Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 48

ರಚನೆಗಾರರು: ಕೋರಹೀಯರು.

48 ಯೆಹೋವನೇ ಮಹೋನ್ನತನು.
    ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
    ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
    ಅದೇ ಆ ಮಹಾರಾಜನ ಪರ್ವತ.
ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
    ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
    ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
    ಭಯದಿಂದ ಓಡಿಹೋದರು.
ಭಯವು ಅವರನ್ನು
    ಪ್ರಸವವೇದನೆಯಂತೆ ಆವರಿಸಿಕೊಂಡಿತು.
ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
    ನೀನು ಅವರನ್ನು ನಾಶಮಾಡಿದೆ.
ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
    ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.

ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10 ದೇವರೇ, ನೀನು ಪ್ರಖ್ಯಾತನಾಗಿರುವೆ.
    ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
    ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11 ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
    ಯೆಹೂದದ ಊರುಗಳು ಉಲ್ಲಾಸಿಸಲಿ.
12 ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
    ಅದರ ಬುರುಜುಗಳನ್ನು ಎಣಿಸಿರಿ.
13 ಅದರ ಕೋಟೆಗಳನ್ನು ನೋಡಿರಿ.
    ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14 ಈ ದೇವರೇ ಎಂದೆಂದಿಗೂ ನಮ್ಮ ದೇವರು!
    ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!

ಯೋವೇಲ 2:18-29

ಯೆಹೋವನು ದೇಶವನ್ನು ಸುಸ್ಥಿತಿಗೆ ತರುವನು

18 ಆಗ ಯೆಹೋವನು ತನ್ನ ದೇಶದ ಬಗ್ಗೆ ಆಸಕ್ತಿ ತೋರಿಸಿದನು.
    ತನ್ನ ಜನರ ಬಗ್ಗೆ ದುಃಖಿಸಿದನು.
19 ಯೆಹೋವನು ತನ್ನ ಜನರೊಂದಿಗೆ ಮಾತನಾಡಿ ಹೀಗೆ ಹೇಳಿದನು:
“ನಾನು ನಿಮಗೆ ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕಳುಹಿಸುವೆನು.
    ನಿಮಗೆ ಬೇಕಾದಷ್ಟು ಇರುವದು.
    ಅನ್ಯ ಜನಾಂಗದವರೆದುರು ನಿಮ್ಮನ್ನು ಇನ್ನು ಮುಂದೆ ನಾಚಿಕೆಗೆ ಗುರಿಪಡಿಸುವುದಿಲ್ಲ.
20 ಉತ್ತರದಿಂದ ಬಂದ ದಂಡನ್ನು ನಿಮ್ಮ ದೇಶದಿಂದ ಹೊರಡಿಸುವೆನು.
    ಅವರನ್ನು ಒಣ ಬೆಂಗಾಡಿಗೆ ಕಳುಹಿಸುವೆನು.
ಅವರಲ್ಲಿ ಕೆಲವರು ಪೂರ್ವದ ಸಮುದ್ರಕ್ಕೆ ಹೋಗುವರು,
    ಕೆಲವರು ಪಶ್ಚಿಮದ ಸಮುದ್ರಕ್ಕೆ ಹೋಗುವರು.
ಅವರು ಭಯಂಕರ ಕೃತ್ಯಗಳನ್ನು ಮಾಡಿದುದರಿಂದ
    ಸತ್ತು ಕೊಳೆಯುವ ಸ್ಥಿತಿಗೆ ಬರಮಾಡುವೆನು.
ಆಗ ಭಯಂಕರ ಹೊಲಸು ವಾಸನೆ ಇರುವದು.”

ದೇಶವು ಹೊಸತಾಗಿ ಮಾಡಲ್ಪಡುವದು

21 ದೇಶವೇ, ಭಯಪಡದಿರು.
    ಯೆಹೋವನು ಮಹತ್ಕಾರ್ಯವನ್ನು ಮಾಡಲಿರುವದರಿಂದ
    ಸಂತೋಷದಿಂದ ಆನಂದಿಸು.
22 ಅಡವಿಯಲ್ಲಿರುವ ಪ್ರಾಣಿಗಳೇ, ಭಯಪಡಬೇಡಿ.
    ಮರುಭೂಮಿಯು ಹುಲ್ಲುಗಾವಲಾಗುವದು.
ಮರಗಳು ಹಣ್ಣುಗಳನ್ನು ಬಿಡುವವು.
    ಅಂಜೂರದ ಮರಗಳೂ ದ್ರಾಕ್ಷಿಬಳ್ಳಿಗಳೂ ಬಹಳ ಹಣ್ಣುಗಳನ್ನು ಬಿಡುವವು.

23 ಆದ್ದರಿಂದ ಚೀಯೋನಿನ ಜನರೇ, ಸಂತೋಷಪಡಿರಿ.
    ನಿಮ್ಮ ದೇವರಾದ ಯೆಹೋವನಲ್ಲಿ ಸಂತೋಷಿಸಿರಿ.
ಆತನು ನಿಮಗೆ ಮಳೆ ಸುರಿಸುವನು.
    ಹಿಂದಿನಂತೆ ನಿಮಗೆ ಮುಂಗಾರು, ಹಿಂಗಾರು ಮಳೆಗಳನ್ನು ಸುರಿಸುವನು.
24 ಕಣಜಗಳು ಗೋದಿಯಿಂದ ತುಂಬಿರುವವು.
    ಪಿಪಾಯಿಗಳು ಎಣ್ಣೆಯಿಂದಲೂ ದ್ರಾಕ್ಷಾರಸದಿಂದಲೂ ತುಂಬಿತುಳುಕುವವು.
25 “ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ನನ್ನ ಸೈನ್ಯವನ್ನು ಕಳುಹಿಸಿದೆನು.
    ಮಿಡತೆಗಳ ಗುಂಪು, ದೊಡ್ಡ ಮಿಡತೆ,
    ನಾಶಮಾಡುವ ಮಿಡತೆ, ಹಾರುವ ಮಿಡತೆ, ಚೂರಿ ಮಿಡತೆಗಳು ಬಂದು ನಿಮಗಿದ್ದದ್ದನ್ನೆಲ್ಲಾ ತಿಂದುಬಿಟ್ಟವು.
ಆದರೆ ಯೆಹೋವನಾದ ನಾನು ನಿಮ್ಮ ಸಂಕಟಕಾಲಕ್ಕೆ ಬದಲಾಗಿ
    ಸುಭಿಕ್ಷ ಕಾಲವನ್ನು ದಯಪಾಲಿಸುವೆನು.
26 ಆಗ ನಿಮಗೆ ತಿನ್ನಲು ಏನೂ ಕಡಿಮೆ ಇರುವುದಿಲ್ಲ.
    ನೀವು ಸಂತೃಪ್ತರಾಗುವಿರಿ.
ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ.
    ಆತನು ನಿಮಗೆ ಆಶ್ಚರ್ಯವಾದ ಕಾರ್ಯವನ್ನು ಮಾಡಿದ್ದಾನೆ.
ನನ್ನ ಜನರು ಇನ್ನು ಮುಂದೆ ಎಂದೂ ನಾಚಿಕೆಗೆ ಗುರಿಯಾಗರು.
27 ಇಸ್ರೇಲರೊಂದಿಗೆ ನಾನು ಇದ್ದೇನೆ ಎಂದು ನೀವು ತಿಳಿಯುವಿರಿ.
    ನಿಮ್ಮ ದೇವರಾದ ಯೆಹೋವನು ನಾನೇ ಎಂದು ನೀವು ತಿಳಿಯುವಿರಿ.
    ನನ್ನ ಹೊರತು ಬೇರೆ ದೇವರುಗಳಿಲ್ಲ.
ನನ್ನ ಜನರು ಇನ್ನು ಮುಂದೆ ನಾಚಿಕೆಗೆ ಗುರಿಯಾಗುವುದಿಲ್ಲ.”

ದೇವರು ಎಲ್ಲಾ ಜನರ ಮೇಲೆ ತನ್ನ ಆತ್ಮವನ್ನು ಸುರಿಸುವನು

28 “ಆ ಬಳಿಕ ನಾನು
    ನನ್ನ ಆತ್ಮವನ್ನು ಎಲ್ಲಾ ತರದ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಹೆಣ್ಣು ಮಕ್ಕಳು ಪ್ರವಾದಿಸುವರು.
    ನಿಮ್ಮ ವೃದ್ಧರು ಕನಸು ಕಾಣುವರು.
    ನಿಮ್ಮ ಯುವಕರಿಗೆ ದರ್ಶನಗಳಾಗುವವು.
29 ಆ ಸಮಯದಲ್ಲಿ ಸೇವಕಸೇವಕಿಯರ ಮೇಲೆಯೂ
    ನನ್ನ ಆತ್ಮವನ್ನು ಸುರಿಸುವೆನು.

1 ಕೊರಿಂಥದವರಿಗೆ 2:1-11

ಶಿಲುಬೆಗೆರಿಸಲ್ಪಟ್ಟ ಕ್ರಿಸ್ತನ ಕುರಿತಾದ ಸಂದೇಶ

ಪ್ರಿಯ ಸಹೋದರ ಸಹೋದರಿಯರೇ, ನಾನು ನಿಮ್ಮ ಬಳಿಗೆ ಬಂದಿದ್ದಾಗ, ನಾನು ನಿಮಗೆ ದೇವರ ಸತ್ಯವನ್ನು ತಿಳಿಸಿದೆನು. ಆದರೆ ನಾನು ನಾಜೂಕಾದ ಪದಗಳನ್ನಾಗಲಿ ಮಹಾ ಜ್ಞಾನವನ್ನಾಗಲಿ ಉಪಯೋಗಿಸಲಿಲ್ಲ. ನಾನು ನಿಮ್ಮೊಂದಿಗಿದ್ದಾಗ ಯೇಸು ಕ್ರಿಸ್ತನ ಮತ್ತು ಆತನ ಶಿಲುಬೆಯ ಮೇಲಿನ ಮರಣವನ್ನೇ ಹೊರತು ಬೇರೆಲ್ಲಾ ವಿಷಯಗಳನ್ನು ಮರೆತುಬಿಡಲು ನಿರ್ಧರಿಸಿದೆನು. ನಾನು ನಿಮ್ಮ ಬಳಿಗೆ ಬಂದಿದ್ದಾಗ ಬಲಹೀನನಾಗಿದ್ದೆನು; ಭಯದಿಂದ ನಡುಗುತ್ತಿದ್ದೆನು. ನನ್ನ ಉಪದೇಶವಾಗಲಿ ಮಾತುಕತೆಯಾಗಲಿ ಜನರನ್ನು ಒತ್ತಾಯಿಸುವಂಥ ಜ್ಞಾನವಾಕ್ಯಗಳನ್ನು ಒಳಗೊಂಡಿರಲಿಲ್ಲ. ಆದರೆ ಪವಿತ್ರಾತ್ಮನು ಕೊಡುವ ಶಕ್ತಿಯೇ ನನ್ನ ಉಪದೇಶಕ್ಕೆ ಆಧಾರವಾಗಿತ್ತು. ನಿಮ್ಮ ನಂಬಿಕೆಯು ಮನುಷ್ಯನ ಜ್ಞಾನದ ಮೇಲೆ ಆಧಾರಗೊಂಡಿರದೆ ದೇವರ ಶಕ್ತಿಯ ಮೇಲೆ ಆಧಾರಗೊಂಡಿರಬೇಕೆಂದು ನಾನು ಹೀಗೆ ಮಾಡಿದೆನು.

ದೇವರ ಜ್ಞಾನ

ಪರಿಣತರಾದ ಜನರಿಗೆ ನಾವು ಜ್ಞಾನವನ್ನೇ ಉಪದೇಶಿಸುತ್ತೇವೆ. ಇದು ಇಹಲೋಕದ ಜ್ಞಾನವೂ ಅಲ್ಲ. ಅಧಿಪತಿಗಳ ಜ್ಞಾನವೂ ಅಲ್ಲ. ಈ ಲೋಕದ ಅಧಿಪತಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವವರಾಗಿದ್ದಾರೆ. ನಾವಾದರೋ ದೇವರ ರಹಸ್ಯವಾದ ಜ್ಞಾನವನ್ನೇ ಹೇಳುತ್ತೇವೆ. ಈ ಜ್ಞಾನವನ್ನು ಜನರಿಗೆ ಮರೆಮಾಡಲಾಗಿದೆ. ದೇವರು ನಮ್ಮ ಮಹಿಮೆಗಾಗಿ ಈ ಜ್ಞಾನವನ್ನು ಲೋಕವು ಆರಂಭವಾಗುವುದಕ್ಕಿಂತ ಮೊದಲೇ ಯೋಜಿಸಿದ್ದನು. ಈ ಲೋಕದ ಯಾವ ಅಧಿಪತಿಗಳೂ ಈ ಜ್ಞಾನವನ್ನು ಅರ್ಥಮಾಡಿಕೊಳ್ಳಲಿಲ್ಲ. ಅವರು ಅರ್ಥಮಾಡಿಕೊಂಡಿದ್ದರೆ, ಮಹಿಮೆಯುಳ್ಳ ಪ್ರಭುವನ್ನು ಶಿಲುಬೆಗೇರಿಸುತ್ತಿರಲಿಲ್ಲ. ಪವಿತ್ರಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:

“ದೇವರು ತನ್ನನ್ನು ಪ್ರೀತಿಸುವ ಜನರಿಗೆ ಸಿದ್ಧಪಡಿಸಿರುವುದನ್ನು
    ಯಾವ ಕಣ್ಣೂ ಕಾಣಲಿಲ್ಲ.
ಯಾವ ಕಿವಿಯೂ ಕೇಳಲಿಲ್ಲ.
    ಯಾವ ವ್ಯಕ್ತಿಯೂ ಊಹಿಸಿಕೊಳ್ಳಲಿಲ್ಲ.”(A)

10 ಆದರೆ ದೇವರು ತನ್ನ ಪವಿತ್ರಾತ್ಮನ ಮೂಲಕ ನಮಗೆ ಈ ಸಂಗತಿಗಳನ್ನು ಪ್ರಕಟಿಸಿದನು.

ಪವಿತ್ರಾತ್ಮನು ಸಕಲವನ್ನೂ ದೇವರ ಅಗಾಧವಾದ ರಹಸ್ಯಗಳನ್ನೂ ತಿಳಿದಿದ್ದಾನೆ. 11 ಇದು ಹೇಗೆಂದರೆ: ಒಬ್ಬನ ಆಲೋಚನೆಗಳು ಅವನ ಆಂತರ್ಯದಲ್ಲಿರುವ ಜೀವಾತ್ಮವೊಂದಕ್ಕೆ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ. ಅಂತೆಯೇ, ದೇವರ ಆಲೋಚನೆಗಳು ದೇವರಾತ್ಮನ ಹೊರತು ಬೇರೆ ಯಾರಿಗೂ ತಿಳಿದಿರುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International