Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 77

ರಚನೆಗಾರ: ಆಸಾಫ.

77 ನಾನು ಸ್ವರವೆತ್ತಿ ದೇವರಿಗೆ ಮೊರೆಯಿಡುವೆನು.
    ದೇವರೇ, ಸ್ವರವೆತ್ತಿ ಮೊರೆಯಿಡುವೆನು, ನನಗೆ ಕಿವಿಗೊಡು.
ನನ್ನ ಯೆಹೋವನೇ, ಇಕ್ಕಟ್ಟಿನಲ್ಲಿ ನಿನ್ನನ್ನು ಕರೆದೆನು;
    ರಾತ್ರಿಯೆಲ್ಲಾ ನಿನಗಾಗಿ ಕೈಚಾಚಿಕೊಂಡಿದ್ದೆನು.
    ಆದರೆ ನನ್ನ ಮನಸ್ಸು ಸಮಾಧಾನಗೊಳ್ಳಲಿಲ್ಲ.
ನಾನು ದೇವರನ್ನೇ ಧ್ಯಾನಿಸುತ್ತಾ ನನ್ನ ವ್ಯಥೆಯನ್ನು ಹೇಳಿಕೊಳ್ಳಬಯಸಿದೆ.
    ಆದರೂ ನನ್ನಿಂದಾಗಲಿಲ್ಲ.
ನೀನು ನನಗೆ ನಿದ್ರೆಮಾಡಗೊಡಿಸಲಿಲ್ಲ.
    ನಾನು ಬಹು ಗಲಿಬಿಲಿಗೊಂಡಿದ್ದರಿಂದ ನಿನ್ನೊಂದಿಗೆ ಮಾತಾಡಲಾಗಲಿಲ್ಲ.
ಹಿಂದಿನಕಾಲದ ಬಗ್ಗೆ ಯೋಚಿಸತೊಡಗಿದೆನು.
    ಬಹುಕಾಲದ ಹಿಂದೆ ನಡೆದ ಸಂಗತಿಗಳ ಬಗ್ಗೆ ಯೋಚಿಸತೊಡಗಿದೆನು.
ರಾತ್ರಿಯಲ್ಲಿ, ನಾನು ಮಾಡುತ್ತಿದ್ದ ಗಾನವನ್ನು ನೆನಸಿಕೊಳ್ಳುವೆನು;
    ಆಂತರ್ಯದಲ್ಲಿ ಮಾತಾಡುತ್ತಾ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವೆನು.
ನಾನು ಆಶ್ಚರ್ಯದಿಂದ ಹೀಗೆಂದುಕೊಳ್ಳುವೆನು:
    “ನಮ್ಮ ಯೆಹೋವನು ನಮ್ಮನ್ನು ಶಾಶ್ವತವಾಗಿ ಕೈಬಿಟ್ಟಿರುವನೇ?
    ಆತನು ನಮ್ಮನ್ನು ಮತ್ತೆಂದಾದರೂ ಅಪೇಕ್ಷಿಸುವನೇ?
ದೇವರ ಕೃಪಾವಾತ್ಸಲ್ಯವು ಎಂದೆಂದಿಗೂ ನಿಂತುಹೋಯಿತೇ?
    ಆತನು ನಮ್ಮೊಂದಿಗೆ ಮತ್ತೆಂದೂ ಮಾತಾಡುವುದಿಲ್ಲವೇ?
ದೇವರು ಕರುಣೆಯನ್ನು ಮರೆತುಬಿಟ್ಟಿರುವನೇ?
    ಆತನ ಕನಿಕರವು ಬದಲಾವಣೆ ಹೊಂದಿ ಕೋಪವಾಗಿರುವುದೇ?”

10 ಬಳಿಕ ನಾನು ಹೀಗೆ ಆಲೋಚಿಸಿಕೊಂಡೆ: “ಮಹೋನ್ನತವಾದ ದೇವರು ತನ್ನ ಶಕ್ತಿಯನ್ನು ಕಳೆದುಕೊಂಡನೇ?”
    ಎಂಬುದೇ ನನ್ನನ್ನು ಕಾಡಿಸುವ ಪ್ರಶ್ನೆ.

11 ಯೆಹೋವನೇ, ನಿನ್ನ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
    ಬಹುಕಾಲದ ಹಿಂದೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳುವೆನು.
12 ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು;
    ನಿನ್ನ ಕಾರ್ಯಗಳ ಕುರಿತಾಗಿ ಆಲೋಚಿಸುವೆನು.
13 ದೇವರೇ, ನಿನ್ನ ಮಾರ್ಗಗಳು ಪರಿಶುದ್ಧವಾಗಿವೆ.
    ದೇವರೇ, ನಿನ್ನಂತೆ ಮಹತ್ವವುಳ್ಳವರು ಬೇರೆ ಯಾರೂ ಇಲ್ಲ.
14 ಅದ್ಭುತಕಾರ್ಯಗಳನ್ನು ಮಾಡಿದ ದೇವರು ನೀನೇ.
    ನೀನು ಜನರಿಗೆ ನಿನ್ನ ಮಹಾಶಕ್ತಿಯನ್ನು ತೋರಿಸಿದೆ.
15 ನೀನು ನಿನ್ನ ಶಕ್ತಿಯಿಂದ ನಿನ್ನ ಜನರನ್ನು ರಕ್ಷಿಸಿದೆ.
    ಯಾಕೋಬನ ಮತ್ತು ಯೋಸೇಫನ ಸಂತತಿಯವರನ್ನು ನೀನು ರಕ್ಷಿಸಿದೆ.

16 ದೇವರೇ, ನಿನ್ನನ್ನು ಕಂಡು ಜಲರಾಶಿಗಳು ಭಯಗೊಂಡವು.
    ಆಳವಾದ ಜಲರಾಶಿಗಳು ಭಯದಿಂದ ನಡುಗಿದವು.
17 ದಟ್ಟವಾದ ಕಪ್ಪುಮೋಡಗಳು ಮಳೆಗರೆದವು.
    ಜನರಿಗೆ ಮೇಘಮಂಡಲದಿಂದ ಗುಡುಗು ಕೇಳಿಸಿತು.
    ನಿನ್ನ ಮಿಂಚಿನ ಬಾಣಗಳು ಆ ಮೋಡಗಳಲ್ಲಿ ಹಾರಿದವು.
18 ಬಿರುಗಾಳಿಯಲ್ಲಿ ನಿನ್ನ ಗುಡುಗು ಕೇಳಿಸಿತು.
    ಮಿಂಚುಗಳು ಭೂಮಂಡಲವನ್ನು ಬೆಳಗಿಸಿದವು.
    ಭೂಮಿಯು ಅಲ್ಲಾಡಿ ಕಂಪಿಸಿತು.
19 ನೀನು ಸಮುದ್ರದಲ್ಲಿ ಮಾರ್ಗಮಾಡಿದೆ;
    ಆಳವಾದ ಜಲರಾಶಿಗಳನ್ನು ದಾಟಿದೆ.
    ಆದರೆ ನಿನ್ನ ಹೆಜ್ಜೆಯ ಗುರುತು ಕಾಣಲೇ ಇಲ್ಲ.
20 ಕುರುಬನು ಕುರಿಹಿಂಡನ್ನು ಕರೆದೊಯ್ಯುವಂತೆ
    ನಿನ್ನ ಜನರನ್ನು ಕರೆದೊಯ್ಯಲು ಮೋಶೆಯನ್ನೂ ಆರೋನನನ್ನೂ ಉಪಯೋಗಿಸಿದೆ.

ಯೋಬನು 5:8-27

ಯೋಬನೇ, ನಾನೇನಾದರೂ ನಿನ್ನ ಸ್ಥಿತಿಯಲ್ಲಿದ್ದಿದ್ದರೆ,
    ದೇವರನ್ನೇ ಆಶ್ರಯಿಸಿಕೊಂಡು ನನ್ನ ಕಷ್ಟವನ್ನು ಆತನಿಗೆ ಹೇಳಿಕೊಳ್ಳುತ್ತಿದ್ದೆನು.
ದೇವರ ಅದ್ಭುತಕಾರ್ಯಗಳು ಗ್ರಹಿಸಲಶಕ್ಯ.
    ಆತನ ಮಹತ್ಕಾರ್ಯಗಳು ಅಸಂಖ್ಯಾತ.
10 ದೇವರು ಭೂಮಿಯ ಮೇಲೆ ಮಳೆ ಸುರಿಸಿ
    ಹೊಲಗದ್ದೆಗಳಿಗೆ ನೀರನ್ನು ಒದಗಿಸುವನು.
11 ದೇವರು ಹೀನಸ್ಥಿತಿಯಲ್ಲಿರುವವರನ್ನು ಉನ್ನತಸ್ಥಿತಿಗೆ ಏರಿಸುವನು.
    ವ್ಯಥೆಯಿಂದಿರುವವರನ್ನು ಸಂತೋಷಗೊಳಿಸುವನು.
12 ದೇವರು ಯುಕ್ತಿವಂತರ ಕುತಂತ್ರಗಳನ್ನು ವಿಫಲಗೊಳಿಸಿ
    ಭಂಗಪಡಿಸುವನು.
13 ದೇವರು ಜ್ಞಾನಿಗಳನ್ನು ಅವರ ತಂತ್ರಗಳಲ್ಲೇ ಹಿಡಿದುಕೊಳ್ಳುವನು;
    ಮೋಸಗಾರರ ಆಲೋಚನೆಗಳನ್ನು ವಿಫಲಗೊಳಿಸುವನು.
14 ಯುಕ್ತಿವಂತರು ಹಗಲಿನಲ್ಲೂ ಕತ್ತಲೆಗೆ ಓಡಿಹೋಗುವರು;
    ನಡುಮಧ್ಯಾಹ್ನದಲ್ಲಿ ಕತ್ತಲೆಯಲ್ಲೋ ಎಂಬಂತೆ ಮುಗ್ಗರಿಸುವರು.
15 ದೇವರು ಬಡವರನ್ನು ದುಷ್ಟರ ನಿಂದನೆಯಿಂದಲೂ
    ಬಲಿಷ್ಠರ ಕೈಯಿಂದಲೂ ಕಾಪಾಡುವನು.
16 ಹೀಗೆ ಬಡವನಿಗೆ ನಿರೀಕ್ಷೆ ಉಂಟಾಗುವುದು.
    ಅನ್ಯಾಯವು ತನ್ನ ಬಾಯನ್ನು ಮುಚ್ಚಿಕೊಳ್ಳುವುದು.

17 “ಇಗೋ ದೇವರು ಯಾವನನ್ನು ಶಿಕ್ಷಿಸುವನೋ ಅವನೇ ಭಾಗ್ಯವಂತನು.
    ಆದ್ದರಿಂದ ಸರ್ವಶಕ್ತನಾದ ದೇವರು ನಿನ್ನನ್ನು ಶಿಕ್ಷಿಸುವಾಗ ದೂರು ಹೇಳಬೇಡ.”
18 ಗಾಯ ಮಾಡುವವನೂ ಗಾಯ ಕಟ್ಟುವವನೂ ಆತನೇ.
    ಆತನು ಗಾಯಮಾಡಿದರೂ ಆತನ ಕೈಗಳೇ ವಾಸಿಮಾಡುತ್ತವೆ.
19 ಆತನು ನಿನ್ನನ್ನು ಆರು ಆಪತ್ತುಗಳಿಂದ ರಕ್ಷಿಸುವನು;
    ಹೌದು, ಏಳನೆಯ ಆಪತ್ತಿನಿಂದಲೂ ನಿನಗೆ ಕೇಡಾಗದು.
20 ಬರಗಾಲದಲ್ಲಿ ಮರಣದಿಂದಲೂ
    ಯುದ್ಧದಲ್ಲಿ ಕತ್ತಿಯಿಂದಲೂ
    ಆತನು ನಿನ್ನನ್ನು ಸಂರಕ್ಷಿಸುವನು.
21 ದೇವರು ನಿನ್ನನ್ನು ನಿಂದನೆಯಿಂದ ತಪ್ಪಿಸುವನು.
    ನಾಶನದಲ್ಲಿಯೂ ನೀನು ಭಯಪಡುವ ಅಗತ್ಯವಿಲ್ಲ!
22 ನಾಶನಕ್ಕೂ ಬರಗಾಲಕ್ಕೂ ನೀನು ನಗುವೆ.
    ನೀನು ಕ್ರೂರಪ್ರಾಣಿಗಳಿಗೆ ಭಯಪಡುವ ಅಗತ್ಯವಿಲ್ಲ!
23 ನೀನು ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವೆ;
    ಕಾಡುಮೃಗಗಳೂ ನಿನ್ನೊಂದಿಗೆ ಸಮಾಧಾನದಿಂದಿರುತ್ತವೆ.
24 ನಿನ್ನ ಗುಡಾರವು ಸುರಕ್ಷಿತವಾಗಿರುವುದರಿಂದ ನೀನು ಸಮಾಧಾನದಿಂದ ಜೀವಿಸುವೆ.
    ನೀನು ನಿನ್ನ ಆಸ್ತಿಯನ್ನು ಲೆಕ್ಕಿಸುವಾಗ ಯಾವುದೂ ಕಳೆದುಹೋಗಿರುವುದಿಲ್ಲ.
25 ನೀನು ಅನೇಕ ಮಕ್ಕಳನ್ನು ಪಡೆದುಕೊಳ್ಳುವೆ.
    ಅವರು ಭೂಮಿಯ ಮೇಲಿರುವ ಹುಲ್ಲಿನ ಗರಿಗಳಷ್ಟಿರುವರು.
26 ಸುಗ್ಗಿಕಾಲದವರೆಗೂ ಬೆಳೆದು ಬಲಿಯುವ ಗೋಧಿಯಂತೆ ನೀನಿರುವೆ.
    ಹೌದು, ನೀನು ವೃದ್ಧಾಪ್ಯದ ಕೊನೆಯವರೆಗೂ ಜೀವಿಸುವೆ.

27 “ಯೋಬನೇ, ನಾವು ಈ ಸಂಗತಿಗಳನ್ನು ವಿಚಾರಿಸಿದ್ದೇವೆ; ಅವು ಸತ್ಯವೆಂದು ನಮಗೆ ತಿಳಿದಿದೆ.
    ಆದ್ದರಿಂದ ನೀನು ಸಹ ಕಿವಿಗೊಟ್ಟು ಅವುಗಳನ್ನು ತಿಳಿದುಕೊ.”

1 ಪೇತ್ರನು 3:8-18

ಒಳ್ಳೆಯದರ ನಿಮಿತ್ತ ಉಂಟಾಗುವ ಸಂಕಟ

ಆದ್ದರಿಂದ ನೀವೆಲ್ಲರೂ ಒಟ್ಟಾಗಿ ಶಾಂತಿಯಿಂದ ಬಾಳಿರಿ; ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಒಬ್ಬರನ್ನೊಬ್ಬರು ಸಹೋದರರಂತೆ ಪ್ರೀತಿಸಿರಿ. ದಯೆ ತೋರುವವರೂ ಮತ್ತು ದೀನತೆ ಉಳ್ಳವರೂ ಆಗಿರಿ. ಅಪಕಾರ ಮಾಡಿದವನಿಗೆ ಅಪಕಾರ ಮಾಡದೆ, ನಿಂದಿಸಿದವನನ್ನು ನಿಂದಿಸದೆ, ಅವನನ್ನು ಆಶೀರ್ವದಿಸುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ಏಕೆಂದರೆ ಆಶೀರ್ವಾದವನ್ನು ಹೊಂದಿಕೊಳ್ಳಲು ನೀವು ಕರೆಯಲ್ಪಟ್ಟವರಾಗಿದ್ದೀರಿ. 10 ಪವಿತ್ರ ಗ್ರಂಥವು ಹೇಳುವುದೇನೆಂದರೆ,

“ಈ ಜೀವಿತದಲ್ಲಿ ಸಂತೋಷಿಸುತ್ತಾ
    ಸುದಿನಗಳನ್ನು ನೋಡಲು ಅಪೇಕ್ಷಿಸುವವನು
ಕೆಟ್ಟ ಮಾತುಗಳನ್ನಾಡದಿರಲಿ;
    ಸುಳ್ಳನ್ನು ನುಡಿಯದಿರಲಿ.
11 ಅವನು ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಲಿ.
    ಅವನು ಶಾಂತಿಯನ್ನು ಎದುರುನೋಡುತ್ತಾ ಅದನ್ನು ಪಡೆಯಲು ಪ್ರಯತ್ನಿಸಲಿ.
12 ನೀತಿವಂತರನ್ನು ಪ್ರಭುವು ಕಾಯುತ್ತಾನೆ;
    ಅವರ ಪ್ರಾರ್ಥನೆಗಳನ್ನು ಆಲಿಸುತ್ತಾನೆ.
ಆದರೆ ಕೆಟ್ಟದ್ದನ್ನು ಮಾಡುವ ಜನರನ್ನು ಪ್ರಭುವು ವಿರೋಧಿಸುತ್ತಾನೆ.”(A)

13 ನೀವು ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದರೆ, ಯಾರೂ ನಿಮಗೆ ಕೇಡು ಮಾಡುವುದಿಲ್ಲ. 14 ಆದರೆ ಯೋಗ್ಯವಾದುದನ್ನು ಮಾಡುವಾಗ ನೀವು ಸಂಕಟಪಡಬೇಕಾಗಬಹುದು. ಆದರೆ “ನಿಮ್ಮನ್ನು ಸಂಕಟಕ್ಕೆ ಒಳಪಡಿಸುವ ಜನರಿಗೆ ಹೆದರಬೇಡಿರಿ ಮತ್ತು ಚಿಂತಿಸಬೇಡಿರಿ.”(B) 15 ನಿಮ್ಮ ಹೃದಯಗಳಲ್ಲಿ ಕ್ರಿಸ್ತನೇ ಪ್ರಭುವಾಗಿರಲಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ನಿಮ್ಮನ್ನು ಕೇಳುವ ಪ್ರತಿಯೊಬ್ಬರಿಗೂ ಉತ್ತರ ಹೇಳಲು ಯಾವಾಗಲೂ ಸಿದ್ಧವಾಗಿರಿ. 16 ಆದರೆ ಸಾತ್ವಿಕತೆಯಿಂದ ಗೌರವಕರವಾದ ರೀತಿಯಲ್ಲಿ ಅವರಿಗೆ ಉತ್ತರವನ್ನು ಹೇಳಿ. ನೀವು ಮಾಡುತ್ತಿರುವುದು ಯೋಗ್ಯವಾದದ್ದೆಂಬುದು ನಿಮಗೆ ಯಾವಾಗಲೂ ಖಚಿತವಾಗಿ ತಿಳಿದಿರಬೇಕು. ಆಗ, ನೀವು ಕ್ರಿಸ್ತನಲ್ಲಿ ಒಳ್ಳೆಯವರಾಗಿ ಜೀವಿಸುವುದನ್ನು ನೋಡಿ ನಿಮ್ಮ ಬಗ್ಗೆ ಕೆಟ್ಟಮಾತುಗಳನ್ನು ಹೇಳುವವರು ತಾವು ಹೇಳಿದ ಕೆಟ್ಟ ಸಂಗತಿಗಳಿಗಾಗಿ ನಾಚಿಕೆಪಡುವರು.

17 ಕೆಟ್ಟದ್ದನ್ನು ಮಾಡಿ ಸಂಕಟ ಪಡುವುದಕ್ಕಿಂತ ಒಳ್ಳೆಯದನ್ನು ಮಾಡಿ ಸಂಕಟಪಡುವುದು ಉತ್ತಮ. ಹೌದು, ಅದು ದೇವರ ಅಪೇಕ್ಷೆಯಾಗಿದ್ದರೆ ಅದೇ ಒಳ್ಳೆಯದು.

18 ನಿಮ್ಮ ಪಾಪಗಳಿಗಾಗಿ ಕ್ರಿಸ್ತನು ಒಂದೇಸಾರಿ
    ಬಾಧೆ ಅನುಭವಿಸಿ ಸತ್ತನು.
ನೀತಿವಂತನಾಗಿದ್ದ ಆತನು
    ಅಪರಾಧಿಗಳಿಗಾಗಿ ಪ್ರಾಣಕೊಟ್ಟನು.
    ನಿಮ್ಮೆಲ್ಲರನ್ನು ದೇವರ ಬಳಿಗೆ ನಡೆಸುವುದಕ್ಕಾಗಿ ಆತನು ಹೀಗೆ ಮಾಡಿದನು.
ಆತನ ದೇಹವು ಕೊಲ್ಲಲ್ಪಟ್ಟಿತು,
    ಆದರೆ ಆತನು ಆತ್ಮಸಂಬಂಧದಲ್ಲಿ ಮತ್ತೆ ಜೀವಂತನಾದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International