Old/New Testament
ಯೆಹೂದನ ಗಂಡುಮಕ್ಕಳ ಪಟ್ಟಿ
4 ಪೆರೆಚ್, ಹೆಚ್ರೋನ್, ಕರ್ಮಿ, ಹೂರ್ ಮತ್ತು ಶೋಬಾಲರು.
2 ಶೋಬಾಲನ ಮಗ ರೆವಾಯ. ರೆವಾಯನ ಮಗನು ಯಹತ್. ಯಹತನ ಗಂಡುಮಕ್ಕಳು ಅಹೂಮೈ ಮತ್ತು ಲಹದ್. ಅಹೂಮೈ ಮತ್ತು ಲಹದ್ರವರು ಚೊರ್ರರ ಸಂತತಿಯವರು.
3 ಏಟಾಮನ ಗಂಡುಮಕ್ಕಳು ಯಾರೆಂದರೆ: ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್. ಇವರ ಸಹೋದರಿ ಹಚೆಲೆಲ್ ಪೋನೀ.
4 ಪೆನೂವೇಲನು ಗೆದೋರನ ತಂದೆ: ಏಜೆರನು ಹೂಷಾಹ್ಯನ ತಂದೆ.
ಇವರು ಹೂರನ ಗಂಡುಮಕ್ಕಳು. ಹೂರನು ಎಫ್ರಾತಾಹಳ ಮೊದಲನೆಯ ಮಗನು. ಇವನೇ ಬೆತ್ಲೇಹೇಮ್ಯರ ಮೂಲಪಿತೃ.
5 ತೆಕೋವನ ತಂದೆಯಾದ ಅಷ್ಹೂರನಿಗೆ ಇಬ್ಬರು ಹೆಂಡತಿಯರು. ಇವರ ಹೆಸರು ಹೆಲಾಹ ಮತ್ತು ನಾರ. 6 ನಾರಳಲ್ಲಿ ಹುಟ್ಟಿದ ಗಂಡುಮಕ್ಕಳು: ಅಹುಜ್ಜಾಮ್, ಹೇಫೆರ್, ತೇಮಾನ್ ಮತ್ತು ಅಹಷ್ಟಾರ್ಯ. 7 ಹೆಲಾಹಳ ಗಂಡುಮಕ್ಕಳು: ಚೆರೆತ್, ಇಚ್ಹಾರ್, ಎತ್ನಾನ್ ಮತ್ತು ಕೋಚ. 8 ಕೋಚನು ಆನೂಬ್ ಮತ್ತು ಚೊಬೇಬನ ತಂದೆ. ಕೋಚನು ಅಹರ್ಹೇಲ್ ವಂಶದವರ ಮೂಲಪಿತೃ. ಅಹರ್ಹೇಲನು ಹಾರಮನ ಮಗನು.
9 ಯಾಬೇಚನು ತುಂಬ ಒಳ್ಳೆಯ ವ್ಯಕ್ತಿಯಾಗಿದ್ದನು. ಅವನು ತನ್ನ ಅಣ್ಣತಮ್ಮಂದಿರಿಗಿಂತ ಉತ್ತಮನಾಗಿದ್ದನು. ಅವನ ತಾಯಿ, “ನಾನು ಅವನನ್ನು ಹೆರುವಾಗ ತುಂಬಾ ನೋವನ್ನು ಅನುಭವಿಸಿದ್ದರಿಂದ ನಾನು ಅವನಿಗೆ ಯಾಬೇಚ ಎಂದು ಹೆಸರಿಟ್ಟೆನು” ಎಂದು ಹೇಳಿದಳು. 10 ಯಾಬೇಚನು ಇಸ್ರೇಲರ ದೇವರಿಗೆ ಹೀಗೆ ಪ್ರಾರ್ಥಿಸಿದನು: “ದೇವರೇ, ನೀನು ನನ್ನನ್ನು ನಿಜವಾಗಿಯೂ ಆಶೀರ್ವದಿಸು. ನನ್ನ ಪ್ರಾಂತ್ಯವನ್ನು ವಿಸ್ತರಿಸು. ನನ್ನ ಬಳಿಯಲ್ಲಿಯೇ ಇದ್ದು ನನಗಾರೂ ನೋವು ಮಾಡದಂತೆ ನೋಡಿಕೊಂಡು ನನ್ನನ್ನು ರಕ್ಷಿಸು” ಎಂಬ ಯಾಬೇಚನ ಕೋರಿಕೆಯನ್ನು ದೇವರು ಕೇಳಿದನು.
11 ಕೆಲೂಬನು ಶೂಹನ ಸಹೋದರ. ಕೆಲೂಬನ ಮಗನು ಮೆಹೀರ್. ಮೆಹೀರನು ಎಷ್ಟೋನನ ತಂದೆ. 12 ಎಷ್ಟೋನನು ಬೇತ್ರಾಫ, ಪಾಸೇಹ ಮತ್ತು ತೆಹಿನ್ನ ಇವರ ತಂದೆ. ತೆಹಿನ್ನ ಇರ್ನಾಹಷನ ತಂದೆ. ಇವರೆಲ್ಲರೂ ರೇಕಾಬದವರು.
13 ಕೆನಜನ ಗಂಡುಮಕ್ಕಳು ಯಾರೆಂದರೆ: ಒತ್ನೀಯೇಲ್ ಮತ್ತು ಸೆರಾಯ. ಒತ್ನೀಯೇಲನ ಮಕ್ಕಳು: ಹತತ್ ಮತ್ತು ಮೆಯೋನೋತೈ. 14 ಮೆಯೋನೋತೈ ಒಫ್ರಾಹನ ತಂದೆ.
ಸೆರಾಯನು ಯೋವಾಬನ ತಂದೆ. ಯೋವಾಬನು ಗೇಹರಾಷೀಮ್ಯರ ಸ್ಥಾಪಕನು. ಇಲ್ಲಿಯವರು ನಿಪುಣ ಕುಶಲ ಕೆಲಸಗಾರರಾಗಿದ್ದುದರಿಂದ ಅವರಿಗೆ ಈ ಹೆಸರು ಬಂದಿತು.
15 ಕಾಲೇಬನು ಯೆಫುನ್ನೆಯ ಮಗನು. ಕಾಲೇಬನ ಗಂಡುಮಕ್ಕಳು: ಈರು, ಏಲ, ನಾಮ್, ಏಲನ ಮಗನ ಹೆಸರು ಕೆನಜ್.
16 ಯೆಹಲ್ಲೆಲೇಲನ ಗಂಡುಮಕ್ಕಳು ಯಾರೆಂದರೆ: ಜೀಪ್, ಜೀಫಾ, ತೀರ್ಯ ಮತ್ತು ಅಸರೇಲ್.
17-18 ಎಜ್ರನ ಗಂಡುಮಕ್ಕಳು ಯಾರೆಂದರೆ: ಯೆತೆರ್, ಮೆರೆದ್, ಏಫೆರ್, ಯಾಲೋನ್, ಮೆರೆದನ ಗಂಡುಮಕ್ಕಳು: ಮಿರ್ಯಾಮ್, ಶಮ್ಮೈ ಮತ್ತು ಇಷ್ಬಹ. ಇಷ್ಬಹನ ಮಗ ಎಷ್ಟೆಮೋ. ಮೆರೆದನಿಗೆ ಯೆಹೂದ್ಯಳಾದ ಹೆಂಡತಿಯಿದ್ದಳು. ಅವಳಲ್ಲಿ ಯೆರೆದ್, ಹೆಬೆರ್ ಮತ್ತು ಯೆಕೊತೀಯೇಲ್ ಎಂಬ ಗಂಡುಮಕ್ಕಳು ಹುಟ್ಟಿದರು. ಯೆರೆದನು ಗೆದೋರ್ಯನ ತಂದೆ. ಹೆಬೆರನು ಸೋಕೋನನ ತಂದೆ; ಯೆಕೊತೀಯೇಲನು ಜಾನೋಹನ ತಂದೆ. ಇವರು ಬಿತ್ಯಳ ಮಕ್ಕಳು; ಬಿತ್ಯಳು ಫರೋಹನ ಮಗಳು. ಈಕೆಯೇ ಮೆರೆದನ ಈಜಿಪ್ಟಿನ ಹೆಂಡತಿ.
19 ಮೆರೆದನ ಹೆಂಡತಿಯು ನೆಹಮನ ತಂಗಿ. ಮೆರೆದನ ಹೆಂಡತಿಯು ಯೂದಾಯದಿಂದ ಬಂದವಳು. ಮೆರೆದನ ಹೆಂಡತಿಯ ಗಂಡುಮಕ್ಕಳು: ಕೆಯೀಲ ಮತ್ತು ಎಷ್ಟೆಮೋ ಗೋತ್ರಗಳ ಮೂಲಪಿತೃಗಳು. ಕೆಯೀಲನು ಗರ್ಮ್ಯರಿಗೆ ಸೇರಿದವನು ಮತ್ತು ಎಷ್ಟೆಮೋವನು ಮಾಕಾತ್ಯರಿಗೆ ಸೇರಿದವನು. 20 ಶೀಮೋನನ ಮಕ್ಕಳು ಯಾರೆಂದರೆ: ಅಮ್ನೋನ್, ರಿನ್ನ, ಬೆನ್ಹಾನಾನ್ ಮತ್ತು ತೀಲೋನ್.
ಇಷ್ಷೀಯ ಮಕ್ಕಳು: ಜೋಹೇತ್ ಮತ್ತು ಬೆನ್ ಜೋಹೇತ್.
21-22 ಶೇಲನು ಯೆಹೂದನ ಮಗನು. ಶೇಲನ ಮಕ್ಕಳು: ಏರ್, ಲದ್ದ, ಯೊಕೀವ್, ಕೋಜೇಬದ ಜನರು. ಯೋವಾಷ್ ಮತ್ತು ಸಾರಾಫ್. ಏರನ ಮಗನು ಲೇಕಾಹ್ಯ. ಲದ್ದನು ಮರೇಷನ ತಂದೆ ಮತ್ತು ಬೇತಷ್ಬೇಯದ, ಬಟ್ಟೆ ನೇಕಾರರ ಮೂಲಪಿತೃ. ಯೋವಾಷ್ ಮತ್ತು ಸಾರಾಫ್ ಮೋವಾಬ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡು ಬೆತ್ಲೆಹೇಮಿಗೆ ಹಿಂತಿರುಗಿದರು. ಈ ಕುಟುಂಬದ ಕುರಿತಾದ ಬರಹಗಳು ಪುರಾತನ ಕಾಲದ್ದು. 23 ಶೇಲನ ಮಕ್ಕಳು ಮಣ್ಣಿನಿಂದ ವಸ್ತುಗಳನ್ನು ತಯಾರಿಸುತ್ತಿದ್ದರು. ನೆಟಾಯಿಮ್ ಮತ್ತು ಗೆದೇರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಅವರು ಅರಸನಿಗೋಸ್ಕರ ಕೆಲಸಮಾಡುತ್ತಿದ್ದರು.
ಸಿಮೆಯೋನನ ಗಂಡುಮಕ್ಕಳು
24 ಸಿಮೆಯೋನನ ಗಂಡುಮಕ್ಕಳು ಯಾರೆಂದರೆ: ನೆಮೂವೇಲ್, ಯಾಮೀನ್, ಯಾರೀದ್, ಜೆರಹ ಮತ್ತು ಸೌಲ. 25 ಸೌಲನ ಮಗನು ಶಲ್ಲುಮ. ಶಲ್ಲುಮನ ಮಗನು ಮಿಬ್ಸಾಮ್; ಮಿಬ್ಸಾಮನ ಮಗನು ಮಿಷ್ಮ.
26 ಮಿಷ್ಮನ ಮಗನು ಹಮ್ಮೂವೇಲ. ಹಮ್ಮೂವೇಲನ ಮಗನು. ಜಕ್ಕೂರ್. ಜಕ್ಕೂರನ ಮಗನು ಶಿಮ್ಮೀ. 27 ಶಿಮ್ಮೀಗೆ ಹದಿನಾರು ಮಂದಿ ಗಂಡುಮಕ್ಕಳೂ ಆರು ಮಂದಿ ಹೆಣ್ಣುಮಕ್ಕಳೂ ಇದ್ದರು. ಶಿಮ್ಮೀಯ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಇವರ ಸಂತತಿಯವರ ಸಂಖ್ಯೆಯು ಯೆಹೂದದ ಸಂತತಿಯವರಷ್ಟು ಹೆಚ್ಚಾಗಿರಲಿಲ್ಲ.
28 ಶಿಮ್ಮಿಯ ಗಂಡುಮಕ್ಕಳು: ಬೇರ್ಷೆಬ, ಮೋಲಾದ್, ಹಚರ್ ಷೂವಾಲ್, 29 ಬಿಲ್ಹ, ಎಚೆಮ್, ತೋಲಾಬ್, 30 ಬೆತೂವೇಲ್, ಹೊರ್ಮ, ಚಿಕ್ಲಗ್, 31 ಬೇತ್ಮರ್ಕಾಬೋತ್, ಹಚರ್ ಸೂಸೀಮ್, ಬೇತ್ಬಿರೀ ಮತ್ತು ಶಾರಯಿಮ್ ಊರುಗಳಲ್ಲಿ ವಾಸಿಸಿದರು. ದಾವೀದನು ಅರಸನಾಗುವ ತನಕ ಅವರು ಆ ಊರುಗಳಲ್ಲಿ ನೆಲೆಸಿದರು. 32 ಈ ಪಟ್ಟಣಗಳ ಹತ್ತಿರವಿರುವ ಐದು ಹಳ್ಳಿಗಳು ಯಾವುವೆಂದರೆ: ಏಟಾಮ್, ಅಯಿನ್, ರಿಮ್ಮೋನ್, ತೋಕೆನ್ ಮತ್ತು ಆಷಾನ್. 33 ಬೇರೆ ಹಳ್ಳಿಗಳು ಬಾಲ್ ತನಕವೂ ಇದ್ದವು. ಅವರು ವಾಸವಾಗಿದ್ದದ್ದು ಅಲ್ಲಿಯೇ. ಇದಲ್ಲದೆ ಅವರು ತಮ್ಮ ವಂಶದ ಚರಿತ್ರೆಯನ್ನೂ ಬರೆದಿಟ್ಟರು.
34-38 ಅವರ ಕುಲಪ್ರಧಾನರು ಯಾರೆಂದರೆ: ಮೊಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ, ಯೋವೇಲ್, ಯೇಹೂ (ಯೇಹೂವು ಯೊಷಿಬ್ಯನ ಮಗ, ಸೆರಾಯನ ಮೊಮ್ಮಗ ಮತ್ತು ಅಸಿಯೇಲನ ಮರಿಮಗ). ಎಲ್ಯೋವೇನೈ, ಯಾಕೋಬ, ಯೆಷೋಹಾಮ, ಅಸಾಯ, ಆದೀಯೇಲ್, ಯೆಸೀಮಿಯೇಲ್, ಬೆನಾಯ ಮತ್ತು ಶಿಷ್ಪಿಯನ ಮಗನಾದ ಜೀಜ. ಶಿಪ್ಪಿಯು ಅಲ್ಲೋನನ ಮಗನು; ಅಲ್ಲೋನನು ಯೆದಾಯನ ಮಗನು; ಯೆದಾಯನು ಶಿಮ್ರಿಯ ಮಗನು; ಶಿಮ್ರಿಯು ಶೆಮಾಯನ ಮಗನು.
ಈ ಕುಲದ ಜನರು ಬಹುಸಂಖ್ಯಾತರಾಗಿ ಹೆಚ್ಚಿದರು. 39 ಗೆದೋರ್ ಊರಿನ ಹೊರಭಾಗದಲ್ಲಿರುವ ತಗ್ಗಿನ ಪೂರ್ವ ದಿಕ್ಕಿನಲ್ಲಿ ಅವರು ನೆಲೆಸಿದರು. ತಮ್ಮ ದನಕುರಿಗಳಿಗಾಗಿ ಹುಲ್ಲುಗಾವಲನ್ನು ಹುಡುಕಿಕೊಂಡು ಅವರು ಅಲ್ಲಿಗೆ ಹೋಗಿದ್ದರು. 40 ಅಲ್ಲಿ ಫಲವತ್ತಾದ ಭೂಮಿಯನ್ನೂ ಹಸಿರು ಹುಲ್ಲುಗಾವಲನ್ನೂ ಕಂಡು ಅಲ್ಲಿಯೇ ನೆಲೆಸಿದರು. ಆ ಪ್ರದೇಶವು ಪ್ರಶಾಂತವಾಗಿತ್ತು. ಹಿಂದಿನ ಕಾಲದಲ್ಲಿ ಹಾಮನ ಸಂತತಿಯವರು ಅಲ್ಲಿ ನೆಲೆಸಿದ್ದರು. 41 ಯೆಹೂದದ ಅರಸನಾಗಿದ್ದ ಹಿಜ್ಕೀಯನ ಕಾಲದಲ್ಲಿ ಇದು ಆಯಿತು. ಇವರು ಗೆದೋರಿಗೆ ಬಂದು ಹಾಮನ ಸಂತತಿಯವರೊಂದಿಗೆ ಯುದ್ಧಮಾಡಿ ಅವರ ಗುಡಾರಗಳನ್ನು ನಾಶಮಾಡಿದರು. ಅಲ್ಲದೆ ಮೆಗೂನ್ಯರ ವಿರುದ್ಧವಾಗಿ ಯುದ್ಧಮಾಡಿ ಅಲ್ಲಿ ನೆಲೆಸಿದರು. ಇವರು ಮೆಗೂನ್ಯರನ್ನೆಲ್ಲಾ ನಾಶಮಾಡಿದರು. ಇಂದಿನವರೆಗೂ ಮೆಗೂನ್ಯರಲ್ಲಿ ಯಾರೂ ಉಳಿದಿಲ್ಲ. ಹೀಗೆ ಆ ಸ್ಥಳದಲ್ಲಿ ಅವರು ನೆಲೆಸಿದರು; ಯಾಕೆಂದರೆ ಅವರ ಪಶುಗಳಿಗೆ ಅಲ್ಲಿ ಸಾಕಷ್ಟು ಹುಲ್ಲಿತ್ತು.
42 ಸಿಮೆಯೋನನ ಕುಲದ ಐನೂರು ಮಂದಿ ಸೇಯೀರ್ ಬೆಟ್ಟಪ್ರಾಂತ್ಯಕ್ಕೆ ಹೋದರು. ಇಷ್ಷೀಯ ಗಂಡುಮಕ್ಕಳು ಈ ಗುಂಪಿನ ನಾಯಕರಾಗಿದ್ದರು. ಅವರು ಯಾರೆಂದರೆ: ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್. ಅಲ್ಲಿ ವಾಸಿಸುವ ಜನರೊಂದಿಗೆ ಇವರು ಕಾದಾಡಿದರು. 43 ಆಗ ಅಲ್ಲಿ ಸ್ವಲ್ಪವೇ ಮಂದಿ ಅಮಾಲೇಕ್ಯರು ವಾಸಿಸುತ್ತಿದ್ದರು. ಈ ಸಿಮೆಯೋನರು ಅವರನ್ನು ಕೊಂದು ಆ ಸ್ಥಳದಲ್ಲಿ ನೆಲೆಸಿದರು. ಇಂದಿನವರೆಗೂ ಸಿಮೆಯೋನರು ಅಲ್ಲಿ ನೆಲೆಸಿದ್ದಾರೆ.
ರೂಬೇನನ ಸಂತತಿಯವರು
5 1-3 ರೂಬೇನನು ಇಸ್ರೇಲನ ಚೊಚ್ಚಲಮಗ. ಅವನು ಚೊಚ್ಚಲಮಗನಿಗೆ ಸಿಗಬೇಕಾಗಿದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಅವನು ತನ್ನ ತಂದೆಯ ಉಪಪತ್ನಿಯೊಡನೆ ಸಂಭೋಗಿಸಿದ್ದರಿಂದ ಅವನ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ಆದ್ದರಿಂದ ವಂಶಾವಳಿಯಲ್ಲಿ ಚೊಚ್ಚಲ ಮಗನ ಸ್ಥಾನ ಅವನಿಗೆ ದೊರೆಯಲಿಲ್ಲ. ಯೆಹೂದನು ತನ್ನ ಎಲ್ಲಾ ಸಹೋದರರಿಗಿಂತ ಬಲಾಢ್ಯನಾದನು. ಆದ್ದರಿಂದ ಅವನ ಕುಲದಿಂದಲೇ ನಾಯಕರುಗಳು ಬಂದರು. ಆದರೆ ಚೊಚ್ಚಲ ಮಗನಿಗೆ ಸಿಗಬೇಕಾಗಿದ್ದ ಇತರ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು.
ರೂಬೇನನ ಮಕ್ಕಳು ಯಾರೆಂದರೆ: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.
4 ಇವರು ಯೋವೇಲನ ಸಂತತಿಯವರು: ಶೆಮಾಯನು ಯೋವೇಲನ ಮಗ. ಗೋಗನು ಶೆಮಾಯನ ಮಗ. ಶಿಮ್ಮಿಯು ಗೋಗನ ಮಗ. 5 ಶಿಮ್ಮಿಯ ಮಗನು ಮೀಕ. ಮೀಕನ ಮಗ ರೆವಾಯ. ರೆವಾಯನ ಮಗನು ಬಾಳ್ಮಯೊನ್. 6 ಬಾಳ್ಮಯೊನನ ಮಗನು ಬೇರ. ಅಶ್ಯೂರದ ಅರಸನಾದ ತಿಗ್ಲತ್ಪಿಲೆಸರನು ಬೇರನನ್ನು ಅವನ ಮನೆಯಿಂದ ಹೊರಡಿಸಿದನು; ಬೇರನು ಅವನ ಸೆರೆಯಾಳಾದನು. ಬೇರನು ರೂಬೇನ್ ಕುಲದ ಪ್ರಧಾನನಾಗಿದ್ದನು.
7 ಯೋವೇಲನ ಮತ್ತು ಅವನ ಸಂತತಿಯವರೆಲ್ಲರ ವಿಷಯವಾಗಿ ಸಂತಾನಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಅವನ ಚೊಚ್ಚಲಮಗನು ಯೆಗೀಯೇಲ್, ಅನಂತರ ಹುಟ್ಟಿದವರು ಜೆಕರ್ಯ ಮತ್ತು ಬೆಳ. 8 ಬೆಳನು ಆಜಾಜನ ಮಗ, ಆಜಾಜನು ಶೆಮಯನ ಮಗ, ಶೆಮಯನು ಯೋವೇಲನ ಮಗನು. ಇವರೆಲ್ಲರೂ ನೆಬೋ ಮತ್ತು ಬಾಳ್ಮೆಯೋನ್ ಪ್ರಾಂತ್ಯದ ಅರೋಯೇರ್ ಸುತ್ತಮುತ್ತ ವಾಸಿಸಿದರು. 9 ಬೆಳನ ಜನರು ಯೂಫ್ರೇಟೀಸ್ ನದಿಯ ಸಮೀಪದಲ್ಲಿರುವ ಮರುಭೂಮಿಯವರೆಗೂ ನೆಲೆಸಿದರು. ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಇದ್ದುದರಿಂದ ಗಿಲ್ಯಾದ್ ಪ್ರಾಂತ್ಯದಲ್ಲಿಯೇ ನೆಲೆಸಿದರು. 10 ಸೌಲನು ಅರಸನಾಗಿದ್ದ ಸಮಯದಲ್ಲಿ ಬೆಳನ ಜನರು ಹಗ್ರೀಯರೊಂದಿಗೆ ಯುದ್ಧಮಾಡಿ ಅವರ ಗುಡಾರಗಳಲ್ಲಿ ವಾಸಮಾಡಿದರು. ಆ ಗುಡಾರಗಳಲ್ಲಿ ವಾಸಮಾಡುತ್ತಾ ಗಿಲ್ಯಾದಿನ ಪೂರ್ವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದರು.
ಗಾದನ ಸಂತತಿಯವರು
11 ರೂಬೇನ್ಯರು ವಾಸಿಸಿದ್ದ ಪ್ರಾಂತ್ಯದ ಪಕ್ಕದಲ್ಲಿಯೇ ಗಾದನ ಕುಲದವರು ವಾಸಿಸಿದರು. ಇವರು ಬಾಷಾನಿನ ಪ್ರದೇಶದಲ್ಲಿ ಸಾಲೆಖ ಪಟ್ಟಣದವರೆಗೂ ನೆಲೆಸಿದರು. 12 ಯೋವೇಲನೇ ಬಾಷಾನಿನ ಮೊದಲನೇ ಪ್ರಧಾನನು. ಇವನ ನಂತರ ಶಾಫಾಮ ಪ್ರಧಾನನಾದನು. ಆಮೇಲೆ ಯನ್ನೈ ಪ್ರಧಾನನಾದನು. 13 ಅವರ ಕುಟುಂಬದ ಏಳು ಮಂದಿ ಸಹೋದರರು ಯಾರೆಂದರೆ: ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್. 14 ಇವರು ಅಬೀಹೈಲನ ಸಂತತಿಯವರು: ಅಬೀಹೈಲನು ಹೂರೀಯ ಮಗ. ಹೂರೀಯು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ. ಗಿಲ್ಯಾದನು ಮೀಕಾಯೇಲನ ಮಗನು. ಮೀಕಾಯೇಲನು ಯೆಷೀಷೈಯನ ಮಗನು. ಯೆಷೀಷೈ ಯೆಹ್ದೋವಿನ ಮಗನು. ಯೆಹ್ದೋವಿಯು ಅಹೀಬೂಜನ ಮಗನು. 15 ಅಬ್ದೀಯೇಲನ ಮಗನು ಅಹೀಬೂಜನು. ಅಬ್ದೀಯೇಲನು ಗೂನೀಯ ಮಗನು. ಅಹೀಬೂಜನು ಕುಟುಂಬ ಪ್ರಧಾನನಾಗಿದ್ದನು.
16 ಗಿಲ್ಯಾದ್ ಪ್ರಾಂತ್ಯದಲ್ಲಿ ಗಾದ್ ಕುಟುಂಬದ ಜನರು ವಾಸಿಸಿದರು. ಅವರು ಬಾಷಾನ್ ಪ್ರಾಂತ್ಯದಲ್ಲಿಯೂ ಅದರ ಸುತ್ತಮುತ್ತಲಿದ್ದ ಊರುಗಳಲ್ಲಿಯೂ ಶಾರೋನ್ ಪ್ರಾಂತ್ಯದ ಹುಲ್ಲುಗಾವಲುಗಳ ಗಡಿಗಳವರೆಗೂ ನೆಲೆಸಿದರು.
17 ಯೋತಾಮ ಮತ್ತು ಯಾರೊಬ್ಬಾಮನ ಕಾಲದಲ್ಲಿ ಇವರ ಹೆಸರುಗಳನ್ನೆಲ್ಲಾ ಗಾದ್ಯರ ಸಂತಾನ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಯೋತಾಮನು ಯೆಹೂದದ ಅರಸನಾಗಿದ್ದನು ಮತ್ತು ಯಾರೊಬ್ಬಾಮನು ಇಸ್ರೇಲರ ಅರಸನಾಗಿದ್ದನು.
ಶೂರರಾದ ಯುದ್ಧವೀರರು
18 ರೂಬೇನ್ ಮತ್ತು ಗಾದ್ ಕುಲಗಳಲ್ಲಿ ಮತ್ತು ಮನಸ್ಸೆಯ ಅರ್ಧಕುಲದವರಲ್ಲಿ ನಲವತ್ತನಾಲ್ಕು ಸಾವಿರದ ಏಳುನೂರ ಅರವತ್ತು ಮಂದಿ ಯುದ್ಧವೀರರಿದ್ದರು. ಇವರೆಲ್ಲಾ ಖಡ್ಗ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಉಪಯೋಗಿಸುವದರಲ್ಲಿ ನಿಪುಣರಾಗಿದ್ದರು. 19 ಅವರು ಹಗ್ರೀಯರೊಂದಿಗೂ ಯೆಟೂರ್, ನಾಫೀಷ್ ಮತ್ತು ನೋದಾಬ್ ಊರಿನವರೊಂದಿಗೂ ಯುದ್ಧ ಮಾಡಿದರು. 20 ರೂಬೇನ್, ಮನಸ್ಸೆ, ಗಾದ್ ಕುಲಗಳ ಯೋಧರು ಯುದ್ಧಮಾಡುವಾಗ ದೇವರಲ್ಲಿ ಪ್ರಾರ್ಥಿಸಿದರು. ಅವರು ದೇವರ ಮೇಲೆ ಭರವಸೆಯಿಟ್ಟು ಸಹಾಯಕ್ಕಾಗಿ ಬೇಡಿಕೊಂಡದ್ದರಿಂದ ದೇವರು ಅವರಿಗೆ ಜಯವನ್ನು ಕೊಟ್ಟನು. 21 ವೈರಿಗಳಲ್ಲಿದ್ದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳು, ಎರಡು ಸಾವಿರ ಕತ್ತೆಗಳು ಅಲ್ಲದೆ ಒಂದು ಲಕ್ಷ ಸೆರೆಯಾಳುಗಳನ್ನು ತೆಗೆದುಕೊಂಡರು. 22 ದೇವರು ಅವರಿಗೆ ಜಯವನ್ನು ಕೊಟ್ಟಿದ್ದರಿಂದ ಹಗ್ರೀಯರಲ್ಲಿ ಬಹಳ ಮಂದಿಯನ್ನು ಕೊಂದರು. ಆ ಹಗ್ರೀಯರ ಪ್ರದೇಶದಲ್ಲಿ ರೂಬೇನ್, ಗಾದ್, ಮನಸ್ಸೆ ಕುಲಗಳವರು ಸಹ ವಾಸಿಸಿದರು. ಬಾಬಿಲೋನಿನ ಅರಸನು ಇಸ್ರೇಲರನ್ನು ಸೆರೆಹಿಡಿದು ಕೊಂಡೊಯ್ಯುವ ತನಕ ಅವರು ಅಲ್ಲಿಯೇ ವಾಸಮಾಡಿದರು.
23 ಮನಸ್ಸೆಯ ಅರ್ಧಕುಲದ ಜನರು ಬಾಷಾನ್ ಪ್ರದೇಶದಿಂದಿಡಿದು ಬಾಳ್ಹೆರ್ಮೋನ್, ಸೆನೀರ್ ಮತ್ತು ಹೆರ್ಮೋನ್ ಪರ್ವತ ಪ್ರಾಂತ್ಯದವರೆಗೂ ನೆಲೆಸಿದರು. ಅವರ ಕುಲದ ಜನರು ಬಹುಸಂಖ್ಯಾತರಾದರು.
24 ಮನಸ್ಸೆಯ ಅರ್ಧಕುಲದ ಅಧಿಪತಿಗಳು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್, ಇವರೆಲ್ಲಾ ಬಲಾಢ್ಯರೂ ಧೈರ್ಯಶಾಲಿಗಳೂ ಆದ ವೀರರಾಗಿದ್ದರು. 25 ಆದರೆ ಆ ಅಧಿಪತಿಗಳು ತಮ್ಮ ಪೂರ್ವಿಕರು ಆರಾಧಿಸುತ್ತಿದ್ದ ದೇವರನ್ನು ಬಿಟ್ಟು ಬೇರೆ ದೇವರುಗಳನ್ನು ಪೂಜಿಸತೊಡಗಿ ತಮ್ಮ ದೇವರ ವಿರುದ್ಧವಾಗಿ ಪಾಪಮಾಡಿದರು. ತಾವು ಸೋಲಿಸಿದ ಅನ್ಯಜನಾಂಗದವರ ದೇವರುಗಳನ್ನು ಇವರು ಆರಾಧಿಸಿದರು.
26 ಇಸ್ರೇಲರ ದೇವರು ಅಶ್ಯೂರದ ರಾಜನಾದ ಪೂಲ್ (ತಿಗ್ಲತ್ಪಿಲೆಸರ್) ಅವರ ಮೇಲೆ ಯುದ್ಧಕ್ಕೆ ಹೋಗುವಂತೆ ಮಾಡಿದನು. ಅವರು ಬಂದು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರೊಂದಿಗೆ ಯುದ್ಧ ಮಾಡಿದರು. ಯುದ್ಧದಲ್ಲಿ ಅವರನ್ನು ಸೋಲಿಸಿ, ಸೆರೆಹಿಡಿದು ಹಲಹ, ಹಾಬೋರ್, ಹಾರ ಮತ್ತು ಗೋಜಾನ್ ನದಿಯ ಸಮೀಪದ ಸ್ಥಳಕ್ಕೆ ಕೈದಿಗಳನ್ನಾಗಿ ಕೊಂಡೊಯ್ದರು. ಅಂದಿನಿಂದ ಇಂದಿನ ತನಕವೂ ಇಸ್ರೇಲರು ಆ ಸ್ಥಳಗಳಲ್ಲಿ ವಾಸಮಾಡುತ್ತಿರುವರು.
ಲೇವಿಯ ಸಂತತಿಯವರು
6 ಲೇವಿಯ ಗಂಡುಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
2 ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
3 ಅಮ್ರಾಮನ ಮಕ್ಕಳು: ಆರೋನ, ಮೋಶೆ ಮತ್ತು ಮಿರ್ಯಾಮಳು.
ಆರೋನನ ಮಕ್ಕಳು: ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್. 4 ಎಲ್ಲಾಜಾರನ ಮಗನು ಫೀನೆಹಾಸ. ಫೀನೆಹಾಸನ ಮಗನು ಅಬೀಷೂವ. 5 ಅಬೀಷೂವನ ಮಗನು ಬುಕ್ಕೀ. ಬುಕ್ಕೀಯ ಮಗನು ಉಜ್ಜೀ. 6 ಉಜ್ಜೀಯ ಮಗನು ಜೆರಹ್ಯ. ಜೆರಹ್ಯನ ಮಗನು ಮೆರಾಯೋತ್. 7 ಮೆರಾಯೋತನ ಮಗನು ಅಮರ್ಯ. ಅಮರ್ಯನ ಮಗನು ಅಹೀಟೂಬ. 8 ಅಹೀಟೂಬನ ಮಗ ಚಾದೋಕ. ಚಾದೋಕನ ಮಗ ಅಹೀಮಾಚ. 9 ಅಹೀಮಾಚನು ಅಜರ್ಯನ ತಂದೆ. ಅಜರ್ಯನ ಮಗನು ಯೋಹಾನಾನ. 10 ಯೋಹಾನಾನನ ಮಗನು ಅಜರ್ಯ. (ಸೊಲೊಮೋನನು ಜೆರುಸಲೇಮಿನಲ್ಲಿ ಕಟ್ಟಿದ ದೇವಾಲಯದಲ್ಲಿ ಅಜರ್ಯನು ಮಹಾಯಾಜಕನಾಗಿದ್ದನು.) 11 ಅಜರ್ಯನ ಮಗನು ಅಮರ್ಯ. ಅಮರ್ಯನು ಅಹೀಟೂಬನ ತಂದೆ. 12 ಅಹೀಟೂಬನು ಚಾದೋಕನ ತಂದೆ. ಚಾದೋಕನು ಶಲ್ಲೂಮನ ತಂದೆ. 13 ಶಲ್ಲೂಮನು ಹಿಲ್ಕೀಯನ ತಂದೆ. ಹಿಲ್ಕೀಯನು ಅಜರ್ಯನ ತಂದೆ. 14 ಅಜರ್ಯನು ಸೆರಾಯನ ತಂದೆ. ಸೆರಾಯನು ಯೆಹೋಚಾದಾಕನ ತಂದೆ.
15 ಯೆಹೂದ ಮತ್ತು ಜೆರುಸಲೇಮಿನ ಜನರು ಸೆರೆ ಒಯ್ಯಲ್ಪಟ್ಟಾಗ ಯೆಹೋಚಾದಾಕನೂ ಅವರೊಂದಿಗೆ ಪರದೇಶಕ್ಕೆ ಹೋಗಬೇಕಾಯಿತು. ಯೆಹೋವನು ಯೆಹೂದ್ಯರನ್ನು ಮತ್ತು ಜೆರುಸಲೇಮಿನವರನ್ನು ಪರದೇಶಕ್ಕೆ ಸೆರೆಯಾಳುಗಳಾಗಿ ಒಯ್ಯಲು ನೆಬೂಕದ್ನೆಚ್ಚರನನ್ನು ಉಪಯೋಗಿಸಿದನು.
ಲೇವಿಯ ಇತರ ಸಂತತಿಯವರು
16 ಲೇವಿಯ ಗಂಡುಮಕ್ಕಳು: ಗೇರ್ಷೋಮ್, ಕೆಹಾತ್ ಮತ್ತು ಮೆರಾರೀ.
17 ಗೇರ್ಷೋಮನ ಗಂಡುಮಕ್ಕಳು: ಲಿಬ್ನೀ ಮತ್ತು ಶಿಮ್ಮೀ.
18 ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
19 ಮೆರಾರಿಯ ಗಂಡುಮಕ್ಕಳು: ಮಹ್ಲೀ ಮತ್ತು ಮುಷೀ.
ಇತರ ಲೇವಿ ಕುಲದ ಕುಟುಂಬಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ತಂದೆಗಳ ಹೆಸರನ್ನು ಮೊದಲು ತಿಳಿಸಿ, ಅವರ ಗಂಡುಮಕ್ಕಳ ಹೆಸರನ್ನು ನಂತರ ತಿಳಿಸಲಾಗಿದೆ.
20 ಗೇರ್ಷೋಮನ ಸಂತತಿಯವರು: ಲಿಬ್ನೀಯು ಗೇರ್ಷೋಮನ ಮಗನು. ಲಿಬ್ನೀಯ ಮಗ ಯಹತ್. ಯಹತನ ಮಗ ಜಿಮ್ಮ. 21 ಜಿಮ್ಮನ ಮಗನು ಯೋವಾಹ. ಯೋವಾಹನ ಮಗ ಇದ್ದೋ. ಜೆರಹನು ಇದ್ದೋವಿನ ಮಗನು. ಜೆರಹನ ಮಗನು ಯೆವತ್ರೈ.
22 ಕೆಹಾತನ ಸಂತತಿಯವರು: ಕೆಹಾತನ ಮಗ ಅಮ್ಮೀನಾದಾಬ್. ಅಮ್ಮೀನಾದಾಬನ ಮಗ ಕೋರಹ. ಕೋರಹನ ಮಗನು ಅಸ್ಸೀರ್. 23 ಅಸ್ಸೀರನ ಮಗನು ಎಲ್ಕಾನ. ಎಲ್ಕಾನನ ಮಗನು ಎಬ್ಯಾಸಾಫ್. ಎಬ್ಯಾಸಾಫನ ಮಗನು ಅಸ್ಸೀರ್. 24 ಅಸ್ಸೀರನ ಮಗನು ತಹತ. ಊರೀಯೇಲ್ ತಹತನ ಮಗನು. ಉಜ್ಜೀಯನು ಊರೀಯೇಲನ ಮಗನು. ಸೌಲನು ಉಜ್ಜೀಯನ ಮಗನು.
25 ಎಲ್ಕಾನನ ಗಂಡುಮಕ್ಕಳು: ಅಮಾಸೈ ಮತ್ತು ಅಹೀಮೋತ್. 26 ಚೋಫೈ ಎಲ್ಕಾನನ ಮಗನು. ನಹತನು ಚೋಫೈಯ ಮಗನು. 27 ನಹತನ ಮಗ ಎಲೀಯಾಬ್. ಯೆರೋಹಾಮನು ಎಲೀಯಾಬನ ಮಗನು. ಯೆರೋಹಾಮನ ಮಗನು ಎಲ್ಕಾನ. ಸಮುವೇಲನು ಎಲ್ಕಾನನ ಮಗನು. 28 ಸಮುವೇಲನ ಗಂಡುಮಕ್ಕಳು: ಯೋವೇಲ್ ಮತ್ತು ಅಬೀಯ.
29 ಮೆರಾರೀಯ ಗಂಡುಮಕ್ಕಳು: ಮೆರಾರೀಯ ಮಗ ಮಹ್ಲೀ; ಮಹ್ಲೀಯ ಮಗನು ಲಿಬ್ನೀ. ಲಬ್ನೀಯ ಮಗ ಶಿಮ್ಮೀ; ಶಿಮ್ಮೀಯನ ಮಗ ಉಜ್ಜ; 30 ಉಜ್ಜನ ಮಗ ಶಿಮ್ಮಾ; ಶಿಮ್ಮಾನ ಮಗ ಹಗ್ಗೀಯ. ಹಗ್ಗೀಯನ ಮಗ ಅಸಾಯ.
ದೇವಾಲಯದ ಗಾಯಕರು
31 ದೇವದರ್ಶನಗುಡಾರದ ಮಹಾಪವಿತ್ರಸ್ಥಳದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಟ್ಟ ಬಳಿಕ ಅರಸನಾದ ದಾವೀದನು ಗಾಯಕರನ್ನು ಆರಿಸಿದನು. 32 ಪವಿತ್ರ ಗುಡಾರದಲ್ಲಿ ಹಾಡುವುದೇ ಇವರ ದೇವರ ಸೇವೆಯಾಗಿತ್ತು. ಸೊಲೊಮೋನನು ಜೆರುಸಲೇಮಿನಲ್ಲಿ ದೇವಾಲಯವನ್ನು ಕಟ್ಟುವ ತನಕ ಇವರು ಗುಡಾರದಲ್ಲಿ ತಮಗೆ ಹೇಳಿರುವ ಪ್ರಕಾರವೇ ಸೇವೆಮಾಡಿದರು.
33 ಗಾಯನದ ಮೂಲಕ ಸೇವೆಮಾಡಿದ ತಂದೆಗಳ ಮತ್ತು ಅವರ ಗಂಡುಮಕ್ಕಳ ಪಟ್ಟಿ:
ಕೆಹಾತ್ಯನ ಸಂತತಿಯವರಿಂದ ಗಾಯಕನಾದ ಹೇಮಾನ. ಇವನು ಯೋವೇಲನ ಮಗ. ಯೋವೇಲನು ಸಮುವೇಲನ ಮಗ. 34 ಸಮುವೇಲನು ಎಲ್ಕಾನನ ಮಗ. ಎಲ್ಕಾನನು ಯೆರೋಹಾಮನ ಮಗ. ಯೆರೋಹಾಮನು ಎಲೀಯೇಲನ ಮಗ. ಎಲೀಯೇಲನು ತೋಹನ ಮಗ. 35 ತೋಹನು ಚೂಫನ ಮಗ. ಚೂಫನು ಎಲ್ಕಾನನ ಮಗ. ಎಲ್ಕಾನನು ಮಹತನ ಮಗ. ಮಹತನು ಅಮಾಸೈಯ ಮಗ. 36 ಅಮಾಸೈಯು ಎಲ್ಕಾನನ ಮಗ. ಎಲ್ಕಾನನು ಯೋವೇಲನ ಮಗ. ಯೋವೇಲನು ಅಜರ್ಯನ ಮಗ. ಅಜರ್ಯನು ಚೆಫನ್ಯನ ಮಗ. 37 ಚೆಫನ್ಯನು ತಹತನ ಮಗ. ತಹತನು ಅಸೀರನ ಮಗ. ಅಸೀರನು ಎಬ್ಯಾಸಾಫನ ಮಗ. ಎಬ್ಯಾಸಾಫನು ಕೋರಹನ ಮಗ. 38 ಕೋರಹನು ಇಚ್ಹಾರನ ಮಗ. ಇಚ್ಹಾರನು ಕೆಹಾತನ ಮಗ. ಕೆಹಾತನು ಲೇವಿಯ ಮಗ. ಲೇವಿಯು ಇಸ್ರೇಲನ ಮಗ.
39 ಹೇಮಾನನ ಸಂಬಂಧಿಯ ಹೆಸರು ಆಸಾಫ್. ಇವನು ಹೇಮಾನನ ಬಲಗಡೆಯಲ್ಲಿದ್ದುಕೊಂಡು ಸೇವೆಮಾಡಿದನು. ಆಸಾಫನು ಬೆರೆಕ್ಯನ ಮಗನು. ಬೆರೆಕ್ಯನು ಶಿಮ್ಮನ ಮಗ. 40 ಶಿಮ್ಮನು ಮೀಕಾಯೇಲನ ಮಗ. ಮೀಕಾಯೇಲನು ಬಾಸೇಯನ ಮಗ. ಬಾಸೇಯನು ಮಲ್ಕೀಯನ ಮಗ. 41 ಮಲ್ಕೀಯನು ಎತ್ನಿಯ ಮಗ. ಎತ್ನಿಯು ಜೆರಹನ ಮಗ. ಜೆರಹನು ಆದಾಯನ ಮಗ. 42 ಆದಾಯನು ಏತಾನನ ಮಗ. ಏತಾನನು ಜಿಮ್ಮನ ಮಗ. ಜಿಮ್ಮನು ಶಿಮ್ಮಿಯ ಮಗ. 43 ಶಿಮ್ಮಿಯು ಯಹತನ ಮಗ. ಯಹತನು ಗೇರ್ಷೋಮನ ಮಗ. ಗೇರ್ಷೋಮನು ಲೇವಿಯ ಮಗ.
44 ಮೆರಾರೀಯ ಸಂತತಿಯವರು ಹೇಮಾನ ಮತ್ತು ಅಸಾಫನ ಸಂಬಂಧಿಕರು. ಇವರು ಹೇಮಾನನ ಎಡಗಡೆಯಲ್ಲಿ ನಿಂತು ಹಾಡುವ ಗಾಯಕರು. ಏತಾನನು ಕೀಷೀಯ ಮಗ. ಕೀಷೀಯು ಅಬ್ದೀಯ ಮಗ. ಅಬ್ದೀಯ ಮಲ್ಲೂಕನ ಮಗ. 45 ಮಲ್ಲೂಕನು ಹಷಬ್ಯನ ಮಗ. ಹಷಬ್ಯನು ಅಮಚ್ಯನ ಮಗ. ಅಮಚ್ಯನು ಹಿಲ್ಕೀಯನ ಮಗ. 46 ಹಿಲ್ಕೀಯನು ಅಮ್ಚೀಯನ ಮಗ. ಅಮ್ಚೀಯನು ಬಾನೀಯನ ಮಗ. ಬಾನೀಯನು ಶೆಮೆರನ ಮಗ. 47 ಶೆಮೆರನು ಮಹ್ಲೀಯನ ಮಗ. ಮಹ್ಲೀಯನು ಮೂಷೀಯ ಮಗ. ಮೂಷೀಯು ಮೆರಾರಿಯ ಮಗ. ಮೆರಾರಿಯು ಲೇವಿಯ ಮಗ.
48 ಹೇಮಾನ್ ಮತ್ತು ಆಸಾಫನ ಸಹೋದರರು ಲೇವಿಕುಲದವರು. ಲೇವಿಕುಲದವರನ್ನು ಲೇವಿಯರೆಂದು ಕರೆಯುತ್ತಾರೆ. ಲೇವಿಯರು ಪವಿತ್ರಗುಡಾರದ ಸೇವೆಯನ್ನು ಮಾಡಲು ಆರಿಸಲ್ಪಟ್ಟವರು. ಪವಿತ್ರ ಗುಡಾರವು ದೇವರ ನಿವಾಸವಾಗಿತ್ತು. 49 ಆದರೆ ಸರ್ವಾಂಗಹೋಮ ಅರ್ಪಿಸುವ ಯಜ್ಞವೇದಿಕೆಯ ಮೇಲೆ ಮತ್ತು ಧೂಪಾರ್ಪಣೆಯ ಯಜ್ಞವೇದಿಕೆಯ ಮೇಲೆ ಧೂಪವರ್ಪಿಸಲು ಆರೋನನ ಸಂತತಿಯವರನ್ನು ಮಾತ್ರ ಆರಿಸಿಕೊಳ್ಳಲಾಗಿತ್ತು. ದೇವರ ನಿವಾಸದ ಮಹಾಪವಿತ್ರ ಸ್ಥಳದಲ್ಲಿ ಆರೋನನ ಸಂತತಿಯವರೇ ಎಲ್ಲಾ ಕೆಲಸಕಾರ್ಯಗಳನ್ನು ಮಾಡುತ್ತಿದ್ದರು. ಅಲ್ಲದೆ ಇಸ್ರೇಲ್ ಜನರನ್ನು ಶುದ್ಧೀಕರಿಸಲು ಶುದ್ಧೀಕರಣ ಆಚಾರವನ್ನು ಅವರೇ ಮಾಡುತ್ತಿದ್ದರು. ದೇವರ ಸೇವಕನಾದ ಮೋಶೆಯು ಆಜ್ಞಾಪಿಸಿದ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅವರು ಅನುಸರಿಸುತ್ತಿದ್ದರು.
ಆರೋನನ ಸಂತತಿಯವರು
50 ಇವರು ಆರೋನನ ಗಂಡುಮಕ್ಕಳು: ಎಲ್ಲಾಜಾರನು ಆರೋನನ ಮಗ. ಫೀನೆಹಾಸನು ಎಲ್ಲಾಜಾರನ ಮಗ. ಅಬೀಷೂವನು ಫೀನೆಹಾಸನ ಮಗ. 51 ಬುಕ್ಕೀಯು ಅಬೀಷೂವನ ಮಗ. ಉಜ್ಜೀಯು ಬುಕ್ಕೀಯ ಮಗ. ಉಜ್ಜೀಯ ಮಗನು ಜೆರಹ್ಯಾಹ. 52 ಮೆರಾಯೋತನು ಜೆರಹ್ಯಾಹನ ಮಗ. ಅಮರ್ಯನು ಮೆರಾಯೋತನ ಮಗ. ಅಹೀಟೂಬನು ಅಮರ್ಯನ ಮಗ. 53 ಚಾದೋಕ್ ಅಹೀಟೂಬನ ಮಗ, ಅಹಿಮಾಚನು ಚಾದೋಕನ ಮಗ.
ಲೇವಿಯ ಕುಟುಂಬದವರಿಗೆ ಮನೆಗಳು
54 ಈ ಸ್ಥಳಗಳಲ್ಲಿ ಆರೋನನ ಸಂತತಿಯವರು ವಾಸಿಸಿದರು. ಅವರು ತಮಗೆ ಕೊಟ್ಟಿದ್ದ ಪ್ರದೇಶದಲ್ಲಿ ಪಾಳೆಯಗಳಲ್ಲಿ ವಾಸಮಾಡಿದರು. ಲೇವಿಯರಿಗೆ ಕೊಟ್ಟಿರುವ ಪ್ರಾಂತ್ಯದ ಮೊದಲನೆಯ ಪಾಲು ಕೆಹಾತ್ಯರಿಗೆ ಕೊಡಲ್ಪಟ್ಟಿತು. 55 ಅವರಿಗೆ ಹೆಬ್ರೋನ್ ಪಟ್ಟಣವೂ ಅದರ ಸುತ್ತಮುತ್ತಲೂ ಇದ್ದ ಹುಲ್ಲುಗಾವಲುಗಳು ಕೊಡಲ್ಪಟ್ಟವು. ಇದು ಯೆಹೂದ ಪ್ರಾಂತ್ಯದ ಸ್ಥಳವಾಗಿದೆ. 56 ಹೆಬ್ರೋನ್ ಪಟ್ಟಣದ ಸುತ್ತಮುತ್ತಲಿದ್ದ ಊರುಗಳನ್ನು ಮತ್ತು ಹೊಲಗಳನ್ನು ಯೆಫುನ್ನೆಯ ಮಗನಾದ ಕಾಲೇಬನಿಗೆ ಕೊಡಲಾಯಿತು. 57 ಆರೋನನ ಸಂತತಿಯವರಿಗೆ ಹೆಬ್ರೋನ್ ಪಟ್ಟಣವನ್ನೇ ಕೊಟ್ಟರು. ಹೆಬ್ರೋನು ಆಶ್ರಯಪಟ್ಟಣಗಳಲ್ಲಿ ಒಂದಾಗಿತ್ತು. ಅವರಿಗೆ ಬೇರೆ ನಗರಗಳೂ ಕೊಡಲ್ಪಟ್ಟವು: ಲಿಬ್ನ, ಯತ್ತೀರ್, ಎಷ್ಟೆಮೋವ, ಹೀಲ್ಲೇನ್, ದೆಬೀರ್, 58-59 ಆಷಾನ್, ಜುತ್ತ ಮತ್ತು ಬೇತ್ಷೆಮೆಷ್. ಅವರಿಗೆ ಈ ಎಲ್ಲಾ ಪಟ್ಟಣಗಳೂ ಅವುಗಳ ಸುತ್ತಮುತ್ತಲಿದ್ದ ಹೊಲಗಳೂ ಕೊಡಲ್ಪಟ್ಟವು. 60 ಬೆನ್ಯಾಮೀನ್ ಕುಲದ ಪ್ರಾಂತ್ಯದಿಂದ ಗಿಬೆಯೋನ್, ಗೆಬಾ, ಅಲೆಮೆತ್ ಮತ್ತು ಅನಾತೋತ್ ಪಟ್ಟಣಗಳೂ ಅದರ ಸುತ್ತಮುತ್ತಲಿದ್ದ ಹೊಲಗಳೂ ಅವರಿಗೆ ದೊರೆತವು.
ಒಟ್ಟು ಹದಿಮೂರು ಪಟ್ಟಣಗಳನ್ನು ಕೆಹಾತ್ಯನ ಕುಲದವರಿಗೆ ಕೊಡಲ್ಪಟ್ಟಿತು.
61 ಉಳಿದ ಕೆಹಾತ್ಯನ ಸಂತತಿಯವರಿಗೆ ಮನಸ್ಸೆಯ ಅರ್ಧಕುಲದಿಂದ ಹತ್ತು ಪಟ್ಟಣಗಳು ದೊರಕಿದವು.
62 ಗೇರ್ಷೋಮ್ಯನ ಸಂತತಿಯವರಿಗೆ ಹದಿಮೂರು ಪಟ್ಟಣಗಳು ದೊರಕಿದವು. ಇವು ಇಸ್ಸಾಕಾರ್, ಆಶೇರ್, ನಫ್ತಾಲಿ ಮತ್ತು ಬಾಷಾನ್ ಪ್ರದೇಶದಲ್ಲಿ ವಾಸವಾಗಿದ್ದ ಅರ್ಧ ಮನಸ್ಸೆ ಕುಲದವರಿಂದ ಆ ಪಟ್ಟಣಗಳು ದೊರೆತವು.
63 ಮೆರಾರೀ ಸಂತತಿಯವರಿಗೆ ಹನ್ನೆರಡು ಪಟ್ಟಣಗಳು ದೊರೆತವು. ಇವು ರೂಬೇನ್, ಗಾದ್, ಜೆಬುಲೂನ್ ಕುಲದವರ ಸ್ವಾಸ್ತ್ಯದಿಂದ ದೊರೆತವು. ಅವರು ಇದಕ್ಕಾಗಿ ಚೀಟುಹಾಕಿದರು.
64 ಹೀಗೆ ಇಸ್ರೇಲರು ತಮಗೆ ದೊರಕಿದ ಪ್ರದೇಶದಲ್ಲಿ ಲೇವಿಯರಿಗೆ ಪಟ್ಟಣಗಳನ್ನೂ ಹೊಲಗಳನ್ನೂ ಕೊಟ್ಟರು. 65 ಅವೆಲ್ಲಾ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲದವರಿಂದ ದೊರಕಿತು. ಯೆಹೂದ ಪಟ್ಟಣಗಳು ಲೇವಿಕುಲದ ಯಾವ ಕುಟುಂಬಗಳಿಗೆ ಸಿಗಬೇಕು ಎಂಬುದನ್ನು ಚೀಟುಹಾಕುವುದರ ಮೂಲಕ ಗೊತ್ತುಪಡಿಸಿಕೊಂಡರು.
66 ಎಫ್ರಾಯೀಮ್ ಕುಲದವರು ಕೆಹಾತ್ಯನ ಕುಲದವರಿಗೆ ತಮ್ಮ ಪಾಲಿಗೆ ಬಂದಿದ್ದ ಕೆಲವು ಪಟ್ಟಣಗಳನ್ನು ಬಿಟ್ಟುಕೊಟ್ಟರು. ಈ ಪಟ್ಟಣಗಳನ್ನು ಚೀಟುಹಾಕುವುದರ ಮೂಲಕ ನಿರ್ಧರಿಸಲಾಯಿತು. 67 ಅವರಿಗೆ ಶೆಕೆಮನ್ನು ಕೊಡಲಾಯಿತು. ಶೆಕೆಮ್ ಆಶ್ರಯನಗರವಾಗಿತ್ತು. ಇದಲ್ಲದೆ ಗೆಜೆರ್, 68 ಯೊಕ್ಮೆಯಾಮ್, ಬೇತ್ ಹೋರೋನ್, 69 ಅಯ್ಯಾಲೋನ್ ಮತ್ತು ಗತ್ರಿಮ್ಮೋನ್ ಪಟ್ಟಣಗಳೂ ಅವುಗಳ ಸುತ್ತಮುತ್ತಲಿದ್ದ ಹೊಲಗಳೂ ಅವರಿಗೆ ದೊರಕಿದವು. ಇವು ಎಫ್ರಾಯೀಮ್ಯರ ಬೆಟ್ಟಪ್ರದೇಶದಲ್ಲಿ ಇವೆ. 70 ಮನಸ್ಸೆಯ ಅರ್ಧಕುಲದವರು ಆನೇರ್ ಮತ್ತು ಬಿಳ್ಳಾಮ್ ಎಂಬ ನಗರಗಳನ್ನು ಕೆಹಾತ್ ಸಂತಾನದ ಉಳಿದವರಿಗೂ ಕೊಟ್ಟರು. ಅವುಗಳೊಡನೆ ಹೊಲಗಳೂ ಅವರಿಗೆ ದೊರಕಿದವು.
ಇನ್ನಿತರ ಲೇವಿಯರಿಗೆ ಮನೆಗಳು ದೊರಕಿದ್ದು
71 ಗೇರ್ಷೋಮ್ ಕುಟುಂಬದವರಿಗೆ ಮನಸ್ಸೆಯ ಅರ್ಧಕುಲದವರಿಂದ ಬಾಷಾನಿನಲ್ಲಿರುವ ಗೋಲಾನ್ ಮತ್ತು ಅಷ್ಟಾರೋಟ್ ಎಂಬ ಪಟ್ಟಣಗಳೂ ಅದಕ್ಕೆ ಸೇರಿದ ಹೊಲಗಳೂ ದೊರೆತವು.
72-73 ಗೇರ್ಷೋಮ್ ಕುಟುಂಬದವರಿಗೆ ಇಸ್ಸಾಕಾರ್ ಕುಲದವರಿಂದ ಕೆದೆಷ್, ಬೆರತ್, ರಾಮೋತ್ ಮತ್ತು ಆನೇಮ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
74-75 ಇದಲ್ಲದೆ ಗೇರ್ಷೋಮ್ ಕುಟುಂಬದವರಿಗೆ ಅಶೇರ್ ಕುಲದವರಿಂದ ಮಾಷಾಲ್, ಅಬ್ದೋನ್, ಹೂಕೋಕ್ ಮತ್ತು ರೆಹೋಬ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
76 ಗೇರ್ಷೋಮ್ ಕುಟುಂಬದವರಿಗೆ ಗಲಿಲಾಯ ಪ್ರಾಂತ್ಯದ ಕಾದೇಶಿನಲ್ಲಿದ್ದ ಪಟ್ಟಣಗಳೂ ಹಮ್ಮೋನ್ ಮತ್ತು ಕಿರ್ಯಾತಯಿಮ್ ಎಂಬ ಪಟ್ಟಣಗಳೂ ಮತ್ತು ಅವುಗಳ ಸಮೀಪದಲ್ಲಿದ್ದ ಹೊಲಗಳೂ ನಫ್ತಾಲಿ ಕುಲದವರಿಂದ ದೊರಕಿದವು.
77 ಉಳಿದ ಲೇವಿಯರೆಂದರೆ, ಮೆರಾರೀಕುಲಕ್ಕೆ ಸೇರಿದವರು. ಅವರಿಗೆ ಜೆಬುಲೂನ್ ಕುಲದವರಿಂದ ರಿಮ್ಮೋನೋ ಮತ್ತು ತಾಬೋರ್ ಪಟ್ಟಣಗಳೂ ಅವುಗಳ ಸಮೀಪದಲ್ಲಿದ್ದ ಹೊಲಗಳೂ ದೊರೆತವು.
78-79 ಮೆರಾರೀ ಸಂತತಿಯವರು ಮರುಭೂಮಿಯಲ್ಲಿದ್ದ ಬೆಚೆರ್, ಯಹಚ, ಕೆದೇಮೋತ್ ಮತ್ತು ಮೇಫಾತ್ ಎಂಬ ಊರುಗಳನ್ನೂ ಅವುಗಳ ಸಮೀಪದಲ್ಲಿದ್ದ ಹೊಲಗಳನ್ನೂ ರೂಬೇನ್ ಕುಲದವರಿಂದ ಪಡೆದುಕೊಂಡರು. ರೂಬೇನ್ ಕುಲದವರು ಜೆರಿಕೊ ಪಟ್ಟಣಕ್ಕೆ ಎದುರಾಗಿದ್ದ ಜೋರ್ಡನ್ ನದಿಯ ಪೂರ್ವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು.
80-81 ಮೆರಾರೀ ಸಂತಾನದವರಿಗೆ ಗಾದ್ ಸಂತತಿಯವರ ಪ್ರದೇಶದಿಂದ ಗಿಲ್ಯಾದಿನ ರಾಮೋತ್, ಮಹನಯಿಮ್, ಹೆಷ್ಬೋನ್ ಮತ್ತು ಯಗ್ಜೇರ್ ಪಟ್ಟಣಗಳೂ ಅದರ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.
ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮತ್ತಾಯ 14:13-21; ಮಾರ್ಕ 6:30-44; ಲೂಕ 9:10-17)
6 ತರುವಾಯ, ಯೇಸು ಗಲಿಲಾಯ ಸರೋವರವನ್ನು (ತಿಬೇರಿಯ ಸರೋವರ) ದಾಟಿ ಆಚೆಯ ದಡಕ್ಕೆ ಹೋದನು. 2 ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಏಕೆಂದರೆ ಯೇಸು ರೋಗಿಗಳನ್ನು ಗುಣಪಡಿಸುವುದರ ಮೂಲಕ ತನ್ನ ಅಧಿಕಾರವನ್ನು ತೋರಿಸಿದ್ದನು. ಅವರೆಲ್ಲರೂ ಅದನ್ನು ನೋಡಿದ್ದರು. 3 ಆಗ ಯೇಸು ಬೆಟ್ಟವನ್ನು ಹತ್ತಿ ತನ್ನ ಶಿಷ್ಯರ ಸಂಗಡ ಕುಳಿತುಕೊಂಡನು. 4 ಯೆಹೂದ್ಯರ ಪಸ್ಕಹಬ್ಬವೂ ಬಹು ಸಮೀಪವಾಗಿತ್ತು.
5 ಯೇಸು ಕಣ್ಣೆತ್ತಿ ನೋಡಿದಾಗ, ತನ್ನ ಬಳಿಗೆ ಬರುತ್ತಿದ್ದ ಜನಸಮೂಹವನ್ನು ಕಂಡು ಫಿಲಿಪ್ಪನಿಗೆ, “ಈ ಜನರಿಗೆಲ್ಲಾ ಸಾಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿ ಕೊಂಡುಕೊಳ್ಳೋಣ?” ಎಂದು ಕೇಳಿದನು. 6 (ಫಿಲಿಪ್ಪನನ್ನು ಪರೀಕ್ಷಿಸುವುದಕ್ಕಾಗಿ ಆತನು ಈ ಪ್ರಶ್ನೆಯನ್ನು ಕೇಳಿದನು. ತಾನು ಮಾಡಲಿದ್ದ ಕಾರ್ಯ ಯೇಸುವಿಗೆ ಮೊದಲೇ ತಿಳಿದಿತ್ತು.)
7 ಫಿಲಿಪ್ಪನು, “ಇಲ್ಲಿರುವ ಪ್ರತಿಯೊಬ್ಬರಿಗೆ ರೊಟ್ಟಿಯ ಒಂದು ತುಂಡನ್ನು ಕೊಡಬೇಕಾದರೆ, ಇನ್ನೂರು ದಿನಾರಿ ನಾಣ್ಯಗಳಾದರೂ[a] ಬೇಕು” ಎಂದು ಉತ್ತರಕೊಟ್ಟನು.
8 ಅಂದ್ರೆಯನೆಂಬ ಮತ್ತೊಬ್ಬ ಶಿಷ್ಯನು ಅಲ್ಲಿದ್ದನು. ಅಂದ್ರೆಯನು ಸೀಮೋನ್ ಪೇತ್ರನ ಸಹೋದರ. 9 ಅಂದ್ರೆಯನು, “ಇಲ್ಲಿರುವ ಒಬ್ಬ ಹುಡುಗನ ಬಳಿ ಜವೆಗೋಧಿಯ ಐದು ರೊಟ್ಟಿಗಳಿವೆ ಮತ್ತು ಎರಡು ಚಿಕ್ಕ ಮೀನುಗಳಿವೆ. ಆದರೆ ಅವು ಈ ಜನಸಮೂಹಕ್ಕೆ ಸಾಕಾಗುವುದಿಲ್ಲ” ಎಂದು ಹೇಳಿದನು.
10 ಯೇಸು, “ಜನರಿಗೆ ಕುಳಿತುಕೊಳ್ಳಲು ಹೇಳಿರಿ” ಎಂದು ತಿಳಿಸಿದನು. ಆ ಸ್ಥಳದಲ್ಲಿ ಹುಲ್ಲು ಹುಲುಸಾಗಿ ಬೆಳೆದಿತ್ತು. ಅಲ್ಲಿ ಕುಳಿತುಕೊಂಡವರಲ್ಲಿ ಸುಮಾರು ಐದುಸಾವಿರ ಮಂದಿ ಗಂಡಸರಿದ್ದರು. 11 ಬಳಿಕ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ಕುಳಿತುಕೊಂಡಿದ್ದ ಜನರಿಗೆ ಕೊಟ್ಟನು. ಆತನು ಮೀನುಗಳನ್ನು ಕೊಡುವಾಗಲೂ ಅದೇ ರೀತಿ ಮಾಡಿದನು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು.
12 ಅವರೆಲ್ಲರೂ ಊಟ ಮಾಡಿ ತೃಪ್ತರಾದ ಮೇಲೆ ಯೇಸು ತನ್ನ ಶಿಷ್ಯರಿಗೆ, “ಉಳಿದುಹೋದ ರೊಟ್ಟಿ ಮತ್ತು ಮೀನುಗಳ ತುಂಡುಗಳನ್ನು ಒಟ್ಟುಗೂಡಿಸಿರಿ. ಯಾವುದನ್ನೂ ಹಾಳುಮಾಡಬೇಡಿ” ಎಂದು ಹೇಳಿದನು. 13 ಆದ್ದರಿಂದ ಶಿಷ್ಯರು ಉಳಿದುಹೋಗಿದ್ದ ತುಂಡುಗಳನ್ನು ಒಟ್ಟುಗೂಡಿಸಿದರು. ಜನರು ತಿನ್ನಲು ಆರಂಭಿಸಿದಾಗ ಕೇವಲ ಐದು ಜವೆಗೋದಿಯ ರೊಟ್ಟಿಗಳಿದ್ದವು. ಆದರೆ ಶಿಷ್ಯರು ಉಳಿದುಹೋದ ಆಹಾರದ ತುಂಡುಗಳನ್ನು ಒಟ್ಟುಗೂಡಿಸಿದಾಗ ಹನ್ನೆರಡು ದೊಡ್ಡ ಬುಟ್ಟಿಗಳು ತುಂಬಿಹೋದವು.
14 ಯೇಸು ಮಾಡಿದ ಈ ಸೂಚಕಕಾರ್ಯವನ್ನು ಕಂಡ ಜನರು, “ಈ ಲೋಕಕ್ಕೆ ಬರಲಿರುವ ಪ್ರವಾದಿ ನಿಜವಾಗಿಯೂ ಈತನೇ ಇರಬೇಕು” ಎಂದು ಹೇಳತೊಡಗಿದರು.
15 ತನ್ನನ್ನು ಬಲವಂತದಿಂದ ರಾಜನನ್ನಾಗಿ ಮಾಡಲು ಜನರು ಯೋಚಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅಲ್ಲಿಂದ ತಾನೊಬ್ಬನೇ ಬೆಟ್ಟಕ್ಕೆ ಮತ್ತೆ ಹೋದನು.
ನೀರಿನ ಮೇಲೆ ಕಾಲ್ನಡಿಗೆ
(ಮತ್ತಾಯ 14:22-27; ಮಾರ್ಕ 6:45-52)
16 ಆ ಸಾಯಂಕಾಲ ಯೇಸುವಿನ ಶಿಷ್ಯರು ಸರೋವರಕ್ಕೆ (ಗಲಿಲಾಯ) ಹೋದರು. 17 ಆಗಲೇ ಕತ್ತಲಾಗಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಆದ್ದರಿಂದ ಶಿಷ್ಯರು ದೋಣಿಯನ್ನು ಹತ್ತಿ ಸರೋವರದ ಆಚೆಯ ಕಡೆಯಿದ್ದ ಕಪೆರ್ನೌಮಿಗೆ ಹೊರಟರು. 18 ಗಾಳಿಯು ಬಹು ರಭಸವಾಗಿ ಬೀಸುತ್ತಿತ್ತು. ಸರೋವರದ ಅಲೆಗಳು ದೊಡ್ಡದಾಗುತ್ತಿದ್ದವು. 19 ಅವರು ಹುಟ್ಟುಹಾಕುತ್ತಾ ಸುಮಾರು ಮೂರು ಅಥವಾ ನಾಲ್ಕು ಮೈಲಿಗಳವರೆಗೆ ದೋಣಿಯನ್ನು ನಡೆಸಿದ ನಂತರ ಯೇಸುವನ್ನು ಕಂಡರು. ಆತನು ನೀರಿನ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುತ್ತಿರುವುದನ್ನು ಕಂಡು ಅವರಿಗೆ ಭಯವಾಯಿತು. 20 ಯೇಸು ಅವರಿಗೆ, “ಹೆದರಬೇಡಿರಿ, ನಾನೇ” ಎಂದು ಹೇಳಿದನು. 21 ಆಗ ಅವರು ಯೇಸುವನ್ನು ದೋಣಿಯೊಳಗೆ ಬರಮಾಡಿಕೊಳ್ಳಬೇಕೆಂದಿದ್ದರು. ಅಷ್ಟರಲ್ಲೇ, ಅವರು ಹೋಗಬೇಕೆಂದಿದ್ದ ಸ್ಥಳದ ದಡಕ್ಕೆ ದೋಣಿಯು ತಲುಪಿತು.
Kannada Holy Bible: Easy-to-Read Version. All rights reserved. © 1997 Bible League International