Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 113

113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
    ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
ಪೂರ್ವದಿಂದಿಡಿದು ಪಶ್ಚಿಮದವರೆಗೂ
    ಯೆಹೋವನ ಹೆಸರು ಸ್ತುತಿಸಲ್ಪಡಲಿ.
ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
    ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
    ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
ಆತನು ಆಕಾಶವನ್ನೂ
    ಭೂಮಿಯನ್ನೂ ಬಾಗಿ ನೋಡುವನು.
ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
    ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
ಆತನು ಅವರನ್ನು ಪ್ರಮುಖರನ್ನಾಗಿಯೂ
    ನಾಯಕರುಗಳನ್ನಾಗಿಯೂ ಮಾಡುವನು.
ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
    ಸಂತೋಷಪಡಿಸುವನು.

ಯೆಹೋವನಿಗೆ ಸ್ತೋತ್ರವಾಗಲಿ!

ಯೆಶಾಯ 42:14-21

ದೇವರು ತಾಳ್ಮೆಯುಳ್ಳವನಾಗಿದ್ದಾನೆ

14 “ನಾನು ಬಹುಕಾಲದಿಂದ ಮೌನವಾಗಿದ್ದೆನು.
    ನಾನು ಏನೂ ಹೇಳದ ಹಾಗೆ ನನ್ನನ್ನು ನಿಯಂತ್ರಿಸಿಕೊಂಡಿದ್ದೆನು.
ಈಗ ನಾನು ಹೆರಿಗೆ ಬೇನೆಯನ್ನು ಅನುಭವಿಸುವ ಹೆಂಗಸಿನಂತೆ ಕಿರುಚುವೆನು;
    ಗಟ್ಟಿಯಾಗಿ ಏದುಸಿರು ಬಿಡುವೆನು.
15 ಬೆಟ್ಟಗಳನ್ನೂ ಪರ್ವತಗಳನ್ನೂ ನಾಶಪಡಿಸುವೆನು.
    ಅಲ್ಲಿ ಬೆಳೆಯುವ ಸಸ್ಯಗಳನ್ನೆಲ್ಲಾ ಒಣಗಿಸಿಬಿಡುವೆನು.
ನದಿಗಳನ್ನು ಒಣ ನೆಲವನ್ನಾಗಿ ಮಾರ್ಪಡಿಸುವೆನು;
    ನೀರಿನ ಹಳ್ಳಗಳನ್ನು ಒಣಗಿಸಿಬಿಡುವೆನು.
16 ಅವರು ಹಿಂದೆಂದೂ ತಿಳಿಯದ ರೀತಿಯಲ್ಲಿ ನಾನು ಕುರುಡರನ್ನು ನಡೆಸುವೆನು.
    ಕುರುಡರು ಹೋಗಿರದ ಸ್ಥಳಕ್ಕೆ ನಾನು ಅವರನ್ನು ನಡಿಸುವೆನು.
ನಾನು ಅವರಿಗಾಗಿ ಕತ್ತಲೆಯನ್ನು ಬೆಳಕಾಗಿ ಮಾರ್ಪಡಿಸುವೆನು.
    ನಾನು ಕೊರಕಲು ನೆಲವನ್ನು ಸಮತಟ್ಟಾಗಿ ಮಾಡುವೆನು.
ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
    ನನ್ನ ಜನರನ್ನು ನಾನು ಎಂದಿಗೂ ತೊರೆಯುವದಿಲ್ಲ.
17 ಆದರೆ ಕೆಲವರು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿಬಿಟ್ಟಿದ್ದಾರೆ.
    ಅವರ ಬಳಿಯಲ್ಲಿ ಬಂಗಾರದ ತಗಡಿನಿಂದ ಹೊದಿಸಿದ ವಿಗ್ರಹಗಳಿವೆ.
    ಅವರು ಆ ವಿಗ್ರಹಗಳಿಗೆ, ‘ನೀನೇ ನಮ್ಮ ದೇವರು’ ಎಂದು ಹೇಳುವರು.
ಸುಳ್ಳುದೇವರುಗಳನ್ನು ಅವರು ಅವಲಂಬಿಸಿರುವದರಿಂದ ನಿರಾಶರಾಗುವರು.

ದೇವರಿಗೆ ವಿಧೇಯರಾಗಲು ಇಸ್ರೇಲರು ನಿರಾಕರಿಸಿದರು

18 “ಕಿವುಡರೇ, ನನ್ನ ಮಾತನ್ನು ಕೇಳಿರಿ.
    ಕುರುಡರೇ ನನ್ನ ಕಡೆಗೆ ನೋಡಿರಿ.
19 ಬೇರೆ ಎಲ್ಲರಿಗಿಂತ ನನ್ನ ಸೇವಕನು ಕುರುಡನಾಗಿದ್ದಾನೆ.
    ಬೇರೆ ಎಲ್ಲರಿಗಿಂತ ನನ್ನ ದೂತನು ಕಿವುಡನಾಗಿದ್ದಾನೆ.
ನಾನು ಒಡಂಬಡಿಕೆ ಮಾಡಿಕೊಂಡ ನನ್ನ ಸೇವಕನು ಪೂರ್ಣ ಕುರುಡನಾಗಿದ್ದಾನೆ.
20 ತಾನು ಮಾಡತಕ್ಕದ್ದನ್ನು ಕಣ್ಣಾರೆ ಕಂಡರೂ
    ಅವನು ನನಗೆ ವಿಧೇಯನಾಗುವುದಿಲ್ಲ.
ಅವನು ಕಿವಿಯಾರೆ ಕೇಳಿದರೂ ನನ್ನ ಮಾತುಗಳಿಗೆ ವಿಧೇಯನಾಗುವದಿಲ್ಲ;
    ಅದನ್ನು ಕೇಳಿಸಿಕೊಳ್ಳುವದೂ ಇಲ್ಲ.”
21 ತನ್ನ ಸೇವಕನು ನೀತಿವಂತನಾಗಿರಬೇಕೆಂದೂ
    ತನ್ನ ಉತ್ಕೃಷ್ಟವಾದ ಉಪದೇಶವನ್ನು ಗೌರವಿಸಬೇಕೆಂದೂ ಯೆಹೋವನು ಬಯಸುತ್ತಾನೆ.

ಲೂಕ 1:5-25

ಜಕರೀಯ ಮತ್ತು ಎಲಿಜಬೇತ್

ಹೆರೋದನು[a] ಜುದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಜಕರೀಯನು ಅಬೀಯನ ವರ್ಗಕ್ಕೆ[b] ಸೇರಿದವನು. ಜಕರೀಯನ ಹೆಂಡತಿ ಆರೋನನ ಕುಟುಂಬದವಳು. ಆಕೆಯ ಹೆಸರು ಎಲಿಜಬೇತ್. ಜಕರೀಯನು ಮತ್ತು ಎಲಿಜಬೇತಳು ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲದವರಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಎಲಿಜಬೇತಳು ಬಂಜೆಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಪ್ಪಿನವರಾಗಿದ್ದರು.

ಒಮ್ಮೆ ತನ್ನ ವರ್ಗದ ಸರದಿ ಬಂದಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು. ಯಾಜಕರು ಧೂಪವನು ಅರ್ಪಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಚೀಟಿಹಾಕಿ ಒಬ್ಬ ಯಾಜಕನನ್ನು ಆರಿಸುತ್ತಿದ್ದರು. ಈ ಸಲ ಅದು ಜಕರೀಯನ ಪಾಲಿಗೆ ಬಂದಿತು. ಆದ್ದರಿಂದ ಜಕರೀಯನು ಧೂಪ ಅರ್ಪಿಸುವುದಕ್ಕಾಗಿ ಪ್ರಭುವಿನ ಆಲಯದೊಳಗೆ ಹೋದನು. 10 ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.

11 ಆಗ, ಧೂಪಪೀಠದ ಬಲಗಡೆಯಲ್ಲಿ, ಪ್ರಭುವಿನ ದೂತನೊಬ್ಬನು ಬಂದು ಜಕರೀಯನ ಮುಂದೆ ನಿಂತನು. 12 ಅವನು ದೇವದೂತನನ್ನು ನೋಡಿ ಗಲಿಬಿಲಿಗೊಂಡು ಬಹು ಭಯಪಟ್ಟನು. 13 ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು. 14 ಅವನ ಜನನದಿಂದ ನಿಮಗೆ ಹರ್ಷಾನಂದವಾಗುವುದು. ಬಹುಜನರು ಸಂತೋಷಪಡುವರು. 15 ಪ್ರಭುವಿನ ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.[c]

16 “ಅನೇಕ ಯೆಹೂದ್ಯರು ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು. 17 ಅವನು ಪ್ರಭುವಿಗೆ ಮುಂದೂತನಾಗಿ ಹೋಗುವನು. ಅವನು ಎಲೀಯನ[d] ಗುಣಶಕ್ತಿಗಳಿಂದ ಕೂಡಿದವನಾಗಿರುವನು; ತಂದೆ ಮತ್ತು ಮಕ್ಕಳ ನಡುವೆ ಸಮಾಧಾನವನ್ನು ಉಂಟುಮಾಡುವನು; ಅವಿಧೇಯರಾದ ಅನೇಕರನ್ನು ನೀತಿವಂತರ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.

18 ಜಕರೀಯನು ದೇವದೂತನಿಗೆ, “ನೀನು ಹೇಳುತ್ತಿರುವುದು ಸತ್ಯವೆಂಬುದಕ್ಕೆ ಆಧಾರವೇನು? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಸಹ ಮುಪ್ಪಿನವಳಾಗಿದ್ದಾಳೆ” ಎಂದು ಹೇಳಿದನು.

19 ದೇವದೂತನು, “ನನ್ನ ಹೆಸರು ಗಬ್ರಿಯೇಲ. ನಾನು ದೇವರ ಸನ್ನಿಧಿಯಲ್ಲಿ ನಿಂತುಕೊಂಡಿರುವವನು. ನಿನಗೆ ಈ ಶುಭಸಮಾಚಾರವನ್ನು ತಿಳಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ. 20 ಈಗ ಕೇಳು! ಈ ಸಂಗತಿಗಳು ನೆರವೇರುವ ತನಕ ನೀನು ಮೂಕನಾಗಿರುವೆ. ಏಕೆಂದರೆ ನೀನು ನನ್ನ ಮಾತನ್ನು ನಂಬಲಿಲ್ಲ. ಆದರೆ ನಾನು ಹೇಳಿದ ಈ ಸಂಗತಿಗಳು ಖಂಡಿತವಾಗಿ ನೆರವೇರುತ್ತವೆ” ಎಂದು ಹೇಳಿದನು.

21 ಜನರು ಜಕರೀಯನಿಗಾಗಿ ಎದುರುನೋಡುತ್ತಾ ದೇವಾಲಯದೊಳಗೆ ಅವನು ಇಷ್ಟುಹೊತ್ತು ಇರಲು ಕಾರಣವೇನಿರಬಹುದೆಂದು ಆಶ್ಚರ್ಯಚಕಿತರಾದರು. 22 ಬಳಿಕ ಜಕರೀಯನು ಹೊರಗೆ ಬಂದಾಗ, ಅವನಿಗೆ ಅವರೊಡನೆ ಮಾತಾಡಲಾಗಲಿಲ್ಲ. ಆದ್ದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರಬೇಕೆಂದು ಅವರು ತಿಳಿದುಕೊಂಡರು. ಅಂದಿನಿಂದ ಅವನು ಮಾತಾಡಲಾಗದೆ ಕೇವಲ ಸನ್ನೆಗಳ ಮೂಲಕ ತಿಳಿಸುತ್ತಿದ್ದನು. 23 ತನ್ನ ಯಾಜಕಸೇವೆಯ ಸರದಿಯು ಮುಗಿದ ಮೇಲೆ ಜಕರೀಯನು ಮನೆಗೆ ಹಿಂತಿರುಗಿ ಹೋದನು.

24 ಆ ಬಳಿಕ, ಜಕರೀಯನ ಹೆಂಡತಿಯಾದ ಎಲಿಜಬೇತಳು ಗರ್ಭಿಣಿಯಾದಳು. ಆದ್ದರಿಂದ ಆಕೆ ಐದು ತಿಂಗಳವರೆಗೆ ತನ್ನ ಮನೆಯಿಂದ ಹೊರಗೆ ಹೋಗಲಿಲ್ಲ. 25 ಎಲಿಜಬೇತಳು, “ನೋಡಿ, ಪ್ರಭುವು ನನಗೋಸ್ಕರ ಎಂಥಾ ಕಾರ್ಯಮಾಡಿದ್ದಾನೆ! ನನ್ನ ಜನರ ನಡುವೆ ನನಗಿದ್ದ ಅವಮಾನವನ್ನು ಪ್ರಭುವು ತೊಲಗಿಸಿದ್ದಾನೆ” ಎಂದು ಹೇಳಿದಳು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International