Read the Gospels in 40 Days
ವಿವಾಹವಿಚ್ಛೇದನದ ಬಗ್ಗೆ ಯೇಸುವಿನ ಉಪದೇಶ
(ಮತ್ತಾಯ 19:1-12)
10 ನಂತರ ಯೇಸು ಆ ಸ್ಥಳವನ್ನು ಬಿಟ್ಟು ಜುದೇಯ ಪ್ರಾಂತ್ಯಕ್ಕೆ ಹಾಗೂ ಜೋರ್ಡನ್ ನದಿಯ ಆಚೆದಡಕ್ಕೆ ಹೋದನು. ಅನೇಕ ಜನರು ಮತ್ತೆ ಆತನ ಬಳಿಗೆ ಬಂದರು. ಯೇಸು ಎಂದಿನಂತೆ ಆ ಜನರಿಗೆ ಉಪದೇಶಿಸಿದನು.
2 ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ಪರೀಕ್ಷಿಸಲು, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.
3 ಯೇಸು, “ಮೋಶೆ ನಿಮಗೆ ಏನು ಆಜ್ಞಾಪಿಸಿದ್ದಾನೆ?” ಎಂದು ಉತ್ತರಿಸಿದನು.
4 ಫರಿಸಾಯರು, “ಒಬ್ಬನು ತನ್ನ ಹೆಂಡತಿಗೆ ವಿಚ್ಛೇದನ ಪತ್ರ ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದಾನೆ” ಎಂದರು.[a]
5 ಯೇಸು, “ನಿಮ್ಮ ಮೊಂಡುತನದ ನಿಮಿತ್ತ ಮೋಶೆಯು ನಿಮಗೆ ಆ ಆಜ್ಞೆಯನ್ನು ಕೊಟ್ಟನು. 6 ಆದರೆ ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ನಿರ್ಮಿಸಿದನು.’(A) 7 ‘ಆದಕಾರಣ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. 8 ಮತ್ತು ಅವರಿಬ್ಬರು ಒಂದೇ ಶರೀರವಾಗುವರು.’(B) ಆದ್ದರಿಂದ ಅವರು ಇಬ್ಬರಲ್ಲ, ಒಬ್ಬರೇ. 9 ಹೀಗಿರಲು ದೇವರು ಸೇರಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.
10 ಶಿಷ್ಯರು ಮತ್ತು ಯೇಸು ಒಂದು ಮನೆಯಲ್ಲಿದ್ದಾಗ, ವಿವಾಹವಿಚ್ಛೇದನ ಪ್ರಶ್ನೆಯ ಬಗ್ಗೆ ಶಿಷ್ಯರು ಯೇಸುವನ್ನು ಮತ್ತೆ ಕೇಳಿದರು. 11 ಅದಕ್ಕೆ ಯೇಸು, “ತನ್ನ ಹೆಂಡತಿಯನ್ನು ಬಿಟ್ಟು, ಬೇರೆ ಸ್ತ್ರೀಯನ್ನು ಮದುವೆಯಾಗುವವನು ತನ್ನ ಹೆಂಡತಿಗೆ ದ್ರೋಹಮಾಡಿ ವ್ಯಭಿಚಾರಿಯಾಗಿದ್ದಾನೆ. 12 ತನ್ನ ಗಂಡನಿಗೆ ವಿಚ್ಛೇದನಪತ್ರ ಕೊಟ್ಟು ಬೇರೆ ಪುರುಷನನ್ನು ಮದುವೆಯಾಗುವ ಸ್ತ್ರೀಯೂ ವ್ಯಭಿಚಾರಿಣಿಯಾಗಿದ್ದಾಳೆ” ಎಂದು ಉತ್ತರಿಸಿದನು.
ಚಿಕ್ಕ ಮಕ್ಕಳಿಗೆ ಯೇಸುವಿನ ಆಶೀರ್ವಾದ
(ಮತ್ತಾಯ 19:13-15; ಲೂಕ 18:15-17)
13 ಜನರು, ತಮ್ಮ ಚಿಕ್ಕಮಕ್ಕಳನ್ನು ಮುಟ್ಟಿ ಆಶೀರ್ವದಿಸಲೆಂದು ಅವರನ್ನು ಯೇಸುವಿನ ಬಳಿಗೆ ತಂದರು. ಆದರೆ ಮಕ್ಕಳನ್ನು ಯೇಸುವಿನ ಬಳಿಗೆ ತರಕೂಡದೆಂದು ಶಿಷ್ಯರು ಜನರನ್ನು ಗದರಿಸಿದರು. 14 ಇದನ್ನು ಕಂಡ ಯೇಸು ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರನ್ನು ತಡೆಯಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರದೇ. 15 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ದೇವರ ರಾಜ್ಯವನ್ನು ಮಕ್ಕಳ ಮನೋಭಾವದಿಂದ ಸ್ವೀಕರಿಸದಿದ್ದರೆ ನೀವು ಅದರೊಳಗೆ ಸೇರುವುದೇ ಇಲ್ಲ” ಎಂದು ಹೇಳಿದನು. 16 ನಂತರ ಯೇಸು ಮಕ್ಕಳನ್ನು ತನ್ನ ಕೈಗಳಿಂದ ಅಪ್ಪಿಕೊಂಡು ಅವರ ಮೇಲೆ ತನ್ನ ಕೈಗಳನ್ನಿಟ್ಟು ಆಶೀರ್ವದಿಸಿದನು.
ಯೇಸುವನ್ನು ಹಿಂಬಾಲಿಸಲು ಹಿಂಜರಿದ ಶ್ರೀಮಂತ
(ಮತ್ತಾಯ 19:16-30; ಲೂಕ 18:18-30)
17 ಯೇಸು ಅಲ್ಲಿಂದ ಹೊರಡಬೇಕೆಂದಿದ್ದಾಗ ಒಬ್ಬನು ಓಡಿಬಂದು, ಆತನ ಮುಂದೆ ತನ್ನ ಮೊಣಕಾಲೂರಿ, “ಒಳ್ಳೆಯ ಉಪದೇಶಕನೇ, ನಿತ್ಯಜೀವವನ್ನು ಪಡೆಯಲು ನಾನು ಏನು ಮಾಡಬೇಕು?” ಎಂದು ಕೇಳಿದನು.
18 ಯೇಸು ಅದಕ್ಕೆ, “ನೀನು ನನ್ನನ್ನು ಒಳ್ಳೆಯವನೆಂದು ಕರೆಯುವುದೇಕೆ? ಯಾವ ಮನುಷ್ಯನೂ ಒಳ್ಳೆಯವನಲ್ಲ. ದೇವರು ಮಾತ್ರ ಒಳ್ಳೆಯವನು. 19 ನೀನು ನಿತ್ಯಜೀವ ಹೊಂದಬೇಕಾದರೆ ನಿನಗೆ ತಿಳಿದೇ ಇರುವ ಈ ಆಜ್ಞೆಗಳನ್ನು ಪಾಲಿಸು: ‘ಕೊಲೆ ಮಾಡಬೇಡ, ವ್ಯಭಿಚಾರ ಮಾಡಬೇಡ, ಕದಿಯಬೇಡ, ಸುಳ್ಳು ಹೇಳಬೇಡ, ಮೋಸ ಮಾಡಬೇಡ, ಅಲ್ಲದೆ ನಿನ್ನ ತಂದೆತಾಯಿಯರನ್ನು ಸನ್ಮಾನಿಸು’” ಎಂದು ಉತ್ತರಿಸಿದನು.
20 ಅವನು, “ಉಪದೇಶಕನೇ, ನಾನು ಬಾಲ್ಯದಿಂದಲೂ ಈ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ” ಎಂದನು.
21 ಯೇಸು ಆ ಮನುಷ್ಯನನ್ನು ಪ್ರೀತಿಯಿಂದ ದೃಷ್ಟಿಸಿನೋಡಿ, “ನೀನು ಮಾಡಬೇಕಾದ ಕಾರ್ಯವೊಂದಿದೆ. ಹೋಗಿ, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ಇರುವುದು. ನಂತರ ಬಂದು, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
22 ಯೇಸುವಿನ ಈ ಮಾತನ್ನು ಕೇಳಿ ಅವನು ನಿರಾಶೆಯಿಂದ ದುಃಖಗೊಂಡು ಹೊರಟುಹೋದನು. ಬಹಳ ಧನವಂತನಾಗಿದ್ದ ಅವನು ತನ್ನ ಅಪಾರ ಆಸ್ತಿಯನ್ನು ಮಾರಲು ಇಷ್ಟಪಡಲಿಲ್ಲ.
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ನೋಡಿ, “ಧನವಂತನು ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ” ಎಂದನು.
24 ಯೇಸುವಿನ ಈ ಮಾತನ್ನು ಕೇಳಿ ಶಿಷ್ಯರು ಬೆರಗಾದರು. ಆದರೆ ಯೇಸು ಮತ್ತೆ, “ನನ್ನ ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ! 25 ಶ್ರೀಮಂತರು ದೇವರ ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
26 ಶಿಷ್ಯರು ಇನ್ನೂ ಬೆರಗಾಗಿ, ಒಬ್ಬರಿಗೊಬ್ಬರು, “ಹಾಗಾದರೆ ರಕ್ಷಣೆಹೊಂದಲು ಯಾರಿಗೆ ಸಾಧ್ಯ?” ಎಂದು ಮಾತಾಡಿಕೊಂಡರು.
27 ಯೇಸು ಶಿಷ್ಯರ ಕಡೆಗೆ ನೋಡಿ, “ಇದು ಮನುಷ್ಯರಿಗಷ್ಟೇ ಅಸಾಧ್ಯ, ದೇವರಿಗಲ್ಲ” ಎಂದನು.
28 ಪೇತ್ರನು ಯೇಸುವಿಗೆ, “ನಿನ್ನನ್ನು ಹಿಂಬಾಲಿಸಲು ನಾವು ಎಲ್ಲವನ್ನೂ ತ್ಯಜಿಸಿದೆವು!” ಎಂದನು.
29 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನಗಾಗಿ ಮತ್ತು ಸುವಾರ್ತೆಗಾಗಿ ತನ್ನ ಮನೆಯನ್ನಾಗಲಿ ಸಹೋದರರನ್ನಾಗಲಿ ಸಹೋದರಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ತ್ಯಜಿಸಿದ ಪ್ರತಿಯೊಬ್ಬ ವ್ಯಕ್ತಿಯೂ 30 ನೂರರಷ್ಟು ಹೆಚ್ಚಾಗಿ ಪಡೆಯುತ್ತಾನೆ. ಈ ಪ್ರಪಂಚದಲ್ಲಿ ಅವನು ಅನೇಕ ಮನೆಗಳನ್ನು, ಸಹೋದರರನ್ನು, ಸಹೋದರಿಯರನ್ನು, ತಾಯಂದಿರನ್ನು, ಮಕ್ಕಳನ್ನು ಮತ್ತು ಭೂಮಿಯನ್ನು ಹಿಂಸೆಗಳೊಂದಿಗೆ ಪಡೆದುಕೊಳ್ಳುವನು. ಅಲ್ಲದೆ ಬರಲಿರುವ ಲೋಕದಲ್ಲಿ ಅವನು ನಿತ್ಯಜೀವವನ್ನೂ ಹೊಂದಿಕೊಳ್ಳುವನು. 31 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು” ಎಂದು ಹೇಳಿದನು.
ತನ್ನ ಮರಣದ ಕುರಿತು ಯೇಸುವಿನ ಮೂರನೆ ಪ್ರಕಟನೆ
(ಮತ್ತಾಯ 20:17-19; ಲೂಕ 18:31-34)
32 ಯೇಸು ಮತ್ತು ಆತನ ಜೊತೆಯಲ್ಲಿದ್ದ ಜನರು ಜೆರುಸಲೇಮಿಗೆ ಹೋಗುತ್ತಿರಲು ಯೇಸು ಅವರೆಲ್ಲರಿಗಿಂತ ಮುಂದೆ ಹೋಗುತ್ತಿದ್ದನು. ಅದನ್ನು ನೋಡಿ ಯೇಸುವಿನ ಶಿಷ್ಯರು ಬೆರಗಾದರು. ಅವರನ್ನು ಹಿಂಬಾಲಿಸಿ ಬರುತ್ತಿದ್ದ ಜನರು ಭಯಗೊಂಡರು. ಯೇಸು ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು, ಜೆರುಸಲೇಮಿನಲ್ಲಿ ತನಗೆ ಸಂಭವಿಸಲಿರುವುದನ್ನು ಅವರಿಗೆ ಹೇಳುತ್ತಾ, 33 “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೂ ಧರ್ಮೋಪದೇಶಕರಿಗೂ ಒಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆ ವಿಧಿಸಿ ಯೆಹೂದ್ಯರಲ್ಲದ ಜನರಿಗೆ ಒಪ್ಪಿಸುತ್ತಾರೆ. 34 ಆ ಜನರು ಆತನನ್ನು ನೋಡಿ ಅಪಹಾಸ್ಯ ಮಾಡುತ್ತಾರೆ, ಆತನ ಮೇಲೆ ಉಗುಳುತ್ತಾರೆ, ಆತನನ್ನು ಬಾರುಕೋಲಿನಿಂದ ಹೊಡೆಯುತ್ತಾರೆ ಮತ್ತು ಕೊಲ್ಲುತ್ತಾರೆ. ಆದರೆ ಆತನು ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುತ್ತಾನೆ” ಎಂದು ತಿಳಿಸಿದನು.
ಯಾಕೋಬ ಮತ್ತು ಯೋಹಾನರ ವಿಶೇಷ ಕೋರಿಕೆ
(ಮತ್ತಾಯ 20:20-28)
35 ನಂತರ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮ ಒಂದು ಕೋರಿಕೆಯನ್ನು ನೀನು ನಡೆಸಿಕೊಡಬೇಕು” ಎಂದರು.
36 ಯೇಸು, “ನಿಮ್ಮ ಯಾವ ಕೋರಿಕೆಯನ್ನು ನಡೆಸಿಕೊಡಬೇಕು?” ಎಂದು ಕೇಳಿದನು.
37 ಅವರು, “ನೀನು ನಿನ್ನ ರಾಜ್ಯದಲ್ಲಿ ವೈಭವದಿಂದಿರುವಾಗ ನಮ್ಮಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ಅನುಗ್ರಹಿಸು” ಎಂದು ಉತ್ತರಿಸಿದರು.
38 ಯೇಸು, “ನೀವು ಏನು ಕೇಳುತ್ತಿದ್ದೀರಿ ಎಂಬುದು ನಿಮಗೆ ತಿಳಿದಿಲ್ಲ. ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ಕುಡಿಯಲು ನಿಮಗೆ ಸಾಧ್ಯವೇ? ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವು ಹೊಂದಲು ಸಾಧ್ಯವೇ?” ಎಂದನು.
39 ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಿಸಿದರು.
ಯೇಸು ಅವರಿಗೆ, “ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ನೀವು ಕುಡಿಯುವಿರಿ. ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ. 40 ಆದರೆ ನನ್ನ ಎಡಗಡೆ ಅಥವಾ ಬಲಗಡೆ ಕುಳಿತುಕೊಳ್ಳುವ ವ್ಯಕ್ತಿಯನ್ನು ಆರಿಸುವವನು ನಾನಲ್ಲ. ಆ ಸ್ಥಳಗಳನ್ನು ಯಾರಿಗಾಗಿ ಸಿದ್ಧಪಡಿಸಲಾಗಿದೆಯೋ ಅವರಿಗಾಗಿಯೇ ಅವುಗಳನ್ನು ಕಾದಿರಿಸಲಾಗಿದೆ” ಎಂದನು.
41 ಉಳಿದ ಹತ್ತು ಜನ ಶಿಷ್ಯರು ಇದನ್ನು ಕೇಳಿ ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು. 42 ಯೇಸು ಎಲ್ಲಾ ಶಿಷ್ಯರನ್ನು ಒಟ್ಟಾಗಿ ಕರೆದು, “ಯೆಹೂದ್ಯರಲ್ಲದವರು ಅಧಿಪತಿಗಳನ್ನು ಹೊಂದಿದ್ದಾರೆ. ಆ ಅಧಿಪತಿಗಳು ಜನರ ಮೇಲೆ ತಮಗಿರುವ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆಂಬುದು ನಿಮಗೆ ತಿಳಿದಿದೆ. ಅವರ ಪ್ರಮುಖ ನಾಯಕರುಗಳು ಜನರ ಮೇಲೆ ತಮಗಿರುವ ಅಧಿಕಾರವನ್ನೆಲ್ಲಾ ಉಪಯೋಗಿಸಲು ಇಷ್ಟಪಡುತ್ತಾರೆ. 43 ಆದರೆ ನೀವು ಅವರಂತಾಗಬಾರದು. 44 ನಿಮ್ಮಲ್ಲಿ ಪ್ರಮುಖನಾಗಬೇಕೆಂದು ಬಯಸುವವನು ಸೇವಕನಂತೆ ಮತ್ತು ಗುಲಾಮನಂತೆ ನಿಮ್ಮೆಲ್ಲರ ಸೇವೆಮಾಡಬೇಕು. 45 ಅದೇ ರೀತಿ ಮನುಷ್ಯಕುಮಾರನು ಜನರಿಂದ ಸೇವೆ ಮಾಡಿಸಿಕೊಳ್ಳಲು ಬರದೆ, ಜನರ ಸೇವೆಮಾಡಲು ಬಂದನು. ಮನುಷ್ಯಕುಮಾರನು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.
ಕುರುಡನಿಗೆ ದೃಷ್ಟಿದಾನ
(ಮತ್ತಾಯ 20:29-34; ಲೂಕ 18:35-43)
46 ನಂತರ ಅವರು ಜೆರಿಕೊ ಎಂಬ ಊರಿಗೆ ಬಂದರು. ಯೇಸು ತನ್ನ ಶಿಷ್ಯರೊಂದಿಗೆ ಮತ್ತು ಇತರ ಅನೇಕ ಜನರೊಂದಿಗೆ ಆ ಊರನ್ನು ಬಿಟ್ಟು ಹೊರಟಿದ್ದನು. ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದನು. 47 ನಜರೇತಿನ ಯೇಸು ಆ ಮಾರ್ಗವಾಗಿ ಹೋಗುತ್ತಿದ್ದಾನೆಂದು ಅವನು ಕೇಳಿ, “ಯೇಸುವೇ, ದಾವೀದನ ಕುಮಾರನೇ, ದಯವಿಟ್ಟು ನನ್ನನ್ನು ಕರುಣಿಸು!” ಎಂದು ಗಟ್ಟಿಯಾಗಿ ಕೂಗಿದನು.
48 ಅನೇಕ ಜನರು ಆ ಕುರುಡನನ್ನು ಗದರಿಸಿ ಕೂಗಕೂಡದೆಂದು ಅವನಿಗೆ ಹೇಳಿದರು. ಆದರೆ ಆ ಕುರುಡನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು!” ಎಂದು ಮತ್ತೆಮತ್ತೆ ಕೂಗಿದನು.
49 ಯೇಸು ನಿಂತುಕೊಂಡು, “ಅವನನ್ನು ಕರೆಯಿರಿ” ಎಂದು ಹೇಳಿದನು.
ಆದ್ದರಿಂದ ಅವರು ಆ ಕುರುಡನನ್ನು ಕರೆದು, “ಸಂತೋಷಪಡು! ಎದ್ದುನಿಲ್ಲು! ಯೇಸು ನಿನ್ನನ್ನು ಕರೆಯುತ್ತಿದ್ದಾನೆ” ಎಂದರು. 50 ಆ ಕುರುಡನು ಕೂಡಲೇ ಎದ್ದುನಿಂತು ತನ್ನ ಹೊದಿಕೆಯನ್ನು ಅಲ್ಲಿಯೇ ಬಿಟ್ಟು ಯೇಸುವಿನ ಬಳಿಗೆ ಹೋದನು.
51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು.
ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.
52 ಯೇಸು, “ಹೋಗು, ನೀನು ನಂಬಿದ್ದರಿಂದ ನಿನಗೆ ಗುಣವಾಯಿತು” ಎಂದನು. ಆಗ ಅವನಿಗೆ ದೃಷ್ಟಿ ಬಂದಿತು. ಅವನು ಯೇಸುವನ್ನು ಆ ದಾರಿಯಲ್ಲಿ ಹಿಂಬಾಲಿಸಿದನು.
ರಾಜನಂತೆ ಜೆರುಸಲೇಮಿಗೆ ಪ್ರವೇಶ
(ಮತ್ತಾಯ 21:1-11; ಲೂಕ 19:28-40; ಯೋಹಾನ 12:12-19)
11 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನ ಸಮೀಪಕ್ಕೆ ಬಂದಿದ್ದರು. ಅವರು ಆಲಿವ್ ಗುಡ್ಡದ ಬಳಿಯಿರುವ ಬೆತ್ಛಗೆ ಹಾಗೂ ಬೆಥಾನಿ ಎಂಬ ಊರುಗಳಿಗೆ ಬಂದಾಗ ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, 2 “ಅಲ್ಲಿ ಕಾಣುತ್ತಿರುವ ಊರಿಗೆ ಹೋಗಿರಿ. ನೀವು ಅದನ್ನು ಪ್ರವೇಶಿಸಿದಾಗ, ಯಾರೂ ಸವಾರಿ ಮಾಡಿಲ್ಲದ ಒಂದು ಕತ್ತೆ ಮರಿಯನ್ನು ಅಲ್ಲಿ ಕಟ್ಟಿರುವುದನ್ನು ಕಾಣುವಿರಿ. ಆ ಕತ್ತೆಯನ್ನು ಬಿಚ್ಚಿಕೊಂಡು, ನನ್ನ ಬಳಿಗೆ ತನ್ನಿರಿ. 3 ಯಾವನಾದರೂ ‘ಆ ಕತ್ತೆಯನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ’ ಎಂದು ನಿಮ್ಮನ್ನು ಕೇಳಿದರೆ, ‘ಒಡೆಯನಿಗೆ ಈ ಕತ್ತೆ ಬೇಕಾಗಿದೆ. ಆತನು ಇದನ್ನು ಬೇಗನೆ ಕಳುಹಿಸಿಕೊಡುವನು’ ಎಂದು ಅವನಿಗೆ ಹೇಳಿರಿ” ಎಂದನು.
4 ಶಿಷ್ಯರು ಊರಿನೊಳಗೆ ಹೋದಾಗ ರಸ್ತೆಯಲ್ಲಿನ ಒಂದು ಮನೆಯ ಬಾಗಿಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕತ್ತೆಮರಿಯೊಂದನ್ನು ಕಂಡರು. ಶಿಷ್ಯರು ಹೋಗಿ ಆ ಕತ್ತೆಯನ್ನು ಬಿಚ್ಚಿದಾಗ, 5 ಅಲ್ಲಿ ನಿಂತಿದ್ದ ಕೆಲವು ಜನರು, “ನೀವು ಮಾಡುತ್ತಿರುವುದೇನು? ಆ ಕತ್ತೆಯನ್ನು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದರು. 6 ಯೇಸು ತಮಗೆ ಹೇಳಿದ ರೀತಿಯಲ್ಲಿಯೇ ಶಿಷ್ಯರು ಉತ್ತರಿಸಿದರು. ಆಗ ಜನರು ಆ ಕತ್ತೆಯನ್ನು ಶಿಷ್ಯರಿಗೆ ಬಿಟ್ಟುಕೊಟ್ಟರು.
7 ಶಿಷ್ಯರು ಕತ್ತೆಯನ್ನು ಯೇಸುವಿನ ಬಳಿಗೆ ತಂದು ತಮ್ಮ ಹೊದಿಕೆಗಳನ್ನು ಅದರ ಮೇಲೆ ಹಾಸಿದರು. ಆಗ ಯೇಸು ಅದರ ಮೇಲೆ ಕುಳಿತನು. 8 ಅನೇಕ ಜನರು ಯೇಸುವಿಗಾಗಿ ರಸ್ತೆಯ ಮೇಲೆ ತಮ್ಮ ಹೊದಿಕೆಗಳನ್ನು ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಲೆಗಳನ್ನು ಕೊಯ್ದುತಂದು ರಸ್ತೆಯ ಮೇಲೆ ಹರಡಿದರು. 9 ಕೆಲವು ಜನರು ಯೇಸುವಿನ ಮುಂದೆ ಹೋಗುತ್ತಿದ್ದರು. ಇತರ ಜನರು ಆತನ ಹಿಂದೆ ಹೋಗುತ್ತಿದ್ದರು. ಜನರೆಲ್ಲರೂ,
10 “ನಮ್ಮ ಪಿತೃವಾದ ದಾವೀದನ
ರಾಜ್ಯವು ಬರಲಿ!
ಮೇಲೋಕಗಳಲ್ಲಿ ದೇವರಿಗೆ ಜಯವಾಗಲಿ” ಎಂದು ಕೂಗಿದರು.
11 ಯೇಸು ಜೆರುಸಲೇಮನ್ನು ತಲುಪಿದಾಗ, ದೇವಾಲಯಕ್ಕೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನೂ ನೋಡಿದನು. ಆದರೆ ಆಗಲೇ ತಡವಾಗಿತ್ತು. ಆದ್ದರಿಂದ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಬೆಥಾನಿಯಕ್ಕೆ ಹೋದನು.
ಒಣಗಿಹೋದ ಅಂಜೂರ ಮರ
(ಮತ್ತಾಯ 21:18-19)
12 ಮರುದಿನ, ಯೇಸು ಬೆಥಾನಿಯದಿಂದ ಹೋಗುತ್ತಿರಲು ಆತನಿಗೆ ಹಸಿವಾಗಿತ್ತು. 13 ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ನೋಡಿದನು. ಆದ್ದರಿಂದ ಆ ಮರದಲ್ಲಿ ಅಂಜೂರದ ಹಣ್ಣೇನಾದರೂ ಸಿಕ್ಕಬಹುದೆಂದು ಅದರ ಬಳಿಗೆ ಹೋದನು. ಆದರೆ ಆತನು ಆ ಮರದಲ್ಲಿ ಅಂಜೂರದ ಹಣ್ಣುಗಳನ್ನು ಕಾಣಲಿಲ್ಲ. ಅಲ್ಲಿ ಎಲೆಗಳು ಮಾತ್ರ ಇದ್ದವು. ಏಕೆಂದರೆ ಅದು ಅಂಜೂರ ಹಣ್ಣಿನ ಕಾಲವಾಗಿರಲಿಲ್ಲ. 14 ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನಿನ್ನ ಹಣ್ಣನ್ನು ಯಾರೂ ತಿನ್ನದಂತಾಗಲಿ” ಎಂದನು. ಯೇಸುವಿನ ಶಿಷ್ಯರಿಗೂ ಈ ಮಾತು ಕೇಳಿಸಿತು.
ದೇವಾಲಯವೇ ಪ್ರಾರ್ಥನಾಲಯ
(ಮತ್ತಾಯ 21:12-17; ಲೂಕ 19:45-48; ಯೋಹಾನ 2:13-22)
15 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮನ್ನು ಪ್ರವೇಶಿಸಿದರು. ಅವರು ದೇವಾಲಯದೊಳಗೆ ಬಂದಾಗ ಅಲ್ಲಿ ವಸ್ತುಗಳನ್ನು ಮಾರುತ್ತಿದ್ದ ಮತ್ತು ಕೊಳ್ಳುತ್ತಿದ್ದ ಜನರನ್ನು ಆತನು ಅಲ್ಲಿಂದ ಹೊರಡಿಸತೊಡಗಿದನು; ಹಣ ವಿನಿಮಯಮಾಡಿಕೊಳ್ಳುತ್ತಿದ್ದ ವ್ಯಾಪಾರಿಗಳ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 16 ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದುಹೋಗುತ್ತಿದ್ದವರನ್ನು ಆತನು ತಡೆದನು. 17 ನಂತರ ಯೇಸು ಜನರಿಗೆ ಉಪದೇಶಿಸಿ, “‘ನನ್ನ ಆಲಯವು ಎಲ್ಲಾ ಜನರಿಗೂ ಪ್ರಾರ್ಥನೆಯ ಆಲಯವೆನಿಸಿಕೊಳ್ಳುವುದು’(D) ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರು ಅಡಗಿಕೊಳ್ಳುವ ಸ್ಥಳವನ್ನಾಗಿ ಮಾಡಿದ್ದೀರಿ’”(E) ಎಂದು ಹೇಳಿದನು.
18 ಮಹಾಯಾಜಕರು ಹಾಗೂ ಧರ್ಮೋಪದೇಶಕರು ಈ ಸಂಗತಿಗಳನ್ನು ಕೇಳಿ ಯೇಸುವನ್ನು ಕೊಲ್ಲಿಸಲು ತಕ್ಕ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸತೊಡಗಿದರು. ಜನರೆಲ್ಲರೂ ಯೇಸುವಿನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಯೇಸುವಿಗೆ ಭಯಪಟ್ಟರು. 19 ಆ ರಾತ್ರಿ ಯೇಸು ಮತ್ತು ಆತನ ಶಿಷ್ಯರು ಪಟ್ಟಣವನ್ನು ಬಿಟ್ಟುಹೋದರು.
ನಂಬಿಕೆಯ ಶಕ್ತಿ
(ಮತ್ತಾಯ 21:20-22)
20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು. 21 ಪೇತ್ರನು ಆ ಮರವನ್ನು ಜ್ಞಾಪಿಸಿಕೊಂಡು, ಯೇಸುವಿಗೆ, “ಗುರುವೇ, ನೋಡು! ನಿನ್ನೆ ನೀನು ಶಪಿಸಿದ ಅಂಜೂರದ ಮರ ಒಣಗಿಹೋಗಿದೆ!” ಎಂದನು.
22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ. 23 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ. 24 ಆದ್ದರಿಂದ ನೀವು ಪ್ರಾರ್ಥನೆಯಲ್ಲಿ ಬೇಡಿಕೊಂಡು, ಅದನ್ನೆಲ್ಲಾ ಹೊಂದಿಕೊಂಡಾಯಿತೆಂದು ನಂಬಿದರೆ, ಅದೆಲ್ಲಾ ನಿಮ್ಮದಾಗುತ್ತವೆ ಎಂದು ನಾನು ನಿಮಗೆ ಹೇಳುತ್ತೇನೆ. 25 ನೀವು ಪ್ರಾರ್ಥಿಸಲು ಸಿದ್ಧರಾಗಿರುವಾಗ, ನೀವು ಇನ್ನೊಬ್ಬನ ವಿಷಯದಲ್ಲಿ ಯಾವುದೇ ಕಾರಣದಿಂದಾಗಲಿ ಕೋಪದಿಂದಿರುವುದು ನಿಮ್ಮ ನೆನಪಿಗೆ ಬಂದರೆ, ಅವನನ್ನು ಕ್ಷಮಿಸಿಬಿಡಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವನು” ಎಂದು ಉತ್ತರಿಸಿದನು. 26 [c]
ಯೇಸುವಿನ ಅಧಿಕಾರವನ್ನು ಕುರಿತು ಯೆಹೂದ್ಯ ನಾಯಕರ ಸಂಶಯ
(ಮತ್ತಾಯ 21:23-27; ಲೂಕ 20:1-8)
27 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿಗೆ ಮತ್ತೆ ಹೋದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿದ್ದಾಗ, ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯನಾಯಕರು ಆತನ ಬಳಿಗೆ ಬಂದು, 28 “ಇವುಗಳನ್ನೆಲ್ಲ ಮಾಡಲು ನಿನಗೆ ಯಾವ ಅಧಿಕಾರವಿದೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು? ನಮಗೆ ತಿಳಿಸು!” ಎಂದರು.
29 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನ್ನ ಪ್ರಶ್ನೆಗೆ ಉತ್ತರಿಸಿದರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆ ಎಂಬುದನ್ನು ನಿಮಗೆ ತಿಳಿಸುತ್ತೇನೆ. 30 ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸಿದ್ದು ದೇವರಿಂದ ಬಂದ ಅಧಿಕಾರದಿಂದಲೋ ಅಥವಾ ಮನುಷ್ಯರಿಂದ ಬಂದ ಅಧಿಕಾರದಿಂದಲೋ? ನನಗೆ ತಿಳಿಸಿ!” ಎಂದನು.
31 ಯೆಹೂದ್ಯನಾಯಕರು ಈ ಪ್ರಶ್ನೆಯ ಬಗ್ಗೆ ಚರ್ಚಿಸಿ ಒಬ್ಬರಿಗೊಬ್ಬರು, “‘ಯೋಹಾನನು ದೀಕ್ಷಾಸ್ನಾನ ಕೊಟ್ಟದ್ದು ದೇವರಿಂದ ಬಂದ ಅಧಿಕಾರದಿಂದ’ ಎಂದು ನಾವು ಉತ್ತರಿಸಿದರೆ, ಆಗ ‘ಮತ್ತೆ ನೀವು ಏಕೆ ಯೋಹಾನನನ್ನು ನಂಬಲಿಲ್ಲ?’ ಎಂದು ಯೇಸು ಕೇಳುತ್ತಾನೆ. 32 ಆದರೆ ‘ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮನುಷ್ಯನಿಂದ ಬಂದ ಅಧಿಕಾರದಿಂದ’ ಎಂದು ಹೇಳಿದರೆ, ಆಗ ಜನರು ನಮ್ಮ ಮೇಲೆ ಕೋಪಗೊಳ್ಳುತ್ತಾರೆ” ಎಂದು ಮಾತಾಡಿಕೊಂಡರು. ಜನರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರಿಂದ ಅವರು ಜನರಿಗೆ ಭಯಪಟ್ಟರು.
33 ಆದಕಾರಣ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದು ಉತ್ತರಿಸಿದರು.
ಯೇಸು ಅವರಿಗೆ, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತಿದ್ದೇನೆಂದು ನಿಮಗೆ ಹೇಳುವುದಿಲ್ಲ” ಎಂದನು.
ದೇವರ ಮಗನ ಆಗಮನ
(ಮತ್ತಾಯ 21:33-46; ಲೂಕ 20:9-19)
12 ಯೇಸು ಜನರಿಗೆ ಸಾಮ್ಯಗಳ ಮೂಲಕ ಉಪದೇಶಿಸುತ್ತಾ ಅವರಿಗೆ ಹೇಳಿದ್ದೇನೆಂದರೆ: “ಒಬ್ಬನು ದ್ರಾಕ್ಷಿಯ ತೋಟವನ್ನು ಮಾಡಿ, ಸುತ್ತಲೂ ಗೋಡೆ ಹಾಕಿಸಿ, ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದನು. ಅವನು ಕೆಲವು ರೈತರಿಗೆ ತೋಟವನ್ನು ಗುತ್ತಿಗೆಗೆ ಕೊಟ್ಟು ಪ್ರವಾಸಕ್ಕೆ ಹೊರಟನು.
2 “ತರುವಾಯ ಫಲಕಾಲವು ಬಂದಾಗ ತನ್ನ ಪಾಲಿನ ದ್ರಾಕ್ಷಿಯನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದನು. 3 ಆದರೆ ರೈತರು ಆ ಸೇವಕನನ್ನು ಹಿಡಿದುಕೊಂಡು ಹೊಡೆದು ಏನನ್ನೂ ಕೊಡದೆ ಅವನನ್ನು ಕಳುಹಿಸಿಬಿಟ್ಟರು. 4 ಆಗ ಯಜಮಾನನು ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಅವನಿಗೂ ತಲೆಯ ಮೇಲೆ ಹೊಡೆದು ಅವಮಾನ ಮಾಡಿದರು. 5 ಆದ್ದರಿಂದ ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನು ಕೊಂದುಹಾಕಿದರು. ಆ ಯಜಮಾನನು ಇತರ ಅನೇಕ ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಕೆಲವು ಸೇವಕರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.
6 “ಆ ಯಜಮಾನನಿಗೆ ರೈತರ ಬಳಿಗೆ ಕಳುಹಿಸಲು ಪ್ರಿಯ ಮಗನೊಬ್ಬನೇ ಉಳಿದಿದ್ದನು. ಅವನು ಕಳುಹಿಸಬಹುದಾದ ಕೊನೆಯ ವ್ಯಕ್ತಿ ಅವನ ಸ್ವಂತ ಮಗನಾಗಿದ್ದನು. ‘ರೈತರು ನನ್ನ ಮಗನಿಗೆ ಗೌರವ ಕೊಡುತ್ತಾರೆ’ ಎಂದುಕೊಂಡು ಯಜಮಾನನು ಅವನನ್ನೇ ಕಳುಹಿಸಿದನು.
7 “ಆದರೆ ರೈತರು ಒಬ್ಬರಿಗೊಬ್ಬರು, ‘ಇವನು ಯಜಮಾನನ ಮಗನು. ಈ ದ್ರಾಕ್ಷಿತೋಟದ ಹಕ್ಕುದಾರ. ನಾವು ಇವನನ್ನು ಕೊಂದರೆ, ದ್ರಾಕ್ಷಿತೋಟ ನಮ್ಮದಾಗುತ್ತದೆ’ ಎಂದುಕೊಂಡು, 8 ಮಗನನ್ನು ಹಿಡಿದು ಕೊಂದುಹಾಕಿ, ದ್ರಾಕ್ಷಿತೋಟದ ಹೊರಗೆ ಎಸೆದುಬಿಟ್ಟರು.
9 “ಹೀಗಿರುವಾಗ ಆ ದಾಕ್ಷಿತೋಟದ ಯಜಮಾನನು ಏನು ಮಾಡುತ್ತಾನೆ? ಅವನು ತೋಟಕ್ಕೆ ಹೋಗಿ, ಆ ರೈತರನ್ನು ಕೊಂದು ತೋಟವನ್ನು ಬೇರೆ ರೈತರಿಗೆ ಒಪ್ಪಿಸಿಕೊಡುತ್ತಾನೆ. 10 ಪವಿತ್ರಗ್ರಂಥದಲ್ಲಿ ಬರೆದಿರುವಂತೆ,
‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
11 ಇದು ಪ್ರಭುವಿನಿಂದ ಆಯಿತು. ಇದು ನಮಗೆ ಆಶ್ಚರ್ಯವಾಗಿ ತೋರುತ್ತದೆ.’(F)”
12 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯನಾಯಕರು ಕೇಳಿ ತಮ್ಮನ್ನು ಕುರಿತಾಗಿಯೇ ಇದನ್ನು ಹೇಳಿದನೆಂದು ತಿಳಿದುಕೊಂಡು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರೂ ಜನರಿಗೆ ಹೆದರಿಕೊಂಡು ಆತನನ್ನು ಬಿಟ್ಟುಹೋದರು.
ಯೇಸುವನ್ನು ವಂಚಿಸಲು ಯೆಹೂದ್ಯನಾಯಕರ ಪ್ರಯತ್ನ
(ಮತ್ತಾಯ 22:15-22; ಲೂಕ 20:20-26)
13 ಅನಂತರ ಯೆಹೂದ್ಯನಾಯಕರು ಕೆಲವು ಫರಿಸಾಯರನ್ನು ಹಾಗೂ ಹೆರೋದ್ಯರ ಗುಂಪಿನಿಂದ ಕೆಲವರನ್ನು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲು ಕಳುಹಿಸಿದರು. 14 ಫರಿಸಾಯರು ಮತ್ತು ಹೆರೋದ್ಯರು ಯೇಸುವಿನ ಬಳಿಗೆ ಬಂದು, ಆತನಿಗೆ, “ಉಪದೇಶಕನೇ, ನೀನು ಯಥಾರ್ಥನೆಂಬುದು ನಮಗೆ ತಿಳಿದಿದೆ. ನಿನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬುದರ ಬಗ್ಗೆ ನಿನಗೆ ಹೆದರಿಕೆಯಿಲ್ಲ. ಜನರೆಲ್ಲರೂ ನಿನಗೆ ಒಂದೇ. ಮತ್ತು ನೀನು ದೇವರ ಮಾರ್ಗವನ್ನು ಕುರಿತು ಸತ್ಯವನ್ನೇ ಉಪದೇಶಿಸುತ್ತಿರುವೆ ಎಂದು ನಮಗೆ ಗೊತ್ತಿದೆ. ಆದ್ದರಿಂದ ನಮಗೆ ಹೇಳು: ಸೀಸರನಿಗೆ ತೆರಿಗೆ ಕೊಡುವುದು ಸರಿಯೋ? ಅಥವಾ ತಪ್ಪೋ? ನಾವು ತೆರಿಗೆಗಳನ್ನು ಕೊಡಬೇಕೇ ಅಥವಾ ಕೊಡಬಾರದೇ?” ಎಂದರು.
15 ಈ ಜನರು ನಿಜವಾಗಿಯೂ ತನ್ನನ್ನು ವಂಚಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ನನ್ನ ಮಾತಿನಲ್ಲಿ ತಪ್ಪನ್ನು ಕಂಡುಹಿಡಿಯಲು ಏಕೆ ಪ್ರಯತ್ನಿಸುತ್ತೀರಿ? ನನಗೆ ಒಂದು ಬೆಳ್ಳಿನಾಣ್ಯವನ್ನು[d] ಕೊಡಿರಿ, ನಾನು ಅದನ್ನು ನೋಡಬೇಕು” ಎಂದನು. 16 ಅವರು ಆತನಿಗೆ ಒಂದು ನಾಣ್ಯವನ್ನು ಕೊಟ್ಟರು. ಯೇಸು ಅವರಿಗೆ, “ನಾಣ್ಯದ ಮೇಲೆ ಯಾರ ಚಿತ್ರವಿದೆ? ಮತ್ತು ಅದರ ಮೇಲೆ ಯಾರ ಹೆಸರಿದೆ?” ಎಂದು ಕೇಳಿದನು. ಅವರು, “ಇದು ಸೀಸರನ ಚಿತ್ರ ಮತ್ತು ಸೀಸರನ ಹೆಸರು” ಎಂದು ಉತ್ತರಿಸಿದರು.
17 ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿ. ದೇವರದನ್ನು ದೇವರಿಗೆ ಕೊಡಿ” ಎಂದು ಹೇಳಿದನು. ಯೇಸು ಹೇಳಿದ್ದನ್ನು ಕೇಳಿ ಅವರು ಅತ್ಯಾಶ್ಚರ್ಯಪಟ್ಟರು.
ಯೇಸುವನ್ನು ವಂಚಿಸಲು ಸದ್ದುಕಾಯರ ಪ್ರಯತ್ನ
(ಮತ್ತಾಯ 22:23-33; ಲೂಕ 20:27-40)
18 ನಂತರ ಸದ್ದುಕಾಯರಲ್ಲಿ (ಸದ್ದುಕಾಯರು ಪುನರುತ್ಥಾನವಿಲ್ಲವೆಂದು ನಂಬುತ್ತಾರೆ.) ಕೆಲವರು ಯೇಸುವಿನ ಬಳಿಗೆ ಬಂದು, 19 “ಉಪದೇಶಕನೇ, ವಿವಾಹಿತನೊಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ಸಹೋದರನು ಮದುವೆ ಮಾಡಿಕೊಂಡು ಸತ್ತುಹೋದ ಸಹೋದರನಿಗಾಗಿ ಸಂತಾನ ಪಡೆಯಬೇಕೆಂದು ಮೋಶೆಯು ಬರೆದಿದ್ದಾನೆ.[e] 20 ಏಳು ಜನ ಸಹೋದರರಿದ್ದರು. ಮೊದಲನೆಯ ಸಹೋದರನು ಮದುವೆ ಮಾಡಿಕೊಂಡು ಮಕ್ಕಳಿಲ್ಲದೆ ಸತ್ತುಹೋದನು. 21 ಆದ್ದರಿಂದ ಎರಡನೆಯ ಸಹೋದರನು ಆಕೆಯನ್ನು ಮದುವೆಯಾದನು. ಆದರೆ ಅವನೂ ಮಕ್ಕಳಿಲ್ಲದೆ ಸತ್ತುಹೋದನು. ಮೂರನೆಯ ಸಹೋದರನಿಗೂ ಹೀಗೆಯೇ ಆಯಿತು. 22 ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿ ಆಕೆಯಲ್ಲಿ ಮಕ್ಕಳಿಲ್ಲದೆ ಸತ್ತುಹೋದರು. ಕೊನೆಗೆ ಆಕೆಯೂ ಸತ್ತುಹೋದಳು. 23 ಹೀಗಿರಲು ಜನರು ಪುನರುತ್ಥಾನ ಹೊಂದಿದಾಗ ಆಕೆಯು ಯಾರ ಹೆಂಡತಿಯಾಗುವಳು?” ಎಂದರು.
24 ಯೇಸು, “ನೀವು ಇಂಥಾ ತಪ್ಪನ್ನು ಮಾಡುವುದೇಕೆ? ಪವಿತ್ರಗ್ರಂಥವಾಗಲಿ, ದೇವರ ಶಕ್ತಿಯಾಗಲಿ ನಿಮಗೆ ಗೊತ್ತಿಲ್ಲ. 25 ಸತ್ತ ಜನರು ಪುನರುತ್ಥಾನ ಹೊಂದಿದಾಗ ಸ್ತ್ರೀಯರು ಮತ್ತು ಪುರುಷರು ಮದುವೆ ಮಾಡಿಕೊಳ್ಳುವುದೂ ಇಲ್ಲ. ತಮ್ಮ ಮಕ್ಕಳಿಗೂ ಮದುವೆ ಮಾಡಿಸುವುದೂ ಇಲ್ಲ. ಅವರೆಲ್ಲರೂ ಪರಲೋಕದಲ್ಲಿರುವ ದೇವದೂತರಂತಿರುತ್ತಾರೆ. 26 ಸತ್ತಜನರ ಪುನರುತ್ಥಾನದ ಬಗ್ಗೆ ದೇವರು ಹೇಳಿರುವುದನ್ನು ನೀವು ಖಂಡಿತವಾಗಿ ಓದಿದ್ದೀರಿ. ದೇವರು ಮೋಶೆಗೆ, ‘ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(G) ಎಂದು ಹೇಳಿದ್ದನ್ನು ಮೋಶೆಯ ಪುಸ್ತಕದಲ್ಲಿರುವ ಉರಿಯುವ ಪೊದೆಯ ಅಧ್ಯಾಯದಲ್ಲಿ ಕಾಣಬಹುದು. 27 ದೇವರು ತನ್ನನ್ನು ಅಬ್ರಹಾಮನ, ಇಸಾಕನ, ಯಾಕೋಬನ ದೇವರು ಎಂದು ಹೇಳಿಕೊಂಡಿರುವುದರಿಂದ ಇವರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ, ದೇವರು ಜೀವಿತರಿಗೆ ದೇವರಾಗಿದ್ದಾನೆಯೇ ಹೊರತು ಸತ್ತವರಿಗೆ ಅಲ್ಲ.”[f]
ಅತ್ಯಂತ ಮುಖ್ಯ ಆಜ್ಞೆ ಯಾವುದು?
(ಮತ್ತಾಯ 22:34-40; ಲೂಕ 10:25-28)
28 ಈ ವಾದವಿವಾದವನ್ನು ಕೇಳುತ್ತಿದ್ದ ಧರ್ಮೋಪದೇಶಕರಲ್ಲಿ ಒಬ್ಬನು ಯೇಸು ಸದ್ದುಕಾಯರಿಗೆ ಹಾಗೂ ಫರಿಸಾಯರಿಗೆ ಒಳ್ಳೆಯ ಉತ್ತರ ಕೊಟ್ಟದ್ದನ್ನು ಗಮನಿಸಿ, ಆತನ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಅತ್ಯಂತ ಮುಖ್ಯವಾದ ಆಜ್ಞೆ ಯಾವುದು?” ಎಂದು ಕೇಳಿದನು.
29 ಅದಕ್ಕೆ ಯೇಸು, “ಇಸ್ರೇಲಿನ ಜನರೇ ಕೇಳಿರಿ, ‘ನಮ್ಮ ದೇವರಾದ ಪ್ರಭುವೊಬ್ಬನೇ ದೇವರು. 30 ನಿಮ್ಮ ದೇವರಾದ ಪ್ರಭುವನ್ನು ನೀವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.’(H) ಇದೇ ಅತ್ಯಂತ ಮುಖ್ಯವಾದ ಆಜ್ಞೆ. 31 ‘ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಯವರನ್ನು ಪ್ರೀತಿಸಬೇಕು’(I) ಎಂಬುದೇ ಅತ್ಯಂತ ಮುಖ್ಯವಾದ ಎರಡನೇ ಆಜ್ಞೆ. ಇವುಗಳೇ ಅತ್ಯಂತ ಮುಖ್ಯವಾದವು” ಎಂದು ಹೇಳಿದನು.
32 ಆಗ ಅವನು, “ಉಪದೇಶಕನೇ, ಅದು ಒಳ್ಳೆಯ ಉತ್ತರ. ನೀನು ಸರಿಯಾಗಿ ಹೇಳಿದೆ. ದೇವರೊಬ್ಬನೇ ಪ್ರಭು. 33 ಆತನಲ್ಲದೆ ಬೇರೆ ದೇವರಿಲ್ಲ. ದೇವರನ್ನು ಪೂರ್ಣಹೃದಯದಿಂದ, ಪೂರ್ಣಬುದ್ಧಿಯಿಂದ ಹಾಗೂ ಪೂರ್ಣಶಕ್ತಿಯಿಂದ ಪ್ರೀತಿಸಬೇಕು ಮತ್ತು ಒಬ್ಬ ವ್ಯಕ್ತಿಯು ತನ್ನನ್ನು ಪ್ರೀತಿಸುವಂತೆಯೇ ಇತರರನ್ನೂ ಪ್ರೀತಿಸಬೇಕು. ನಾವು ದೇವರಿಗೆ ಅರ್ಪಿಸುವ ಪಶುಯಜ್ಞಗಳಿಗಿಂತಲೂ ಈ ಆಜ್ಞೆಗಳು ಹೆಚ್ಚು ಮುಖ್ಯವಾಗಿವೆ” ಎಂದು ಉತ್ತರಿಸಿದನು.
34 ಅವನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿದ ಯೇಸು, “ನೀನು ದೇವರ ರಾಜ್ಯಕ್ಕೆ ಹತ್ತಿರವಾಗಿರುವೆ” ಎಂದನು. ಅಂದಿನಿಂದ, ಯೇಸುವಿಗೆ ಹೆಚ್ಚು ಪ್ರಶೆಗಳನ್ನು ಕೇಳಲು ಯಾರಿಗೂ ಸಾಕಷ್ಟು ಧೈರ್ಯ ಬರಲಿಲ್ಲ.
ಮೆಸ್ಸೀಯನು ದಾವೀದನ ಮಗನೋ ಅಥವಾ ದಾವೀದನ ಪ್ರಭುವೋ?
(ಮತ್ತಾಯ 22:41-46; ಲೂಕ 20:41-44)
35 ಯೇಸು ದೇವಾಲಯದಲ್ಲಿ ಉಪದೇಶಿಸುತ್ತಿದ್ದಾಗ ಆತನು ಅವರಿಗೆ, “ಕ್ರಿಸ್ತನು ದಾವೀದನ ಮಗನೆಂದು ಧರ್ಮೋಪದೇಶಕರು ಹೇಳುವುದೇಕೆ?
36 ‘ಪ್ರಭುವು ನನ್ನ ಪ್ರಭುವಿಗೆ,
ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ನನ್ನೊಂದಿಗೆ ಕುಳಿತುಕೊಂಡಿರು’(J)
ಎಂದು ಹೇಳಿದ್ದಾನೆ ಎಂಬುದಾಗಿ ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಬರೆದಿದ್ದಾನಲ್ಲಾ! 37 ದಾವೀದನೇ ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿರುವಾಗ ಕ್ರಿಸ್ತನು ದಾವೀದನ ಮಗನಾಗುವುದು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದನು. ಯೇಸುವಿನ ಮಾತನ್ನು ಕೇಳಿ, ಅನೇಕ ಜನರು ಬಹಳ ಸಂತೋಷಪಟ್ಟರು.
ಯೇಸು ಧರ್ಮೋಪದೇಶಕರನ್ನು ಖಂಡಿಸಿದ್ದು
(ಮತ್ತಾಯ 23:6-7; ಲೂಕ 20:45-47)
38 ಯೇಸು ತನ್ನ ಉಪದೇಶವನ್ನು ಮುಂದುವರಿಸಿ, “ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆಯಿಂದಿರಿ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ. ಅವರು ಪೇಟೆಬೀದಿಗಳಲ್ಲಿ ಜನರಿಂದ ಗೌರವ ಪಡೆಯಲು ಅಪೇಕ್ಷಿಸುತ್ತಾರೆ. 39 ಸಭಾಮಂದಿರಗಳಲ್ಲಿ ಮತ್ತು ಔತಣಗಳಲ್ಲಿ ಉನ್ನತ ಆಸನಗಳನ್ನು ಬಯಸುತ್ತಾರೆ. 40 ಅವರು ವಿಧವೆಯರ ಆಸ್ತಿಯನ್ನು ಕಸಿದುಕೊಳ್ಳುತ್ತಾರೆ. ಉದ್ದುದ್ದ ಪ್ರಾರ್ಥನೆಗಳನ್ನು ಮಾಡುವುದರ ಮೂಲಕ ತಮ್ಮನ್ನು ತಾವೇ ಒಳ್ಳೆಯವರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ದೇವರು ಈ ಜನರನ್ನು ಕಠಿಣವಾಗಿ ಶಿಕ್ಷಿಸುತ್ತಾನೆ” ಎಂದು ಹೇಳಿದನು.
ಬಡವಿಧವೆಯ ಕಾಣಿಕೆ
(ಲೂಕ 21:1-4)
41 ಯೇಸು ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳ ಎದುರಿನಲ್ಲಿ ಕುಳಿತಿದ್ದಾಗ, ಜನರು ಪೆಟ್ಟಿಗೆಯಲ್ಲಿ ಹಣ ಹಾಕುವುದನ್ನು ಗಮನಿಸಿದನು. ಅನೇಕ ಶ್ರೀಮಂತ ಜನರು ಹೆಚ್ಚು ಹಣವನ್ನು ಕೊಟ್ಟರು. 42 ನಂತರ ಒಬ್ಬ ಬಡವಿಧವೆ ಬಂದು, ಎರಡು ತಾಮ್ರದ ನಾಣ್ಯಗಳನ್ನು[g] ಅಂದರೆ ಒಂದು ಪೈಸೆಯನ್ನು ಹಾಕಿದಳು.
43 ಯೇಸು ತನ್ನ ಶಿಷ್ಯರನ್ನು ಬಳಿಗೆ ಕರೆದು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಕಾಣಿಕೆ ಹಾಕಿದವರೆಲ್ಲರಲ್ಲಿ ಈ ಬಡವಿಧವೆ ಹೆಚ್ಚು ಹಾಕಿದ್ದಾಳೆ. 44 ಉಳಿದವರಾದರೊ ತಮಗೆ ಸಾಕಾಗಿ ಉಳಿದದ್ದರಲ್ಲಿ ಸ್ವಲ್ಪ ಹಾಕಿದರು. ಈಕೆಯಾದರೊ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲ ಕೊಟ್ಟುಬಿಟ್ಟಳು. ಈಕೆಗೆ ಆ ಹಣದ ಅಗತ್ಯವಿತ್ತು” ಎಂದನು.
Kannada Holy Bible: Easy-to-Read Version. All rights reserved. © 1997 Bible League International