Revised Common Lectionary (Semicontinuous)
ಎರಡನೆ ಭಾಗ
(ಕೀರ್ತನೆಗಳು 42–72)
ರಚನೆಗಾರರು: ಕೋರಹೀಯರು.
42 ದೇವರೇ, ಬಾಯಾರಿದ ಜಿಂಕೆಯು ನೀರಿನ ತೊರೆಗಳನ್ನು ಬಯಸುವಂತೆಯೇ
ನನ್ನ ಆತ್ಮವು ನಿನ್ನನ್ನು ಬಯಸುತ್ತದೆ.
2 ನನ್ನ ಆತ್ಮವು ಜೀವಸ್ವರೂಪನಾದ ದೇವರಿಗಾಗಿ ಬಾಯಾರಿದೆ.
ನಾನು ಯಾವಾಗ ಆತನನ್ನು ಸಂಧಿಸುವೆನು?
3 “ನಿನ್ನ ದೇವರು ಎಲ್ಲಿ?” ಎಂದು ನನ್ನ ವೈರಿಗಳು ಯಾವಾಗಲೂ ಗೇಲಿಮಾಡುವುದರಿಂದ
ಹಗಲಿರುಳು ಕಣ್ಣೀರೇ ನನಗೆ ಆಹಾರವಾಯಿತು.
4 ಆಗ ನಾನು, ಹಬ್ಬದ ಉತ್ಸಾಹದಲ್ಲಿ ಜನಸಮೂಹದೊಡನೆ ಹರ್ಷಿಸುತ್ತಾ
ಸ್ತುತಿಗೀತೆಗಳನ್ನು ಹಾಡುತ್ತಾ ಅವರನ್ನು ದೇವಾಲಯಕ್ಕೆ ಮುನ್ನಡೆಸುತ್ತಿದ್ದದ್ದನ್ನು
ನೆನಪಿಗೆ ತಂದುಕೊಂಡು ಹೃದಯದಲ್ಲಿ ಕೊರಗುವೆ.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
6 ನನ್ನ ದೇವರೇ, ನಾನು ಕುಗ್ಗಿಹೋಗಿದ್ದೇನೆ.
ಆದ್ದರಿಂದ ಹೆರ್ಮೊನ್ ಪರ್ವತದಲ್ಲಿಯೂ ಜೋರ್ಡನ್ ನದಿಯ ಪ್ರದೇಶದಲ್ಲಿಯೂ
ಮಿಸ್ಸಾರ್ ಬೆಟ್ಟದಲ್ಲಿಯೂ ನಾನು ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
7 ಜಲಪಾತದ ಘೋಷದಂತೆಯೂ
ಪ್ರವಾಹದ ಘರ್ಜನೆಯಂತೆಯೂ ಇಕ್ಕಟ್ಟುಗಳು ನನಗೆ ಬಂದಿವೆ.
ಸಮುದ್ರದ ಅಲೆಗಳಂತೆ
ದುಃಖವು ನನ್ನನ್ನು ಆವರಿಸಿಕೊಂಡಿದೆ.
8 ಹಗಲಲ್ಲಿ ಯೆಹೋವನು ನನಗೆ ನಿಜಪ್ರೀತಿಯನ್ನು ತೋರುವುದರಿಂದ
ಜೀವಸ್ವರೂಪನಾದ ಆತನಿಗೆ ಪ್ರತಿ ರಾತ್ರಿಯಲ್ಲಿಯೂ ನೂತನ ಕೀರ್ತನೆಯನ್ನು ಹಾಡುವೆ; ಆತನಲ್ಲಿ ಪ್ರಾರ್ಥಿಸುವೆ.
9 ನನ್ನ ಬಂಡೆಯಾದ ದೇವರಿಗೆ,
“ನೀನು ನನ್ನನ್ನು ಯಾಕೆ ಮರೆತುಬಿಟ್ಟೆ?
ನನ್ನ ಶತ್ರುಗಳ ಕ್ರೂರತೆಯಿಂದ ನಾನೇಕೆ ಸಂಕಟಪಡಬೇಕು?” ಎಂದು ಕೇಳುವೆ.
10 ನನ್ನ ವಿರೋಧಿಗಳು ಸತತವಾಗಿ,
“ನಿನ್ನ ದೇವರು ಎಲ್ಲಿ?” ಎಂದು ಕೇಳುವುದರಿಂದ ನನ್ನ ಮೂಳೆಗಳು ಮುರಿದಂತಾಗಿವೆ.
11 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
43 ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು.
ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು.
ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು.
2 ದೇವರೇ, ನೀನೇ ನನಗೆ ಆಶ್ರಯಸ್ಥಾನವಾಗಿರುವೆ!
ನೀನು ನನ್ನನ್ನು ಯಾಕೆ ಕೈಬಿಟ್ಟಿರುವೆ?
ಶತ್ರು ಬಾಧೆಯಿಂದ ನಾನೇಕೆ
ದುಃಖಿಸುತ್ತಾ ಸಂಕಟಪಡಬೇಕು?
3 ನಿನ್ನ ಬೆಳಕೂ ಸತ್ಯವೂ ನನ್ನ ಮೇಲೆ ಪ್ರಕಾಶಿಸಲಿ.
ನಿನ್ನ ಬೆಳಕೂ ಸತ್ಯವೂ ನನಗೆ ಮಾರ್ಗದರ್ಶನ ನೀಡಲಿ.
ಅವು ನನ್ನನ್ನು ನಿನ್ನ ಪವಿತ್ರ ಪರ್ವತಕ್ಕೂ ನಿನ್ನ ನಿವಾಸಕ್ಕೂ ನಡೆಸುತ್ತವೆ.
4 ನನ್ನ ದೇವರೇ, ನಿನ್ನ ಯಜ್ಞವೇದಿಕೆಯ ಬಳಿಗೆ ಬರುವೆನು.
ನನ್ನ ಸಂತೋಷಕ್ಕೆ ನೀನೇ ಆಧಾರನಾಗಿರುವೆ.
ದೇವರೇ, ನನ್ನ ದೇವರೇ,
ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ನಿನ್ನನ್ನು ಕೊಂಡಾಡುವೆನು.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
14 “ಕಷ್ಟದಲ್ಲಿರುವವನಿಗೆ ಅವನ ಸ್ನೇಹಿತನು ದಯೆತೋರಬೇಕು;
ಒಂದುವೇಳೆ ಅವನು ಸರ್ವಶಕ್ತನಾದ ದೇವರಿಗೆ ವಿಮುಖನಾಗಿದ್ದರೂ
ಅವನ ಸ್ನೇಹಿತನು ನಂಬಿಗಸ್ತನಾಗಿರಬೇಕು.
15 ಆದರೆ ನನ್ನ ಸಹೋದರರಾದ ನೀವು ನಂಬಿಗಸ್ತರಲ್ಲ.
ನಾನು ನಿಮ್ಮನ್ನು ಆಶ್ರಯಿಸಿಕೊಳ್ಳಲಾರೆ. ಕೆಲವೊಮ್ಮೆ ಹರಿಯುವ, ಕೆಲವೊಮ್ಮೆ ಹರಿಯದಿರುವ
ತೊರೆಗಳಂತೆ ನೀವು ದ್ರೋಹಿಗಳಾಗಿದ್ದೀರಿ.
16 ಮಂಜಿನಿಂದಲೂ ಕರಗುವ ಹಿಮದಿಂದಲೂ ತುಂಬಿ ಹರಿಯುವ ತೊರೆಗಳಂತೆ ನೀವಿದ್ದೀರಿ.
17 ಆದರೆ ಆ ತೊರೆಗಳು ಬೇಸಿಗೆಕಾಲದಲ್ಲಿ ಇದ್ದಕ್ಕಿದ್ದಂತೆ ಹರಿಯದೆ ನಿಂತುಹೋಗುತ್ತವೆ.
ಬೇಸಿಗೆ ಕಾಲದ ಕಾವಿಗೆ ನೀರು ಬತ್ತಿಹೋಗುತ್ತದೆ; ತೊರೆಗಳು ಇಲ್ಲವಾಗುತ್ತವೆ.
18 ವರ್ತಕರ ತಂಡಗಳು ಅವುಗಳ ದಾರಿಗಳಿಂದ ಬೇರೆ ಕಡೆಗೆ ತಿರುಗಿಕೊಳ್ಳುವರು.
ಅವರು ಅಲೆಯುತ್ತಾ ಮರುಭೂಮಿಗೆ ಹೋಗಿ ಕಾಣದಂತಾಗುವರು.
19 ತೇಮದ ವರ್ತಕರ ತಂಡಗಳು ನೀರಿಗಾಗಿ ನೋಡುವರು.
ಶೆಬದ ಪ್ರಯಾಣಿಕರು ನಿರೀಕ್ಷೆಯಿಂದ ನೋಡುವರು.
20 ನೀರು ಸಿಗುವುದೆಂದು ಅವರು ನಂಬಿಕೊಂಡಿದ್ದರೂ
ಅವರಿಗೆ ನಿರಾಶೆಯಾಯಿತು.
21 ನೀವು ಸಹ ಆ ತೊರೆಗಳಂತಿದ್ದೀರಿ.
ನೀವು ನನ್ನ ಕಷ್ಟಗಳನ್ನು ನೋಡಿ ಭಯಗೊಂಡಿದ್ದೀರಿ.
22 ‘ನನಗೆ ಏನಾದರೂ ಕೊಡಿ’ ಎಂದಾಗಲಿ
‘ನನಗೋಸ್ಕರವಾಗಿ ನಿಮ್ಮ ಐಶ್ವರ್ಯದಿಂದ ಇಂಥವನಿಗೆ ಲಂಚಕೊಡಿ’ ಎಂದಾಗಲಿ
ನಾನೆಂದೂ ಕೇಳಲಿಲ್ಲ.
23 ‘ಶತ್ರುವಿನ ಶಕ್ತಿಯಿಂದ ನನ್ನನ್ನು ರಕ್ಷಿಸಿರಿ.
ವೈರಿಯಿಂದ ನನ್ನನ್ನು ರಕ್ಷಿಸಲು ಪ್ರಾಯಶ್ಚಿತ್ತ ಕೊಡಿರಿ’ ಎಂದಾಗಲಿ ನಾನೆಂದೂ ಕೇಳಲಿಲ್ಲ.
24 “ಈಗ ನನಗೆ ಉಪದೇಶಿಸಿ ನನ್ನ ತಪ್ಪನ್ನು ತಿಳಿಸಿರಿ;
ನಾನು ಮೌನವಾಗಿರುವೆನು.
25 ಯಥಾರ್ಥಾವಾದ ನುಡಿಗಳು ಶಕ್ತಿಯುತವಾಗಿವೆ.
ಆದರೆ ನಿಮ್ಮ ವಾದಗಳು ಏನನ್ನೂ ನಿರೂಪಿಸುವುದಿಲ್ಲ.
26 ನನ್ನನ್ನು ಟೀಕೆ ಮಾಡಬೇಕೆಂದಿದ್ದೀರೋ?
ಇನ್ನೂ ಕಟುವಾದ ಮಾತುಗಳನ್ನು ಆಡಬೇಕೆಂದಿದ್ದೀರೋ?
27 ಹೌದು, ನೀವು ಚೀಟುಹಾಕಿ ಅನಾಥರಿಗೆ ಸೇರಿದ ವಸ್ತುಗಳನ್ನು ತೆಗೆದುಕೊಳ್ಳುವವರಾಗಿದ್ದೀರಿ.
ನೀವು ನಿಮ್ಮ ಸ್ನೇಹಿತನನ್ನು ಮಾರಾಟ ಮಾಡುವವರಾಗಿದ್ದೀರಿ.
28 ಆದರೆ ಈಗ ದಯವಿಟ್ಟು ನನ್ನ ಮುಖವನ್ನು ನೋಡಿರಿ.
ನಾನು ನಿಮಗೆ ಸುಳ್ಳು ಹೇಳುವುದಿಲ್ಲ.
29 ಆದ್ದರಿಂದ ಈಗ ನಿಮ್ಮ ಮನಸ್ಸನ್ನು ಬದಲಾಯಿಸಿರಿ, ಅನ್ಯಾಯಸ್ಥರಾಗಿರಬೇಡಿ.
ಹೌದು, ಮತ್ತೊಮ್ಮೆ ಯೋಚಿಸಿರಿ. ನಾನೇನೂ ತಪ್ಪು ಮಾಡಿಲ್ಲ.
30 ನಾನು ಸುಳ್ಳು ಹೇಳುತ್ತಿಲ್ಲ.
ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ನನಗೆ ಗೊತ್ತಿದೆ.
ಧರ್ಮಶಾಸ್ತ್ರ ಮತ್ತು ವಾಗ್ದಾನ
15 ಸಹೋದರ ಸಹೋದರಿಯರೇ, ನಾನು ನಿಮಗೊಂದು ಉದಾಹರಣೆಯನ್ನು ಕೊಡುತ್ತೇನೆ. ಒಬ್ಬನು ಇನ್ನೊಬ್ಬನೊಂದಿಗೆ ಮಾಡಿಕೊಳ್ಳುವ ಒಪ್ಪಂದದ ಬಗ್ಗೆ ಯೋಚಿಸಿ. ಆ ಒಪ್ಪಂದವು ಅಧಿಕೃತವಾದಾಗ ಅದನ್ನು ರದ್ದುಮಾಡುವುದಕ್ಕಾಗಲಿ ಅಥವಾ ಅದಕ್ಕೆ ಬೇರೆ ಏನಾದರು ಸೇರಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ. 16 ದೇವರು ಅಬ್ರಹಾಮನಿಗೂ ಅವನ ಸಂತಾನದವರಿಗೂ ವಾಗ್ದಾನಗಳನ್ನು ಮಾಡಿದನು. “ನಿನ್ನ ಸಂತತಿಗಳಿಗೆ” ಎಂದು ದೇವರು ಹೇಳಲಿಲ್ಲ. ಏಕೆಂದರೆ ಅನೇಕ ಜನರು ಎಂಬರ್ಥವನ್ನು ಅದು ಕೊಡುತ್ತದೆ. ಆದರೆ ದೇವರು ಅವನಿಗೆ, “ನಿನ್ನ ಸಂತತಿಗೆ”[a] ಎಂದು ಹೇಳಿದನು. ಅದರರ್ಥವೇನೆಂದರೆ, ಒಬ್ಬನೇ ಒಬ್ಬ ವ್ಯಕ್ತಿ. ಆತನೇ ಕ್ರಿಸ್ತನು. 17 ನಾನು ಹೇಳುತ್ತಿರುವುದೇನೆಂದರೆ, ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದನು. ಆದ್ದರಿಂದ ನಾನೂರಮೂವತ್ತು ವರ್ಷಗಳಾದ ನಂತರ ಬಂದ ಧರ್ಮಶಾಸ್ತ್ರವು ಅಬ್ರಹಾಮನಿಗೆ ದೇವರು ಮಾಡಿದ ವಾಗ್ದಾನವನ್ನು ರದ್ದುಪಡಿಸುವುದೂ ಇಲ್ಲ ಬದಲಾಯಿಸುವುದೂ ಇಲ್ಲ.
18 ದೇವರು ವಾಗ್ದಾನ ಮಾಡಿದಂಥವುಗಳು ಧರ್ಮಶಾಸ್ತ್ರದ ಅನುಸರಣೆಯಿಂದ ದೊರೆಯುತ್ತವೆಯೇ? ಇಲ್ಲ! ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನಾವು ಅವುಗಳನ್ನು ಪಡೆದುಕೊಳ್ಳಬಹುದಾಗಿದ್ದರೆ ಅವುಗಳನ್ನು ನಮಗೆ ಕೊಡುವಂಥದ್ದು ದೇವರ ವಾಗ್ದಾನವಲ್ಲ. ಆದರೆ ದೇವರು ತಾನು ಮಾಡಿದ ವಾಗ್ದಾನದ ಮೂಲಕ ತನ್ನ ಆಶೀರ್ವಾದಗಳನ್ನು ಅಬ್ರಹಾಮನಿಗೆ ಉಚಿತವಾಗಿ ಕೊಟ್ಟನು.
19 ಹಾಗಾದರೆ ಧರ್ಮಶಾಸ್ತ್ರವಿದ್ದದ್ದು ಯಾಕೆ? ಜನರ ಅಪರಾಧಗಳನ್ನು ತೋರಿಸುವುದಕ್ಕಾಗಿ ಧರ್ಮಶಾಸ್ತ್ರವನ್ನು ಕೊಡಲಾಯಿತು. ಅಬ್ರಹಾಮನ ವಿಶೇಷ ಸಂತಾನವು ಬರುವ ತನಕ ಧರ್ಮಶಾಸ್ತ್ರವಿತ್ತು. ಈ ಸಂತಾನದ (ಕ್ರಿಸ್ತನು) ಬಗ್ಗೆಯೇ ದೇವರು ವಾಗ್ದಾನ ಮಾಡಿದನು. ಧರ್ಮಶಾಸ್ತ್ರವನ್ನು ದೇವದೂತರ ಮೂಲಕ ಕೊಡಲಾಯಿತು. ಜನರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕಾಗಿ ದೇವದೂತರು ಮೋಶೆಯನ್ನು ಮಧ್ಯವರ್ತಿಯನ್ನಾಗಿ ಉಪಯೋಗಿಸಿದರು. 20 ಒಂದೇ ಪಕ್ಷವಿದ್ದರೆ ಮಧ್ಯಸ್ತನು ಬೇಕಿಲ್ಲ. ದೇವರು ಒಬ್ಬನೇ.
ಮೋಶೆಯ ಧರ್ಮಶಾಸ್ತ್ರದ ಉದ್ದೇಶ
21 ಧರ್ಮಶಾಸ್ತ್ರವು ದೇವರ ವಾಗ್ದಾನಗಳಿಗೆ ವಿರೋಧವಾಗಿದೆ ಎಂಬುದು ಇದರರ್ಥವೇ? ಇಲ್ಲ! ಜೀವವನ್ನು ಕೊಡುವಂಥ ಧರ್ಮಶಾಸ್ತ್ರವಿದ್ದಿದ್ದರೆ ಅದನ್ನು ಅನುಸರಿಸುವುದರ ಮೂಲಕ ನೀತಿವಂತರಾಗಬಹುದಾಗಿತ್ತು. 22 ಆದರೆ ಇದು ಸತ್ಯವಲ್ಲ. ಏಕೆಂದರೆ ಸಮಸ್ತವೂ ಪಾಪಕ್ಕೆ ಒಳಗಾಗಿದೆ ಎಂದು ಪವಿತ್ರ ಗ್ರಂಥ ಪ್ರಕಟಿಸುತ್ತದೆ. ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವವರಿಗೆ ಅವರ ನಂಬಿಕೆಯ ಆಧಾರದ ಮೇಲೆ ವಾಗ್ದಾನದ ಫಲವು ದೊರೆಯಬೇಕೆಂದೇ ಪವಿತ್ರ ಗ್ರಂಥವು ಹೀಗೆ ಪ್ರಕಟಿಸಿದೆ.
Kannada Holy Bible: Easy-to-Read Version. All rights reserved. © 1997 Bible League International