ಆ ಹಣವನ್ನು ಪೆಟ್ಟಿಗೆಯಲ್ಲಿ ಹಾಕಿದರು.

10 ಜನರು ದೇವಾಲಯಕ್ಕೆ ಹೋದಾಗ ಆ ಪೆಟ್ಟಿಗೆಯಲ್ಲಿ ಹಣವನ್ನು ಹಾಕಲಾರಂಭಿಸಿದರು. ರಾಜನ ಕಾರ್ಯದರ್ಶಿಯಾಗಲಿ ಪ್ರಧಾನಯಾಜಕನಾಗಲಿ ನೋಡಿದಾಗ ಸಾಕಷ್ಟು ಹಣವು ತುಂಬಿದ್ದರೆ ಅದನ್ನು ಲೆಕ್ಕಹಾಕಿ ಚೀಲಗಳಲ್ಲಿ ತುಂಬಿಡುತ್ತಿದ್ದರು. 11 ನಂತರ ಅವರು ಆ ಹಣದಿಂದ ದೇವಾಲಯದ ಕೆಲಸಗಾರರಿಗೂ ಬಡಗಿಗಳಿಗೂ ಮತ್ತು ದೇವಾಲಯದ ಇತರ ಕೆಲಸಗಾರರಿಗೂ 12 ಕಲ್ಲುಕುಟಿಕರಿಗೂ ಶಿಲ್ಪಿಗಳಿಗೂ ಸಂಬಳ ಕೊಡುತ್ತಿದ್ದರು. ಅವರು ಆ ಹಣದಿಂದ ಮರವನ್ನೂ ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಂಡರು; ಯೆಹೋವನ ಆಲಯವನ್ನು ಸರಿಪಡಿಸಲು ಇತರ ಕೆಲಸಗಳಿಗೆ ಆ ಹಣವನ್ನು ಬಳಸುತ್ತಿದ್ದರು.

13-14 ಜನರು ದೇವಾಲಯಕ್ಕೆ ಹಣವನ್ನು ಕೊಟ್ಟರು. ಆದರೆ ಯಾಜಕರು ಆ ಹಣವನ್ನು ಬೆಳ್ಳಿಯ ಬಟ್ಟಲು, ಕತ್ತರಿ, ಬೋಗುಣಿ, ತುತ್ತೂರಿ ಅಥವಾ ಬೆಳ್ಳಿಬಂಗಾರಗಳ ಪಾತ್ರೆಗಳಿಗೆ ಉಪಯೋಗಿಸದೆ ಕೆಲಸಗಾರರ ವೇತನಕ್ಕೆ ಉಪಯೋಗಿಸಿದರು. ಆ ಕೆಲಸಗಾರರು ದೇವಾಲಯವನ್ನು ಸರಿಪಡಿಸಿದರು. 15 ಯಾರೂ ಆ ಹಣವನ್ನು ಲೆಕ್ಕಹಾಕಲಿಲ್ಲ. ಇಲ್ಲವೆ ಆ ಹಣವೇನಾಯಿತೆಂದು ಯಾವ ಕೆಲಸಗಾರನನ್ನೂ ಒತ್ತಾಯಿಸಿ ಕೇಳಲಿಲ್ಲ. ಏಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದರು!

16 ಜನರು ತಮ್ಮ ಅಪರಾಧ ಪ್ರಾಯಶ್ಚಿತ್ತ ಮತ್ತು ದೋಷಪರಿಹಾರದ ಸಮಯದಲ್ಲಿ ಹಣವನ್ನು ಕೊಟ್ಟರು. ಆದರೆ ಅಂತಹ ಹಣವನ್ನು ಕೆಲಸಗಾರರ ವೇತನಕ್ಕೆ ಉಪಯೋಗಿಸಲಿಲ್ಲ. ಆ ಹಣವು ಯಾಜಕರಿಗೆ ಸೇರಿದ್ದು.

ಯೆಹೋವಾಷನು ಹಜಾಯೇಲನಿಂದ ಜೆರುಸಲೇಮನ್ನು ರಕ್ಷಿಸಿದನು

17 ಹಜಾಯೇಲನು ಅರಾಮ್ಯರ ರಾಜನಾಗಿದ್ದನು. ಹಜಾಯೇಲನು ಗತ್ ಊರನ್ನೂ ಸೋಲಿಸಿದನು. ಆಗ ಅವನು ಜೆರುಸಲೇಮಿನ ವಿರುದ್ಧ ಯುದ್ಧಕ್ಕೆ ಹೋಗಲು ಯೋಚಿಸಿದನು.

18 ಯೆಹೋಷಾಫಾಟ್, ಯೆಹೋರಾಮ್ ಮತ್ತು ಅಹಜ್ಯರು ಯೆಹೂದದ ರಾಜರಾಗಿದ್ದರು. ಅವರೆಲ್ಲ ಯೆಹೋವಾಷನ ಪೂರ್ವಿಕರು. ಅವರು ಅನೇಕ ವಸ್ತುಗಳನ್ನು ಯೆಹೋವನಿಗೆ ಕೊಟ್ಟಿದ್ದರು. ಅವುಗಳನ್ನೆಲ್ಲ ಆಲಯದಲ್ಲಿ ಇಟ್ಟಿದ್ದರು. ಯೆಹೋವಾಷನೂ ಯೆಹೋವನಿಗೆ ಅನೇಕ ವಸ್ತುಗಳನ್ನು ಕೊಟ್ಟಿದ್ದನು. ಯೆಹೋವಾಷನು ಅವುಗಳ ಜೊತೆಗೆ, ಆಲಯದಲ್ಲಿದ್ದ ಮತ್ತು ತನ್ನ ಮನೆಯಲ್ಲಿದ್ದ ಬಂಗಾರವನ್ನೆಲ್ಲ ತೆಗೆದುಕೊಂಡನು. ನಂತರ ಯೆಹೋವಾಷನು ಆ ಬೆಲೆಬಾಳುವ ವಸ್ತುಗಳನ್ನೆಲ್ಲ ಅರಾಮ್ಯರ ರಾಜನಾದ ಹಜಾಯೇಲನಿಗೆ ಕಳುಹಿಸಿದನು. ಆದ್ದರಿಂದ ಹಜಾಯೇಲನು ಜೆರುಸಲೇಮಿನ ವಿರುದ್ಧ ಯುದ್ಧಮಾಡದೆ ಹೊರಟುಹೋದನು.

ಯೆಹೋವಾಷನ ಮರಣ

19 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೆಹೋವಾಷನು ಮಾಡಿದ ಇತರ ಮಹಾಕಾರ್ಯಗಳ ಬಗ್ಗೆ ಬರೆಯಲಾಗಿದೆ.

20 ಯೆಹೋವಾಷನ ಅಧಿಕಾರಿಗಳು ಅವನ ವಿರುದ್ಧವಾಗಿ ಸಂಚುಮಾಡಿ ಅವನನ್ನು ಸಿಲ್ಲಾಕ್ಕೆ ಹೋಗುವ ರಸ್ತೆಯಲ್ಲಿದ್ದ ಮಿಲ್ಲೋ ಮನೆಯಲ್ಲಿ ಕೊಂದುಹಾಕಿದರು. 21 ಶಿಮೆಯಾತನ ಮಗನಾದ ಯೋಜಾಕಾರನು ಮತ್ತು ಶೋಮೇರನ ಮಗನಾದ ಯೆಹೋಜಾಬಾದನು ಯೆಹೋವಾಷನ ಅಧಿಕಾರಿಗಳಾಗಿದ್ದರು. ಅವರು ಯೆಹೋವಾಷನನ್ನು ಕೊಂದರು.

ಜನರು ಯೆಹೋವಾಷನನ್ನು ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ನೂತನ ರಾಜನಾದನು.

ಯೋಹಾನ 1:29-51

ಯೇಸು—ದೇವರ ಕುರಿಮರಿ

29 ಮರುದಿನ ಯೋಹಾನನು, ತನ್ನ ಬಳಿಗೆ ಬರುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕಾಗಿ ದೇವರು ನೇಮಿಸಿದ ಕುರಿಮರಿ. ಆತನು ಈ ಲೋಕದ ಪಾಪಗಳನ್ನು ಪರಿಹರಿಸುವನು. 30 ‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ. 31 ಆತನು ಯಾರೆಂಬುದು ನನಗೂ ಗೊತ್ತಿರಲಿಲ್ಲ. ಆದರೆ ಆತನನ್ನು ಇಸ್ರೇಲರಿಗೆ ತಿಳಿಸುವುದಕ್ಕೋಸ್ಕರ ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೆನು” ಎಂದು ಹೇಳಿದನು.

32-33 ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು. 34 ಆದ್ದರಿಂದ ಆತನೇ (ಯೇಸುವೇ) ದೇವರ ಮಗನೆಂದು ನಾನು ಜನರಿಗೆ ತಿಳಿಸುವೆನು” ಎಂದನು.

ಯೇಸುವಿನ ಪ್ರಥಮ ಶಿಷ್ಯರು

35 ಮರುದಿನ ಯೋಹಾನನು ತನ್ನ ಇಬ್ಬರು ಶಿಷ್ಯರೊಂದಿಗೆ ಇದ್ದಾಗ, 36 ಸಮೀಪದಲ್ಲಿ ನಡೆದುಹೋಗುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕೆ ದೇವರು ನೇಮಿಸಿದ ಕುರಿಮರಿ!” ಎಂದು ಹೇಳಿದನು.

37 ಯೋಹಾನನ ಈ ಮಾತನ್ನು ಕೇಳಿದ ಆ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38 ಯೇಸು ಹಿಂತಿರುಗಿ ನೋಡಿ, “ನಿಮಗೇನು ಬೇಕು?” ಎಂದು ಕೇಳಿದನು.

ಆ ಇಬ್ಬರು, “ರಬ್ಬಿ, ನೀನು ಎಲ್ಲಿ ಇಳಿದುಕೊಂಡಿರುವೆ?” ಎಂದು ಕೇಳಿದರು. (“ರಬ್ಬಿ” ಅಂದರೆ “ಗುರು” ಎಂದರ್ಥ.)

39 ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.

40 ಈ ಇಬ್ಬರು ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಇವರಲ್ಲಿ ಒಬ್ಬನಾಗಿದ್ದನು. 41 ಮೊದಲನೆಯದಾಗಿ, ಅವನು ತನ್ನ ಅಣ್ಣನಾದ ಸೀಮೋನನನ್ನು ಕಾಣಲು ಹೋಗಿ ಅವನಿಗೆ, “ನಾವು ಮೆಸ್ಸೀಯನನ್ನು ಕಂಡುಕೊಂಡೆವು” ಎಂದು ಹೇಳಿದನು. (“ಮೆಸ್ಸೀಯ” ಅಂದರೆ “ಕ್ರಿಸ್ತನು” ಎಂದರ್ಥ.)

42 ಅವನು ಸೀಮೋನನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಸೀಮೋನನ ಕಡೆಗೆ ನೋಡಿ, “ಯೋಹಾನನ ಮಗನಾದ ನಿನ್ನ ಹೆಸರು ಸೀಮೋನ. ನೀನು ಕೇಫನೆಂದು ಕರೆಸಿಕೊಳ್ಳುವೆ” ಎಂದು ಹೇಳಿದನು. (“ಕೇಫ” ಅಂದರೆ “ಪೇತ್ರ” ಎಂದರ್ಥ).

43 ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ನಿರ್ಧರಿಸಿದನು. ಯೇಸು ಫಿಲಿಪ್ಪನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. 44 ಅಂದ್ರೆಯ ಮತ್ತು ಪೇತ್ರರಂತೆ ಫಿಲಿಪ್ಪನು ಸಹ ಬೆತ್ಸಾಯಿದ ಎಂಬ ಊರಿನವನಾಗಿದ್ದನು. 45 ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.

46 ಆದರೆ ನತಾನಿಯೇಲನು ಫಿಲಿಪ್ಪನಿಗೆ, “ನಜರೇತಿನಿಂದ ಒಳ್ಳೆಯದೇನಾದರೂ ಬರುವುದೇ?” ಎಂದು ಕೇಳಿದನು.

ಫಿಲಿಪ್ಪನು, “ಬಂದು ನೋಡು” ಎಂದು ಉತ್ತರಕೊಟ್ಟನು.

47 ಯೇಸು ತನ್ನ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಅವನ ಬಗ್ಗೆ, “ಇವನು ನಿಜವಾದ ಇಸ್ರೇಲ. ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.

48 ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು.

ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.

49 ಆಗ ನತಾನಿಯೇಲನು ಯೇಸುವಿಗೆ, “ಗುರುವೇ, ನೀನೇ ದೇವರ ಮಗನು. ನೀನೇ ಇಸ್ರೇಲರ ರಾಜ” ಎಂದು ಹೇಳಿದನು.

50 ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು. 51 ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International