Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ಆಸಾಫ.
75 ದೇವರೇ, ನಿನ್ನನ್ನು ಕೊಂಡಾಡುವೆವು!
ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.
2 ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
ನಾನು ನೀತಿಯಿಂದಲೇ ತೀರ್ಪುಕೊಡುವೆ.
3 ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.
4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.
6 ಭೂಲೋಕದ ಯಾವ ಶಕ್ತಿಯೂ
ಮನುಷ್ಯನನ್ನು ಉದ್ಧಾರ ಮಾಡಲಾರದು.
7 ನ್ಯಾಯಾಧಿಪತಿಯು ದೇವರೇ.
ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
8 ಯೆಹೋವನ ಕೈಯಲ್ಲಿ ಪಾತ್ರೆಯಿದೆ.
ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
9 ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.
ಜೆರುಸಲೇಮಿನ ಭವಿಷ್ಯ
3 ಜೆರುಸಲೇಮೇ, ನಿನ್ನ ಜನರು ದೇವರಿಗೆ ವಿರುದ್ಧವಾಗಿ ನಡೆದರು. ಇತರರನ್ನು ಹಿಂಸಿಸಿದರು ಮತ್ತು ಪಾಪದಿಂದ ಮಲಿನರಾದರು. 2 ನಿನ್ನ ಜನರು ನನ್ನ ಮಾತುಗಳನ್ನು ಕೇಳಲಿಲ್ಲ. ನನ್ನ ಬೋಧನೆಯನ್ನು ಸ್ವೀಕರಿಸಲಿಲ್ಲ. ಜೆರುಸಲೇಮ್ ದೇವರ ಮೇಲೆ ಭರವಸವಿಡಲಿಲ್ಲ. ಆತನ ಬಳಿಗೆ ಹೋಗಲಿಲ್ಲ. 3 ಜೆರುಸಲೇಮಿನ ನಾಯಕರು ಗರ್ಜಿಸುವ ಸಿಂಹದಂತೆ ಇದ್ದಾರೆ, ಅವರ ನ್ಯಾಯಾಧಿಪತಿಗಳು ರಾತ್ರಿ ಕಾಲದಲ್ಲಿ ಕುರಿಗಳ ಮೇಲೆ ಬೀಳುವ ಹಸಿದ ತೋಳಗಳಂತಿದ್ದಾರೆ. ಬೆಳಗಾಗಲು, ಏನೂ ಉಳಿಯುವುದಿಲ್ಲ. 4 ಅವರ ಪ್ರವಾದಿಗಳು ಬಡಾಯಿಗಾರರೂ ದ್ರೋಹಿಗಳೂ ಆಗಿದ್ದಾರೆ. ಅವರು ಯಾವಾಗಲೂ ಇನ್ನೂಇನ್ನೂ ಹೆಚ್ಚಾಗಿ ದೊರಕುವಂತೆ ಪ್ರಯತ್ನಿಸಿರುತ್ತಾರೆ. ಅವರ ಯಾಜಕರು ಪವಿತ್ರ ವಸ್ತುಗಳನ್ನು ಸಾಧಾರಣ ವಸ್ತುಗಳನ್ನಾಗಿ ಉಪಯೋಗಿಸಿದ್ದಾರೆ. ದೇವರ ನಿಯಮಗಳನ್ನು ನಿರ್ಲಕ್ಷಿಸಿದ್ದಾರೆ. 5 ಆದರೆ ದೇವರು ಇನ್ನೂ ಆ ನಗರದಲ್ಲಿದ್ದಾನೆ. ಅವರಿಗೆ ಇನ್ನೂ ಒಳ್ಳೆಯದನ್ನೇ ಮಾಡುತ್ತಿದ್ದಾನೆ. ಆತನು ತಪ್ಪು ಕಾರ್ಯಗಳನ್ನು ಮಾಡುವವನಲ್ಲ. ತನ್ನ ಜನರಿಗೆ ಸಹಾಯ ಮಾಡುತ್ತಿರುತ್ತಾನೆ. ಪ್ರತಿ ದಿನವೂ ಸರಿಯಾದ ತೀರ್ಮಾನ ಮಾಡಲು ತನ್ನ ಜನರಿಗೆ ಸಹಾಯ ಮಾಡುತ್ತಾನೆ. ಆದರೆ ಆ ದುಷ್ಟಜನರು ತಮ್ಮ ದುಷ್ಟತನಕ್ಕಾಗಿ ನಾಚಿಕೆಪಡುತ್ತಿಲ್ಲ.
6 ದೇವರು ಹೀಗೆನ್ನುತ್ತಾನೆ, “ನಾನು ಇಡೀ ಜನಾಂಗಗಳನ್ನು ನಾಶಮಾಡಿದ್ದೇನೆ. ಅವರ ಬುರುಜುಗಳನ್ನು ನಾಶಮಾಡಿ, ಅವರ ರಸ್ತೆಗಳಲ್ಲಿ ಯಾರೂ ನಡೆಯದ ಹಾಗೆ ಮಾಡಿರುತ್ತೇನೆ. ಅವರ ನಗರಗಳು ನಿರ್ಜನವಾಗಿವೆ. ಯಾರೂ ಅಲ್ಲಿ ವಾಸಮಾಡುವದಿಲ್ಲ. 7 ನೀವು ಇದರಿಂದ ಪಾಠ ಕಲಿಯಬೇಕೆಂದು ಇದನ್ನೆಲ್ಲಾ ಹೇಳುತ್ತಿದ್ದೇನೆ. ನೀವು ನನ್ನನ್ನು ಗೌರವಿಸಿ ನನಗೆ ಭಯಪಡಬೇಕೆಂದು ನಾನು ಈ ವಿಷಯಗಳನ್ನು ತಿಳಿಸುತ್ತಿದ್ದೇನೆ. ನೀವು ಹೀಗೆ ಮಾಡುವುದಾದರೆ ನಿನ್ನ ಮನೆಯು ನಾಶವಾಗದು. ನೀವು ನನ್ನ ನಿಯಮಗಳನ್ನು ಅನುಸರಿಸುವದಾದರೆ ನಾನು ಆಲೋಚಿಸಿರುವ ಪ್ರಕಾರ ನಿಮ್ಮನ್ನು ಶಿಕ್ಷಿಸುವದಿಲ್ಲ.” ಆದರೆ ಆ ದುಷ್ಟ ಜನರು ತಮ್ಮ ಮಾರ್ಗವನ್ನು ಬಿಡದೆ ದುಷ್ಟತನದಲ್ಲಿಯೇ ಮುಂದುವರಿಯುತ್ತಿದ್ದಾರೆ.
8 ಯೆಹೋವನು ಹೀಗೆ ಹೇಳುತ್ತಾನೆ: “ನನ್ನನ್ನು ಕಾದುಕೊಂಡಿರಿ. ನೀವು ನನ್ನ ನ್ಯಾಯತೀರ್ಪಿನ ತನಕ ಕಾದುಕೊಂಡಿರಿ. ನಾನು ಬೇರೆ ಜನಾಂಗಗಳನ್ನು ಇಲ್ಲಿಗೆ ಕರೆದು ನಿಮ್ಮನ್ನು ಶಿಕ್ಷಿಸುವಂತೆ ಮಾಡುವ ಹಕ್ಕು ನನಗಿದೆ. ನಿಮ್ಮ ಮೇಲೆ ನನಗಿರುವ ಸಿಟ್ಟು ತೋರಿಸಲು ನಾನು ಆ ಜನಾಂಗಗಳನ್ನು ಉಪಯೋಗಿಸುವೆನು. ನಿಮ್ಮ ಮೇಲೆ ನಾನು ಎಷ್ಟರಮಟ್ಟಿಗೆ ಕೋಪಗೊಂಡಿದ್ದೇನೆ ಎಂದು ಅವರ ಮೂಲಕ ನಿಮಗೆ ತಿಳಿದುಬರುವುದು. ಆಗ ಇಡೀ ದೇಶವೇ ನಾಶವಾಗುವುದು. 9 ಆಗ ನಾನು ಇತರ ಜನಾಂಗಗಳವರ ಭಾಷೆಯನ್ನು ಬದಲಾಯಿಸಿ ದೇವರಾದ ಯೆಹೋವನ ನಾಮವನ್ನು ಉಚ್ಚರಿಸುವಂತೆ ಮಾಡುವೆನು. ಅವರೆಲ್ಲರೂ ನನ್ನನ್ನು ಆರಾಧಿಸುವರು. ಒಟ್ಟಾಗಿ ಸೇರಿ ಒಂದೇ ಜನಾಂಗವಾಗಿ ನನ್ನನ್ನು ಆರಾಧಿಸುವರು. 10 ಇಥಿಯೋಪ್ಯದಲ್ಲಿ ನದಿಯ ಆಚೆ ದಡದವರೆಗೂ ಜನರು ಬರುವರು. ನನ್ನಿಂದ ಚದರಿಹೋಗಿದ್ದ ಜನರು ನನ್ನ ಬಳಿಗೆ ಬರುವರು. ನನ್ನನ್ನು ಆರಾಧಿಸಲು ಬರುವವರು ನನಗೆ ಕಾಣಿಕೆಗಳನ್ನು ತರುವರು.
11 “ಆಗ ಜೆರುಸಲೇಮೇ, ನಿನ್ನ ಜನರು ನನಗೆ ವಿರುದ್ಧವಾಗಿ ಮಾಡಿದ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವುದಿಲ್ಲ. ಯಾಕೆಂದರೆ ನಾನು ಆ ದುಷ್ಟ ಜನರನ್ನೆಲ್ಲಾ ನಿರ್ಮೂಲ ಮಾಡುವೆನು. ಅಹಂಕಾರ ತುಂಬಿದ ಜನರನ್ನು ನಾನು ತೆಗೆದುಬಿಡುವೆನು. ನನ್ನ ಪವಿತ್ರ ಪರ್ವತದಲ್ಲಿ ಗರ್ವವುಳ್ಳವರು ಯಾರೂ ಇರುವದಿಲ್ಲ. 12 ನನ್ನ ಪಟ್ಟಣದೊಳಗೆ ಬರೇ ದೀನದರಿದ್ರರೇ ವಾಸಮಾಡುವರು. ಅವರು ಯೆಹೋವನ ಹೆಸರಿನಲ್ಲಿ ಭರವಸೆ ಇಡುವವರಾಗಿರುವರು. 13 ಇಸ್ರೇಲಿನಲ್ಲಿ ಉಳಿದವರು ದುಷ್ಕೃತ್ಯಗಳನ್ನು ಮಾಡುವುದಿಲ್ಲ. ಸುಳ್ಳು ಹೇಳುವದಿಲ್ಲ. ಜನರನ್ನು ಮೋಸಗೊಳಿಸುವದಿಲ್ಲ. ಅವರು ಕುರಿಗಳಂತೆ ಮೇದು ವಿಶ್ರಾಂತಿ ತೆಗೆದುಕೊಳ್ಳುವರು. ಯಾರೂ ಅವರ ಗೊಡವೆಗೆ ಹೋಗುವುದಿಲ್ಲ.”
ಹಾಗರಳ ಮತ್ತು ಸಾರಳ ಉದಾಹರಣೆ
21 ನಿಮ್ಮಲ್ಲಿ ಕೆಲವರು ಮೋಶೆಯ ಧರ್ಮಶಾಸ್ತ್ರಕ್ಕೆ ಇನ್ನೂ ಅಧೀನರಾಗಿರಲು ಇಷ್ಟಪಡುತ್ತೀರಿ. ಧರ್ಮಶಾಸ್ತ್ರವು ಏನು ಹೇಳುತ್ತದೆಂಬುದು ನಿಮಗೆ ಗೊತ್ತಿದೆಯೋ? ನನಗೆ ತಿಳಿಸಿ. 22 ಪವಿತ್ರ ಗ್ರಂಥವು ಹೇಳುವುದೇನೆಂದರೆ, ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು. ಒಬ್ಬ ಮಗನ ತಾಯಿಯು ದಾಸತ್ವದಲ್ಲಿದ್ದಳು, ಮತ್ತೊಬ್ಬ ಮಗನ ತಾಯಿಯು ಸ್ವತಂತ್ರಳಾಗಿದ್ದಳು. 23 ಮಾನವ ಸಹಜವಾದ ರೀತಿಯಲ್ಲಿ ಅಬ್ರಹಾಮನ ಮಗನು ಆ ದಾಸಿಯಲ್ಲಿ ಹುಟ್ಟಿದನು. ಸ್ವತಂತ್ರಳಾಗಿದ್ದ ಸ್ತ್ರೀಯಲ್ಲಿ ಹುಟ್ಟಿದ ಮಗನಾದರೋ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನದ ಫಲವಾಗಿದ್ದನು.
24 ಈ ಸಂಗತಿಗಳು ನಮಗೆ ಉಪಮಾನವಾಗಿವೆ. ದೇವರ ಮತ್ತು ಮನುಷ್ಯರ ನಡುವೆ ಆದ ಎರಡು ಒಡಂಬಡಿಕೆಗಳಿಗೆ ಈ ಇಬ್ಬರು ಸ್ತ್ರೀಯರು ಸಂಕೇತವಾಗಿದ್ದಾರೆ. ಸೀನಾಯಿ ಪರ್ವತದ ಮೇಲೆ ದೇವರು ಕೊಟ್ಟ ಧರ್ಮಶಾಸ್ತ್ರವೇ ಮೊದಲನೆ ಒಡಂಬಡಿಕೆ. ಈ ಒಡಂಬಡಿಕೆಯ ಅಧೀನದಲ್ಲಿದ್ದ ಜನರು ಗುಲಾಮರಂತಿದ್ದರು. ತಾಯಿಯಾದ ಹಾಗರಳು ಆ ಒಡಂಬಡಿಕೆಯಂತಿದ್ದಳು. 25 ಆದ್ದರಿಂದ ಹಾಗರಳು ಅರೇಬಿಯಾದಲ್ಲಿರುವ ಸೀನಾಯಿ ಪರ್ವತದಂತಿದ್ದಾಳೆ. ಯೆಹೂದ್ಯರ ನಗರವಾದ ಜೆರುಸಲೇಮಿಗೆ ಆಕೆಯು ಅನುರೂಪವಾಗಿದ್ದಾಳೆ. ಈ ನಗರವು ಗುಲಾಮಗಿರಿಯಲ್ಲಿದೆ ಮತ್ತು ಅದರ ಜನರೆಲ್ಲರೂ ಧರ್ಮಶಾಸ್ತ್ರಕ್ಕೆ ಗುಲಾಮರಾಗಿದ್ದಾರೆ. 26 ಆದರೆ ಪರಲೋಕದಲ್ಲಿರುವ ಜೆರುಸಲೇಮ್ ಸ್ವತಂತ್ರಳಾದ ಸ್ತ್ರೀಯಂತಿದೆ. ಇದೇ ನಮ್ಮ ತಾಯಿ. 27 ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:
“ಮಕ್ಕಳನ್ನು ಹೆತ್ತಿಲ್ಲದ ಬಂಜೆಯೇ,
ಸಂತೋಷಪಡು.
ಪ್ರಸವವೇದನೆಯಿಲ್ಲದವಳೇ,
ಸ್ವರವೆತ್ತಿ ಕೂಗು.
ಗಂಡನುಳ್ಳವಳಿಗಿಂತ ಗಂಡ
ಬಿಟ್ಟವಳಿಗೆ ಮಕ್ಕಳು ಹೆಚ್ಚು.”(A)
28-29 ಅಬ್ರಹಾಮನ ಒಬ್ಬ ಮಗನು ಮಾನವ ಸಹಜವಾದ ರೀತಿಯಲ್ಲಿ ಜನಿಸಿದನು. ಅಬ್ರಹಾಮನ ಮತ್ತೊಬ್ಬ ಮಗನು ದೇವರ ವಾಗ್ದಾನದ ಫಲವಾಗಿ ದೇವರಾತ್ಮನ ಶಕ್ತಿಯಿಂದ ಜನಿಸಿದನು. ನನ್ನ ಸಹೋದರ ಸಹೋದರಿಯರೇ, ನೀವು ಸಹ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೀರಿ. ಮಾನವ ಸಹಜವಾದ ರೀತಿಯಲ್ಲಿ ಜನಿಸಿದ್ದ ಮಗನು ಮತ್ತೊಬ್ಬ ಮಗನನ್ನು ಹಿಂಸೆಪಡಿಸಿದನು. ಇದೇ ಈಗಲೂ ನಡೆಯುತ್ತಿದೆ. 30 ಆದರೆ ಪವಿತ್ರ ಗ್ರಂಥವು ಏನು ಹೇಳುತ್ತದೆ? “ದಾಸಿಯನ್ನು ಮತ್ತು ಅವಳ ಮಗನನ್ನು ಹೊರಗೆ ಹಾಕು; ಸ್ವತಂತ್ರಳಾದ ಸ್ತ್ರೀಯ ಮಗನು ತನ್ನ ತಂದೆಯು ಹೊಂದಿರುವ ಪ್ರತಿಯೊಂದನ್ನು ಪಡೆದುಕೊಳ್ಳುವನು. ಆದರೆ ದಾಸಿಗೆ ಏನೂ ದೊರೆಯುವುದಿಲ್ಲ.”(B) 31 ಆದ್ದರಿಂದ, ನನ್ನ ಸಹೋದರ ಸಹೋದರಿಯರೇ, ನಾವು ದಾಸಿಯ ಮಕ್ಕಳಲ್ಲ. ನಾವು ಸ್ವತಂತ್ರಳಾದ ಸ್ತ್ರೀಯ ಮಕ್ಕಳಾಗಿದ್ದೇವೆ.
ಸ್ವತಂತ್ರರಾಗಿರಿ
5 ಈಗ ನಮಗೆ ಸ್ವತಂತ್ರವಿದೆ. ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದ ದೃಢವಾಗಿರಿ. ಮನಸ್ಸನ್ನು ಬದಲಾಯಿಸಿಕೊಂಡು ಮತ್ತೆ ಧರ್ಮಶಾಸ್ತ್ರದ ಗುಲಾಮಗಿರಿಗೆ ಹೋಗಬೇಡಿರಿ.
Kannada Holy Bible: Easy-to-Read Version. All rights reserved. © 1997 Bible League International