Revised Common Lectionary (Semicontinuous)
ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
ಆದ್ದರಿಂದ ನಿನ್ನನ್ನು ಕೊಂಡಾಡುವೆನು.
2 ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
ನೀನು ನನ್ನನ್ನು ಗುಣಪಡಿಸಿದೆ.
3 ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]
4 ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
5 ಆತನ ಕೋಪವು ಕ್ಷಣಮಾತ್ರವಿರುವುದು.
ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.
6 ನಾನು ಸುರಕ್ಷಿತವಾಗಿದ್ದಾಗ
ನನಗೆ ಕೇಡೇ ಇಲ್ಲವೆಂದುಕೊಂಡೆನು.
7 ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
ಭಯದಿಂದ ನಡುಗತೊಡಗಿದೆ.
8 ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
9 “ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
ಅವರು ನಿನ್ನನ್ನು ಸ್ತುತಿಸುವುದಿಲ್ಲ!
ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.
11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.
ಚರ್ಮರೋಗಿಯ ಶುದ್ಧೀಕರಣ
14 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಚರ್ಮರೋಗವಿದ್ದು ವಾಸಿಯಾದ ಜನರು ಅನುಸರಿಸಬೇಕಾದ ನಿಯಮಗಳು ಇಂತಿವೆ. ಇವರನ್ನು ಶುದ್ಧೀಕರಣಕ್ಕಾಗಿ ಯಾಜಕನ ಬಳಿಗೆ ಕರೆದುಕೊಂಡು ಬಂದಾಗ ಅನುಸರಿಸತಕ್ಕ ನಿಯಮಗಳು ಯಾವುವೆಂದರೆ:
“ಚರ್ಮರೋಗವಿದ್ದ ವ್ಯಕ್ತಿಯನ್ನು ಯಾಜಕನು ಪರೀಕ್ಷಿಸಬೇಕು. 3 ಯಾಜಕನು ಪಾಳೆಯದ ಹೊರಗೆ ಹೋಗಿ ಆ ವ್ಯಕ್ತಿಯ ಚರ್ಮರೋಗ ವಾಸಿಯಾಗಿದೆಯೋ ಇಲ್ಲವೋ ಎಂದು ನೋಡಬೇಕು. 4 ಆ ವ್ಯಕ್ತಿಯು ಆರೋಗ್ಯವಂತನಾಗಿದ್ದರೆ, ಆಗ ಯಾಜಕನು ಈ ಸಂಗತಿಗಳನ್ನು ಮಾಡುವುದಕ್ಕೆ ಅವನಿಗೆ ಹೇಳುವನು. ಆ ವ್ಯಕ್ತಿಯು ಎರಡು ಜೀವಂತವಾದ ಶುದ್ಧ ಪಕ್ಷಿಗಳನ್ನು ತರಬೇಕು. ಅಲ್ಲದೆ, ಅವನು ದೇವದಾರುಮರದ ತುಂಡನ್ನು, ಕೆಂಪು ಬಣ್ಣದ ಬಟ್ಟೆಯ ತುಂಡನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತರಬೇಕು. 5 ಬಳಿಕ ಒಂದು ಪಕ್ಷಿಯನ್ನು ಸೆಲೇ ನೀರಿನ ಮೇಲೆ ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕೆಂದು ಯಾಜಕನು ಅಪ್ಪಣೆ ಕೊಡಬೇಕು. 6 ಯಾಜಕನು ಸಜೀವವಾದ ಎರಡನೆಯ ಪಕ್ಷಿಯನ್ನು, ದೇವದಾರು ಮರದ ತುಂಡನ್ನು, ಕೆಂಪುಬಣ್ಣದ ಬಟ್ಟೆಯ ತುಂಡನ್ನು ಮತ್ತು ಹಿಸ್ಸೋಪ್ ಗಿಡವನ್ನು ತೆಗೆದುಕೊಳ್ಳಬೇಕು. ಸೆಲೇ ನೀರಿನ ಮೇಲೆ ವಧಿಸಲ್ಪಟ್ಟ ಪಕ್ಷಿಯ ರಕ್ತದಲ್ಲಿ ಜೀವಂತವಾಗಿರುವ ಪಕ್ಷಿಯನ್ನು ಮತ್ತು ಇತರ ವಸ್ತುಗಳನ್ನು ಅದ್ದಬೇಕು. 7 ಯಾಜಕನು ಚರ್ಮರೋಗವಿದ್ದ ವ್ಯಕ್ತಿಯ ಮೇಲೆ ರಕ್ತವನ್ನು ಏಳುಸಲ ಚಿಮಿಕಿಸಬೇಕು. ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಬಳಿಕ ಯಾಜಕನು ಬಯಲಿಗೆ ಹೋಗಿ ಜೀವಂತವಾಗಿರುವ ಪಕ್ಷಿಯನ್ನು ಬಿಟ್ಟುಬಿಡಬೇಕು.
8 “ಬಳಿಕ ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸರ್ವಾಂಗಕ್ಷೌರ ಮಾಡಿಕೊಂಡು ಸ್ನಾನ ಮಾಡಬೇಕು. ಆಗ ಅವನು ಶುದ್ಧನಾಗುವನು. ಬಳಿಕ ಆ ವ್ಯಕ್ತಿ ಪಾಳೆಯದೊಳಗೆ ಹೋಗಬಹುದು. ಆದರೆ ಅವನು ತನ್ನ ಡೇರೆಯಿಂದ ಏಳು ದಿನಗಳವರೆಗೆ ಹೊರಗೆ ಇರಬೇಕು. 9 ಏಳನೆಯ ದಿನದಲ್ಲಿ ಅವನು ತನ್ನ ಎಲ್ಲಾ ಕೂದಲನ್ನು ಕ್ಷೌರ ಮಾಡಿಕೊಳ್ಳಬೇಕು. ಅವನು ತನ್ನ ತಲೆಯ, ಗಡ್ಡದ ಮತ್ತು ಹುಬ್ಬಿನ ಕೂದಲನ್ನು, ಹೌದು, ಎಲ್ಲಾ ಕೂದಲನ್ನು ಕ್ಷೌರ ಮಾಡಿಸಿಕೊಳ್ಳಬೇಕು. ಬಳಿಕ ಅವನು ತನ್ನ ಬಟ್ಟೆಗಳನ್ನು ತೊಳೆದು ನೀರಿನಲ್ಲಿ ಸ್ನಾನಮಾಡಬೇಕು. ಅಂದಿನಿಂದ ಅವನು ಶುದ್ಧನಾಗಿರುವನು.
10 “ಎಂಟನೆಯ ದಿನದಲ್ಲಿ ಅವನು ಯಾವ ದೋಷವಿಲ್ಲದ ಎರಡು ಟಗರುಗಳನ್ನೂ ಒಂದು ವರ್ಷದ ಹೆಣ್ಣು ಕುರಿಮರಿಯನ್ನೂ ಎಣ್ಣೆ ಬೆರೆಸಿದ ಇಪ್ಪತ್ತನಾಲ್ಕು ಬಟ್ಟಲು[a] ಶ್ರೇಷ್ಠ ಗೋಧಿಹಿಟ್ಟನ್ನೂ ತೆಗೆದುಕೊಂಡು ಬರಬೇಕು. ಈ ಶ್ರೇಷ್ಠ ಗೋಧಿಹಿಟ್ಟು ಧಾನ್ಯನೈವೇದ್ಯಕ್ಕಾಗಿರುತ್ತದೆ. ಅವನು ಒಂದು ಸೇರು ಆಲಿವ್ ಎಣ್ಣೆಯನ್ನೂ ತೆಗೆದುಕೊಂಡು ಬರಬೇಕು. 11 ಯಾಜಕನು ಅವನನ್ನೂ ಅವನ ಸಮರ್ಪಣೆಗಳನ್ನೂ ದೇವದರ್ಶನಗುಡಾರದ ಬಾಗಿಲಿನಲ್ಲಿ ಯೆಹೋವನ ಸನ್ನಿಧಿಗೆ ತೆಗೆದುಕೊಂಡು ಬರಬೇಕು. (ಈ ಯಾಜಕನೇ ಅವನನ್ನು ಶುದ್ಧನೆಂದು ಪ್ರಕಟಿಸುವವನಾಗಿರುತ್ತಾನೆ.) 12 ಯಾಜಕನು ಟಗರುಗಳಲ್ಲಿ ಒಂದನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವನು. ಅವನು ಆ ಟಗರನ್ನೂ ಎಣ್ಣೆಯನ್ನೂ ಯೆಹೋವನ ಸನ್ನಿಧಿಯಲ್ಲಿ ನೈವೇದ್ಯ ಸಮರ್ಪಣೆಯಾಗಿ ನಿವಾಳಿಸುವನು. 13 ಬಳಿಕ ಯಾಜಕನು ಪಾಪಪರಿಹಾರಕ ಮತ್ತು ಸರ್ವಾಂಗಹೋಮ ಯಜ್ಞಪಶುಗಳನ್ನು ವಧಿಸುವ ಪವಿತ್ರಸ್ಥಳದಲ್ಲಿ ಟಗರನ್ನು ವಧಿಸುವನು. ದೋಷಪರಿಹಾರಕ ಯಜ್ಞವು ಪಾಪಪರಿಹಾರಕ ಯಜ್ಞದಂತಿದೆ. ಅದು ಯಾಜಕನಿಗೆ ಸೇರುತ್ತದೆ. ಅದು ಬಹಳ ಪವಿತ್ರವಾಗಿದೆ.
14 “ಯಾಜಕನು ದೋಷಪರಿಹಾರಕ ಯಜ್ಞಪಶುವಿನ ರಕ್ತದಿಂದ ಸ್ವಲ್ಪವನ್ನು ತೆಗೆದುಕೊಂಡು ಶುದ್ಧನಾಗಿ ಮಾಡಲ್ಪಡುವ ವ್ಯಕ್ತಿಯ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಬೇಕು. 15 ಅಲ್ಲದೆ ಯಾಜಕನು ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ತನ್ನ ಎಡಗೈಗೆ ಹೊಯ್ದುಕೊಳ್ಳಬೇಕು. 16 ಬಳಿಕ ಯಾಜಕನು ತನ್ನ ಬಲಗೈಯ ಬೆರಳನ್ನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ಅದ್ದಿ ಯೆಹೋವನ ಸನ್ನಿಧಿಯಲ್ಲಿ ಎಣ್ಣೆಯನ್ನು ಏಳುಸಲ ಚಿಮಿಕಿಸಬೇಕು. 17 ಯಾಜಕನು ತನ್ನ ಅಂಗೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ಶುದ್ಧನಾಗಲಿರುವ ವ್ಯಕ್ತಿಯ ದೋಷಪರಿಹಾರಕ ಯಜ್ಞಪಶುವಿನ ರಕ್ತವನ್ನು ಹಚ್ಚಿದ ಸ್ಥಳದಲ್ಲಿಯೇ ಅಂದರೆ ಬಲಗಿವಿಯ ತುದಿಗೆ, ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚುವನು. 18 ಯಾಜಕನು ತನ್ನ ಅಂಗೈಯಲ್ಲಿ ಉಳಿದ ಎಣ್ಣೆಯನ್ನು ಶುದ್ಧನಾಗಿ ಮಾಡಲ್ಪಡುವ ವ್ಯಕ್ತಿಯ ತಲೆಗೆ ಹಚ್ಚುವನು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಯೆಹೋವನ ಸನ್ನಿಧಿಯಲ್ಲಿ ಶುದ್ಧನನ್ನಾಗಿ ಮಾಡುವನು.
19 “ತರುವಾಯ ಯಾಜಕನು ಶುದ್ಧನಾಗಿ ಮಾಡಲ್ಪಡುವ ವ್ಯಕ್ತಿಗಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಬೇಕು. ಯಾಜಕನು ಪಾಪಪರಿಹಾರಕ ಯಜ್ಞಮಾಡುವುದರ ಮೂಲಕ ಆ ವ್ಯಕ್ತಿಯ ಅಶುದ್ಧತ್ವಕ್ಕಾಗಿ ಪ್ರಾಯಶ್ಚಿತ್ತ ಮಾಡುವನು. ಅದರ ನಂತರ ಸರ್ವಾಂಗಹೋಮಕ್ಕಾಗಿ ಯಾಜಕನು ಎರಡನೆಯ ಟಗರನ್ನು ವಧಿಸುವನು. 20 ಬಳಿಕ ಯಾಜಕನು ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಮತ್ತು ಧಾನ್ಯಸಮರ್ಪಣೆಯನ್ನು ಅರ್ಪಿಸುವನು. ಈ ರೀತಿಯಾಗಿ ಯಾಜಕನು ಆ ವ್ಯಕ್ತಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ಅವನು ಶುದ್ಧನಾಗುವನು.
ಸ್ಕೇವನ ಗಂಡುಮಕ್ಕಳು
11 ದೇವರು ಪೌಲನ ಕೈಯಿಂದ ಬಹು ವಿಶೇಷವಾದ ಮಹತ್ಕಾರ್ಯಗಳನ್ನು ಮಾಡಿಸುತ್ತಿದ್ದನು. 12 ಪೌಲನ ಕರವಸ್ತ್ರಗಳನ್ನು ಮತ್ತು ಬಟ್ಟೆಗಳನ್ನು ಕೆಲವರು ತೆಗೆದುಕೊಂಡು ಹೋಗಿ ರೋಗಿಗಳ ಮೇಲೆ ಹಾಕುತ್ತಿದ್ದರು. ಆ ಕೂಡಲೇ ರೋಗಿಗಳು ಗುಣಹೊಂದುತ್ತಿದ್ದರು. ದೆವ್ವಗಳಿಂದ ಪೀಡಿತರಾಗಿದ್ದವರನ್ನು ದೆವ್ವಗಳು ಬಿಟ್ಟುಹೋಗುತ್ತಿದ್ದವು.
13-14 ಕೆಲವು ಯೆಹೂದ್ಯರು ಸಹ ಊರೂರುಗಳಿಗೆ ಸಂಚರಿಸುತ್ತಾ ದೆವ್ವದಿಂದ ಪೀಡಿತರಾಗಿದ್ದ ಜನರೊಳಗಿಂದ ದೆವ್ವಗಳನ್ನು ಯೇಸುವಿನ ಹೆಸರಿನ ಮೂಲಕ ಹೊರಡಿಸುತ್ತಿದ್ದರು. ಸ್ಕೇವ ಎಂಬವನ ಏಳು ಮಂದಿ ಗಂಡುಮಕ್ಕಳೂ ಹೀಗೇ ಮಾಡುತ್ತಿದ್ದರು. (ಸ್ಕೇವನು ಪ್ರಧಾನಯಾಜಕನಾಗಿದ್ದನು.) ಅವರೆಲ್ಲರೂ, “ಪೌಲನು ಯಾವ ಯೇಸುವಿನ ಬಗ್ಗೆ ಹೇಳುತ್ತಿದ್ದಾನೋ ಆ ಯೇಸುವಿನ ಹೆಸರಿನಿಂದಲೇ ನೀನು ಹೊರಗೆ ಬರಬೇಕೆಂದು ನಾವು ಆಜ್ಞಾಪಿಸುತ್ತೇವೆ” ಎಂದು ಹೇಳುತ್ತಿದ್ದರು.
15 ಆದರೆ ಒಂದು ಸಲ ದೆವ್ವವೊಂದು ಅವರಿಗೆ, “ನನಗೆ ಯೇಸುವೂ ಗೊತ್ತು ಪೌಲನೂ ಗೊತ್ತು. ಆದರೆ ನೀವು ಯಾರು?” ಎಂದು ಪ್ರತ್ಯುತ್ತರ ಕೊಟ್ಟಿತು.
16 ಬಳಿಕ ದೆವ್ವಪೀಡಿತನಾಗಿದ್ದ ಆ ಮನುಷ್ಯನು ಈ ಯೆಹೂದ್ಯರ ಮೇಲೆ ಹಾರಿಬಿದ್ದನು. ಅವನು ಅವರಿಗಿಂತ ಹೆಚ್ಚು ಬಲವುಳ್ಳವನಾಗಿದ್ದನು. ಅವನು ಅವರಿಗೆ ಹೊಡೆದು ಅವರ ಬಟ್ಟೆಗಳನ್ನು ಹರಿದು ಹಾಕಿದನು. ಅವರು ಆ ಮನೆಯಿಂದ ಓಡಿಹೋದರು.
17 ಎಫೆಸದಲ್ಲಿದ್ದ ಯೆಹೂದ್ಯರು ಮತ್ತು ಗ್ರೀಕರು ಇದನ್ನು ಕೇಳಿ ಭಯಗ್ರಸ್ತರಾದರು ಮತ್ತು ಪ್ರಭು ಯೇಸುವಿನ ಹೆಸರನ್ನು ಸನ್ಮಾನಿಸಿದರು. 18 ವಿಶ್ವಾಸಿಗಳಲ್ಲಿ ಅನೇಕರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡತೊಡಗಿದರು. 19 ವಿಶ್ವಾಸಿಗಳಲ್ಲಿ ಕೆಲವರು ಮಂತ್ರಗಳನ್ನು ಮಾಡುತ್ತಿದ್ದರು. ಈ ವಿಶ್ವಾಸಿಗಳು ತಮ್ಮ ಮಂತ್ರ ಪುಸ್ತಕಗಳನ್ನು ತೆಗೆದುಕೊಂಡು ಬಂದು ಜನರೆಲ್ಲರ ಮುಂದೆ ಅವುಗಳನ್ನು ಸುಟ್ಟುಹಾಕಿದರು. ಈ ಪುಸ್ತಕಗಳ ಬೆಲೆಯು ಸುಮಾರು ಐವತ್ತು ಸಾವಿರ ಬೆಳ್ಳಿನಾಣ್ಯಗಳು. 20 ಹೀಗೆ ಪ್ರಭುವಿನ ವಾಕ್ಯವು ಶಕ್ತಿಯುತವಾದ ರೀತಿಯಲ್ಲಿ ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದಾಗಿ ಹೆಚ್ಚುಹೆಚ್ಚು ಜನರು ನಂಬಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International