Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 5

ತಿಳಿಯದೆ ಮಾಡುವ ಪಾಪಗಳು

“ನ್ಯಾಯಾಧಿಕಾರಿಯು ತಿಳಿಸಬೇಕೆಂದು ಕೇಳಿದರೂ ಒಬ್ಬನು ತಾನು ಕಂಡದ್ದನ್ನಾಗಲಿ ಕೇಳಿದ್ದನ್ನಾಗಲಿ ತಿಳಿಸದೆ ಹೋದರೆ ಅವನು ಪಾಪಕ್ಕೆ ಗುರಿಯಾಗಿದ್ದಾನೆ.

“ಯಾವನಾದರೂ ಅಶುದ್ಧವಾದ ಕಾಡುಮೃಗ, ಪಶು, ಜಂತು ಇವುಗಳ ಹೆಣವನ್ನಾಗಲಿ ಅಥವಾ ಬೇರೆ ಯಾವ ಅಶುದ್ಧ ವಸ್ತುವನ್ನಾಗಲಿ ಮುಟ್ಟಿದರೆ ತಾನು ಮುಟ್ಟಿದ್ದು ತಿಳಿಯದಿದ್ದರೂ ಅವನು ಅಶುದ್ಧನೂ ದೋಷಿಯೂ ಆಗಿರುವನು.

“ಒಬ್ಬನು ಮತ್ತೊಬ್ಬನ ದೇಹದೊಳಗಿಂದ ಬರುವ ಯಾವುದಾದರೂ ಅಶುದ್ಧ ವಸ್ತುವನ್ನು ತಿಳಿಯದೆ ಮುಟ್ಟಿದರೂ, ತಿಳಿದುಬಂದಾಗ ಅವನು ದೋಷಿಯಾಗುವನು.

“ಒಬ್ಬನು ಆಲೋಚಿಸದೆ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಮಾತುಕೊಟ್ಟು ಮರೆತುಬಿಟ್ಟರೆ, ಅದು ಅವನ ನೆನಪಿಗೆ ಬಂದಾಗ ಅವನು ದೋಷಿಯಾಗುವನು. ಈ ವಿಷಯಗಳಲ್ಲಿ ಯಾವುದಾದರೊಂದರಲ್ಲಿ ದೋಷಿಯಾದರೆ, ಅವನು ತನ್ನ ತಪ್ಪನ್ನು ಒಪ್ಪಿಕೊಂಡು ಅರಿಕೆ ಮಾಡಬೇಕು. ಅವನು ದೋಷಪರಿಹಾರಕ್ಕಾಗಿ ಹೆಣ್ಣು ಕುರಿಮರಿಯನ್ನಾಗಲಿ ಹೆಣ್ಣು ಮೇಕೆಯನ್ನಾಗಲಿ ಯಜ್ಞವಾಗಿ ಸಮರ್ಪಿಸಬೇಕು. ಯಾಜಕನು ಅವನಿಗೋಸ್ಕರ ದೋಷಪರಿಹಾರ ಮಾಡುವನು.

“ಅವನು ಕುರಿಮರಿಯನ್ನು ಕೊಡುವುದಕ್ಕೆ ಶಕ್ತನಾಗಿಲ್ಲದಿದ್ದರೆ, ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಅವುಗಳಲ್ಲಿ ಒಂದನ್ನು ದೋಷಪರಿಹಾರಕ ಯಜ್ಞವನ್ನಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಸಮರ್ಪಿಸಬೇಕು. ಅವನು ಅವುಗಳನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಮೊದಲು ಒಂದು ಪಕ್ಷಿಯನ್ನು ದೋಷಪರಿಹಾರಕ ಯಜ್ಞವನ್ನಾಗಿ ಅರ್ಪಿಸುವನು. ಯಾಜಕನು ಪಕ್ಷಿಯ ಕುತ್ತಿಗೆಯನ್ನು ಮುರಿಯುವನು. ಆದರೆ ಯಾಜಕನು ಪಕ್ಷಿಯನ್ನು ಎರಡು ಭಾಗಗಳನ್ನಾಗಿ ವಿಭಾಗಿಸುವುದಿಲ್ಲ. ಯಾಜಕನು ದೋಷಪರಿಹಾರಕ ಯಜ್ಞದಿಂದ ರಕ್ತವನ್ನು ತೆಗೆದುಕೊಂಡು ಯಜ್ಞವೇದಿಕೆಯ ಬದಿಯಲ್ಲಿ ಚಿಮಿಕಿಸಬೇಕು. ಬಳಿಕ ಯಾಜಕನು ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು. ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ. 10 ತರುವಾಯ ಯಾಜಕನು ಎರಡನೆಯ ಪಕ್ಷಿಯನ್ನು ಸರ್ವಾಂಗಹೋಮದ ವಿಧಿಗಳಿಗನುಸಾರವಾಗಿ ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಆ ವ್ಯಕ್ತಿಯನ್ನು ಅವನು ಮಾಡಿದ ಪಾಪದಿಂದ ಶುದ್ಧಿಗೊಳಿಸುವನು. ಆಗ ದೇವರು ಅವನನ್ನು ಕ್ಷಮಿಸುವನು.

11 “ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತರುವುದಕ್ಕೆ ಅವನು ಶಕ್ತನಾಗಿಲ್ಲದಿದ್ದರೆ, ಆಗ ಅವನು ಎಂಟು ಬಟ್ಟಲು[a] ಶ್ರೇಷ್ಠ ಗೋಧಿಹಿಟ್ಟನ್ನು ತರಬೇಕು. ಇದು ಅವನ ಪಾಪಪರಿಹಾರಕ ಯಜ್ಞವಾಗಿರುವುದು. ಅವನು ಹಿಟ್ಟಿಗೆ ಎಣ್ಣೆಯನ್ನು ಹಾಕಬಾರದು. ಅವನು ಅದರ ಮೇಲೆ ಸುಗಂಧ ಧೂಪವನ್ನು ಇಡಬಾರದು, ಯಾಕೆಂದರೆ ಅದು ಪಾಪಪರಿಹಾರಕ ಯಜ್ಞವಾಗಿರುತ್ತದೆ. 12 ಅವನು ಹಿಟ್ಟನ್ನು ಯಾಜಕನ ಬಳಿಗೆ ತರಬೇಕು. ಯಾಜಕನು ಒಂದು ಹಿಡಿಹಿಟ್ಟನ್ನು ಅದರಿಂದ ತೆಗೆದು ದೇವಾರ್ಪಿತವಾಯಿತೆಂದು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿರುವುದು. ಅದು ಪಾಪಪರಿಹಾರಕ ಸಮರ್ಪಣೆಯಾಗಿದೆ. 13 ಹೀಗೆ ಆ ವ್ಯಕ್ತಿಯನ್ನು ಅವನ ದೋಷಗಳಿಂದ ಶುದ್ಧೀಕರಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು. ಧಾನ್ಯನೈವೇದ್ಯದಲ್ಲಿರುವಂತೆಯೇ ಯಜ್ಞದಲ್ಲಿ ಉಳಿದ ಭಾಗವು ಯಾಜಕನಿಗೆ ಸೇರಿದೆ. ಧಾನ್ಯಸಮರ್ಪಣೆಯಲ್ಲಿಯೂ ಉಳಿದ ಭಾಗವು ಯಾಜಕನಿಗೆ ಸೇರಿದೆ.”

14 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 15 “ಒಬ್ಬನು ಯೆಹೋವನ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮೀರಿ ನಡೆದು ತಿಳಿಯದೆ ತಪ್ಪು ಮಾಡಿದರೆ ಅವನು ಅಂಗದೋಷವಿಲ್ಲದ ಟಗರನ್ನು ತರಬೇಕು. ಇದು ಅವನಿಗಾಗಿ ಯೆಹೋವನಿಗೆ ಸಮರ್ಪಣೆಯಾಗುವ ದೋಷಪರಿಹಾರಕ ಯಜ್ಞ. ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಟಗರಿನ ಬೆಲೆಯನ್ನು ಗೊತ್ತುಮಾಡಬೇಕು.” 16 ಆ ವ್ಯಕ್ತಿಯೂ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮಾಡಿದ ಪಾಪಕ್ಕಾಗಿ ಈ ಬೆಲೆಯನ್ನು ತೆರಬೇಕು. ಇದಲ್ಲದೆ ಆ ಬೆಲೆಯ ಐದನೆಯ ಒಂದು ಭಾಗವನ್ನು ಸೇರಿಸಿ ಆ ಹಣವನ್ನು ಯಾಜಕನಿಗೆ ಕೊಡಬೇಕು. ಈ ರೀತಿಯಾಗಿ ಯಾಜಕನು ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವುದರ ಮೂಲಕ ಅವನನ್ನು ಶುದ್ಧಿಮಾಡುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.

17 “ಯಾವನಾದರೂ ಯೆಹೋವನು ನಿಷೇಧಿಸಿದ ಕಾರ್ಯಗಳಲ್ಲಿ ಯಾವುದಾದರೊಂದನ್ನು ಮಾಡಿ ದೋಷಕ್ಕೆ ಗುರಿಯಾಗಿದ್ದರೆ, ಅದು ಅವನಿಗೆ ತಿಳಿದಿಲ್ಲದಿದ್ದರೂ ಅವನು ಆ ಪಾಪಫಲವನ್ನು ಅನುಭವಿಸಬೇಕು. 18 ಅವನು ಅಂಗದೋಷವಿಲ್ಲದ ಮತ್ತು ಸರಿಯಾದ ಬೆಲೆಬಾಳುವ ಟಗರನ್ನು ಯಾಜಕನ ಬಳಿಗೆ ತರಬೇಕು. ಟಗರು ದೋಷಪರಿಹಾರಕ ಯಜ್ಞವಾಗಿರುವುದು. ಹೀಗೆ ಯಾಜಕನು ತಿಳಿಯದೆ ಮಾಡಿದ ಪಾಪದಿಂದ ಅವನನ್ನು ಶುದ್ಧಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು. 19 ಅವನು ದೋಷಿಯಾದ್ದರಿಂದ ಯೆಹೋವನಿಗೆ ದೋಷಪರಿಹಾರಕ ಯಜ್ಞವನ್ನು ಸಮರ್ಪಿಸಬೇಕು.”

ಕೀರ್ತನೆಗಳು 3-4

ದಾವೀದನು ತನ್ನ ಮಗನಾದ ಅಬ್ಷಾಲೋಮನಿಂದ ಓಡಿಹೋದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

ಯೆಹೋವನೇ, ನನಗೆ ವೈರಿಗಳು ಎಷ್ಟೋ ಹೆಚ್ಚಾಗಿದ್ದಾರೆ.
    ಎಷ್ಟೋ ಜನರು ನನಗೆ ಶತ್ರುಗಳಾಗಿ ನಿಂತಿದ್ದಾರೆ.
ಅನೇಕರು ನನ್ನ ಬಗ್ಗೆ ಮಾತಾಡುತ್ತಾ, “ದೇವರು ಅವನನ್ನು ರಕ್ಷಿಸುವುದಿಲ್ಲ!” ಎಂದು ಹೇಳುತ್ತಿದ್ದಾರೆ.

ಆದರೆ ಯೆಹೋವನೇ, ನೀನೇ ನನ್ನ ಗುರಾಣಿ.
    ನೀನೇ ನನ್ನ ಗೌರವಕ್ಕೆ ಆಧಾರ.
    ನನ್ನನ್ನು ಜಯವೀರನನ್ನಾಗಿ ಮಾಡು.

ನಾನು ಯೆಹೋವನಿಗೆ ಪ್ರಾರ್ಥಿಸಲು,
    ಆತನು ತನ್ನ ಪವಿತ್ರ ಪರ್ವತದಿಂದ ಉತ್ತರಿಸುವನು.

ಯೆಹೋವನು ನನ್ನನ್ನು ಕಾಪಾಡುವುದರಿಂದ
    ನಾನು ಸುಖವಾಗಿ ನಿದ್ರಿಸಿ ಎಚ್ಚರಗೊಳ್ಳುವೆನು.
ಸಾವಿರಾರು ಶತ್ರು ಸೈನಿಕರು ನನ್ನನ್ನು ಮುತ್ತಿಕೊಂಡರೂ
    ನನಗೆ ಭಯವಿಲ್ಲ.

ಯೆಹೋವನೇ, ಎದ್ದೇಳು!
    ನನ್ನ ದೇವರೇ, ಬಂದು ನನ್ನನ್ನು ರಕ್ಷಿಸು!
ನೀನು ನನ್ನ ಶತ್ರುಗಳ ದವಡೆಗೆ ಬಡಿದರೆ
    ಅವರ ಹಲ್ಲುಗಳು ಉದುರಿಹೋಗುತ್ತವೆ.

ಯೆಹೋವನು ತನ್ನ ಜನರನ್ನು ರಕ್ಷಿಸಬಲ್ಲನು.
    ಯೆಹೋವನೇ, ದಯವಿಟ್ಟು ನಿನ್ನ ಜನರಿಗೆ ಒಳ್ಳೆಯದನ್ನು ಮಾಡು.

ರಚನೆಗಾರ: ದಾವೀದ.

ನೀತಿಸ್ವರೂಪನಾದ ದೇವರೇ, ನನ್ನ ಪ್ರಾರ್ಥನೆಗೆ ಉತ್ತರಿಸು!
    ನನ್ನ ಮೊರೆಗೆ ಕಿವಿಗೊಟ್ಟು ನನ್ನನ್ನು ಕರುಣಿಸು!
ಇಕ್ಕಟ್ಟುಗಳಿಂದ ನನ್ನನ್ನು ಬಿಡಿಸಿ
    ಸುರಕ್ಷಿತ ಸ್ಥಳದಲ್ಲಿ ಸೇರಿಸು.

ಜನರೇ, ಇನ್ನೆಷ್ಟರವರೆಗೆ ನನ್ನ ಬಗ್ಗೆ ಕೆಟ್ಟದ್ದನ್ನು ಹೇಳುವಿರಿ?
    ಅಸತ್ಯವನ್ನೇ ಪ್ರೀತಿಸುತ್ತಾ, ನನ್ನ ಮೇಲೆ ಹೊರಿಸಲು ಸುಳ್ಳಪವಾದಗಳಿಗಾಗಿ ಯಾಕೆ ಹುಡುಕುತ್ತಿದ್ದೀರಿ?

ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂಬುದು ನಿಮಗೆ ತಿಳಿದಿರಲಿ.
    ನಾನು ಮೊರೆಯಿಡುವಾಗಲೆಲ್ಲಾ ಆತನು ನನಗೆ ಕಿವಿಗೊಡುತ್ತಾನೆ.

ನೀವು ಕೋಪದಿಂದಿರುವಾಗ ಎಚ್ಚರಿಕೆಯಾಗಿದ್ದು ಪಾಪಮಾಡದಿರಿ.
    ಹಾಸಿಗೆಯ ಮೇಲಿರುವಾಗ ಹೃದಯಗಳನ್ನು ಪರೀಕ್ಷಿಸಿಕೊಳ್ಳಿರಿ.
ದೇವರಿಗೆ ಯೋಗ್ಯವಾದ ಯಜ್ಞಗಳನ್ನು ಅರ್ಪಿಸಿರಿ;
    ಯೆಹೋವನಲ್ಲಿಯೇ ಭರವಸೆಯಿಡಿರಿ!

“ನಮಗೆ ಒಳ್ಳೆಯದನ್ನು ಯಾರು ತೋರಿಸುವರು?
    ಯೆಹೋವನೇ, ನಿನ್ನ ಪ್ರಕಾಶಮಾನವಾದ ಮುಖವನ್ನು ನಾವು ನೋಡುವಂತಾಗಲಿ!” ಎಂದು ಅನೇಕರು ಅಂದುಕೊಳ್ಳುವರು.
ಧಾನ್ಯಯವೂ ದ್ರಾಕ್ಷಿಯೂ ಸಮೃದ್ಧಿಯಾಗಿ ಬೆಳೆದ ಸುಗ್ಗಿಕಾಲದಲ್ಲಿ ಜನರಲ್ಲಿರುವ ಸಂತೋಷಕ್ಕಿಂತಲೂ ಅಧಿಕವಾದ ಆನಂದವನ್ನು ನೀನು ನನ್ನ ಹೃದಯದಲ್ಲಿ ತುಂಬಿರುವೆ.
ನಾನು ಹಾಸಿಗೆಯ ಮೇಲೆ ಸಮಾಧಾನದಿಂದ ನಿದ್ರಿಸುವೆನು.
    ಯಾಕೆಂದರೆ, ಯೆಹೋವನೇ, ನನ್ನನ್ನು ಕಾಪಾಡುವಾತನು ನೀನೇ.

ಜ್ಞಾನೋಕ್ತಿಗಳು 20

20 ದ್ರಾಕ್ಷಾರಸವು ಪರಿಹಾಸ್ಯಕ್ಕೂ ಮದ್ಯವು ಕೂಗಾಟಕ್ಕೂ ನಡೆಸುತ್ತವೆ. ಅಮಲೇರಿಸಿಕೊಳ್ಳುವುದು ಮೂರ್ಖತನ.

ರಾಜನ ಕೋಪವು ಸಿಂಹದ ಘರ್ಜನೆಯಂತಿದೆ. ರಾಜನನ್ನು ಕೋಪಗೊಳಿಸಿದರೆ ಪ್ರಾಣಕ್ಕೆ ಹಾನಿ.

ವಾದದಿಂದ ದೂರವಿರುವವನು ಸನ್ಮಾನಕ್ಕೆ ಯೋಗ್ಯನು. ಮೂಢನಾದರೊ ಜಗಳಕ್ಕೇ ಆತುರ ಪಡುವನು.

ಸೋಮಾರಿಯು ಬಿತ್ತನೆಕಾಲದಲ್ಲಿ ಬೀಜ ಬಿತ್ತುವುದಿಲ್ಲ; ಸುಗ್ಗಿಕಾಲದಲ್ಲಿ ಅವನಿಗೆ ಬೆಳೆಯೂ ಇರುವುದಿಲ್ಲ.

ಬೇರೊಬ್ಬನ ಆಲೋಚನೆಗಳನ್ನು ನೋಡಲು ಸಾಧ್ಯವಿಲ್ಲ; ಅವು ಆಳವಾದ ನೀರಿನಂತಿವೆ; ಆದರೆ ಅವುಗಳನ್ನು ವಿವೇಕಿಯು ಅರ್ಥಮಾಡಿಕೊಳ್ಳಬಲ್ಲನು.

ಅನೇಕರು ತಾವು ನಂಬಿಗಸ್ತರೆಂದು ಹೇಳಿಕೊಳ್ಳುತ್ತಾರೆ. ಆದರೆ ನಿಜವಾಗಿಯೂ ನಂಬಿಗಸ್ತನಾಗಿರುವ ಒಬ್ಬನನ್ನು ಕಂಡುಕೊಳ್ಳುವುದು ಬಹುಕಷ್ಟ.

ಸಧರ್ಮಿಯು ಒಳ್ಳೆಯ ರೀತಿಯಲ್ಲಿ ಜೀವಿಸುತ್ತಾನೆ; ಅವನ ಮಕ್ಕಳಿಗೆ ಆಶೀರ್ವಾದವಾಗುವುದು.

ರಾಜನು ನ್ಯಾಯತೀರ್ಪು ಮಾಡುವಾಗ ತನ್ನ ಕಣ್ಣುಗಳಿಂದ ದುಷ್ಟತನವನ್ನು ಶೋಧಿಸುವನು.

ಯಾವನಾದರೂ, “ನನ್ನ ಹೃದಯವನ್ನು ಶುದ್ಧೀಕರಿಸಿರುವೆ. ನಾನು ಪಾಪರಹಿತನಾಗಿರುವೆ” ಎಂದು ಹೇಳಲು ಸಾಧ್ಯವೇ?

10 ಮೋಸದ ತಕ್ಕಡಿಗಳೂ ಮೋಸದ ಅಳತೆಮಾಪಕಗಳೂ ಯೆಹೋವನಿಗೆ ಅಸಹ್ಯ.

11 ಬಾಲಕನೊಬ್ಬನು ಒಳ್ಳೆಯವನೋ ಕೆಟ್ಟವನೋ ಎಂಬುದು ಅವನ ನಡತೆಯಿಂದಲೇ ತೋರಿಬರುವುದು.

12 ನಮಗೆ ನೋಡಲು ಕಣ್ಣುಗಳಿವೆ. ಕೇಳಲು ಕಿವಿಗಳಿವೆ. ಅವುಗಳನ್ನು ನಮಗೋಸ್ಕರ ಉಂಟುಮಾಡಿದವನು ಯೆಹೋವನೇ.

13 ನಿದ್ರಾನಿರತನಾಗಿರಬೇಡ, ಬಡವನಾಗುವೆ. ನಿನ್ನ ಸಮಯವನ್ನು ದುಡಿಯಲು ಉಪಯೋಗಿಸಿಕೊಂಡರೆ ನಿನಗೆ ಊಟಕ್ಕೆ ಬೇಕಾದಷ್ಟಿರುವುದು.

14 ನಿನ್ನ ವಸ್ತುವನ್ನು ಖರೀದಿಮಾಡುವವನು, “ಇದು ಚೆನ್ನಾಗಿಲ್ಲ! ಬೆಲೆಯೂ ಜಾಸ್ತಿ!” ಎಂದು ಹೇಳುವನು. ಬಳಿಕ ತನ್ನ ಚೌಕಾಸಿಯ ಬಗ್ಗೆ ಬೇರೆಯವರ ಮುಂದೆ ಹೊಗಳಿಕೊಳ್ಳುವನು.

15 ಬಂಗಾರಕ್ಕಿಂತಲೂ ಮಾಣಿಕ್ಯದ ಸಮೃದ್ಧಿಗಿಂತಲೂ ಜ್ಞಾನದ ಮಾತುಗಳನ್ನಾಡುವ ತುಟಿಗಳು ಅಮೂಲ್ಯವಾಗಿವೆ.

16 ಬೇರೊಬ್ಬನ ಸಾಲಕ್ಕೆ ನೀನು ಜಾಮೀನಾದರೆ, ನಿನ್ನ ಅಂಗಿಯನ್ನು ಕಳೆದುಕೊಳ್ಳುವೆ.

17 ಅನ್ಯಾಯವಾಗಿ ಗಳಿಸಿದ ಆಹಾರವು ಆರಂಭದಲ್ಲಿ ರುಚಿಕರವಾಗಿದ್ದರೂ ಕೊನೆಯಲ್ಲಿ ಬಾಯಿತುಂಬ ಮರಳಿನಂತಿರುವುದು.

18 ಒಳ್ಳೆಯ ಸಮಾಲೋಚನೆಗಳೊಡನೆ ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ನೀನು ಯುದ್ಧವನ್ನು ಆರಂಭಿಸುವುದಾಗಿದ್ದರೆ, ಮಾರ್ಗದರ್ಶನಕ್ಕಾಗಿ ಒಳ್ಳೆಯವರನ್ನು ಹುಡುಕು.

19 ಬೇರೆಯವರ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುವವನನ್ನು ನಂಬಬೇಡ; ಅತಿಯಾಗಿ ಮಾತಾಡುವವನ ಸ್ನೇಹಿತನೂ ಆಗಬೇಡ.

20 ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನ ಜೀವಿತವು ಕತ್ತಲೆಯಲ್ಲಿ ಆರಿಹೋದ ದೀಪದಂತೆ ಕೊನೆಗೊಳ್ಳುವುದು.

21 ಸುಲಭವಾಗಿ ಬಾಚಿಕೊಂಡ ಸ್ವಾಸ್ತ್ಯವು ಕೊನೆಯಲ್ಲಿ ಆರ್ಶೀವಾದದಾಯಕವಾಗಿರುವುದಿಲ್ಲ.

22 “ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡುತ್ತೇನೆ” ಎಂದು ಹೇಳಬೇಡ. ಯೆಹೋವನಿಗಾಗಿ ಕಾದುಕೊಂಡಿರು! ಆತನು ನಿನ್ನನ್ನು ಜಯಶಾಲಿಯನ್ನಾಗಿ ಮಾಡುವನು.

23 ಯೆಹೋವನಿಗೆ ಅನ್ಯಾಯದ ಅಳತೆಮಾಪಕವು ಅಸಹ್ಯ; ಮೋಸದ ತಕ್ಕಡಿಗಳು ಅಪರಾಧ.

24 ಭವಿಷ್ಯತ್ತನ್ನು ನಿರ್ಣಯಿಸುವವನು ಯೆಹೋವನೇ ಆಗಿರುವಾಗ, ತನ್ನ ಭವಿಷ್ಯತ್ತನ್ನು ಅರ್ಥಮಾಡಿಕೊಳ್ಳಲು ಯಾರಿಗೆ ಸಾಧ್ಯ?

25 ನೀನು ದೇವರಿಗೆ ಹರಕೆ ಮಾಡುವ ಮೊದಲೇ ಎಚ್ಚರಿಕೆಯಿಂದ ಯೋಚಿಸು. ಹರಕೆ ಮಾಡಿದ ಮೇಲೆ ಹರಕೆ ಮಾಡಬಾರದಾಗಿತ್ತು ಎಂದು ಹೇಳಬೇಡ.

26 ಜ್ಞಾನಿಯಾದ ರಾಜನಿಗೆ ಕೆಡುಕರು ಯಾರೆಂಬುದು ಗೊತ್ತಾಗುವುದು; ಅವನು ಅವರನ್ನು ದಂಡಿಸುವನು.

27 ಮನುಷ್ಯನ ಆತ್ಮ ಯೆಹೋವನ ದೀಪವಾಗಿದೆ; ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ.

28 ರಾಜನು ನಂಬಿಗಸ್ತನಾಗಿಯೂ ಪ್ರೀತಿಯುಳ್ಳವನಾಗಿಯೂ ಇದ್ದರೆ, ಅವನ ಅಧಿಕಾರ ಉಳಿದುಕೊಳ್ಳುವುದು; ಅವನ ಆಡಳಿತ ಮುಂದುವರಿಯುವುದು.

29 ಯುವಕನ ಶಕ್ತಿ ಪ್ರಶಂಸೆಗೆ ಯೋಗ್ಯ. ವೃದ್ಧನ ನರೆಕೂದಲು ಗೌರವಕ್ಕೆ ಪಾತ್ರ.

30 ದಂಡನೆಯು ತಪ್ಪನ್ನು ನಿಲ್ಲಿಸುತ್ತದೆ; ನೋವು ವ್ಯಕ್ತಿಯನ್ನು ಬದಲಾಯಿಸುತ್ತದೆ.

ಕೊಲೊಸ್ಸೆಯವರಿಗೆ 3

ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ

ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ. ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ. ನಿಮ್ಮ ಹಳೆಯ ಸ್ವಭಾವ ಸತ್ತುಹೋಗಿದೆ, ನಿಮ್ಮ ಹೊಸ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿದೆ. ಕ್ರಿಸ್ತನೇ ನಿಮ್ಮ ಜೀವ, ಆತನು ಮರಳಿ ಪ್ರತ್ಯಕ್ಷನಾದಾಗ, ನೀವೂ ಆತನ ಪ್ರಭಾವದೊಂದಿಗೆ ಪ್ರತ್ಯಕ್ಷರಾಗುವಿರಿ.

ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ. ಇವು ದೇವರನ್ನು ಕೋಪಗೊಳಿಸುತ್ತವೆ. ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.

ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ. 10 ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ. 11 ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.

ಇತರರೊಂದಿಗೆ ನಿಮ್ಮ ಹೊಸ ಜೀವನ

12 ದೇವರು ನಿಮ್ಮನ್ನು ಆರಿಸಿಕೊಂಡಿದ್ದಾನೆ ಮತ್ತು ನಿಮ್ಮನ್ನು ತನ್ನ ಪವಿತ್ರ ಜನರನ್ನಾಗಿಸಿದ್ದಾನೆ. ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. 13 ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಬೇರೆಯವರ ಮೇಲೆ ಹೇಳುವಂಥ ದೂರುಗಳು ನಿಮ್ಮಲ್ಲಿದ್ದರೂ ಕ್ಷಮಿಸಿಬಿಡಿರಿ. ಪ್ರಭುವು ನಿಮ್ಮನ್ನು ಕ್ಷಮಿಸಿದ್ದರಿಂದ ನೀವೂ ಇತರರನ್ನು ಕ್ಷಮಿಸಿರಿ. 14 ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯು ನಿಮ್ಮನ್ನೆಲ್ಲರನ್ನೂ ಸಂಪೂರ್ಣವಾದ ಒಗ್ಗಟ್ಟಿನಲ್ಲಿರಿಸುವುದು. 15 ಕ್ರಿಸ್ತನು ನೀಡುವ ಶಾಂತಿಯು ನಿಮ್ಮ ಆಲೋಚನಗಳನ್ನೆಲ್ಲ ತನ್ನ ಹತೋಟಿಯಲ್ಲಿಟ್ಟುಕೊಂಡಿರಲಿ. ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರಾದ್ದರಿಂದ ಶಾಂತಿಯಿಂದಿರಲು ಕರೆಯಲ್ಪಟ್ಟಿದ್ದೀರಿ. ಯಾವಾಗಲು ಕೃತಜ್ಞರಾಗಿರಿ.

16 ಕ್ರಿಸ್ತನ ಉಪದೇಶವು ನಿಮ್ಮ ಅಂತರಂಗದಲ್ಲಿ ಸಮೃದ್ಧವಾಗಿ ನೆಲಸಿರಲಿ. ನೀವು ದೇವರಿಂದ ಕಲಿತುಕೊಂಡದ್ದನ್ನು ಉಪದೇಶಿಸುವುದಕ್ಕೂ ಒಬ್ಬರನ್ನೊಬ್ಬರು ಬಲಪಡಿಸುವುದಕ್ಕೂ ಉಪಯೋಗಿಸಿರಿ. ನಿಮ್ಮ ಹೃದಯದಲ್ಲಿ ದೇವರಿಗೆ ಕೃತಜ್ಞರಾಗಿದ್ದು ಹಾಡುಗಳನ್ನು, ಕೀರ್ತನೆಗಳನ್ನು, ಸಂಗೀತಗಳನ್ನು ಹಾಡಿರಿ. 17 ನೀವು ನುಡಿಯಿಂದಾಗಲಿ, ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಿಮ್ಮ ಪ್ರಭುವಾದ ಯೇಸುವಿಗಾಗಿ ಮಾಡಿರಿ. ನೀವು ಏನು ಮಾಡಿದರೂ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

ಮನೆಯವರೊಂದಿಗೆ ನಿಮ್ಮ ಹೊಸ ಜೀವನ

18 ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ವಿಧೇಯರಾಗಿರಿ. ಇದು ಪ್ರಭುವಿನಲ್ಲಿ ನೀವು ಮಾಡುವ ಯೋಗ್ಯ ಕಾರ್ಯವಾಗಿದೆ.

19 ಪುರುಷರೇ, ನಿಮ್ಮ ಪತ್ನಿಯರನ್ನು ಪ್ರೀತಿಸಿ, ಅವರೊಡನೆ ಸಾತ್ವಿಕರಾಗಿರಿ.

20 ಮಕ್ಕಳೇ, ನಿಮ್ಮ ತಂದೆತಾಯಿಗಳಿಗೆ ಎಲ್ಲಾ ವಿಷಯಗಳಲ್ಲಿಯೂ ವಿಧೇಯರಾಗಿರಿ. ಇದು ಪ್ರಭುವಿಗೆ ಸಂತೋಷವನ್ನು ಉಂಟುಮಾಡುವುದು.

21 ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರುಕುಳ ಕೊಡಬೇಡಿ. ಇಲ್ಲವಾದರೆ ಅವರು ಕುಂದಿಹೋಗುವರು.

22 ಸೇವಕರೇ, ಎಲ್ಲಾ ಕಾರ್ಯಗಳಲ್ಲಿಯೂ ನಿಮ್ಮ ಯಜಮಾನರಿಗೆ ವಿಧೇಯರಾಗಿರಿ. ಅವರ ಮೆಚ್ಚಿಕೆಯನ್ನು ಗಳಿಸುವುದಕ್ಕಾಗಿ ಅವರ ಕಣ್ಣೆದುರಿನಲ್ಲಿ ಮಾತ್ರ ಸೇವೆ ಮಾಡದಿರಿ. ನೀವು ಪ್ರಭುವಿಗೆ ಭಯಪಡುವುದರಿಂದ ನಿಮ್ಮ ಯಜಮಾನರಿಗೆ ಯಥಾರ್ಥವಾಗಿ ಸೇವೆ ಮಾಡಿರಿ. 23 ಎಲ್ಲಾ ಕಾರ್ಯಗಳನ್ನು ನಿಮ್ಮಿಂದಾದಷ್ಟು ಅತ್ಯುತ್ತಮವಾಗಿಯೇ ಮಾಡಿರಿ. ಯಾವುದೇ ಕಾರ್ಯವನ್ನಾಗಲಿ ಜನರಿಗಾಗಿ ಮಾಡದೆ ಪ್ರಭುವಿಗಾಗಿ ಮಾಡಿರಿ. 24 ಪ್ರಭುವಿನಿಂದಲೇ ನಿಮಗೆ ಪ್ರತಿಫಲ ದೊರೆಯುತ್ತದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ. ಆತನು ತನ್ನ ಜನರಿಗೆ ಮಾಡಿದ ವಾಗ್ದಾನವು ನಿಮ್ಮ ನೆನಪಿನಲ್ಲಿರಲಿ. 25 ಅನ್ಯಾಯ ಮಾಡುವವನು ಅದಕ್ಕೆ ತಕ್ಕ ಶಿಕ್ಷೆಯನ್ನು ಪಡೆಯುವನು. ಪ್ರಭುವಿನಲ್ಲಿ ಪಕ್ಷಪಾತವಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International