M’Cheyne Bible Reading Plan
ಲೈಂಗಿಕ ಸಂಬಂಧಗಳ ನಿಯಮಗಳು
18 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮ್ಮ ದೇವರಾಗಿರುವ ಯೆಹೋವನು. 3 ಹಿಂದೆ ನೀವು ಈಜಿಪ್ಟಿನಲ್ಲಿ ವಾಸಿಸಿದಿರಿ. ಈಜಿಪ್ಟಿನ ಜನರು ಆಚರಿಸುವ ಆಚಾರಗಳನ್ನು ನೀವು ಅನುಸರಿಸಬಾರದು. ಆ ದೇಶದಲ್ಲಿ ಮಾಡುತ್ತಿದ್ದ ಕಾರ್ಯಗಳನ್ನು ನೀವು ಮಾಡಬಾರದು. ನಾನು ನಿಮ್ಮನ್ನು ಕಾನಾನಿಗೆ ನಡೆಸುತ್ತಿದ್ದೇನೆ. ಆ ದೇಶದಲ್ಲಿ ಮಾಡುವ ಕಾರ್ಯಗಳನ್ನು ನೀವು ಮಾಡಕೂಡದು. ಅವರ ಸಂಪ್ರದಾಯಗಳನ್ನು ಅನುಸರಿಸಬೇಡಿ. 4 ನೀವು ನನ್ನ ನಿಯಮಗಳಿಗೆ ವಿಧೇಯರಾಗಿ ನನ್ನ ಕಟ್ಟಳೆಗಳನ್ನು ಅನುಸರಿಸಬೇಕು. ಆ ನಿಯಮಗಳನ್ನು ತಪ್ಪದೆ ಪಾಲಿಸಿರಿ. ಯಾಕೆಂದರೆ ನಾನು ನಿಮ್ಮ ದೇವರಾದ ಯೆಹೋವನು. 5 ಆದ್ದರಿಂದ ನೀವು ನನ್ನ ಕಟ್ಟಳೆಗಳಿಗೆ ಮತ್ತು ನಿಯಮಗಳಿಗೆ ವಿಧೇಯರಾಗಬೇಕು. ಒಬ್ಬನು ನನ್ನ ಕಟ್ಟಳೆಗಳಿಗೆ ಮತ್ತು ನಿಯಮಗಳಿಗೆ ವಿಧೇಯನಾದರೆ, ಅವನು ಜೀವಿಸುವನು! ನಾನೇ ಯೆಹೋವನು!
6 “ನೀವು ಎಂದಿಗೂ ನಿಮ್ಮ ಹತ್ತಿರದ ಸಂಬಂಧಿಗಳೊಂದಿಗೆ ಲೈಂಗಿಕ ಸಂಬಂಧ[a] ಮಾಡಬಾರದು. ನಾನೇ ಯೆಹೋವನು!
7 “ತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಿ ನಿಮ್ಮ ತಂದೆಗೆ ಎಂದಿಗೂ ಅವಮಾನ ತರಬಾರದು. ಆಕೆ ನಿಮ್ಮ ತಾಯಿಯಾಗಿದ್ದಾಳೆ. ನೀವು ಆಕೆಯೊಂದಿಗೆ ಎಂದಿಗೂ ಲೈಂಗಿಕ ಸಂಬಂಧ ಮಾಡಬಾರದು. 8 ಮಲತಾಯಿಯೊಂದಿಗೂ ಲೈಂಗಿಕ ಸಂಬಂಧ ಮಾಡಬಾರದು. ಅದು ನಿಮ್ಮ ತಂದೆಗೆ ಅವಮಾನ ತರುವುದು.
9 “ಸಹೋದರಿಯೊಂದಿಗೆ, ಅಂದರೆ ನಿಮ್ಮ ತಂದೆ ಅಥವಾ ತಾಯಿಯ ಮಗಳೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ನಿಮ್ಮ ಸಹೋದರಿಯು ನಿಮ್ಮ ಮನೆಯಲ್ಲಾಗಲಿ[b] ಅಥವಾ ಇನ್ನೊಂದು ಸ್ಥಳದಲ್ಲಾಗಲಿ ಹುಟ್ಟಿದರೂ ಆಕೆಯೊಡನೆ ಲೈಂಗಿಕ ಸಂಬಂಧ ಮಾಡಬಾರದು.
10 “ನೀವು ನಿಮ್ಮ ಮೊಮ್ಮಗಳೊಡನೆ ಲೈಂಗಿಕ ಸಂಬಂಧ ಮಾಡಬಾರದು. ಅದು ನಿಮಗೆ ಅವಮಾನ ತರುವುದು.
11 “ತಂದೆಗೆ ಮತ್ತು ಅವನ ಹೆಂಡತಿಗೆ ಒಬ್ಬ ಮಗಳಿದ್ದರೆ, ಆಕೆ ನಿಮ್ಮ ಸಹೋದರಿಯಾಗಿದ್ದಾಳೆ. ನೀವು ಆಕೆಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು.
12 “ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ತಂದೆಯ ಹತ್ತಿರದ ಸಂಬಂಧಿ. 13 ತಾಯಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ತಾಯಿಯ ಹತ್ತಿರದ ಸಂಬಂಧಿಯಾಗಿದ್ದಾಳೆ. 14 ನೀವು ನಿಮ್ಮ ತಂದೆಯ ಸಹೋದರನ ಹೆಂಡತಿಯೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡರೆ ಅವನನ್ನು ಅವಮಾನಪಡಿಸಿದಂತಾಗುವುದು. ಯಾಕೆಂದರೆ ಆಕೆಯು ನಿಮ್ಮ ದೊಡ್ಡಮ್ಮ ಅಥವಾ ಚಿಕ್ಕಮ್ಮ.
15 “ಸೊಸೆಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ಮಗನ ಹೆಂಡತಿ.
16 “ಸಹೋದರನ ಹೆಂಡತಿಯೊಡನೆ ಲೈಂಗಿಕ ಸಂಬಂಧ ಮಾಡಬಾರದು. ಅಂಥ ಸಂಬಂಧವು ನಿಮ್ಮ ಸಹೋದರನಿಗೆ ಅವಮಾನವನ್ನು ಉಂಟುಮಾಡುವುದು.
17 “ಒಬ್ಬ ಸ್ತ್ರೀಯೊಡನೆಯೂ ಆಕೆಯ ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಆ ಸ್ತ್ರೀಯ ಮೊಮ್ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಈ ಮೊಮ್ಮಗಳು ಈ ಸ್ತ್ರೀಯ ಮಗನ ಅಥವಾ ಮಗಳ ಮಗಳಾಗಿರಬಹುದು. ಆಕೆಯ ಮೊಮ್ಮಕ್ಕಳಾದ ಹೆಣ್ಣುಮಕ್ಕಳು ಆಕೆಯ ಹತ್ತಿರದ ಸಂಬಂಧಿಕರಾಗಿದ್ದಾರೆ. ಆಕೆಯೊಡನೆ ಲೈಂಗಿಕ ಸಂಬಂಧ ಮಾಡುವುದು ತಪ್ಪು.
18 “ಹೆಂಡತಿ ಇನ್ನೂ ಜೀವದಿಂದಿರುವಾಗ, ಆಕೆಯ ಸಹೋದರಿಯನ್ನು ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು. ಇಲ್ಲವಾದರೆ ಆ ಇಬ್ಬರು ಸಹೋದರಿಯರು ಒಬ್ಬರಿಗೊಬ್ಬರು ವೈರಿಗಳಾಗುವರು. ಹೆಂಡತಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು.
19 “ಅಲ್ಲದೆ ಸ್ತ್ರೀಯು ಮುಟ್ಟಿನಿಂದ ಅಶುದ್ಧಳಾಗಿರುವಾಗ ಲೈಂಗಿಕ ಸಂಬಂಧಕ್ಕಾಗಿ ಆಕೆಯ ಹತ್ತಿರ ಹೋಗಬಾರದು.
20 “ನೆರೆಯವನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಇಂಥ ಸಂಬಂಧವು ನಿಮ್ಮನ್ನು ಅಶುದ್ಧರನ್ನಾಗಿ ಮಾಡುವುದು.
21 “ನೀವು ನಿಮ್ಮ ಯಾವ ಮಕ್ಕಳನ್ನೂ ಅಗ್ನಿಯ ಮೂಲಕ ಮೊಲೆಕನಿಗೆ ಕೊಡಬಾರದು. ಇಲ್ಲವಾದರೆ ನೀವು ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡುವಿರಿ. ನಾನೇ ಯೆಹೋವನು!
22 “ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು. ಅದು ಭಯಂಕರ ಪಾಪ!
23 “ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಬಾರದು. ಇಂಥ ಸಂಬಂಧವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡುವುದು. ಅಲ್ಲದೆ ಸ್ತ್ರೀಯು ಪಶುವಿನೊಡನೆ ಲೈಂಗಿಕ ಸಂಬಂಧ ಪಡೆಯಬಾರದು. ಇಂಥ ಸಂಬಂಧ ಸ್ವಭಾವಕ್ಕೆ ವಿರುದ್ದವಾದದ್ದು.
24 “ಆ ದುರಾಚಾರಗಳಲ್ಲಿ ಯಾವುದರಿಂದಲೂ ನಿಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಬೇಡಿರಿ. ನಾನು ಜನಾಂಗಗಳನ್ನು ಅವರ ದೇಶಗಳಿಂದ ಹೊರಡಿಸಿ ಅವರ ದೇಶವನ್ನು ನಿಮಗೆ ಕೊಡುತ್ತಿದ್ದೇನೆ. ಯಾಕೆಂದರೆ ಅವರು ಅಂಥ ಭಯಂಕರ ಪಾಪಗಳನ್ನು ಮಾಡಿದರು. 25 ಆದ್ದರಿಂದ ದೇಶವು ಸಹ ಅಶುದ್ಧವಾಯಿತು. ಆದ್ದರಿಂದ ನಾನು ಅದನ್ನು ಅದರ ಪಾಪಗಳಿಗಾಗಿ ದಂಡಿಸಿದೆನು. ಆ ದೇಶವು ತನ್ನಲ್ಲಿ ವಾಸಿಸಿದ ಜನರನ್ನು ಕಾರಿಬಿಟ್ಟಿತು.
26 “ಆದ್ದರಿಂದ ನೀವು ನನ್ನ ಕಟ್ಟಳೆಗಳಿಗೂ ನಿಯಮಗಳಿಗೂ ಆಜ್ಞಾವಿಧಿಗಳಿಗೂ ವಿಧೇಯರಾಗಬೇಕು. ನೀವು ಆ ಭಯಂಕರ ಪಾಪಗಳಲ್ಲಿ ಯಾವುದನ್ನೂ ಮಾಡಬಾರದು. ಆ ವಿಧಿಗಳು ಇಸ್ರೇಲರಿಗಾಗಿ ಮತ್ತು ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯಜನರಿಗಾಗಿ ಇರುತ್ತವೆ. 27 ನಿಮಗಿಂತ ಮುಂಚೆ ಈ ದೇಶದಲ್ಲಿ ವಾಸಿಸಿದ ಜನರು ಆ ಭಯಂಕರ ಕೃತ್ಯಗಳನ್ನು ಮಾಡಿದರು. ಆದ್ದರಿಂದ ದೇಶವು ಹೊಲೆಯಾಯಿತು. 28 ನೀವು ಈ ಕಾರ್ಯಗಳನ್ನು ಮಾಡಿದರೆ, ನೀವು ಆ ದೇಶವನ್ನು ಹೊಲೆಮಾಡುವಿರಿ. ಅದು ಮೊದಲು ವಾಸಿಸಿದ ಜನಾಂಗಗಳನ್ನು ಕಾರಿಬಿಟ್ಟಂತೆ ನಿಮ್ಮನ್ನೂ ಕಾರಿಬಿಡುವುದು. 29 ಯಾವನಾದರೂ ಆ ಭಯಂಕರ ಪಾಪಗಳಲ್ಲಿ ಯಾವುದನ್ನಾದರೂ ಮಾಡಿದರೆ, ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು. 30 ಅನ್ಯಜನರು ಆ ಭಯಂಕರ ಪಾಪಗಳನ್ನು ಮಾಡಿದ್ದಾರೆ. ಆದರೆ ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಬೇಕು. ನೀವು ಆ ಭಯಂಕರ ಪಾಪಗಳಲ್ಲಿ ಯಾವುದನ್ನೂ ಮಾಡಬಾರದು. ಆ ಭಯಂಕರ ಪಾಪಗಳಿಂದ ನಿಮ್ಮನ್ನು ಹೊಲೆ ಮಾಡಿಕೊಳ್ಳಬೇಡಿರಿ. ನಾನೇ ನಿಮ್ಮ ದೇವರಾದ ಯೆಹೋವನು.”
ರಚನೆಗಾರ: ದಾವೀದ.
22 ನನ್ನ ದೇವರೇ, ನನ್ನ ದೇವರೇ! ಯಾಕೆ ನನ್ನನ್ನು ತೊರೆದಿರುವೆ?
ನನ್ನನ್ನು ರಕ್ಷಿಸದೆ ಯಾಕೆ ಬಹುದೂರವಾಗಿರುವೆ!
ಸಹಾಯಕ್ಕಾಗಿ ನಾನು ಗೋಳಾಡುತ್ತಿದ್ದರೂ ಕೇಳದೆ ಯಾಕೆ ಬಹದೂರವಾಗಿರುವೆ?
2 ನನ್ನ ದೇವರೇ, ಹಗಲಿನಲ್ಲಿ ನಾನು ನಿನ್ನನ್ನು ಕೂಗಿಕೊಂಡೆನು,
ಆದರೂ ನೀನು ನನಗೆ ಉತ್ತರಿಸಲಿಲ್ಲ.
ರಾತ್ರಿಯಲ್ಲೂ ನಿನ್ನನ್ನು ಕೂಗಿಕೊಳ್ಳುತ್ತಲೇ ಇದ್ದೆನು.
3 ದೇವರೇ, ಪರಿಶುದ್ಧನು ನೀನೇ.
ನೀನು ರಾಜನಂತೆ ಕುಳಿತಿರುವೆ.
ಇಸ್ರೇಲರ ಸ್ತುತಿಗಳೇ ನಿನ್ನ ಸಿಂಹಾಸನ.
4 ನಮ್ಮ ಪೂರ್ವಿಕರು ನಿನ್ನಲ್ಲಿ ಭರವಸವಿಟ್ಟಿದ್ದರು.
ಅವರು ನಿನ್ನಲ್ಲಿಯೇ ಭರವಸವಿಟ್ಟಿದ್ದರು, ನೀನು ಅವರನ್ನು ರಕ್ಷಿಸಿದೆ.
5 ನಮ್ಮ ಪೂರ್ವಿಕರು ನಿನ್ನಲ್ಲಿ ಮೊರೆಯಿಟ್ಟಾಗ ಅವರನ್ನು ಶತ್ರುಗಳಿಂದ ಬಿಡಿಸಿದೆ.
ನಿನ್ನಲ್ಲಿ ಭರವಸವಿಟ್ಟಿದ್ದ ಅವರಿಗೆ ನಿರಾಶೆಯಾಗಲಿಲ್ಲ.
6 ಹೀಗಿರಲು, ನಾನು ಹುಳವೇ? ನಾನು ಮನುಷ್ಯನಲ್ಲವೇ?
ನನ್ನ ವಿಷಯದಲ್ಲಿ ಜನರು ನಾಚಿಕೆಪಡುತ್ತಾರೆ; ಅವರು ನನ್ನನ್ನು ತಿರಸ್ಕರಿಸುತ್ತಾರೆ.
7 ನನ್ನನ್ನು ನೋಡಿದವರೆಲ್ಲರೂ ಗೇಲಿಮಾಡುವರು.
ಅವರು ಓರೇ ತುಟಿಮಾಡಿ ತಲೆಯಾಡಿಸುತ್ತಾ,
8 “ಯೆಹೋವನಿಗೆ ಮೊರೆಯಿಡು,
ಆತನು ನಿನ್ನನ್ನು ರಕ್ಷಿಸಬಹುದು.
ಆತನು ನಿನ್ನನ್ನು ಬಹಳವಾಗಿ ಇಷ್ಟಪಡುವುದಾದರೆ ನಿನ್ನನ್ನು ಖಂಡಿತವಾಗಿ ರಕ್ಷಿಸುವನು” ಎಂದು ಹೇಳುತ್ತಾರೆ.
9 ನಾನಂತೂ ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ಹುಟ್ಟಿದ ದಿನದಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
ನಾನಿನ್ನೂ ತಾಯಿಯ ಗರ್ಭದಲ್ಲಿದ್ದಾಗ ನನಗೆ ಭರವಸೆ ನೀಡಿ ಸಂತೈಸಿದವನು ನೀನೇ.
10 ಹುಟ್ಟಿದ ದಿನದಿಂದಲೂ ನೀನೇ ನನ್ನ ದೇವರಾಗಿರುವೆ.
ತಾಯಿಯ ಗರ್ಭದಿಂದ ಬಂದಂದಿನಿಂದಲೂ ನನ್ನನ್ನು ಪರಿಪಾಲಿಸಿದವನು ನೀನೇ.
11 ಹೀಗಿರಲು, ನನ್ನನ್ನು ತೊರೆಯಬೇಡ!
ಆಪತ್ತು ಸಮೀಪಿಸಿದೆ, ನನಗೆ ಸಹಾಯಮಾಡಲು ಯಾರೂ ಇಲ್ಲ.
12 ಜನರು ನನ್ನನ್ನು ಸುತ್ತುಗಟ್ಟಿದ್ದಾರೆ;
ಅವರು ಬಲಿಷ್ಠವಾದ ಹೋರಿಗಳಂತಿದ್ದಾರೆ.
13 ಪ್ರಾಣಿಯೊಂದನ್ನು ಸೀಳಿಹಾಕುತ್ತಾ ಗರ್ಜಿಸುವ ಸಿಂಹದಂತೆ
ಅವರ ಬಾಯಿಗಳು ಅಗಲವಾಗಿ ತೆರೆದಿವೆ.
14 ನೆಲದ ಮೇಲೆ ಸುರಿದ ನೀರಿನಂತೆ
ನನ್ನ ಬಲವು ಇಲ್ಲವಾಗಿದೆ;
ನನ್ನ ಮೂಳೆಗಳೆಲ್ಲಾ ಸಡಿಲಗೊಂಡಿವೆ;
ಹೃದಯವು ಮೇಣದಂತೆ ಕರಗಿಹೋಗಿದೆ.
15 ನನ್ನ ಶಕ್ತಿಯು ಒಡೆದುಹೋದ ಮಡಿಕೆಯ ಒಣ ತುಂಡಿನಂತಿದೆ.
ನನ್ನ ನಾಲಿಗೆಯು ಬಾಯಿ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತಿದೆ.
ನೀನು ನನ್ನನ್ನು ಮಣ್ಣಿಗೆ ಸೇರಿಸಿರುವೆ.
16 ದುಷ್ಟರು ನಾಯಿಗಳಂತೆ ನನ್ನನ್ನು ಸುತ್ತಿಕೊಂಡಿದ್ದಾರೆ.
ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.[a]
17 ನನ್ನ ಮೂಳೆಗಳೆಲ್ಲಾ ಎದ್ದುಕಾಣುತ್ತಿವೆ!
ಜನರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದಾರೆ!
ಅವರು ನನ್ನನ್ನೇ ನೋಡುತ್ತಿದ್ದಾರೆ!
18 ಅವರು ನನ್ನ ಮೇಲ್ಹೊದಿಕೆಯನ್ನು ಪಾಲು ಮಾಡಿಕೊಳ್ಳುವರು;
ನನ್ನ ನಿಲುವಂಗಿಗಾಗಿ ಚೀಟುಹಾಕುವರು.
19 ಯೆಹೋವನೇ, ನನ್ನನ್ನು ತೊರೆಯಬೇಡ!
ನೀನೇ ನನ್ನ ಬಲ! ಬೇಗನೆ ನನಗೆ ಸಹಾಯಮಾಡು!
20 ಖಡ್ಗಕ್ಕೆ ಸಿಕ್ಕದಂತೆ ತನ್ನ ಜೀವವನ್ನು ರಕ್ಷಿಸು.
ನನ್ನ ಅಮೂಲ್ಯವಾದ ಜೀವವು ನಾಯಿಗಳ ಪಾಲಾಗದಂತೆ ರಕ್ಷಿಸು.
21 ನನ್ನನ್ನು ಸಿಂಹದ ಬಾಯಿಂದ ಬಿಡಿಸು;
ಹೋರಿಯ ಕೊಂಬುಗಳಿಂದ ನನ್ನನ್ನು ಸಂರಕ್ಷಿಸು.
22 ನಿನ್ನ ನಾಮದ ಕುರಿತು ನನ್ನ ಸಹೋದರರಿಗೆ ಹೇಳುವೆನು;
ಮಹಾಸಭೆಯಲ್ಲಿ ನಿನ್ನನ್ನು ಸುತ್ತಿಸುವೆನು.
23 ಯೆಹೋವನನ್ನು ಆರಾಧಿಸುವವರೇ, ಆತನಿಗೆ ಸ್ತೋತ್ರಮಾಡಿರಿ.
ಯಾಕೋಬನ ಸಂತತಿಗಳವರೇ, ಯೆಹೋವನಿಗೆ ಘನಮಾನವನ್ನು ಸಲ್ಲಿಸಿರಿ!
ಇಸ್ರೇಲರೇ, ಆತನಲ್ಲಿ ಭಯಭಕ್ತಿಯಿಂದಿರಿ!
24 ಯಾಕೆಂದರೆ ಇಕ್ಕಟ್ಟಿನಲ್ಲಿರುವ ಬಡವರಿಗೆ ಆತನು ಸಹಾಯಮಾಡುತ್ತಾನೆ; ಅವರ ವಿಷಯದಲ್ಲಿ ಆತನು ನಾಚಿಕೊಳ್ಳುವುದಿಲ್ಲ;
ಆತನು ಅವರನ್ನು ದ್ವೇಷಿಸುವುದಿಲ್ಲ.
ಅವರು ಆತನನ್ನು ಕೂಗಿಕೊಳ್ಳುವಾಗ
ಆತನು ಅವರಿಗೆ ಮರೆಯಾಗುವುದಿಲ್ಲ.
25 ಯೆಹೋವನೇ, ನಿನ್ನ ಕಾರ್ಯಗಳಿಗಾಗಿ ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ನನ್ನ ಹರಕೆಗಳನ್ನು ನಿನ್ನ ಭಕ್ತರ ಮುಂದೆ ಸಲ್ಲಿಸುವೆನು.
26 ಬಡವರು ತಿಂದು ತೃಪ್ತರಾಗುವರು.
ಯೆಹೋವನಿಗಾಗಿ ಹುಡುಕುತ್ತಾ ಬಂದವರೇ, ಆತನಿಗೆ ಸ್ತೋತ್ರಮಾಡಿರಿ!
ನಿಮ್ಮ ಹೃದಯವು ಯಾವಾಗಲೂ ಸಂತೋಷವಾಗಿರಲಿ.[b]
27 ದೂರದೇಶಗಳಲ್ಲಿರುವ ಜನರೆಲ್ಲರೂ ಯೆಹೋವನನ್ನು ಜ್ಞಾಪಿಸಿಕೊಂಡು ಆತನ ಬಳಿಗೆ ಹಿಂತಿರುಗಲಿ.
ವಿದೇಶಗಳಿಲ್ಲಿರುವ ಜನರೆಲ್ಲರೂ ಆತನನ್ನು ಆರಾಧಿಸಲಿ.
28 ಯಾಕೆಂದರೆ ಯೆಹೋವನೇ ರಾಜನು!
ಆತನು ಜನಾಂಗಗಳನ್ನೆಲ್ಲಾ ಆಳುವನು.
29 ಬಲಿಷ್ಠರೂ ದೃಢಕಾಯರೂ ತಿಂದು ದೇವರಮುಂದೆ ಅಡ್ಡಬೀಳುವರು.
ಸಾಯುವವರೂ ಸತ್ತುಹೋಗಿರುವವರೂ ಆತನ ಮುಂದೆ ಅಡ್ಡಬೀಳುವರು.
30 ಮುಂದಿನ ಕಾಲದಲ್ಲಿ ನಮ್ಮ ಸಂತತಿಗಳವರು ಯೆಹೋವನ ಸೇವೆಮಾಡುವರು.
ಆತನ ಕುರಿತಾಗಿ ಯಾವಾಗಲೂ ಹೇಳುತ್ತಿರುವರು.
31 ಪ್ರತಿಯೊಂದು ತಲೆಮಾರಿನವರೂ ತಮ್ಮ ಮಕ್ಕಳಿಗೆ
ಆತನ ಒಳ್ಳೆಯ ಕಾರ್ಯಗಳ ಬಗ್ಗೆ ಹೇಳುವರು.[c]
1 ದಾವೀದನ ಮಗನೂ ಜೆರುಸಲೇಮಿನಲ್ಲಿ ಆಳುತ್ತಿದ್ದ ರಾಜನೂ ಆಗಿದ್ದ ಪ್ರಸಂಗಿಯ ಮಾತುಗಳು. ಪ್ರಸಂಗಿಯು ಹೇಳುವುದೇನೆಂದರೆ, 2 ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ! 3 ಈ ಲೋಕದಲ್ಲಿ ಮನುಷ್ಯರು ಪಡುವ ಪ್ರಯಾಸದಿಂದ ಅವರಿಗೇನು ಲಾಭ?
ಪ್ರಕೃತಿಯಲ್ಲಿ ಬದಲೇನೂ ಇಲ್ಲ
4 ಒಂದು ತಲೆಮಾರು ಹೋಗಿ ಮತ್ತೊಂದು ತಲೆಮಾರು ಬರುವುದು. ಆದರೆ ಭೂಮಿ ಎಂದೆಂದಿಗೂ ಮುಂದುವರಿಯುವುದು. 5 ಸೂರ್ಯನು ಏರುವನು ಮತ್ತು ಇಳಿಯುವನು; ಬಳಿಕ ಅದೇ ಸ್ಥಳದಲ್ಲಿ ಮತ್ತೆ ಏರಲು ಅವಸರಪಡುವನು.
6 ಗಾಳಿಯು ದಕ್ಷಿಣಕ್ಕೆ ಬೀಸುವುದು; ನಂತರ ಉತ್ತರಕ್ಕೆ ತಿರುಗಿಕೊಳ್ಳುವುದು; ಅದು ತಿರುತಿರುಗುತ್ತಾ ಹೋಗಿ ತಿರುತಿರುಗುತ್ತಾ ಬರುವುದು.
7 ನದಿಗಳು ಎಲ್ಲಿಗೆ ಹರಿದುಹೋಗುತ್ತವೋ ಅಲ್ಲಿಗೇ ತಿರಿಗಿ ಹೋಗುವವು. ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತಲೇ ಇರುತ್ತವೆ; ಆದರೂ ಸಮುದ್ರವು ತುಂಬುವುದಿಲ್ಲ.
8 ಮಾತುಗಳಿಂದ ಯಾವುದನ್ನೂ ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ; ಆದರೂ ಜನರು ಮಾತಾಡುತ್ತಲೇ ಇರುವರು. ನಮ್ಮ ಕಿವಿಗಳು ಮಾತುಗಳನ್ನು ಕೇಳುತ್ತಲೇ ಇರುತ್ತವೆ; ಆದರೂ ನಮ್ಮ ಕಿವಿಗಳು ತುಂಬುವುದಿಲ್ಲ. ನಮ್ಮ ಕಣ್ಣುಗಳು ನೋಡುತ್ತಲೇ ಇರುತ್ತವೆ; ಆದರೂ ಅವು ತುಂಬುವುದಿಲ್ಲ.
ಲೋಕದಲ್ಲಿ ಹೊಸದೇನೂ ಇಲ್ಲ
9 ಇದ್ದದ್ದೇ ಇರುವುದು; ನಡೆದದ್ದೇ ನಡೆಯುವುದು. ಲೋಕದಲ್ಲಿ ಹೊಸದೇನೂ ಇಲ್ಲ.
10 “ಇಗೋ, ಇದು ಹೊಸದು!” ಎಂದು ಒಬ್ಬನು ಹೇಳಬಹುದು. ಆದರೆ ಅದು ಸಹ ಮೊದಲಿಂದ ಇಲ್ಲಿ ಇದ್ದದ್ದೇ. ನಮಗಿಂತ ಮೊದಲೇ ಅದು ಇಲ್ಲಿತ್ತು.
11 ಬಹುಕಾಲದ ಹಿಂದಿನ ಘಟನೆಗಳನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಈಗ ನಡೆಯುತ್ತಿರುವ ಸಂಗತಿಗಳನ್ನು ಮುಂದಿನ ಕಾಲದ ಜನರು ಜ್ಞಾಪಿಸಿಕೊಳ್ಳುವುದಿಲ್ಲ. ಹೀಗೆ, ತಮಗಿಂತ ಮುಂಚೆ ಇದ್ದವರು ಮಾಡಿದ್ದನ್ನು ಜನರು ಜ್ಞಾಪಿಸಿಕೊಳ್ಳುವುದಿಲ್ಲ.
ಜ್ಞಾನದಿಂದ ಸಂತೋಷವಾಗುವುದೇ?
12 ಪ್ರಸಂಗಿಯಾದ ನಾನು ಜೆರುಸಲೇಮಿನಲ್ಲಿ ಇಸ್ರೇಲರಿಗೆ ರಾಜನಾಗಿದ್ದೆನು. 13 ಈ ಜೀವಿತದ ಎಲ್ಲಾ ವಿಷಯಗಳನ್ನು ಜ್ಞಾನದಿಂದ ವಿಮರ್ಶಿಸಿ ಕಲಿತುಕೊಳ್ಳಲು ನಿರ್ಧರಿಸಿದೆನು. ದೇವರು ಮನುಷ್ಯರಿಗೆ ಕೊಟ್ಟಿರುವ ಕೆಲಸವೆಲ್ಲ ಬಹು ಪ್ರಯಾಸವೇ. 14 ಈ ಲೋಕದ ಕೆಲಸಗಳನ್ನೆಲ್ಲ ನೋಡಿದಾಗ ಅವೆಲ್ಲ ಕೇವಲ ವ್ಯರ್ಥವೆಂದು ಕಂಡುಕೊಂಡೆನು. ಅವು ಗಾಳಿಯನ್ನು ಹಿಡಿಯಲು ಪ್ರಯತ್ನಿಸಿದಷ್ಟೇ ವ್ಯರ್ಥವಾಗಿವೆ. 15 ವಕ್ರವಾದದ್ದನ್ನು ನೆಟ್ಟಗೆ ಮಾಡಲು ಸಾಧ್ಯವಿಲ್ಲ. ಇಲ್ಲದ್ದನ್ನು ಲೆಕ್ಕಿಸುವುದಕ್ಕೂ ಸಾಧ್ಯವಿಲ್ಲ.
16 ನಾನು ಮನಸ್ಸಿನಲ್ಲಿ, “ನಾನು ಬಹು ಜ್ಞಾನಿ. ನನಗಿಂತ ಮೊದಲು ಜೆರುಸಲೇಮನ್ನು ಆಳಿದ ಎಲ್ಲಾ ರಾಜರುಗಳಿಗಿಂತ ನಾನು ಜ್ಞಾನಿ. ನಾನು ಜ್ಞಾನವನ್ನೂ ವಿವೇಕವನ್ನೂ ಚೆನ್ನಾಗಿ ತಿಳಿದುಕೊಂಡಿರುವೆ” ಎಂದುಕೊಂಡೆನು.
17 ಜ್ಞಾನವನ್ನಲ್ಲದೆ ಮೂಢತನವನ್ನೂ ಬುದ್ಧಿಹೀನತೆಯನ್ನೂ ಗ್ರಹಿಸಿಕೊಳ್ಳಲು ನಿರ್ಧರಿಸಿದೆನು. ಆದರೆ ಇದು ಸಹ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥವೆಂದು ಕಲಿತುಕೊಂಡೆನು. 18 ಬಹು ಜ್ಞಾನದಿಂದ ಬಹು ಸಂಕಟ; ಹೆಚ್ಚು ತಿಳುವಳಿಕೆಯಿಂದ ಹೆಚ್ಚು ದುಃಖ.
ಸಭಾನಾಯಕರು
3 ನಾನು ಹೇಳುವ ಈ ಸಂಗತಿ ಸತ್ಯವಾದದ್ದು. ಅದೇನೆಂದರೆ, ಸಭಾಧ್ಯಕ್ಷನಾಗಲು ಬಹಳವಾಗಿ ಪ್ರಯತ್ನಿಸುವವನು ಒಳ್ಳೆಯ ಕೆಲಸವನ್ನೇ ಅಪೇಕ್ಷಿಸುವವನಾಗಿದ್ದಾನೆ. 2 ಅವನು ಜನರ ಟೀಕೆಗೆ ಒಳಗಾಗದಷ್ಟು ಉತ್ತಮನಾಗಿರಬೇಕು. ಅವನಿಗೆ ಒಬ್ಬಳೇ ಪತ್ನಿಯಿರಬೇಕು. ಅವನು ಜಿತೇಂದ್ರಿಯನೂ ಜ್ಞಾನಿಯೂ ಆಗಿರಬೇಕು; ಜನರ ಗೌರವಕ್ಕೆ ಪಾತ್ರನಾಗಿರಬೇಕು; ಜನರನ್ನು ತನ್ನ ಮನೆಗೆ ಸ್ವಾಗತಿಸಿ ಅವರಿಗೆ ಸಹಾಯ ಮಾಡಲು ಸಿದ್ಧನಾಗಿರಬೇಕು; ಒಳ್ಳೆಯ ಉಪದೇಶಕನಾಗಿರಬೇಕು; 3 ಮದ್ಯಪಾನದಲ್ಲಿ ಆಸ್ತಕನಾಗಿರಬಾರದು ಮತ್ತು ಹಿಂಸಾತ್ಮಕನಾಗಿರಬಾರದು. ಅವನು ಸಾತ್ವಿಕನೂ ಶಾಂತನೂ ಆಗಿರಬೇಕು; ಹಣದಾಸೆ ಉಳ್ಳವನಾಗಿರಬಾರದು. 4 ಅವನು ತನ್ನ ಸ್ವಂತ ಕುಟುಂಬಕ್ಕೆ ಒಳ್ಳೆಯ ನಾಯಕನಾಗಿರಬೇಕು. ಅವನ ಮಕ್ಕಳು ಅವನಿಗೆ ವಿಧೇಯರಾಗಿದ್ದು ಪೂರ್ಣ ಗೌರವವನ್ನು ನೀಡುವಂತಿರಬೇಕೆಂಬುದು ಇದರ ಅರ್ಥ. 5 (ತನ್ನ ಸ್ವಂತ ಕುಟುಂಬವನ್ನು ಆಳಲು ತಿಳಿಯದವನು ದೇವರ ಸಭೆಯನ್ನು ಪರಾಮರಿಸಲು ಸಮರ್ಥನಲ್ಲ.)
6 ಅವನು ಹೊಸ ವಿಶ್ವಾಸಿಯಾಗಿರಬಾರದು. ಹೊಸ ವಿಶ್ವಾಸಿಯನ್ನು ಸಭಾಧ್ಯಕ್ಷನನ್ನಾಗಿ ಮಾಡಿದರೆ, ಅವನು ಗರ್ವಿಷ್ಠನಾಗುವನು. ಸೈತಾನನು ತನ್ನ ಗರ್ವದ ನಿಮಿತ್ತ ಶಿಕ್ಷೆಗೆ ಒಳಗಾದಂತೆ ಇವನೂ ಶಿಕ್ಷೆಗೆ ಗುರಿಯಾಗುವನು. 7 ಸಭಾಧ್ಯಕ್ಷನು ಸಭೆಯಲ್ಲಿಲ್ಲದ ಜನರ ಗೌರವಕ್ಕೆ ಸಹ ಪಾತ್ರನಾಗಿರಬೇಕು. ಆಗ ಅವನು ಇತರರ ಟೀಕೆಗೆ ಗುರಿಯಾಗುವುದೂ ಇಲ್ಲ, ಸೈತಾನನ ವಂಚನೆಗೆ ಸಿಕ್ಕಿಬೀಳುವುದೂ ಇಲ್ಲ.
ವಿಶೇಷ ಸೇವಕರು
8 ಅದೇ ರೀತಿಯಲ್ಲಿ ಸಭೆಯಲ್ಲಿ ವಿಶೇಷ ಸೇವಕರಾದವರು ತಮ್ಮ ನಡತೆಯ ನಿಮಿತ್ತ ಇತರರಿಂದ ಗೌರವ ಹೊಂದಿದವರಾಗಿರಬೇಕು. ಯಥಾರ್ಥವಾಗಿ ಮಾತಾಡುವಂಥವರಾಗಿರಬೇಕು. ಅವರು ಮದ್ಯಪಾನದಲ್ಲಿ ಆಸ್ತಕರಾಗಿದ್ದು ತಮ್ಮ ಕಾಲವನ್ನು ಕಳೆಯುವವರಾಗಿರಬಾರದು; ಯಾವಾಗಲೂ ಇತರರನ್ನು ಮೋಸಗೊಳಿಸಿ ಶ್ರೀಮಂತರಾಗಲು ಪ್ರಯತ್ನಿಸುವವರಾಗಿರಬಾರದು; 9 ದೇವರು ನಮಗೆ ತಿಳಿಸಿಕೊಟ್ಟ ಸತ್ಯವನ್ನು ಶುದ್ಧ ಮನಸ್ಸಾಕ್ಷಿಯಿಂದ ಮಾಡುವವರಾಗಿರಬೇಕು. 10 ಅವರನ್ನು ನೀನು ಮೊದಲು ಪರೀಕ್ಷಿಸು. ಅವರು ಕಳಂಕರಹಿತರಾಗಿದ್ದರೆ, ಸೇವಕರಾಗಿ ಸೇವೆ ಮಾಡಬಹುದು.
11 ಇದೇ ರೀತಿಯಲ್ಲಿ ಸಭಾಸೇವಕಿಯರಾದ ಸ್ತ್ರೀಯರು ಜನರ ಗೌರವಕ್ಕೆ ಪಾತ್ರರಾಗಿರಬೇಕು. ಅವರು ಇತರ ಜನರ ಬಗ್ಗೆ ಕೆಟ್ಟದ್ದನ್ನು ಹೇಳುವಂಥವರಾಗಿರಬಾರದು. ಅವರು ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡಿರಬೇಕು; ಎಲ್ಲಾ ವಿಷಯಗಳಲ್ಲಿಯೂ ನಂಬಿಗಸ್ತರಾಗಿರಬೇಕು.
12 ಸಭಾಸೇವಕರು ಏಕ ಪತ್ನಿ ಉಳ್ಳವರಾಗಿರಬೇಕು. ಅವರು ತಮ್ಮ ಮಕ್ಕಳಿಗೆ ಮತ್ತು ಕುಟುಂಬಕ್ಕೆ ಒಳ್ಳೆಯ ನಾಯಕರಾಗಿರಬೇಕು. 13 ಯೋಗ್ಯ ಮಾರ್ಗದಲ್ಲಿ ಸೇವೆ ಮಾಡುವ ಜನರು ತಮಗೆ ಗೌರವಯುತವಾದ ಸ್ಥಾನವನ್ನು ಪಡೆಯುವರು. ಕ್ರಿಸ್ತ ಯೇಸುವಿನಲ್ಲಿ ತಮಗಿರುವ ನಂಬಿಕೆಯ ವಿಷಯದಲ್ಲಿ ಅವರು ಭರವಸೆ ಉಳ್ಳವರಾಗಿರುತ್ತಾರೆ.
ನಮ್ಮ ಜೀವನದ ರಹಸ್ಯ
14 ನಾನು ನಿನ್ನ ಬಳಿಗೆ ಬಹುಬೇಗ ಬರುವೆನೆಂಬ ಭರವಸೆ ನನಗಿದೆ. ಆದರೆ ಈಗ ನಾನು ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. 15 ನಂತರ ನಾನು ನಿನ್ನ ಬಳಿಗೆ ಬೇಗ ಬಾರದೆ ಇದ್ದರೂ, ದೇವರ ಮನೆಯಲ್ಲಿ ಜನರು ಮಾಡಲೇಬೇಕಾದ ಕಾರ್ಯಗಳ ಬಗ್ಗೆ ನಿನಗೆ ತಿಳಿದಿದೆ. ಆ ಮನೆಯು ಜೀವಂತ ದೇವರ ಸಭೆ. ಅದು ಸತ್ಯದ ಅಡಿಪಾಯವೂ ಆಧಾರವೂ ಆಗಿದೆ. 16 ನಿಸ್ಸಂದೇಹವಾಗಿಯೂ ನಮ್ಮ ಆರಾಧನಾ ಜೀವಿತದ ರಹಸ್ಯವು ಮಹೋನ್ನತವಾದದ್ದು:
ಕ್ರಿಸ್ತನು ಮಾನವ ದೇಹದಲ್ಲಿ ನಮಗೆ ಪ್ರತ್ಯಕ್ಷನಾದನು.
ಆತನೇ ಕ್ರಿಸ್ತನೆಂದು ಪವಿತ್ರಾತ್ಮನು ನಿರೂಪಿಸಿದನು.
ದೇವದೂತರಿಗೆ ಆತನು ಕಾಣಿಸಿಕೊಂಡನು.
ಆತನನ್ನು ಕುರಿತ ಸುವಾರ್ತೆಯನ್ನು ಜನಾಂಗಗಳವರಿಗೆಲ್ಲ (ಯೆಹೂದ್ಯರಲ್ಲದವರಿಗೆ) ಪ್ರಸಿದ್ಧಿಪಡಿಸಲಾಯಿತು.
ಲೋಕದಲ್ಲಿರುವ ಜನರು ಆತನಲ್ಲಿ ನಂಬಿಕೆಯಿಟ್ಟರು.
ಆತನು ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.
Kannada Holy Bible: Easy-to-Read Version. All rights reserved. © 1997 Bible League International