Add parallel Print Page Options

ದೇವರು ತನ್ನ ಮಗನನ್ನು ಕಳುಹಿಸಿದನು

(ಮತ್ತಾಯ 21:33-46; ಮಾರ್ಕ 12:1-12)

ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದನು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿತೋಟವನ್ನು ಮಾಡಿ ಅದನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟನು. ಬಳಿಕ ಅವನು ಅಲ್ಲಿಂದ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು. 10 ಸ್ವಲ್ಪಕಾಲದ ನಂತರ ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂತು. ಆದ್ದರಿಂದ ಅವನು ತನ್ನ ಪಾಲಿನ ಹಣ್ಣನ್ನು ತೆಗೆದುಕೊಂಡು ಬರುವುದಕ್ಕಾಗಿ ತನ್ನ ಸೇವಕನನ್ನು ಆ ರೈತರ ಬಳಿಗೆ ಕಳುಹಿಸಿದನು. ಆದರೆ ಆ ರೈತರು ಆ ಸೇವಕನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು. 11 ಆದ್ದರಿಂದ ಅವನು ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನೂ ಹೊಡೆದು, ಅವಮಾನ ಮಾಡಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. 12 ಆದ್ದರಿಂದ ಅವನು ಮೂರನೆಯ ಸಲ ತನ್ನ ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ಆ ರೈತರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಗೆ ಅಟ್ಟಿದರು.

13 “ಆಗ ತೋಟದ ಯಜಮಾನನು, ‘ನಾನೀಗ ಏನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನು ಕಳುಹಿಸುವೆನು. ಒಂದುವೇಳೆ, ಆ ರೈತರು ಅವನಿಗೆ ಮರ್ಯಾದೆ ಕೊಡಬಹುದು’ ಅಂದುಕೊಂಡನು. 14 ಆ ರೈತರು ಮಗನನ್ನು ನೋಡಿ, ಒಬ್ಬರಿಗೊಬ್ಬರು, ‘ಇವನು ಧಣಿಯ ಮಗನು. ಈ ಹೊಲ ಇವನಿಗೇ ಸೇರುತ್ತದೆ. ನಾವು ಇವನನ್ನು ಕೊಂದರೆ, ಆಗ ಹೊಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಡಿಕೊಂಡರು. 15 ಬಳಿಕ ಆ ಮಗನನ್ನು ತೋಟದಿಂದ ಹೊರಕ್ಕೆ ನೂಕಿಕೊಂಡು ಹೋಗಿ ಕೊಂದುಹಾಕಿದರು.

“ಆಗ ತೋಟದ ಯಜಮಾನನು ಏನು ಮಾಡುವನು? 16 ಅವನು ಬಂದು ಆ ರೈತರನ್ನು ಕೊಲ್ಲುವನು! ಬಳಿಕ ಅವನು ಆ ತೋಟವನ್ನು ಬೇರೆ ಕೆಲವು ರೈತರಿಗೆ ಕೊಡುವನು.”

ಜನರು ಈ ಸಾಮ್ಯವನ್ನು ಕೇಳಿ, “ಇಲ್ಲ! ಹಾಗೆಂದಿಗೂ ಆಗಬಾರದು!” ಅಂದರು. 17 ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, “ಹಾಗಾದರೆ,

‘ಕಟ್ಟುವವರು ಬೇಡವೆಂದು ಬಿಟ್ಟ
    ಕಲ್ಲೇ ಮೂಲೆಗಲ್ಲಾಯಿತು’(A)

ಎಂಬ ವಚನದ ಅರ್ಥವೇನು? 18 ಆ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ನಿಮ್ಮ ಮೇಲೆ ಬಿದ್ದರೆ ಅದು ನಿಮ್ಮನ್ನು ಜಜ್ಜಿಹಾಕುವುದು!” ಎಂದು ಹೇಳಿದನು.

19 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯ ನಾಯಕರು ಕೇಳಿದರು. ತಮ್ಮನ್ನು ಕುರಿತಾಗಿಯೇ ಆತನು ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದುಕೊಂಡರು. ಆದ್ದರಿಂದ ಅವರು ಆಗಲೇ ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಅವರು ಜನರಿಗೆ ಭಯಪಟ್ಟು ಆತನನ್ನು ಬಂಧಿಸಲಿಲ್ಲ.

Read full chapter