M’Cheyne Bible Reading Plan
ಧಾನ್ಯಸಮರ್ಪಣೆಗಳು
2 “ಒಬ್ಬನು ದೇವರಾದ ಯೆಹೋವನಿಗೆ ಧಾನ್ಯಸಮರ್ಪಣೆ ಮಾಡಬೇಕೆಂದಿದ್ದರೆ, ಅದು ಗೋಧಿಹಿಟ್ಟಾಗಿರಬೇಕು. ಅವನು ಈ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯಿದು, ಧೂಪವನ್ನಿಡಬೇಕು. 2 ಬಳಿಕ ಅವನು ಅದನ್ನು ಯಾಜಕರಾದ ಆರೋನನ ಪುತ್ರರ ಬಳಿಗೆ ತರಬೇಕು. ಯಾಜಕನು ಎಣ್ಣೆ ಬೆರೆಸಿದ ಹಿಟ್ಟಿನಲ್ಲಿ ಒಂದು ಹಿಡಿ ಹಿಟ್ಟನ್ನೂ ಧೂಪವೆಲ್ಲವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಅದನ್ನು ಹೋಮಮಾಡಬೇಕು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. 3 ಧಾನ್ಯಸಮರ್ಪಣೆಯಲ್ಲಿ ಉಳಿದ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರಿದ್ದಾಗಿವೆ. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ಸಮರ್ಪಣೆಯು ಮಹಾಪರಿಶುದ್ಧವಾಗಿದೆ.
ಬೇಯಿಸಿದ ಧಾನ್ಯಸಮರ್ಪಣೆಗಳು
4 “ಒಬ್ಬನು ಒಲೆಯಲ್ಲಿ ಬೇಯಿಸಿದ ಧಾನ್ಯನೈವೇದ್ಯವನ್ನು ಅರ್ಪಿಸಿದರೆ, ಆಗ ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯಾಗಲಿ ಅಥವಾ ಎಣ್ಣೆ ಹೊಯಿದು ಮಾಡಿದ ಕಡುಬುಗಳಾಗಲಿ ಆಗಿರಬೇಕು. 5 ನಿಮ್ಮ ಧಾನ್ಯನೈವೇದ್ಯವು ಕಬ್ಬಿಣದ ಹಂಚಿನಲ್ಲಿ ಬೇಯಿಸಲ್ಪಟ್ಟಿದ್ದರೆ, ಅದು ಎಣ್ಣೆ ಬೆರೆಸಿದ ಹುಳಿಯಿಲ್ಲದ ಶ್ರೇಷ್ಠ ಹಿಟ್ಟಿನಿಂದ ಮಾಡಿದ್ದಾಗಿರಬೇಕು. 6 ನೀವು ಅದನ್ನು ಚೂರುಚೂರುಗಳಾಗಿ ಮುರಿದು ಅದರ ಮೇಲೆ ಎಣ್ಣೆ ಹೊಯ್ಯಬೇಕು. ಅದು ಧಾನ್ಯನೈವೇದ್ಯವಾಗಿದೆ. 7 ನೀವು ಬಾಂಡ್ಲಿಯಲ್ಲಿ ಪಕ್ವಮಾಡಿದ ಪದಾರ್ಥವನ್ನು ಅರ್ಪಿಸಿದರೆ, ಅದು ಎಣ್ಣೆ ಬೆರೆಸಿದ ಶ್ರೇಷ್ಠ ಗೋಧಿಹಿಟ್ಟಿನಿಂದ ಮಾಡಿದ್ದಾಗಿರಬೇಕು.
8 “ನೀವು ಈ ವಸ್ತುಗಳಿಂದ ಮಾಡಿದ ಧಾನ್ಯನೈವೇದ್ಯಗಳನ್ನು ಯೆಹೋವನಿಗೆ ಅರ್ಪಿಸುವುದಾದರೆ ನೀವು ಆ ವಸ್ತುಗಳನ್ನು ಯಾಜಕನ ಬಳಿಗೆ ತೆಗೆದುಕೊಂಡು ಹೋಗಬೇಕು. ಅವನು ಅದನ್ನು ವೇದಿಕೆಯ ಮೇಲಿಡುವನು. 9 ಬಳಿಕ ಯಾಜಕನು ಧಾನ್ಯನೈವೇದ್ಯದ ಸ್ವಲ್ಪ ಭಾಗವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ವೇದಿಕೆಯ ಮೇಲೆ ಹೋಮಮಾಡುವನು. ಅದು ಅಗ್ನಿಯ ಮೂಲಕ ಮಾಡಿದ ಸಮರ್ಪಣೆಯಾಗಿದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. 10 ಧಾನ್ಯನೈವೇದ್ಯದಲ್ಲಿ ಉಳಿದದ್ದು ಆರೋನನಿಗೂ ಅವನ ಪುತ್ರರಿಗೂ ಸೇರುವುದು. ಅಗ್ನಿಯ ಮೂಲಕ ಯೆಹೋವನಿಗೆ ಮಾಡಿದ ಈ ನೈವೇದ್ಯವು ಮಹಾಪರಿಶುದ್ಧವಾಗಿದೆ.
11 “ನೀವು ಹುಳಿಹಿಟ್ಟಿನಿಂದ ಮಾಡಿದ[a] ಯಾವದನ್ನೂ ಯೆಹೋವನಿಗೆ ಧಾನ್ಯಸಮರ್ಪಣೆಯಾಗಿ ಕೊಡಬಾರದು. ನೀವು ಹುಳಿಯನ್ನಾಗಲಿ ಜೇನುತುಪ್ಪವನ್ನಾಗಲಿ ಯೆಹೋವನಿಗೆ ಅಗ್ನಿಯ ಮೂಲಕ ಹೋಮಮಾಡಬಾರದು. 12 ನೀವು ಹುಳಿಯನ್ನು ಮತ್ತು ಜೇನುತುಪ್ಪವನ್ನು ಪ್ರಥಮಫಲವಾಗಿ ಅರ್ಪಿಸಬಹುದು. ಆದರೆ ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಕೂಡದು. 13 ನೀವು ಅರ್ಪಿಸುವ ಪ್ರತಿ ಧಾನ್ಯಸಮರ್ಪಣೆಯಲ್ಲೂ ಉಪ್ಪನ್ನು ಹಾಕಬೇಕು. ನಿಮ್ಮ ಧಾನ್ಯಸಮರ್ಪಣೆಯಲ್ಲಿ ದೇವರ ಒಡಂಬಡಿಕೆಯೆಂಬ ಉಪ್ಪು ಇರಲೇಬೇಕು. ನೀವು ಅರ್ಪಿಸುವ ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉಪ್ಪನ್ನು ಸೇರಿಸಬೇಕು.”
ಪ್ರಥಮಫಲದ ನೈವೇದ್ಯಗಳು
14 “ನೀವು ಪ್ರಥಮಫಲವನ್ನು ಯೆಹೋವನಿಗೆ ನೈವೇದ್ಯವಾಗಿ ಅರ್ಪಿಸುವಾಗ ಬೆಂಕಿಯಲ್ಲಿ ಸುಟ್ಟ ಗೋಧಿತೆನೆಗಳನ್ನು ತರಬೇಕು. ಅವುಗಳು ಜಜ್ಜಲ್ಪಟ್ಟ ಹಸಿ ತೆನೆಗಳಾಗಿರಬೇಕು. ಇದು ನಿಮ್ಮ ಪ್ರಥಮಫಲ ನೈವೇದ್ಯವಾಗಿರುವುದು. 15 ನೀವು ಅದಕ್ಕೆ ಎಣ್ಣೆಯನ್ನು ಹಾಕಿ ಅದರ ಮೇಲೆ ಧೂಪವನ್ನಿಡಬೇಕು. ಅದು ಧಾನ್ಯಸಮರ್ಪಣೆಯಾಗಿದೆ. 16 ಯಾಜಕನು ಜಜ್ಜಿದ ಧಾನ್ಯದಲ್ಲಿ ಒಂದು ಭಾಗವನ್ನೂ ಎಣ್ಣೆಯನ್ನೂ ಎಲ್ಲಾ ಧೂಪವನ್ನೂ ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಹೋಮಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಯಾಗಿದೆ.
ಸಮಾಧಾನಯಜ್ಞವನ್ನು ಅರ್ಪಿಸುವ ಕ್ರಮ
3 “ಯಾವನಾದರೂ ಸಮಾಧಾನಯಜ್ಞ ಮಾಡಬೇಕಾದರೆ ಅವನು ತನ್ನ ಪಶುಮಂದೆಯಿಂದ ಗಂಡುಪಶುವನ್ನಾಗಲಿ ಹೆಣ್ಣುಪಶುವನ್ನಾಗಲಿ ಅರ್ಪಿಸಬಹುದು. ಯೆಹೋವನ ಎದುರಿನಲ್ಲಿ ಅರ್ಪಿಸಲ್ಪಡುವ ಅದು ಅಂಗದೋಷವಿಲ್ಲದ್ದಾಗಿರಬೇಕು. 2 ಆ ವ್ಯಕ್ತಿಯು ತನ್ನ ಕೈಯನ್ನು ಪಶುವಿನ ತಲೆಯ ಮೇಲಿಟ್ಟು ದೇವದರ್ಶನಗುಡಾರದ ಬಾಗಿಲಲ್ಲಿ ಅದನ್ನು ವಧಿಸಬೇಕು. ಬಳಿಕ ಯಾಜಕರಾದ ಆರೋನನ ಪುತ್ರರು ಆ ರಕ್ತವನ್ನು ಯಜ್ಞವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. 3-4 ಆ ಯಜ್ಞಪಶುವಿನ ವಪೆಯನ್ನೂ ಕರುಳುಗಳ ಮೇಲಿನ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ತೆಗೆದು ಪಿತ್ತಕೋಶದ ಹತ್ತಿರ ಮೂತ್ರಪಿಂಡಗಳವರೆಗೆ ಇರುವ ಕೊಬ್ಬನ್ನೂ ತೆಗೆದು ಯೆಹೋವನಿಗೆ ಹೋಮಮಾಡಬೇಕು. 5 ಬಳಿಕ ಆರೋನನ ಪುತ್ರರು ಕೊಬ್ಬನ್ನು ವೇದಿಕೆಗೆ ತಂದು ಅದನ್ನು ಬೆಂಕಿಯಲ್ಲಿ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮದ ಮೇಲಿಡಬೇಕು. ಅದು ಅಗ್ನಿಯ ಮೂಲಕ ಅರ್ಪಿಸುವ ಹೋಮವಾಗಿರುತ್ತದೆ. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.
6 “ಒಬ್ಬನು ಕುರಿಯನ್ನಾಗಲಿ ಆಡನ್ನಾಗಲಿ ಯೆಹೋವನಿಗೆ ಸಮಾಧಾನಯಜ್ಞವಾಗಿ ಕೊಡುವಾಗ, ಆ ಪಶುವಿನಲ್ಲಿ ಯಾವ ದೋಷವೂ ಇರಬಾರದು. ಅದು ಗಂಡು ಅಥವಾ ಹೆಣ್ಣಾಗಿರಬಹುದು. 7 ಅವನು ಕುರಿಮರಿಯನ್ನು ಅರ್ಪಿಸುವುದಾದರೆ, ಅದನ್ನು ಯೆಹೋವನ ಸನ್ನಿಧಿಗೆ ತರಬೇಕು. 8 ಅವನು ತನ್ನ ಕೈಯನ್ನು ಪಶುವಿನ ಮೇಲಿಟ್ಟು ದೇವದರ್ಶನಗುಡಾರದ ಮುಂದೆ ಅದನ್ನು ವಧಿಸಬೇಕು. ತರುವಾಯ ಆರೋನನ ಪುತ್ರರು ಅದರ ರಕ್ತವನ್ನು ವೇದಿಕೆಯ ಮೇಲೆ ಸುತ್ತಲೂ ಚಿಮಿಕಿಸಬೇಕು. 9 ಅವನು ಸಮಾಧಾನಯಜ್ಞ ಪಶುವಿನ ಕೊಬ್ಬನ್ನು ಅಂದರೆ ಬಾಲದ ಮೇಲಿರುವ ಕೊಬ್ಬನ್ನು ಕರುಳುಗಳ ಮೇಲಿರುವ ಮತ್ತು ಅವುಗಳ ಸುತ್ತಲಿರುವ ಕೊಬ್ಬನ್ನೆಲ್ಲಾ ಹೋಮಮಾಡಬೇಕು. 10 ಅವನು ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಪಿತ್ತಕೋಶದ ಮೇಲೆ ಮೂತ್ರಪಿಂಡಗಳವರೆಗೆ ಇರುವ ಕೊಬ್ಬನ್ನೂ ಯಾಜಕನು ಯಜ್ಞವೇದಿಕೆಯ ಮೇಲೆ ಹೋಮಮಾಡಬೇಕು. 11 ಅದು ಯೆಹೋವನಿಗೆ ಬೆಂಕಿಯ ಮೂಲಕ ಅರ್ಪಿಸಿದ ಆಹಾರವಾಗುವುದು.
12 “ಸಮರ್ಪಿಸಲ್ಪಡುವ ಪಶು ಆಡಾಗಿದ್ದರೆ, ಸಮರ್ಪಿಸುವವನು ಅದನ್ನು ಯೆಹೋವನ ಸನ್ನಿಧಿಗೆ ತರಬೇಕು. 13 ಅವನು ತನ್ನ ಕೈಯನ್ನು ಆಡಿನ ತಲೆಯ ಮೇಲಿಟ್ಟು ದೇವದರ್ಶನಗುಡಾರದ ಮುಂದೆ ಅದನ್ನು ವಧಿಸಬೇಕು. ಬಳಿಕ ಆರೋನನ ಗಂಡುಮಕ್ಕಳು ಆಡಿನ ರಕ್ತವನ್ನು ವೇದಿಕೆಯ ಮೇಲೆ ಅದರ ಸುತ್ತಲೂ ಚಿಮಿಕಿಸಬೇಕು. 14 ಅವನು ಸಮಾಧಾನಯಜ್ಞದ ಪಶುವಿನ ವಪೆಯನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಪಿಂಡಗಳನ್ನೂ ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನೂ ಪಿತ್ತಾಶಯದ ಹತ್ತಿರ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನೂ ಯೆಹೋವನಿಗೋಸ್ಕರ ಸಮರ್ಪಿಸಬೇಕು. 15 ಅವನು ಅದರ ಎರಡು ಮೂತ್ರಪಿಂಡಗಳನ್ನು ಮತ್ತು ಸೊಂಟದವರೆಗೆ ಅವುಗಳನ್ನು ಆವರಿಸಿರುವ ಕೊಬ್ಬನ್ನು ಸಮರ್ಪಿಸಬೇಕು. ಅವನು ಪಿತ್ತಾಶಯವನ್ನು ಮತ್ತು ಅದನ್ನು ಅವರಿಸಿರುವ ಕೊಬ್ಬನ್ನು ಸಮರ್ಪಿಸಬೇಕು. ಅವನು ಮೂತ್ರಪಿಂಡಗಳೊಂದಿಗೆ ಪಿತ್ತಾಶಯವನ್ನೂ ಸಮರ್ಪಿಸಬೇಕು. 16 ಬಳಿಕ ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮಮಾಡಬೇಕು. ಇದು ಆಹಾರದ ರೂಪದಲ್ಲಿ ಯೆಹೋವನಿಗೆ ಅರ್ಪಿಸಿದ ಸುವಾಸನೆಯನ್ನು ಉಂಟುಮಾಡುವ ಸಮಾಧಾನಯಜ್ಞವಾಗಿರುತ್ತದೆ. ಆದರೆ ಅದರ ಕೊಬ್ಬು ಯೆಹೋವನಿಗೆ ಸೇರಿದೆ. 17 ನಿಮ್ಮ ಎಲ್ಲಾ ಸಂತತಿಗಳವರಿಗೆ ಈ ನಿಯಮವು ಶಾಶ್ವತವಾದದ್ದು. ನೀವೆಲ್ಲೇ ವಾಸಿಸಿದರೂ ಕೊಬ್ಬನ್ನಾಗಲಿ ರಕ್ತವನ್ನಾಗಲಿ ಎಂದಿಗೂ ತಿನ್ನಬಾರದು.”
ಏಳು ಮಂದಿ ಶಿಷ್ಯರಿಗೆ ಯೇಸುವಿನ ದರ್ಶನ
21 ತರುವಾಯ, ಯೇಸು ತನ್ನ ಶಿಷ್ಯರಿಗೆ ತಿಬೇರಿಯ (ಗಲಿಲಾಯ) ಸರೋವರದ ಬಳಿ ಕಾಣಿಸಿಕೊಂಡನು. ಅದು ಹೀಗೆ ನಡೆಯಿತು: 2 ಕೆಲವು ಶಿಷ್ಯರು ಒಟ್ಟಾಗಿ ಸೇರಿದ್ದರು. ಅವರು ಯಾರೆಂದರೆ, ಸೀಮೋನ್ ಪೇತ್ರ, ದಿದುಮನೆಂಬ ತೋಮ, ಗಲಿಲಾಯಕ್ಕೆ ಸೇರಿದ ಕಾನಾ ಊರಿನವನಾದ ನತಾನಿಯೇಲ, ಜೆಬೆದಾಯನ ಇಬ್ಬರು ಗಂಡುಮಕ್ಕಳು ಮತ್ತು ಇನ್ನಿಬ್ಬರು ಶಿಷ್ಯರು. 3 ಪೇತ್ರನು ಅವರಿಗೆ, “ನಾನು ಮೀನು ಹಿಡಿಯಲು ಹೋಗುತ್ತಿದ್ದೇನೆ” ಎಂದನು.
ಉಳಿದ ಶಿಷ್ಯರು, “ನಾವೂ ನಿನ್ನೊಂದಿಗೆ ಬರುತ್ತೇವೆ” ಎಂದು ಹೇಳಿದರು. ಅಂತೆಯೇ ಶಿಷ್ಯರೆಲ್ಲಾ ಹೊರಟು ದೋಣಿಯನ್ನು ಹತ್ತಿದರು. ಅವರು ರಾತ್ರಿಯೆಲ್ಲಾ ಬಲೆ ಬೀಸಿದರೂ ಒಂದು ಮೀನೂ ಸಿಗಲಿಲ್ಲ.
4 ಅಂದು ಮುಂಜಾನೆಯಾದಾಗ, ಯೇಸು ತೀರದಲ್ಲಿ ನಿಂತುಕೊಂಡಿದ್ದನು. ಆದರೆ ಆತನೇ ಯೇಸು ಎಂಬುದು ಶಿಷ್ಯರಿಗೆ ಗೊತ್ತಿರಲಿಲ್ಲ. 5 ಆಗ ಆತನು ತನ್ನ ಶಿಷ್ಯರಿಗೆ, “ಮಕ್ಕಳೇ, ನಿಮಗೆ ಮೀನು ಸಿಕ್ಕಿತೋ?” ಎಂದು ಕೇಳಿದನು.
ಶಿಷ್ಯರು, “ಇಲ್ಲ” ಎಂದು ಉತ್ತರಕೊಟ್ಟರು.
6 ಯೇಸು, “ನಿಮ್ಮ ದೋಣಿಯ ಬಲಭಾಗದಲ್ಲಿ ನಿಮ್ಮ ಬಲೆ ಬೀಸಿರಿ. ಅಲ್ಲಿ ಕೆಲವು ಮೀನುಗಳು ಸಿಕ್ಕುತ್ತವೆ” ಎಂದು ಹೇಳಿದನು. ಶಿಷ್ಯರು ಹಾಗೆಯೇ ಮಾಡಿದರು. ಬಹಳ ಮೀನುಗಳು ಸಿಕ್ಕಿಕೊಂಡದ್ದರಿಂದ ಅವರು ಬಲೆಯನ್ನು ದೋಣಿಯೊಳಗೆ ಎಳೆದುಕೊಳ್ಳಲಾಗಲಿಲ್ಲ.
7 ಯೇಸುವಿನ ಪ್ರೀತಿಯ ಶಿಷ್ಯನು ಪೇತ್ರನಿಗೆ, “ಆ ಮನುಷ್ಯನು ಪ್ರಭುವೇ!” ಎಂದು ಹೇಳಿದನು. ಕೂಡಲೇ ಪೇತ್ರನು ತನ್ನ ಅಂಗಿಯನ್ನು ಹಾಕಿಕೊಂಡು, ನೀರಿಗೆ ಧುಮುಕಿದನು. (ಪೇತ್ರನು ಮೀನು ಹಿಡಿಯುವುದಕ್ಕಾಗಿ ತನ್ನ ಅಂಗಿಯನ್ನು ಬಿಚ್ಚಿಟ್ಟಿದ್ದನು.) 8 ಉಳಿದ ಶಿಷ್ಯರು ದೋಣಿಯಲ್ಲಿ ತೀರಕ್ಕೆ ಹೋದರು. ಅವರು ಬಲೆತುಂಬ ಮೀನುಗಳನ್ನು ದಡಕ್ಕೆ ಎಳೆದುಕೊಂಡು ಹೋದರು. ಅವರು ದಡದಿಂದ ಬಹುದೂರದಲ್ಲೇನೂ ಇರಲಿಲ್ಲ. ಕೇವಲ ಮುನ್ನೂರು ಅಡಿಗಳಷ್ಟು ದೂರದಲ್ಲಿದ್ದರು. 9 ಶಿಷ್ಯರು ದೋಣಿಯಿಂದ ಇಳಿದು ದಡಕ್ಕೆ ಹೋದಾಗ, ಬೆಂಕಿಯ ಕೆಂಡಗಳನ್ನು ಕಂಡರು. ಬೆಂಕಿಯ ಮೇಲೆ ಮೀನುಗಳಿದ್ದವು ಮತ್ತು ಕೆಲವು ರೊಟ್ಟಿಗಳೂ ಅಲ್ಲಿದ್ದವು. 10 ಬಳಿಕ ಯೇಸು, “ನೀವು ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಿದನು.
11 ಸೀಮೋನ್ ಪೇತ್ರನು ದೋಣಿಯೊಳಕ್ಕೆ ಹೋಗಿ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದನು. ಬಲೆಯು ದೊಡ್ಡ ಮೀನುಗಳಿಂದ ತುಂಬಿತ್ತು. ಅದರಲ್ಲಿ 153 ಮೀನುಗಳಿದ್ದವು. ಅವು ಬಹಳ ಭಾರವಾಗಿದ್ದರೂ ಬಲೆಯು ಹರಿದುಹೋಗಲಿಲ್ಲ. 12 ಯೇಸು ಅವರಿಗೆ, “ಬಂದು ಊಟ ಮಾಡಿ” ಎಂದು ಹೇಳಿದನು. ಶಿಷ್ಯರಲ್ಲಿ ಒಬ್ಬರಾದರೂ, “ನೀನು ಯಾರು?” ಎಂದು ಆತನನ್ನು ಕೇಳಲಿಲ್ಲ. ಆತನು ಪ್ರಭುವೆಂದು ಅವರಿಗೆ ತಿಳಿದಿತ್ತು. 13 ಯೇಸುವು ಸಮೀಪಕ್ಕೆ ಬಂದು ರೊಟ್ಟಿಯನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವರಿಗೆ ಕೊಟ್ಟನು.
14 ಯೇಸು ಪುನರುತ್ಥಾನ ಹೊಂದಿದ ಮೇಲೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಲ.
ಪೇತ್ರನೊಂದಿಗೆ ಯೇಸುವಿನ ಸಂಭಾಷಣೆ
15 ಅವರು ಊಟಮಾಡಿದ ಮೇಲೆ, ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ಇಲ್ಲಿರುವ ಇವರು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಮರಿಗಳನ್ನು[a] ಮೇಯಿಸು” ಎಂದನು.
16 ಎರಡನೆಯ ಸಾರಿ ಯೇಸು ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಪೇತ್ರನು, “ಹೌದು, ಪ್ರಭುವೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಕಾಯಿ” ಎಂದನು.
17 ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಕೇಳಿದನು.
ಯೇಸು, “ನೀನು ನನ್ನನ್ನು ಪ್ರೀತಿಸುವೆಯೋ?” ಎಂದು ಮೂರು ಸಾರಿ ಕೇಳಿದ್ದರಿಂದ ಪೇತ್ರನಿಗೆ ದುಃಖವಾಯಿತು. ಪೇತ್ರನು, “ಪ್ರಭುವೇ, ನಿನಗೆ ಪ್ರತಿಯೊಂದೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬುದು ನಿನಗೆ ಗೊತ್ತಿದೆ” ಎಂದನು.
ಯೇಸು ಪೇತ್ರನಿಗೆ, “ನನ್ನ ಕುರಿಗಳನ್ನು ಮೇಯಿಸು. 18 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನೀನು ಯೌವನಸ್ಥನಾಗಿದ್ದಾಗ, ನಡುಕಟ್ಟಿಕೊಂಡು ನಿನಗೆ ಇಷ್ಟವಾದ ಕಡೆಗೆಲ್ಲಾ ಹೋದೆ. ಆದರೆ ನೀನು ಮುದುಕನಾದಾಗ, ನಿನ್ನ ಕೈಗಳನ್ನು ಚಾಚುವೆ ಮತ್ತು ಬೇರೊಬ್ಬನು ನಿನ್ನ ನಡುಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ನಡೆಸಿಕೊಂಡು ಹೋಗುವನು” ಎಂದು ಹೇಳಿದನು. 19 (ದೇವರನ್ನು ಮಹಿಮೆಪಡಿಸುವುದಕ್ಕಾಗಿ ಪೇತ್ರನು ಯಾವ ರೀತಿ ಸಾಯುತ್ತಾನೆ ಎಂಬುದನ್ನು ಸೂಚಿಸಲು ಯೇಸು ಹೀಗೆ ಹೇಳಿದನು.) ಬಳಿಕ ಯೇಸು ಪೇತ್ರನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.
20 ಪೇತ್ರನು ಹಿಂತಿರುಗಿ ನೋಡಿದಾಗ, ಯೇಸುವಿನ ಪ್ರೀತಿಯ ಶಿಷ್ಯನು ತಮ್ಮ ಹಿಂದೆ ನಡೆದುಕೊಂಡು ಬರುತ್ತಿರುವುದನ್ನು ಕಂಡನು. (ರಾತ್ರಿಭೋಜನದ ಸಮಯದಲ್ಲಿ ಯೇಸುವಿನ ಎದೆಯ ಕಡೆಗೆ ಬಾಗಿ, “ಪ್ರಭುವೇ, ನಿನಗೆ ದ್ರೋಹ ಮಾಡುವವನು ಯಾರು?” ಎಂದು ಕೇಳಿದ ಶಿಷ್ಯನೇ ಇವನು.) 21 ಪೇತ್ರನು ತಮ್ಮ ಹಿಂದೆ ಬರುತ್ತಿದ್ದ ಈ ಶಿಷ್ಯನನ್ನು ಕಂಡಾಗ ಯೇಸುವಿಗೆ, “ಪ್ರಭುವೇ, ಇವನ ವಿಷಯವೇನು?” ಎಂದು ಕೇಳಿದನು.
22 ಯೇಸು, “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು? ನೀನು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.
23 ಆದ್ದರಿಂದ ಸಹೋದರರ (ಶಿಷ್ಯರ) ಮಧ್ಯೆ ಒಂದು ಕಥೆಯೇ ಹರಡಿಕೊಂಡಿತು. ಯೇಸುವಿನ ಪ್ರೀತಿಯ ಈ ಶಿಷ್ಯನು ಸಾಯುವುದಿಲ್ಲವೆಂದು ಅವರು ಹೇಳುತ್ತಿದ್ದರು. ಆದರೆ ಅವನು ಸಾಯುವುದಿಲ್ಲವೆಂದು ಯೇಸು ಹೇಳಲಿಲ್ಲ. “ನಾನು ಬರುವ ತನಕ ಅವನು ಜೀವದಿಂದ ಇರಬೇಕೆಂಬುದು ನನ್ನ ಇಷ್ಟವಾಗಿದ್ದರೆ ಅದರಿಂದ ನಿನಗೇನು?” ಎಂದಷ್ಟೇ ಆತನು ಹೇಳಿದ್ದನು.
24 ಈ ಸಂಗತಿಗಳನ್ನು ಈಗ ಬರೆದಿರುವವನು ಮತ್ತು ಇವುಗಳ ವಿಷಯವಾಗಿ ಈಗ ಸಾಕ್ಷಿ ಹೇಳಿರುವ ಶಿಷ್ಯನು ಅವನೇ. ಅವನು ಹೇಳುವುದು ಸತ್ಯವೆಂದು ನಮಗೆ ಗೊತ್ತಿದೆ.
25 ಯೇಸು ಇತರ ಅನೇಕ ಕಾರ್ಯಗಳನ್ನು ಮಾಡಿದನು. ಅವುಗಳಲ್ಲಿ ಪ್ರತಿಯೊಂದನ್ನೂ ಬರೆಯುವುದಾದರೆ, ಬರೆಯಲ್ಪಡುವ ಪುಸ್ತಕಗಳನ್ನು ಇಡೀ ಪ್ರಪಂಚವೇ ಹಿಡಿಸಲಾರದೆಂದು ನಾನು ನೆನಸುತ್ತೇನೆ.
18 ಸ್ನೇಹಭಾವವಿಲ್ಲದವನು ಮಾಡುವುದೆಲ್ಲ ಸ್ವಾರ್ಥತೆಯಿಂದಲೇ, ಪ್ರತಿಯೊಂದು ಒಳ್ಳೆಯದರ ವಿರುದ್ಧವಾಗಿ ಅವನು ವಾದಿಸುತ್ತಾನೆ.
2 ಮೂಢನಿಗೆ ಅರ್ಥಮಾಡಿಕೊಳ್ಳಲು ಇಷ್ಟವಿಲ್ಲ. ಅವನು ತನ್ನ ಆಲೋಚನೆಗಳನ್ನೇ ಹೇಳಬಯಸುತ್ತಾನೆ.
3 ನೀನು ಕೇಡುಮಾಡಿದರೆ ಜನರು ನಿನ್ನನ್ನು ಇಷ್ಟಪಡುವುದಿಲ್ಲ; ನಾಚಿಕೆಕರವಾದದ್ದನ್ನು ಮಾಡಿದರೆ ನಿನ್ನನ್ನು ಪರಿಹಾಸ್ಯ ಮಾಡುವರು.
4 ಬಾಯಿಮಾತುಗಳು ಆಳವಾದ ನೀರಿನಂತಿರಲು ಸಾಧ್ಯ; ಆದರೆ ಜ್ಞಾನದ ಮೂಲವು ನುಗ್ಗಿಬರುವ ತೊರೆಯಂತಿದೆ.
5 ಅಪರಾಧಿಗೆ ಪಕ್ಷಪಾತ ಮಾಡುವುದು ಸರಿಯಲ್ಲ; ನಿರಪರಾಧಿಗೆ ಅನ್ಯಾಯ ಮಾಡುವುದು ಸರಿಯಲ್ಲ.
6 ಮೂಢನು ವಾದಕ್ಕೆ ಇಳಿಯುತ್ತಾನೆ; ಅವನ ಮಾತುಗಳು ಜಗಳವನ್ನು ಎಬ್ಬಿಸಿ, ಏಟಿಗಾಗಿ ಕೇಳಿಕೊಳ್ಳುತ್ತವೆ.
7 ಮೂಢನು ಮಾತಿನಲ್ಲಿ ತನ್ನನ್ನೇ ನಾಶಪಡಿಸಿಕೊಳ್ಳುವನು. ಅವನ ಮಾತುಗಳೇ ಅವನಿಗೆ ಬಲೆಯಾಗುತ್ತವೆ.
8 ಜನರಿಗೆ ಹರಟೆಮಾತನ್ನು ಕೇಳಲು ಇಷ್ಟ. ಹರಟೆ ಮಾತುಗಳು ರುಚಿಕರವಾದ ಆಹಾರದಂತಿವೆ.
9 ಸೋಮಾರಿಯು ನಾಶಮಾಡುವ ವ್ಯಕ್ತಿಯಂತಿದ್ದಾನೆ.
10 ಯೆಹೋವನ ಹೆಸರು ಬಲವಾದ ಗೋಪುರದಂತಿದೆ. ಒಳ್ಳೆಯವರು ಅದರೊಳಗೆ ಓಡಿಹೋಗಿ ಸುರಕ್ಷಿತವಾಗಿರುವರು.
11 ಐಶ್ವರ್ಯವು ತಮ್ಮನ್ನು ಬಲವಾದ ಕೋಟೆಯಂತೆ ಕಾಪಾಡುತ್ತದೆ ಎಂಬುದು ಐಶ್ವರ್ಯವಂತರ ಭಾವನೆ.
12 ಗರ್ವಿಯು ಬೇಗನೆ ಹಾಳಾಗುವನು; ದೀನನಾದರೋ ಸನ್ಮಾನವನ್ನು ಹೊಂದುವನು.
13 ಗಮನವಿಟ್ಟು ಕೇಳದೆ ಉತ್ತರಿಸುವವನು ಮೂಢನೇ ಸರಿ; ಅವನು ನಾಚಿಕೆಗೆ ಒಳಗಾಗುವನು.
14 ಅಸ್ವಸ್ಥನನ್ನು ಅವನ ಮನಸ್ಸು ಜೀವಂತವಾಗಿಡಬಲ್ಲದು. ಆದರೆ ಮುರಿದ ಆತ್ಮವನ್ನು ಯಾರು ಸಹಿಸಿಕೊಳ್ಳಬಲ್ಲರು?
15 ಜ್ಞಾನಿಗೆ ಹೆಚ್ಚು ಕಲಿತುಕೊಳ್ಳುವುದಕ್ಕೆ ಇಷ್ಟ; ಆದ್ದರಿಂದ ಅವನು ಗಮನವಿಟ್ಟು ಕೇಳುವನು.
16 ಪ್ರಮುಖನನ್ನು ಭೇಟಿಯಾಗಬೇಕಿದ್ದರೆ, ಅವನಿಗೆ ಒಂದು ಉಡುಗೊರೆಯನ್ನು ಕೊಡು. ಆಗ ನೀನು ಅವನನ್ನು ಸುಲಭವಾಗಿ ಭೇಟಿಯಾಗಬಹುದು.
17 ಮೊದಲು ತನ್ನ ವಾದವನ್ನು ಮಂಡಿಸುವವನು ಯಾವಾಗಲೂ ನೀತಿವಂತನಂತೆ ಕಾಣುತ್ತಾನೆ. ಆದರೆ ಪ್ರತಿವಾದಿ ಎದ್ದಮೇಲೆ ಅವನ ನಿಜಪರೀಕ್ಷೆ ಆಗುವುದು.
18 ಬಲಿಷ್ಠರಾದ ಇಬ್ಬರು ವಾದಮಾಡುತ್ತಿರುವಾಗ ನಿರ್ಧಾರಕ್ಕಾಗಿ ಚೀಟುಹಾಕಿದರೆ ಅವರ ಜಗಳ ಶಮನವಾಗುತ್ತದೆ.
19 ಅವಮಾನಿತನಾದ ಸಹೋದರನನ್ನು ಗೆದ್ದುಕೊಳ್ಳುವುದು ಕೋಟೆಯುಳ್ಳ ಪಟ್ಟಣವನ್ನು ಗೆದ್ದುಕೊಳ್ಳುವುದಕ್ಕಿಂತಲೂ ಕಷ್ಟ, ಜಗಳಗಳು ಅರಮನೆಯ ಬಾಗಿಲಿನಂತೆ ಜನರನ್ನು ಪ್ರತ್ಯೇಕಗೊಳಿಸುತ್ತದೆ.
20 ಒಬ್ಬನು ತಾನು ಹೇಳಿದ ಒಳ್ಳೆಯದಕ್ಕೇ ಆಗಲಿ ಕೆಟ್ಟದ್ದಕ್ಕೇ ಆಗಲಿ ಪ್ರತಿಫಲವನ್ನು ಪಡೆಯಲೇಬೇಕು.
21 ಒಬ್ಬನ ಮಾತುಗಳು ಜೀವವನ್ನು ಉಳಿಸಬಲ್ಲವು ಅಥವಾ ಮರಣವನ್ನು ತರಬಲ್ಲವು. ಜನರು ತಮ್ಮ ಮಾತಿನ ಫಲವನ್ನು ಅನುಭವಿಸಲೇಬೇಕು.
22 ಹೆಂಡತಿಯುಳ್ಳವನು ಸಂತೋಷವನ್ನೇ ಪಡೆದುಕೊಂಡಿದ್ದಾನೆ; ಯೆಹೋವನು ಅವನ ಬಗ್ಗೆ ಸಂತೋಷಪಡುವನು.
23 ಬಡವನು ವಿನಯದಿಂದ ಬೇಡಿಕೊಳ್ಳುವನು; ಐಶ್ವರ್ಯವಂತನು ಬಿರುಸಾಗಿ ಉತ್ತರಕೊಡುವನು.
24 ಒಬ್ಬನಿಗೆ ಬಹಳ ಮಂದಿ ಸ್ನೇಹಿತರಿದ್ದರೆ, ಅದು ಅವನನ್ನು ನಾಶಮಾಡಬಹುದು. ಆದರೆ ನಿಜವಾದ ಸ್ನೇಹಿತನು ಸಹೋದರನಿಗಿಂತಲೂ ನಂಬಿಗಸ್ತನಾಗಿರುವನು.
1 ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಅಪೊಸ್ತಲನಾದ ಪೌಲನು ಬರೆಯುವ ಪತ್ರ.
2 ಕೊಲೊಸ್ಸೆಯಲ್ಲಿರುವ ದೇವಜನರಿಗೆ ಅಂದರೆ ಕ್ರಿಸ್ತನಲ್ಲಿ ನಂಬಿಗಸ್ತರಾದ ಮತ್ತು ಪವಿತ್ರರಾದ ಸಹೋದರ, ಸಹೋದರಿಯರಿಗೆ ನಾನು ಈ ಪತ್ರವನ್ನು ನಮ್ಮ ಸಹೋದರನಾದ ತಿಮೊಥೆಯನ ಜೊತೆಗೂಡಿ ಬರೆಯುತ್ತಿದ್ದೇನೆ. ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಶಾಂತಿಯೂ ದೊರಕಲಿ.
3 ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ. ನಮ್ಮ ಪ್ರಭುವಾದ ಯೇಸು ಕ್ರಿಸ್ತನ ತಂದೆಯೇ ದೇವರು. 4 ನಾವು ದೇವರಿಗೆ ಸ್ತೋತ್ರ ಮಾಡಲು ಕಾರಣವೇನೆಂದರೆ ಕ್ರಿಸ್ತ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ, ದೇವಜನರೆಲ್ಲರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದ್ದೇವೆ. 5-6 ನಿಮಗೆ ನಿರೀಕ್ಷೆ ಇರುವುದರಿಂದಲೇ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದೀರಿ ಮತ್ತು ದೇವಜನರನ್ನು ಪ್ರೀತಿಸುತ್ತೀರಿ. ನೀವು ನಿರೀಕ್ಷಿಸುವಂಥವುಗಳು ನಿಮಗೋಸ್ಕರ ಪರಲೋಕದಲ್ಲಿ ಸಿದ್ಧ ಮಾಡಲ್ಪಟ್ಟಿವೆ ಎಂಬುದು ನಿಮಗೆ ತಿಳಿದಿದೆ. ನಿಮಗೆ ತಿಳಿಸಲಾದ ಸತ್ಯವಾಕ್ಯವನ್ನು ಅಂದರೆ ಸುವಾರ್ತೆಯನ್ನು ನೀವು ಕೇಳಿದಾಗ ಈ ನಿರೀಕ್ಷೆಯ ಬಗ್ಗೆ ತಿಳಿದುಕೊಂಡಿರಿ. ನೀವು ಸುವಾರ್ತೆಯನ್ನು ಕೇಳಿ ದೇವರ ಕೃಪೆಯ ಸತ್ಯಾರ್ಥವನ್ನು ತಿಳಿದುಕೊಂಡಂದಿನಿಂದ ಸುವಾರ್ತೆಯು ನಿಮ್ಮಲ್ಲಿ ವೃದ್ಧಿಯಾಗುತ್ತಿದೆ ಮತ್ತು ಜನರಿಗೆ ಆಶೀರ್ವಾದಕರವಾಗಿದೆ. ಅದೇ ರೀತಿ ಪ್ರಪಂಚದ ಎಲ್ಲಾ ಕಡೆಗಳಲ್ಲೂ ಸುವಾರ್ತೆಯು ವೃದ್ಧಿಯಾಗುತ್ತಿದೆ ಮತ್ತು ಆಶೀರ್ವಾದಕರವಾಗಿದೆ. 7 ನೀವು ಎಪಫ್ರನಿಂದ ದೇವರ ಕೃಪೆಯ ಬಗ್ಗೆ ತಿಳಿದುಕೊಂಡಿರಿ. ಅವನು ನಮ್ಮ ಜೊತೆಯಲ್ಲಿಯೇ ಸೇವೆ ಮಾಡುತ್ತಿದ್ದಾನೆ. ನಾವು ಅವನನ್ನು ಪ್ರೀತಿಸುತ್ತೇವೆ. ಅವನು ನಮಗೋಸ್ಕರ ಕ್ರಿಸ್ತನ ನಂಬಿಗಸ್ತ ಸೇವಕನಾಗಿದ್ದಾನೆ. 8 ಪವಿತ್ರಾತ್ಮ ಪ್ರೇರಿತವಾದ ನಿಮ್ಮ ಪ್ರೀತಿಯ ಬಗ್ಗೆ ಎಪಫ್ರನು ಸಹ ನಮಗೆ ತಿಳಿಸಿದನು.
9 ನಿಮ್ಮ ಬಗ್ಗೆ ಈ ಸಂಗತಿಗಳನ್ನು ಕೇಳಿದ ದಿನದಿಂದ, ನಿಮಗೋಸ್ಕರ ಎಡಬಿಡದೆ ಪ್ರಾರ್ಥಿಸುತ್ತಿದ್ದೇವೆ.
ದೇವರು ಅಪೇಕ್ಷಿಸುವ ಸಂಗತಿಗಳೆಲ್ಲವನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳಬೇಕೆಂತಲೂ ಆತ್ಮಿಕ ಸಂಗತಿಗಳಲ್ಲಿ ಮಹಾಜ್ಞಾನವನ್ನು ಮತ್ತು ತಿಳುವಳಿಕೆಯನ್ನು ಹೊಂದಿಕೊಳ್ಳಬೇಕೆಂತಲೂ 10 ಪ್ರಭುವಿಗೆ ಯೋಗ್ಯರಾಗಿ ನಡೆದು ಪ್ರತಿಯೊಂದು ವಿಷಯದಲ್ಲಿ ಆತನನ್ನು ಸಂತೋಷಪಡಿಸಬೇಕೆಂತಲೂ ನೀವು ಎಲ್ಲಾ ವಿಧವಾದ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ದೇವಜ್ಞಾನದಲ್ಲಿ ಬೆಳಯಬೇಕೆಂತಲೂ 11 ಆತನ ಮಹಿಮಾಶಕ್ತಿಯಿಂದ ಪರಿಪೂರ್ಣ ಬಲ ಹೊಂದಿ ಆನಂದಪೂರ್ವಕವಾದ ತಾಳ್ಮೆಯನ್ನು, ದೀರ್ಘಶಾಂತಿಯನ್ನು ಯಾವಾಗಲೂ ತೋರಿಸುವವರಾಗಿರಬೇಕೆಂತಲೂ ನಾವು ಪ್ರಾರ್ಥಿಸುತ್ತಿದ್ದೇವೆ.
12 ಆಗ ನೀವು ಆನಂದದಿಂದ ತಂದೆಗೆ ಕೃತಜ್ಞತಾಸ್ತುತಿ ಮಾಡಬಲ್ಲಿರಿ. ಬೆಳಕಿನಲ್ಲಿ ವಾಸಿಸುವ ತನ್ನ ಜನರೆಲ್ಲರಿಗೂ ಆತನು ಸಿದ್ಧಪಡಿಸಿರುವಂಥವುಗಳನ್ನು ಹೊಂದಿಕೊಳ್ಳಲು ಆತನೇ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದನು. 13 ದೇವರು ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡುಗಡೆ ಮಾಡಿದ್ದಾನೆ. ಆತನು ನಮ್ಮನ್ನು ತನ್ನ ಪ್ರಿಯ ಮಗನ (ಯೇಸುವಿನ) ರಾಜ್ಯದೊಳಗೆ ಸೇರಿಸಿದ್ದಾನೆ. 14 ಮಗನು ನಮ್ಮ ಪಾಪಗಳಿಗೆ ಪರಿಹಾರ ನೀಡಿದನು. ಆತನಲ್ಲಿಯೇ ನಮ್ಮ ಪಾಪಗಳಿಗೆ ಕ್ಷಮೆ ದೊರೆಯಿತು.
ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ
15 ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ.
ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ.
ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
16 ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು,
ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು,
ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.
17 ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು.
ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
18 ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ.
ಪ್ರತಿಯೊಂದೂ ಆತನಿಂದಲೇ ಬರುತ್ತದೆ.
ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.
19 ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
20 ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ
ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.
21 ಒಂದು ಕಾಲದಲ್ಲಿ ನೀವು ದೇವರಿಂದ ಬೇರ್ಪಟ್ಟಿದ್ದಿರಿ, ದುಷ್ಕೃತ್ಯಗಳನ್ನು ಮಾಡುತ್ತಾ ನಿಮ್ಮ ಮನಸ್ಸುಗಳಲ್ಲಿ ದೇವರಿಗೆ ಶತ್ರುಗಳಾಗಿದ್ದಿರಿ. 22 ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 23 ನೀವು ಕೇಳಿದ ಸುವಾರ್ತೆಯ ಮೇಲೆ ನಿಮಗಿರುವ ನಂಬಿಕೆಯಲ್ಲಿ ದೃಢವಾಗಿ ನೆಲೆಗೊಂಡಿದ್ದು ಅದರಿಂದುಂಟಾಗುವ ನಿರೀಕ್ಷೆಯನ್ನು ಬಿಟ್ಟು ಹೋಗದಿದ್ದರೆ ಇದು ಸಾಧ್ಯ. ಈ ಸುವಾರ್ತೆಯನ್ನು ಪ್ರಪಂಚದ ಜನರಿಗೆಲ್ಲ ಸಾರಲಾಗಿದೆ. ಪೌಲನಾದ ನಾನು ಈ ಸುವಾರ್ತೆಯನ್ನು ಸಾರುವ ಸೇವಕನಾದೆನು.
ಸಭೆಗಾಗಿ ಪೌಲನ ಕಾರ್ಯ
24 ನಾನು ನಿಮಗಾಗಿ ಅನುಭವಿಸಿದ ಬಾಧೆಗಳಿಂದ ನನಗೆ ಸಂತೋಷವಾಗಿದೆ. ಕ್ರಿಸ್ತನು ಸಭೆಯೆಂಬ ತನ್ನ ದೇಹದ ಮೂಲಕ ಇನ್ನೂ ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಈ ಸಂಕಟಗಳಲ್ಲಿ ನಾನು ಅನುಭವಿಸಬೇಕಾದವುಗಳನ್ನು ಆತನ ದೇಹಕ್ಕೋಸ್ಕರ ನನ್ನ ದೇಹದಲ್ಲಿ ಅನುಭವಿಸುತ್ತೇನೆ. 25 ನಾನು ಸಭೆಗೆ ಸೇವಕನಾದೆನು. ಏಕೆಂದರೆ ದೇವರು ನನಗೆ ವಿಶೇಷವಾದ ಕಾರ್ಯವನ್ನು ಮಾಡುವಂತೆ ಆಜ್ಞಾಪಿಸಿದನು. ಈ ಕಾರ್ಯವು ನಿಮಗೆ ಸಹಾಯ ಮಾಡುವುದು. ದೇವರ ಉಪದೇಶವನ್ನು ಸಂಪೂರ್ಣವಾಗಿ ತಿಳಿಸುವುದೇ ಆ ಕಾರ್ಯ. 26 ಆದಿಕಾಲದಿಂದಲೂ ಅಡಗಿಸಿಟ್ಟಿದ್ದ ರಹಸ್ಯಸತ್ಯವೇ ಈ ಉಪದೇಶ. ಈ ಸತ್ಯವನ್ನು ಎಲ್ಲಾ ಜನರಿಗೆ ಮರೆಮಾಡಲಾಗಿತ್ತು. ಈಗಲಾದರೋ ಈ ರಹಸ್ಯಸತ್ಯವನ್ನು ದೇವರ ಪವಿತ್ರ ಜನರಿಗೆ ತಿಳಿಸಲಾಗಿದೆ. 27 ಮಹಿಮಾತಿಶಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲು ದೇವರು ತೀರ್ಮಾನಿಸಿದನು. ಈ ಮಹಾಸತ್ಯವು ಎಲ್ಲಾ ಜನರಿಗಾಗಿ ಪ್ರಕಟವಾಯಿತು. ನಿಮ್ಮಲ್ಲಿರುವ ಕ್ರಿಸ್ತನೇ ಆ ಸತ್ಯವಾಗಿದ್ದಾನೆ. ದೇವರ ಮಹಿಮೆಯಲ್ಲಿ ಪಾಲುಹೊಂದಲು ಆತನೇ ನಮಗಿರುವ ಏಕೈಕ ನಿರೀಕ್ಷೆ. 28 ಆದ್ದರಿಂದಲೇ ನಾವು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುವವರಾಗಿದ್ದೇವೆ. ಪ್ರತಿಯೊಬ್ಬರನ್ನೂ ಬಲಪಡಿಸುವುದಕ್ಕಾಗಿ ಪ್ರತಿಯೊಬ್ಬರಿಗೂ ಉಪದೇಶಿಸುವುದಕ್ಕಾಗಿ ನಮ್ಮ ಜ್ಞಾನವನ್ನೆಲ್ಲಾ ಉಪಯೋಗಿಸುತ್ತೇವೆ. ಪ್ರತಿಯೊಬ್ಬರನ್ನು ಕ್ರಿಸ್ತನಲ್ಲಿ ಸಂಪೂರ್ಣ ಆತ್ಮಿಕರನ್ನಾಗಿ ಮಾಡಿ ದೇವರ ಸನ್ನಿಧಿಗೆ ತರಲು ಪ್ರಯತ್ನಿಸುತ್ತೇವೆ. 29 ಕ್ರಿಸ್ತನು ನನಗೆ ನೀಡಿರುವ ಬಲದಿಂದ ಇದಕ್ಕೋಸ್ಕರವೇ ಕೆಲಸ ಮಾಡುತ್ತೇನೆ ಮತ್ತು ಹೋರಾಡುತ್ತೇನೆ. ಆ ಬಲವೇ ನನ್ನ ಜೀವನದಲ್ಲಿ ಕಾರ್ಯಮಾಡುತ್ತಿದೆ.
Kannada Holy Bible: Easy-to-Read Version. All rights reserved. © 1997 Bible League International