Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 102:12-28

12 ಯೆಹೋವನೇ, ನೀನಾದರೋ ಎಂದೆಂದಿಗೂ ಜೀವಿಸುವೆ!
    ನಿನ್ನ ಹೆಸರು ಶಾಶ್ವತವಾದದ್ದು!
13 ನೀನು ಎದ್ದು ಚೀಯೋನನ್ನು ಸಂತೈಸುವೆ.
    ನೀನು ಚೀಯೋನಿಗೆ ದಯೆತೋರುವ ಕಾಲ ಬರುತ್ತಿದೆ.
14 ನಿನ್ನ ಸೇವಕರು ಆಕೆಯ (ಜೆರುಸಲೇಮಿನ) ಕಲ್ಲುಗಳನ್ನು ಪ್ರೀತಿಸುವರು.
    ಅವರು ಆ ಪಟ್ಟಣದ ಧೂಳನ್ನು ಇಷ್ಟಪಡುವರು!
15 ಜನರು ಯೆಹೋವನ ಹೆಸರನ್ನು ಆರಾಧಿಸುತ್ತಾರೆ.
    ದೇವರೇ, ಭೂರಾಜರುಗಳೆಲ್ಲಾ ನಿನ್ನನ್ನು ಸನ್ಮಾನಿಸುವರು.
16 ಯಾಕೆಂದರೆ, ಯೆಹೋವನು ಚೀಯೋನನ್ನು ಮತ್ತೆ ಕಟ್ಟುವನು.
    ಜನಾಂಗಗಳು ಆಕೆಯ (ಜೆರುಸಲೇಮಿನ) ವೈಭವವನ್ನು ಮತ್ತೆ ನೋಡುವರು.
17 ಆತನು ನಿರ್ಗತಿಕರ ಪ್ರಾರ್ಥನೆಗಳಿಗೆ ಉತ್ತರ ಕೊಡುವನು.
    ಅವರ ಮೊರೆಗಳನ್ನು ಆತನು ತಿರಸ್ಕರಿಸುವುದಿಲ್ಲ.
18 ಮುಂದಿನ ತಲೆಮಾರುಗಳವರಿಗಾಗಿ ಇವುಗಳನ್ನು ಬರೆದಿಡಿ.
    ಮುಂದಿನ ಕಾಲದಲ್ಲಿ ಅವರು ಯೆಹೋವನನ್ನು ಸ್ತುತಿಸುತ್ತಾರೆ.
19 ಯೆಹೋವನು ಉನ್ನತದಲ್ಲಿರುವ ತನ್ನ ಪರಿಶುದ್ಧ ಸ್ಥಳದಿಂದ ಕೆಳಗೆ ನೋಡುತ್ತಾನೆ.
    ಆತನು ಪರಲೋಕದಿಂದ ಭೂಮಿಯನ್ನು ನೋಡುತ್ತಾನೆ.
20 ಆತನು ಸೆರೆಯಾಳುಗಳ ಪ್ರಾರ್ಥನೆಗಳನ್ನು ಕೇಳುತ್ತಾನೆ.
    ಮರಣದಂಡನೆಗೆ ಒಳಗಾದವರನ್ನು ಆತನು ಬಿಡಿಸುತ್ತಾನೆ.
21 ಆಗ ಚೀಯೋನಿನಲ್ಲಿರುವ ಜನರು ಯೆಹೋವನ ಕುರಿತು ಪ್ರಕಟಿಸುವರು:
ಅವರು ಆತನ ಹೆಸರನ್ನು ಜೆರುಸಲೇಮಿನಲ್ಲಿ ಸ್ತುತಿಸುವರು.
22     ಜನಾಂಗಗಳು ಒಟ್ಟುಗೂಡಿ ಬರುವವು.
    ರಾಜ್ಯಗಳು ಯೆಹೋವನ ಸೇವೆಮಾಡಲು ಬರುವವು.

23 ನನ್ನ ಬಲವು ಕುಂದಿಹೋಯಿತು.
    ನನ್ನ ಆಯುಷ್ಕಾಲವು ಕಡಿಮೆಯಾಯಿತು.
24 ಆದ್ದರಿಂದ ನಾನು ಇಂತೆಂದೆನು: “ಯೌವನಸ್ಥನಾಗಿರುವಾಗಲೇ ನನ್ನನ್ನು ಸಾಯಿಸಬೇಡ.
    ದೇವರೇ, ನೀನು ಶಾಶ್ವತವಾಗಿ ಜೀವಿಸುವೆ!
25 ಬಹುಕಾಲದ ಹಿಂದೆ, ನೀನು ಪ್ರಪಂಚವನ್ನು ಸೃಷ್ಟಿಮಾಡಿದೆ.
    ನೀನು ಆಕಾಶವನ್ನು ನಿನ್ನ ಕೈಗಳಿಂದ ನಿರ್ಮಿಸಿದೆ!
26 ಲೋಕವೂ ಆಕಾಶವೂ ಕೊನೆಗೊಳುತ್ತವೆ.
    ನೀನಾದರೊ ಶಾಶ್ವತವಾಗಿರುವೆ!
ಅವು ಬಟ್ಟೆಗಳಂತೆ ಹಳೆಯದಾಗುತ್ತವೆ.
    ನೀನು ಅವುಗಳನ್ನು ಉಡುಪುಗಳಂತೆ ಬದಲಾಯಿಸುವೆ.
    ಅವುಗಳೆಲ್ಲಾ ಬದಲಾಗುತ್ತವೆ.
27 ದೇವರೇ, ನೀನಾದರೋ ಎಂದಿಗೂ ಬದಲಾಗುವುದಿಲ್ಲ.
    ನೀನು ಎಂದೆಂದಿಗೂ ಜೀವಿಸುವೆ!
28 ನಾವು ನಿನ್ನ ಸೇವಕರಾಗಿದ್ದೇವೆ.
    ಇಲ್ಲಿ ನಮ್ಮ ಮಕ್ಕಳು ವಾಸವಾಗಿರುತ್ತಾರೆ;
    ಅವರ ಸಂತತಿಗಳವರೂ ನಿನ್ನನ್ನು ಆರಾಧಿಸಲು ಇಲ್ಲಿರುತ್ತಾರೆ.”

2 ರಾಜರುಗಳು 8:1-6

ಶೂನೇಮಿನ ಸ್ತ್ರೀಯ ವಿದೇಶ ಪ್ರಯಾಣ

ಎಲೀಷನು ತಾನು ಮರಳಿ ಜೀವಿಸುವಂತೆ ಮಾಡಿದ ಬಾಲಕನ ತಾಯಿಯೊಂದಿಗೆ ಮಾತನಾಡಿದನು. ಎಲೀಷನು, “ನೀನು ಮತ್ತು ನಿನ್ನ ಕುಟುಂಬವು ಬೇರೆ ದೇಶಕ್ಕೆ ಹೋಗಬೇಕು. ಏಕೆಂದರೆ ಈ ದೇಶದಲ್ಲಿ ಬರಗಾಲವು ಏಳು ವರ್ಷಗಳವರೆಗೆ ಇರಬೇಕೆಂದು ಯೆಹೋವನು ತೀರ್ಮಾನಿಸಿದ್ದಾನೆ” ಎಂದು ಹೇಳಿದನು.

ದೇವಮನುಷ್ಯನು ಹೇಳಿದಂತೆಯೇ ಆ ಸ್ತ್ರೀಯು ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷಗಳ ಕಾಲ ನೆಲೆಸಲು ತನ್ನ ಕುಟುಂಬದೊಂದಿಗೆ ಹೋದಳು. ಏಳು ವರ್ಷಗಳು ಮುಗಿದ ನಂತರ ಆ ಸ್ತ್ರೀಯು ಫಿಲಿಷ್ಟಿಯರ ದೇಶದಿಂದ ಹಿಂದಿರುಗಿ ಬಂದಳು.

ಆ ಸ್ತ್ರೀಯು ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಮತ್ತೆ ಕೊಡಿಸುವಂತೆ ಕೇಳಲು ರಾಜನ ಬಳಿಗೆ ಹೋದಳು.

ಆ ಸಮಯದಲ್ಲಿ ರಾಜನು ದೇವಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡುತ್ತಿದ್ದನು. ರಾಜನು ಗೇಹಜಿಗೆ, “ಎಲೀಷನು ಮಾಡಿರುವ ಮಹತ್ಕಾರ್ಯಗಳೆಲ್ಲವುಗಳನ್ನು ನನಗೆ ದಯವಿಟ್ಟು ತಿಳಿಸು” ಎಂದು ಕೇಳಿದನು.

ಎಲೀಷನು ಸತ್ತಬಾಲಕನಿಗೆ ಮತ್ತೆ ಜೀವವನ್ನು ಬರುವಂತೆ ಮಾಡಿದ್ದರ ಬಗ್ಗೆ ಗೇಹಜಿಯು ರಾಜನಿಗೆ ಹೇಳುತ್ತಿದ್ದನು. ಎಲೀಷನು ಮರಳಿ ಜೀವಬರಿಸಿದ ಬಾಲಕನ ತಾಯಿಯು ಆ ಸಮಯದಲ್ಲಿ ರಾಜನ ಬಳಿಗೆ ಹೋದಳು. ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಕೊಡಿಸಬೇಕೆಂದು ಕೇಳಿಕೊಳ್ಳಲು ಆಕೆ ಬಂದಿದ್ದಳು. ಗೇಹಜಿಯು, “ನನ್ನ ಒಡೆಯನೇ, ರಾಜನೇ, ಇವಳೇ ಆ ಸ್ತ್ರೀಯು! ಎಲೀಷನು ಮರಳಿ ಜೀವಬರಿಸಿದ ಬಾಲಕನು ಇವನೇ!” ಎಂದು ಹೇಳಿದನು.

ರಾಜನು ಆ ಸ್ತ್ರೀಯನ್ನು ಕೇಳಿದಾಗ, ಅವಳು ತನಗೆ ಸಂಭವಿಸಿದ್ದನ್ನು ಮತ್ತು ತನಗಿದ್ದ ಇಚ್ಛೆಯನ್ನು ತಿಳಿಸಿದಳು.

ಆಗ ರಾಜನು ಅವಳಿಗೆ ಸಹಾಯಮಾಡಲು ಒಬ್ಬ ಅಧಿಕಾರಿಯನ್ನು ಕರೆದು, “ಅವಳಿಗೆ ಸೇರಬೇಕಾದ ಆಸ್ತಿಯೆಲ್ಲವನ್ನೂ ಆಕೆಗೆ ಕೊಡಿಸು. ಅವಳು ದೇಶವನ್ನು ಬಿಟ್ಟಂದಿನಿಂದ ಈವರೆಗಿನ ಆಕೆಯ ಭೂಮಿಯ ಉತ್ಪಾದನೆಯನ್ನೂ ಅವಳಿಗೆ ಕೊಡಿಸು” ಎಂದು ಹೇಳಿದನು.

ಅಪೊಸ್ತಲರ ಕಾರ್ಯಗಳು 15:36-41

ಪೌಲ ಬಾರ್ನಬರು ಬೇರ್ಪಡುವರು

36 ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ, “ನಾವು ಅನೇಕ ಪಟ್ಟಣಗಳಲ್ಲಿ ಪ್ರಭುವಿನ ಸಂದೇಶವನ್ನು ತಿಳಿಸಿದೆವು. ಆ ಪಟ್ಟಣಗಳಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ” ಎಂದು ಹೇಳಿದನು.

37 ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಬಾರ್ನಬನ ಇಷ್ಟವಾಗಿತ್ತು. 38 ಆದರೆ ಅವರ ಮೊದಲನೆ ಪ್ರಯಾಣದಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಪಾಂಫೀಲಿಯದ ಬಳಿ ಬಿಟ್ಟುಹೋದನು. ಅವನು ಅವರೊಂದಿಗೆ ಸೇವೆಯಲ್ಲಿ ಮುಂದುವರಿಯಲಿಲ್ಲ. ಆದ್ದರಿಂದ ಅವನನ್ನು ಕರೆದುಕೊಂಡು ಹೋಗುವುದು ಒಳ್ಳೆಯ ಆಲೋಚನೆಯಲ್ಲವೆಂದು ಪೌಲನು ಯೋಚಿಸಿದನು. 39 ಇದರ ಬಗ್ಗೆ ಪೌಲ ಮತ್ತು ಬಾರ್ನಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಅವರಿಬ್ಬರೂ ಬೇರ್ಪಟ್ಟು ಬೇರೆ ಮಾರ್ಗಗಳಲ್ಲಿ ಹೋದರು. ಬಾರ್ನಬನು ಮಾರ್ಕನೊಂದಿಗೆ ಸೈಪ್ರಸ್‌ಗೆ ನೌಕಾಯಾನ ಮಾಡಿದನು.

40 ಪೌಲನು ತನ್ನೊಂದಿಗೆ ಸೀಲನನ್ನು ಕರೆದುಕೊಂಡು ಹೋದನು. ಅಂತಿಯೋಕ್ಯದ ಸಹೋದರರು ಪೌಲನನ್ನು ಪ್ರಭುವಿನ ಆಶ್ರಯಕ್ಕೆ ಒಪ್ಪಿಸಿ ಕಳುಹಿಸಿಕೊಟ್ಟರು. 41 ಪೌಲ ಸೀಲರು ಸಿರಿಯಾ ಮತ್ತು ಸಿಲಿಸಿಯ ನಾಡುಗಳಲ್ಲಿ ಹಾದು ಹೋಗುತ್ತಾ ಅಲ್ಲಿದ್ದ ಸಭೆಗಳಿಗೆ ಬಲವಾಗಿ ಬೆಳೆಯಲು ನೆರವು ನೀಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International