Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 9

ದೇವರು ಯಾಜಕರನ್ನು ಸ್ವೀಕರಿಸಿದನು

ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಇಸ್ರೇಲರ ಹಿರಿಯರನ್ನೂ ಕರೆದನು. ಮೋಶೆಯು ಆರೋನನಿಗೆ ಹೀಗೆಂದನು; “ಒಂದು ಎಳೆಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊ. ಆ ಪಶುಗಳಲ್ಲಿ ಏನೂ ದೋಷವಿರಬಾರದು. ಹೋರಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಟಗರನ್ನು ಸರ್ವಾಂಗಹೋಮವಾಗಿಯೂ ಯೆಹೋವನಿಗೆ ಸಮರ್ಪಿಸು. ಇಸ್ರೇಲರಿಗೆ ಹೀಗೆ ಹೇಳು: ‘ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ತೆಗೆದುಕೊಳ್ಳಿರಿ; ಸರ್ವಾಂಗಹೋಮಕ್ಕಾಗಿ ಕರುವನ್ನೂ ಕುರಿಮರಿಯನ್ನೂ ತೆಗೆದುಕೊಳ್ಳಿರಿ. ಕರುವೂ ಕುರಿಮರಿಯೂ ಒಂದು ವರ್ಷದ್ದಾಗಿರಬೇಕು. ಆ ಪ್ರಾಣಿಗಳಲ್ಲಿ ಯಾವ ದೋಷವಿರಬಾರದು. ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊಂಡು ಎಣ್ಣೆ ಬೆರೆಸಿದ ಧಾನ್ಯಸಮರ್ಪಣೆಗಳೊಡನೆ ಅವುಗಳನ್ನು ಯೆಹೋವನ ಮುಂದೆ ಅರ್ಪಿಸಿರಿ. ಯಾಕೆಂದರೆ ಈ ದಿನ ಯೆಹೋವನು ನಿಮಗೆ ಪ್ರತ್ಯಕ್ಷವಾಗುವನು.’”

ಆದ್ದರಿಂದ ಜನರೆಲ್ಲರೂ ದೇವದರ್ಶನಗುಡಾರಕ್ಕೆ ಬಂದರು. ಮೋಶೆ ಆಜ್ಞಾಪಿಸಿದ ವಸ್ತುಗಳನ್ನು ಅವರು ತಂದರು. ಎಲ್ಲಾ ಜನರು ಯೆಹೋವನ ಸನ್ನಿಧಿಯಲ್ಲಿ ನಿಂತರು. ಮೋಶೆ, “ಯೆಹೋವನು ಆಜ್ಞಾಪಿಸಿದವುಗಳನ್ನು ನೀವು ಮಾಡಿದರೆ ಯೆಹೋವನ ಮಹಿಮೆಯು ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.

ಮೋಶೆಯು ಆರೋನನಿಗೆ, “ಯೆಹೋವನು ಆಜ್ಞಾಪಿಸಿದವುಗಳನ್ನು ಮಾಡು. ಯಜ್ಞವೇದಿಕೆಯ ಬಳಿಗೆ ಹೋಗಿ ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಅರ್ಪಿಸು. ನಿನ್ನನ್ನೂ ಜನರನ್ನೂ ಶುದ್ಧಿಮಾಡುವ ಆ ಕಾರ್ಯಗಳನ್ನು ಮಾಡು. ಜನರು ತಂದದ್ದನ್ನು ತೆಗೆದುಕೊಂಡು ಅವರಿಗಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿ ಅವರನ್ನು ಶುದ್ಧಿಮಾಡು” ಎಂದು ಹೇಳಿದನು.

ಆದ್ದರಿಂದ ಆರೋನನು ಯಜ್ಞವೇದಿಕೆಯ ಬಳಿಗೆ ಹೋದನು. ಅವನು ತನಗೋಸ್ಕರ ಪಾಪಪರಿಹಾರಕ ಯಜ್ಞವಾಗಿ ಎಳೆ ಹೋರಿಯನ್ನು ವಧಿಸಿದನು. ಆರೋನನ ಪುತ್ರರು ಅದರ ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನ ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯಜ್ಞವೇದಿಕೆಯ ಮೂಲೆಗಳಿಗೆ ಹಚ್ಚಿದನು. ಬಳಿಕ ಆರೋನನು ರಕ್ತವನ್ನು ಯಜ್ಞವೇದಿಕೆಯ ಬುಡದಲ್ಲಿ ಸುರಿದನು. 10 ಆರೋನನು ಪಾಪಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಮತ್ತು ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನು ತೆಗೆದುಕೊಂಡನು. ಅವನು ಆ ವಸ್ತುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಮಾಡಿದನು. 11 ಬಳಿಕ ಆರೋನನು ಮಾಂಸವನ್ನು ಮತ್ತು ಚರ್ಮವನ್ನು ಪಾಳೆಯದ ಹೊರಗೆ ಬೆಂಕಿಯಲ್ಲಿ ಸುಟ್ಟುಹಾಕಿದನು.

12 ನಂತರ ಆರೋನನು ಸರ್ವಾಂಗಹೋಮದ ಪಶುವನ್ನು ವಧಿಸಿದನು. ಆರೋನನ ಪುತ್ರರು ಅದರ ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನು ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಿದನು. 13 ಆರೋನನ ಪುತ್ರರು ಸರ್ವಾಂಗಹೋಮದ ಪಶುವಿನ ಮಾಂಸದ ತುಂಡುಗಳನ್ನು ಮತ್ತು ತಲೆಯನ್ನು ಆರೋನನಿಗೆ ಕೊಟ್ಟರು. ಬಳಿಕ ಆರೋನನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. 14 ಆರೋನನು ಸರ್ವಾಂಗಹೋಮದ ಪಶುವಿನ ಒಳಗಿನ ಭಾಗಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು.

15 ತರುವಾಯ ಆರೋನನು ಜನರು ಅರ್ಪಿಸುವ ಪಶುಗಳನ್ನು ತರಿಸಿದನು. ಅವನು ಜನರಿಗಾಗಿ ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ವಧಿಸಿದನು. ಅವನು ಮೊದಲಿನ ಪಶುವನ್ನು ಸಮರ್ಪಿಸಿದ ರೀತಿಯಲ್ಲಿ ಪಾಪಪರಿಹಾರಕ್ಕಾಗಿ ಹೋತವನ್ನು ಸಮರ್ಪಿಸಿದನು. 16 ಆರೋನನು ಸರ್ವಾಂಗಹೋಮಕ್ಕಾಗಿ ಪಶುವನ್ನು ತರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಅರ್ಪಿಸಿದನು. 17 ಆರೋನನು ಧಾನ್ಯನೈವೇದ್ಯವನ್ನು ಯಜ್ಞವೇದಿಕೆಯ ಬಳಿಗೆ ತಂದನು. ಅವನು ಒಂದು ಹಿಡಿ ಧಾನ್ಯವನ್ನು ತೆಗೆದುಕೊಂಡು ದಿನಂಪ್ರತಿ ಹೊತ್ತಾರೆಯ ವೇಳೆಯಲ್ಲಿ ಅರ್ಪಿಸುವ ಯಜ್ಞವಲ್ಲದೆ ಇದನ್ನೂ ಕೂಡ ಅರ್ಪಿಸಿದನು.

18 ಆರೋನನು ಜನರಿಗಾಗಿ ಸಮಾಧಾನಯಜ್ಞವಾದ ಹೋರಿಯನ್ನೂ ಟಗರನ್ನೂ ವಧಿಸಿದನು. ಆರೋನನ ಪುತ್ರರು ಅವುಗಳ ರಕ್ತವನ್ನು ಅವನ ಬಳಿಗೆ ತಂದರು. ಆರೋನನು ಈ ರಕ್ತವನ್ನು ಯಜ್ಞವೇದಿಕೆಯ ಸುತ್ತಲೂ ಚಿಮಿಕಿಸಿದನು. 19 ಆರೋನನ ಪುತ್ರರು ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಆರೋನನ ಬಳಿಗೆ ತಂದರು. ಇವರು ಬಾಲದ ಕೊಬ್ಬನ್ನೂ ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೂ ಮೂತ್ರಪಿಂಡಗಳನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ತಂದರು. 20 ಅವರು ಈ ಕೊಬ್ಬಿನ ಭಾಗಗಳನ್ನು ಹೋರಿಯ ಮತ್ತು ಟಗರಿನ ಎದೆಯ ಭಾಗಗಳ ಮೇಲೆ ಇಟ್ಟರು. ಆರೋನನು ಅವೆಲ್ಲವನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು. 21 ಮೋಶೆ ಆಜ್ಞಾಪಿಸಿದಂತೆ ಎದೆಯ ಭಾಗಗಳನ್ನು ಮತ್ತು ಬಲ ತೊಡೆಯನ್ನು ಆರೋನನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.

22 ತರುವಾಯ ಆರೋನನು ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆರೋನನು ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿ ಮುಗಿಸಿದ ನಂತರ ಯಜ್ಞವೇದಿಕೆಯಿಂದ ಕೆಳಗಿಳಿದು ಬಂದನು.

23 ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು. 24 ಯೆಹೋವನ ಬಳಿಯಿಂದ ಬೆಂಕಿಯು ಬಂದು ವೇದಿಕೆಯ ಮೇಲಿದ್ದ ಸರ್ವಾಂಗಹೋಮವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿದಾಗ, ಅವರು ಆನಂದದಿಂದ ಆರ್ಭಟಿಸಿ ಅಡ್ಡಬಿದ್ದು ನಮಸ್ಕರಿಸಿದರು.

ಕೀರ್ತನೆಗಳು 10

10 ಯೆಹೋವನೇ, ನೀನು ಬಹುದೂರವಾಗಿರುವುದೇಕೆ?
    ಕಷ್ಟಕಾಲದಲ್ಲಿ ನೀನು ಮರೆಯಾಗಿರುವುದೇಕೆ?
ದುಷ್ಟರು ಗರ್ವಿಷ್ಠರಾಗಿ ಬಡವರನ್ನು ಹಿಂದಟ್ಟಿ ಹೋಗುತ್ತಿದ್ದರೆ,
    ಆ ದುಷ್ಟರ ಕುಯುಕ್ತಿಯಲ್ಲಿ ಅವರು ಸಿಕ್ಕಿಬೀಳುವರು.
ಕೆಡುಕರು ತಮ್ಮ ಇಷ್ಟವಾದ ವಸ್ತುಗಳ ಬಗ್ಗೆ ಕೊಚ್ಚಿಕೊಳ್ಳುವರು.
    ದುರಾಶೆಯುಳ್ಳ ಅವರು ದೇವರನ್ನು ಶಪಿಸುತ್ತಾ ಆತನ ಮೇಲೆ ತಮಗಿರುವ ದ್ವೇಷವನ್ನು ತೋರ್ಪಡಿಸಿಕೊಳ್ಳುವರು.
ಆ ದುಷ್ಟರು ಗರ್ವದಿಂದ ದೇವರನ್ನು ತೊರೆದುಬಿಡುವರು;
    ದುಷ್ಟಾಲೋಚನೆಗಳನ್ನು ಮಾಡುತ್ತಾ ದೇವರಿಲ್ಲದಂತೆ ವರ್ತಿಸುವರು.
ಅವರು ಕುಯುಕ್ತಿಗಳನ್ನೇ ಮಾಡುತ್ತಾ ದೇವರ ಕಟ್ಟಳೆಗಳನ್ನೂ ಬುದ್ಧಿಮಾತುಗಳನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.[a]
    ದೇವರ ವೈರಿಗಳು ಆತನ ಉಪದೇಶಗಳನ್ನು ಕಡೆಗಣಿಸುವರು.
ಅವರು, “ನಮ್ಮನ್ನು ಯಾವುದೂ ಕದಲಿಸದು;
    ನಮಗೆ ಕೇಡಾಗದಿರುವುದರಿಂದ ಸಂತೋಷವಾಗಿರೋಣ” ಎಂದುಕೊಂಡಿದ್ದಾರೆ.
ಅವರು ಯಾವಾಗಲೂ ಶಪಿಸುತ್ತಾರೆ;
    ಕೆಟ್ಟ ಮಾತುಗಳನ್ನು ಆಡುತ್ತಾರೆ, ಕುಯುಕ್ತಿಗಳನ್ನು ಮಾಡುತ್ತಾರೆ.
ಅವರು ನಿರಪರಾಧಿಗಳನ್ನು ಹಿಡಿದು ಕೊಲ್ಲಲು
    ಗುಪ್ತವಾದ ಸ್ಥಳಗಳಲ್ಲಿ ಅಡಗಿಕೊಂಡಿರುವರು; ಅಸಹಾಯಕರಿಗಾಗಿ ಎದುರುನೋಡುವರು.
ಅವರು ಬೇಟೆಯಾಡುವ ಸಿಂಹಗಳಂತಿದ್ದಾರೆ.
    ಅವರು ನಿಸ್ಸಹಾಯಕರ ಮೇಲೆ ಆಕ್ರಮಣ ಮಾಡಿ ತಮ್ಮ ಬಲೆಗಳಲ್ಲಿ ಎಳೆದುಕೊಂಡು ಹೋಗುವರು.
10 ಆ ದುಷ್ಟರು ಕುಗ್ಗಿಹೋದವರನ್ನು
    ಮತ್ತೆಮತ್ತೆ ಜಜ್ಜಿಹಾಕುವರು.
11 ಆದ್ದರಿಂದ ಆ ನಿಸ್ಸಹಾಯಕರು, “ದೇವರು ನಮ್ಮನ್ನು ಮರೆತುಬಿಟ್ಟಿದ್ದ್ದಾನೆ!
    ನಮಗೆ ಶಾಶ್ವತವಾಗಿ ವಿಮುಖನಾಗಿದ್ದಾನೆ!
    ನಮಗೆ ಸಂಭವಿಸುತ್ತಿರುವುದನ್ನು ಆತನು ನೋಡುವುದಿಲ್ಲ!” ಎಂದು ಯೋಚಿಸತೊಡಗುವರು.

12 ಯೆಹೋವನೇ, ಎದ್ದೇಳು, ಕಾರ್ಯನಿರತನಾಗು!
    ದೇವರೇ, ಆ ದುಷ್ಟರನ್ನು ದಂಡಿಸು!
    ನಿಸ್ಸಹಾಯಕರನ್ನು ಮರೆತುಬಿಡಬೇಡ!

13 ದುಷ್ಟರು ದೇವರಿಗೆ ವಿರೋಧವಾಗಿ ಎದ್ದಿರುವುದೇಕೆ?
    ಆತನು ತಮ್ಮನ್ನು ದಂಡಿಸುವುದಿಲ್ಲವೆಂದು ಅವರು ಆಲೋಚಿಸಿಕೊಂಡಿರುವುದೇಕೆ?
14 ಯೆಹೋವನೇ, ಆ ದುಷ್ಟರ ಕ್ರೂರವಾದ ಕಾರ್ಯಗಳನ್ನೂ ದುಷ್ಕೃತ್ಯಗಳನ್ನೂ ನೀನು ಖಂಡಿತವಾಗಿ ನೋಡುವೆ.
    ಅವುಗಳನ್ನು ನೋಡಿ ಕಾರ್ಯನಿರತನಾಗು.
ಅನೇಕ ತೊಂದರೆಗಳಲ್ಲಿ ಸಿಕ್ಕಿಕೊಂಡಿರುವವರು ಸಹಾಯಕ್ಕಾಗಿ ನಿನ್ನ ಬಳಿಗೆ ಬರುವರು.
    ಅನಾಥರಿಗೆ ಸಹಾಯ ಮಾಡುವವನು ನೀನೇ.
    ಆದ್ದರಿಂದ ಅವರಿಗೆ ಸಹಾಯಮಾಡು!

15 ಕೆಡುಕರನ್ನು ನಾಶಮಾಡು.
    ನಿನ್ನ ದೇಶದಿಂದ ಅವರನ್ನು ನಿರ್ಮೂಲಮಾಡು!
16 ಯೆಹೋವನು ಸದಾಕಾಲವೂ ರಾಜನಾಗಿರುವನು.
    ಆತನು ತನ್ನ ದೇಶದಿಂದ ಕೆಡುಕರನ್ನು ತೆಗೆದುಹಾಕುವನು.
17 ಯೆಹೋವನೇ, ಕುಗ್ಗಿಹೋದವರ ಕೋರಿಕೆಯನ್ನು ನೀನು ಕೇಳುವೆ.
    ಅವರ ಮೊರೆಗೆ ಕಿವಿಗೊಟ್ಟು ಅವರನ್ನು ಪ್ರೋತ್ಸಾಹಿಸುವೆ.
18 ಯೆಹೋವನೇ, ಅನಾಥರನ್ನೂ ಕುಗ್ಗಿಸಲ್ಪಟ್ಟವರನ್ನೂ ಸಂರಕ್ಷಿಸು.
    ಆಗ ಕೇವಲ ಮನುಷ್ಯರಿಂದ ಅವರಿಗೆ ಭಯವಾಗದು.

ಜ್ಞಾನೋಕ್ತಿಗಳು 24

—19—

24 ಕೆಡುಕರ ವಿಷಯದಲ್ಲಿ ಹೊಟ್ಟೆಕಿಚ್ಚುಪಡಬೇಡ; ಅವರೊಂದಿಗಿರಲು ಅಪೇಕ್ಷಿಸಬೇಡ. ಅವರು ಕೇಡು ಮಾಡಲು ತಮ್ಮ ಹೃದಯಗಳಲ್ಲಿ ಆಲೋಚಿಸಿಕೊಳ್ಳುವರು; ಅವರು ಕೇಡನ್ನೇ ಕುರಿತು ಮಾತಾಡುವರು.

—20—

ಒಳ್ಳೆಯ ಮನೆಯು ಜ್ಞಾನದ ಮೇಲೂ ವಿವೇಕದ ಮೇಲೂ ಕಟ್ಟಲ್ಪಟ್ಟಿರುವುದು. ಅದರ ಕೋಣೆಗಳು ಅಮೂಲ್ಯವಾದ ಭಂಡಾರಗಳಿಂದ ತುಂಬಿರುವುದು ಜ್ಞಾನದಿಂದಲೇ.

—21—

ಜ್ಞಾನವು ಮನುಷ್ಯನನ್ನು ಬಲಿಷ್ಠನನ್ನಾಗಿ ಮಾಡುವುದು. ವಿವೇಕವು ಮನುಷ್ಯನಿಗೆ ಬಲವನ್ನು ಕೊಡುತ್ತದೆ. ಯುದ್ಧವನ್ನು ಆರಂಭಿಸುವ ಮೊದಲೇ ಎಚ್ಚರಿಕೆಯಿಂದ ಆಲೋಚಿಸು. ಜಯವನ್ನು ಗಳಿಸಬೇಕಾದರೆ ನಿನಗೆ ಅನೇಕ ಒಳ್ಳೆಯ ಆಲೋಚನೆಗಾರರು ಅಗತ್ಯ.

—22—

ಮೂಢರು ಜ್ಞಾನವನ್ನು ಅರ್ಥಮಾಡಿಕೊಳ್ಳಲಾರರು; ಮುಖ್ಯವಾದ ವಿಷಯಗಳನ್ನು ಚರ್ಚಿಸುವಾಗ ಮೂಢನು ಏನೂ ಹೇಳಲಾರ.

—23—

ಕೇಡುಮಾಡುವವನನ್ನು ಜನರು “ಕೆಡುಕ” ಎಂದು ಕರೆಯುವರು. ಮೂಢನ ಆಲೋಚನೆಗಳೆಲ್ಲಾ ಪಾಪಮಯ. ದುರಾಭಿಮಾನಿಯು ಜನರಿಗೆ ಅಸಹ್ಯ.

—24—

10 ಕಷ್ಟದ ಸಮಯಗಳಲ್ಲಿ ನೀನು ಬಲಹೀನನಾಗಿದ್ದರೆ, ನೀನು ನಿಜವಾಗಿಯೂ ಬಲಹೀನ.

—25—

11 ಜನರು ಯಾರನ್ನಾದರೂ ಕೊಲ್ಲಬೇಕೆಂದಿದ್ದರೆ, ಅವನನ್ನು ಉಳಿಸಲು ಪ್ರಯತ್ನಿಸು. 12 “ಇದರ ಬಗ್ಗೆ ನನಗೆ ಗೊತ್ತಿರಲಿಲ್ಲ” ಎಂದು ನೀನು ಹೇಳಲಾಗದು. ಯೆಹೋವನಿಗೆ ಪ್ರತಿಯೊಂದು ತಿಳಿದಿದೆ. ನಿನ್ನ ಕಾರ್ಯಗಳ ಉದ್ದೇಶವೂ ಆತನಿಗೆ ತಿಳಿದಿದೆ. ಯೆಹೋವನು ನಿನ್ನನ್ನು ಗಮನಿಸಿ ನಿನ್ನ ಕಾರ್ಯಗಳಿಗೆ ಪ್ರತಿಫಲ ಕೊಡುವನು.

—26—

13 ನನ್ನ ಮಗನೇ, ಜೇನುತುಪ್ಪವನ್ನು ತಿನ್ನು, ಅದು ಒಳ್ಳೆಯದು. ಜೇನುಗೂಡಿನ ಜೇನುತುಪ್ಪ ಸಿಹಿ. 14 ಅದೇರೀತಿ ಜ್ಞಾನವು ನಿನ್ನ ಆತ್ಮಕ್ಕೆ ಒಳ್ಳೆಯದು. ನೀನು ಅದನ್ನು ಕಂಡುಕೊಂಡರೆ ನಿನಗೆ ಒಳ್ಳೆಯ ಭವಿಷ್ಯವಿರುವುದು; ನಿನ್ನ ನಿರೀಕ್ಷೆ ಎಂದಿಗೂ ಕೊನೆಗೊಳ್ಳುವುದಿಲ್ಲ.

—27—

15 ಒಳ್ಳೆಯವನಿಂದ ಕದ್ದುಕೊಳ್ಳುವ ಅಥವಾ ಅವನ ಮನೆಯನ್ನೇ ತೆಗೆದುಕೊಳ್ಳುವ ಕಳ್ಳನಂತೆ ಇರಬೇಡ. 16 ಒಳ್ಳೆಯವನು ಏಳುಸಲ ಬಿದ್ದರೂ ಅವನು ಮತ್ತೆ ಎದ್ದುನಿಲ್ಲುವನು. ಆದರೆ ಕೆಡುಕರು ಒಂದೇ ಆಪತ್ತಿನಿಂದ ಶಾಶ್ವತವಾಗಿ ಸೋತುಹೋಗುವರು.

—28—

17 ನಿನ್ನ ವೈರಿ ತೊಂದರೆಯಲ್ಲಿರುವಾಗ ಸಂತೋಷಪಡಬೇಡ; ಅವನು ಬೀಳುವಾಗಲೂ ಸಂತೋಷಪಡಬೇಡ. 18 ಇಲ್ಲವಾದರೆ, ಯೆಹೋವನು ನಿನ್ನ ಮೇಲೆ ಕೋಪಗೊಂಡು ನಿನ್ನ ವೈರಿಯನ್ನು ದಂಡಿಸದೆ ಹೋಗಬಹುದು.

—29—

19 ಕೆಡುಕರ ಬಗ್ಗೆ ಅತಿಯಾಗಿ ಬೇಸರಗೊಳ್ಳಬೇಡ, ಅವರ ಮೇಲೆ ಹೊಟ್ಟೆಕಿಚ್ಚುಪಡಬೇಡ. 20 ಆ ಕೆಡುಕರಿಗೆ ನಿರೀಕ್ಷೆಯಿಲ್ಲ. ಅವರ ಬೆಳಕು ಕತ್ತಲೆಯಾಗುವುದು.

—30—

21 ಮಗನೇ, ಯೆಹೋವನನ್ನೂ ರಾಜನನ್ನೂ ಗೌರವಿಸು. ಅವರನ್ನು ವಿರೋಧಿಸುವವರ ಜೊತೆ ಸೇರಬೇಡ. 22 ಯಾಕೆಂದರೆ ಅವರು ಬೇಗನೆ ನಾಶವಾಗುವರು. ದೇವರು ಮತ್ತು ರಾಜನು ತಮ್ಮ ವೈರಿಗಳಿಗೆ ಎಷ್ಟು ಕೇಡುಮಾಡಬಲ್ಲರೆಂಬುದು ನಿನಗೆ ತಿಳಿಯದು.

ಮತ್ತಷ್ಟು ಜ್ಞಾನೋಕ್ತಿಗಳು

23 ಇವು ಸಹ ಜ್ಞಾನಿಗಳ ಮಾತುಗಳು:

ನ್ಯಾಯಾಧಿಪತಿ ನ್ಯಾಯವಂತನಾಗಿರಬೇಕು. ಅವನು ಕೇವಲ ಪರಿಚಯದ ನಿಮಿತ್ತ ಯಾರಿಗೂ ಸಹಾಯ ಮಾಡಕೂಡದು. 24 ನ್ಯಾಯಾಧೀಶನು ಅಪರಾಧಿಗೆ, “ನೀನು ನಿರಪರಾಧಿ” ಎಂದು ಹೇಳಿದರೆ, ಜನರು ನ್ಯಾಯಾಧೀಶನನ್ನು ಶಪಿಸುವರು; ಜನಾಂಗಗಳು ಅವನನ್ನು ಖಂಡಿಸುವವು. 25 ಆದರೆ ನ್ಯಾಯಾಧೀಶನು ಅಪರಾಧಿಯನ್ನು ದಂಡಿಸಿದರೆ, ಜನರೆಲ್ಲರೂ ಅವನನ್ನು ಮೆಚ್ಚಿಕೊಳ್ಳುವರು; ಅವನಿಗೆ ಮಹಾ ಆಶೀರ್ವಾದ ದೊರೆಯುವುದು.

26 ಯಥಾರ್ಥವಾದ ಉತ್ತರ ಜನರೆಲ್ಲರನ್ನು ಸಂತೋಷಗೊಳಿಸುವುದು; ಅದು ತುಟಿಯ ಮೇಲಿನ ಮುದ್ದಿನಂತಿದೆ.

27 ಹೊಲಗಳಲ್ಲಿ ಬಿತ್ತುವ ಮೊದಲು ಮನೆಯನ್ನು ಕಟ್ಟಬೇಡ. ವಾಸಕ್ಕಾಗಿ ಮನೆಯನ್ನು ಕಟ್ಟುವ ಮೊದಲೇ ನೀನು ಬೇಸಾಯ ಮಾಡಲು ಸಿದ್ಧನಾಗಿರುವಿಯೋ ಎಂಬುದನ್ನು ಖಾತರಿಪಡಿಸಿಕೊ.

28 ಬೇರೊಬ್ಬನ ವಿರೋಧವಾಗಿ ಸಕಾರಣವಿಲ್ಲದೆ ಸಾಕ್ಷಿ ಹೇಳಬೇಡ, ಸುಳ್ಳನ್ನೂ ಹೇಳಬೇಡ.

29 “ಅವನು ನನಗೆ ಕೇಡುಮಾಡಿದನು. ಆದ್ದರಿಂದ ನಾನೂ ಅವನಿಗೆ ಕೇಡುಮಾಡುವೆ. ಅವನು ಮಾಡಿದ ಕೇಡುಗಳಿಗಾಗಿ ಸೇಡು ತೀರಿಸಿಕೊಳ್ಳುವೆ” ಎಂದು ಹೇಳಬೇಡ.

30 ಸೋಮಾರಿಯ ಹೊಲದ ಸಮೀಪದಲ್ಲೂ ಅಜ್ಞಾನಿಯ ದ್ರಾಕ್ಷಿತೋಟದ ಬಳಿಯಲ್ಲೂ ನಡೆದುಹೋದೆನು. 31 ಆ ಹೊಲಗಳಲ್ಲಿ ಮುಳ್ಳುಗಿಡಗಳೂ ಉಪಯೋಗವಿಲ್ಲದ ಸಸಿಗಳೂ ಬೆಳೆಯುತ್ತಿದ್ದವು. ಹೊಲಗಳ ಸುತ್ತಲೂ ಇದ್ದ ಗೋಡೆ ಒಡೆದುಹೋಗಿತ್ತು; ಕುಸಿದು ಬೀಳುತ್ತಿತ್ತು. 32 ಅದನ್ನು ನೋಡಿ, ಆಲೋಚಿಸಿದೆ; ಒಂದು ಪಾಠವನ್ನು ಕಲಿತುಕೊಂಡೆ; 33 ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ವಿಶ್ರಾಂತಿ, ಇನ್ನು ಸ್ವಲ್ಪ ಕೈಮುದುರಿಕೊಳ್ಳುವೆ, ಮಧ್ಯಾಹ್ನ ಇನ್ನು ಸ್ವಲ್ಪ ನಿದ್ರೆ ಮಾಡುವೆ ಎನ್ನುವೆಯಾ? 34 ಇವು ನಿನ್ನನ್ನು ಬೇಗನೆ ಬಡವನನ್ನಾಗಿ ಮಾಡಿ ಬರಿದು ಮಾಡುತ್ತದೆ; ಇದ್ದಕ್ಕಿದ್ದಂತೆ ಬಂದು ಎಲ್ಲವನ್ನು ದೋಚಿಕೊಂಡು ಹೋಗುವ ಕಳ್ಳನಂತಿವೆ.

1 ಥೆಸಲೋನಿಕದವರಿಗೆ 3

ನಾವು ನಿಮ್ಮ ಬಳಿಗೆ ಬರಲಾಗಲಿಲ್ಲ, ಆದರೆ ಇನ್ನೂ ಹೆಚ್ಚುಕಾಲ ಕಾಯಲು ಬಹಳ ಕಷ್ಟಕರವಾಗಿದೆ. ಆದುದರಿಂದ ಅಥೆನ್ಸಿನಲ್ಲಿ ಉಳಿದುಕೊಂಡು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಲು ತೀರ್ಮಾನಿಸಿದೆವು. ತಿಮೊಥೆಯನು ನಮ್ಮ ಸಹೋದರ. ಅವನು ದೇವರಿಗೋಸ್ಕರ ನಮ್ಮೊಡನೆ ಕೆಲಸ ಮಾಡುತ್ತಿದ್ದಾನೆ. ಕ್ರಿಸ್ತನ ವಿಷಯವಾದ ಸುವಾರ್ತೆಯನ್ನು ಜನರಿಗೆ ತಿಳಿಸಲು ಅವನು ನಮಗೆ ಸಹಾಯ ಮಾಡುತ್ತಿದ್ದಾನೆ. ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಮತ್ತು ನಿಮ್ಮನ್ನು ಸಂತೈಸಲು ತಿಮೊಥೆಯನನ್ನು ಕಳುಹಿಸಿದ್ದೇವೆ. ನಮಗೀಗ ಬಂದಿರುವ ಕಷ್ಟಗಳಿಂದ ನಿಮ್ಮಲ್ಲಿ ಯಾರೂ ತಳಮಳಗೊಳ್ಳಬಾರದೆಂದು ತಿಮೊಥೆಯನನ್ನು ಕಳುಹಿಸಿದ್ದೇವೆ. ನಮಗೆ ಇಂಥಾ ಕಷ್ಟಗಳು ಬರಲೇಬೇಕೆಂದು ನಿಮಗೇ ತಿಳಿದಿದೆ. ನಾವು ನಿಮ್ಮೊಡನಿದ್ದಾಗ, ನಾವೆಲ್ಲರೂ ಹಿಂಸೆಯನ್ನು ಅನುಭವಿಸಬೇಕಾಗುತ್ತದೆಯೆಂದು ನಿಮಗೆ ತಿಳಿಸಿದೆವು. ನಾವು ಹೇಳಿದಂತೆಯೇ ಅದು ಸಂಭವಿಸಿತು ಎಂಬುದು ನಿಮಗೆ ತಿಳಿದಿದೆ. ನಿಮ್ಮ ನಂಬಿಕೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾರಣದಿಂದಲೇ ನಾನು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆನು. ಇನ್ನೂ ಹೆಚ್ಚುಕಾಲ ಕಾಯಲು ಸಾಧ್ಯವಿಲ್ಲವೆನಿಸಿದ್ದರಿಂದಲೇ ನಾನು ಅವನನ್ನು ಕಳುಹಿಸಿದೆನು. ಜನರನ್ನು ಶೋಧನೆಗೆ ಒಳಪಡಿಸುವ ಸೈತಾನನು ನಿಮ್ಮನ್ನು ಈಗಾಗಲೇ ಶೋಧನೆಗಳಿಂದ ಸೋಲಿಸಿರಬಹುದೆಂಬ ಭಯ ನನಗಿತ್ತು. ಒಂದುವೇಳೆ, ಹಾಗೇನಾದರೂ ಆಗಿದ್ದರೆ ನಮ್ಮ ಪ್ರಯಾಸವೆಲ್ಲಾ ನಿರರ್ಥಕವಾಗುತ್ತಿತ್ತು.

ಆದರೆ ತಿಮೊಥೆಯನು ನಿಮ್ಮಿಂದ ನಮ್ಮ ಬಳಿಗೆ ಹಿಂತಿರುಗಿ ಬಂದಾಗ, ನಿಮ್ಮ ನಂಬಿಕೆಯ ಮತ್ತು ಪ್ರೀತಿಯ ಬಗ್ಗೆ ಶುಭವಾರ್ತೆಯನ್ನು ನಮಗೆ ಹೇಳಿದನು. ನೀವು ಯಾವಾಗಲೂ ನಮ್ಮನ್ನು ಜ್ಞಾಪಿಸಿಕೊಳ್ಳುವಿರೆಂತಲೂ ನಮ್ಮನ್ನು ಮತ್ತೆ ನೋಡಲು ಅತ್ಯಾಸೆಯಿಂದ ಇದ್ದೀರೆಂತಲೂ ಅವನು ನಮಗೆ ತಿಳಿಸಿದನು. ಅದೇ ರೀತಿಯಲ್ಲಿ ನಾವೂ ನಿಮ್ಮನ್ನು ನೋಡಲು ಅತ್ಯಾಸೆಯಿಂದ ಇದ್ದೇವೆ. ಸಹೋದರ ಸಹೋದರಿಯರೇ, ನಿಮ್ಮ ನಂಬಿಕೆಯ ದೆಸೆಯಿಂದ ನಿಮ್ಮ ವಿಷಯದಲ್ಲಿ ಪ್ರೋತ್ಸಾಹಗೊಂಡೆವು. ನಮಗೆ ಬಹಳ ತೊಂದರೆಯಿದ್ದರೂ ಹಿಂಸೆಯಿದ್ದರೂ ಆದರಣೆಯಾಯಿತು. ನೀವು ಪ್ರಭುವಿನಲ್ಲಿ ಬಲವಾಗಿದ್ದರೆ, ನಮ್ಮಲ್ಲಿ ಜೀವ ತುಂಬಿದಂತಿರುವುದು. ನಿಮ್ಮ ನಿಮಿತ್ತದಿಂದ ದೇವರ ಸನ್ನಿಧಿಯಲ್ಲಿ ಬಹಳ ಹರ್ಷಿತರಾಗಿದ್ದೇವೆ! ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನಮಗಿರುವ ಆನಂದಕ್ಕೆ ಸರಿಸಮವಾಗಿ ಕೃತಜ್ಞತಾಸ್ತುತಿ ಸಲ್ಲಿಸಲು ನಮಗೆ ಹೇಗೆ ಸಾಧ್ಯವಾದೀತು? 10 ಹಗಲಿರುಳು ನಿಮ್ಮ ವಿಷಯದಲ್ಲಿ ಬಹಳವಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ. ನಿಮ್ಮನ್ನು ಕಣ್ಣಾರೆ ಕಂಡು ನಿಮ್ಮ ನಂಬಿಕೆಯಲ್ಲಿರುವ ಕುಂದುಕೊರತೆಗಳನ್ನು ನಿವಾರಿಸಬೇಕೆಂದು ದೇವರಲ್ಲಿ ಹಗಲಿರುಳು ಪ್ರಾರ್ಥಿಸುತ್ತಿದ್ದೇವೆ.

11 ನಾವು ನಿಮ್ಮ ಬಳಿಗೆ ಬರಲು ಮಾರ್ಗವನ್ನು ಸರಾಗಗೊಳಿಸುವಂತೆ ನಮ್ಮ ತಂದೆಯಾದ ದೇವರಿಗೂ ಪ್ರಭುವಾದ ಯೇಸುವಿಗೂ ಪ್ರಾರ್ಥಿಸುತ್ತೇವೆ. 12 ನಾವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ಪ್ರೀತಿಯು ವೃದ್ಧಿಯಾಗಿ ಒಬ್ಬೊಬ್ಬರ ಮೇಲೆಯೂ ಇತರ ಜನರೆಲ್ಲರ ಮೇಲೆಯೂ ಹೆಚ್ಚಾಗಲೆಂದು ಪ್ರಭುವಿನಲ್ಲಿ ಪ್ರಾರ್ಥಿಸುತ್ತೇವೆ. 13 ನಿಮ್ಮ ಹೃದಯಗಳು ಬಲಗೊಳ್ಳಲೆಂದು ಹೀಗೆ ಪ್ರಾರ್ಥಿಸುತ್ತೇವೆ. ನಮ್ಮ ಪ್ರಭುವಾದ ಯೇಸುವು ತನ್ನ ಪವಿತ್ರ ಜನರೊಂದಿಗೆ ಪ್ರತ್ಯಕ್ಷನಾದಾಗ ನೀವು ತಂದೆಯಾದ ದೇವರ ಸನ್ನಿಧಿಯಲ್ಲಿ ಪರಿಶುದ್ಧರೂ ತಪ್ಪಿಲ್ಲದವರೂ ಆಗಿರುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International