Revised Common Lectionary (Complementary)
11 ಯೆಹೋವನೇ, ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನಾನು ಜೀವಿಸುತ್ತಾ ನಿನ್ನ ಸತ್ಯತೆಗಳಿಗೆ ವಿಧೇಯನಾಗುವೆನು.
ನಿನ್ನ ಹೆಸರನ್ನು ಆರಾಧಿಸಲು ನನಗೆ ಸಹಾಯಮಾಡು.
ನನ್ನ ಜೀವನದಲ್ಲಿ ಅದೇ ಅತ್ಯಂತ ಮುಖ್ಯವಾದದ್ದು.
12 ನನ್ನ ದೇವರಾದ ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಸ್ತುತಿಸುವೆನು;
ನಿನ್ನ ಹೆಸರನ್ನು ಎಂದೆಂದಿಗೂ ಸನ್ಮಾನಿಸುವೆನು!
13 ನೀನು ನನ್ನ ಮೇಲೆ ಎಷ್ಟೋ ಪ್ರೀತಿಯನ್ನು ಇಟ್ಟಿರುವೆ.
ನೀನು ನನ್ನನ್ನು ಪಾತಾಳದಿಂದ ರಕ್ಷಿಸಿದೆ.
14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
ಕ್ರೂರಜನರು ಗುಂಪುಕೂಡಿಕೊಂಡು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
ಅವರು ನನ್ನನ್ನು ಗೌರವಿಸುವುದಿಲ್ಲ.
15 ಯೆಹೋವನೇ, ಕನಿಕರವೂ ದಯೆಯೂ ಉಳ್ಳ ದೇವರು ನೀನೇ.
ನೀನು ತಾಳ್ಮೆಯುಳ್ಳವನೂ ನಂಬಿಗಸ್ತನೂ ಪ್ರೀತಿಪೂರ್ಣನೂ ಆಗಿರುವೆ.
16 ನನ್ನ ಮೊರೆಗೆ ಕಿವಿಗೊಟ್ಟು ಕರುಣೆತೋರು.
ನಿನ್ನ ಸೇವಕನಾದ ನನಗೆ ಬಲವನ್ನು ದಯಪಾಲಿಸು.
ನಿನ್ನ ಸೇವಕನ ಮಗನನ್ನು ರಕ್ಷಿಸು.
17 ಯೆಹೋವನೇ, ನೀನು ನನಗೆ ಮಾಡಲಿರುವ ಸಹಾಯಕ್ಕಾಗಿ ಸೂಚನೆಯೊಂದನ್ನು ತೋರಿಸು.
ನನ್ನ ಶತ್ರುಗಳು ಆ ಸೂಚನೆಯನ್ನು ಕಂಡು ನಿರಾಶರಾಗುವರು.
ನೀನು ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಸಹಾಯ ಮಾಡಲಿರುವಿಯೆಂದು ಅದು ತೋರಿಸುತ್ತದೆ.
ಸುಳ್ಳುದೇವರುಗಳು ಪ್ರಯೋಜನಕ್ಕೆ ಬಾರದವುಗಳು
9 ಜನರು ವಿಗ್ರಹಗಳನ್ನು ಮಾಡಿಕೊಳ್ಳುವರು. ಆದರೆ ಅವು ನಿಷ್ಪ್ರಯೋಜಕವಾದ ವಸ್ತುಗಳಾಗಿವೆ. ಜನರು ಆ ವಿಗ್ರಹಗಳನ್ನು ಪ್ರೀತಿಸುತ್ತಾರೆ. ಆದರೆ ಅವುಗಳು ಯಾವ ಪ್ರಯೋಜನಕ್ಕೂ ಬಾರವು. ಆ ಜನರು ಆ ವಿಗ್ರಹದ ಸಾಕ್ಷಿಗಳಾಗಿದ್ದಾರೆ. ಆದರೆ ಅವುಗಳಿಗೆ ದೃಷ್ಟಿ ಇಲ್ಲ. ಅವುಗಳಿಗೆ ಏನೂ ಗೊತ್ತಿಲ್ಲ. ತಮ್ಮ ಕಾರ್ಯಗಳು ನಾಚಿಕೆಗೆಟ್ಟವುಗಳೆಂಬ ತಿಳುವಳಿಕೆಯೂ ಅವರಲ್ಲಿಲ್ಲ.
10 ಈ ಸುಳ್ಳುದೇವರುಗಳನ್ನು ಮಾಡಿದವರ್ಯಾರು? ಇಂಥ ಉಪಯೋಗವಿಲ್ಲದ ವಿಗ್ರಹಗಳನ್ನು ಮಾಡಿದವರ್ಯಾರು? 11 ಕುಶಲಕರ್ಮಿಗಳು ಆ ದೇವರುಗಳನ್ನು ಮಾಡಿದರು. ಆ ಕುಶಲಕರ್ಮಿಗಳೆಲ್ಲಾ ಜನರೇ, ಅವರು ದೇವರುಗಳಲ್ಲ. ಆ ದೇವರುಗಳೆಲ್ಲಾ ಒಟ್ಟಾಗಿ ಸೇರಿ ತಮ್ಮೊಳಗೆ ಮಾತಾಡಿಕೊಂಡರೆ ಆಗ ಅವುಗಳಿಗೆ ನಾಚಿಕೆಯೂ ಭಯವೂ ಉಂಟಾಗುವದು.
12 ಒಬ್ಬನು ಕುಲಿಮೆಯ ಬೆಂಕಿಯ ಮೇಲೆ ಕಬ್ಬಿಣವನ್ನು ಕಾಯಿಸುತ್ತಾನೆ. ಅವನು ತನ್ನ ಸುತ್ತಿಗೆಯಿಂದ ಆ ಲೋಹವನ್ನು ವಿಗ್ರಹವನ್ನಾಗಿ ಮಾಡುತ್ತಾನೆ. ಅವನು ಅದನ್ನು ತನ್ನ ತೋಳ್ಬಲದಿಂದ ಮಾಡುತ್ತಾನೆ. ಆದರೆ ಅವನು ಹಸಿದಾಗ ಅವನ ಶಕ್ತಿಯು ಕಡಿಮೆಯಾಗುತ್ತದೆ. ಆ ಮನುಷ್ಯನು ನೀರನ್ನು ಕುಡಿಯದಿದ್ದರೆ ಅವನು ಬಲಹೀನನಾಗುವನು.
13 ಇನ್ನೊಬ್ಬ ಕುಶಲಕರ್ಮಿಯು ತನ್ನ ನೂಲಿನಿಂದಲೂ ಅಡಿಕೋಲುಗಳಿಂದಲೂ ಮರದ ಮೇಲೆ ಗುರುತು ಮಾಡುವನು. ತಾನು ಎಲ್ಲಿ ಮರವನ್ನು ತುಂಡುಮಾಡಬೇಕೆಂದು ಇದರಿಂದ ಗೊತ್ತುಪಡಿಸಿಕೊಳ್ಳುತ್ತಾನೆ. ಅವನು ತನ್ನ ಉಳಿಗಳಿಂದ ಒಂದು ವಿಗ್ರಹವನ್ನು ಮನುಷ್ಯಾಕಾರದಲ್ಲಿ ಕೆತ್ತುತ್ತಾನೆ. ಈ ವಿಗ್ರಹವು ಬೇರೆ ಏನೂ ಮಾಡದೆ ಮನೆಯೊಳಗೆ ಇಟ್ಟ ಸ್ಥಳದಲ್ಲಿಯೇ ಇರುವದು.
14 ಅವನು ತನ್ನ ಕೆಲಸಕ್ಕಾಗಿ ದೇವದಾರು ಮರಗಳನ್ನು, ತುರಾಯಿ ಮರಗಳನ್ನು, ಓಕ್ ಮರಗಳನ್ನು ಕಡಿಯುತ್ತಾನೆ. (ಅವನು ಆ ಮರಗಳನ್ನು ಬೆಳೆಯಿಸಲಿಲ್ಲ. ಅವು ತಾವಾಗಿಯೇ ಅಡವಿಯಲ್ಲಿ ಬೆಳೆದವು. ಅವನು ಮರದ ಸಸಿಯನ್ನು ನೆಟ್ಟರೆ ಮಳೆಯು ಆ ಸಸಿಯನ್ನು ಮರವನ್ನಾಗಿ ಬೆಳೆಯಿಸುವುದು.)
15 ಅವನು ಮರವನ್ನು ಕಡಿದು, ತನ್ನನ್ನು ಬೆಚ್ಚಗೆ ಮಾಡಲು ಅಗ್ಗಿಷ್ಟಿಕೆಗಾಗಿ ಉಪಯೋಗಿಸುತ್ತಾನೆ; ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಆಹಾರವನ್ನು ಬೇಯಿಸುತ್ತಾನೆ; ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾನೆ. ರೊಟ್ಟಿಯನ್ನು ಸುಡುತ್ತಾನೆ; ಉಳಿದ ಮರದ ತುಂಡಿನಿಂದ ಒಂದು ವಿಗ್ರಹವನ್ನು ಕೆತ್ತುತ್ತಾನೆ. ಆ ವಿಗ್ರಹಕ್ಕೆ ದೇವರೆಂದು ಹೇಳುತ್ತಾನೆ; ಆ ದೇವರು ಮನುಷ್ಯನು ತಯಾರಿಸಿದ ವಿಗ್ರಹ. ಆದರೆ ಅವನು ಆ ವಿಗ್ರಹದ ಮುಂದೆ ಅಡ್ಡಬೀಳುವನು. 16 ಮರದ ಅರ್ಧಭಾಗವನ್ನು ಬೆಂಕಿಯಲ್ಲಿ ಉರಿಸುವನು; ಆ ಬೆಂಕಿಯಲ್ಲಿ ಮಾಂಸವನ್ನು ಬೇಯಿಸಿ ಹೊಟ್ಟೆತುಂಬಾ ತಿನ್ನುವನು; ಆ ಮರದ ಸೌದೆಯನ್ನು ಸುಟ್ಟು ಚಳಿಕಾಯಿಸಿಕೊಳ್ಳುವನು. ಆಗ ಅವನು, “ಈಗ ನನಗೆ ಬೆಚ್ಚಗಾಯಿತು. ಬೆಂಕಿಯ ಪ್ರಕಾಶದಲ್ಲಿ ನಾನು ನೋಡಬಲ್ಲೆನು!” ಎಂದು ಹೇಳುವನು. 17 ಅದರಲ್ಲಿ ಸ್ವಲ್ಪ ಮರದ ತುಂಡು ಉಳಿದಿರುತ್ತದೆ. ಅದನ್ನು ನೋಡಿ ಆ ಮನುಷ್ಯನು ಅದರಿಂದ ವಿಗ್ರಹವನ್ನು ತಯಾರಿಸುವನು. ಅದನ್ನು ದೇವರೆಂದು ಕರೆಯುವನು. ಅದರ ಮುಂದೆ ಅಡ್ಡಬಿದ್ದು ಆರಾಧಿಸುವನು. ಅದರ ಮುಂದೆ ಪ್ರಾರ್ಥಿಸಿ, “ನೀನೇ ನನ್ನ ದೇವರು, ನನ್ನನ್ನು ರಕ್ಷಿಸು” ಎಂದು ಹೇಳುತ್ತಾನೆ.
13 ದೇವರು ಅಬ್ರಹಾಮನಿಗೆ ಒಂದು ವಾಗ್ದಾನ ಮಾಡಿದನು. ದೇವರಿಗಿಂತ ದೊಡ್ಡವನಿಲ್ಲ. ಆದ್ದರಿಂದ, ದೇವರು ತನ್ನ ಮೇಲೆಯೇ ಆಣೆಯಿಟ್ಟು ತನ್ನ ಮಾತಿನಂತೆಯೇ ಮಾಡಿದನು. 14 ಆತನು ಅವನಿಗೆ, “ನಾನು ನಿಜವಾಗಿಯೂ ನಿನ್ನನ್ನು ಆಶೀರ್ವದಿಸುತ್ತೇನೆ. ಅನೇಕಾನೇಕ ಸಂತತಿಗಳನ್ನು ನಿನಗೆ ದಯಪಾಲಿಸುವೆನು”(A) ಎಂದು ಹೇಳಿದನು. 15 ಅಬ್ರಹಾಮನು ಇದರ ನೆರವೇರುವಿಕೆಗಾಗಿ ತಾಳ್ಮೆಯಿಂದ ಕಾದಿದ್ದನು. ತರುವಾಯ ಅವನಿಗೆ ದೇವರ ವಾಗ್ದಾನದ ಫಲ ದೊರೆಯಿತು.
16 ಜನರು ವಾಗ್ದಾನ ಮಾಡುವಾಗ ಯಾವಾಗಲೂ ತಮಗಿಂತ ದೊಡ್ಡವರಾದ ಯಾರಾದರೊಬ್ಬರನ್ನು ಬಳಸಿಕೊಳ್ಳುತ್ತಾರೆ. ಅವರು ಹೇಳಿದ್ದು ನಿಜವೆಂಬುದನ್ನು ಆ ವಾಗ್ದಾನವು ಶ್ರುತಪಡಿಸುತ್ತದೆ. ಇದರಿಂದಾಗಿ ಅವರ ಎಲ್ಲಾ ವಾಗ್ವಾದಗಳಿಗೆ ಕೊನೆಯಾಗುತ್ತದೆ. 17 ಹಾಗೆಯೇ ದೇವರು ತನ್ನ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವ ಜನರಿಗೆ ತನ್ನ ಸಂಕಲ್ಪವು ಸ್ಥಿರವಾದದ್ದು ಎಂಬುದನ್ನು ಸ್ಪಷ್ಟಪಡಿಸಲು ಆಣೆಯಿಟ್ಟು ನಿಶ್ಚಯಪಡಿಸಿದನು. 18 ದೇವರ ವಾಗ್ದಾನ ಮತ್ತು ಆಣೆ ಅಚಲವಾದ ಎರಡು ಆಧಾರಗಳಾಗಿವೆ. ಇವುಗಳ ವಿಷಯದಲ್ಲಿ ನಮಗೆಂದಿಗೂ ಮೋಸವಾಗುವುದಿಲ್ಲ.
ಇದರಿಂದಾಗಿ, ದೇವರ ರಕ್ಷಣೆಗಾಗಿ ಓಡಿ ಬಂದಿರುವ ನಾವು ನಮ್ಮ ನಿರೀಕ್ಷೆಯಲ್ಲಿ ಸ್ಥಿರವಾಗಿರಲು ಬಲವಾದ ಪ್ರೋತ್ಸಾಹ ಉಂಟಾಯಿತು. 19 ಈ ನಿರೀಕ್ಷೆಯು ನಮ್ಮ ಆತ್ಮಗಳನ್ನು ಅಪಾಯದಲ್ಲಿ ಕೊಚ್ಚಿಕೊಂಡು ಹೋಗದಂತೆ ಕಾಪಾಡುವ ಬಲವಾದ ಸ್ಥಿರವಾದ ಲಂಗರಿನಂತಿದೆ. ಅದು ಸ್ವರ್ಗದಾಲಯದ ತೆರೆಯ ಮರೆಯಲ್ಲಿರುವ ಮಹಾ ಪವಿತ್ರಸ್ಥಳದ ಒಳಕ್ಕೆ ಪ್ರವೇಶಿಸುತ್ತದೆ. 20 ಯೇಸು ಈಗಾಗಲೇ ಅಲ್ಲಿಗೆ ಪ್ರವೇಶಿಸಿ, ಅನುಸರಿಸುವುದಕ್ಕಾಗಿ ಮಾರ್ಗವನ್ನು ತೋರಿದನು. ಯೇಸು ಮೆಲ್ಕಿಜೆದೇಕನಂತೆ ಸದಾಕಾಲಕ್ಕೂ ಇರುವ ಪ್ರಧಾನಯಾಜಕನಾಗಿದ್ದಾನೆ.
Kannada Holy Bible: Easy-to-Read Version. All rights reserved. © 1997 Bible League International