ಮತ್ತಾಯ 22:23-33
Kannada Holy Bible: Easy-to-Read Version
ಯೇಸುವನ್ನು ವಂಚಿಸಲು ಕೆಲವು ಸದ್ದುಕಾಯರ ಪ್ರಯತ್ನ
(ಮಾರ್ಕ 12:18-27; ಲೂಕ 20:27-40)
23 ಅದೇ ದಿನದಲ್ಲಿ ಕೆಲವು ಸದ್ದುಕಾಯರು ಯೇಸುವಿನ ಬಳಿಗೆ ಬಂದು, (ಯಾರಿಗೂ ಪುನರುತ್ಥಾನವಿಲ್ಲ ಎಂಬುದು ಸದ್ದುಕಾಯರ ನಂಬಿಕೆ.) 24 “ಬೋಧಕನೇ, ವಿವಾಹಿತನೊಬ್ಬನು ಮಕ್ಕಳನ್ನು ಪಡೆಯದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗಾಗಿ ಸಂತಾನ ಪಡೆಯಬೇಕೆಂದು[a] ಮೋಶೆ ಹೇಳಿದ್ದಾನೆ. 25 ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸತ್ತನು. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾದನು. 26 ಬಳಿಕ ಎರಡನೆಯ ಸಹೋದರನೂ ಸತ್ತನು. ಹೀಗೆಯೇ ಮೂರನೆಯ ಸಹೋದರನಿಗೂ ಮತ್ತು ಉಳಿದೆಲ್ಲ ಸಹೋದರರಿಗೂ ಆಯಿತು. 27 ಕಡೆಯಲ್ಲಿ ಆ ಹೆಂಗಸೂ ಸತ್ತಳು. 28 ಆದರೆ ಏಳು ಮಂದಿಯೂ ಅವಳನ್ನು ಮದುವೆ ಆಗಿದ್ದರು. ಹೀಗಿರಲಾಗಿ ಅವರು ಮರಣದಿಂದ ಮೇಲೇಳುವಾಗ ಅವಳು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.
29 ಯೇಸು, “ನೀವು ತಪ್ಪಾಗಿ ತಿಳಿದುಕೊಂಡಿರಲು ಕಾರಣವೇನೆಂದರೆ, ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ತಿಳಿದಿಲ್ಲ ಮತ್ತು ದೇವರ ಶಕ್ತಿಯ ಬಗ್ಗೆಯೂ ನಿಮಗೆ ಗೊತ್ತಿಲ್ಲ. 30 ಸ್ತ್ರೀಯರು ಮತ್ತು ಪುರುಷರು ಪುನರುತ್ಥಾನ ಹೊಂದಿದ ಮೇಲೆ ಮದುವೆ ಮಾಡಿಕೊಳ್ಳುವುದಿಲ್ಲ. ಅವರೆಲ್ಲರೂ ಪರಲೋಕದ ದೇವದೂತರಂತೆ ಇರುತ್ತಾರೆ. 31 ಸತ್ತವರ ಪುನರುತ್ಥಾನದ ಕುರಿತು ದೇವರು, 32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(A) ಎಂದು ಹೇಳಿರುವುದನ್ನು ನೀವು ಓದಿಲ್ಲವೇ? ಹೀಗಿರುವಲ್ಲಿ, ದೇವರು ಜೀವಿತರಿಗೆ ಮಾತ್ರ ದೇವರೇ ಹೊರತು ಸತ್ತವರಿಗಲ್ಲಾ” ಅಂದನು.
33 ಜನರೆಲ್ಲರೂ ಇದನ್ನು ಕೇಳಿ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟರು.
Read full chapterFootnotes
- 22:24 ಬೋಧಕನೇ … ಬೇಕೆಂದು ನೋಡಿರಿ: ಧರ್ಮೋಪ. 25:5-6.
Kannada Holy Bible: Easy-to-Read Version. All rights reserved. © 1997 Bible League International