Add parallel Print Page Options

ಅರಸನಂತೆ ಯೇಸುವಿನ ಪ್ರವೇಶ

(ಮಾರ್ಕ 11:1-11; ಲೂಕ 19:28-38; ಯೋಹಾನ 12:12-19)

21 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಾ ಆಲಿವ್ ಗುಡ್ಡದ ಸಮೀಪದಲ್ಲಿದ್ದ ಬೆತ್ಛಗೆಯನ್ನು ಸಮೀಸಿದರು. ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮ ಎದುರಿನಲ್ಲಿ ಇರುವ ಪಟ್ಟಣದೊಳಕ್ಕೆ ಹೋಗಿ. ನೀವು ಅದನ್ನು ಪ್ರವೇಶಿಸಿದಾಗ, ಅಲ್ಲೇ ಕಟ್ಟಿರುವ ಒಂದು ಕತ್ತೆಯನ್ನು ಕಾಣುತ್ತೀರಿ. ಆ ಕತ್ತೆಯ ಜೊತೆಯಲ್ಲಿ ಒಂದು ಕತ್ತೆಮರಿಯನ್ನು ಸಹ ನೀವು ಕಾಣುವಿರಿ. ಆ ಎರಡು ಕತ್ತೆಗಳನ್ನು ಬಿಚ್ಚಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. ನೀವು ಏಕೆ ಕತ್ತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ, ‘ಈ ಕತ್ತೆಗಳು ಗುರುವಿಗೆ ಬೇಕಾಗಿವೆ. ಆತನು ಅವುಗಳನ್ನು ಬೇಗನೆ ಹಿಂದಕ್ಕೆ ಕಳುಹಿಸುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಹೇಳಿ ಕಳುಹಿಸಿದನು.

ಪ್ರವಾದಿಯಾದ ಜೆಕರ್ಯನು ಹೇಳಿದ ಪ್ರವಾದನೆಯು ಇದರಿಂದ ನೆರವೇರಿತು. ಅದೇನೆಂದರೆ:

“ಸೀಯೋನ್ ನಗರಿಗೆ ಹೇಳಿರಿ,
    ‘ನಿನ್ನ ರಾಜನು ಈಗ ನಿನ್ನ ಬಳಿಗೆ ಬರುತ್ತಿದ್ದಾನೆ.
ದೀನತೆಯಿಂದ ಕತ್ತೆಯ ಮೇಲೆ ಬರುತ್ತಿದ್ದಾನೆ.
    ಹೌದು, ಪ್ರಾಯದ ಕತ್ತೆಮರಿಯ ಮೇಲೆ ಬರುತ್ತಿದ್ದಾನೆ.’”(A)

ಆ ಶಿಷ್ಯರು ಹೋಗಿ, ಯೇಸು ಹೇಳಿದ್ದಂತೆಯೇ ತಾಯಿ ಕತ್ತೆಯನ್ನೂ ಮತ್ತು ಅದರ ಮರಿಯನ್ನೂ ಯೇಸುವಿನ ಬಳಿಗೆ ತಂದರು. ಅವರು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಿದರು. ಆಗ ಯೇಸು ಕುಳಿತುಕೊಂಡು ಜೆರುಸಲೇಮಿಗೆ ಹೋದನು. ಅನೇಕ ಜನರು ತಮ್ಮ ಮೇಲಂಗಿಗಳನ್ನು ಯೇಸುವಿಗಾಗಿ ದಾರಿಯ ಮೇಲೆ ಹಾಸಿದರು. ಕೆಲವರು ಮರಗಳಿಂದ ಚಿಗುರುಗಳನ್ನು ಕತ್ತರಿಸಿಕೊಂಡು ಬಂದು ದಾರಿಯ ಮೇಲೆ ಹರಡಿದರು. ಕೆಲವರು ಯೇಸುವಿನ ಮುಂದೆ ನಡೆದು ಹೋಗುತ್ತಿದ್ದರು. ಕೆಲವರು ಯೇಸುವಿನ ಹಿಂದೆ ನಡೆದು ಬರುತ್ತಿದ್ದರು. ಜನರೆಲ್ಲರೂ ಹೀಗೆ ಆರ್ಭಟಿಸಿದರು:

“ದಾವೀದನ ಕುಮಾರನನ್ನು ಕೊಂಡಾಡಿರಿ![a]
    ‘ಪ್ರಭುವಿನ ಹೆಸರಿನಲ್ಲಿ ಬರುವವನನ್ನು ದೇವರು ಆಶೀರ್ವದಿಸಲಿ!’(B)

ಪರಲೋಕದ ದೇವರನ್ನು ಕೊಂಡಾಡಿರಿ!”

10 ಬಳಿಕ ಯೇಸು ಜೆರುಸಲೇಮಿನೊಳಗೆ ಹೋದನು. ಪಟ್ಟಣದಲ್ಲಿದ್ದ ಜನರೆಲ್ಲ ಗಲಿಬಿಲಿಗೊಂಡರು. ಅವರು, “ಈ ಮನುಷ್ಯನು ಯಾರು?” ಎಂದು ಕೇಳಿದರು.

11 ಯೇಸುವನ್ನು ಹಿಂಬಾಲಿಸುತ್ತಿದ್ದ ಅನೇಕ ಜನರು, “ಈತನೇ ಯೇಸು. ಈತನು ಗಲಿಲಾಯ ಪ್ರಾಂತ್ಯದಲ್ಲಿರುವ ನಜರೇತ್ ಎಂಬ ಊರಿನ ಪ್ರವಾದಿ” ಎಂದು ಉತ್ತರಕೊಟ್ಟರು.

Read full chapter

Footnotes

  1. 21:9 ಕೊಂಡಾಡಿರಿ ಮೂಲ ಗ್ರಂಥದಲ್ಲಿ “ಹೊಸನ್ನ” ಎಂಬ ಹೀಬ್ರೂ ಪದವನ್ನು ಬಳಸಲಾಗಿದೆ. ಈ ಪದದ ಅರ್ಥ “ರಕ್ಷಿಸು.” ಇದನ್ನು “ಕೊಂಡಾಡಿರಿ” ಎಂಬರ್ಥದಲ್ಲಿ ಬಳಸಲಾಗಿದೆ.