Revised Common Lectionary (Semicontinuous)
105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
2 ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
3 ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
ಯೆಹೋವನ ಆರಾಧಕರೇ, ಸಂತೋಷಪಡಿರಿ.
4 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
5 ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
6 ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
7 ಯೆಹೋವನೇ ನಮ್ಮ ದೇವರು.
ಆತನು ಇಡೀ ಪ್ರಪಂಚವನ್ನು ಆಳುವನು.[a]
8 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
9 ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.
37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
ಅರಣ್ಯದಲ್ಲಿ ನದಿಯು ಹರಿಯತೊಡಗಿತು!
42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.
ಯೆಹೋವನನ್ನು ಕೊಂಡಾಡಿರಿ.
ಅಬ್ರಹಾಮನೇ, ನಿನ್ನ ಮಗನನ್ನು ಯಜ್ಞವಾಗಿ ಅರ್ಪಿಸು
22 ಇವುಗಳಾದ ಮೇಲೆ, ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಲು ನಿರ್ಧರಿಸಿ, “ಅಬ್ರಹಾಮನೇ!” ಎಂದು ಕರೆದನು.
ಅಬ್ರಹಾಮನು, “ಇಗೋ ಇದ್ದೇನೆ” ಅಂದನು.
2 ಆಗ ದೇವರು ಅವನಿಗೆ, “ನಿನಗೆ ಪ್ರಿಯನಾಗಿರುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಮೊರೀಯ ದೇಶಕ್ಕೆ ಕರೆದುಕೊಂಡು ಹೋಗು. ನಾನು ನಿನಗೆ ತಿಳಿಸುವ ಬೆಟ್ಟದ ಮೇಲೆ ಅವನನ್ನು ಯಜ್ಞವನ್ನಾಗಿ ಅರ್ಪಿಸು” ಎಂದು ಹೇಳಿದನು.
3 ಮುಂಜಾನೆ ಅಬ್ರಹಾಮನು ಎದ್ದು ಕತ್ತೆಗೆ ತಡಿ ಹಾಕಿಸಿದನು; ಇಸಾಕನನ್ನೂ ಅವನೊಂದಿಗೆ ಇಬ್ಬರು ಸೇವಕರನ್ನೂ ಕರೆದುಕೊಂಡನು; ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದುಕೊಂಡನು. ಬಳಿಕ ದೇವರು ಹೇಳಿದ್ದ ಸ್ಥಳಕ್ಕೆ ಅವರು ಹೊರಟರು. 4 ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಅಬ್ರಹಾಮನು ದೃಷ್ಟಿಸಿ ನೋಡಿದಾಗ ತಾವು ಹೋಗಲಿದ್ದ ಸ್ಥಳವು ದೂರದಲ್ಲಿ ಅವನಿಗೆ ಕಾಣಿಸಿತು. 5 ಆಮೇಲೆ ಅಬ್ರಹಾಮನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯೊಂದಿಗಿರಿ; ನಾನೂ ನನ್ನ ಮಗನೂ ಆ ಸ್ಥಳಕ್ಕೆ ಹೋಗಿ ಆರಾಧಿಸುತ್ತೇವೆ. ಬಳಿಕ ನಾವು ಹಿಂತಿರುಗಿ ನಿಮ್ಮ ಬಳಿಗೆ ಬರುತ್ತೇವೆ” ಎಂದು ಹೇಳಿದನು.
6 ಅಬ್ರಹಾಮನು ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದು ತನ್ನ ಮಗನ ಭುಜದ ಮೇಲೆ ಹೊರಿಸಿದನು. ಅಬ್ರಹಾಮನು ವಿಶೇಷವಾದ ಕತ್ತಿಯನ್ನು ಮತ್ತು ಬೆಂಕಿಯನ್ನು ತೆಗೆದುಕೊಂಡನು. ಅವರಿಬ್ಬರೂ ಆರಾಧಿಸುವುದಕ್ಕಾಗಿ ಆ ಸ್ಥಳಕ್ಕೆ ಹೊರಟರು.
7 ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆದನು.
ಅಬ್ರಹಾಮನು, “ಏನು ಮಗನೇ?” ಎಂದು ಉತ್ತರಿಸಿದನು.
ಇಸಾಕನು, “ಕಟ್ಟಿಗೆ ಮತ್ತು ಬೆಂಕಿ ನನಗೆ ಕಾಣಿಸುತ್ತಿವೆ. ಆದರೆ ಯಜ್ಞಕ್ಕೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದನು.
8 ಅಬ್ರಹಾಮನು, “ಮಗನೇ, ಯಜ್ಞಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದು ಹೇಳಿದನು.
ಹೀಗೆ ಅಬ್ರಹಾಮನು ಮತ್ತು ಅವನ ಮಗನು ಆ ಸ್ಥಳಕ್ಕೆ ಹೊರಟು 9 ದೇವರು ತಿಳಿಸಿದ್ದ ಸ್ಥಳಕ್ಕೆ ಬಂದರು. ಅಲ್ಲಿ ಅಬ್ರಹಾಮನು ಒಂದು ಯಜ್ಞವೇದಿಕೆಯನ್ನು ಕಟ್ಟಿ ಅದರ ಮೇಲೆ ಕಟ್ಟಿಗೆಯನ್ನು ಜೋಡಿಸಿದನು; ಆಮೇಲೆ ಅವನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಕೆಯ ಮೇಲಿದ್ದ ಕಟ್ಟಿಗೆಯ ಮೇಲೆ ಮಲಗಿಸಿದನು. 10 ಬಳಿಕ ಅವನು ತನ್ನ ಮಗನನ್ನು ವಧಿಸಲು ಕತ್ತಿಯನ್ನು ಮೇಲೆತ್ತಲು.
11 ಯೆಹೋವನ ದೂತನು ಪರಲೋಕದಿಂದ, “ಅಬ್ರಹಾಮನೇ, ಅಬ್ರಹಾಮನೇ!” ಎಂದು ಕರೆದನು.
ಅಬ್ರಹಾಮನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.
12 ಯೆಹೋವನ ದೂತನು, “ನಿನ್ನ ಮಗನನ್ನು ವಧಿಸಬೇಡ. ಅವನಿಗೆ ನೋವು ಮಾಡಬೇಡ. ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೂ ಹಿಂಜರಿಯಲಿಲ್ಲ; ಆದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ತೋರಿಬಂದಿದೆ” ಎಂದು ಹೇಳಿದನು.
13 ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ಒಂದು ಟಗರನ್ನು ಕಂಡನು. ಆ ಟಗರಿನ ಕೊಂಬುಗಳು ಒಂದು ಪೊದೆಗೆ ಸಿಕ್ಕಿಕೊಂಡಿದ್ದವು. ಕೂಡಲೇ ಅವನು ಹೋಗಿ, ಆ ಟಗರನ್ನು ಎಳೆದುಕೊಂಡು ಬಂದು ದೇವರಿಗೆ ತನ್ನ ಮಗನ ಬದಲಾಗಿ ಯಜ್ಞವಾಗಿ ಅರ್ಪಿಸಿದನು. 14 ಅಲ್ಲದೆ ಆ ಸ್ಥಳಕ್ಕೆ “ಯೆಹೋವ ಯೀರೆ” ಎಂದು ಹೆಸರಿಟ್ಟನು. ಇಂದಿಗೂ ಜನರು, “ಯೆಹೋವನ ಬೆಟ್ಟದಲ್ಲಿ ಒದಗಿಸಲ್ಪಡುವುದು” ಎಂದು ಹೇಳುತ್ತಾರೆ.
15 ಯೆಹೋವನ ದೂತನು ಆಕಾಶದಿಂದ ಅಬ್ರಹಾಮನನ್ನು ಎರಡನೆ ಸಲ ಕರೆದು ಅವನಿಗೆ, 16 “ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ವಧಿಸಲು ಸಿದ್ಧನಾಗಿದ್ದೆ. ಆದ್ದರಿಂದ ನಾನು ನಿನಗೆ ಈ ವಾಗ್ದಾನವನ್ನು ಮಾಡುತ್ತೇನೆ: 17 ನಾನು ನಿನ್ನನ್ನು ಖಂಡಿತವಾಗಿಯೂ ಆಶೀರ್ವದಿಸುವೆನು; ನಿನ್ನ ಸಂತತಿಯನ್ನು ಖಂಡಿತವಾಗಿಯೂ ಹೆಚ್ಚಿಸುವೆನು; ನಿನ್ನ ಸಂತತಿಯವರನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಮರಳಿನಂತೆಯೂ ಅಸಂಖ್ಯಾತರನ್ನಾಗಿ ಮಾಡುವೆನು. ಅವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು. 18 ನೀನು ನನಗೆ ವಿಧೇಯನಾದದ್ದರಿಂದ ನಿನ್ನ ಸಂತತಿಗಳವರ ಮೂಲಕವಾಗಿ ಭೂಮಿಯ ಮೇಲಿರುವ ಪ್ರತಿಯೊಂದು ಜನಾಂಗವೂ ಆಶೀರ್ವಾದ ಹೊಂದುವುದು” ಎಂದು ಹೇಳಿದನು.
19 ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂತಿರುಗಿ ಹೋದನು. ಅವರೆಲ್ಲರೂ ಬೇರ್ಷೆಬಕ್ಕೆ ಮರಳಿ ಪ್ರಯಾಣ ಮಾಡಿದರು. ಬಳಿಕ ಅಬ್ರಹಾಮನು ಅಲ್ಲೇ ವಾಸಿಸಿದನು.
ನಂಬಿಕೆ
11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. 2 ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.
3 ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.
13 ಈ ಮಹಾಪುರಷರೆಲ್ಲರೂ ತಾವು ಸಾಯುವವರೆಗೂ ನಂಬಿಕೆಯುಳ್ಳವರಾಗಿದ್ದರು. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದ್ದವುಗಳನ್ನು ಆ ಜನರು ಪಡೆಯಲಿಲ್ಲ. ಮುಂದೆ ಬಹುಕಾಲದ ನಂತರ ಬರಲಿದ್ದ ಅವುಗಳನ್ನು ನೋಡಿ ಅವರು ಸಂತೋಷಗೊಂಡರು. ಅವರು ತಾವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಅಪರಿಚಿತರಂತೆ ಇದ್ದೇವೆ ಎಂಬುದನ್ನು ಒಪ್ಪಿಕೊಂಡರು. 14 ಅವರು ಹಾಗೆ ಒಪ್ಪಿಕೊಂಡಿದ್ದರಿಂದ ತಾವು ಸ್ವದೇಶಕ್ಕಾಗಿ ಕಾದಿರುವುದಾಗಿ ತೋರ್ಪಡಿಸಿಕೊಂಡಂತಾಯಿತು. 15 ಆ ಜನರು ತಾವು ಬಿಟ್ಟುಬಂದ ದೇಶದ ಮೇಲೇನಾದರೂ ಮನಸ್ಸಿಟ್ಟಿದ್ದರೆ, ಅವರು ಮರಳಿಹೋಗುತ್ತಿದ್ದರು. 16 ಆದರೆ ಆ ಜನರು ಉತ್ತಮ ದೇಶವಾದ ಪರಲೋಕಕ್ಕಾಗಿ ಕಾದಿದ್ದರು. ಆದ್ದರಿಂದ ದೇವರು ತನ್ನನ್ನು ಅವರ ದೇವರೆಂದು ಹೇಳಿಕೊಳ್ಳಲು ನಾಚಿಕೆಪಡದೆ ಅವರಿಗಾಗಿ ಒಂದು ನಗರವನ್ನು ಸಿದ್ಧಪಡಿಸಿದನು.
17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.
Kannada Holy Bible: Easy-to-Read Version. All rights reserved. © 1997 Bible League International