New Testament in a Year
ಲೈಂಗಿಕ ಪಾಪದ ಕುರಿತು ಯೇಸುವಿನ ಉಪದೇಶ
27 “‘ವ್ಯಭಿಚಾರ ಮಾಡಬೇಡಿರಿ’(A) ಎಂದು ಹೇಳಿದ್ದನ್ನು ನೀವು ಕೇಳಿದ್ದೀರಿ. 28 ಆದರೆ ಒಬ್ಬನು ಪರಸ್ತ್ರೀಯನ್ನು ನೋಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸಿದರೆ, ಅವನು ಆಗಲೇ ತನ್ನ ಮನಸ್ಸಿನಲ್ಲಿ ಅವಳೊಂದಿಗೆ ವ್ಯಭಿಚಾರವನ್ನು ಮಾಡಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. 29 ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕಿತ್ತು ಬಿಸಾಡು. ನಿನ್ನ ಪೂರ್ಣಶರೀರವು ನರಕಕ್ಕೆ ಬೀಳುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು. 30 ನಿನ್ನ ಬಲಗೈ ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕತ್ತರಿಸಿ ಬಿಸಾಡು. ನಿನ್ನ ಪೂರ್ಣ ಶರೀರವು ನರಕಕ್ಕೆ ಹೋಗುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು.
ವಿವಾಹ ವಿಚ್ಛೇದನ ಕುರಿತು ಯೇಸುವಿನ ಉಪದೇಶ
(ಮತ್ತಾಯ 19:9; ಮಾರ್ಕ 10:11-12; ಲೂಕ 16:18)
31 “‘ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿರುವವನು, ಅವಳಿಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ’(B) ಎಂದು ಹೇಳಲ್ಪಟ್ಟಿದೆ. 32 ಆದರೆ ನಾನು ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟುಬಿಡುವವನೇ ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ. ಹೆಂಡತಿಯು ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವಳನ್ನು ಗಂಡನು ಬಿಟ್ಟುಬಿಡಬಹುದು. ವಿವಾಹ ವಿಚ್ಛೇದನ ಹೊಂದಿದವಳನ್ನು ಮದುವೆಯಾಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.
ಆಣೆ ಇಡುವುದರ ಕುರಿತು ಯೇಸುವಿನ ಉಪದೇಶ
33 “‘ನೀವಿಟ್ಟ ಆಣೆಯನ್ನು ಮೀರಬೇಡಿರಿ. ಪ್ರಭುವಿಗೆ ನೀವಿಟ್ಟ ಆಣೆಗಳನ್ನು ಕೈಗೊಳ್ಳಲೇಬೇಕು’[a] ಎಂದು ನಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 34 ಆದರೆ ನಾನು ಹೇಳುವುದೇನೆಂದರೆ, ಆಣೆ ಇಡಲೇಬೇಡಿ. ಪರಲೋಕದ ಮೇಲೂ ಆಣೆ ಇಡಬೇಡಿ, ಏಕೆಂದರೆ ಪರಲೋಕವು ದೇವರ ಸಿಂಹಾಸನ. 35 ಭೂಮಿಯ ಮೇಲೂ ಆಣೆ ಇಡಬೇಡಿ. ಏಕೆಂದರೆ ಭೂಮಿಯು ದೇವರ ಪಾದಪೀಠ. ಜೆರುಸಲೇಮಿನ ಮೇಲೂ ಆಣೆ ಇಡಬೇಡಿ, ಏಕೆಂದರೆ ಅದು ಆ ಮಹಾರಾಜನ ಪಟ್ಟಣ. 36 ನಿಮ್ಮ ತಲೆಯ ಮೇಲೂ ಆಣೆ ಇಡಬೇಡಿ. ನಿಮ್ಮ ತಲೆಯ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. 37 ಹೌದಾದರೆ ‘ಹೌದು’ ಎನ್ನಿರಿ. ಇಲ್ಲವಾದರೆ ‘ಇಲ್ಲ’ ಎನ್ನಿರಿ. ನೀವು ಇದಕ್ಕಿಂತ ಹೆಚ್ಚಾಗಿ ಹೇಳುವಂಥದ್ದು ಸೈತಾನನಿಂದ ಪ್ರೇರಿತವಾದದ್ದು.
ಸೇಡಿನ ಬಗ್ಗೆ ಯೇಸುವಿನ ಉಪದೇಶ
(ಲೂಕ 6:29-30)
38 “‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’(C) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 39 ಆದರೆ ನಾನು ನಿಮಗೆ ಹೇಳುವುದೇನೆಂದರೆ, ದುಷ್ಟನಿಗೆ ವಿರೋಧವಾಗಿ ನಿಂತುಕೊಳ್ಳಬೇಡಿ. ಯಾವನಾದರೂ ನಿಮ್ಮ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. 40 ಯಾವನಾದರೂ ನಿಮ್ಮ ಮೇಲಂಗಿಗಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯಬೇಕೆಂದಿದ್ದರೆ, ನಿಮ್ಮ ಒಳಂಗಿಯನ್ನು ಸಹ ಅವನಿಗೆ ಕೊಟ್ಟುಬಿಡಿರಿ. 41 ಯಾವ ಸೈನಿಕನಾದರೂ ತನ್ನೊಂದಿಗೆ ಒಂದು ಮೈಲಿ ದೂರ ಬರಬೇಕೆಂದು ನಿಮ್ಮನ್ನು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲಿ ದೂರ ಹೋಗಿ. 42 ಯಾವನಾದರೂ ನಿಮ್ಮಲ್ಲಿರುವ ಯಾವುದನ್ನಾದರೂ ಕೇಳಿದರೆ, ಅವನಿಗೆ ಕೊಡಿ. ನಿಮ್ಮಿಂದ ಸಾಲ ತೆಗೆದುಕೊಳ್ಳಬೇಕೆಂದು ಬಂದವನಿಗೆ ಕೊಡದಿರಬೇಡಿ.
ಎಲ್ಲರನ್ನು ಪ್ರೀತಿಸಿರಿ
(ಲೂಕ 6:27-28,32-36)
43 “‘ನಿನ್ನ ಸ್ನೇಹಿತರನ್ನು ಪ್ರೀತಿಸು ಮತ್ತು ನಿನ್ನ ಶತ್ರುಗಳನ್ನು ದ್ವೇಷಿಸು’(D) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ನಿಮಗೆ ಕೆಟ್ಟದ್ದನ್ನು ಮಾಡುವ ಜನರಿಗಾಗಿ ಪ್ರಾರ್ಥಿಸಿರಿ. 45 ಆಗ ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ನಿಜವಾದ ಮಕ್ಕಳಾಗುವಿರಿ. ನಿಮ್ಮ ತಂದೆಯು ಒಳ್ಳೆಯವರಿಗಾಗಿ ಮತ್ತು ಕೆಟ್ಟವರಿಗಾಗಿ ಸೂರ್ಯನನ್ನು ಉದಯಿಸುತ್ತಾನೆ ಮತ್ತು ಮಳೆಯನ್ನು ಸುರಿಸುತ್ತಾನೆ. 46 ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ಅದರಿಂದ ನಿಮಗೇನು ಪ್ರತಿಫಲ ದೊರೆಯುವುದು? ಸುಂಕದವರು ಸಹ ಹಾಗೆ ಮಾಡುತ್ತಾರೆ. 47 ನೀವು ನಿಮ್ಮ ಸ್ನೇಹಿತರಿಗೆ ಮಾತ್ರ ಒಳ್ಳೆಯವರಾಗಿದ್ದರೆ, ನೀವು ಬೇರೆಯವರಿಗಿಂತ ಉತ್ತಮರೇನೂ ಅಲ್ಲ. ದೇವರನ್ನರಿಯದ ಜನರು ಸಹ ತಮ್ಮ ಸ್ನೇಹಿತರಿಗೆ ಒಳ್ಳೆಯವರಾಗಿರುತ್ತಾರೆ. 48 ಆದ್ದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.
Kannada Holy Bible: Easy-to-Read Version. All rights reserved. © 1997 Bible League International