Revised Common Lectionary (Semicontinuous)
ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
ಆದ್ದರಿಂದ ನಿನ್ನನ್ನು ಕೊಂಡಾಡುವೆನು.
2 ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
ನೀನು ನನ್ನನ್ನು ಗುಣಪಡಿಸಿದೆ.
3 ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]
4 ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
5 ಆತನ ಕೋಪವು ಕ್ಷಣಮಾತ್ರವಿರುವುದು.
ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.
6 ನಾನು ಸುರಕ್ಷಿತವಾಗಿದ್ದಾಗ
ನನಗೆ ಕೇಡೇ ಇಲ್ಲವೆಂದುಕೊಂಡೆನು.
7 ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
ಭಯದಿಂದ ನಡುಗತೊಡಗಿದೆ.
8 ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
9 “ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
ಅವರು ನಿನ್ನನ್ನು ಸ್ತುತಿಸುವುದಿಲ್ಲ!
ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.
11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.
21 “ಆದರೆ ಅವನು ಬಡವನಾಗಿದ್ದು ಆ ಸಮರ್ಪಣೆಗಳನ್ನು ಕೊಡುವುದಕ್ಕೆ ಅಶಕ್ತನಾಗಿದ್ದರೆ, ಆಗ ಅವನು ದೋಷಪರಿಹಾರಕ್ಕಾಗಿ ಒಂದು ಟಗರನ್ನು ತೆಗೆದುಕೊಳ್ಳಬೇಕು. ಅದು ಯೆಹೋವನಿಗೆ ನೈವೇದ್ಯವಾಗಿ ನಿವಾಳಿಸಲ್ಪಡುವ ಅರ್ಪಣೆಯಾಗಿರುವುದು. ಹೀಗೆ ಯಾಜಕನು ಆ ವ್ಯಕಿಗಾಗಿ ಪ್ರಾಯಶ್ಚಿತ್ತ ಮಾಡಬಹುದು. ಅವನು ಎಣ್ಣೆ ಬೆರೆಸಿದ ಮೂರು ಸೇರು ಶ್ರೇಷ್ಠ ಗೋಧಿಹಿಟ್ಟನ್ನು ತೆಗೆದುಕೊಳ್ಳಬೇಕು. ಗೋಧಿಹಿಟ್ಟು ಧಾನ್ಯಸಮರ್ಪಣೆಯಾಗಿ ಉಪಯೋಗಿಸಲ್ಪಡುವುದು. ಅವನು ಒಂದು ಸೇರು ಆಲಿವ್ ಎಣ್ಣೆಯನ್ನು, 22 ಎರಡು ಬೆಳವಕ್ಕಿಗಳನ್ನು ಮತ್ತು ಎರಡು ಪಾರಿವಾಳ ಮರಿಗಳನ್ನು ತೆಗೆದುಕೊಳ್ಳಬೇಕು. ಬಡವರು ಸಹ ಅವುಗಳನ್ನು ಕೊಡಲು ಶಕ್ತರಾಗಿರುವರು. ಒಂದು ಪಕ್ಷಿಯು ಪಾಪಪರಿಹಾರಕ ಯಜ್ಞಕ್ಕಾಗಿಯೂ ಇನ್ನೊಂದು ಪಕ್ಷಿಯು ಸರ್ವಾಂಗಹೋಮಕ್ಕಾಗಿಯೂ ಇರುತ್ತದೆ.
23 “ಎಂಟನೆಯ ದಿನದಲ್ಲಿ, ಅವನು ಅವುಗಳನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು. ಅವನು ಶುದ್ಧನಾಗುವಂತೆ ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು. 24 ದೋಷಪರಿಹಾರಕ್ಕಾಗಿ ತಂದ ಕುರಿಮರಿಯನ್ನು ಮತ್ತು ಎಣ್ಣೆಯನ್ನು ಯಾಜಕನು ತೆಗೆದುಕೊಂಡು, ಅವುಗಳನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಬೇಕು. 25 ಬಳಿಕ ದೋಷಪರಿಹಾರಕ ಯಜ್ಞವಾದ ಕುರಿಮರಿಯನ್ನು ಯಾಜಕನು ವಧಿಸುವನು. ಯಾಜಕನು ದೋಷಪರಿಹಾರಕ ಯಜ್ಞದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಶುದ್ಧೀಕರಿಸಲ್ಪಡುವ ವ್ಯಕ್ತಿಯ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೂ ಹಚ್ಚಬೇಕು. 26 ಅಲ್ಲದೆ ಯಾಜಕನು ಈ ಎಣ್ಣೆಯಲ್ಲಿ ಸ್ವಲ್ಪವನ್ನು ಅವನ ಎಡಗೈಗೆ ಹೊಯ್ಯಬೇಕು. 27 ತನ್ನ ಎಡಗೈಯಲ್ಲಿರುವ ಎಣ್ಣೆಯನ್ನು ಯೆಹೋವನ ಸನ್ನಿಧಿಯಲ್ಲಿ ಏಳುಸಲ ತನ್ನ ಬಲಗೈಯ ಬೆರಳಿನಿಂದ ಚಿಮಿಕಿಸುವನು. 28 ಬಳಿಕ ತನ್ನ ಅಂಗೈಯಲ್ಲಿರುವ ಎಣ್ಣೆಯಲ್ಲಿ ಸ್ವಲ್ಪವನ್ನು ದೋಷಪರಿಹಾರಕ ಯಜ್ಞದ ರಕ್ತವನ್ನು ಹಚ್ಚಿದ ಸ್ಥಳದಲ್ಲಿಯೇ ಹಚ್ಚುವನು; ಸ್ವಲ್ಪ ಎಣ್ಣೆಯನ್ನು ಶುದ್ಧೀಕರಿಸಲ್ಪಡುವ ವ್ಯಕ್ತಿಯ ಬಲಗಿವಿಯ ತುದಿಗೆ ಹಚ್ಚಬೇಕು; ಸ್ವಲ್ಪ ಎಣ್ಣೆಯನ್ನು ಬಲಗೈಯ ಹೆಬ್ಬೆರಳಿಗೂ ಸ್ವಲ್ಪ ಎಣ್ಣೆಯನ್ನು ಬಲಗಾಲಿನ ಹೆಬ್ಬೆರಳಿಗೂ ಹಚ್ಚಬೇಕು. 29 ಯಾಜಕನು ತನ್ನ ಅಂಗೈಯಲ್ಲಿ ಉಳಿದ ಎಣ್ಣೆಯ ನ್ನು ಶುದ್ಧೀಕರಿಸಲ್ಪಡುವ ವ್ಯಕ್ತಿಯ ತಲೆಗೆ ಹಚ್ಚಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಯೆಹೋವನ ಸನ್ನಿಧಿಯಲ್ಲಿ ಶುದ್ಧೀಕರಿಸುವನು.
30 “ಬಳಿಕ ಯಾಜಕನು ಬೆಳವಕ್ಕಿಗಳಲ್ಲಿ ಅಥವಾ ಪಾರಿವಾಳ ಮರಿಗಳಲ್ಲಿ ಒಂದನ್ನು ಸಮರ್ಪಿಸಬೇಕು (ಆ ವ್ಯಕ್ತಿಯು ಯಾವುದನ್ನು ಕೊಡಲು ಶಕ್ತನಾಗಿದ್ದಾನೊ ಅದನ್ನು ಅವನು ಸಮರ್ಪಿಸಬೇಕು.) 31 ಅವನು ಈ ಪಕ್ಷಿಗಳಲ್ಲಿ ಒಂದನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಅರ್ಪಿಸಬೇಕು. ಅವನು ಪಕ್ಷಿಗಳನ್ನು ಧಾನ್ಯಸಮರ್ಪಣೆಯೊಂದಿಗೆ ಅರ್ಪಿಸಬೇಕು. ಹೀಗೆ ಯಾಜಕನು ಆ ವ್ಯಕ್ತಿಯ ಶುದ್ಧೀಕರಣಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು; ಆಗ ಆ ವ್ಯಕ್ತಿ ಶುದ್ಧನಾಗುವನು.”
32 ಚರ್ಮರೋಗದಿಂದ ವಾಸಿಯಾದವನನ್ನು ಶುದ್ಧೀಕರಿಸುವ ನಿಯಮಗಳು ಇವೇ. ಶುದ್ಧರಾಗಲು ವಿಧಿಬದ್ಧವಾದ ಯಜ್ಞಗಳನ್ನು ಅರ್ಪಿಸುವುದಕ್ಕೆ ಶಕ್ತರಲ್ಲದ ಜನರಿಗೋಸ್ಕರವಿರುವ ನಿಯಮಗಳು ಇವೇ.
ಸ್ತ್ರೀಯೊಬ್ಬಳು ಮಾಡಿದ ವಿಶೇಷ ಕಾರ್ಯ
(ಮಾರ್ಕ 14:9; ಯೋಹಾನ 12:1-8)
6 ಯೇಸು ಬೆಥಾನಿಯಲ್ಲಿದ್ದಾಗ ಸಿಮೋನ ಎಂಬ ಕುಷ್ಠರೋಗಿಯ ಮನೆಯಲ್ಲಿದ್ದನು. 7 ಆಗ ಸ್ತ್ರೀಯೊಬ್ಬಳು ಬಹು ಬೆಲೆಬಾಳುವ ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಊಟಕ್ಕೆ ಕುಳಿತ್ತಿದ್ದ ಯೇಸುವಿನ ತಲೆಯ ಮೇಲೆ ಆ ಸುಗಂಧ ತೈಲವನ್ನು ಸುರಿದಳು.
8 ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧತೈಲವನ್ನು ಏಕೆ ಹಾಳು ಮಾಡಿದೆ? 9 ಅದನ್ನು ಬಹಳ ಹಣಕ್ಕೆ ಮಾರಿ ಬಡ ಜನರಿಗೆ ಕೊಡಬಹುದಾಗಿತ್ತಲ್ಲಾ” ಎಂದರು.
10 ಆದರೆ ಈ ಘಟನೆಗೆ ಕಾರಣವನ್ನು ತಿಳಿದಿದ್ದ ಯೇಸು ತನ್ನ ಶಿಷ್ಯರಿಗೆ, “ಈ ಸ್ತ್ರೀಗೆ ಏಕೆ ತೊಂದರೆ ಕೊಡುತ್ತೀರಿ? ಆಕೆಯು ನನಗೆ ಬಹಳ ಒಳ್ಳೆಯ ಕಾರ್ಯವನ್ನು ಮಾಡಿದಳು. 11 ಬಡಜನರು ನಿಮ್ಮೊಂದಿಗೆ ಯಾವಾಗಲೂ ಇರುತ್ತಾರೆ. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ. 12 ನಾನು ಸತ್ತನಂತರ ನನ್ನನ್ನು ಸಮಾಧಿಗೆ ಸಿದ್ಧಪಡಿಸುವುದಕ್ಕಾಗಿ ಈ ಸ್ತ್ರೀಯು ನನ್ನ ದೇಹದ ಮೇಲೆ ಸುಗಂಧತೈಲವನ್ನು ಸುರಿದಳು. 13 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಸುವಾರ್ತೆಯನ್ನು ತಿಳಿಸಲಾಗುವುದೋ ಅಲ್ಲೆಲ್ಲಾ ಈ ಕಾರ್ಯವನ್ನು ಈಕೆಯ ನೆನಪಿಗಾಗಿ ತಿಳಿಸಲಾಗುವುದು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International