ಮಾರ್ಕ 12:18-27
Kannada Holy Bible: Easy-to-Read Version
ಯೇಸುವನ್ನು ವಂಚಿಸಲು ಸದ್ದುಕಾಯರ ಪ್ರಯತ್ನ
(ಮತ್ತಾಯ 22:23-33; ಲೂಕ 20:27-40)
18 ನಂತರ ಸದ್ದುಕಾಯರಲ್ಲಿ (ಸದ್ದುಕಾಯರು ಪುನರುತ್ಥಾನವಿಲ್ಲವೆಂದು ನಂಬುತ್ತಾರೆ.) ಕೆಲವರು ಯೇಸುವಿನ ಬಳಿಗೆ ಬಂದು, 19 “ಉಪದೇಶಕನೇ, ವಿವಾಹಿತನೊಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ಸಹೋದರನು ಮದುವೆ ಮಾಡಿಕೊಂಡು ಸತ್ತುಹೋದ ಸಹೋದರನಿಗಾಗಿ ಸಂತಾನ ಪಡೆಯಬೇಕೆಂದು ಮೋಶೆಯು ಬರೆದಿದ್ದಾನೆ.[a] 20 ಏಳು ಜನ ಸಹೋದರರಿದ್ದರು. ಮೊದಲನೆಯ ಸಹೋದರನು ಮದುವೆ ಮಾಡಿಕೊಂಡು ಮಕ್ಕಳಿಲ್ಲದೆ ಸತ್ತುಹೋದನು. 21 ಆದ್ದರಿಂದ ಎರಡನೆಯ ಸಹೋದರನು ಆಕೆಯನ್ನು ಮದುವೆಯಾದನು. ಆದರೆ ಅವನೂ ಮಕ್ಕಳಿಲ್ಲದೆ ಸತ್ತುಹೋದನು. ಮೂರನೆಯ ಸಹೋದರನಿಗೂ ಹೀಗೆಯೇ ಆಯಿತು. 22 ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿ ಆಕೆಯಲ್ಲಿ ಮಕ್ಕಳಿಲ್ಲದೆ ಸತ್ತುಹೋದರು. ಕೊನೆಗೆ ಆಕೆಯೂ ಸತ್ತುಹೋದಳು. 23 ಹೀಗಿರಲು ಜನರು ಪುನರುತ್ಥಾನ ಹೊಂದಿದಾಗ ಆಕೆಯು ಯಾರ ಹೆಂಡತಿಯಾಗುವಳು?” ಎಂದರು.
24 ಯೇಸು, “ನೀವು ಇಂಥಾ ತಪ್ಪನ್ನು ಮಾಡುವುದೇಕೆ? ಪವಿತ್ರಗ್ರಂಥವಾಗಲಿ, ದೇವರ ಶಕ್ತಿಯಾಗಲಿ ನಿಮಗೆ ಗೊತ್ತಿಲ್ಲ. 25 ಸತ್ತ ಜನರು ಪುನರುತ್ಥಾನ ಹೊಂದಿದಾಗ ಸ್ತ್ರೀಯರು ಮತ್ತು ಪುರುಷರು ಮದುವೆ ಮಾಡಿಕೊಳ್ಳುವುದೂ ಇಲ್ಲ. ತಮ್ಮ ಮಕ್ಕಳಿಗೂ ಮದುವೆ ಮಾಡಿಸುವುದೂ ಇಲ್ಲ. ಅವರೆಲ್ಲರೂ ಪರಲೋಕದಲ್ಲಿರುವ ದೇವದೂತರಂತಿರುತ್ತಾರೆ. 26 ಸತ್ತಜನರ ಪುನರುತ್ಥಾನದ ಬಗ್ಗೆ ದೇವರು ಹೇಳಿರುವುದನ್ನು ನೀವು ಖಂಡಿತವಾಗಿ ಓದಿದ್ದೀರಿ. ದೇವರು ಮೋಶೆಗೆ, ‘ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(A) ಎಂದು ಹೇಳಿದ್ದನ್ನು ಮೋಶೆಯ ಪುಸ್ತಕದಲ್ಲಿರುವ ಉರಿಯುವ ಪೊದೆಯ ಅಧ್ಯಾಯದಲ್ಲಿ ಕಾಣಬಹುದು. 27 ದೇವರು ತನ್ನನ್ನು ಅಬ್ರಹಾಮನ, ಇಸಾಕನ, ಯಾಕೋಬನ ದೇವರು ಎಂದು ಹೇಳಿಕೊಂಡಿರುವುದರಿಂದ ಇವರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ, ದೇವರು ಜೀವಿತರಿಗೆ ದೇವರಾಗಿದ್ದಾನೆಯೇ ಹೊರತು ಸತ್ತವರಿಗೆ ಅಲ್ಲ.”[b]
Read full chapterFootnotes
- 12:19 ನೋಡಿರಿ: ಧರ್ಮೋಪ. 25:5-6.
- 12:27 ದೇವರು … ಅಲ್ಲ ಇಲ್ಲಿ ಇದರರ್ಥ: “ಅಬ್ರಹಾಮ, ಇಸಾಕ, ಯಾಕೋಬ ಇನ್ನೂ ಜೀವಂತವಾಗಿದ್ದಾರೆ. ಸದ್ದುಕಾಯರಾದ ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ!” ಎಂದು ಉತ್ತರಿಸಿದನು.
Kannada Holy Bible: Easy-to-Read Version. All rights reserved. © 1997 Bible League International