Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 75

ಸ್ತುತಿಗೀತೆ. ರಚನೆಗಾರ: ಆಸಾಫ.

75 ದೇವರೇ, ನಿನ್ನನ್ನು ಕೊಂಡಾಡುವೆವು!
    ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
    ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.

ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
    ನಾನು ನೀತಿಯಿಂದಲೇ ತೀರ್ಪುಕೊಡುವೆ.
ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
    ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.

4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
    ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.

ಭೂಲೋಕದ ಯಾವ ಶಕ್ತಿಯೂ
    ಮನುಷ್ಯನನ್ನು ಉದ್ಧಾರ ಮಾಡಲಾರದು.
ನ್ಯಾಯಾಧಿಪತಿಯು ದೇವರೇ.
    ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
    ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
ಯೆಹೋವನ ಕೈಯಲ್ಲಿ ಪಾತ್ರೆಯಿದೆ.
    ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
    ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
    ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
    ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.

ನಹೂಮ 1:1-13

ಎಲ್ಕೋಷ್ ಎಂಬ ಊರಿನವನಾದ ನಹೂಮನಿಗೆ ಆದ ದೇವದರ್ಶನದ ಪುಸ್ತಕ. ನಿನೆವೆ ಪಟ್ಟಣದ ವಿಷಯವಾಗಿ ದುಃಖಕರವಾದ ಸಂದೇಶ.

ನಿನೆವೆಯ ಮೇಲೆ ಯೆಹೋವನು ಕೋಪಗೊಂಡಿದ್ದಾನೆ

ಯೆಹೋವನು ಸ್ವಾಭಿಮಾನವುಳ್ಳ ದೇವರಾಗಿದ್ದಾನೆ.
    ಆತನು ಪಾಪಿಗಳ ಮೇಲೆ ಸೇಡನ್ನು ತೀರಿಸುವ ದೇವರು.
    ಆತನು ಬಹಳವಾಗಿ ಕೋಪಗೊಂಡಿದ್ದಾನೆ.
ಯೆಹೋವನು ಪಾಪಿಗಳನ್ನು ಶಿಕ್ಷಿಸುವ ದೇವರು.
    ಆತನು ವೈರಿಗಳನ್ನು ಶಿಕ್ಷಿಸುವನು.
    ಆತನ ವೈರಿಗಳ ಮೇಲೆ ಕೋಪವು ಸದಾಕಾಲವಿರುವುದು.
ಯೆಹೋವನು ತಾಳ್ಮೆಯುಳ್ಳ ದೇವರು
    ಮತ್ತು ಬಲಿಷ್ಠನಾದ ದೇವರಾಗಿದ್ದಾನೆ!
ಪಾಪಿಗಳನ್ನು ಆತನು ಶಿಕ್ಷಿಸುವನು.
ಆತನಿಂದ ಅವರು ತಪ್ಪಿಸಿಕೊಳ್ಳಲಾರರು.
    ದುಷ್ಟಜನರನ್ನು ಶಿಕ್ಷಿಸಲು ಯೆಹೋವನು ಬರುವನು.
ಆತನು ತನ್ನ ಸಾಮರ್ಥ್ಯವನ್ನು ಬಿರುಗಾಳಿಯಲ್ಲಿಯೂ ಸುಂಟರಗಾಳಿಯಲ್ಲಿಯೂ ತೋರ್ಪಡಿಸುವನು.
    ಮನುಷ್ಯನು ನೆಲದ ಧೂಳಿನ ಮೇಲೆ ನಡೆಯುತ್ತಾರೆ,
    ಯೆಹೋವನಾದರೋ ಮೋಡಗಳ ಮೇಲೆ ನಡೆಯುತ್ತಾನೆ.
ಯೆಹೋವನು ಸಮುದ್ರಕ್ಕೆ ಗದರಿಸಿದಾಗ ಅದು ಒಣಗಿಹೋಗುವುದು.
    ಆತನು ಎಲ್ಲಾ ನದಿಗಳನ್ನು ಬತ್ತಿಸಿಬಿಡುವನು.
ಕರ್ಮೆಲ್ ಮತ್ತು ಬಾಷಾನಿನ ಫಲವತ್ತಾದ ನೆಲಗಳು ಒಣಗಿ ಪಾಳುಬೀಳುವವು.
    ಲೆಬನೋನಿನ ಪುಷ್ಪವು ಬಾಡಿಹೋಗುವದು.
ಯೆಹೋವನು ಬರುತ್ತಾನೆ.
    ಪರ್ವತಗಳು ಭಯದಿಂದ ನಡುಗುವವು.
    ಬೆಟ್ಟಗಳು ಕರಗಿಹೋಗುವವು.
ಯೆಹೋವನು ಬರುತ್ತಾನೆ,
    ಮತ್ತು ಭೂಮಿಯು ಭಯದಿಂದ ನಡುಗುವುದು.
ಇಡೀ ಪ್ರಪಂಚ ಮತ್ತು ಅದರಲ್ಲಿರುವ
    ಜನರೆಲ್ಲಾ ಭಯದಿಂದ ನಡುಗುವರು.
ಯೆಹೋವನ ಮಹಾ ರೌದ್ರಕ್ಕೆದುರಾಗಿ ಯಾರೂ ನಿಲ್ಲಲಾರರು.
    ಯಾರೂ ಆ ಮಹಾ ಕೋಪವನ್ನು ಸಹಿಸಲು ಸಾಧ್ಯವಿಲ್ಲ.
ಆತನ ಕೋಪವು ಬೆಂಕಿಯಂತೆ ದಹಿಸುವದು.
    ಆತನು ಬರುವಾಗ ಬಂಡೆಯು ಪುಡಿಯಾಗುವುದು.
ಯೆಹೋವನು ಒಳ್ಳೆಯವನು.
    ಕಷ್ಟದ ಸಮಯದಲ್ಲಿ ಆತನು ಆಶ್ರಯಸ್ಥಾನ.
    ಆತನ ಮೇಲೆ ಭರವಸವಿಡುವವರನ್ನು ಸಂರಕ್ಷಿಸುತ್ತಾನೆ.
ಆದರೆ ಆತನು ತನ್ನ ವೈರಿಗಳನ್ನು ಪೂರ್ತಿಯಾಗಿ ನಾಶಮಾಡುತ್ತಾನೆ.
    ತೆರೆಯಂತೆ ಅವರನ್ನು ಕೊಚ್ಚಿಕೊಂಡು ಹೋಗುತ್ತಾನೆ.
    ಕತ್ತಲೆಯ ಕಡೆಗೆ ವೈರಿಗಳನ್ನು ಅಟ್ಟಿಬಿಡುವನು.
ಯೆಹೋವನಿಗೆ ವಿರುದ್ಧವಾಗಿ ಏಕೆ ಯೋಜನೆ ಹಾಕುತ್ತೀರಿ?
    ನೀವು ಯಾವ ಕುಯುಕ್ತಿಯನ್ನೂ ಮಾಡದ ಹಾಗೆ
    ಆತನು ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುತ್ತಾನೆ.
10 ಮಡಕೆಯ ಅಡಿಯಲ್ಲಿ ಉರಿಯುವ ಮುಳ್ಳುಕಡ್ಡಿಗಳಂತೆ
    ನೀವು ಸಂಪೂರ್ಣವಾಗಿ ನಾಶವಾಗುವಿರಿ.
ಜಂಬುಹುಲ್ಲಿನಂತೆ
    ನೀವು ಸುಟ್ಟು ಭಸ್ಮವಾಗುವಿರಿ.

11 ಅಶ್ಶೂರವೇ, ನಿನ್ನಿಂದ ಒಬ್ಬ ಮನುಷ್ಯನು ಬಂದು, ಯೆಹೋವನಿಗೆ ವಿರುದ್ಧವಾದ ಯೋಜನೆಗಳನ್ನು ಹಾಕಿದನು.
    ದುರಾಲೋಚನೆಯನ್ನು ಕೊಟ್ಟನು.
12 ಯೆಹೋವನು ಯೆಹೂದನಿಗೆ ಇಂತೆಂದೆನು:
“ಅಶ್ಶೂರದ ಜನರು ಬಲಶಾಲಿಗಳು.
    ಅವರಲ್ಲಿ ಅಸಂಖ್ಯಾತ ಸೈನಿಕರಿದ್ದಾರೆ.
    ಆದರೆ ಅವರೆಲ್ಲಾ ತುಂಡರಿಸಲ್ಪಡುವರು.
    ಅವರೆಲ್ಲಾ ಹತರಾಗುವರು.
ನನ್ನ ಜನರೇ, ನೀವು ಕಷ್ಟ ಅನುಭವಿಸುವಂತೆ ಮಾಡಿದೆನು.
    ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ.
13 ನಾನು ನಿಮ್ಮನ್ನು ಸ್ವತಂತ್ರರನ್ನಾಗಿ ಬಿಟ್ಟಿದ್ದೇನೆ.
    ಅಶ್ಶೂರದವರ ಹಿಡಿತದಿಂದ ನಿಮ್ಮನ್ನು ಪಾರುಮಾಡಿದ್ದೇನೆ.
ನಿಮ್ಮ ಭುಜದಿಂದ ನೊಗವನ್ನು ತೆಗೆದುಹಾಕುವೆನು.
    ನಿಮ್ಮನ್ನು ಬಂಧಿಸಿದ್ದ ಸಂಕೋಲೆಯನ್ನು ಮುರಿದುಹಾಕುವೆನು.”

ಪ್ರಕಟನೆ 14:12-20

12 ಈ ಪರಿಸ್ಥಿತಿಯಲ್ಲಿ, ದೇವರ ಪರಿಶುದ್ಧ ಜನರು ತಾಳ್ಮೆಯಿಂದಿರಬೇಕು. ಅವರು ದೇವರ ಆಜ್ಞೆಗಳಿಗೆ ವಿಧೇಯರಾಗಿರಬೇಕು ಮತ್ತು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿರಬೇಕು.

13 ನಂತರ ನಾನು ಪರಲೋಕದಿಂದ ಒಂದು ಧ್ವನಿಯನ್ನು ಕೇಳಿದೆನು. ಆ ಧ್ವನಿಯು ಹೀಗೆ ಹೇಳಿತು: “ಇದನ್ನು ಬರೆ: ಇಂದಿನಿಂದ ಪ್ರಭುವಿನ ಭಕ್ತರಾಗಿದ್ದು ಸಾಯುವಂತಹ ಜನರು ಧನ್ಯರು.”

“ಹೌದು, ಇದು ನಿಜ. ಆ ಜನರು ತಮ್ಮ ಪ್ರಯಾಸದ ಕೆಲಸವನ್ನು ಮುಗಿಸಿದವರಾಗಿ ವಿಶ್ರಾಂತಿ ಪಡೆಯುತ್ತಾರೆ. ಅವರು ಮಾಡಿದುದೆಲ್ಲವೂ ಅವರೊಂದಿಗೇ ಇರುತ್ತದೆ” ಎಂದು ಪವಿತ್ರಾತ್ಮನು ಹೇಳುತ್ತಾನೆ.

ಭೂಲೋಕದ ಸುಗ್ಗೀಕಾಲ

14 ನಾನು ನೋಡಿದಾಗ ನನ್ನ ಎದುರಿನಲ್ಲಿ ಮನುಷ್ಯಕುಮಾರನಂತೆ[a] ಕಾಣುತ್ತಿದ್ದವನು ಆ ಬಿಳಿಯ ಮೋಡದ ಮೇಲೆ ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು ಮತ್ತು ಆತನ ಕೈಯಲ್ಲಿ ಹರಿತವಾದ ಕುಡುಗೋಲಿತ್ತು. 15 ಆಗ ಮತ್ತೊಬ್ಬ ದೇವದೂತನು ಆಲಯದಿಂದ ಹೊರಗೆ ಬಂದನು. ಈ ದೇವದೂತನು ಮೋಡದ ಮೇಲೆ ಕುಳಿತಿರುವಾತನಿಗೆ, “ನಿನ್ನ ಕುಡುಗೋಲನ್ನು ತೆಗೆದುಕೊಂಡು ಭೂಮಿಯ ಫಸಲನ್ನು ಒಟ್ಟುಗೂಡಿಸು. ಯಾಕೆಂದರೆ ಸುಗ್ಗಿಕಾಲವು ಬಂದಿದೆ. ಭೂಮಿಯ ಫಸಲು ಮಾಗಿದೆ” ಎಂದು ಹೇಳಿದನು. 16 ಆದ್ದರಿಂದ ಮೋಡದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.

17 ನಂತರ ಮತ್ತೊಬ್ಬ ದೇವದೂತನು ಪರಲೋಕದ ಆಲಯದಿಂದ ಹೊರಗೆ ಬಂದನು. ಆ ದೇವದೂತನಲ್ಲಿಯೂ ಹರಿತವಾದ ಒಂದು ಕುಡುಗೋಲಿತ್ತು. 18 ನಂತರ ಮತ್ತೊಬ್ಬ ದೇವದೂತನು ಯಜ್ಞವೇದಿಕೆಯಿಂದ ಬಂದನು. ಅವನಿಗೆ ಬೆಂಕಿಯ ಮೇಲೆ ಅಧಿಕಾರವಿತ್ತು. ಅವನು ಹರಿತವಾದ ಕುಡುಗೋಲಿದ್ದ ದೇವದೂತನನ್ನು ಕರೆದು, “ನಿನ್ನ ಹರಿತವಾದ ಕುಡುಗೋಲನ್ನು ತೆಗೆದುಕೊಂಡು, ಭೂಮಿಯ ದ್ರಾಕ್ಷಿತೋಟದಿಂದ ದ್ರಾಕ್ಷಿಗೊಂಚಲುಗಳನ್ನು ಒಟ್ಟುಗೂಡಿಸು. ಭೂಮಿಯ ದ್ರಾಕ್ಷಿಯೆಲ್ಲಾ ಮಾಗಿವೆ” ಎಂದು ಹೇಳಿದನು. 19 ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ, ದ್ರಾಕ್ಷಿಯನ್ನೆಲ್ಲಾ ಒಟ್ಟುಗೂಡಿಸಿ, ದೇವರ ಕೋಪವೆಂಬ ದ್ರಾಕ್ಷಿಯ ಆಲೆಗೆ ಎಸೆದನು. 20 ಆ ದ್ರಾಕ್ಷಿಯನ್ನು ನಗರದ ಹೊರಭಾಗದಲ್ಲಿದ್ದ ದ್ರಾಕ್ಷಿಯ ಆಲೆಯಲ್ಲಿ ಕಿವುಚಿ ಹಾಕಿದರು. ಆ ದ್ರಾಕ್ಷಿಯ ಆಲೆಯಿಂದ ರಕ್ತವು ಹೊರಕ್ಕೆ ಬಂದಿತು. ಅದು ಕುದುರೆಗಳ ತಲೆಗಳಷ್ಟು ಎತ್ತರಕ್ಕೆ ಏರಿ ಇನ್ನೂರು ಮೈಲಿಗಳಷ್ಟು ದೂರ ಹರಿಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International