M’Cheyne Bible Reading Plan
ತಿಳಿಯದೆ ಮಾಡಿದ ಪಾಪಗಳ ಪರಿಹಾರಕ್ಕಾಗಿ ಸಮರ್ಪಣೆಗಳು
4 ಯೆಹೋವನು ಮೋಶೆಯೊಡನೆ ಮಾತನಾಡಿ ಹೇಳಿದ್ದೇನೆಂದರೆ: 2 “ಇಸ್ರೇಲರಿಗೆ ಹೀಗೆ ಹೇಳು: ಯಾವನಾದರೂ ತಿಳಿಯದೆ ಪಾಪಮಾಡಿದರೆ ಮತ್ತು ಮಾಡಬಾರದೆಂದು ಹೇಳಿದವುಗಳನ್ನು ಮಾಡಿದರೆ, ಅವನು ಮಾಡಬೇಕಾದದ್ದೇನೆಂದರೆ:
3 “ಅಭಿಷಿಕ್ತನಾದ ಯಾಜಕನು ತಪ್ಪುಮಾಡಿ ಜನರೆಲ್ಲರನ್ನು ಅಪರಾಧಕ್ಕೆ ಒಳಪಡಿಸಿದರೆ ತನ್ನ ದೋಷಪರಿಹಾರಕ್ಕಾಗಿ ಅವನು ಪೂರ್ಣಾಂಗವಾದ ಹೋರಿಯನ್ನು ಯೆಹೋವನಿಗೆ ಅರ್ಪಿಸಬೇಕು. 4 ಅಭಿಷಿಕ್ತನಾದ ಯಾಜಕನು ಹೋರಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತಂದು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಯೆಹೋವನ ಸನ್ನಿಧಿಯಲ್ಲಿ ಅದನ್ನು ವಧಿಸಬೇಕು. 5 ಬಳಿಕ ಅವನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗೆ ಹೋಗಬೇಕು. 6 ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಮಹಾಪವಿತ್ರಸ್ಥಳದ ಪರದೆಯ ಮುಂಭಾಗದಲ್ಲಿರುವ ಯೆಹೋವನ ಸನ್ನಿಧಿಯಲ್ಲಿ ಏಳು ಸಾರಿ ಚಿಮಿಕಿಸಬೇಕು. 7 ಯಾಜಕನು ಸ್ವಲ್ಪ ರಕ್ತವನ್ನು ಧೂಪವೇದಿಕೆಯ ಮೂಲೆಗಳಿಗೆ ಹಚ್ಚಬೇಕು. (ಈ ವೇದಿಕೆಯು ಯೆಹೋವನ ಸನ್ನಿಧಿಯಲ್ಲಿರುವ ದೇವದರ್ಶನಗುಡಾರದಲ್ಲಿದೆ.) ಯಾಜಕನು ಹೋರಿಯ ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿಯಬೇಕು. (ಈ ವೇದಿಕೆಯು ದೇವದರ್ಶನಗುಡಾರದ ಬಾಗಿಲಲ್ಲಿ ಇರುತ್ತದೆ.) 8 ಅವನು ದೋಷಪರಿಹಾರಕ ಯಜ್ಞಕ್ಕಾಗಿ ತಂದಿರುವ ಹೋರಿಯ ಕೊಬ್ಬನ್ನೆಲ್ಲಾ ತೆಗೆಯಬೇಕು. ಅವನು ಅದರ ಒಳಗಿನ ಭಾಗಗಳ ಮೇಲೆ ಮತ್ತು ಅವುಗಳ ಸುತ್ತಲೂ ಇರುವ ಕೊಬ್ಬನ್ನೂ 9 ಅದರ ಎರಡು ಮೂತ್ರಪಿಂಡಗಳನ್ನೂ ಅವುಗಳ ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತೆಗೆಯಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನೂ ತೆಗೆಯಬೇಕು. 10 ಯಾಜಕನು ಈ ಭಾಗಗಳನ್ನು ಸಮಾಧಾನಯಜ್ಞ ಸಮರ್ಪಣೆಯಲ್ಲಿ ಹೋರಿಯ ಭಾಗಗಳನ್ನು ಅರ್ಪಿಸುವ ರೀತಿಯಲ್ಲಿಯೇ ಅರ್ಪಿಸಬೇಕು. ಯಾಜಕನು ಪಶುವಿನ ಭಾಗಗಳನ್ನು ಸರ್ವಾಂಗಹೋಮಮಾಡುವ ವೇದಿಕೆಯ ಮೇಲೆ ಹೋಮ ಮಾಡಬೇಕು.[a] 11-12 ಆದರೆ ಯಾಜಕನು ಹೋರಿಯ ಚರ್ಮವನ್ನು, ಒಳಗಿನ ಭಾಗಗಳನ್ನು, ದೇಹದ ಕಲ್ಮಶವನ್ನು, ಎಲ್ಲಾ ಮಾಂಸವನ್ನು ಮತ್ತು ತಲೆಕಾಲುಗಳನ್ನು ಹೊರಗೆ ತೆಗೆದುಕೊಂಡು ಪಾಳೆಯದ ಹೊರಗೆ ಬೂದಿಯನ್ನು ಸುರಿಯುವ ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಕಟ್ಟಿಗೆಯ ಮೇಲಿಟ್ಟು ಬೆಂಕಿಯಲ್ಲಿ ಸುಟ್ಟುಹಾಕಬೇಕು. ಬೂದಿಯನ್ನು ಸುರಿಯುವ ಸ್ಥಳದಲ್ಲಿಯೇ ಅದನ್ನು ಸುಡಬೇಕು.
13 “ಇಸ್ರೇಲರ ಇಡೀ ಜನಾಂಗವೆಲ್ಲಾ ತಿಳಿಯದೆ ಪಾಪಮಾಡುವ ಸ್ಥಿತಿ ಸಂಭವಿಸಬಹುದು. ಯೆಹೋವನು ಮಾಡಬಾರದೆಂದು ಆಜ್ಞಾಪಿಸಿದವುಗಳಲ್ಲಿ ಯಾವುದಾದರೊಂದನ್ನು ಅವರು ಮಾಡಿದರೆ ಅವರು ದೋಷಿಗಳಾಗುವರು. 14 ಆ ಪಾಪದ ಕುರಿತು ಅವರಿಗೆ ತಿಳಿದುಬಂದರೆ ಆಗ ಅವರು ಒಂದು ಹೋರಿಯನ್ನು ಇಡೀ ಜನಾಂಗದ ಪಾಪಪರಿಹಾರ ಮಾಡುವ ಸಮರ್ಪಣೆಯಾಗಿ ಅರ್ಪಿಸಬೇಕು. ಅವರು ಹೋರಿಯನ್ನು ದೇವದರ್ಶನಗುಡಾರಕ್ಕೆ ತರಬೇಕು. 15 ಜನರ ಹಿರಿಯರು ಯೆಹೋವನ ಸನ್ನಿಧಿಯಲ್ಲಿ ತಮ್ಮ ಕೈಗಳನ್ನು ಹೋರಿಯ ತಲೆಯ ಮೇಲಿಡಬೇಕು. ತರುವಾಯ ಒಬ್ಬನು ಯೆಹೋವನ ಸನ್ನಿಧಿಯಲ್ಲಿ ಹೋರಿಯನ್ನು ವಧಿಸಬೇಕು. 16 ಬಳಿಕ ಅಭಿಷಿಕ್ತನಾದ ಯಾಜಕನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗೆ ಹೋಗಬೇಕು. 17 ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯೆಹೋವನ ಸನ್ನಿಧಿಯಲ್ಲಿ ತೆರೆಯ ಮುಂದೆ ಏಳು ಸಾರಿ ಚಿಮಿಕಿಸಬೇಕು. 18 ಬಳಿಕ ಯಾಜಕನು ರಕ್ತದಲ್ಲಿ ಸ್ವಲ್ಪವನ್ನು ವೇದಿಕೆಯ ಮೂಲೆಗಳಲ್ಲಿ ಹಾಕಬೇಕು. (ಈ ವೇದಿಕೆಯು ದೇವದರ್ಶನಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ಇರುತ್ತದೆ.) ಯಾಜಕನು ರಕ್ತವನ್ನೆಲ್ಲಾ ಸರ್ವಾಂಗಹೋಮ ಮಾಡುವ ವೇದಿಕೆಯ ಬುಡದಲ್ಲಿ ಸುರಿದುಬಿಡಬೇಕು. (ಈ ವೇದಿಕೆಯು ದೇವದರ್ಶನ ಗುಡಾರದ ಬಾಗಿಲಲ್ಲಿ ಇರುತ್ತದೆ.) 19 ತರುವಾಯ ಯಾಜಕನು ಪಶುವಿನಿಂದ ಕೊಬ್ಬನ್ನೆಲ್ಲಾ ತೆಗೆದು ಅದನ್ನು ವೇದಿಕೆಯ ಮೇಲೆ ಹೋಮಮಾಡಬೇಕು. 20 ಯಾಜಕನು ಪಾಪಪರಿಹಾರಕ ಯಜ್ಞದ ಹೋರಿಯ ಭಾಗಗಳನ್ನು ಸಮರ್ಪಿಸಿದಂತೆಯೇ ಈ ಭಾಗಗಳನ್ನು ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಜನರಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ದೇವರು ಅವರನ್ನು ಕ್ಷಮಿಸುವನು. 21 ಯಾಜಕನು ಈ ಹೋರಿಯನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ, ಆ ಮೊದಲನೆಯ ಹೋರಿಯನ್ನು ಸುಟ್ಟುಹಾಕಿದ ಸ್ಥಳದಲ್ಲಿಯೇ ಅದನ್ನು ಸುಡಬೇಕು. ಇದು ಇಡೀ ಸಮೂಹದ ಪಾಪವನ್ನು ಪರಿಹಾರ ಮಾಡುವ ಸಮರ್ಪಣೆಯಾಗಿದೆ.
22 “ಒಬ್ಬ ಅಧಿಪತಿಯು ತನ್ನ ದೇವರಾಗಿರುವ ಯೆಹೋವನು ನಿಷೇಧಿಸಿದವುಗಳಲ್ಲಿ ಯಾವುದಾದರೊಂದನ್ನು ತಿಳಿಯದೆ ಮಾಡಿದರೆ ಅವನು ದೋಷಿಯಾಗುತ್ತಾನೆ. 23 ಅಧಿಪತಿಯು ತನ್ನ ಪಾಪದ ಕುರಿತು ತಿಳಿದುಕೊಂಡರೆ, ಅಂಗದೋಷವಿಲ್ಲದ ಹೋತವನ್ನು ತರಬೇಕು. ಅದು ಅವನ ಕಾಣಿಕೆಯಾಗಿರುವುದು. 24 ಅಧಿಪತಿಯು ತನ್ನ ಕೈಯನ್ನು ಹೋತದ ತಲೆಯ ಮೇಲಿಟ್ಟು ಯೆಹೋವನ ಸನ್ನಿಧಿಯಲ್ಲಿ ಸರ್ವಾಂಗಹೋಮ ಪಶುಗಳನ್ನು ವಧಿಸುವ ಸ್ಥಳದಲ್ಲಿ ಅದನ್ನು ವಧಿಸಬೇಕು. ಅದು ಪಾಪಪರಿಹಾರಕ ಯಜ್ಞವಾಗಿದೆ. 25 ಯಾಜಕನು ಪಾಪಪರಿಹಾರಕ ಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮಮಾಡುವ ವೇದಿಕೆಯ ಮೂಲೆಗಳಿಗೆ[b] ಹಚ್ಚಬೇಕು. ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿದು, 26 ಹೋತದ ಕೊಬ್ಬನ್ನೆಲ್ಲಾ ವೇದಿಕೆಯ ಮೇಲೆ ಹೋಮಮಾಡಬೇಕು. ಅದು ಸಮಾಧಾನಯಜ್ಞವಾಗಿದೆ. ಕೊಬ್ಬನ್ನು ಹೋಮಮಾಡುವಂತೆ ಅದನ್ನು ಹೋಮಮಾಡಬೇಕು. ಹೀಗೆ ಯಾಜಕನು ಅಧಿಪತಿಯನ್ನು ಶುದ್ಧಗೊಳಿಸುವನು. ಆಗ ದೇವರು ಆ ಅಧಿಪತಿಯನ್ನು ಕ್ಷಮಿಸುವನು.
27 “ಸಾಮಾನ್ಯ ಜನರಲ್ಲಿ ಒಬ್ಬನು ಯೆಹೋವನು ನಿಷೇಧಿಸಿದವುಗಳಲ್ಲಿ ಯಾವುದಾದರೊಂದನ್ನು ತಿಳಿಯದೆ ಮಾಡಿದರೆ ಅವನು ದೋಷಿಯಾಗಿದ್ದಾನೆ. 28 ಆ ವ್ಯಕ್ತಿ ತನ್ನ ಪಾಪದ ಕುರಿತು ತಿಳಿದುಕೊಂಡರೆ, ಆಗ ಅವನು ಅಂಗದೋಷವಿಲ್ಲದ ಒಂದು ಆಡನ್ನು ತರಬೇಕು. ಅದು ಅವನ ಪಾಪಪರಿಹಾರಕ ಯಜ್ಞವಾಗಿದೆ. ಅವನು ತಾನು ಮಾಡಿದ ಪಾಪಕ್ಕಾಗಿ ಆಡನ್ನು ತರಬೇಕು. 29 ಅವನು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಸರ್ವಾಂಗಹೋಮಮಾಡುವ ಸ್ಥಳದಲ್ಲಿ ಅದನ್ನು ವಧಿಸಬೇಕು. 30 ಬಳಿಕ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಆಡಿನ ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು. 31 ಯಾಜಕನು ಸಮಾಧಾನಯಜ್ಞಗಳಲ್ಲಿ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಆಡಿನ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಯೆಹೋವನಿಗೆ ಸುಗಂಧವಾಸನೆಯ ಹೋಮವಾಗಿ ವೇದಿಕೆಯ ಮೇಲೆ ಅರ್ಪಿಸಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.
32 “ಆ ವ್ಯಕ್ತಿಯು ಕುರಿಮರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ತರುವುದಾದರೆ ಅದು ದೋಷವಿಲ್ಲದ ಹೆಣ್ಣು ಕುರಿಮರಿಯಾಗಿರಬೇಕು. 33 ಅವನು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಅದನ್ನು ಸರ್ವಾಂಗಹೋಮದ ಯಜ್ಞಪಶುಗಳನ್ನು ವಧಿಸುವ ಸ್ಥಳದಲ್ಲಿ ಪಾಪಪರಿಹಾರಕಯಜ್ಞವಾಗಿ ವಧಿಸಬೇಕು. 34 ಯಾಜಕನು ಪಾಪಪರಿಹಾರಕಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಕುರಿಮರಿಯ ರಕ್ತವನ್ನೆಲ್ಲಾ ವೇದಿಕೆಯ ಬುಡದಲ್ಲಿ ಸುರಿಯಬೇಕು. 35 ಯಾಜಕನು ಸಮಾಧಾನಯಜ್ಞಗಳಲ್ಲಿ ಕುರಿಮರಿಯ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಈ ಕುರಿಮರಿಯ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸುವ ಸಮರ್ಪಣೆಯಂತೆ ವೇದಿಕೆಯ ಮೇಲೆ ಹೋಮಮಾಡಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
2 ಅನ್ಯಜನಾಂಗಗಳು ಕೋಪಗೊಂಡಿರುವುದೇಕೆ?
ಅವರು ಮೂರ್ಖತನದ ಸಂಚುಗಳನ್ನು ಮಾಡುತ್ತಿರುವುದೇಕೆ?
2 ಅವುಗಳ ರಾಜರುಗಳೂ ನಾಯಕರುಗಳೂ
ಯೆಹೋವನಿಗೂ ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರೋಧವಾಗಿ ಕೂಡಿಬಂದಿದ್ದಾರೆ.
3 “ದೇವರಿಗೂ ಆತನು ಅಭಿಷೇಕಿಸಿದ ರಾಜನಿಗೂ ವಿರೋಧವಾಗಿ ದಂಗೆ ಎದ್ದು
ಸ್ವತಂತ್ರರಾಗೋಣ” ಎಂದು ಅವರು ಮಾತಾಡಿಕೊಳ್ಳುತ್ತಿದ್ದಾರೆ.
4 ಆದರೆ ಒಡೆಯನೂ ಪರಲೋಕದ ರಾಜನೂ ಅವರನ್ನು ನೋಡಿ ನಗುವನು;
ಆತನು ಅವರನ್ನು ಪರಿಹಾಸ್ಯಮಾಡುವನು.
5-6 “ಇವನನ್ನು ರಾಜನನ್ನಾಗಿ ಅಭಿಷೇಕಿಸಿದವನು ನಾನೇ.
ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ಆಳುವವನು ಇವನೇ”
ಎಂದು ಅವರಿಗೆ ಕೋಪದಿಂದ ಉತ್ತರಿಸುವನು.
ಆಗ ಅವರೆಲ್ಲರೂ ಭಯಗೊಳ್ಳುವರು.
7 ಯೆಹೋವನ ಒಡಂಬಡಿಕೆಯ ಕುರಿತು ಹೇಳುತ್ತಿರುವೆ.
ಆತನು ನನಗೆ, “ಈ ಹೊತ್ತು ನಾನು ನಿನಗೆ ತಂದೆಯಾದೆ! ನೀನೇ ನನ್ನ ಮಗನು.
8 ನೀನು ಕೇಳಿಕೊಂಡರೆ ಅನ್ಯಜನಾಂಗಗಳನ್ನು ನಿನಗೆ ಅಧೀನಪಡಿಸುವೆನು.
ಭೂಮಿಯ ಮೇಲಿರುವ ಜನರೆಲ್ಲರೂ ನಿನ್ನವರಾಗುವರು!
9 ಕಬ್ಬಿಣದ ಗದೆಯು ಮಣ್ಣಿನ ಮಡಿಕೆಯನ್ನು ನುಚ್ಚುನೂರುಮಾಡುವಂತೆ
ನೀನು ಅನ್ಯಜನಾಂಗಗಳನ್ನು ನಾಶಪಡಿಸುವೆ” ಎಂದು ಹೇಳಿದನು.
10 ಆದ್ದರಿಂದ ರಾಜರುಗಳೇ, ವಿವೇಕಿಗಳಾಗಿರಿ.
ಅಧಿಪತಿಗಳೇ, ಬುದ್ದಿಮಾತುಗಳಿಗೆ ಕಿವಿಗೊಡಿರಿ.
11 ಯೆಹೋವನಿಗೆ ಭಯಭಕ್ತಿಯಿಂದ ವಿಧೇಯರಾಗಿರಿ,
ನಡುಗುತ್ತಾ ಉಲ್ಲಾಸಪಡಿರಿ.
12 ಆತನ ಮಗನಿಗೆ ನಂಬಿಗಸ್ತರಾಗಿರಿ,
ಇಲ್ಲವಾದರೆ ಆತನ ಕೋಪವು ಬೇಗನೆ ತೋರಿಬಂದು
ನಿಮ್ಮನ್ನು ನಾಶಪಡಿಸುವುದು.
ಯೆಹೋವನನ್ನು ಆಶ್ರಯಿಸಿಕೊಂಡಿರುವವರು ಭಾಗ್ಯವಂತರೇ ಸರಿ!
19 ಸುಳ್ಳುಹೇಳುವ ಮತ್ತು ಮೋಸಮಾಡುವ ಮೂಢನಾಗಿರುವುದಕ್ಕಿಂತ, ಬಡವನಾಗಿಯೂ ಯಥಾರ್ಥನಾಗಿಯೂ ಇರುವುದು ಲೇಸು.
2 ಯಾವುದೇ ಕಾರ್ಯದಲ್ಲಿ ಉತ್ಸುಕತೆಯೊಂದೇ ಸಾಲದು, ತಿಳುವಳಿಕೆಯೂ ಬೇಕು. ಯಾವುದೇ ಕಾರ್ಯದಲ್ಲಿ ದುಡುಕದಿರಿ; ಇಲ್ಲವಾದರೆ, ತಪ್ಪಾದೀತು!
3 ಮೂಢನ ಮೂಢತನವು ಅವನ ಜೀವನವನ್ನೇ ನಾಶಪಡಿಸುತ್ತದೆ. ಆದರೆ ಅವನು ದೂಷಿಸುವುದು ಯೆಹೋವನನ್ನೇ.
4 ಐಶ್ವರ್ಯವಂತನಿಗೆ ಅನೇಕ ಸ್ನೇಹಿತರಿರುವರು; ಬಡವನಿಗೆ ಇದ್ದ ಸ್ನೇಹಿತರೂ ಬಿಟ್ಟುಹೋಗುವರು.
5 ಮತ್ತೊಬ್ಬನ ಮೇಲೆ ಸುಳ್ಳುಹೇಳುವವನು ದಂಡಿಸಲ್ಪಡುವನು. ಸುಳ್ಳುಸಾಕ್ಷಿಗೆ ಸುರಕ್ಷತೆಯಿಲ್ಲ.
6 ಉದಾರಿಯ ಸ್ನೇಹಿತರಾಗಿರಲು ಅನೇಕರಿಗೆ ಆಸೆ. ದಾನಶೂರನಿಗೆ ಸ್ನೇಹಿತರಾಗಿರಲು ಎಲ್ಲರಿಗೂ ಆಸೆ.
7 ಬಡವನಿಗೆ ಅವನ ಕುಟುಂಬವು ವಿರುದ್ಧವಾಗುವುದು; ಅವನ ಸ್ನೇಹಿತರೆಲ್ಲಾ ಮುಖತಿರುವಿಕೊಂಡು ಅವನಿಗೆ ದೂರವಾಗುವರು. ಆ ಬಡವನು ಸಹಾಯಕ್ಕಾಗಿ ಬೇಡಿಕೊಂಡರೂ ಅವನ ಸಮೀಪಕ್ಕೆ ಯಾರೂ ಹೋಗುವುದಿಲ್ಲ.
8 ತನ್ನನ್ನು ಪ್ರೀತಿಸುವ ಪ್ರತಿಯೊಬ್ಬನು ಜ್ಞಾನಿಯಾಗಲು ಪ್ರಯಾಸಪಡುವನು; ಅಭಿವೃದ್ಧಿಗಾಗಿ ಇಷ್ಟಪಡುವವನು ತಿಳುವಳಿಕೆಯನ್ನು ಹೊಂದಿಕೊಳ್ಳಲು ಪ್ರಯತ್ನಿಸುವನು.
9 ಸುಳ್ಳುಸಾಕ್ಷಿಯು ದಂಡಿಸಲ್ಪಡುವನು; ಸುಳ್ಳುಗಾರನು ನಾಶವಾಗುವನು.
10 ಮೂಢನಿಗೆ ಐಶ್ವರ್ಯವು ಸೂಕ್ತವಲ್ಲ; ರಾಜಕುಮಾರರ ಮೇಲೆ ದೊರೆತನ ಮಾಡುವುದು ಗುಲಾಮನಿಗೆ ಮತ್ತಷ್ಟು ಸೂಕ್ತವಲ್ಲ.
11 ಜ್ಞಾನಿಗೆ ಅವನ ಜ್ಞಾನವೇ ಸನ್ಮಾನವನ್ನು ತರುತ್ತದೆ. ತನಗೆ ತಪ್ಪು ಮಾಡಿದವರನ್ನು ಕ್ಷಮಿಸುವುದು ಅವನ ಸದ್ಗುಣವಾಗಿದೆ.
12 ರಾಜನ ಕೋಪವು ಸಿಂಹ ಘರ್ಜನೆಯಂತಿರುತ್ತದೆ. ರಾಜನಿಗೆ ನಿನ್ನ ಮೇಲಿರುವ ಸಂತೋಷವು ತುಂತುರು ಮಳೆಯಂತಿರುತ್ತದೆ.
13 ಮೂಢನಾದ ಮಗನು ತಂದೆಗೆ ಹಾನಿ; ವಾದಿಸುವ ಹೆಂಡತಿಯು ಸೋರುವ ಮೇಲ್ಛಾವಣಿಯಂತಿದ್ದಾಳೆ.
14 ಮಕ್ಕಳು ತಂದೆಯಿಂದ ಮನೆಗಳನ್ನು ಮತ್ತು ಹಣವನ್ನು ಸ್ವಾಸ್ತ್ಯವಾಗಿ ಪಡೆದುಕೊಳ್ಳುವರು. ವಿವೇಕಿಯಾದ ಹೆಂಡತಿಯಾದರೋ ಯೆಹೋವನಿಂದ ಬಂದ ಉಡುಗೊರೆ.
15 ಸೋಮಾರಿಗೆ ಗಾಢವಾದ ನಿದ್ರೆ. ಮೈಗಳ್ಳನಿಗೆ ಹಸಿವೆ.
16 ಆಜ್ಞೆಗಳಿಗೆ ವಿಧೇಯನಾಗುವವನು ತನ್ನ ಪ್ರಾಣವನ್ನು ಸಂರಕ್ಷಿಸಿಕೊಳ್ಳುವನು. ಆದರೆ ತನ್ನ ನಡತೆಯ ಬಗ್ಗೆ ನಿರ್ಲಕ್ಷ್ಯದಿಂದಿರುವವನು ಸಾವಿಗೀಡಾಗುವನು.
17 ಬಡಜನರಿಗೆ ಉದಾರವಾಗಿ ಕೊಡುವವನು ಯೆಹೋವನಿಗೆ ಸಾಲಕೊಡುತ್ತಾನೆ; ಅವನ ಕರುಣೆಯ ಕಾರ್ಯಕ್ಕೆ ಯೆಹೋವನು ಅವನ ಗೆ ಮರುಪಾವತಿ ಮಾಡುವನು.
18 ನಿನ್ನ ಮಗನು ತನ್ನ ಮಾರ್ಗಗಳನ್ನು ಸರಿಪಡಿಸಿಕೊಳ್ಳುತ್ತಾನೆ ಎಂಬ ನಿರೀಕ್ಷೆ ಇನ್ನೂ ಇರುವಾಗಲೇ ಅವನನ್ನು ಶಿಸ್ತುಗೊಳಿಸು. ಅವನನ್ನು ಶಿಸ್ತುಗೊಳಿಸದಿದ್ದರೆ ಮರಣಕ್ಕೆ ಈಡು ಮಾಡಿದಂತಾಗುವುದು.
19 ಮುಂಗೋಪಿಯು ತನ್ನ ಕೋಪಕ್ಕೆ ದಂಡ ಕೊಡಲೇಬೇಕು. ಕೊಡಬೇಕಾದ ದಂಡದಿಂದ ತಪ್ಪಿಸಿದರೆ, ಅವನು ಅದೇ ಕಾರ್ಯಗಳನ್ನು ಮತ್ತೆ ಮಾಡುವನು.
20 ಉಪದೇಶಕ್ಕೆ ಕಿವಿಗೊಟ್ಟು ಸರಿಪಡಿಸಿಕೊ. ಆಗ ನೀನು ಜ್ಞಾನಿಯಾಗುವೆ.
21 ಜನರು ಅನೇಕ ಆಲೋಚನೆಗಳನ್ನು ಮಾಡಿಕೊಂಡರೂ ಯೆಹೋವನ ಇಚ್ಛೆಯೇ ನೆರವೇರುವುದು.
22 ದುರಾಶೆಯುಳ್ಳವನಿಗೆ ಅವನ ದುರಾಶೆಯೇ ಅವಮಾನಕರ. ಸುಳ್ಳು ಹೇಳುವುದಕ್ಕಿಂತ ಬಡವನಾಗಿರುವುದೇ ಮೇಲು.
23 ಭಯಭಕ್ತಿಯು ಒಳ್ಳೆಯ ಜೀವನಕ್ಕೆ ನಡೆಸುತ್ತದೆ. ಅದು ಅವನಿಗೆ ತೃಪ್ತಿಯನ್ನೂ ಕೊಡುವುದು; ಕೇಡಿನಿಂದಲೂ ತಪ್ಪಿಸಿ ಕಾಪಾಡುವುದು.
24 ಕೆಲವರಿಗೆ ಊಟಮಾಡುವುದಕ್ಕೂ ಸೋಮಾರಿತನ. ಅವರು ಕೈಯನ್ನು ತಟ್ಟೆಗೆ ಹಾಕಿದರೂ ಊಟವನ್ನು ಬಾಯಿಗೆ ಹಾಕಿಕೊಳ್ಳುವುದಿಲ್ಲ.
25 ದುರಾಭಿಮಾನಿಯನ್ನು ದಂಡಿಸಿದರೆ ಅವನು ಪಾಠವನ್ನು ಕಲಿತುಕೊಳ್ಳಬಹುದು. ವಿವೇಕಿಯನ್ನು ತಿದ್ದಿ ಸರಿಪಡಿಸಿದರೆ ಅವನು ಮತ್ತಷ್ಟು ಜ್ಞಾನವನ್ನು ಗಳಿಸಿಕೊಳ್ಳುವನು.
26 ತಂದೆಗೆ ಹೊಡೆಯುವವನೂ ತಾಯಿಯನ್ನು ಓಡಿಸುವವನೂ ತನಗೇ ನಾಚಿಕೆಯನ್ನು ಮತ್ತು ಅವಮಾನವನ್ನು ತಂದುಕೊಳ್ಳುವನು.
27 ನೀನು ಬುದ್ಧಿವಾದವನ್ನು ಕೇಳದಿದ್ದರೆ, ನಿನ್ನ ತಪ್ಪುಗಳಲ್ಲಿಯೇ ಮುಂದುವರಿಯುವೆ.
28 ದುಷ್ಟಸಾಕ್ಷಿಯು ನ್ಯಾಯವನ್ನು ಪರಿಹಾಸ್ಯ ಮಾಡುವನು; ಕೆಡುಕರ ಮಾತುಗಳು ಅನ್ಯಾಯವನ್ನು ಹರಡುತ್ತವೆ.
29 ದುರಾಭಿಮಾನಿಯು ಶಿಕ್ಷೆಗೆ ಗುರಿಯಾಗಿ ದಂಡಿಸಲ್ಪಡುವನು; ಮೂಢನು ತನಗಾಗಿ ಕಾದಿರುವ ದಂಡನೆಯನ್ನು ಅನುಭವಿಸುವನು.
2 ನಿಮಗೆ ಸಹಾಯ ಮಾಡಲು ನಾನು ಬಹಳವಾಗಿ ಮಾಡುತ್ತಿರುವ ಪ್ರಯತ್ನ ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ ಇದಲ್ಲದೆ ಲವೊದಿಕೀಯದಲ್ಲಿರುವವರಿಗೆ ಮತ್ತು ನನ್ನನ್ನು ಎಂದೂ ನೋಡಿಲ್ಲದವರಿಗೆ ಸಹ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. 2 ಅವರೆಲ್ಲರೂ ಆಂತರ್ಯದಲ್ಲಿ ಉತ್ತೇಜಿತರಾಗಿ ಪ್ರೀತಿಯಿಂದ ಒಂದಾಗಿರಬೇಕೆಂದು ಮತ್ತು ತಿಳುವಳಿಕೆಯಿಂದ ಬರುವ ದೃಢನಂಬಿಕೆಯಲ್ಲಿ ಶ್ರೀಮಂತರಾಗಿರಬೇಕೆಂದು ಆಶಿಸುತ್ತೇನೆ. ಅಂದರೆ ದೇವರ ನಿಗೂಢ ಸತ್ಯವನ್ನು ಅವರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಸ್ವತಃ ಕ್ರಿಸ್ತನೇ ಆ ಸತ್ಯ. 3 ಕ್ರಿಸ್ತನಲ್ಲಿ ಸರ್ವಜ್ಞಾನವು ಮತ್ತು ತಿಳುವಳಿಕೆಯು ಬಚ್ಚಿಟ್ಟಿರುವ ನಿಕ್ಷೇಪಗಳಂತಿವೆ.
4 ಯಾವನೂ ನಿಮ್ಮನ್ನು ಸರಿಯೆನಿಸುವ ಸುಳ್ಳು ಮಾತುಗಳಿಂದ ಮೋಸಗೊಳಿಸದಂತೆ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ. 5 ಅಲ್ಲಿ ನಾನು ನಿಮ್ಮೊಡನೆ ಇರದಿದ್ದರೂ ನನ್ನ ಮನಸ್ಸು ನಿಮ್ಮೊಡನಿರುತ್ತದೆ. ನಿಮ್ಮ ಕ್ರಮಬದ್ಧವಾದ ನಡತೆಯನ್ನು ನೋಡಲು ಮತ್ತು ಕ್ರಿಸ್ತನಲ್ಲಿ ಇಟ್ಟಿರುವ ದೃಢನಂಬಿಕೆಯನ್ನು ಅರಿಯಲು ಬಹಳ ಸಂತೋಷಪಡುತ್ತೇನೆ.
ಕ್ರಿಸ್ತನಲ್ಲಿ ನೆಲೆಗೊಂಡಿರಿ
6 ಪ್ರಭುವಾದ ಕ್ರಿಸ್ತ ಯೇಸುವನ್ನು ನೀವು ಸ್ವೀಕರಿಸಿಕೊಂಡಿರುವುದರಿಂದ ಆತನಲ್ಲಿ ನೆಲೆಗೊಂಡಿದ್ದು ಜೀವಿಸಿರಿ. 7 ಕ್ರಿಸ್ತನನ್ನು ಮಾತ್ರ ನೀವು ಅವಲಂಬಿಸಬೇಕು. ಜೀವವೂ ಶಕ್ತಿಯೂ ಆತನಿಂದಲೇ ಬರುತ್ತವೆ. ನಿಮಗೆ ಸತ್ಯವನ್ನು ಉಪದೇಶಿಸಲಾಗಿದೆ. ನೀವು ಆ ಸತ್ಯ ಬೋಧನೆಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಮತ್ತು ದೇವರಿಗೆ ಸಲ್ಲತಕ್ಕ ಕೃತಜ್ಞತಾಸ್ತುತಿಯಿಂದ ತುಂಬಿದವರಾಗಿರಬೇಕು.
8 ಯಾರೂ ನಿಮ್ಮನ್ನು ಮೋಸಕರವಾದ ಮತ್ತು ನಿರರ್ಥಕವಾದ ತತ್ವಜ್ಞಾನ ಬೋಧನೆಯಿಂದ ತಪ್ಪು ದಾರಿಗೆ ನಡೆಸದಂತೆ ಜಾಗ್ರತೆಯಿಂದಿರಿ. ಆ ತತ್ವಜ್ಞಾನಗಳು ಜನರಿಂದ ಬಂದುವೇ ಹೊರತು ಕ್ರಿಸ್ತನಿಂದಲ್ಲ. ಅವು ಈ ಲೋಕದ ಜನರ ನಿರರ್ಥಕ ತತ್ವಗಳು. 9 ದೇವರ ಸರ್ವಸಂಪೂರ್ಣತೆಯು ಕ್ರಿಸ್ತನಲ್ಲಿ ನೆಲೆಗೊಂಡಿದೆ. (ಕ್ರಿಸ್ತನು ಈ ಲೋಕದಲ್ಲಿದ್ದಾಗಲೂ ಸಹ ನೆಲೆಗೊಂಡಿತ್ತು.) 10 ನೀವೆಲ್ಲರೂ ಕ್ರಿಸ್ತನಲ್ಲಿ ಸಂಪೂರ್ಣರಾಗಿದ್ದೀರಿ. ನಿಮಗೆ ಬೇರೇನೂ ಬೇಕಿಲ್ಲ. ಕ್ರಿಸ್ತನು ಎಲ್ಲ ದೊರೆತನಗಳನ್ನು ಮತ್ತು ಅಧಿಕಾರಗಳನ್ನು ಆಳುತ್ತಾನೆ.
11 ಕ್ರಿಸ್ತನಲ್ಲಿ ನೀವು ಬೇರೊಂದು ಸುನ್ನತಿಯನ್ನು ಪಡೆದಿರುವಿರಿ. ಆ ಸುನ್ನತಿಯು ಕೈಯಿಂದ ಮಾಡಿದ್ದಲ್ಲ. ಅಂದರೆ ನಿಮ್ಮ ಪಾಪಾಧೀನಸ್ವಭಾವದಿಂದ ನಿಮಗೆ ಬಿಡುಗಡೆಯಾಯಿತು. ಇದುವೇ ಕ್ರಿಸ್ತನು ಮಾಡುವ ಸುನ್ನತಿ. 12 ನೀವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನೊಂದಿಗೆ ಹೂಳಲ್ಪಟ್ಟಿರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸುವುದರ ಮೂಲಕ ತೋರಿದ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ನೀವು ಆ ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಮೇಲಕ್ಕೆ ಎದ್ದುಬಂದಿರಿ.
13 ನೀವು ನಿಮ್ಮ ಪಾಪಗಳ ದೆಸೆಯಿಂದ ಮತ್ತು ನಿಮ್ಮ ಪಾಪ ಸ್ವಭಾವದ ಹಿಡಿತದಿಂದ ಇನ್ನೂ ಮುಕ್ತರಾಗದೆ ಇದ್ದುದರಿಂದ ಆತ್ಮಿಕವಾಗಿ ಸತ್ತವರಾಗಿದ್ದಿರಿ. ಆದರೆ ದೇವರು ನಿಮಗೆ ಕ್ರಿಸ್ತನೊಂದಿಗೆ ಜೀವವನ್ನು ದಯಪಾಲಿಸಿದನು. ಆತನು ನಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದನು. 14 ದೇವರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ನಾವು ಅಪರಾಧಿಗಳಾಗಿದ್ದೆವು. ನಮ್ಮ ಮೇಲೆ ಹೊರಿಸಲಾದ ದೋಷಾರೋಪಣೆಯ ಪಟ್ಟಿಯಲ್ಲಿ ನಾವು ಉಲ್ಲಂಘಿಸಿದ ಆಜ್ಞೆಗಳನ್ನೆಲ್ಲ ಲಿಖಿತಗೊಳಿಸಲಾಗಿತ್ತು. ಆದರೆ ದೇವರು ನಮ್ಮ ಅಪರಾಧಗಳನ್ನೆಲ್ಲ ಕ್ಷಮಿಸಿ ಅವುಗಳನ್ನು ಶಿಲುಬೆಗೆ ಜಡಿದನು. 15 ದೇವರು ತನಗೆ ವಿರೋಧವಾಗಿದ್ದ ದೊರೆತನಗಳನ್ನೂ ಅಧಿಕಾರಗಳನ್ನೂ ಸೋಲಿಸಿ, ಅವುಗಳನ್ನು ನಿರಾಯುಧರನ್ನಾಗಿ ಮಾಡಿ ಶಿಲುಬೆಯ ವಿಜಯೋತ್ಸವದಲ್ಲಿ ಅವುಗಳನ್ನು ಇಡೀ ಲೋಕದ ಎದುರಿನಲ್ಲಿ ಸೆರೆಯಾಳುಗಳನ್ನಾಗಿ ಮೆರವಣಿಗೆ ಮಾಡಿದನು.
ಮಾನವ ನಿರ್ಮಿತ ನಿಯಮಗಳನ್ನು ಅನುಸರಿಸಬೇಡಿ
16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ. 17 ಪೂರ್ವಕಾಲದಲ್ಲಿ ಈ ಸಂಗತಿಗಳೆಲ್ಲ ಮುಂದೆ ಬರಬೇಕಾಗಿದ್ದವುಗಳ ಛಾಯೆಗಳಾಗಿದ್ದವು. ಅವುಗಳ ನಿಜರೂಪವು ಕ್ರಿಸ್ತನಲ್ಲಿ ತೋರಿಬಂದಿತು. 18 ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ. 19 ಆ ಜನರು ತಮ್ಮನ್ನು ಕ್ರಿಸ್ತನೆಂಬ ಶಿರಸ್ಸಿನ ಅಧೀನಕ್ಕೆ ಒಳಪಡಿಸುವುದಿಲ್ಲ. ಇಡೀ ದೇಹವು ಆತನನ್ನೇ ಅವಲಂಬಿಸಿಕೊಂಡಿದೆ. ಆತನಿಂದಲೇ ದೇಹದ ಅಂಗಾಂಗಗಳು ಇತರ ಅಂಗಗಳ ಬಗ್ಗೆ ಚಿಂತಿಸುತ್ತವೆ ಮತ್ತು ಪರಸ್ಪರ ಸಹಾಯ ಮಾಡುತ್ತವೆ. ಇದರಿಂದ ದೇಹವು ಬಲಗೊಂಡು ಒಂದಾಗಿ ಕೂಡಿಸಲ್ಪಡುತ್ತದೆ. ಹೀಗೆ, ದೇವರ ಇಚ್ಛೆಯಂತೆ ದೇಹವು ಬೆಳೆಯುತ್ತದೆ.
20 ನೀವು ಕ್ರಿಸ್ತನೊಂದಿಗೆ ಸತ್ತು ಪ್ರಾಪಂಚಿಕವಾದ ನಿರರ್ಥಕ ನಿಯಮಗಳಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿದ್ದರೂ ನೀವು ಈ ಲೋಕಕ್ಕೆ ಸೇರಿದವರಂತೆ ವರ್ತಿಸುವುದೇಕೆ? ಈ ನಿಯಮಗಳನ್ನು ಏಕೆ ಅನುಸರಿಸುತ್ತಿರುವಿರಿ ಎಂಬುದೇ ನನ್ನ ಮಾತಿನ ಅರ್ಥ: 21 “ಇದನ್ನು ತಿನ್ನಬೇಡ”, “ಅದರ ರುಚಿ ನೋಡಬೇಡ”, “ಅದನ್ನು ಮುಟ್ಟಬೇಡ” ಎಂದು ಹೇಳುವುದೇಕೆ? 22 ಪ್ರಾಪಂಚಿಕ ವಿಷಯಗಳ ಕುರಿತಾದ ಈ ನಿಯಮಗಳೆಲ್ಲ ಬಳಸಿದ ಮೇಲೆ ನಾಶವಾಗುತ್ತವೆ. ಅವುಗಳು ಜನರ ಆಜ್ಞೆ ಮತ್ತು ಜನರ ಉಪದೇಶಗಳೇ ಹೊರತು ದೇವರವಲ್ಲ. 23 ಈ ನಿಯಮಗಳು ನೋಡುವುದಕ್ಕೆ ಬದ್ಧಿಯುಳ್ಳವಾಗಿವೆ. ಆದರೆ ಅತಿವಿನಯವಂತರಂತೆ ನಟಿಸಲು ಮತ್ತು ತಮ್ಮ ದೇಹಗಳನ್ನು ದಂಡಿಸಲು ಜನರನ್ನು ಪ್ರೆರೇಪಿಸುವ ಅವುಗಳು ಕೇವಲ ಮಾನವ ನಿರ್ಮಿತವಾದ ಧರ್ಮದ ಒಂದು ಭಾಗವಾಗಿವೆ. ಆದರೆ ಪಾಪಸ್ವಭಾವವು ಇಚ್ಛಿಸುವ ದುಷ್ಕೃತ್ಯಗಳನ್ನು ಮಾಡದಂತೆ ಅವು ಜನರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International