Beginning
ಊಟಕ್ಕೆ ಆಹ್ವಾನಿಸಲ್ಪಟ್ಟಿದ್ದ ಜನರ ಕುರಿತಾದ ಸಾಮ್ಯ
(ಲೂಕ 14:15-24)
22 ಯೇಸು ಬೇರೆ ಕೆಲವು ವಿಷಯಗಳನ್ನು ಸಾಮ್ಯಗಳ ಮೂಲಕವಾಗಿ ಜನರಿಗೆ ತಿಳಿಸಿದನು: 2 “ಪರಲೋಕರಾಜ್ಯವು ತನ್ನ ಮಗನ ಮದುವೆಯನ್ನು ಸಿದ್ಧಪಡಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ. 3 ಆ ರಾಜನು ಕೆಲವು ಜನರನ್ನು ಔತಣಕ್ಕೆ ಆಹ್ವಾನಿಸಿದನು. ಅಡಿಗೆ ಸಿದ್ಧವಾದ ಬಳಿಕ ರಾಜನು ತನ್ನ ಸೇವಕರ ಮೂಲಕ ಆ ಜನರಿಗೆ ತಿಳಿಸಿದನು. ಆದರೆ ಅವರು ಔತಣಕ್ಕೆ ಬರಲಿಲ್ಲ.
4 “ಆಮೇಲೆ ರಾಜನು ಇನ್ನೂ ಕೆಲವು ಸೇವಕರನ್ನು ಕರೆದು, ‘ಈ ಜನರನ್ನು ನಾನು ಆಗಲೇ ಆಹ್ವಾನಿಸಿದ್ದೇನೆ. ಆದ್ದರಿಂದ ಈಗ ಔತಣವು ಸಿದ್ಧವಾಗಿದೆ. ಅಡಿಗೆಗಾಗಿ ಕೊಬ್ಬಿದ ಎತ್ತುಗಳನ್ನು ಮತ್ತು ಕರುಗಳನ್ನು ಕೊಯ್ಸಿದ್ದೇನೆ. ಎಲ್ಲವೂ ಸಿದ್ಧವಾಗಿದೆ. ಮದುವೆ ಔತಣಕ್ಕೆ ಬನ್ನಿ ಎಂದು ಅವರಿಗೆ ತಿಳಿಸಿ’ ಎಂದು ಹೇಳಿ ಕಳುಹಿಸಿದನು.
5 “ಅಂತೆಯೇ ಸೇವಕರು ಹೋಗಿ ಆ ಜನರಿಗೆ ತಿಳಿಸಿದರು. ಆದರೆ ಅವರು ಸೇವಕರ ಮಾತಿಗೆ ಕಿವಿಗೊಡಲಿಲ್ಲ. ಒಬ್ಬನು ತನ್ನ ಹೊಲದಲ್ಲಿ ಕೆಲಸ ಮಾಡಲು ಹೊರಟುಹೋದನು. ಬೇರೊಬ್ಬನು ತನ್ನ ವ್ಯಾಪಾರಕ್ಕಾಗಿ ಹೊರಟುಹೋದನು. 6 ಇನ್ನು ಕೆಲವರು ಆ ಸೇವಕರನ್ನು ಹಿಡಿದು, ಹೊಡೆದು ಕೊಂದುಹಾಕಿದರು. 7 ಆಗ ರಾಜನು ಬಹು ಕೋಪಗೊಂಡು ತನ್ನ ಸೈನ್ಯವನ್ನು ಕಳುಹಿಸಿ ಆ ಕೊಲೆಗಾರರನ್ನು ಕೊಲ್ಲಿಸಿದನು ಮತ್ತು ಅವರ ಪಟ್ಟಣವನ್ನು ಸುಟ್ಟುಹಾಕಿಸಿದನು.
8 “ಬಳಿಕ ರಾಜನು ತನ್ನ ಸೇವಕರಿಗೆ, ‘ಮದುವೆ ಊಟ ಸಿದ್ಧವಾಗಿದೆ. ನಾನು ಆಹ್ವಾನಿಸಿದ್ದ ಜನರು ಊಟಕ್ಕೆ ಬರುವಷ್ಟು ಒಳ್ಳೆಯವರಾಗಿರಲಿಲ್ಲ. 9 ಆದ್ದರಿಂದ ಬೀದಿಯ ಮೂಲೆಮೂಲೆಗಳಿಗೆ ಹೋಗಿ ನೀವು ಕಂಡ ಜನರನ್ನೆಲ್ಲ ಔತಣಕ್ಕೆ ಆಹ್ವಾನಿಸಿರಿ’ ಎಂದನು. 10 ಅಂತೆಯೇ ಸೇವಕರು ಬೀದಿಬೀದಿಗಳಿಗೆ ಹೋಗಿ ತಾವು ಕಂಡ ಜನರನ್ನೆಲ್ಲಾ ಒಳ್ಳೆಯವರು, ಕೆಟ್ಟವರು ಎನ್ನದೆ ಒಟ್ಟುಗೂಡಿಸಿ ಊಟ ಸಿದ್ಧವಾಗಿದ್ದ ಸ್ಥಳಕ್ಕೆ ಕರೆತಂದರು. ಆ ಸ್ಥಳವು ಜನರಿಂದ ತುಂಬಿಹೋಯಿತು.
11 “ಆಗ ರಾಜನು ಜನರನ್ನೆಲ್ಲ ನೋಡಲು ಒಳಗೆ ಬಂದನು. ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲದ ಒಬ್ಬ ಮನುಷ್ಯನನ್ನು ರಾಜನು ಕಂಡು, 12 ‘ಸ್ನೇಹಿತನೇ, ನೀನು ಒಳಗೆ ಹೇಗೆ ಬಂದೆ? ನೀನು ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲವಲ್ಲಾ’ ಅಂದನು. ಆದರೆ ಅವನು ಉತ್ತರ ನೀಡಲಿಲ್ಲ. 13 ಆಗ ರಾಜನು ಕೆಲವು ಸೇವಕರಿಗೆ, ‘ಇವನ ಕೈಕಾಲು ಕಟ್ಟಿ ಹೊರಗೆ ಕತ್ತಲೆಯೊಳಕ್ಕೆ ಎಸೆಯಿರಿ’ ಅಂದನು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವರು.
14 “ಹೌದು, ಆಹ್ವಾನಿಸಲ್ಪಟ್ಟವರು ಅನೇಕರಾದರೂ ಆರಿಸಲ್ಪಟ್ಟವರು ಕೆಲವರು ಮಾತ್ರ.”
ಯೇಸುವನ್ನು ವಂಚಿಸಲು ಯೆಹೂದ್ಯ ನಾಯಕರ ಪ್ರಯತ್ನ
(ಮಾರ್ಕ 12:13-17; ಲೂಕ 20:20-26)
15 ಆಗ ಫರಿಸಾಯರು, ಅಲ್ಲಿಂದ ಹೊರಟುಹೋಗಿ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಉಪಾಯಗಳನ್ನು ಮಾಡಿಕೊಂಡರು. 16 ಫರಿಸಾಯರು ಯೇಸುವನ್ನು ವಂಚಿಸುವುದಕ್ಕೆ ಕೆಲವರನ್ನು ಕಳುಹಿಸಿದರು. ಅವರಲ್ಲಿ ಕೆಲವರು ಫರಿಸಾಯರ ಹಿಂಬಾಲಕರಾಗಿದ್ದರು. ಇನ್ನು ಕೆಲವರು ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದವರಾಗಿದ್ದರು. ಈ ಜನರು, “ಬೋಧಕನೇ, ನೀನು ಯಥಾರ್ಥವಂತನೆಂದು ನಾವು ಬಲ್ಲೆವು. ನೀನು ದೇವರ ಮಾರ್ಗದ ಕುರಿತು ಸತ್ಯವನ್ನೇ ಬೋಧಿಸುವೆ ಎಂಬುದು ನಮಗೆ ಗೊತ್ತಿದೆ. ಬೇರೆಯವರು ನಿನ್ನ ವಿಷಯವಾಗಿ ಏನೇ ಯೋಚಿಸಿದರೂ ನೀನು ಹೆದರುವುದಿಲ್ಲ. ನೀನು ಮುಖದಾಕ್ಷಿಣ್ಯ ಮಾಡುವುದಿಲ್ಲ. 17 ಆದ್ದರಿಂದ ನಿನ್ನ ಅಭಿಪ್ರಾಯವನ್ನು ತಿಳಿಸು. ಸೀಸರನಿಗೆ ತೆರಿಗೆ ಕೊಡುವುದು ಸರಿಯೋ ಅಥವಾ ತಪ್ಪೋ?” ಎಂದು ಕೇಳಿದರು.
18 ಈ ಜನರ ಕುತಂತ್ರವು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “ನೀವು ಕಪಟಿಗಳು! ನನ್ನನ್ನು ತಪ್ಪಿನಲ್ಲಿ ಸಿಕ್ಕಿಸಲು ಏಕೆ ಪ್ರಯತ್ನಿಸುತ್ತೀರಿ? 19 ತೆರಿಗೆಗಾಗಿ ಕೊಡುವ ಒಂದು ನಾಣ್ಯವನ್ನು ನನಗೆ ತೋರಿಸಿರಿ” ಎಂದನು. ಜನರು ಒಂದು ಬೆಳ್ಳಿಯ ನಾಣ್ಯವನ್ನು ಆತನಿಗೆ ತೋರಿಸಿದರು. 20 ಆಗ ಆತನು, “ನಾಣ್ಯದ ಮೇಲೆ ಯಾರ ಮುಖಚಿತ್ರವಿದೆ ಮತ್ತು ಯಾರ ಹೆಸರಿದೆ?” ಎಂದು ಕೇಳಿದನು.
21 ಜನರು, “ಅದು ಸೀಸರನ ಮುಖಚಿತ್ರ ಮತ್ತು ಹೆಸರು” ಎಂದು ಉತ್ತರಕೊಟ್ಟರು.
ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಅಂದನು.
22 ಯೇಸು ಹೇಳಿದ್ದನ್ನು ಕೇಳಿದ ಆ ಜನರು ಆಶ್ಚರ್ಯಚಕಿತರಾಗಿ ಅಲ್ಲಿಂದ ಹೊರಟುಹೋದರು.
ಯೇಸುವನ್ನು ವಂಚಿಸಲು ಕೆಲವು ಸದ್ದುಕಾಯರ ಪ್ರಯತ್ನ
(ಮಾರ್ಕ 12:18-27; ಲೂಕ 20:27-40)
23 ಅದೇ ದಿನದಲ್ಲಿ ಕೆಲವು ಸದ್ದುಕಾಯರು ಯೇಸುವಿನ ಬಳಿಗೆ ಬಂದು, (ಯಾರಿಗೂ ಪುನರುತ್ಥಾನವಿಲ್ಲ ಎಂಬುದು ಸದ್ದುಕಾಯರ ನಂಬಿಕೆ.) 24 “ಬೋಧಕನೇ, ವಿವಾಹಿತನೊಬ್ಬನು ಮಕ್ಕಳನ್ನು ಪಡೆಯದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗಾಗಿ ಸಂತಾನ ಪಡೆಯಬೇಕೆಂದು[a] ಮೋಶೆ ಹೇಳಿದ್ದಾನೆ. 25 ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸತ್ತನು. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾದನು. 26 ಬಳಿಕ ಎರಡನೆಯ ಸಹೋದರನೂ ಸತ್ತನು. ಹೀಗೆಯೇ ಮೂರನೆಯ ಸಹೋದರನಿಗೂ ಮತ್ತು ಉಳಿದೆಲ್ಲ ಸಹೋದರರಿಗೂ ಆಯಿತು. 27 ಕಡೆಯಲ್ಲಿ ಆ ಹೆಂಗಸೂ ಸತ್ತಳು. 28 ಆದರೆ ಏಳು ಮಂದಿಯೂ ಅವಳನ್ನು ಮದುವೆ ಆಗಿದ್ದರು. ಹೀಗಿರಲಾಗಿ ಅವರು ಮರಣದಿಂದ ಮೇಲೇಳುವಾಗ ಅವಳು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.
29 ಯೇಸು, “ನೀವು ತಪ್ಪಾಗಿ ತಿಳಿದುಕೊಂಡಿರಲು ಕಾರಣವೇನೆಂದರೆ, ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ತಿಳಿದಿಲ್ಲ ಮತ್ತು ದೇವರ ಶಕ್ತಿಯ ಬಗ್ಗೆಯೂ ನಿಮಗೆ ಗೊತ್ತಿಲ್ಲ. 30 ಸ್ತ್ರೀಯರು ಮತ್ತು ಪುರುಷರು ಪುನರುತ್ಥಾನ ಹೊಂದಿದ ಮೇಲೆ ಮದುವೆ ಮಾಡಿಕೊಳ್ಳುವುದಿಲ್ಲ. ಅವರೆಲ್ಲರೂ ಪರಲೋಕದ ದೇವದೂತರಂತೆ ಇರುತ್ತಾರೆ. 31 ಸತ್ತವರ ಪುನರುತ್ಥಾನದ ಕುರಿತು ದೇವರು, 32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(A) ಎಂದು ಹೇಳಿರುವುದನ್ನು ನೀವು ಓದಿಲ್ಲವೇ? ಹೀಗಿರುವಲ್ಲಿ, ದೇವರು ಜೀವಿತರಿಗೆ ಮಾತ್ರ ದೇವರೇ ಹೊರತು ಸತ್ತವರಿಗಲ್ಲಾ” ಅಂದನು.
33 ಜನರೆಲ್ಲರೂ ಇದನ್ನು ಕೇಳಿ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟರು.
ಅತ್ಯಂತ ಪ್ರಮುಖ ಆಜ್ಞೆ ಯಾವುದು?
(ಮಾರ್ಕ 12:28-34; ಲೂಕ 10:25-28)
34 ಸದ್ದುಕಾಯರು ಪ್ರತಿವಾದ ಮಾಡಲಾಗದ ರೀತಿಯಲ್ಲಿ ಯೇಸು ಉತ್ತರಕೊಟ್ಟನೆಂಬುದು ಫರಿಸಾಯರಿಗೆ ತಿಳಿದು ಅವರು ಒಟ್ಟಾಗಿ ಯೇಸುವಿನ ಬಳಿಗೆ ಬಂದರು. 35 ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಫರಿಸಾಯನೊಬ್ಬನು ಯೇಸುವನ್ನು ಪರೀಕ್ಷಿಸಲು, 36 “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಆಜ್ಞೆ ಯಾವುದು?” ಎಂದು ಕೇಳಿದನು.
37 ಯೇಸು, “‘ನಿನ್ನ ದೇವರಾಗಿರುವ ಪ್ರಭುವನ್ನು ಪ್ರೀತಿಸಬೇಕು. ನೀನು ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’(B) 38 ಇದೇ ಮೊದಲನೆಯ ಮತ್ತು ಅತ್ಯಂತ ಪ್ರಮುಖವಾದ ಆಜ್ಞೆ. 39 ಎರಡನೆಯ ಆಜ್ಞೆಯು ಮೊದಲನೆಯ ಆಜ್ಞೆಯಷ್ಟೇ ಪ್ರಮುಖವಾಗಿದೆ. ‘ನೀನು ನಿನ್ನನ್ನು ಪ್ರೀತಿಸುವಂತೆಯೇ ನೆರೆಯವರನ್ನು ಪ್ರೀತಿಸಬೇಕು’(C) ಎಂಬುದೇ ಆ ಆಜ್ಞೆ. 40 ಇಡೀ ಧರ್ಮಶಾಸ್ತ್ರವು ಮತ್ತು ಪ್ರವಾದಿಗಳ ಎಲ್ಲಾ ಗ್ರಂಥಗಳು ಈ ಎರಡು ಆಜ್ಞೆಗಳ ಅರ್ಥವನ್ನೇ ಒಳಗೊಂಡಿವೆ” ಎಂದು ಉತ್ತರಕೊಟ್ಟನು.
ಯೇಸು ಫರಿಸಾಯರಿಗೆ ಕೇಳಿದ ಪ್ರಶ್ನೆ
(ಮಾರ್ಕ 12:35-37; ಲೂಕ 20:41-44)
41 ಫರಿಸಾಯರು ಒಟ್ಟಿಗೆ ಬಂದಿದ್ದಾಗ ಯೇಸು ಅವರಿಗೆ, 42 “ಕ್ರಿಸ್ತನ ವಿಷಯವಾಗಿ ನಿಮ್ಮ ಆಲೋಚನೆಯೇನು? ಆತನು ಯಾರ ಮಗನು?” ಎಂದು ಅವರನ್ನು ಕೇಳಿದನು.
ಫರಿಸಾಯರು, “ಕ್ರಿಸ್ತನು ದಾವೀದನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟರು.
43 ಆಗ ಯೇಸುವು ಫರಿಸಾಯರಿಗೆ, “ಹಾಗಾದರೆ ದಾವೀದನು ಆತನನ್ನು ‘ಪ್ರಭು’ ಎಂದು ಏಕೆ ಕರೆದನು? ದಾವೀದನು ಪರಿಶುದ್ಧಾತ್ಮನ ಶಕ್ತಿಯಿಂದ ಮಾತನಾಡಿದ್ದನು. ದಾವೀದನು ಹೇಳಿದ್ದೇನೆಂದರೆ:
44 ‘ಪ್ರಭು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ),
ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’(D)
ಎಂದು ಹೇಳಿದ್ದಾನೆ. 45 ದಾವೀದನು ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿದ್ದಾನೆ. ಹೀಗಿರಲು ಆತನು ದಾವೀದನಿಗೆ ಮಗನಾಗಲು ಹೇಗೆ ಸಾಧ್ಯ?” ಅಂದನು.
46 ಯೇಸುವಿನ ಪ್ರಶ್ನೆಗೆ ಉತ್ತರಕೊಡಲು ಫರಿಸಾಯರಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಅಂದಿನಿಂದ ಯೇಸುವನ್ನು ವಂಚಿಸುವುದಕ್ಕಾಗಿ ಪ್ರಶ್ನೆ ಕೇಳಲು ಯಾರೂ ಧೈರ್ಯಪಡಲಿಲ್ಲ.
ಯೇಸು ಧಾರ್ಮಿಕ ನಾಯಕರನ್ನು ಖಂಡಿಸಿದನು
(ಮಾರ್ಕ 12:38-40; ಲೂಕ 11:37-52; 20:45-47)
23 ಬಳಿಕ ಯೇಸು ನೆರೆದಿದ್ದ ಜನರೊಂದಿಗೂ ತನ್ನ ಶಿಷ್ಯರೊಂದಿಗೂ ಮಾತಾಡಿ ಹೇಳಿದ್ದೇನೆಂದರೆ: 2 “ಮೋಶೆಯ ಧರ್ಮಶಾಸ್ತ್ರ ಹೇಳುವುದನ್ನು ನಿಮಗೆ ತಿಳಿಸಲು ಧರ್ಮೋಪದೇಶಕರಿಗೂ ಫರಿಸಾಯರಿಗೂ ಅಧಿಕಾರವಿದೆ. 3 ಆದ್ದರಿಂದ ನೀವು ಅವರಿಗೆ ವಿಧೇಯರಾಗಿರಬೇಕು ಮತ್ತು ಅವರು ಹೇಳಿದ್ದನ್ನೆಲ್ಲ ಕೈಕೊಂಡು ನಡೆಯಬೇಕು. ಆದರೆ ಅವರ ಜೀವಿತಗಳು ಅನುಸರಿಸತಕ್ಕ ಒಳ್ಳೆಯ ಮಾದರಿ ಜೀವಿತಗಳಲ್ಲ. ಅವರು ನಿಮಗೆ ತಿಳಿಸುವಂಥ ಸಂಗತಿಗಳನ್ನು ತಾವೇ ಅನುಸರಿಸುವುದಿಲ್ಲ. 4 ಅವರು ಬೇರೆಯವರಿಗೆ ಕಷ್ಟಕರವಾದ ನಿಯಮಗಳನ್ನು ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ಒತ್ತಾಯ ಮಾಡುತ್ತಾರೆ. ತಾವಾದರೋ ಆ ನಿಯಮಗಳಲ್ಲಿ ಯಾವದನ್ನಾದರೂ ಅನುಸರಿಸಲು ಪ್ರಯತ್ನಿಸುವುದಿಲ್ಲ.
5 “ತಮ್ಮನ್ನು ಬೇರೆ ಜನರು ನೋಡಲಿ ಎಂಬ ಒಂದೇ ಉದ್ದೇಶದಿಂದ ಅವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಪವಿತ್ರ ಗ್ರಂಥಗಳು ತುಂಬಿರುವ ವಿಶೇಷವಾದ ಚರ್ಮದ ಚೀಲಗಳನ್ನು ಅವರು ಕಟ್ಟಿಕೊಂಡಿರುತ್ತಾರೆ. ಅವರು ಈ ಚೀಲಗಳನ್ನು ಇನ್ನೂ ಹೆಚ್ಚುಹೆಚ್ಚು ದೊಡ್ಡದನ್ನಾಗಿ ಮಾಡುತ್ತಾರೆ. ಜನರು ನೋಡಲಿ ಎಂದು ಅವರು ತಮ್ಮ ವಿಶೇಷ ಪ್ರಾರ್ಥನೆಯ ಉಡುಪುಗಳನ್ನು ಮತ್ತಷ್ಟು ಉದ್ದ ಮಾಡುತ್ತಾರೆ. 6 ಆ ಫರಿಸಾಯರು ಮತ್ತು ಧರ್ಮೋಪದೇಶಕರು ಔತಣಗಳಲ್ಲಿ ಹಾಗೂ ಸಭಾಮಂದಿರಗಳಲ್ಲಿ ಅತಿ ಪ್ರಾಮುಖ್ಯವಾದ ಸ್ಥಾನಗಳನ್ನು ಅಪೇಕ್ಷಿಸುತ್ತಾರೆ. 7 ಮಾರುಕಟ್ಟೆಗಳಲ್ಲಿ ಜನರು ತಮಗೆ ಮರ್ಯಾದೆ ತೋರಿಸಬೇಕೆಂದು ಆಶಿಸುತ್ತಾರೆ; ಜನರಿಂದ ಉಪದೇಶಕರೆನಿಸಿಕೊಳ್ಳಲು ಇಷ್ಟಪಡುತ್ತಾರೆ.
8 “ಆದರೆ ನೀವು ಉಪದೇಶಕರೆನಿಸಿಕೊಳ್ಳಬೇಡಿ. ನೀವೆಲ್ಲರೂ ಸಹೋದರಸಹೋದರಿಯರು. ನಿಮಗೆ ಒಬ್ಬನೇ ಉಪದೇಶಕನು. 9 ಈ ಲೋಕದಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿ. ನಿಮಗೆ ಒಬ್ಬನೇ ತಂದೆ. ಆತನು ಪರಲೋಕದಲ್ಲಿದ್ದಾನೆ. 10 ‘ಗುರು’ವೆಂದೂ ಕರೆಸಿಕೊಳ್ಳಬೇಡಿ. ನಿಮಗೆ ಕ್ರಿಸ್ತನೊಬ್ಬನೇ ಗುರು. 11 ಸೇವಕನಂತೆ ನಿಮಗೆ ಸೇವೆ ಮಾಡುವವನೇ ನಿಮ್ಮಲ್ಲಿ ಅತ್ಯಂತ ದೊಡ್ಡವನಾಗಿದ್ದಾನೆ. 12 ತಾನು ಬೇರೆಯವರಿಗಿಂತ ಉತ್ತಮನೆಂದು ತನ್ನನ್ನು ಭಾವಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಉನ್ನತಿಗೇರಿಸಲ್ಪಡುವನು.
13 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವ ದಾರಿಯನ್ನು ನೀವು ಮುಚ್ಚಿಬಿಡುತ್ತೀರಿ. ನೀವೂ ಪ್ರವೇಶಿಸುವುದಿಲ್ಲ ಮತ್ತು ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಜನರಿಗೂ ಬಿಡುವುದಿಲ್ಲ. 14 [b]
15 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮ ಮಾರ್ಗಗಳನ್ನು ಹಿಂಬಾಲಿಸುವ ಒಬ್ಬನನ್ನು ಕಂಡುಕೊಳ್ಳಲು ನೀವು ಸಮುದ್ರಗಳನ್ನು ದಾಟಿ ಬೇರೆಬೇರೆ ದೇಶಗಳಲ್ಲಿ ಪ್ರಯಾಣ ಮಾಡುತ್ತೀರಿ. ಅವನನ್ನು ಕಂಡುಕೊಂಡ ಮೇಲೆ ನಿಮಗಿಂತಲೂ ಹೆಚ್ಚು ಕೆಟ್ಟವನನ್ನಾಗಿ ಮಾಡುತ್ತೀರಿ. ನೀವು ನರಕಪಾತ್ರರಾಗುವಷ್ಟು ಕೆಟ್ಟವರಾಗಿದ್ದೀರಿ.
16 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು. ಒಬ್ಬನು ದೇವಾಲಯದ ಹೆಸರಿನ ಮೇಲೆ ವಾಗ್ದಾನ ಮಾಡಿದರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ದೇವಾಲಯದಲ್ಲಿರುವ ಚಿನ್ನದ ಮೇಲೆ ವಾಗ್ದಾನ ಮಾಡಿದರೆ, ಅವನು ಅದನ್ನು ಈಡೇರಿಸಬೇಕು ಎಂದು ಹೇಳುತ್ತೀರಿ! 17 ನೀವು ಕುರುಡರಾದ ಮೂರ್ಖರು! ಯಾವುದು ಹೆಚ್ಚಿನದು? ಚಿನ್ನವೋ ಅಥವಾ ದೇವಾಲಯವೋ? ಆ ಚಿನ್ನವು ಪರಿಶುದ್ಧಗೊಂಡದ್ದು ದೇವಾಲಯದಿಂದಲೇ. ಆದ್ದರಿಂದ ದೇವಾಲಯವೇ ಹೆಚ್ಚಿನದು.
18 “ಒಬ್ಬನು ಯಜ್ಞವೇದಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ಯಜ್ಞವೇದಿಕೆಯ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದರೆ ಅವನು ಅದನ್ನು ಈಡೇರಿಸಲೇಬೇಕು ಎಂದು ಹೇಳುತ್ತೀರಿ. 19 ನೀವು ಕುರುಡರು. ನಿಮಗೇನೂ ಅರ್ಥವಾಗುವುದಿಲ್ಲ. ಯಾವುದು ಹೆಚ್ಚಿನದು? ಕಾಣಿಕೆಯೋ ಅಥವಾ ಯಜ್ಞವೇದಿಕೆಯೋ? ಕಾಣಿಕೆ ಪರಿಶುದ್ಧಗೊಂಡದ್ದು ಯಜ್ಞವೇದಿಕೆಯಿಂದಲೇ. ಆದ್ದರಿಂದ ಯಜ್ಞವೇದಿಕೆಯೇ ಹೆಚ್ಚಿನದು. 20 ಯಜ್ಞವೇದಿಕೆಯ ಮೇಲೆ ವಾಗ್ದಾನ ಮಾಡುವವನು ಯಜ್ಞವೇದಿಕೆಯ ಮತ್ತು ಅದರ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದಂತಾಯಿತು. 21 ದೇವಾಲಯದ ಮೇಲೆ ವಾಗ್ದಾನ ಮಾಡುವವನು ನಿಜವಾಗಿಯೂ ದೇವಾಲಯದ ಮತ್ತು ಅದರೊಳಗೆ ವಾಸವಾಗಿರುವಾತನ ಮೇಲೆ ವಾಗ್ದಾನ ಮಾಡಿದಂತಾಯಿತು. 22 ಪರಲೋಕದ ಮೇಲೆ ವಾಗ್ದಾನ ಮಾಡುವವನು ದೇವರ ಸಿಂಹಾಸನದ ಮೇಲೆಯೂ ಆ ಸಿಂಹಾಸನದ ಮೇಲೆ ಕುಳಿತಿರುವಾತನ ಮೇಲೆಯೂ ವಾಗ್ದಾನ ಮಾಡಿದಂತಾಯಿತು.
23 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮಲ್ಲಿರುವ ಪ್ರತಿಯೊಂದರಲ್ಲೂ ನಿಮ್ಮ ಪುದೀನ, ಸಬ್ಬಸ್ಸಿಗೆ ಸೊಪ್ಪು, ಜೀರಿಗೆ ಗಿಡಗಳಲ್ಲಿಯೂ ಸಹ ಹತ್ತರಲ್ಲೊಂದು ಪಾಲನ್ನು ದೇವರಿಗೆ ಕೊಡುತ್ತೀರಿ. ಆದರೆ ಧರ್ಮಶಾಸ್ತ್ರದ ಬೋಧನೆಗಳಲ್ಲಿ ನಿಜವಾಗಿಯೂ ಪ್ರಾಮುಖ್ಯವಾದ ಆಜ್ಞೆಗಳನ್ನು ಅಂದರೆ ನ್ಯಾಯವನ್ನೂ ಕರುಣೆಯನ್ನೂ ಯಥಾರ್ಥತೆಯನ್ನೂ ನೀವು ತೊರೆದುಬಿಟ್ಟಿದ್ದೀರಿ. ಈ ಆಜ್ಞೆಗಳಿಗೆ ನೀವು ಮೊದಲು ವಿಧೇಯರಾಗಿ, ಈಗ ಮಾಡುತ್ತಿರುವಂಥ ಕಾರ್ಯಗಳನ್ನು ಮಾಡಬೇಕಿತ್ತು. 24 ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು! ಒಬ್ಬನು ತಾನು ಕುಡಿಯುವ ಪಾನೀಯದೊಳಗಿಂದ ಸಣ್ಣ ಸೊಳ್ಳೆಯನ್ನು ತೆಗೆದುಹಾಕಿ ಆಮೇಲೆ ಒಂಟೆಯನ್ನು ನುಂಗುವವನಂತೆ ನೀವಿದ್ದೀರಿ.
25 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ನಿಮ್ಮ ಪಾತ್ರೆ ಬಟ್ಟಲುಗಳ ಹೊರಭಾಗವನ್ನು ತೊಳೆದು ಸ್ವಚ್ಛಮಾಡುತ್ತೀರಿ. ಆದರೆ ಅವುಗಳ ಒಳಭಾಗವು ಮೋಸದಿಂದಲೂ ನಿಮಗೆ ತೃಪ್ತಿ ನೀಡುವ ಪದಾರ್ಥಗಳಿಂದಲೂ ತುಂಬಿವೆ. 26 ಫರಿಸಾಯರೇ, ನೀವು ಕುರುಡರು! ಮೊದಲು ಬಟ್ಟಲಿನ ಒಳಭಾಗವನ್ನು ಚೆನ್ನಾಗಿ ಶುಚಿಮಾಡಿರಿ. ಆಗ ಬಟ್ಟಲಿನ ಹೊರಭಾಗವು ನಿಜವಾಗಿಯೂ ಶುಚಿಯಾಗಿರುವುದು.
27 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಸುಣ್ಣ ಹಚ್ಚಿದ ಸಮಾಧಿಗಳಂತಿದ್ದೀರಿ. ಆ ಸಮಾಧಿಗಳ ಹೊರಭಾಗ ಚಂದವಾಗಿ ಕಾಣುತ್ತದೆ. ಆದರೆ ಒಳಭಾಗ ಸತ್ತವರ ಎಲುಬುಗಳಿಂದಲೂ ಎಲ್ಲಾ ಬಗೆಯ ಹೊಲಸುಗಳಿಂದಲೂ ತುಂಬಿರುತ್ತದೆ. 28 ನೀವು ಅದೇ ರೀತಿ ಇದ್ದೀರಿ. ನಿಮ್ಮನ್ನು ನೋಡಿದ ಜನರು ನಿಮ್ಮನ್ನು ಒಳ್ಳೆಯವರೆಂದು ಭಾವಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಅಂತರಂಗವು ಕಪಟದಿಂದಲೂ ದುಷ್ಟತನದಿಂದಲೂ ತುಂಬಿಕೊಂಡಿದೆ.
29 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟುತ್ತೀರಿ. ಒಳ್ಳೆಯವರಾಗಿ ಜೀವಿಸದವರ ಗೋರಿಗಳಿಗೆ ಹೋಗಿ ಗೌರವ ತೋರಿಸುತ್ತೀರಿ. 30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ. 31 ಆ ಪ್ರವಾದಿಗಳನ್ನು ಕೊಂದವರ ಮಕ್ಕಳು (ಸಂತತಿಯವರು) ನೀವೇ ಎಂಬುದಕ್ಕೆ ಇದೇ ಆಧಾರವಾಗಿದೆ. 32 ನಿಮ್ಮ ಪಿತೃಗಳು ಪ್ರಾರಂಭಿಸಿದ ಆ ಪಾಪವನ್ನು ನೀವು ಪೂರ್ತಿಮಾಡುವಿರಿ!
33 “ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ! 34 ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಉಪದೇಶಕರನ್ನೂ ಕಳುಹಿಸುತ್ತೇನೆ. ನೀವು ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಇನ್ನು ಕೆಲವರನ್ನು ಶಿಲುಬೆಗೇರಿಸುವಿರಿ; ಇತರ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಹೊಡೆಯುವಿರಿ; ನೀವು ಅವರನ್ನು ಊರಿಂದ ಊರಿಗೆ ಅಟ್ಟಿಬಿಡುವಿರಿ.
35 “ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು. 36 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದಲ್ಲಿ ಜೀವಿಸುತ್ತಿರುವ ನಿಮ್ಮ ಮೇಲೆ ಈ ಅಪರಾಧಗಳೆಲ್ಲಾ ಬರುತ್ತವೆ.
ಜೆರುಸಲೇಮಿನ ಜನರಿಗೆ ಯೇಸು ನೀಡಿದ ಎಚ್ಚರಿಕೆ
(ಲೂಕ 13:34-35)
37 “ಜೆರುಸಲೇಮೇ, ಜೆರುಸಲೇಮೇ! ಪ್ರವಾದಿಗಳನ್ನು ಕೊಲ್ಲುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ಕಲ್ಲುಗಳಿಂದ ಕೊಲ್ಲುವವಳೇ, ಅನೇಕ ಸಲ ನಿನ್ನ ಜನರಿಗೆ ನಾನು ಸಹಾಯ ಮಾಡಬೇಕೆಂದಿದ್ದೆನು. ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವ ಹಾಗೆ ನಿನ್ನ ಜನರನ್ನು ಸೇರಿಸಿಕೊಳ್ಳಲು ನನಗೆ ಮನಸ್ಸಿತ್ತು. ಆದರೆ ನೀನು ಒಪ್ಪಲಿಲ್ಲ. 38 ಈಗ ನಿನ್ನ ಮನೆಯು ಸಂರ್ಪೂಣವಾಗಿ ಬರಿದಾಗಿಬಿಟ್ಟಿದೆ. 39 ನಾನು ನಿನಗೆ ಹೇಳುವುದೇನೆಂದರೆ, ‘ಪ್ರಭುವಿನ ಹೆಸರಿನಲ್ಲಿ ಬರುವಾತನನ್ನು ದೇವರು ಆಶೀರ್ವದಿಸಲಿ’(E) ಎಂದು ನೀನು ಹೇಳುವ ತನಕ ನನ್ನನ್ನು ನೋಡುವುದೇ ಇಲ್ಲ.”
Kannada Holy Bible: Easy-to-Read Version. All rights reserved. © 1997 Bible League International