Revised Common Lectionary (Semicontinuous)
113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಹೆಸರನ್ನು ಕೊಂಡಾಡಿರಿ.
2 ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
3 ಪೂರ್ವದಿಂದಿಡಿದು ಪಶ್ಚಿಮದವರೆಗೂ
ಯೆಹೋವನ ಹೆಸರು ಸ್ತುತಿಸಲ್ಪಡಲಿ.
4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
5 ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
6 ಆತನು ಆಕಾಶವನ್ನೂ
ಭೂಮಿಯನ್ನೂ ಬಾಗಿ ನೋಡುವನು.
7 ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
8 ಆತನು ಅವರನ್ನು ಪ್ರಮುಖರನ್ನಾಗಿಯೂ
ನಾಯಕರುಗಳನ್ನಾಗಿಯೂ ಮಾಡುವನು.
9 ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
ಸಂತೋಷಪಡಿಸುವನು.
ಯೆಹೋವನಿಗೆ ಸ್ತೋತ್ರವಾಗಲಿ!
30 ರಾಹೇಲಳು ತನಗೆ ಮಕ್ಕಳಾಗದಿರುವುದನ್ನು ಗಮನಿಸಿದಳು. ರಾಹೇಲಳಿಗೆ ತನ್ನ ಅಕ್ಕ ಲೇಯಳ ಮೇಲೆ ಹೊಟ್ಟೆಕಿಚ್ಚಾಯಿತು. ಆದ್ದರಿಂದ ರಾಹೇಲಳು ಯಾಕೋಬನಿಗೆ, “ನನಗೆ ಮಕ್ಕಳನ್ನು ಕೊಡು, ಇಲ್ಲವಾದರೆ ನಾನು ಸಾಯುವೆ” ಎಂದು ಹೇಳಿದಳು.
2 ಯಾಕೋಬನಿಗೆ ರಾಹೇಲಳ ಮೇಲೆ ಕೋಪವಾಯಿತು. ಅವನು ಆಕೆಗೆ, “ನಾನು ದೇವರಲ್ಲ. ನಿನಗೆ ಮಕ್ಕಳಾಗದಂತೆ ಮಾಡಿರುವವನು ದೇವರು” ಎಂದು ಹೇಳಿದನು.
3 ನಂತರ ರಾಹೇಲಳು, “ನೀನು ನನ್ನ ಸೇವಕಿಯಾದ ಬಿಲ್ಹಾಳನ್ನು ತೆಗೆದುಕೊಳ್ಳಬಹುದು. ಆಕೆಯೊಡನೆ ಮಲಗಿಕೊ; ಆಕೆ ನನಗೋಸ್ಕರ ಒಂದು ಮಗುವನ್ನು ಹೆರುವಳು. ಆಗ ನಾನು ಆಕೆಯ ಮೂಲಕ ತಾಯಿಯಾಗುವೆನು” ಎಂದು ಹೇಳಿದಳು.
4 ಅಂತೆಯೇ ರಾಹೇಲಳು ಬಿಲ್ಹಾಳನ್ನು ತನ್ನ ಗಂಡನಾದ ಯಾಕೋಬನಿಗೆ ಕೊಟ್ಟಳು. ಯಾಕೋಬನು ಬಿಲ್ಹಾಳನ್ನು ಕೂಡಿದನು. 5 ಬಿಲ್ಹಾ ಬಸುರಾಗಿ ಯಾಕೋಬನಿಗೆ ಒಬ್ಬ ಮಗನನ್ನು ಹೆತ್ತಳು.
6 ರಾಹೇಲಳು, “ದೇವರು ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಒಬ್ಬ ಮಗನನ್ನು ಕೊಡಲು ನಿರ್ಧರಿಸಿದನು” ಎಂದು ಹೇಳಿ ಆ ಮಗುವಿಗೆ ದಾನ್ ಎಂದು ಹೆಸರಿಟ್ಟಳು.
7 ಬಿಲ್ಹಾ ಮತ್ತೆ ಬಸುರಾಗಿ ಯಾಕೋಬನಿಗೆ ಎರಡನೆ ಮಗನನ್ನು ಹೆತ್ತಳು. 8 ರಾಹೇಲಳು, “ನನ್ನ ಅಕ್ಕನೊಂದಿಗೆ ಕಷ್ಟಪಟ್ಟು ಹೋರಾಡಿ ಗೆದ್ದಿದ್ದೇನೆ” ಎಂದು ಹೇಳಿ ಆ ಮಗುವಿಗೆ ನಫ್ತಾಲಿ ಎಂದು ಹೆಸರಿಟ್ಟಳು.
9 ಲೇಯಳು ತನಗೆ ಮಕ್ಕಳಾಗದಿರುವುದನ್ನು ಗಮನಿಸಿ ತನ್ನ ಸೇವಕಿಯಾದ ಜಿಲ್ಪಳನ್ನು ಯಾಕೋಬನಿಗೆ ಕೊಟ್ಟಳು. 10 ಜಿಲ್ಪಳಿಗೂ ಒಬ್ಬ ಮಗನು ಹುಟ್ಟಿದನು. 11 ಲೇಯಳು, “ನಾನು ಅದೃಷ್ಟವಂತೆ” ಎಂದು ಹೇಳಿ, ಆ ಮಗುವಿಗೆ ಗಾದ್ ಎಂದು ಹೆಸರಿಟ್ಟಳು. 12 ಜಿಲ್ಪಳು ಮತ್ತೊಬ್ಬ ಮಗನನ್ನು ಹೆತ್ತಳು. ಲೇಯಳು, “ನಾನು ಧನ್ಯಳಾದೆ. 13 ಈಗ ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯುವರು” ಎಂದು ಹೇಳಿ ಆ ಮಗುವಿಗೆ ಆಶೇರ್ ಎಂದು ಹೆಸರಿಟ್ಟಳು.
14 ಗೋಧಿಯ ಸುಗ್ಗಿಕಾಲದಲ್ಲಿ, ರೂಬೇನನು ಹೊಲಕ್ಕೆ ಹೋಗಿದ್ದಾಗ ಕಾಮಜನಕಗಿಡದ ಹೂವುಗಳನ್ನು ಕಂಡನು. ರೂಬೇನನು ಈ ಹೂವುಗಳನ್ನು ತನ್ನ ತಾಯಿಯಾದ ಲೇಯಳಿಗೆ ತಂದುಕೊಟ್ಟನು. ರಾಹೇಲಳು ಲೇಯಳಿಗೆ, “ದಯವಿಟ್ಟು, ನಿನ್ನ ಮಗನು ತಂದಿರುವ ಹೂವುಗಳಲ್ಲಿ ನನಗೆ ಸ್ವಲ್ಪಕೊಡು” ಎಂದು ಕೇಳಿದಳು.
15 ಲೇಯಳು, “ನೀನು ಈಗಾಗಲೇ ನನ್ನ ಗಂಡನನ್ನು ತೆಗೆದುಕೊಂಡಿರುವೆ. ಈಗ ನನ್ನ ಮಗನು ತಂದಿರುವ ಹೂವುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವೆ” ಎಂದು ಹೇಳಿದಳು.
ರಾಹೇಲಳು, “ನಿನ್ನ ಮಗನು ತಂದಿರುವ ಹೂವುಗಳನ್ನು ನನಗೆ ಕೊಟ್ಟರೆ, ನೀನು ಈ ರಾತ್ರಿ ಯಾಕೋಬನ ಸಂಗಡ ಮಲಗಿಕೊಳ್ಳಬಹುದು” ಎಂದು ಹೇಳಿದಳು.
16 ಆ ರಾತ್ರಿ ಯಾಕೋಬನು ಹೊಲದಿಂದ ಬಂದನು. ಲೇಯಳು ಅವನನ್ನು ಕಂಡು ಭೇಟಿಯಾಗಲು ಹೋದಳು. ಅವಳು ಅವನಿಗೆ, “ಈ ರಾತ್ರಿ ನೀನು ನನ್ನ ಸಂಗಡ ಮಲಗಿಕೊಳ್ಳುವೆ. ನನ್ನ ಮಗನು ತಂದ ಹೂವುಗಳನ್ನು ನಾನು ನಿನಗೋಸ್ಕರವಾಗಿ ಕೊಟ್ಟಿರುವೆ” ಎಂದು ಹೇಳಿದಳು. ಆದ್ದರಿಂದ ಯಾಕೋಬನು ಆ ರಾತ್ರಿ ಲೇಯಳೊಡನೆ ಮಲಗಿಕೊಂಡನು.
17 ಲೇಯಳು ಮತ್ತೆ ಬಸುರಾಗುವಂತೆ ದೇವರು ಅನುಗ್ರಹಿಸಿದನು. ಆಕೆ ತನ್ನ ಐದನೆಯ ಮಗನನ್ನು ಹೆತ್ತಳು. 18 ಲೇಯಳು, “ದೇವರು ನನಗೆ ಒಂದು ಬಹುಮಾನವನ್ನು ಕೊಟ್ಟನು; ಯಾಕೆಂದರೆ ನಾನು ನನ್ನ ಸೇವಕಿಯನ್ನು ನನ್ನ ಗಂಡನಿಗೆ ಕೊಟ್ಟೆನು” ಎಂದು ಹೇಳಿ, ಆ ಮಗುವಿಗೆ ಇಸ್ಸಾಕಾರ್ ಎಂದು ಹೆಸರಿಟ್ಟಳು.
19 ಲೇಯಳು ಮತ್ತೆ ಬಸುರಾಗಿ ಆರನೆಯ ಮಗನನ್ನು ಹೆತ್ತಳು. 20 ಲೇಯಳು, “ದೇವರು ನನಗೆ ಒಂದು ಒಳ್ಳೆಯ ಬಹುಮಾನವನ್ನು ಕೊಟ್ಟಿದ್ದಾನೆ. ಈಗ ಖಂಡಿತವಾಗಿ ಯಾಕೋಬನು ನನ್ನನ್ನು ಸ್ವೀಕರಿಸುವನು, ಯಾಕೆಂದರೆ ನಾನು ಅವನಿಗೆ ಆರು ಗಂಡುಮಕ್ಕಳನ್ನು ಕೊಟ್ಟಿರುವೆ” ಎಂದು ಹೇಳಿ ಆ ಮಗುವಿಗೆ, ಜೆಬುಲೂನ್ ಎಂದು ಹೆಸರಿಟ್ಟಳು.
21 ತರುವಾಯ ಲೇಯಳು ಒಬ್ಬ ಮಗಳನ್ನು ಹೆತ್ತಳು. ಆಕೆ ತನ್ನ ಮಗಳಿಗೆ ದೀನಾ ಎಂದು ಹೆಸರಿಟ್ಟಳು.
22 ನಂತರ, ದೇವರು ರಾಹೇಲಳ ಪ್ರಾರ್ಥನೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಅನುಗ್ರಹಿಸಿದನು. 23-24 ರಾಹೇಲಳು ಬಸುರಾಗಿ ಒಬ್ಬ ಮಗನನ್ನು ಹೆತ್ತಳು. ರಾಹೇಲಳು, “ದೇವರು ನನಗಿದ್ದ ಅವಮಾನವನ್ನು ತೆಗೆದುಹಾಕಿದ್ದಾನೆ; ನನಗೆ ಒಬ್ಬ ಮಗನನ್ನು ಕೊಟ್ಟಿದ್ದಾನೆ” ಎಂದು ಹೇಳಿ ಆ ಮಗುವಿಗೆ ಯೋಸೇಫ ಎಂದು ಹೆಸರಿಟ್ಟಳು.
ಭವಿಷ್ಯತ್ತಿನಲ್ಲಿ ನಮಗೆ ಮಹಿಮೆ ದೊರೆಯುವುದು
18 ಈಗ ನಾವು ಕಷ್ಟಸಂಕಟಗಳನ್ನು ಸಹಿಸಿಕೊಳ್ಳುತ್ತೇವೆ. ಆದರೆ ನಮಗೆ ಮುಂದೆ ಕೊಡಲ್ಪಡುವ ಮಹಿಮೆಗೆ ಈ ಕಷ್ಟಸಂಕಟಗಳನ್ನು ಹೋಲಿಸಿದರೆ ಇವು ಗಣನೆಗೆ ಬರುವುದಿಲ್ಲ. 19 ದೇವರು ತನ್ನ ಮಕ್ಕಳನ್ನು ಪ್ರತ್ಯಕ್ಷಪಡಿಸುವ ಕಾಲಕ್ಕಾಗಿ ದೇವರ ಸರ್ವಸೃಷ್ಟಿಯು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಅದು ಸಂಭವಿಸಲೆಂದು ಇಡೀ ಜಗತ್ತೇ ಹಂಬಲಿಸುತ್ತಿದೆ. 20 ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಹೀಗಾದದ್ದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ. ಆದರೂ ಅದಕ್ಕೆ ನಿರೀಕ್ಷೆಯಿತ್ತು. ಅದೇನೆಂದರೆ: 21 ಸರ್ವಸೃಷ್ಟಿಯು ನಾಶನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಸ್ವಾತಂತ್ರವನ್ನೂ ಮಹಿಮೆಯನ್ನೂ ಹೊಂದಿಕೊಳ್ಳುತ್ತದೆ ಎಂಬುದೇ.
22 ದೇವರು ಸೃಷ್ಟಿಮಾಡಿದ ಪ್ರತಿಯೊಂದೂ, ಪ್ರಸವವೇದನೆ ಪಡುತ್ತಿರುವ ಸ್ತ್ರೀಯಂತೆ ನೋವಿನಿಂದ ನರಳುತ್ತಾ ಇಂದಿನವರೆಗೂ ಕಾಯುತ್ತಿದೆ ಎಂಬುದು ನಮಗೆ ಗೊತ್ತಿದೆ. 23 ಜಗತ್ತು ಮಾತ್ರವೇ ಅಲ್ಲ, ನಾವು ಸಹ ನಮ್ಮೊಳಗೆ ನೋವಿನಿಂದ ನರಳುತ್ತಾ ಕಾಯುತ್ತಿದ್ದೇವೆ. ದೇವರ ವಾಗ್ದಾನದ ಮೊದಲನೆ ಭಾಗವಾಗಿರುವ ಪವಿತ್ರಾತ್ಮನನ್ನು ನಾವು ಹೊಂದಿಕೊಂಡಿದ್ದೇವೆ. ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ದೇವರು ಮಾಡುತ್ತಿರುವ ಕಾರ್ಯವು ಸಂಪೂರ್ಣಗೊಳ್ಳುವುದನ್ನೇ ಅಂದರೆ, ನಮ್ಮ ದೇಹಗಳಿಗಾಗುವ ಬಿಡುಗಡೆಯನ್ನೇ ನಾವು ಎದುರು ನೋಡುತ್ತಿದ್ದೇವೆ. 24 ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ. 25 ಆದರೆ ನಾವಿನ್ನೂ ಹೊಂದಿಕೊಂಡಿಲ್ಲದೆ ಇರುವುದನ್ನು ನಿರೀಕ್ಷಿಸುತ್ತಾ ತಾಳ್ಮೆಯಿಂದ ಅದಕ್ಕಾಗಿ ಕಾಯುತ್ತಿದ್ದೇವೆ.
26 ನಾವು ಬಲಹೀನರಾಗಿರುವುದರಿಂದ ನಮ್ಮ ಬಲಹೀನತೆಯಲ್ಲಿ ಪವಿತ್ರಾತ್ಮನು ನಮಗೆ ಸಹಾಯ ಮಾಡುತ್ತಾನೆ. ನಾವು ಹೇಗೆ ಪ್ರಾರ್ಥಿಸಬೇಕು ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದು ನಮಗೆ ತಿಳಿಯದು. ಆದರೆ ಪವಿತ್ರಾತ್ಮನು ತಾನೇ ನಮಗೋಸ್ಕರ ದೇವರಲ್ಲಿ ವಿವರಿಸಲಾಗದ ಅಂತರ್ಭಾವದಿಂದ ಬೇಡಿಕೊಳ್ಳುತ್ತಾನೆ. 27 ಅಂತರಂಗವನ್ನು ನೋಡಬಲ್ಲ ದೇವರಿಗೆ ಪವಿತ್ರಾತ್ಮನ ಮನಸ್ಸಿನಲ್ಲಿರುವುದೆಲ್ಲಾ ಗೊತ್ತಿದೆ, ಏಕೆಂದರೆ ದೇವರ ಚಿತ್ತಕ್ಕನುಸಾರವಾಗಿಯೇ ಪವಿತ್ರಾತ್ಮನು ದೇವಜನರಿಗೋಸ್ಕರ ದೇವರಲ್ಲಿ ವಿಜ್ಞಾಪಿಸುತ್ತಾನೆ.
28 ದೇವರು ತನ್ನನ್ನು ಪ್ರೀತಿಸುವವರ ಒಳ್ಳೆಯದಕ್ಕಾಗಿ ಪ್ರತಿಯೊಂದು ಕಾರ್ಯವನ್ನೂ ಅನುಕೂಲ ಮಾಡುತ್ತಾನೆಂದು ನಮಗೆ ಗೊತ್ತಿದೆ. ಆ ಜನರನ್ನು ದೇವರೇ ಆರಿಸಿಕೊಂಡನು, ಏಕೆಂದರೆ ಅದು ಆತನ ಯೋಜನೆಯಾಗಿತ್ತು. 29 ದೇವರು ತಾನು ಜಗತ್ತನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಆ ಜನರನ್ನು ಬಲ್ಲವನಾಗಿದ್ದನು ಮತ್ತು ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂದು ನಿರ್ಧರಿಸಿದನು. ಹೀಗಿರಲಾಗಿ, ಅನೇಕ ಸಹೋದರ ಸಹೋದರಿಯರಲ್ಲಿ ಯೇಸುವೇ ಹಿರಿಯವನಾಗಿದ್ದಾನೆ. 30 ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂಬ ತನ್ನ ಯೋಜನೆಗನುಸಾರವಾಗಿ ದೇವರು ಅವರನ್ನು ಕರೆದು, ನೀತಿವಂತರನ್ನಾಗಿ ಮಾಡಿ, ಅವರಿಗೆ ತನ್ನ ಮಹಿಮೆಯನ್ನು ಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International