New Testament in a Year
ಅರಸನಂತೆ ಯೇಸುವಿನ ಪ್ರವೇಶ
(ಮಾರ್ಕ 11:1-11; ಲೂಕ 19:28-38; ಯೋಹಾನ 12:12-19)
21 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಾ ಆಲಿವ್ ಗುಡ್ಡದ ಸಮೀಪದಲ್ಲಿದ್ದ ಬೆತ್ಛಗೆಯನ್ನು ಸಮೀಸಿದರು. 2 ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮ ಎದುರಿನಲ್ಲಿ ಇರುವ ಪಟ್ಟಣದೊಳಕ್ಕೆ ಹೋಗಿ. ನೀವು ಅದನ್ನು ಪ್ರವೇಶಿಸಿದಾಗ, ಅಲ್ಲೇ ಕಟ್ಟಿರುವ ಒಂದು ಕತ್ತೆಯನ್ನು ಕಾಣುತ್ತೀರಿ. ಆ ಕತ್ತೆಯ ಜೊತೆಯಲ್ಲಿ ಒಂದು ಕತ್ತೆಮರಿಯನ್ನು ಸಹ ನೀವು ಕಾಣುವಿರಿ. ಆ ಎರಡು ಕತ್ತೆಗಳನ್ನು ಬಿಚ್ಚಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. 3 ನೀವು ಏಕೆ ಕತ್ತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ, ‘ಈ ಕತ್ತೆಗಳು ಗುರುವಿಗೆ ಬೇಕಾಗಿವೆ. ಆತನು ಅವುಗಳನ್ನು ಬೇಗನೆ ಹಿಂದಕ್ಕೆ ಕಳುಹಿಸುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಹೇಳಿ ಕಳುಹಿಸಿದನು.
4 ಪ್ರವಾದಿಯಾದ ಜೆಕರ್ಯನು ಹೇಳಿದ ಪ್ರವಾದನೆಯು ಇದರಿಂದ ನೆರವೇರಿತು. ಅದೇನೆಂದರೆ:
5 “ಸೀಯೋನ್ ನಗರಿಗೆ ಹೇಳಿರಿ,
‘ನಿನ್ನ ರಾಜನು ಈಗ ನಿನ್ನ ಬಳಿಗೆ ಬರುತ್ತಿದ್ದಾನೆ.
ದೀನತೆಯಿಂದ ಕತ್ತೆಯ ಮೇಲೆ ಬರುತ್ತಿದ್ದಾನೆ.
ಹೌದು, ಪ್ರಾಯದ ಕತ್ತೆಮರಿಯ ಮೇಲೆ ಬರುತ್ತಿದ್ದಾನೆ.’”(A)
6 ಆ ಶಿಷ್ಯರು ಹೋಗಿ, ಯೇಸು ಹೇಳಿದ್ದಂತೆಯೇ ತಾಯಿ ಕತ್ತೆಯನ್ನೂ ಮತ್ತು ಅದರ ಮರಿಯನ್ನೂ ಯೇಸುವಿನ ಬಳಿಗೆ ತಂದರು. 7 ಅವರು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಿದರು. 8 ಆಗ ಯೇಸು ಕುಳಿತುಕೊಂಡು ಜೆರುಸಲೇಮಿಗೆ ಹೋದನು. ಅನೇಕ ಜನರು ತಮ್ಮ ಮೇಲಂಗಿಗಳನ್ನು ಯೇಸುವಿಗಾಗಿ ದಾರಿಯ ಮೇಲೆ ಹಾಸಿದರು. ಕೆಲವರು ಮರಗಳಿಂದ ಚಿಗುರುಗಳನ್ನು ಕತ್ತರಿಸಿಕೊಂಡು ಬಂದು ದಾರಿಯ ಮೇಲೆ ಹರಡಿದರು. 9 ಕೆಲವರು ಯೇಸುವಿನ ಮುಂದೆ ನಡೆದು ಹೋಗುತ್ತಿದ್ದರು. ಕೆಲವರು ಯೇಸುವಿನ ಹಿಂದೆ ನಡೆದು ಬರುತ್ತಿದ್ದರು. ಜನರೆಲ್ಲರೂ ಹೀಗೆ ಆರ್ಭಟಿಸಿದರು:
ಪರಲೋಕದ ದೇವರನ್ನು ಕೊಂಡಾಡಿರಿ!”
10 ಬಳಿಕ ಯೇಸು ಜೆರುಸಲೇಮಿನೊಳಗೆ ಹೋದನು. ಪಟ್ಟಣದಲ್ಲಿದ್ದ ಜನರೆಲ್ಲ ಗಲಿಬಿಲಿಗೊಂಡರು. ಅವರು, “ಈ ಮನುಷ್ಯನು ಯಾರು?” ಎಂದು ಕೇಳಿದರು.
11 ಯೇಸುವನ್ನು ಹಿಂಬಾಲಿಸುತ್ತಿದ್ದ ಅನೇಕ ಜನರು, “ಈತನೇ ಯೇಸು. ಈತನು ಗಲಿಲಾಯ ಪ್ರಾಂತ್ಯದಲ್ಲಿರುವ ನಜರೇತ್ ಎಂಬ ಊರಿನ ಪ್ರವಾದಿ” ಎಂದು ಉತ್ತರಕೊಟ್ಟರು.
ದೇವಾಲಯವು ಪ್ರಾರ್ಥನಾಲಯ
(ಮಾರ್ಕ 11:15-19; ಲೂಕ 19:45-48; ಯೋಹಾನ 2:13-22)
12 ಯೇಸು ದೇವಾಲಯದ ಒಳಕ್ಕೆ ಹೋದನು. ಅಲ್ಲಿ ಮಾರುತ್ತಿದ್ದ ಮತ್ತು ಕೊಂಡುಕೊಳ್ಳುತ್ತಿದ್ದ ಜನರನ್ನೆಲ್ಲಾ ಆತನು ಹೊರಗೆ ಓಡಿಸಿಬಿಟ್ಟನು; ನಾಣ್ಯ ವಿನಿಮಯ ಮಾಡುತ್ತಿದ್ದವರ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 13 ಯೇಸು ಅಲ್ಲಿದ್ದ ಜನರಿಗೆಲ್ಲ, “‘ನನ್ನ ಆಲಯವು ಪ್ರಾರ್ಥನಾಲಯ ಎನಿಸಿಕೊಳ್ಳುವುದು’(C) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರ ಗವಿ’ಯನ್ನಾಗಿ ಮಾಡುತ್ತಿದ್ದೀರಿ”(D) ಎಂದು ಹೇಳಿದನು.
14 ಕೆಲವು ಮಂದಿ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಯೇಸುವಿನ ಬಳಿಗೆ ಬಂದರು. ಯೇಸು ಅವರನ್ನು ಗುಣಪಡಿಸಿದನು. 15 ಮಹಾಯಾಜಕರು ಮತ್ತು ಧರ್ಮೋಪದೇಶಕರು ಇದನ್ನು ನೋಡಿದರು. ಯೇಸು ಮಹತ್ಕಾರ್ಯಗಳನ್ನು ಮಾಡುತ್ತಿರುವುದನ್ನು ಮತ್ತು ದೇವಾಲಯದಲ್ಲಿ ಚಿಕ್ಕಮಕ್ಕಳು ಯೇಸುವನ್ನು ಕೊಂಡಾಡುತ್ತಿರುವುದನ್ನು ಅವರು ಗಮನಿಸಿದರು. ಚಿಕ್ಕ ಮಕ್ಕಳು, “ದಾವೀದನ ಕುಮಾರನಿಗೆ ಸ್ತೋತ್ರವಾಗಲಿ” ಎಂದು ಕೂಗುತ್ತಿದ್ದರು. ಇವುಗಳಿಂದಾಗಿ ಯಾಜಕರು ಮತ್ತು ಧರ್ಮೋಪದೇಶಕರು ಕೋಪಗೊಂಡರು.
16 ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಈ ಚಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಕೇಳಿಸಿಕೊಂಡೆಯೋ?” ಎಂದು ಕೇಳಿದರು.
ಯೇಸು, “ಹೌದು, ‘ನೀನು ಚಿಕ್ಕಮಕ್ಕಳಿಗೂ ಎಳೆಯ ಕೂಸುಗಳಿಗೂ ಸ್ತೋತ್ರಮಾಡಲು ಕಲಿಸಿರುವೆ’(E) ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಓದಿಲ್ಲವೇ?” ಎಂದು ಉತ್ತರಕೊಟ್ಟನು.
17 ಬಳಿಕ ಆತನು ಆ ಸ್ಥಳವನ್ನು ಬಿಟ್ಟು ಬೆಥಾನಿ ಪಟ್ಟಣಕ್ಕೆ ಹೊರಟುಹೋದನು. ಯೇಸು ಆ ರಾತ್ರಿ ಅಲ್ಲಿಯೇ ತಂಗಿದನು.
ನಂಬಿಕೆಗಿರುವ ಶಕ್ತಿ
(ಮಾರ್ಕ 11:12-14,20-24)
18 ಮರುದಿನ ಮುಂಜಾನೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು. 19 ಆತನು ದಾರಿಯ ಪಕ್ಕದಲ್ಲಿದ್ದ ಒಂದು ಅಂಜೂರದ ಮರವನ್ನು ನೋಡಿ ಹಣ್ಣನ್ನು ತಿನ್ನಲು ಅದರ ಬಳಿಗೆ ಹೋದನು. ಆದರೆ ಮರದಲ್ಲಿ ಬರೀ ಎಲೆಗಳೇ ಇದ್ದವು. ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನೀನೆಂದಿಗೂ ಹಣ್ಣುಬಿಡದಂತಾಗಲಿ!” ಎಂದನು. ಆ ಕೂಡಲೇ ಅಂಜೂರದ ಮರ ಒಣಗಿಹೋಯಿತು.
20 ಶಿಷ್ಯರು ಇದನ್ನು ನೋಡಿ ಬಹಳ ಆಶ್ಚರ್ಯಪಟ್ಟು, “ಈ ಅಂಜೂರದ ಮರವು ಅಷ್ಟು ಬೇಗನೆ ಹೇಗೆ ಒಣಗಿ ಹೋಯಿತು?” ಎಂದು ಕೇಳಿದರು.
21 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು. 22 ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International