ಮತ್ತಾಯ 22:15-22
Kannada Holy Bible: Easy-to-Read Version
ಯೇಸುವನ್ನು ವಂಚಿಸಲು ಯೆಹೂದ್ಯ ನಾಯಕರ ಪ್ರಯತ್ನ
(ಮಾರ್ಕ 12:13-17; ಲೂಕ 20:20-26)
15 ಆಗ ಫರಿಸಾಯರು, ಅಲ್ಲಿಂದ ಹೊರಟುಹೋಗಿ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಉಪಾಯಗಳನ್ನು ಮಾಡಿಕೊಂಡರು. 16 ಫರಿಸಾಯರು ಯೇಸುವನ್ನು ವಂಚಿಸುವುದಕ್ಕೆ ಕೆಲವರನ್ನು ಕಳುಹಿಸಿದರು. ಅವರಲ್ಲಿ ಕೆಲವರು ಫರಿಸಾಯರ ಹಿಂಬಾಲಕರಾಗಿದ್ದರು. ಇನ್ನು ಕೆಲವರು ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದವರಾಗಿದ್ದರು. ಈ ಜನರು, “ಬೋಧಕನೇ, ನೀನು ಯಥಾರ್ಥವಂತನೆಂದು ನಾವು ಬಲ್ಲೆವು. ನೀನು ದೇವರ ಮಾರ್ಗದ ಕುರಿತು ಸತ್ಯವನ್ನೇ ಬೋಧಿಸುವೆ ಎಂಬುದು ನಮಗೆ ಗೊತ್ತಿದೆ. ಬೇರೆಯವರು ನಿನ್ನ ವಿಷಯವಾಗಿ ಏನೇ ಯೋಚಿಸಿದರೂ ನೀನು ಹೆದರುವುದಿಲ್ಲ. ನೀನು ಮುಖದಾಕ್ಷಿಣ್ಯ ಮಾಡುವುದಿಲ್ಲ. 17 ಆದ್ದರಿಂದ ನಿನ್ನ ಅಭಿಪ್ರಾಯವನ್ನು ತಿಳಿಸು. ಸೀಸರನಿಗೆ ತೆರಿಗೆ ಕೊಡುವುದು ಸರಿಯೋ ಅಥವಾ ತಪ್ಪೋ?” ಎಂದು ಕೇಳಿದರು.
18 ಈ ಜನರ ಕುತಂತ್ರವು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “ನೀವು ಕಪಟಿಗಳು! ನನ್ನನ್ನು ತಪ್ಪಿನಲ್ಲಿ ಸಿಕ್ಕಿಸಲು ಏಕೆ ಪ್ರಯತ್ನಿಸುತ್ತೀರಿ? 19 ತೆರಿಗೆಗಾಗಿ ಕೊಡುವ ಒಂದು ನಾಣ್ಯವನ್ನು ನನಗೆ ತೋರಿಸಿರಿ” ಎಂದನು. ಜನರು ಒಂದು ಬೆಳ್ಳಿಯ ನಾಣ್ಯವನ್ನು ಆತನಿಗೆ ತೋರಿಸಿದರು. 20 ಆಗ ಆತನು, “ನಾಣ್ಯದ ಮೇಲೆ ಯಾರ ಮುಖಚಿತ್ರವಿದೆ ಮತ್ತು ಯಾರ ಹೆಸರಿದೆ?” ಎಂದು ಕೇಳಿದನು.
21 ಜನರು, “ಅದು ಸೀಸರನ ಮುಖಚಿತ್ರ ಮತ್ತು ಹೆಸರು” ಎಂದು ಉತ್ತರಕೊಟ್ಟರು.
ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಅಂದನು.
22 ಯೇಸು ಹೇಳಿದ್ದನ್ನು ಕೇಳಿದ ಆ ಜನರು ಆಶ್ಚರ್ಯಚಕಿತರಾಗಿ ಅಲ್ಲಿಂದ ಹೊರಟುಹೋದರು.
Read full chapterKannada Holy Bible: Easy-to-Read Version. All rights reserved. © 1997 Bible League International