Revised Common Lectionary (Complementary)
11 ಯೆಹೋವನೇ, ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನಾನು ಜೀವಿಸುತ್ತಾ ನಿನ್ನ ಸತ್ಯತೆಗಳಿಗೆ ವಿಧೇಯನಾಗುವೆನು.
ನಿನ್ನ ಹೆಸರನ್ನು ಆರಾಧಿಸಲು ನನಗೆ ಸಹಾಯಮಾಡು.
ನನ್ನ ಜೀವನದಲ್ಲಿ ಅದೇ ಅತ್ಯಂತ ಮುಖ್ಯವಾದದ್ದು.
12 ನನ್ನ ದೇವರಾದ ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಸ್ತುತಿಸುವೆನು;
ನಿನ್ನ ಹೆಸರನ್ನು ಎಂದೆಂದಿಗೂ ಸನ್ಮಾನಿಸುವೆನು!
13 ನೀನು ನನ್ನ ಮೇಲೆ ಎಷ್ಟೋ ಪ್ರೀತಿಯನ್ನು ಇಟ್ಟಿರುವೆ.
ನೀನು ನನ್ನನ್ನು ಪಾತಾಳದಿಂದ ರಕ್ಷಿಸಿದೆ.
14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
ಕ್ರೂರಜನರು ಗುಂಪುಕೂಡಿಕೊಂಡು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
ಅವರು ನನ್ನನ್ನು ಗೌರವಿಸುವುದಿಲ್ಲ.
15 ಯೆಹೋವನೇ, ಕನಿಕರವೂ ದಯೆಯೂ ಉಳ್ಳ ದೇವರು ನೀನೇ.
ನೀನು ತಾಳ್ಮೆಯುಳ್ಳವನೂ ನಂಬಿಗಸ್ತನೂ ಪ್ರೀತಿಪೂರ್ಣನೂ ಆಗಿರುವೆ.
16 ನನ್ನ ಮೊರೆಗೆ ಕಿವಿಗೊಟ್ಟು ಕರುಣೆತೋರು.
ನಿನ್ನ ಸೇವಕನಾದ ನನಗೆ ಬಲವನ್ನು ದಯಪಾಲಿಸು.
ನಿನ್ನ ಸೇವಕನ ಮಗನನ್ನು ರಕ್ಷಿಸು.
17 ಯೆಹೋವನೇ, ನೀನು ನನಗೆ ಮಾಡಲಿರುವ ಸಹಾಯಕ್ಕಾಗಿ ಸೂಚನೆಯೊಂದನ್ನು ತೋರಿಸು.
ನನ್ನ ಶತ್ರುಗಳು ಆ ಸೂಚನೆಯನ್ನು ಕಂಡು ನಿರಾಶರಾಗುವರು.
ನೀನು ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಸಹಾಯ ಮಾಡಲಿರುವಿಯೆಂದು ಅದು ತೋರಿಸುತ್ತದೆ.
ಸುಳ್ಳುದೇವರಿಗೆ ಯೆಹೋವನ ಸವಾಲು
21 ಯಾಕೋಬ್ಯರ ಅರಸನಾದ ಯೆಹೋವನು ಹೇಳುವುದೇನೆಂದರೆ: “ಬನ್ನಿ ನಿಮ್ಮ ವಾದಗಳನ್ನು ಮಂಡಿಸಿರಿ, ನಿಮ್ಮ ಆಧಾರಗಳನ್ನು ತೋರಿಸಿರಿ. 22 ನಿಮ್ಮ ವಿಗ್ರಹಗಳು ನಮ್ಮ ಬಳಿಗೆ ಬಂದು ನಡೆಯುತ್ತಿರುವುದನ್ನು ತಿಳಿಸಲಿ. ಪ್ರಾರಂಭದಲ್ಲಿ ನಡೆದಿದ್ದೇನು? ಮುಂದೆ ನಡೆಯಲಿರುವುದೇನು? ನಮಗೆ ತಿಳಿಸಿರಿ. ನಾವು ಸೂಕ್ಷ್ಮವಾಗಿ ಕೇಳಿ ಭವಿಷ್ಯವನ್ನು ತಿಳಿದುಕೊಳ್ಳುವೆವು. 23 ಮುಂದೆ ಸಂಭವಿಸುವುದನ್ನು ತಿಳಿದುಕೊಳ್ಳಲು ನಾವು ಯಾವ ಸೂಚನೆಗಳಿಗಾಗಿ ಎದುರು ನೋಡಬೇಕು? ತಿಳಿಸಿರಿ. ನೀವೇ ದೇವರುಗಳೆಂದು ಆಗ ನಮಗೆ ಖಚಿತವಾಗುವುದು. ಏನನ್ನಾದರೂ ಮಾಡಿರಿ. ಯಾವದನ್ನಾದರೂ ಮಾಡಿರಿ. ಒಳ್ಳೆಯದನ್ನು, ಕೆಟ್ಟದ್ದನ್ನು ಮಾಡಿರಿ. ಆಗ ನೀವು ಜೀವವುಳ್ಳವರೆಂದು ತಿಳಿದು ನಿಮಗೆ ಗೌರವಿಸಿ, ಭಯಪಟ್ಟು ನಿಮ್ಮನ್ನು ಹಿಂಬಾಲಿಸುವೆವು.
24 “ಸುಳ್ಳುದೇವರುಗಳೇ, ಕೇಳಿ. ನೀವು ಶೂನ್ಯಕ್ಕಿಂತ ಕಡಿಮೆಯಾದವರು. ನೀವು ಏನನ್ನೂ ಮಾಡಲಾರಿರಿ. ದೇವರ ದೃಷ್ಠಿಯಲ್ಲಿ ತುಚ್ಛನಾದವನು ಮಾತ್ರ ನಿಮ್ಮನ್ನು ಪೂಜಿಸುವನು.”
ಯೆಹೋವನೊಬ್ಬನೇ ದೇವರು
25 “ಉತ್ತರದಿಕ್ಕಿನಲ್ಲಿರುವ ಒಬ್ಬ ಮನುಷ್ಯನನ್ನು ನಾನು ಎಚ್ಚರಪಡಿಸಿದೆನು.
ಅವನು ಪೂರ್ವದಿಕ್ಕಿನಿಂದ ಬರುವನು.
ನನ್ನ ನಾಮವನ್ನು ಅವನು ಆರಾಧಿಸುವನು.
ಕುಂಬಾರನು ಜೇಡಿಮಣ್ಣನ್ನು ತುಳಿದು ಹದಗೊಳಿಸುವಂತೆ ಅವನು ಅರಸರುಗಳ ಮೇಲೆ ತುಳಿದಾಡುವನು.
26 “ಇವುಗಳು ಸಂಭವಿಸುವ ಮೊದಲೇ ಇವುಗಳನ್ನು ತಿಳಿಸಿದಾತನನ್ನೇ ದೇವರೆಂದು ಕರೆಯಬೇಕು.
ನಿಮ್ಮ ವಿಗ್ರಹಗಳಲ್ಲಿ ಯಾವದಾದರೂ ನಮಗೆ ಇದನ್ನು ತಿಳಿಸಿತೋ?
ಯಾವ ವಿಗ್ರಹವೂ ನಮಗೆ ಇವುಗಳ ವಿಷಯದಲ್ಲಿ ತಿಳಿಸಲಿಲ್ಲ.
ಆ ವಿಗ್ರಹಗಳು ಒಂದು ಮಾತನ್ನಾದರೂ ಹೇಳಲಿಲ್ಲ;
ಮತ್ತು ನೀವು ಹೇಳಿದ್ದನ್ನು ಆ ಸುಳ್ಳುದೇವರುಗಳು ಕೇಳಿಸಿಕೊಳ್ಳುವದೂ ಇಲ್ಲ.
27 ಈ ವಿಷಯಗಳ ಬಗ್ಗೆ ತಿಳಿಸಿದವರಲ್ಲಿ ಯೆಹೋವನೆಂಬ ನಾನೇ ಮೊದಲನೆಯವನು.
‘ನೋಡು ನಿನ್ನ ಜನರು ಹಿಂತಿರುಗಿ ಬರುತ್ತಿದ್ದಾರೆ’
ಎಂಬ ಸಂದೇಶವನ್ನು ನಾನು ಜೆರುಸಲೇಮಿಗೆ ಕಳುಹಿಸಿದೆನು.”
28 ನಾನು ಆ ಸುಳ್ಳುದೇವರುಗಳನ್ನು ದೃಷ್ಟಿಸಿ ನೋಡಿದೆನು.
ಅವುಗಳಲ್ಲಿ ಯಾವುದೂ ಮಾತಾಡುವಷ್ಟು ಜ್ಞಾನಿಯಾಗಿರಲಿಲ್ಲ.
ನಾನು ಅವುಗಳನ್ನು ಪ್ರಶ್ನಿಸಿದೆನು.
ಆದರೆ ಅವು ಉತ್ತರಿಸಲಿಲ್ಲ.
29 ಆ ದೇವರುಗಳೆಲ್ಲಾ ಶೂನ್ಯಕ್ಕಿಂತಲೂ ಕಡಿಮೆಯೇ.
ಅವುಗಳು ಏನೂ ಮಾಡಲಾರವು.
ಆ ಪ್ರತಿಮೆಗಳು ಸಂಪೂರ್ಣವಾಗಿ ಬೆಲೆಯಿಲ್ಲದವುಗಳಾಗಿವೆ.
ಅವುಗಳು ಖಂಡಿತವಾಗಿಯೂ ನಿಷ್ಪ್ರಯೋಜಕವಾದವುಗಳಾಗಿವೆ.
ನಮ್ಮ ರಕ್ಷಣೆಯು ಧರ್ಮಶಾಸ್ತ್ರಕ್ಕಿಂತ ಉತ್ತಮವಾದುದು
2 ಆದ್ದರಿಂದ ನಮಗೆ ಬೋಧಿಸಲ್ಪಟ್ಟ ಸಂಗತಿಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಬೇಕು. ಸತ್ಯಮಾರ್ಗವನ್ನು ಬಿಟ್ಟು ತಪ್ಪಿಹೋಗದಂತೆ ಎಚ್ಚರಿಕೆಯಿಂದಿರಬೇಕು. 2 ದೇವರು ತನ್ನ ದೂತರ ಮೂಲಕ ಕೊಟ್ಟ ವಾಕ್ಯವು ನಿಜವಾದದ್ದೆಂದು ತೋರಿಸಲ್ಪಟ್ಟಿದೆ. ಯೆಹೂದ್ಯರು ಈ ವಾಕ್ಯಕ್ಕೆ ವಿರುದ್ಧವಾಗಿ ತಪ್ಪು ಮಾಡಿದಾಗಲೆಲ್ಲಾ ಮತ್ತು ಅವಿಧೇಯರಾದಾಗಲೆಲ್ಲಾ ತಕ್ಕ ದಂಡನೆ ಹೊಂದುತ್ತಿದ್ದರು. 3 ನಮಗೆ ದಯಪಾಲಿಸಲ್ಪಟ್ಟ ಈ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ದಂಡನೆಯಂತೂ ಖಂಡಿತ. ಇದು ಪ್ರಭುವಿನಿಂದ ಮೊದಲು ಹೇಳಲ್ಪಟ್ಟಿತು. ಆತನಿಂದ ಕೇಳಿದವರೇ ಈ ರಕ್ಷಣೆಯ ಕುರಿತಾಗಿ ನಮಗೆ ಸ್ಥಿರಪಡಿಸಿದರು. 4 ಇದಲ್ಲದೆ, ದೇವರು ಅದ್ಭುತಕಾರ್ಯಗಳಿಂದ, ಸೂಚಕಕಾರ್ಯಗಳಿಂದ, ನಾನಾ ವಿಧವಾದ ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮನ ವರಗಳನ್ನು ತನ್ನ ಇಷ್ಟಾನುಸಾರವಾಗಿ ದಯಪಾಲಿಸುವುದರ ಮೂಲಕ ಅದನ್ನು ಸ್ಥಿರಪಡಿಸಿದನು.
ಜನರನ್ನು ರಕ್ಷಿಸಲು ಕ್ರಿಸ್ತನು ಜನರಂತೆಯೇ ಆದನು
5 ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ. 6 ಅದನ್ನು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ:
“ದೇವರೇ, ನೀನು ಮಾನವರನ್ನು ಏಕೆ ನೆನಪುಮಾಡಿಕೊಳ್ಳಬೇಕು?
ನೀನು ಮನುಷ್ಯನಿಗೋಸ್ಕರ ಏಕೆ ಚಿಂತಿಸಬೇಕು?
ಅವನು ಅಷ್ಟೊಂದು ಮುಖ್ಯನಾದವನೇ?
7 ಕೇವಲ ಸ್ವಲ್ಪಕಾಲದವರೆಗೆ ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆ ಮಾಡಿದೆ.
ನೀನು ಅವನಿಗೆ ವೈಭವವನ್ನೂ ಗೌರವವನ್ನೂ ಕಿರೀಟವಾಗಿ ಇಟ್ಟಿರುವೆ.
8 ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.”(A)
ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ. 9 ಕೇವಲ ಸ್ವಲ್ಪಕಾಲದವರೆಗೆ ಯೇಸುವು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಲ್ಪಟ್ಟನು. ಆದರೆ ನಾವೀಗ ವೈಭವ, ಗೌರವಗಳೆಂಬ ಕಿರೀಟ ಧರಿಸಿರುವ ಆತನನ್ನು ನೋಡುತ್ತೇವೆ. ಏಕೆಂದರೆ ದೇವರ ಕೃಪೆಯ ನಿಮಿತ್ತ ಆತನು ಎಲ್ಲರಿಗೋಸ್ಕರ ಸಂಕಟ ಅನುಭವಿಸಿ ಮರಣಹೊಂದಿದನು.
Kannada Holy Bible: Easy-to-Read Version. All rights reserved. © 1997 Bible League International