Print Page Options
Previous Prev Day Next DayNext

Chronological

Read the Bible in the chronological order in which its stories and events occurred.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 23

ಯೇಸು ಧಾರ್ಮಿಕ ನಾಯಕರನ್ನು ಖಂಡಿಸಿದನು

(ಮಾರ್ಕ 12:38-40; ಲೂಕ 11:37-52; 20:45-47)

23 ಬಳಿಕ ಯೇಸು ನೆರೆದಿದ್ದ ಜನರೊಂದಿಗೂ ತನ್ನ ಶಿಷ್ಯರೊಂದಿಗೂ ಮಾತಾಡಿ ಹೇಳಿದ್ದೇನೆಂದರೆ: “ಮೋಶೆಯ ಧರ್ಮಶಾಸ್ತ್ರ ಹೇಳುವುದನ್ನು ನಿಮಗೆ ತಿಳಿಸಲು ಧರ್ಮೋಪದೇಶಕರಿಗೂ ಫರಿಸಾಯರಿಗೂ ಅಧಿಕಾರವಿದೆ. ಆದ್ದರಿಂದ ನೀವು ಅವರಿಗೆ ವಿಧೇಯರಾಗಿರಬೇಕು ಮತ್ತು ಅವರು ಹೇಳಿದ್ದನ್ನೆಲ್ಲ ಕೈಕೊಂಡು ನಡೆಯಬೇಕು. ಆದರೆ ಅವರ ಜೀವಿತಗಳು ಅನುಸರಿಸತಕ್ಕ ಒಳ್ಳೆಯ ಮಾದರಿ ಜೀವಿತಗಳಲ್ಲ. ಅವರು ನಿಮಗೆ ತಿಳಿಸುವಂಥ ಸಂಗತಿಗಳನ್ನು ತಾವೇ ಅನುಸರಿಸುವುದಿಲ್ಲ. ಅವರು ಬೇರೆಯವರಿಗೆ ಕಷ್ಟಕರವಾದ ನಿಯಮಗಳನ್ನು ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ಒತ್ತಾಯ ಮಾಡುತ್ತಾರೆ. ತಾವಾದರೋ ಆ ನಿಯಮಗಳಲ್ಲಿ ಯಾವದನ್ನಾದರೂ ಅನುಸರಿಸಲು ಪ್ರಯತ್ನಿಸುವುದಿಲ್ಲ.

“ತಮ್ಮನ್ನು ಬೇರೆ ಜನರು ನೋಡಲಿ ಎಂಬ ಒಂದೇ ಉದ್ದೇಶದಿಂದ ಅವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಪವಿತ್ರ ಗ್ರಂಥಗಳು ತುಂಬಿರುವ ವಿಶೇಷವಾದ ಚರ್ಮದ ಚೀಲಗಳನ್ನು ಅವರು ಕಟ್ಟಿಕೊಂಡಿರುತ್ತಾರೆ. ಅವರು ಈ ಚೀಲಗಳನ್ನು ಇನ್ನೂ ಹೆಚ್ಚುಹೆಚ್ಚು ದೊಡ್ಡದನ್ನಾಗಿ ಮಾಡುತ್ತಾರೆ. ಜನರು ನೋಡಲಿ ಎಂದು ಅವರು ತಮ್ಮ ವಿಶೇಷ ಪ್ರಾರ್ಥನೆಯ ಉಡುಪುಗಳನ್ನು ಮತ್ತಷ್ಟು ಉದ್ದ ಮಾಡುತ್ತಾರೆ. ಆ ಫರಿಸಾಯರು ಮತ್ತು ಧರ್ಮೋಪದೇಶಕರು ಔತಣಗಳಲ್ಲಿ ಹಾಗೂ ಸಭಾಮಂದಿರಗಳಲ್ಲಿ ಅತಿ ಪ್ರಾಮುಖ್ಯವಾದ ಸ್ಥಾನಗಳನ್ನು ಅಪೇಕ್ಷಿಸುತ್ತಾರೆ. ಮಾರುಕಟ್ಟೆಗಳಲ್ಲಿ ಜನರು ತಮಗೆ ಮರ್ಯಾದೆ ತೋರಿಸಬೇಕೆಂದು ಆಶಿಸುತ್ತಾರೆ; ಜನರಿಂದ ಉಪದೇಶಕರೆನಿಸಿಕೊಳ್ಳಲು ಇಷ್ಟಪಡುತ್ತಾರೆ.

“ಆದರೆ ನೀವು ಉಪದೇಶಕರೆನಿಸಿಕೊಳ್ಳಬೇಡಿ. ನೀವೆಲ್ಲರೂ ಸಹೋದರಸಹೋದರಿಯರು. ನಿಮಗೆ ಒಬ್ಬನೇ ಉಪದೇಶಕನು. ಈ ಲೋಕದಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿ. ನಿಮಗೆ ಒಬ್ಬನೇ ತಂದೆ. ಆತನು ಪರಲೋಕದಲ್ಲಿದ್ದಾನೆ. 10 ‘ಗುರು’ವೆಂದೂ ಕರೆಸಿಕೊಳ್ಳಬೇಡಿ. ನಿಮಗೆ ಕ್ರಿಸ್ತನೊಬ್ಬನೇ ಗುರು. 11 ಸೇವಕನಂತೆ ನಿಮಗೆ ಸೇವೆ ಮಾಡುವವನೇ ನಿಮ್ಮಲ್ಲಿ ಅತ್ಯಂತ ದೊಡ್ಡವನಾಗಿದ್ದಾನೆ. 12 ತಾನು ಬೇರೆಯವರಿಗಿಂತ ಉತ್ತಮನೆಂದು ತನ್ನನ್ನು ಭಾವಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಉನ್ನತಿಗೇರಿಸಲ್ಪಡುವನು.

13 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವ ದಾರಿಯನ್ನು ನೀವು ಮುಚ್ಚಿಬಿಡುತ್ತೀರಿ. ನೀವೂ ಪ್ರವೇಶಿಸುವುದಿಲ್ಲ ಮತ್ತು ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಜನರಿಗೂ ಬಿಡುವುದಿಲ್ಲ. 14 [a]

15 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮ ಮಾರ್ಗಗಳನ್ನು ಹಿಂಬಾಲಿಸುವ ಒಬ್ಬನನ್ನು ಕಂಡುಕೊಳ್ಳಲು ನೀವು ಸಮುದ್ರಗಳನ್ನು ದಾಟಿ ಬೇರೆಬೇರೆ ದೇಶಗಳಲ್ಲಿ ಪ್ರಯಾಣ ಮಾಡುತ್ತೀರಿ. ಅವನನ್ನು ಕಂಡುಕೊಂಡ ಮೇಲೆ ನಿಮಗಿಂತಲೂ ಹೆಚ್ಚು ಕೆಟ್ಟವನನ್ನಾಗಿ ಮಾಡುತ್ತೀರಿ. ನೀವು ನರಕಪಾತ್ರರಾಗುವಷ್ಟು ಕೆಟ್ಟವರಾಗಿದ್ದೀರಿ.

16 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು. ಒಬ್ಬನು ದೇವಾಲಯದ ಹೆಸರಿನ ಮೇಲೆ ವಾಗ್ದಾನ ಮಾಡಿದರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ದೇವಾಲಯದಲ್ಲಿರುವ ಚಿನ್ನದ ಮೇಲೆ ವಾಗ್ದಾನ ಮಾಡಿದರೆ, ಅವನು ಅದನ್ನು ಈಡೇರಿಸಬೇಕು ಎಂದು ಹೇಳುತ್ತೀರಿ! 17 ನೀವು ಕುರುಡರಾದ ಮೂರ್ಖರು! ಯಾವುದು ಹೆಚ್ಚಿನದು? ಚಿನ್ನವೋ ಅಥವಾ ದೇವಾಲಯವೋ? ಆ ಚಿನ್ನವು ಪರಿಶುದ್ಧಗೊಂಡದ್ದು ದೇವಾಲಯದಿಂದಲೇ. ಆದ್ದರಿಂದ ದೇವಾಲಯವೇ ಹೆಚ್ಚಿನದು.

18 “ಒಬ್ಬನು ಯಜ್ಞವೇದಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ಯಜ್ಞವೇದಿಕೆಯ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದರೆ ಅವನು ಅದನ್ನು ಈಡೇರಿಸಲೇಬೇಕು ಎಂದು ಹೇಳುತ್ತೀರಿ. 19 ನೀವು ಕುರುಡರು. ನಿಮಗೇನೂ ಅರ್ಥವಾಗುವುದಿಲ್ಲ. ಯಾವುದು ಹೆಚ್ಚಿನದು? ಕಾಣಿಕೆಯೋ ಅಥವಾ ಯಜ್ಞವೇದಿಕೆಯೋ? ಕಾಣಿಕೆ ಪರಿಶುದ್ಧಗೊಂಡದ್ದು ಯಜ್ಞವೇದಿಕೆಯಿಂದಲೇ. ಆದ್ದರಿಂದ ಯಜ್ಞವೇದಿಕೆಯೇ ಹೆಚ್ಚಿನದು. 20 ಯಜ್ಞವೇದಿಕೆಯ ಮೇಲೆ ವಾಗ್ದಾನ ಮಾಡುವವನು ಯಜ್ಞವೇದಿಕೆಯ ಮತ್ತು ಅದರ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದಂತಾಯಿತು. 21 ದೇವಾಲಯದ ಮೇಲೆ ವಾಗ್ದಾನ ಮಾಡುವವನು ನಿಜವಾಗಿಯೂ ದೇವಾಲಯದ ಮತ್ತು ಅದರೊಳಗೆ ವಾಸವಾಗಿರುವಾತನ ಮೇಲೆ ವಾಗ್ದಾನ ಮಾಡಿದಂತಾಯಿತು. 22 ಪರಲೋಕದ ಮೇಲೆ ವಾಗ್ದಾನ ಮಾಡುವವನು ದೇವರ ಸಿಂಹಾಸನದ ಮೇಲೆಯೂ ಆ ಸಿಂಹಾಸನದ ಮೇಲೆ ಕುಳಿತಿರುವಾತನ ಮೇಲೆಯೂ ವಾಗ್ದಾನ ಮಾಡಿದಂತಾಯಿತು.

23 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮಲ್ಲಿರುವ ಪ್ರತಿಯೊಂದರಲ್ಲೂ ನಿಮ್ಮ ಪುದೀನ, ಸಬ್ಬಸ್ಸಿಗೆ ಸೊಪ್ಪು, ಜೀರಿಗೆ ಗಿಡಗಳಲ್ಲಿಯೂ ಸಹ ಹತ್ತರಲ್ಲೊಂದು ಪಾಲನ್ನು ದೇವರಿಗೆ ಕೊಡುತ್ತೀರಿ. ಆದರೆ ಧರ್ಮಶಾಸ್ತ್ರದ ಬೋಧನೆಗಳಲ್ಲಿ ನಿಜವಾಗಿಯೂ ಪ್ರಾಮುಖ್ಯವಾದ ಆಜ್ಞೆಗಳನ್ನು ಅಂದರೆ ನ್ಯಾಯವನ್ನೂ ಕರುಣೆಯನ್ನೂ ಯಥಾರ್ಥತೆಯನ್ನೂ ನೀವು ತೊರೆದುಬಿಟ್ಟಿದ್ದೀರಿ. ಈ ಆಜ್ಞೆಗಳಿಗೆ ನೀವು ಮೊದಲು ವಿಧೇಯರಾಗಿ, ಈಗ ಮಾಡುತ್ತಿರುವಂಥ ಕಾರ್ಯಗಳನ್ನು ಮಾಡಬೇಕಿತ್ತು. 24 ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು! ಒಬ್ಬನು ತಾನು ಕುಡಿಯುವ ಪಾನೀಯದೊಳಗಿಂದ ಸಣ್ಣ ಸೊಳ್ಳೆಯನ್ನು ತೆಗೆದುಹಾಕಿ ಆಮೇಲೆ ಒಂಟೆಯನ್ನು ನುಂಗುವವನಂತೆ ನೀವಿದ್ದೀರಿ.

25 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ನಿಮ್ಮ ಪಾತ್ರೆ ಬಟ್ಟಲುಗಳ ಹೊರಭಾಗವನ್ನು ತೊಳೆದು ಸ್ವಚ್ಛಮಾಡುತ್ತೀರಿ. ಆದರೆ ಅವುಗಳ ಒಳಭಾಗವು ಮೋಸದಿಂದಲೂ ನಿಮಗೆ ತೃಪ್ತಿ ನೀಡುವ ಪದಾರ್ಥಗಳಿಂದಲೂ ತುಂಬಿವೆ. 26 ಫರಿಸಾಯರೇ, ನೀವು ಕುರುಡರು! ಮೊದಲು ಬಟ್ಟಲಿನ ಒಳಭಾಗವನ್ನು ಚೆನ್ನಾಗಿ ಶುಚಿಮಾಡಿರಿ. ಆಗ ಬಟ್ಟಲಿನ ಹೊರಭಾಗವು ನಿಜವಾಗಿಯೂ ಶುಚಿಯಾಗಿರುವುದು.

27 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಸುಣ್ಣ ಹಚ್ಚಿದ ಸಮಾಧಿಗಳಂತಿದ್ದೀರಿ. ಆ ಸಮಾಧಿಗಳ ಹೊರಭಾಗ ಚಂದವಾಗಿ ಕಾಣುತ್ತದೆ. ಆದರೆ ಒಳಭಾಗ ಸತ್ತವರ ಎಲುಬುಗಳಿಂದಲೂ ಎಲ್ಲಾ ಬಗೆಯ ಹೊಲಸುಗಳಿಂದಲೂ ತುಂಬಿರುತ್ತದೆ. 28 ನೀವು ಅದೇ ರೀತಿ ಇದ್ದೀರಿ. ನಿಮ್ಮನ್ನು ನೋಡಿದ ಜನರು ನಿಮ್ಮನ್ನು ಒಳ್ಳೆಯವರೆಂದು ಭಾವಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಅಂತರಂಗವು ಕಪಟದಿಂದಲೂ ದುಷ್ಟತನದಿಂದಲೂ ತುಂಬಿಕೊಂಡಿದೆ.

29 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟುತ್ತೀರಿ. ಒಳ್ಳೆಯವರಾಗಿ ಜೀವಿಸದವರ ಗೋರಿಗಳಿಗೆ ಹೋಗಿ ಗೌರವ ತೋರಿಸುತ್ತೀರಿ. 30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ. 31 ಆ ಪ್ರವಾದಿಗಳನ್ನು ಕೊಂದವರ ಮಕ್ಕಳು (ಸಂತತಿಯವರು) ನೀವೇ ಎಂಬುದಕ್ಕೆ ಇದೇ ಆಧಾರವಾಗಿದೆ. 32 ನಿಮ್ಮ ಪಿತೃಗಳು ಪ್ರಾರಂಭಿಸಿದ ಆ ಪಾಪವನ್ನು ನೀವು ಪೂರ್ತಿಮಾಡುವಿರಿ!

33 “ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ! 34 ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಉಪದೇಶಕರನ್ನೂ ಕಳುಹಿಸುತ್ತೇನೆ. ನೀವು ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಇನ್ನು ಕೆಲವರನ್ನು ಶಿಲುಬೆಗೇರಿಸುವಿರಿ; ಇತರ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಹೊಡೆಯುವಿರಿ; ನೀವು ಅವರನ್ನು ಊರಿಂದ ಊರಿಗೆ ಅಟ್ಟಿಬಿಡುವಿರಿ.

35 “ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು. 36 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದಲ್ಲಿ ಜೀವಿಸುತ್ತಿರುವ ನಿಮ್ಮ ಮೇಲೆ ಈ ಅಪರಾಧಗಳೆಲ್ಲಾ ಬರುತ್ತವೆ.

ಜೆರುಸಲೇಮಿನ ಜನರಿಗೆ ಯೇಸು ನೀಡಿದ ಎಚ್ಚರಿಕೆ

(ಲೂಕ 13:34-35)

37 “ಜೆರುಸಲೇಮೇ, ಜೆರುಸಲೇಮೇ! ಪ್ರವಾದಿಗಳನ್ನು ಕೊಲ್ಲುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ಕಲ್ಲುಗಳಿಂದ ಕೊಲ್ಲುವವಳೇ, ಅನೇಕ ಸಲ ನಿನ್ನ ಜನರಿಗೆ ನಾನು ಸಹಾಯ ಮಾಡಬೇಕೆಂದಿದ್ದೆನು. ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವ ಹಾಗೆ ನಿನ್ನ ಜನರನ್ನು ಸೇರಿಸಿಕೊಳ್ಳಲು ನನಗೆ ಮನಸ್ಸಿತ್ತು. ಆದರೆ ನೀನು ಒಪ್ಪಲಿಲ್ಲ. 38 ಈಗ ನಿನ್ನ ಮನೆಯು ಸಂರ್ಪೂಣವಾಗಿ ಬರಿದಾಗಿಬಿಟ್ಟಿದೆ. 39 ನಾನು ನಿನಗೆ ಹೇಳುವುದೇನೆಂದರೆ, ‘ಪ್ರಭುವಿನ ಹೆಸರಿನಲ್ಲಿ ಬರುವಾತನನ್ನು ದೇವರು ಆಶೀರ್ವದಿಸಲಿ’(A) ಎಂದು ನೀನು ಹೇಳುವ ತನಕ ನನ್ನನ್ನು ನೋಡುವುದೇ ಇಲ್ಲ.”

ಲೂಕ 20-21

ಯೆಹೂದ್ಯನಾಯಕರು ಯೇಸುವಿಗೆ ಕೇಳಿದ ಪ್ರಶ್ನೆ

(ಮತ್ತಾಯ 21:23-27; ಮಾರ್ಕ 11:27-33)

20 ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು, “ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು.

ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ಜನರಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು.

ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು. ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು. ಬಳಿಕ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ಹಾಗಾದರೆ, ಈ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಅಂದನು.

ದೇವರು ತನ್ನ ಮಗನನ್ನು ಕಳುಹಿಸಿದನು

(ಮತ್ತಾಯ 21:33-46; ಮಾರ್ಕ 12:1-12)

ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದನು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿತೋಟವನ್ನು ಮಾಡಿ ಅದನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟನು. ಬಳಿಕ ಅವನು ಅಲ್ಲಿಂದ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು. 10 ಸ್ವಲ್ಪಕಾಲದ ನಂತರ ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂತು. ಆದ್ದರಿಂದ ಅವನು ತನ್ನ ಪಾಲಿನ ಹಣ್ಣನ್ನು ತೆಗೆದುಕೊಂಡು ಬರುವುದಕ್ಕಾಗಿ ತನ್ನ ಸೇವಕನನ್ನು ಆ ರೈತರ ಬಳಿಗೆ ಕಳುಹಿಸಿದನು. ಆದರೆ ಆ ರೈತರು ಆ ಸೇವಕನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು. 11 ಆದ್ದರಿಂದ ಅವನು ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನೂ ಹೊಡೆದು, ಅವಮಾನ ಮಾಡಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. 12 ಆದ್ದರಿಂದ ಅವನು ಮೂರನೆಯ ಸಲ ತನ್ನ ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ಆ ರೈತರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಗೆ ಅಟ್ಟಿದರು.

13 “ಆಗ ತೋಟದ ಯಜಮಾನನು, ‘ನಾನೀಗ ಏನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನು ಕಳುಹಿಸುವೆನು. ಒಂದುವೇಳೆ, ಆ ರೈತರು ಅವನಿಗೆ ಮರ್ಯಾದೆ ಕೊಡಬಹುದು’ ಅಂದುಕೊಂಡನು. 14 ಆ ರೈತರು ಮಗನನ್ನು ನೋಡಿ, ಒಬ್ಬರಿಗೊಬ್ಬರು, ‘ಇವನು ಧಣಿಯ ಮಗನು. ಈ ಹೊಲ ಇವನಿಗೇ ಸೇರುತ್ತದೆ. ನಾವು ಇವನನ್ನು ಕೊಂದರೆ, ಆಗ ಹೊಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಡಿಕೊಂಡರು. 15 ಬಳಿಕ ಆ ಮಗನನ್ನು ತೋಟದಿಂದ ಹೊರಕ್ಕೆ ನೂಕಿಕೊಂಡು ಹೋಗಿ ಕೊಂದುಹಾಕಿದರು.

“ಆಗ ತೋಟದ ಯಜಮಾನನು ಏನು ಮಾಡುವನು? 16 ಅವನು ಬಂದು ಆ ರೈತರನ್ನು ಕೊಲ್ಲುವನು! ಬಳಿಕ ಅವನು ಆ ತೋಟವನ್ನು ಬೇರೆ ಕೆಲವು ರೈತರಿಗೆ ಕೊಡುವನು.”

ಜನರು ಈ ಸಾಮ್ಯವನ್ನು ಕೇಳಿ, “ಇಲ್ಲ! ಹಾಗೆಂದಿಗೂ ಆಗಬಾರದು!” ಅಂದರು. 17 ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, “ಹಾಗಾದರೆ,

‘ಕಟ್ಟುವವರು ಬೇಡವೆಂದು ಬಿಟ್ಟ
    ಕಲ್ಲೇ ಮೂಲೆಗಲ್ಲಾಯಿತು’(A)

ಎಂಬ ವಚನದ ಅರ್ಥವೇನು? 18 ಆ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ನಿಮ್ಮ ಮೇಲೆ ಬಿದ್ದರೆ ಅದು ನಿಮ್ಮನ್ನು ಜಜ್ಜಿಹಾಕುವುದು!” ಎಂದು ಹೇಳಿದನು.

19 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯ ನಾಯಕರು ಕೇಳಿದರು. ತಮ್ಮನ್ನು ಕುರಿತಾಗಿಯೇ ಆತನು ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದುಕೊಂಡರು. ಆದ್ದರಿಂದ ಅವರು ಆಗಲೇ ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಅವರು ಜನರಿಗೆ ಭಯಪಟ್ಟು ಆತನನ್ನು ಬಂಧಿಸಲಿಲ್ಲ.

ಯೇಸುವನ್ನು ಮೋಸಗೊಳಿಸಲು ಯೆಹೂದ್ಯ ನಾಯಕರ ಪ್ರಯತ್ನ

(ಮತ್ತಾಯ 22:15-22; ಮಾರ್ಕ 12:13-17)

20 ಆದ್ದರಿಂದ ಧರ್ಮೋಪದೇಶಕರು ಮತ್ತು ಯಾಜಕರು ಯೇಸುವನ್ನು ಬಂಧಿಸಲು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ಅವರು ಕೆಲವು ಜನರನ್ನು ಯೇಸುವಿನ ಬಳಿಗೆ ಕಳುಹಿಸಿದರು. ಒಳ್ಳೆಯವರಂತೆ ನಟಿಸಲು ಅವರು ಆ ಜನರಿಗೆ ಹೇಳಿಕೊಟ್ಟಿದ್ದರು. ಅವರು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಬೇಕೆಂದಿದ್ದರು. (ಅವರು ಏನಾದರೂ ತಪ್ಪು ಕಂಡುಹಿಡಿದರೆ, ಆಗ ಯೇಸುವನ್ನು ಆತನ ಮೇಲೆ ಅಧಿಕಾರವಿದ್ದ ರಾಜ್ಯಪಾಲನಿಗೆ ಒಪ್ಪಿಸಿಕೊಡಬಹುದಾಗಿತ್ತು.) 21 ಆದ್ದರಿಂದ ಅವರು ಯೇಸುವಿಗೆ, “ಉಪದೇಶಕನೇ, ನೀನು ಸತ್ಯವನ್ನೇ ಹೇಳುವೆ ಮತ್ತು ಉಪದೇಶಿಸುವೆ ಎಂದು ನಮಗೆ ಗೊತ್ತಿದೆ. ನೀನು ಮುಖದಾಕ್ಷಿಣ್ಯ ಮಾಡುವವನಲ್ಲ. ದೇವರ ಮಾರ್ಗದ ಕುರಿತಾಗಿ ನೀನು ಯಾವಾಗಲೂ ಸತ್ಯವನ್ನೇ ಬೋಧಿಸುವೆ! 22 ಈಗ ಹೇಳು, ನಾವು ಸೀಸರನಿಗೆ[a] ತೆರಿಗೆ ಕೊಡುವುದು ಸರಿಯೋ? ತಪ್ಪೋ?” ಎಂದು ಕೇಳಿದರು.

23 ಆದರೆ ಈ ಜನರು ತನಗೆ ಮೋಸಮಾಡಲು ಪ್ರಯತ್ನಿಸುತ್ತಿದ್ದಾರೆಂದು ಯೇಸುವಿಗೆ ತಿಳಿದಿತ್ತು. 24 ಆದ್ದರಿಂದ ಯೇಸು ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಆ ನಾಣ್ಯದ ಮೇಲೆ ಯಾರ ಹೆಸರಿದೆ? ಅದರ ಮೇಲೆ ಯಾರ ಮುಖಚಿತ್ರವಿದೆ?” ಎಂದು ಕೇಳಿದನು.

ಅವರು, “ಸೀಸರನದು” ಎಂದು ಹೇಳಿದರು.

25 ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದನು.

26 ಆ ಜನರು ಆತನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿ ಆಶ್ಚರ್ಯಪಟ್ಟು ಮರುಪ್ರಶ್ನೆ ಕೇಳದಂತಾದರು. ಜನರ ಮುಂದೆ ಯೇಸುವನ್ನು ಮಾತಿನಲ್ಲಿ ಸಿಕ್ಕಿಸಲು ಅವರಿಂದಾಗಲಿಲ್ಲ.

ಯೇಸುವನ್ನು ಮೋಸಗೊಳಿಸಲು ಕೆಲವು ಸದ್ದುಕಾಯರ ಪ್ರಯತ್ನ

(ಮತ್ತಾಯ 22:23-33; ಮಾರ್ಕ 12:18-27)

27 ಕೆಲವು ಸದ್ದುಕಾಯರು[b] ಯೇಸುವಿನ ಬಳಿಗೆ ಬಂದರು. (ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದು ಸದ್ದುಕಾಯರು ನಂಬುತ್ತಾರೆ.) ಅವರು ಯೇಸುವಿಗೆ, 28 “ಉಪದೇಶಕನೇ, ಮದುವೆಯಾದ ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ಆ ಸ್ತ್ರೀಯನ್ನು ಮದುವೆಯಾಗಿ, ಸತ್ತುಹೋದ ಸಹೋದರನಿಗಾಗಿ ಮಕ್ಕಳನ್ನು ಪಡೆಯಬೇಕೆಂದು[c] ಮೋಶೆಯು ಬರೆದಿದ್ದಾನಷ್ಟೆ. 29 ಒಂದು ಕಾಲದಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯ ಸಹೋದರನು ಒಬ್ಬ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. ಅವನಿಗೆ ಮಕ್ಕಳಿರಲಿಲ್ಲ. 30 ಆಗ ಎರಡನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು, ಬಳಿಕ ಅವನೂ ಸತ್ತುಹೋದನು. 31 ಆಗ ಮೂರನೆಯ ಸಹೋದರನು ಆ ಸ್ತ್ರೀಯನ್ನು ಮದುವೆಯಾದನು. ಬಳಿಕ ಅವನೂ ಸತ್ತುಹೋದನು. ಇನ್ನುಳಿದ ಸಹೋದರರಿಗೂ ಹೀಗೆಯೇ ಆಯಿತು. ಅವರೆಲ್ಲರೂ ಮಕ್ಕಳಿಲ್ಲದೆ ಸತ್ತರು. 32 ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. 33 ಆದರೆ ಆ ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿದ್ದರು. ಹೀಗಿರಲಾಗಿ, ಸತ್ತವರು ಪುನರುತ್ಥಾನ ಹೊಂದುವಾಗ, ಆ ಸ್ತ್ರೀಯು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.

34 ಯೇಸು ಸದ್ದುಕಾಯರಿಗೆ, “ಭೂಲೋಕದಲ್ಲಿ ಜನರು ಒಬ್ಬರನ್ನೊಬ್ಬರು ಮದುವೆ ಆಗುತ್ತಾರೆ. 35 ಪುನರುತ್ಥಾನಕ್ಕೆ ಯೋಗ್ಯರಾದ ಕೆಲವು ಜನರು ಜೀವಂತವಾಗಿ ಎದ್ದುಬಂದು ಮತ್ತೆ ಜೀವಿಸುತ್ತಾರೆ. ಆ ಹೊಸ ಜೀವನದಲ್ಲಿ ಅವರು ಮದುವೆ ಆಗುವುದಿಲ್ಲ. 36 ಆ ಜೀವನದಲ್ಲಿ ಅವರು ದೇವದೂತರಂತಿರುತ್ತಾರೆ. ಅವರಿಗೆ ಮರಣವೂ ಇರುವುದಿಲ್ಲ. ಅವರು ದೇವರ ಮಕ್ಕಳಾಗಿರುತ್ತಾರೆ, ಏಕೆಂದರೆ ಅವರು ಪುನರುತ್ಥಾನ ಹೊಂದಿದವರಾಗಿದ್ದಾರೆ. 37 ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯು ಸ್ಪಷ್ಟವಾಗಿ ತೋರಿಸಿದ್ದಾನೆ. ಉರಿಯುವ ಪೊದೆಯ[d] ಕುರಿತು ಮೋಶೆ ಬರೆಯುವಾಗ ‘ಪ್ರಭುವಾದ ದೇವರೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದಾನೆ. 38 ದೇವರು ಅವರೆಲ್ಲರಿಗೆ ದೇವರಾಗಿರುವುದರಿಂದ ಅವರೆಲ್ಲರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ ದೇವರು ಜೀವಿಸುವ ಜನರಿಗೇ ದೇವರಾಗಿದ್ದಾನೆ. ದೇವರಿಗೆ ಸೇರಿದವರೆಲ್ಲರೂ ಜೀವಂತರಾಗಿದ್ದಾರೆ” ಎಂದು ಹೇಳಿದನು.

39 ಧರ್ಮೋಪದೇಶಕರಲ್ಲಿ ಕೆಲವರು, “ಬೋಧಕನೇ, ನೀನು ಒಳ್ಳೆಯ ಉತ್ತರವನ್ನು ಕೊಟ್ಟಿರುವೆ” ಎಂದು ಹೇಳಿದರು. 40 ಇನ್ನೊಂದು ಪ್ರಶ್ನೆಯನ್ನು ಆತನಿಗೆ ಕೇಳುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.

ಕ್ರಿಸ್ತನು ದಾವೀದನ ಮಗನೋ?

(ಮತ್ತಾಯ 22:41-46; ಮಾರ್ಕ 12:35-37)

41 ಆಗ ಯೇಸು, “ಕ್ರಿಸ್ತನು ದಾವೀದನ ಮಗನೆಂದು ಜನರು ಏಕೆ ಹೇಳುತ್ತಾರೆ? 42 ಕೀರ್ತನೆಗಳ ಪುಸ್ತಕದಲ್ಲಿ ಸ್ವತಃ ದಾವೀದನೇ ಇಂತೆಂದಿದ್ದಾನೆ:

‘ಪ್ರಭುವು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ) ಹೇಳಿದ್ದೇನೆಂದರೆ,
43 ನಾನು ನಿನ್ನ ವೈರಿಗಳನ್ನು ನಿನ್ನ ಪಾದಪೀಠವನ್ನಾಗಿ ಮಾಡುವ ತನಕ
    ನನ್ನ ಬಲಗಡೆಯಲ್ಲೇ ಕುಳಿತುಕೊಂಡಿರು.’(B)

44 ದಾವೀದನು ಕ್ರಿಸ್ತನನ್ನು ‘ಪ್ರಭು’ವೆಂದು ಕರೆದ ಮೇಲೆ ಆತನು ಅವನಿಗೆ ಮಗನಾಗಲು ಹೇಗೆ ಸಾಧ್ಯ?” ಎಂದು ಹೇಳಿದನು.

ಧರ್ಮೋಪದೇಶಕರ ಬಗ್ಗೆ ಎಚ್ಚರಿಕೆ

(ಮತ್ತಾಯ 23:1-36; ಮಾರ್ಕ 12:38-40; ಲೂಕ 11:37-54)

45 ಜನರೆಲ್ಲರೂ ಯೇಸುವಿನ ಮಾತನ್ನು ಆಲಿಸಿದರು. ಯೇಸು ತನ್ನ ಶಿಷ್ಯರಿಗೆ, 46 “ಧರ್ಮೋಪದೇಶಕರ ಕುರಿತು ಎಚ್ಚರಿಕೆಯಾಗಿರಿ. ಅವರು ಪ್ರಾಮುಖ್ಯ ವ್ಯಕ್ತಿಗಳಂತೆ ಬಟ್ಟೆ ಧರಿಸಿಕೊಂಡು ತಿರುಗಾಡುತ್ತಾರೆ. ಮಾರುಕಟ್ಟೆಗಳಲ್ಲಿ ಜನರಿಂದ ಗೌರವ ಹೊಂದಲು ಆಶಿಸುತ್ತಾರೆ. ಸಭಾಮಂದಿರಗಳಲ್ಲಿ ಮತ್ತು ಔತಣಕೂಟಗಳಲ್ಲಿ ಉನ್ನತವಾದ ಆಸನಗಳನ್ನು ಆಶಿಸುತ್ತಾರೆ. 47 ಆದರೆ ಅವರು ವಿಧವೆಯರಿಗೆ ಮೋಸಮಾಡಿ ಅವರ ಮನೆಗಳನ್ನು ಕಸಿದುಕೊಳ್ಳುತ್ತಾರೆ. ಬಳಿಕ ಉದ್ದವಾದ ಪ್ರಾರ್ಥನೆಗಳನ್ನು ಮಾಡಿ ಒಳ್ಳೆಯವರಂತೆ ನಟಿಸುತ್ತಾರೆ. ದೇವರು ಇವರನ್ನು ಕಠಿಣವಾದ ದಂಡನೆಗೆ ಗುರಿಪಡಿಸುತ್ತಾನೆ” ಎಂದು ಹೇಳಿದನು.

ನಿಜವಾದ ಕಾಣಿಕೆ

(ಮಾರ್ಕ 12:41-44)

21 ಕೆಲವು ಐಶ್ವರ್ಯವಂತರು ದೇವಾಲಯದ ಹಣದ ಪೆಟ್ಟಿಗೆಯಲ್ಲಿ ದೇವರಿಗಾಗಿ ತಮ್ಮ ಕಾಣಿಕೆಗಳನ್ನು ಹಾಕುವುದನ್ನು ಯೇಸು ಗಮನಿಸಿದನು. ಅಷ್ಟರಲ್ಲಿ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕನಾಣ್ಯಗಳನ್ನು ಪೆಟ್ಟಿಗೆಯಲ್ಲಿ[e] ಹಾಕಿದಳು. ಅದನ್ನು ಕಂಡ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ. ಈ ಬಡ ವಿಧವೆ ಕೇವಲ ಎರಡು ಚಿಕ್ಕ ತಾಮ್ರದ ನಾಣ್ಯಗಳನ್ನು ಕೊಟ್ಟಳು. ಆದರೆ ಆಕೆ ನಿಜವಾಗಿಯೂ, ಆ ಐಶ್ವರ್ಯವಂತರೆಲ್ಲರಿಗಿಂತ ಹೆಚ್ಚು ಕೊಟ್ಟಳು. ಐಶ್ವರ್ಯವಂತರಿಗೆ ಬೇಕಾದಷ್ಟು ಇದೆ. ಅವರು ಕೇವಲ ತಮಗೆ ಅವಶ್ಯವಿಲ್ಲದ್ದನ್ನು ಕೊಟ್ಟರು. ಈ ಸ್ತ್ರೀ ಬಹಳ ಬಡವಳಾಗಿದ್ದರೂ ತನ್ನಲ್ಲಿ ಇದ್ದದ್ದೆಲ್ಲವನ್ನೂ ಕೊಟ್ಟಳು. ಈಕೆಗೆ ಆ ಹಣದ ಅವಶ್ಯವಿತ್ತು” ಎಂದು ಹೇಳಿದನು.

ದೇವಾಲಯದ ನಾಶನ

(ಮತ್ತಾಯ 24:1-14; ಮಾರ್ಕ 13:1-13)

ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಮಾತಾಡುತ್ತಾ, “ಇದು ಅಂದವಾದ ಕಲ್ಲುಗಳಿಂದಲೂ ಹರಕೆಯ ಕೊಡುಗೆಗಳಿಂದಲೂ ಎಷ್ಟೊಂದು ಸುಂದರವಾಗಿದೆ!” ಎಂದರು.

ಆದರೆ ಯೇಸು ಅವರಿಗೆ, “ನೀವು ಇಲ್ಲಿ ನೋಡುವಂಥದ್ದೆಲ್ಲವೂ ನಾಶವಾಗುವ ಕಾಲ ಬರುವುದು. ಈ ಕಟ್ಟಡಗಳ ಪ್ರತಿಯೊಂದು ಕಲ್ಲನ್ನು ನೆಲಕ್ಕೆ ಕೆಡವಲಾಗುವುದು. ಇಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲ!” ಎಂದು ಹೇಳಿದನು.

ಶಿಷ್ಯರಲ್ಲಿ ಕೆಲವರು ಯೇಸುವಿಗೆ, “ಗುರುವೇ, ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಆ ಸಮಯವನ್ನು ಯಾವ ಸೂಚನೆಗಳಿಂದ ತಿಳಿದುಕೊಳ್ಳಬೇಕು?” ಎಂದು ಕೇಳಿದರು.

ಯೇಸು ಅವರಿಗೆ, “ಎಚ್ಚರಿಕೆಯಾಗಿರಿ! ಮೋಸ ಹೋಗಬೇಡಿರಿ. ನನ್ನ ಹೆಸರನ್ನು ಹೇಳುತ್ತಾ ಅನೇಕರು ಬರುವರು. ಅವರು, ‘ನಾನೇ ಕ್ರಿಸ್ತನು’ ಎಂದೂ, ‘ಸರಿಯಾದ ಸಮಯ ಬಂದಿದೆ’ ಎಂದೂ ಹೇಳುವರು. ಆದರೆ ಅವರನ್ನು ಹಿಂಬಾಲಿಸಬೇಡಿರಿ. ಯುದ್ಧಗಳ ಬಗ್ಗೆ ಮತ್ತು ದಂಗೆಗಳ ಬಗ್ಗೆ ನೀವು ಕೇಳುವಾಗ ಹೆದರಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಆ ಕೂಡಲೇ ಅಂತ್ಯ ಬರುವುದಿಲ್ಲ” ಎಂದು ಹೇಳಿದನು.

10 ಬಳಿಕ ಯೇಸು ಅವರಿಗೆ, “ಜನಾಂಗಗಳು ಬೇರೆ ಜನಾಂಗಗಳಿಗೆ ವಿರುದ್ಧವಾಗಿ ಹೋರಾಡುವವು. ರಾಜ್ಯಗಳು ಬೇರೆ ರಾಜ್ಯಗಳಿಗೆ ವಿರುದ್ಧವಾಗಿ ಹೋರಾಡುವವು. 11 ಭೀಕರ ಭೂಕಂಪಗಳಾಗುವವು. ಕ್ಷಾಮಗಳೂ ಉಪದ್ರವಗಳೂ ತಲೆದೋರುವವು. ಭಯಂಕರ ಘಟನೆಗಳೂ ಆಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವವು.

12 “ಆದರೆ ಈ ಎಲ್ಲಾ ಸಂಗತಿಗಳು ಸಂಭವಿಸುವ ಮೊದಲು, ಜನರು ನಿಮ್ಮನ್ನು ಬಂಧಿಸುವರು ಮತ್ತು ಹಿಂಸಿಸುವರು. ಸಭಾಮಂದಿರಗಳಲ್ಲಿ ಜನರು ನಿಮಗೆ ತೀರ್ಪು ನೀಡಿ ಸೆರೆಮನೆಗೆ ಹಾಕುವರು. ರಾಜರ ಮುಂದೆ ಮತ್ತು ರಾಜ್ಯಪಾಲರ ಮುಂದೆ ನಿಮ್ಮನ್ನು ಬಲವಂತವಾಗಿ ನಿಲ್ಲಿಸುವರು. ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮಗೆ ಹೀಗೆಲ್ಲಾ ಮಾಡುವರು. 13 ಆದರೆ ನನ್ನ ಕುರಿತು ಹೇಳುವುದಕ್ಕೆ ನಿಮಗೆ ಅದು ಸುಸಂದರ್ಭವಾಗಿರುವುದು. 14 ನೀವು ಏನು ಹೇಳಬೇಕೆಂದು ಚಿಂತಿಸಬೇಡಿರಿ. 15 ಏಕೆಂದರೆ ನಾನೇ ನಿಮಗೆ ಜ್ಞಾನವನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ವೈರಿಗಳಲ್ಲಿ ಯಾರೂ ನಿಮ್ಮ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಾಧ್ಯವಿಲ್ಲ. 16 ನಿಮ್ಮ ತಂದೆತಾಯಿಗಳು, ಸಹೋದರರು, ಸಂಬಂಧಿಕರು ಮತ್ತು ಸ್ನೇಹಿತರು ಸಹ ನಿಮಗೆ ವಿರುದ್ಧವಾಗುವರು. ನಿಮ್ಮಲ್ಲಿ ಕೆಲವರನ್ನು ಅವರು ಕೊಲ್ಲುವರು. 17 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. 18 ಆದರೆ ಇವುಗಳಿಂದ ನೀವೇನೂ ನಾಶವಾಗುವುದಿಲ್ಲ. 19 ನೀವು ನಿಮ್ಮ ನಂಬಿಕೆಯಲ್ಲಿ ದೃಢವಾಗಿದ್ದರೆ ನಿಮ್ಮನ್ನು ರಕ್ಷಿಸಿಕೊಳ್ಳುವಿರಿ.

ಜೆರುಸಲೇಮಿನ ನಾಶನ

(ಮತ್ತಾಯ 24:15-21; ಮಾರ್ಕ 13:14-19)

20 “ಜೆರುಸಲೇಮಿನ ಸುತ್ತಲೂ ಸೈನ್ಯಗಳು ಮುತ್ತಿಗೆ ಹಾಕುವುದನ್ನು ನೀವು ನೋಡುವಿರಿ. ಆಗ ಜೆರುಸಲೇಮಿನ ನಾಶನದ ಕಾಲ ಬಂತೆಂದು ನೀವು ತಿಳಿದುಕೊಳ್ಳಿರಿ. 21 ಆ ಕಾಲದಲ್ಲಿ ಜುದೇಯದಲ್ಲಿರುವ ಜನರು ಬೆಟ್ಟಗಳಿಗೆ ಓಡಿಹೋಗಲಿ. ಜೆರುಸಲೇಮಿನಲ್ಲಿರುವ ಜನರು ಬೇಗನೆ ಅಲ್ಲಿಂದ ಪಲಾಯನ ಮಾಡಲಿ. ನೀವು ಪಟ್ಟಣದ ಹತ್ತಿರವಿದ್ದರೂ ಅದರೊಳಗೆ ಹೋಗದಿರಿ! 22 ದೇವರು ತನ್ನ ಜನರನ್ನು ಶಿಕ್ಷಿಸುವ ಕಾಲದ ಬಗ್ಗೆ ಪ್ರವಾದಿಗಳು ಬರೆದಿರುವ ಸಂಗತಿಗಳೆಲ್ಲಾ ಆಗ ನೆರವೇರುತ್ತದೆ. 23 ಆ ಕಾಲದಲ್ಲಿ, ಗರ್ಭಿಣಿ ಸ್ತ್ರೀಯರಿಗೂ ಚಿಕ್ಕ ಕೂಸುಗಳಿರುವವರಿಗೂ ಬಹಳ ಗೋಳಾಟ ಇರುವುದು. ಏಕೆಂದರೆ ಈ ದೇಶವು ಮಹಾವಿಪತ್ತಿಗೆ ಈಡಾಗುವುದು. ದೇವರು ಈ ಜನರ (ಯೆಹೂದ್ಯರ) ವಿಷಯದಲ್ಲಿ ಕೋಪಗೊಂಡಿರುವುದರಿಂದ 24 ಇವರಲ್ಲಿ ಕೆಲವರು ಸೈನಿಕರಿಂದ ಕೊಲ್ಲಲ್ಪಡುವರು. ಇನ್ನು ಕೆಲವರು ಬಂಧಿತರಾಗಿ ಪರದೇಶಕ್ಕೆ ಒಯ್ಯಲ್ಪಡುವರು. ಅನ್ಯದೇಶೀಯರು ತಮ್ಮ ಕಾಲ ಮುಗಿಯುವ ತನಕ ಪರಿಶುದ್ಧ ಪಟ್ಟಣವಾದ ಜೆರುಸಲೇಮಿನಲ್ಲಿ ನಡೆದಾಡುವರು.

ಭಯಪಡಬೇಡಿರಿ

(ಮತ್ತಾಯ 24:29-31; ಮಾರ್ಕ 13:24-27)

25 “ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಲ್ಲಿ ವಿಚಿತ್ರವಾದ ಸೂಚನೆಗಳು ಕಾಣಿಸಿಕೊಳ್ಳುವವು. ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿ ಹೋಗುವವು. 26 ಗ್ರಹಶಕ್ತಿಗಳು ಕದಲುವುದರಿಂದ ಭೂಮಿಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯದಿಂದ ಮನುಷ್ಯರು ದಿಗ್ಭ್ರಮೆಗೊಳ್ಳುವರು. 27 ಆಗ ಮನುಷ್ಯಕುಮಾರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ನೋಡುವರು. 28 ಈ ಸಂಗತಿಗಳು ಸಂಭವಿಸುವುದಕ್ಕೆ ತೊಡಗುವಾಗ ಭಯಪಡಬೇಡಿರಿ. ಮೇಲೆ ನೋಡಿ ಸಂತೋಷಪಡಿರಿ! ಚಿಂತೆಮಾಡಬೇಡಿರಿ. ಸಂತೋಷಪಡಿರಿ, ಏಕೆಂದರೆ ದೇವರು ನಿಮ್ಮನ್ನು ಬಿಡುಗಡೆಗೊಳಿಸುವ ಕಾಲ ಸಮೀಪವಾಗಿದೆ ಎಂಬುದಕ್ಕೆ ಅವು ಸೂಚನೆಯಾಗಿವೆ.”

ಯೇಸುವಿನ ಮಾತುಗಳಿಗೆ ಅಳಿವಿಲ್ಲ

(ಮತ್ತಾಯ 24:32-35; ಮಾರ್ಕ 13:28-31)

29 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಎಲ್ಲಾ ಮರಗಳಲ್ಲಿ ಅಂಜೂರದ ಮರ ಒಳ್ಳೆಯ ಉದಾಹರಣೆಯಾಗಿದೆ. 30 ಅದು ಚಿಗುರುತ್ತಲೇ, ಬೇಸಿಗೆ ಹತ್ತಿರವಾಗಿದೆ ಎಂದು ನೀವು ತಿಳಿದುಕೊಳ್ಳುವಿರಿ. 31 ಅದೇರೀತಿಯಲ್ಲಿ ಈ ಎಲ್ಲಾ ಸಂಗತಿಗಳು ಸಂಭವಿಸುವುದನ್ನು ನೀವು ನೋಡುವಾಗ, ದೇವರ ರಾಜ್ಯವು ಬಹುಬೇಗನೆ ಬರುತ್ತದೆ ಎಂದು ತಿಳಿದುಕೊಳ್ಳುವಿರಿ.

32 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದ ಜನರು ಇನ್ನೂ ಜೀವಿಸುತ್ತಿರುವಾಗ ಈ ಸಂಗತಿಗಳೆಲ್ಲಾ ಸಂಭವಿಸುವವು! 33 ಭೂಮ್ಯಾಕಾಶಗಳು ನಾಶವಾಗುವವು; ಆದರೆ ನಾನು ಹೇಳಿದ ಮಾತುಗಳು ಎಂದಿಗೂ ನಾಶವಾಗುವುದಿಲ್ಲ!

ಎಲ್ಲಾ ಸಮಯದಲ್ಲೂ ಸಿದ್ಧರಾಗಿರಿ

34 “ಎಚ್ಚರಿಕೆ! ತಿನ್ನುವುದರಲ್ಲಿಯೂ ಕುಡಿದು ಮತ್ತರಾಗುವುದರಲ್ಲಿಯೂ ಪ್ರಾಪಂಚಿಕ ಚಿಂತೆಗಳಲ್ಲಿಯೂ ಮಗ್ನರಾಗಿರಬೇಡಿರಿ. ಇಲ್ಲವಾದರೆ, ನಿಮ್ಮ ಹೃದಯಗಳು ಭಾರವಾಗಿರುವಾಗಲೇ ಅಂತ್ಯವು ಫಕ್ಕನೆ ಬಂದೀತು. 35 ಆ ದಿವಸವು ಭೂನಿವಾಸಿಗಳೆಲ್ಲರಿಗೂ ವಿಸ್ಮಯಕರವಾಗಿರುವುದು. 36 ಆದ್ದರಿಂದ ಎಲ್ಲಾ ಸಮಯದಲ್ಲಿಯೂ ಸಿದ್ಧರಾಗಿರಿ. ನಡೆಯಲಿರುವ ಈ ಎಲ್ಲಾ ಸಂಗತಿಗಳನ್ನು ಎದುರಿಸಿ ಸುರಕ್ಷಿತವಾಗಿ ಮುಂದುವರಿಯಲು ಮತ್ತು ಮನುಷ್ಯಕುಮಾರನ ಮುಂದೆ ನಿಲ್ಲಲು ಬೇಕಾದ ಶಕ್ತಿಗಾಗಿ ಪ್ರಾರ್ಥಿಸಿರಿ.”

37 ಯೇಸು ಹಗಲೆಲ್ಲಾ ದೇವಾಲಯದಲ್ಲಿ ಜನರಿಗೆ ಉಪದೇಶಿಸುತ್ತಿದ್ದನು. ರಾತ್ರಿಯಲ್ಲಾದರೋ ಪಟ್ಟಣದ ಹೊರಗಿದ್ದ ಆಲಿವ್ ಮರಗಳ ಗುಡ್ಡದ ಮೇಲೆ ಇರುತ್ತಿದ್ದನು. 38 ಪ್ರತಿ ಮುಂಜಾನೆ, ಜನರೆಲ್ಲರೂ ಬೇಗನೆ ಎದ್ದು ದೇವಾಲಯದಲ್ಲಿ ಯೇಸುವಿನ ಉಪದೇಶವನ್ನು ಕೇಳುವುದಕ್ಕೆ ಹೋಗುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International