Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 5-6

ಪರ್ವತ ಪ್ರಸಂಗ

(ಲೂಕ 6:20-23)

ಯೇಸು ಈ ಜನಸಮೂಹವನ್ನು ನೋಡಿ, ಬೆಟ್ಟದ ಮೇಲೆ ಹೋಗಿ ಕುಳಿತುಕೊಂಡನು. ಆತನ ಶಿಷ್ಯರು ಸಹ ಆತನ ಬಳಿಗೆ ಬಂದರು. ಆಗ ಯೇಸು ಜನರಿಗೆ ಈ ಉಪದೇಶ ಮಾಡಿದನು:

“ಆತ್ಮಿಕತೆಯಲ್ಲಿ ಬಡವರಾಗಿರುವವರು ಧನ್ಯರು.
    ಪರಲೋಕರಾಜ್ಯ ಅವರದು.
ಈಗ ದು:ಖದಿಂದಿರುವವರು ಧನ್ಯರು.
    ದೇವರು ಅವರನ್ನು ಸಂತೈಸುವನು.
ದೀನರು ಧನ್ಯರು.
    ದೇವರು ವಾಗ್ದಾನ ಮಾಡಿದ ಭೂಮಿಯನ್ನು ಅವರು ಹೊಂದಿಕೊಳ್ಳುವರು.
ನೀತಿಗಾಗಿ ತವಕಪಡುವವರು ಧನ್ಯರು.
    ದೇವರು ಅವರನ್ನು ಸಂತೃಪ್ತಿಪಡಿಸುವನು.
ಕರುಣೆ ತೋರುವವರು ಧನ್ಯರು.
    ಅವರು ಕರುಣೆ ಹೊಂದುವರು.
ಪರಿಶುದ್ಧ ಹೃದಯವುಳ್ಳವರು ಧನ್ಯರು.
    ಅವರು ದೇವರನ್ನು ನೋಡುವರು.
ಸಮಾಧಾನಪಡಿಸುವವರು ಧನ್ಯರು.
    ಅವರು ‘ದೇವರ ಮಕ್ಕಳು’ ಎನಿಸಿಕೊಳ್ಳುವರು.
10 ನೀತಿಯ ನಿಮಿತ್ತ ಹಿಂಸೆಪಡುವವರು ಧನ್ಯರು.
    ಪರಲೋಕರಾಜ್ಯ ಅವರದು.

11 “ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮ್ಮನ್ನು ಅಪಹಾಸ್ಯ ಮಾಡಿದರೆ, ಹಿಂಸೆಪಡಿಸಿದರೆ ಮತ್ತು ನಿಮ್ಮ ಮೇಲೆ ಕೆಟ್ಟಕೆಟ್ಟ ವಿಷಯಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರಾಗಿದ್ದೀರಿ. 12 ಸಂತೋಷಪಡಿರಿ, ಆನಂದಿಸಿರಿ. ಪರಲೋಕದಲ್ಲಿ ನಿಮಗಾಗಿ ಕಾದಿರುವ ಹೆಚ್ಚಿನ ಪ್ರತಿಫಲವನ್ನು ನೀವು ಹೊಂದುವಿರಿ. ನಿಮಗಿಂತ ಮುಂಚೆ ಜೀವಿಸಿದ್ದ ಪ್ರವಾದಿಗಳಿಗೂ ಜನರು ಹೀಗೆಯೇ ಮಾಡಿದರು.

ನೀವು ಉಪ್ಪಿನಂತಿದ್ದೀರಿ, ಬೆಳಕಿನಂತಿದ್ದೀರಿ

(ಮಾರ್ಕ 9:50; ಲೂಕ 14:34-35)

13 “ನೀವು ಭೂಮಿಗೆ ಉಪ್ಪಾಗಿದ್ದೀರಿ. ಆದರೆ ಉಪ್ಪೇ ತನ್ನ ರುಚಿಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಉಪ್ಪನ್ನಾಗಿ ಮಾಡಲು ಸಾಧ್ಯವಿಲ್ಲ; ಅಂಥ ಉಪ್ಪಿನಿಂದ ಪ್ರಯೋಜನವೇನೂ ಇಲ್ಲ. ಜನರು ಅದನ್ನು ಹೊರಗೆ ಬಿಸಾಡಿ ಅದರ ಮೇಲೆ ನಡೆದಾಡುವರು.

14 “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿದ ಪಟ್ಟಣ ಮರೆಯಾಗಿರಲಾರದು. 15 ಜನರು ದೀಪವನ್ನು ಪಾತ್ರೆಯ ಕೆಳಗೆ ಮುಚ್ಚಿಡುವುದಿಲ್ಲ. ಜನರು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಮನೆಯಲ್ಲಿರುವವರಿಗೆಲ್ಲಾ ಬೆಳಕು ಪ್ರಕಾಶಿಸುವುದು. 16 ಅದೇ ರೀತಿಯಲ್ಲಿ ನೀವು ಜನರಿಗೆ ಬೆಳಕಾಗಿರಬೇಕು. ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.

ಪವಿತ್ರ ಗ್ರಂಥಕ್ಕೆ ಅಂತ್ಯವೇ ಇಲ್ಲ

17 “ನಾನು ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ಉಪದೇಶಗಳನ್ನಾಗಲಿ ತೆಗೆದುಹಾಕುವುದಕ್ಕೆ ಬಂದೆನೆಂದು ನೆನೆಸಬೇಡಿರಿ. ನಾನು ಅವುಗಳನ್ನು ನಾಶಮಾಡುವುದಕ್ಕಾಗಿ ಬರದೆ ಅವುಗಳನ್ನು ನೆರವೇರಿಸುವುದಕ್ಕಾಗಿ ಬಂದೆನು. 18 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಆಕಾಶ ಮತ್ತು ಭೂಮಿ ಅಳಿದುಹೋಗುವವರೆಗೂ ಧರ್ಮಶಾಸ್ತ್ರದಿಂದ ಏನೂ ಅಳಿದುಹೋಗುವುದಿಲ್ಲ. ಎಲ್ಲಾ ನೆರವೇರುವ ತನಕ ಧರ್ಮಶಾಸ್ತ್ರದ ಒಂದು ಅಕ್ಷರವಾಗಲಿ ಅಥವಾ ಅದರ ಒಂದು ಚುಕ್ಕೆಯಾಗಲಿ ಅಳಿದುಹೋಗುವುದಿಲ್ಲ.

19 “ಮನುಷ್ಯನು ಪ್ರತಿ ಆಜ್ಞೆಗೂ, ಅಂದರೆ ಸಣ್ಣಸಣ್ಣ ಆಜ್ಞೆಗೂ ವಿಧೇಯನಾಗಿರಬೇಕು. ಒಬ್ಬನು ಯಾವ ಆಜ್ಞೆಗಾದರೂ ಅವಿಧೇಯನಾಗಿ ಜೀವಿಸುತ್ತಾ ಆ ಆಜ್ಞೆಗೆ ಬೇರೆಯವರೂ ಅವಿಧೇಯರಾಗಿರಬೇಕೆಂದು ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅತ್ಯಲ್ಪನಾಗಿರುವನು. ಆದರೆ ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ಜೀವಿಸುತ್ತಾ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ಬೇರೆಯವರಿಗೂ ಬೋಧಿಸುವವನು ಪರಲೋಕರಾಜ್ಯದಲ್ಲಿ ಪ್ರಮುಖನಾಗಿರುವನು. 20 ಧರ್ಮೋಪದೇಶಕರಿಗಿಂತಲೂ ಫರಿಸಾಯರಿಗಿಂತಲೂ ನೀವು ಉತ್ತಮವಾದದ್ದನ್ನು ಮಾಡಬೇಕು. ಇಲ್ಲವಾದರೆ ನೀವು ಪರಲೋಕರಾಜ್ಯವನ್ನು ಪ್ರವೇಶಿಸಲಾರಿರಿ.

ಕೋಪವನ್ನು ಕುರಿತು ಯೇಸುವಿನ ಉಪದೇಶ

21 “‘ಯಾರನ್ನೂ ಕೊಲೆಮಾಡಬಾರದು.(A) ಕೊಲೆ ಮಾಡುವವನು ನ್ಯಾಯತೀರ್ಪಿಗೆ ಒಳಗಾಗುವನು’ ಎಂದು ಬಹುಕಾಲದ ಹಿಂದೆ ನಮ್ಮ ಜನರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 22 ಆದರೆ ನಾನು ನಿಮಗೆ ಹೇಳುವುದೇನೆಂದರೆ ಯಾರ ಮೇಲೂ ಕೋಪಗೊಳ್ಳಬೇಡಿ. ಪ್ರತಿಯೊಬ್ಬನೂ ನಿಮ್ಮ ಸಹೋದರ. ನೀವು ಬೇರೆಯವರ ಮೇಲೆ ಕೋಪಗೊಂಡರೆ ನ್ಯಾಯತೀರ್ಪಿಗೆ ಗುರಿಯಾಗುವಿರಿ. ನೀವು ಯಾರಿಗಾದರೂ ಕೆಟ್ಟ ಮಾತುಗಳನ್ನಾಡಿದರೆ, ಯೆಹೂದ್ಯರ ನ್ಯಾಯಸಭೆಯ ವಿಚಾರಣೆಗೆ ಗುರಿಯಾಗುವಿರಿ. ನೀವು ಯಾರನ್ನಾದರೂ ‘ಮೂರ್ಖ’ ಎಂದು ಕರೆದರೆ, ಅಗ್ನಿನರಕಕ್ಕೆ ಸೇರುವ ಅಪಾಯದಲ್ಲಿದ್ದೀರಿ.

23 “ಆದ್ದರಿಂದ ನೀವು ನಿಮ್ಮ ಕಾಣಿಕೆಯನ್ನು ಯಜ್ಞವೇದಿಕೆಯ ಮುಂದೆ ದೇವರಿಗೆ ಅರ್ಪಿಸುವಾಗ, ನಿಮ್ಮ ಸಹೋದರನಿಗೆ ನಿಮ್ಮ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿಮ್ಮ ನೆನಪಿಗೆ ಬಂದರೆ, 24 ಆಗ ನಿಮ್ಮ ಕಾಣಿಕೆಯನ್ನು ಯಜ್ಞವೇದಿಕೆಯ ಬಳಿಯಲ್ಲೇ ಬಿಟ್ಟುಹೋಗಿ, ಮೊದಲು ಅವನೊಂದಿಗೆ ಸಮಾಧಾನ ಮಾಡಿಕೊಳ್ಳಿರಿ. ಆಮೇಲೆ ಬಂದು ನಿಮ್ಮ ಕಾಣಿಕೆಯನ್ನು ಸಲ್ಲಿಸಿ.

25 “ನಿಮ್ಮ ವಿರೋಧಿಯು ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯುವಾಗ ಬೇಗನೆ ಅವನೊಂದಿಗೆ ಸ್ನೇಹಿತರಾಗಿ. ನೀವು ನ್ಯಾಯಾಲಯಕ್ಕೆ ಹೋಗುವ ಮೊದಲೇ ಇದನ್ನು ಮಾಡಬೇಕು. ನೀವು ಅವನ ಸ್ನೇಹಿತರಾಗದಿದ್ದರೆ, ಅವನು ನಿಮ್ಮನ್ನು ನ್ಯಾಯಾಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿಯು ನಿಮ್ಮನ್ನು ಸೆರೆಮನೆಗೆ ಹಾಕಲು ಕಾವಲುಗಾರನಿಗೆ ಒಪ್ಪಿಸಬಹುದು. 26 ಆಗ ನೀವು ನಿಮ್ಮ ಸಾಲವನ್ನೆಲ್ಲ ತೀರಿಸುವ ತನಕ ಸೆರೆಯಿಂದ ಬಿಡುಗಡೆ ಆಗುವುದಿಲ್ಲವೆಂದು ನಾನು ನಿಮಗೆ ಹೇಳುತ್ತೇನೆ.

ಲೈಂಗಿಕ ಪಾಪದ ಕುರಿತು ಯೇಸುವಿನ ಉಪದೇಶ

27 “‘ವ್ಯಭಿಚಾರ ಮಾಡಬೇಡಿರಿ’(B) ಎಂದು ಹೇಳಿದ್ದನ್ನು ನೀವು ಕೇಳಿದ್ದೀರಿ. 28 ಆದರೆ ಒಬ್ಬನು ಪರಸ್ತ್ರೀಯನ್ನು ನೋಡಿ ಅವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಬಯಸಿದರೆ, ಅವನು ಆಗಲೇ ತನ್ನ ಮನಸ್ಸಿನಲ್ಲಿ ಅವಳೊಂದಿಗೆ ವ್ಯಭಿಚಾರವನ್ನು ಮಾಡಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. 29 ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕಿತ್ತು ಬಿಸಾಡು. ನಿನ್ನ ಪೂರ್ಣಶರೀರವು ನರಕಕ್ಕೆ ಬೀಳುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು. 30 ನಿನ್ನ ಬಲಗೈ ನಿನ್ನನ್ನು ಪಾಪಕ್ಕೊಳಗಾಗುವಂತೆ ಮಾಡಿದರೆ, ಅದನ್ನು ಕತ್ತರಿಸಿ ಬಿಸಾಡು. ನಿನ್ನ ಪೂರ್ಣ ಶರೀರವು ನರಕಕ್ಕೆ ಹೋಗುವುದಕ್ಕಿಂತ ನಿನ್ನ ಶರೀರದ ಒಂದು ಭಾಗವನ್ನು ಕಳೆದುಕೊಳ್ಳುವುದೇ ಮೇಲು.

ವಿವಾಹ ವಿಚ್ಛೇದನ ಕುರಿತು ಯೇಸುವಿನ ಉಪದೇಶ

(ಮತ್ತಾಯ 19:9; ಮಾರ್ಕ 10:11-12; ಲೂಕ 16:18)

31 “‘ತನ್ನ ಹೆಂಡತಿಯನ್ನು ಬಿಟ್ಟುಬಿಡಬೇಕೆಂದಿರುವವನು, ಅವಳಿಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ’(C) ಎಂದು ಹೇಳಲ್ಪಟ್ಟಿದೆ. 32 ಆದರೆ ನಾನು ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟುಬಿಡುವವನೇ ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ. ಹೆಂಡತಿಯು ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವಳನ್ನು ಗಂಡನು ಬಿಟ್ಟುಬಿಡಬಹುದು. ವಿವಾಹ ವಿಚ್ಛೇದನ ಹೊಂದಿದವಳನ್ನು ಮದುವೆಯಾಗುವವನು ಸಹ ವ್ಯಭಿಚಾರ ಮಾಡಿದವನಾಗುತ್ತಾನೆ.

ಆಣೆ ಇಡುವುದರ ಕುರಿತು ಯೇಸುವಿನ ಉಪದೇಶ

33 “‘ನೀವಿಟ್ಟ ಆಣೆಯನ್ನು ಮೀರಬೇಡಿರಿ. ಪ್ರಭುವಿಗೆ ನೀವಿಟ್ಟ ಆಣೆಗಳನ್ನು ಕೈಗೊಳ್ಳಲೇಬೇಕು’[a] ಎಂದು ನಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. 34 ಆದರೆ ನಾನು ಹೇಳುವುದೇನೆಂದರೆ, ಆಣೆ ಇಡಲೇಬೇಡಿ. ಪರಲೋಕದ ಮೇಲೂ ಆಣೆ ಇಡಬೇಡಿ, ಏಕೆಂದರೆ ಪರಲೋಕವು ದೇವರ ಸಿಂಹಾಸನ. 35 ಭೂಮಿಯ ಮೇಲೂ ಆಣೆ ಇಡಬೇಡಿ. ಏಕೆಂದರೆ ಭೂಮಿಯು ದೇವರ ಪಾದಪೀಠ. ಜೆರುಸಲೇಮಿನ ಮೇಲೂ ಆಣೆ ಇಡಬೇಡಿ, ಏಕೆಂದರೆ ಅದು ಆ ಮಹಾರಾಜನ ಪಟ್ಟಣ. 36 ನಿಮ್ಮ ತಲೆಯ ಮೇಲೂ ಆಣೆ ಇಡಬೇಡಿ. ನಿಮ್ಮ ತಲೆಯ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು. 37 ಹೌದಾದರೆ ‘ಹೌದು’ ಎನ್ನಿರಿ. ಇಲ್ಲವಾದರೆ ‘ಇಲ್ಲ’ ಎನ್ನಿರಿ. ನೀವು ಇದಕ್ಕಿಂತ ಹೆಚ್ಚಾಗಿ ಹೇಳುವಂಥದ್ದು ಸೈತಾನನಿಂದ ಪ್ರೇರಿತವಾದದ್ದು.

ಸೇಡಿನ ಬಗ್ಗೆ ಯೇಸುವಿನ ಉಪದೇಶ

(ಲೂಕ 6:29-30)

38 “‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’(D) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 39 ಆದರೆ ನಾನು ನಿಮಗೆ ಹೇಳುವುದೇನೆಂದರೆ, ದುಷ್ಟನಿಗೆ ವಿರೋಧವಾಗಿ ನಿಂತುಕೊಳ್ಳಬೇಡಿ. ಯಾವನಾದರೂ ನಿಮ್ಮ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. 40 ಯಾವನಾದರೂ ನಿಮ್ಮ ಮೇಲಂಗಿಗಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯಬೇಕೆಂದಿದ್ದರೆ, ನಿಮ್ಮ ಒಳಂಗಿಯನ್ನು ಸಹ ಅವನಿಗೆ ಕೊಟ್ಟುಬಿಡಿರಿ. 41 ಯಾವ ಸೈನಿಕನಾದರೂ ತನ್ನೊಂದಿಗೆ ಒಂದು ಮೈಲಿ ದೂರ ಬರಬೇಕೆಂದು ನಿಮ್ಮನ್ನು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲಿ ದೂರ ಹೋಗಿ. 42 ಯಾವನಾದರೂ ನಿಮ್ಮಲ್ಲಿರುವ ಯಾವುದನ್ನಾದರೂ ಕೇಳಿದರೆ, ಅವನಿಗೆ ಕೊಡಿ. ನಿಮ್ಮಿಂದ ಸಾಲ ತೆಗೆದುಕೊಳ್ಳಬೇಕೆಂದು ಬಂದವನಿಗೆ ಕೊಡದಿರಬೇಡಿ.

ಎಲ್ಲರನ್ನು ಪ್ರೀತಿಸಿರಿ

(ಲೂಕ 6:27-28,32-36)

43 “‘ನಿನ್ನ ಸ್ನೇಹಿತರನ್ನು ಪ್ರೀತಿಸು ಮತ್ತು ನಿನ್ನ ಶತ್ರುಗಳನ್ನು ದ್ವೇಷಿಸು’(E) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ನಿಮಗೆ ಕೆಟ್ಟದ್ದನ್ನು ಮಾಡುವ ಜನರಿಗಾಗಿ ಪ್ರಾರ್ಥಿಸಿರಿ. 45 ಆಗ ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ನಿಜವಾದ ಮಕ್ಕಳಾಗುವಿರಿ. ನಿಮ್ಮ ತಂದೆಯು ಒಳ್ಳೆಯವರಿಗಾಗಿ ಮತ್ತು ಕೆಟ್ಟವರಿಗಾಗಿ ಸೂರ್ಯನನ್ನು ಉದಯಿಸುತ್ತಾನೆ ಮತ್ತು ಮಳೆಯನ್ನು ಸುರಿಸುತ್ತಾನೆ. 46 ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ಅದರಿಂದ ನಿಮಗೇನು ಪ್ರತಿಫಲ ದೊರೆಯುವುದು? ಸುಂಕದವರು ಸಹ ಹಾಗೆ ಮಾಡುತ್ತಾರೆ. 47 ನೀವು ನಿಮ್ಮ ಸ್ನೇಹಿತರಿಗೆ ಮಾತ್ರ ಒಳ್ಳೆಯವರಾಗಿದ್ದರೆ, ನೀವು ಬೇರೆಯವರಿಗಿಂತ ಉತ್ತಮರೇನೂ ಅಲ್ಲ. ದೇವರನ್ನರಿಯದ ಜನರು ಸಹ ತಮ್ಮ ಸ್ನೇಹಿತರಿಗೆ ಒಳ್ಳೆಯವರಾಗಿರುತ್ತಾರೆ. 48 ಆದ್ದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.

ಕೊಡುವುದರ ಕುರಿತು ಯೇಸುವಿನ ಉಪದೇಶ

“ಎಚ್ಚರವಾಗಿರಿ! ನೀವು ಒಳ್ಳೆಯ ಕಾರ್ಯಗಳನ್ನು ಜನರ ಮುಂದೆ ಮಾಡಬೇಡಿ. ಜನರು ನೋಡಲೆಂದು ನೀವು ಅವುಗಳನ್ನು ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರೆಯುವುದಿಲ್ಲ.

“ನೀವು ಬಡಜನರಿಗೆ ಮಾಡುವ ದಾನವನ್ನು ಪ್ರಕಟಿಸಬೇಡಿ. ನೀವು ಕಪಟಿಗಳಂತೆ ಮಾಡಕೂಡದು. ತಾವು ಮಾಡುವ ದಾನವನ್ನು ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ತುತ್ತೂರಿ ಊದಿಸುತ್ತಾರೆ. ಜನರಿಂದ ಗೌರವ ಪಡೆಯಬೇಕೆಂಬುದೇ ಅವರ ಉದ್ದೇಶ. ಆದ್ದರಿಂದ ನೀವು ಬಡಜನರಿಗೆ ಕೊಡುವಾಗ ಬಹಳ ಗುಟ್ಟಾಗಿ ಕೊಡಿ. ನೀವು ಮಾಡುವಂಥದ್ದು ಯಾರಿಗೂ ತಿಳಿಯದಿರಲಿ. ನೀವು ದಾನವನ್ನು ರಹಸ್ಯವಾಗಿ ಕೊಡಬೇಕು. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆ ನಿಮಗೆ ಪ್ರತಿಫಲ ಕೊಡುವನು.

ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ

(ಲೂಕ 11:2-4)

“ನೀವು ಪ್ರಾರ್ಥಿಸುವಾಗ ಕಪಟಿಗಳ ಹಾಗೆ ಪ್ರಾರ್ಥಿಸಬೇಡಿ. ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಯ ಮೂಲೆಗಳಲ್ಲಿ ನಿಂತುಕೊಂಡು ಗಟ್ಟಿಯಾಗಿ ಪ್ರಾರ್ಥಿಸಲು ಇಷ್ಟಪಡುತ್ತಾರೆ. ತಾವು ಪ್ರಾರ್ಥಿಸುವುದನ್ನು ಜನರು ನೋಡಬೇಕೆಂಬುದೇ ಅವರ ಬಯಕೆ. ಅವರು ಆಗಲೇ ಅದರ ಪೂರ್ಣ ಪ್ರತಿಫಲವನ್ನು ಹೊಂದಿಕೊಂಡಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ಪ್ರಾರ್ಥನೆ ಮಾಡಬೇಕಾದರೆ, ನಿಮ್ಮ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ನಿಮಗೆ ಕಾಣದಿರುವ ನಿಮ್ಮ ತಂದೆಗೆ ಪ್ರಾರ್ಥಿಸಿ. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುವನು.

“ನೀವು ಪ್ರಾರ್ಥಿಸುವಾಗ ದೇವರನ್ನು ತಿಳಿದಿಲ್ಲದ ಜನರಂತೆ ಪ್ರಾರ್ಥಿಸಬೇಡಿ. ಅವರು ಅರ್ಥವಿಲ್ಲದ ಸಂಗತಿಗಳನ್ನು ಹೇಳುತ್ತಲೇ ಇರುತ್ತಾರೆ. ಆ ರೀತಿ ಪ್ರಾರ್ಥಿಸಬೇಡಿ. ತಾವು ಅನೇಕ ವಿಷಯಗಳನ್ನು ಹೇಳುವುದರಿಂದ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬುದು ಅವರ ಆಲೋಚನೆ. ನೀವು ಅವರಂತಾಗಬೇಡಿ. ನೀವು ಕೇಳುವುದಕ್ಕೆ ಮೊದಲೇ ನಿಮಗೆ ಏನೇನು ಬೇಕು ಎಂಬುದು ನಿಮ್ಮ ತಂದೆಗೆ ತಿಳಿದಿದೆ. ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ:

‘ಪರಲೋಕದಲ್ಲಿರುವ ನಮ್ಮ ತಂದೆಯೇ,
    ನಿನ್ನ ಹೆಸರು ಪರಿಶುದ್ಧವಾಗಿರಲಿ.
10 ನಿನ್ನ ರಾಜ್ಯ ಬರಲಿ.
    ನಿನ್ನ ಚಿತ್ತ ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.
11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.
12 ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆಯೇ
    ನಮ್ಮ ಪಾಪಗಳನ್ನು ಕ್ಷಮಿಸು.
13 ನಮ್ಮನ್ನು ಶೋಧನೆಗೆ ಒಳಪಡಿಸದೆ
    ಕೆಡುಕನಿಂದ (ಸೈತಾನನಿಂದ) ನಮ್ಮನ್ನು ರಕ್ಷಿಸು.’

14 ಹೌದು, ಬೇರೆಯವರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ. 15 ಆದರೆ ಜನರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸದಿದ್ದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

ಉಪವಾಸದ ಕುರಿತು ಯೇಸುವಿನ ಉಪದೇಶ

16 “ನೀವು ಉಪವಾಸ ಮಾಡುವಾಗ ನಿಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿ. ಕಪಟಿಗಳು ಹಾಗೆ ಮಾಡುತ್ತಾರೆ. ಆದರೆ ನೀವು ಕಪಟಿಗಳಂತಿರಬೇಡಿ. ತಾವು ಉಪವಾಸ ಮಾಡುತ್ತಿರುವುದಾಗಿ ಜನರಿಗೆ ತೋರ್ಪಡಿಸಿಕೊಳ್ಳಲು ಅವರು ತಮ್ಮ ಮುಖಗಳನ್ನು ವಿಕಾರಮಾಡಿಕೊಳ್ಳುತ್ತಾರೆ. ಆ ಕಪಟಿಗಳು ತಮಗೆ ಬರತಕ್ಕ ಪ್ರತಿಫಲವನ್ನು ಸಂಪೂರ್ಣವಾಗಿ ಹೊಂದಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 17 ಆದ್ದರಿಂದ ನೀವು ಉಪವಾಸ ಮಾಡುವಾಗ, ಮುಖವನ್ನು ತೊಳೆದುಕೊಳ್ಳಿರಿ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿರಿ. 18 ಆಗ ನೀವು ಉಪವಾಸ ಮಾಡುತ್ತಿದ್ದೀರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದರೆ ನಿಮಗೆ ಅಗೋಚರವಾಗಿರುವ ನಿಮ್ಮ ತಂದೆಯು ನಿಮ್ಮನ್ನು ನೋಡುತ್ತಾನೆ. ರಹಸ್ಯದಲ್ಲಿ ನಡೆಯುವ ಸಂಗತಿಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುತ್ತಾನೆ.

ಹಣಕ್ಕಿಂತ ದೇವರೇ ಬಹು ಮುಖ್ಯ

(ಲೂಕ 12:33-34; 11:34-36; 16:13)

19 “ನಿಮಗೋಸ್ಕರ ಈ ಭೂಮಿಯ ಮೇಲೆ ಭಂಡಾರಗಳನ್ನು ಮಾಡಿಕೊಳ್ಳಬೇಡಿ. ಅವು ಕಿಲುಬುಹತ್ತಿ ಹಾಳಾಗುತ್ತವೆ. ಕಳ್ಳರು ನಿಮ್ಮ ಮನೆಯೊಳಗೆ ಕನ್ನಕೊರೆದು ನಿಮ್ಮಲ್ಲಿರುವುದನ್ನು ಕದಿಯಬಲ್ಲರು. 20 ಆದ್ದರಿಂದ ನಿಮ್ಮ ಭಂಡಾರಗಳನ್ನು ಪರಲೋಕದಲ್ಲಿ ಮಾಡಿಟ್ಟುಕೊಳ್ಳಿ. ಅಲ್ಲಿ ಅವುಗಳಿಗೆ ನುಸಿ ಹಿಡಿಯುವುದಿಲ್ಲ. ಕಿಲುಬುಹತ್ತುವುದಿಲ್ಲ, ಕಳ್ಳರು ಕನ್ನಕೊರೆದು ಕದಿಯುವುದಿಲ್ಲ. 21 ನಿಮ್ಮ ಭಂಡಾರ ಎಲ್ಲಿರುವುದೋ ಅಲ್ಲೇ ನಿಮ್ಮ ಮನಸ್ಸಿರುವುದು.

22 “ಕಣ್ಣು ಶರೀರಕ್ಕೆ ಬೆಳಕಾಗಿದೆ. ನಿನ್ನ ಕಣ್ಣು ಸರಿಯಿದ್ದರೆ, ನಿನ್ನ ದೇಹವೆಲ್ಲಾ ಬೆಳಕಿನಿಂದ ಕೂಡಿರುವುದು. 23 ಆದರೆ ನಿನ್ನ ಕಣ್ಣು ಕೆಟ್ಟಿದ್ದರೆ, ನಿನ್ನ ಶರೀರವೆಲ್ಲ ಕತ್ತಲೆಯಿಂದ (ಪಾಪದಿಂದ) ತುಂಬಿರುವುದು. ನಿನ್ನಲ್ಲಿರುವ ಒಂದೇ ಬೆಳಕು ನಿಜವಾಗಿಯೂ ಕತ್ತಲಾದರೆ, ಆಗ ನೀನು ಕಗ್ಗತ್ತಲಲ್ಲಿರುವೆ.

24 “ಯಾವನೂ ಇಬ್ಬರು ಯಜಮಾನರಿಗೆ ಒಂದೇ ಸಮಯದಲ್ಲಿ ಸೇವೆ ಮಾಡಲಾರನು. ಅವನು ಒಬ್ಬ ಯಜಮಾನನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುತ್ತಾನೆ ಅಥವಾ ಒಬ್ಬ ಯಜಮಾನನನ್ನು ಹಿಂಬಾಲಿಸಿ ಮತ್ತೊಬ್ಬನನ್ನು ತಾತ್ಸಾರ ಮಾಡುತ್ತಾನೆ. ಆದ್ದರಿಂದ ನೀನು ದೇವರಿಗೆ ಮತ್ತು ಹಣಕ್ಕೆ ಒಂದೇ ಸಮಯದಲ್ಲಿ ಸೇವೆ ಮಾಡಲಾರೆ.

ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ

(ಲೂಕ 12:22-34)

25 “ಆದ್ದರಿಂದ ನಿಮ್ಮ ಪ್ರಾಣಧಾರಣೆಗೆ ಬೇಕಾದ ಆಹಾರಕ್ಕಾಗಲಿ ದೇಹಕ್ಕೆ ಬೇಕಾದ ಬಟ್ಟೆಗಾಗಲಿ ನೀವು ಚಿಂತಿಸಬಾರದು. ಪ್ರಾಣವು ಆಹಾರಕ್ಕಿಂತಲೂ ದೇಹವು ಬಟ್ಟೆಗಿಂತಲೂ ಬಹಳ ಮುಖ್ಯವಾದದ್ದೆಂದು ನಾನು ನಿಮಗೆ ಹೇಳುತ್ತೇನೆ. 26 ಪಕ್ಷಿಗಳ ಕಡೆಗೆ ನೋಡಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ ಇಲ್ಲವೇ ಕಣಜಗಳಲ್ಲಿ ತುಂಬಿಟ್ಟುಕೊಳ್ಳುವುದಿಲ್ಲ. ಆದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳಿಗೆ ಆಹಾರವನ್ನು ನೀಡುತ್ತಾನೆ. ನೀವು ಆ ಪಕ್ಷಿಗಳಿಗಿಂತ ಎಷ್ಟೋ ಅಮೂಲ್ಯರೆಂಬುದು ನಿಮಗೆ ಗೊತ್ತಿದೆ. 27 ನೀವು ಚಿಂತಿಸುವುದರಿಂದ ನಿಮ್ಮ ಆಯುಷ್ಯು ಹೆಚ್ಚೇನೂ ಆಗುವುದಿಲ್ಲ.

28 “ಬಟ್ಟೆಗಾಗಿ ಚಿಂತಿಸುವುದೇಕೆ? ಹೊಲದಲ್ಲಿರುವ ಹೂವುಗಳನ್ನು ನೋಡಿ. ಅವು ಬೆಳೆಯುವ ಬಗೆಯನ್ನು ಗಮನಿಸಿ. ಅವು ದುಡಿಯುವುದಿಲ್ಲ ಅಥವಾ ತಮಗಾಗಿ ಬಟ್ಟೆಗಳನ್ನು ನೇಯುವುದಿಲ್ಲ. 29 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಸೊಲೊಮೋನನು ತನ್ನ ವೈಭವದಿಂದ ಇದ್ದಾಗಲೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಸೌಂದರ್ಯವುಳ್ಳ ಬಟ್ಟೆಗಳನ್ನು ಧರಿಸಲಿಲ್ಲ. 30 ಬಯಲಿನಲ್ಲಿರುವ ಹುಲ್ಲಿಗೂ ದೇವರು ಹಾಗೆ ಹೊದಿಸುತ್ತಾನೆ. ಹುಲ್ಲಾದರೋ ಈ ಹೊತ್ತು ಇದ್ದು ನಾಳೆ ಬೆಂಕಿಯ ಪಾಲಾಗುತ್ತದೆ. ಆದ್ದರಿಂದ ದೇವರು ನಿಮಗೆ ಎಷ್ಟೋ ಹೆಚ್ಚಾಗಿ ತೊಡಿಸುತ್ತಾನೆಂದು ನಿಮಗೆ ಗೊತ್ತಿದೆ. ಅಲ್ಪವಿಶ್ವಾಸಿಗಳಾಗಿರಬೇಡಿ!

31 “‘ನಾವು ಏನು ತಿನ್ನಬೇಕು? ಏನು ಕುಡಿಯಬೇಕು? ಏನನ್ನು ಧರಿಸಬೇಕು?’ ಎಂದು ಚಿಂತಿಸಬೇಡಿ. 32 ದೇವರನ್ನು ತಿಳಿಯದ ಜನರೆಲ್ಲರೂ ಇವುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಚಿಂತಿಸಬೇಡಿರಿ, ಏಕೆಂದರೆ ಈ ವಸ್ತುಗಳು ನಿಮಗೆ ಅಗತ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. 33 ಆದ್ದರಿಂದ ನೀವು ದೇವರ ರಾಜ್ಯಕ್ಕಾಗಿ ಮತ್ತು ಆತನ ಚಿತ್ತಕ್ಕನುಸಾರವಾಗಿ ಕಾರ್ಯಗಳನ್ನು ಮಾಡಲು ಬಹಳ ತವಕಪಡಬೇಕು. ಆಗ ನಿಮಗೆ ಅಗತ್ಯವಾದ ಉಳಿದವುಗಳನ್ನು ಸಹ ಕೊಡಲಾಗುವುದು. 34 ಆದ್ದರಿಂದ ನಾಳೆಗಾಗಿ ಚಿಂತಿಸಬೇಡಿ. ಪ್ರತಿದಿನವು ತನ್ನದೇ ಆದ ಎಷ್ಟೋ ಕಷ್ಟಗಳನ್ನು ಹೊಂದಿರುತ್ತದೆ. ನಾಳೆಯು ಸಹ ತನ್ನದೇ ಆದ ಚಿಂತೆಗಳನ್ನು ಹೊಂದಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International