New Testament in a Year
ಸ್ವಸ್ಥತೆಯನ್ನು ಹೊಂದಿದ ಪಾರ್ಶ್ವವಾಯು ರೋಗಿ
(ಮಾರ್ಕ 2:1-12; 5:17-26)
9 ಯೇಸು ದೋಣಿಯನ್ನು ಹತ್ತಿ ಸರೋವರವನ್ನು ದಾಟಿ ತನ್ನ ಸ್ವಂತ ಊರಿಗೆ ಹೋದನು. 2 ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ತಂದರು. ಅವನು ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಯೇಸು ಈ ಜನರಲ್ಲಿದ್ದ ದೊಡ್ಡ ನಂಬಿಕೆಯನ್ನು ಕಂಡು ಪಾರ್ಶ್ವವಾಯು ರೋಗಿಗೆ, “ಯುವಕನೇ, ಸಂತೋಷಪಡು. ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
3 ಅಲ್ಲಿದ್ದ ಧರ್ಮೋಪದೇಶಕರು ಇದನ್ನು ಕೇಳಿ, “ಇದು ದೇವದೂಷಣೆ” ಎಂದು ತಮ್ಮೊಳಗೆ ಅಂದುಕೊಂಡರು.
4 ಅವರು ಹೀಗೆ ಆಲೋಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆತನು ಅವರಿಗೆ, “ನೀವು ಏಕೆ ದುರಾಲೋಚನೆ ಮಾಡುತ್ತಿದ್ದೀರಿ? 5 ಯಾವುದು ಸುಲಭ? ಈ ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೇ ಅಥವಾ ‘ಮೇಲಕ್ಕೆದ್ದು ನಡೆ’ ಎಂದು ಹೇಳುವುದೇ? 6 ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸಲು ಭೂಲೋಕದಲ್ಲಿ ಅಧಿಕಾರವಿದೆ ಎಂಬುದನ್ನು ನಾನು ನಿಮಗೆ ನಿರೂಪಿಸುತ್ತೇನೆ” ಎಂದನು. ನಂತರ ಯೇಸು ಪಾರ್ಶ್ವವಾಯು ರೋಗಿಗೆ, “ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.
7 ಆಗ ಅವನು ಎದ್ದು ಮನೆಗೆ ಹೋದನು. 8 ಜನರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟಿದ್ದಕ್ಕಾಗಿ ಜನರು ದೇವರನ್ನು ಕೊಂಡಾಡಿದರು.
ಸುಂಕದವನು
(ಮಾರ್ಕ 2:13-17; ಲೂಕ 5:27-32)
9 ಯೇಸು ಹೋಗುತ್ತಿರುವಾಗ, ಮತ್ತಾಯ ಎಂಬ ವ್ಯಕ್ತಿಯನ್ನು ಕಂಡನು. ಮತ್ತಾಯನು ಸುಂಕದಕಟ್ಟೆಯಲ್ಲಿ ಕುಳಿತಿದ್ದನು. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು” ಅಂದನು. ಆಗ ಮತ್ತಾಯನು ಎದ್ದು ಯೇಸುವನ್ನು ಹಿಂಬಾಲಿಸಿದನು.
10 ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತುಕೊಂಡನು. ಅನೇಕ ಮಂದಿ ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಸಹ ಯೇಸುವಿನ ಸಂಗಡ ಮತ್ತು ಆತನ ಹಿಂಬಾಲಕರ ಸಂಗಡ ಊಟಕ್ಕೆ ಕುಳಿತುಕೊಂಡರು. 11 ಇದನ್ನು ಕಂಡ ಫರಿಸಾಯರು ಯೇಸುವಿನ ಶಿಷ್ಯರಿಗೆ, “ನಿಮ್ಮ ಬೋಧಕನು ಸುಂಕವಸೂಲಿಗಾರರೊಂದಿಗೆ ಮತ್ತು ಕೆಟ್ಟ ಜನರೊಂದಿಗೆ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
12 ಫರಿಸಾಯರು ಹೇಳಿದ್ದನ್ನು ಕೇಳಿಸಿಕೊಂಡ ಯೇಸು ಅವರಿಗೆ, “ಆರೋಗ್ಯವುಳ್ಳ ಜನರಿಗೆ ವೈದ್ಯನ ಅವಶ್ಯಕತೆಯಿಲ್ಲ. ಕಾಯಿಲೆಯ ಜನರಿಗೆ ವೈದ್ಯನು ಅವಶ್ಯ. 13 ನೀವು ಹೋಗಿ, ‘ನನಗೆ ಯಜ್ಞ ಬೇಡ, ದಯೆ ಬೇಕು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನು ಕರೆಯಲು ಬಂದೆನು” ಎಂದು ಹೇಳಿದನು.
ಯೇಸು ಇತರ ಧಾರ್ಮಿಕ ಯೆಹೂದ್ಯರಂತಲ್ಲ
(ಮಾರ್ಕ 2:18-22; ಲೂಕ 5:33-39)
14 ನಂತರ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನಾವು ಮತ್ತು ಫರಿಸಾಯರು ಆಗಾಗ್ಗೆ ಉಪವಾಸ ಮಾಡುತ್ತೇವೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.
15 ಯೇಸು, “ಮದುವೆ ಸಮಯದಲ್ಲಿ ಮದುಮಗನ ಸಂಗಡವಿರುವ ಅವನ ಸ್ನೇಹಿತರು ದುಃಖಪಡುವುದಿಲ್ಲ. ಆದರೆ ಮದುಮಗನು ಅವರನ್ನು ಬಿಟ್ಟುಹೋಗುವ ಸಮಯ ಬರುತ್ತದೆ. ಆಗ ಅವರು ದುಃಖಪಡುತ್ತಾರೆ ಮತ್ತು ಉಪವಾಸ ಮಾಡುತ್ತಾರೆ.
16 “ಒಬ್ಬನು ಹರಿದುಹೋದ ಹಳೆ ಮೇಲಂಗಿಗೆ ಹೊಸ ಬಟ್ಟೆಯ ತುಂಡನ್ನು ತೇಪೆಹಾಕಿ ಹೊಲಿಯುವುದಿಲ್ಲ. ಒಂದುವೇಳೆ ಹೊಲಿದರೆ, ಆ ತೇಪೆಯು ಹಿಂಜಿಕೊಂಡು ಮೇಲಂಗಿಯಿಂದ ಕಿತ್ತುಬರುವುದು. ಆಗ ಆ ಮೇಲಂಗಿಯು ಮತ್ತಷ್ಟು ಹರಿದುಹೋಗುವುದು. 17 ಇದಲ್ಲದೆ ಜನರು ಹೊಸ ದ್ರಾಕ್ಷಾರಸವನ್ನು ಹಳೆ ದ್ರಾಕ್ಷಾರಸದ ಬುದ್ದಲಿಗಳಲ್ಲಿ ಹಾಕುವುದಿಲ್ಲ; ಏಕೆಂದರೆ ಹಳೆ ಬುದ್ದಲಿಗಳು ಒಡೆದುಹೋಗುತ್ತವೆ; ಮತ್ತು ದ್ರಾಕ್ಷಾರಸವು ಚೆಲ್ಲಿಹೋಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುವರು. ಆಗ ಎರಡೂ ಉಳಿಯುತ್ತವೆ” ಅಂದನು.
Kannada Holy Bible: Easy-to-Read Version. All rights reserved. © 1997 Bible League International