Add parallel Print Page Options

ಯೇಸು ಫರಿಸಾಯರನ್ನು ಖಂಡಿಸಿದನು

(ಮತ್ತಾಯ 23:1-36; ಮಾರ್ಕ 12:38-40; ಲೂಕ 20:45-47)

37 ಯೇಸು ಮಾತಾಡಿ ಮುಗಿಸಿದ ಮೇಲೆ ಫರಿಸಾಯನೊಬ್ಬನು ಯೇಸುವನ್ನು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಕರೆದನು. ಆದ್ದರಿಂದ ಯೇಸು ಅವನ ಮನೆಯೊಳಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 38 ಆದರೆ ಯೇಸು ತನ್ನ ಕೈಗಳನ್ನು ತೊಳೆದುಕೊಳ್ಳದೆ ಊಟಕ್ಕೆ ಕುಳಿತಿರುವುದನ್ನು ಕಂಡಾಗ ಫರಿಸಾಯನಿಗೆ ಆಶ್ಚರ್ಯವಾಯಿತು. 39 ಪ್ರಭುವು (ಯೇಸು) ಅವನಿಗೆ ಹೇಳಿದ್ದೇನೆಂದರೆ: “ಫರಿಸಾಯರಾದ ನೀವು ಪಾತ್ರೆಯ ಮತ್ತು ಬಟ್ಟಲಿನ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ನಿಮ್ಮ ಒಳಭಾಗವು ಮೋಸದಿಂದಲೂ ಕೆಟ್ಟತನದಿಂದಲೂ ತುಂಬಿಹೋಗಿದೆ. 40 ನೀವು ಬುದ್ಧಿಹೀನರು! ಹೊರಭಾಗವನ್ನು ಮಾಡಿದಾತನೇ (ದೇವರು) ಒಳಭಾಗವನ್ನೂ ಮಾಡಿದ್ದಾನೆ. 41 ಆದ್ದರಿಂದ ಪಾತ್ರೆ ಮತ್ತು ಬಟ್ಟಲುಗಳ ಒಳಗಿರುವುದನ್ನು ಬಡವರಿಗೆ ದಾನಮಾಡಿರಿ. ಆಗ ನೀವು ಪೂರ್ಣಶುದ್ಧರಾಗುತ್ತೀರಿ.

42 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದೇವರಿಗೆ ನಿಮ್ಮಲ್ಲಿರುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ನಿಮ್ಮ ತೋಟದಲ್ಲಿ ಬೆಳೆಯುವ ಮರುಗ, ಸದಾಪು ಮುಂತಾದ ಚಿಕ್ಕ ಸಸಿಗಳಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ಆದರೆ ಬೇರೆಯವರಿಗೆ ನ್ಯಾಯತೋರಿಸುವುದನ್ನೂ ದೇವರನ್ನು ಪ್ರೀತಿಸುವುದನ್ನೂ ಮರೆತುಬಿಟ್ಟಿದ್ದೀರಿ. ನೀವು ಮೊದಲು ಇವುಗಳನ್ನು ಮಾಡಬೇಕು ಮತ್ತು ಉಳಿದವುಗಳನ್ನು ಕಡೆಗಣಿಸಬಾರದು.

43 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸಭಾಮಂದಿರಗಳಲ್ಲಿ ಉನ್ನತಪೀಠಗಳನ್ನೂ ಮಾರುಕಟ್ಟೆಗಳಲ್ಲಿ ಜನರಿಂದ ಗೌರವವನ್ನೂ ಆಶಿಸುತ್ತೀರಿ. 44 ನೀವು ಮರೆಯಾಗಿರುವ ಸಮಾಧಿಗಳಂತಿದ್ದೀರಿ. ಜನರು ಸಮಾಧಿಗಳೆಂದು ತಿಳಿಯದೆ ಅವುಗಳ ಮೇಲೆ ನಡೆಯುತ್ತಾರೆ.”

ಧರ್ಮೋಪದೇಶಕನಿಗೆ ಯೇಸು ನೀಡಿದ ಉತ್ತರ

45 ಧರ್ಮೋಪದೇಶಕನೊಬ್ಬನು ಯೇಸುವಿಗೆ, “ಬೋಧಕನೇ, ನೀನು ಫರಿಸಾಯರ ಕುರಿತಾಗಿ ಈ ಸಂಗತಿಗಳನ್ನು ಹೇಳಿದಾಗ ನಮ್ಮನ್ನು ಸಹ ಖಂಡಿಸಿದಂತಾಯಿತು” ಎಂದು ಹೇಳಿದನು.

46 ಅದಕ್ಕೆ ಯೇಸು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ಜನರು ಅನುಸರಿಸಲಾಗದ ನಿಯಮಗಳನ್ನು ನೀವು ಮಾಡುತ್ತೀರಿ.[a] ಆ ನಿಯಮಗಳಿಗೆ ವಿಧೇಯರಾಗುವಂತೆ ಬೇರೆಯವರಿಗೆ ಬಲವಂತ ಮಾಡುತ್ತೀರಿ. ಆದರೆ ಆ ನಿಯಮಗಳಲ್ಲಿ ಒಂದನ್ನಾದರೂ ಪಾಲಿಸಲು ನೀವು ಪ್ರಯತ್ನಿಸುವುದಿಲ್ಲ. 47 ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳಿಗೆ ಗೋರಿಗಳನ್ನು[b] ಕಟ್ಟುತ್ತೀರಿ. ಆದರೆ ಆ ಪ್ರವಾದಿಗಳನ್ನು ಕೊಂದವರು ನಿಮ್ಮ ಪಿತೃಗಳೇ! 48 ಇದರಿಂದಾಗಿ, ನಿಮ್ಮ ಪಿತೃಗಳು ಮಾಡಿದ ಕೃತ್ಯಗಳನ್ನು ನೀವು ಒಪ್ಪಿಕೊಂಡಿದ್ದೀರೆಂಬುದನ್ನು ಎಲ್ಲಾ ಜನರಿಗೆ ತೋರಿಸುತ್ತೀರಿ. ಅವರು ಪ್ರವಾದಿಗಳನ್ನು ಕೊಂದರು. ನೀವು ಆ ಪ್ರವಾದಿಗಳಿಗಾಗಿ ಗೋರಿಗಳನ್ನು ಕಟ್ಟುತ್ತೀರಿ! 49 ಆದಕಾರಣ ದೇವರ ಜ್ಞಾನವು ಹೇಳಿದ್ದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು. ನನ್ನ ಕೆಲವು ಪ್ರವಾದಿಗಳು ಮತ್ತು ಅಪೊಸ್ತಲರು ಕೆಡುಕರಿಂದ ಹತರಾಗುವರು. ಬೇರೆ ಕೆಲವರು ಸಂಕಟಕ್ಕೆ ಗುರಿಯಾಗುವರು.’

50 “ಆದ್ದರಿಂದ ಲೋಕಾದಿಯಿಂದ ಹತರಾದ ಎಲ್ಲಾ ಪ್ರವಾದಿಗಳ ಸಾವಿಗೆ ಈ ಕಾಲದ ಜನರಾದ ನೀವು ದಂಡನೆ ಹೊಂದುವಿರಿ. 51 ಹೇಬೆಲನನ್ನು ಕೊಂದದ್ದಕ್ಕಾಗಿಯೂ ಜಕರೀಯನನ್ನು ಕೊಂದದ್ದಕ್ಕಾಗಿಯೂ ನಿಮಗೆ ದಂಡನೆಯಾಗುವುದು. ಜಕರೀಯನನ್ನು ಯಜ್ಞವೇದಿ ಮತ್ತು ದೇವಾಲಯದ ನಡುವೆ ಕೊಲ್ಲಲಾಯಿತು. ಹೌದು, ಅವರೆಲ್ಲರ ಕೊಲೆಗಳಿಗಾಗಿ ಈಗ ಜೀವಿಸುತ್ತಿರುವ ನಿಮಗೆ ದಂಡನೆ ಆಗುವುದು.

52 “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ದೇವರ ಕುರಿತಾಗಿ ಕಲಿಯಲು ಸಾಧನವಾಗಿರುವ ಬೀಗದ ಕೈಯನ್ನು ನೀವು ಬಚ್ಚಿಟ್ಟಿದ್ದೀರಿ. ನೀವೂ ಕಲಿಯುವುದಿಲ್ಲ, ಬೇರೆಯವರಿಗೂ ಕಲಿಯಲು ಬಿಡುವುದಿಲ್ಲ” ಎಂದು ಹೇಳಿದನು.

Read full chapter

Footnotes

  1. 11:46 ಧರ್ಮೋಪದೇಶಕರೇ … ಮಾಡುತ್ತೀರಿ ಅಕ್ಷರಶಃ, “ನೀವು ಜನರ ಮೇಲೆ ಹೊರಲಾಗದ ಹೊರೆಗಳನ್ನು ಹೊರಿಸುತ್ತೀರಿ.”
  2. 11:47 ಗೋರಿಗಳು ಸತ್ತುಹೋದ ಪ್ರಮುಖರ ಗೌರವಾರ್ಥವಾಗಿ ಕಟ್ಟಿದ ಚಿಕ್ಕ ಕಟ್ಟಡಗಳು.