Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
2 ರಾಜರುಗಳು 5:1-14

ನಾಮಾನನ ಸಮಸ್ಯೆ

ಅರಾಮ್ಯರ ರಾಜನ ಸೇನೆಯಲ್ಲಿ ನಾಮಾನನೆಂಬ ಸೇನಾಪತಿಯಿದ್ದನು. ನಾಮಾನನು ಅವನ ರಾಜನಿಗೆ ಬಹಳ ಪ್ರಾಮುಖ್ಯ ವ್ಯಕ್ತಿಯಾಗಿದ್ದನು. ಯೆಹೋವನು ನಾಮಾನನ ಮುಖಾಂತರ ಅರಾಮ್ಯರಿಗೆ ವಿಜಯವನ್ನು ತಂದುಕೊಟ್ಟಿದ್ದರಿಂದ ಅವನು ಪ್ರಮುಖನಾಗಿದ್ದನು. ನಾಮಾನನು ಮಹಾಪುರುಷನೂ ಶಕ್ತಿಶಾಲಿಯೂ ಆದ ಮನುಷ್ಯನಾಗಿದ್ದನು. ಆದರೆ ಅವನು ಕುಷ್ಠರೋಗ ಪೀಡಿತನಾಗಿದ್ದನು.

ಅರಾಮ್ಯರು ಇಸ್ರೇಲಿನಲ್ಲಿ ಹೋರಾಡಲು ಸೈನಿಕರ ಅನೇಕ ಗುಂಪುಗಳನ್ನು ಕಳುಹಿಸಿದರು. ಸೈನಿಕರು ಜನರನ್ನು ತಮ್ಮ ಗುಲಾಮರಂತೆ ಹಿಡಿದುತಂದರು. ಒಂದು ಸಲ ಚಿಕ್ಕ ಹುಡುಗಿಯೊಬ್ಬಳನ್ನು ಇಸ್ರೇಲ್ ದೇಶದಿಂದ ಹಿಡಿದುತಂದರು. ಈ ಚಿಕ್ಕ ಹುಡುಗಿಯು ನಾಮಾನನ ಪತ್ನಿಗೆ ಸೇವಕಿಯಾದಳು. ಈ ಹುಡುಗಿಯು ನಾಮಾನನ ಪತ್ನಿಗೆ, “ನನ್ನ ಒಡೆಯನಾದ ನಾಮಾನನು ಸಮಾರ್ಯದಲ್ಲಿ ವಾಸಿಸುವ ಪ್ರವಾದಿಯಾದ ಎಲೀಷನನ್ನು ಭೇಟಿಮಾಡಬೇಕೆಂದು ನಾನು ಆಶಿಸುತ್ತೇನೆ. ಆ ಪ್ರವಾದಿಯು ನಾಮಾನನ ಕುಷ್ಠರೋಗವನ್ನು ಗುಣಪಡಿಸಬಲ್ಲನು” ಎಂದು ಹೇಳಿದಳು.

ನಾಮಾನನು ತನ್ನ ಒಡೆಯನಾದ ಅರಾಮ್ಯರ ರಾಜನ ಬಳಿಗೆ ಹೋದನು. ಇಸ್ರೇಲಿನ ಹುಡುಗಿಯು ಹೇಳಿದ ಸಂಗತಿಗಳನ್ನು, ನಾಮಾನನು ಅರಾಮ್ಯರ ರಾಜನಿಗೆ ಹೇಳಿದನು.

ಆಗ ಅರಾಮ್ಯರ ರಾಜನು, “ಈಗಲೇ ಹೋಗು, ನಾನು ಇಸ್ರೇಲಿನ ರಾಜನಿಗೆ ಪತ್ರವೊಂದನ್ನು ಕಳುಹಿಸುತ್ತೇನೆ” ಎಂದು ಹೇಳಿದನು.

ನಾಮಾನನು ಇಸ್ರೇಲಿಗೆ ಹೋದನು. ನಾಮಾನನು ಮುನ್ನೂರ ನಲವತ್ತು ಕಿಲೋಗ್ರಾಂ ಬೆಳ್ಳಿ, ಆರುಸಾವಿರ ಚಿನ್ನದ ನಾಣ್ಯಗಳನ್ನು ಮತ್ತು ಹತ್ತು ಥಾನು ಬಟ್ಟೆಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಹೋದನು. ನಾಮಾನನು ಅರಾಮ್ಯರ ರಾಜನಿಂದ ಇಸ್ರೇಲ್ ರಾಜನಿಗೆ ಪತ್ರವೊಂದನ್ನು ತೆಗೆದುಕೊಂಡು ಹೋದನು. ಆ ಪತ್ರದಲ್ಲಿ, “…ನನ್ನ ಸೇವಕನಾದ ನಾಮಾನನನ್ನು ನಿಮ್ಮ ಬಳಿಗೆ ನಾನು ಕಳುಹಿಸುತ್ತಿದ್ದೇನೆ. ಅವನ ಕುಷ್ಠರೋಗವನ್ನು ಗುಣಪಡಿಸಿ” ಎಂದು ಬರೆದಿತ್ತು.

ಇಸ್ರೇಲಿನ ರಾಜನು ಪತ್ರವನ್ನು ಓದಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಾನು ದೇವರೇನು? ಇಲ್ಲ! ಹುಟ್ಟು ಮತ್ತು ಸಾವುಗಳ ಮೇಲೆ ನನಗೆ ಯಾವ ಶಕ್ತಿಯೂ ಇಲ್ಲ. ಹೀಗಿರುವಾಗ ಅರಾಮ್ಯರ ರಾಜನು ಕುಷ್ಠರೋಗಪೀಡಿತನಾದ ಮನುಷ್ಯನನ್ನು ನನ್ನ ಬಳಿಗೆ ಗುಣಪಡಿಸಲು ಏಕೆ ಕಳುಹಿಸಿದನು? ಇದರ ಬಗ್ಗೆ ನೀವೇ ಯೋಚಿಸಿರಿ. ಇದು ಒಂದು ಕುತಂತ್ರವೆಂಬುದು ನಿಮಗೇ ತಿಳಿಯುತ್ತದೆ. ಅರಾಮ್ಯರ ರಾಜನು ಯುದ್ಧವನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾನೆ!” ಎಂದು ಹೇಳಿದನು.

ಇಸ್ರೇಲಿನ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದು ದೇವಮನುಷ್ಯನಾದ ಎಲೀಷನಿಗೆ ತಿಳಿಯಿತು. ಎಲೀಷನು ರಾಜನಿಗೆ ಈ ಸಂದೇಶವನ್ನು ಕಳುಹಿಸಿದನು: “ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡಿದ್ದು ಏಕೆ? ನಾಮಾನನು ನನ್ನ ಬಳಿಗೆ ಬರಲಿ. ಇಸ್ರೇಲಿನಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ತಿಳಿಯುತ್ತದೆ!”

ನಾಮಾನನು ತನ್ನ ಕುದುರೆಗಳೊಂದಿಗೆ ಮತ್ತು ರಥಗಳೊಂದಿಗೆ ಎಲೀಷನ ಮನೆಗೆ ಬಂದು, ಬಾಗಿಲಿನ ಹೊರಗಡೆ ನಿಂತುಕೊಂಡನು. 10 ಎಲೀಷನು ತನ್ನ ಸಂದೇಶಕನ ಮೂಲಕ ನಾಮಾನನಿಗೆ, “ಹೋಗಿ, ಜೋರ್ಡನ್ ನದಿಯಲ್ಲಿ ಏಳು ಸಲ ಸ್ನಾನಮಾಡು. ಆಗ ನಿನ್ನ ಚರ್ಮರೋಗವು ಗುಣವಾಗುವುದು. ನೀನು ಸಂಪೂರ್ಣ ಶುದ್ಧನಾಗುವೆ” ಎಂದು ತಿಳಿಸಿದನು.

11 ನಾಮಾನನು ಕೋಪಗೊಂಡು, “ಎಲೀಷನು ಕೊನೆಯ ಪಕ್ಷ ಬಂದು, ನನ್ನೆದುರು ನಿಂತು, ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ನನ್ನನ್ನು ಕರೆಯುತ್ತಿದ್ದನೆಂದು ನಾನು ಭಾವಿಸಿದ್ದೆನು. ಅವನು ತನ್ನ ಕೈಗಳನ್ನು ನನ್ನ ದೇಹದ ಮೇಲೆ ಸವರಿ, ನನ್ನ ಕುಷ್ಠರೋಗವನ್ನು ಗುಣಪಡಿಸುವನೆಂದು ನಾನು ಭಾವಿಸಿದ್ದೆನು. 12 ದಮಸ್ಕದ ಅಬಾನಾ ಮತ್ತು ಪರ್ಪರ್ ನದಿಗಳು ಇಸ್ರೇಲಿನ ಎಲ್ಲಾ ನದಿಗಳಿಗಿಂತಲೂ ಉತ್ತಮ! ನಾನು ದಮಸ್ಕದ ಆ ನದಿಗಳಲ್ಲಿ ಸ್ನಾನಮಾಡಿ, ಶುದ್ಧನಾಗಬಾರದೇಕೆ?” ಎಂದುಕೊಂಡು ಕೋಪದಿಂದ ಹಿಂದಿರುಗಿ ಹೋದನು!

13 ಆಗ ನಾಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, “ತಂದೆಯೇ, ಪ್ರವಾದಿಯು ಒಂದು ಕಠಿಣವಾದ ಕಾರ್ಯವನ್ನು ಹೇಳಿದ್ದರೆ, ನೀವು ಅದನ್ನು ಮಾಡುತ್ತಿದ್ದಿರಿ! ಅಲ್ಲವೇ? ಹೀಗಿರಲು ಸುಲಭವಾದ ಒಂದು ಕಾರ್ಯವನ್ನು ಅವನು ನಿಮಗೆ ಹೇಳಿರುವಾಗ ನೀವು ಅವನಿಗೆ ವಿಧೇಯರಾಗಬಾರದೇಕೆ? ನೀವು ಸ್ನಾನಮಾಡಿದರೆ, ಶುಚಿಗೊಂಡು ಶುದ್ಧರಾಗುವಿರಿ” ಎಂದು ಹೇಳಿದರು.

14 ದೇವಮನುಷ್ಯನು (ಎಲೀಷನು) ಹೇಳಿದಂತೆಯೇ ನಾಮಾನನು ಜೋರ್ಡನ್ ನದಿಯಲ್ಲಿ ಇಳಿದು ಏಳುಸಾರಿ ಮುಳುಗಿ ಮೇಲೆದ್ದನು. ಆಗ ನಾಮಾನನು ಸಂಪೂರ್ಣ ಶುದ್ಧನಾದನು; ಅವನ ಚರ್ಮವು ಮಗುವಿನ ಚರ್ಮದಂತೆ ಕೋಮಲವಾಯಿತು.

ಕೀರ್ತನೆಗಳು 30

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

1 ಕೊರಿಂಥದವರಿಗೆ 9:24-27

24 ಓಟದ ಸ್ಪರ್ಧೆಯಲ್ಲಿ ಎಲ್ಲಾ ಓಟಗಾರರು ಓಡುತ್ತಾರೆಂಬುದು ನಿಮಗೆ ಗೊತ್ತಿದೆ. ಆದರೆ ಅವರಲ್ಲಿ ಒಬ್ಬನು ಮಾತ್ರ ಬಹುಮಾನವನ್ನು ಪಡೆದುಕೊಳ್ಳುತ್ತಾನೆ. ಆದ್ದರಿಂದ ಆ ರೀತಿಯಲ್ಲಿ ಓಡಿರಿ; ಗೆಲ್ಲುವುದಕ್ಕಾಗಿ ಓಡಿರಿ. 25 ಪಂದ್ಯಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಪದಕಗಳಿಸಲು ಕಟ್ಟುನಿಟ್ಟಾದ ತರಬೇತಿಯಲ್ಲಿರುತ್ತಾರೆ. ಆದರೆ ಈ ಲೋಕದ ಆ ಪದಕವು ಸ್ವಲ್ಪಕಾಲ ಮಾತ್ರ ಇರುತ್ತದೆ. ಆದರೆ ನಮ್ಮ ಪದಕವು ಶಾಶ್ವತವಾದದ್ದು. 26 ಆದ್ದರಿಂದ ಗುರಿಯನ್ನು ಹೊಂದಿರುವ ವ್ಯಕ್ತಿಯಂತೆ ಓಡುತ್ತೇನೆ. ಕೇವಲ ಗಾಳಿಯನ್ನು ಗುದ್ದದೆ, ನಿಜವಾಗಿಯೂ ಗುದ್ದಿ ಮುಷ್ಠಿಕಾಳಗ ಮಾಡುವ ವ್ಯಕ್ತಿಯಂತೆ ಹೋರಾಡುತ್ತೇನೆ. 27 ನಾನು ಗುದ್ದುವುದು ನನ್ನ ಸ್ವಂತ ದೇಹವನ್ನೇ. ಇತರ ಜನರಿಗೆ ಬೋಧಿಸಿದ ಮೇಲೆ ಸ್ವತಃ ನಾನೇ ತಿರಸ್ಕೃತನಾಗದಂತೆ ಅದನ್ನು ನನ್ನ ಗುಲಾಮನನ್ನಾಗಿ ಮಾಡಿಕೊಳ್ಳುತ್ತೇನೆ.

ಮಾರ್ಕ 1:40-45

ಕುಷ್ಠರೋಗಿಗೆ ಸ್ವಸ್ಥತೆ

(ಮತ್ತಾಯ 8:1-4; ಲೂಕ 5:12-16)

40 ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ ಆತನಿಗೆ, “ನೀನು ಇಷ್ಟಪಟ್ಟರೆ, ನನ್ನನ್ನು ಗುಣಪಡಿಸಬಲ್ಲೆ” ಎಂದು ಬೇಡಿಕೊಂಡನು.

41 ಯೇಸು ಅವನಿಗಾಗಿ ದುಃಖಪಟ್ಟು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಇಷ್ಟವಿದೆ. ನಿನಗೆ ಗುಣವಾಗಲಿ” ಎಂದು ಹೇಳಿದನು. 42 ಆ ಕೂಡಲೇ ಅವನಿಗೆ ಗುಣವಾಯಿತು.

43-44 ಯೇಸು ಅವನಿಗೆ, “ನಾನು ನಿನ್ನನ್ನು ಗುಣಪಡಿಸಿದೆನೆಂದು ಯಾರಿಗೂ ಹೇಳದೆ, ನೇರವಾಗಿ ಯಾಜಕನ ಬಳಿಗೆ ಹೋಗಿ ಮೈ ತೋರಿಸು. ನೀನು ಗುಣಹೊಂದಿರುವುದರಿಂದ ಮೋಶೆಯ ಆಜ್ಞಾನುಸಾರವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸು. ನಿನಗೆ ಗುಣವಾಯಿತು ಎಂಬುದಕ್ಕೆ ಇದು ಜನರಿಗೆ ಸಾಕ್ಷಿಯಾಗಿರುವುದು” ಎಂದು ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟನು.[a] 45 ಅವನು ಅಲ್ಲಿಂದ ಹೋಗಿ ಯೇಸುವೇ ತನ್ನನ್ನು ಗುಣಪಡಿಸಿದನೆಂದು ಜನರೆಲ್ಲರಿಗೆ ತಿಳಿಸಿದನು. ಈ ಸುದ್ದಿಯು ಎಲ್ಲೆಡೆ ಹರಡಿದ್ದರಿಂದ ಆತನು ಬಹಿರಂಗವಾಗಿ ಊರೊಳಗೆ ಹೋಗಲು ಸಾಧ್ಯವಾಗದೆ ಏಕಾಂತವಾದ ಸ್ಥಳಗಳಲ್ಲಿ ವಾಸಿಸಬೇಕಾಯಿತು. ಆದರೂ ಎಲ್ಲಾ ಕಡೆಗಳಿಂದ ಜನರು ಯೇಸುವಿದ್ದಲ್ಲಿಗೆ ಬರುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International