Revised Common Lectionary (Semicontinuous)
113 ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ!
ಆತನ ಹೆಸರನ್ನು ಕೊಂಡಾಡಿರಿ.
2 ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
3 ಪೂರ್ವದಿಂದಿಡಿದು ಪಶ್ಚಿಮದವರೆಗೂ
ಯೆಹೋವನ ಹೆಸರು ಸ್ತುತಿಸಲ್ಪಡಲಿ.
4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ;
ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.
5 ನಮ್ಮ ದೇವರಾದ ಯೆಹೋವನಿಗೆ ಸಮಾನರು ಇಲ್ಲವೇ ಇಲ್ಲ.
ಆತನು ಉನ್ನತ ಲೋಕದಲ್ಲಿ ಸಿಂಹಾಸನಾರೂಢನಾಗಿದ್ದಾನೆ.
6 ಆತನು ಆಕಾಶವನ್ನೂ
ಭೂಮಿಯನ್ನೂ ಬಾಗಿ ನೋಡುವನು.
7 ಆತನು ಬಡವರನ್ನು ಧೂಳಿನಿಂದ ಎಬ್ಬಿಸುವನು;
ಭಿಕ್ಷುಕರನ್ನು ತಿಪ್ಪೆಯಿಂದ ಎತ್ತುವನು.
8 ಆತನು ಅವರನ್ನು ಪ್ರಮುಖರನ್ನಾಗಿಯೂ
ನಾಯಕರುಗಳನ್ನಾಗಿಯೂ ಮಾಡುವನು.
9 ಆತನು ಬಂಜೆಗೆ ಮಕ್ಕಳನ್ನು ಅನುಗ್ರಹಿಸಿ
ಸಂತೋಷಪಡಿಸುವನು.
ಯೆಹೋವನಿಗೆ ಸ್ತೋತ್ರವಾಗಲಿ!
ಇಸಾಕನ ಕುಟುಂಬ
19 ಇದು ಇಸಾಕನ ಚರಿತ್ರೆ. ಅಬ್ರಹಾಮನಿಗೆ ಇಸಾಕ ಎಂಬ ಹೆಸರಿನ ಮಗನಿದ್ದನು. 20 ಇಸಾಕನು ನಲವತ್ತು ವರ್ಷದವನಾಗಿದ್ದಾಗ ರೆಬೆಕ್ಕಳನ್ನು ಮದುವೆಯಾದನು. ರೆಬೆಕ್ಕಳು ಪದ್ದನ್ ಅರಾಮಿನವಳು. ಆಕೆ ಬೆತೂವೇಲನ ಮಗಳು ಮತ್ತು ಅರಾಮ್ಯನಾದ ಲಾಬಾನನ ತಂಗಿ. 21 ಇಸಾಕನ ಹೆಂಡತಿ ಮಕ್ಕಳನ್ನು ಪಡೆಯಲಾಗಲಿಲ್ಲ. ಆದ್ದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಇಸಾಕನ ಪ್ರಾರ್ಥನೆಯನ್ನು ಕೇಳಿ ರೆಬೆಕ್ಕಳಿಗೆ ಗರ್ಭಧಾರಣೆಯನ್ನು ಅನುಗ್ರಹಿಸಿದನು.
22 ರೆಬೆಕ್ಕಳು ಗರ್ಭಿಣಿಯಾಗಿದ್ದಾಗ, ಅವಳ ಗರ್ಭದಲ್ಲಿದ್ದ ಕೂಸುಗಳು ಒಂದನ್ನೊಂದು ನೂಕಾಡಿದ್ದರಿಂದ ಅವಳು ಬಹಳ ತೊಂದರೆಪಡಬೇಕಾಯಿತು. ರೆಬೆಕ್ಕಳು ಯೆಹೋವನಿಗೆ ಪ್ರಾರ್ಥಿಸಿ, “ನನಗೇಕೆ ಹೀಗೆ ಆಗುತ್ತಿದೆ?” ಎಂದು ಕೇಳಿದಳು. 23 ಯೆಹೋವನು ಅವಳಿಗೆ,
“ನಿನ್ನ ಗರ್ಭದಲ್ಲಿ ಎರಡು ಜನಾಂಗಗಳಿವೆ.
ಎರಡು ಕುಟುಂಬಗಳನ್ನು ಆಳುವವರು ನಿನ್ನಲ್ಲಿ ಹುಟ್ಟುವರು;
ಅವರು ವಿಭಾಗವಾಗುವರು.
ಒಬ್ಬ ಮಗನು ಮತ್ತೊಬ್ಬನಿಗಿಂತ ಬಲಶಾಲಿಯಾಗಿರುವನು.
ದೊಡ್ಡ ಮಗನು ಚಿಕ್ಕ ಮಗನ ಸೇವೆ ಮಾಡುವನು”
ಎಂದು ಹೇಳಿದನು.
24 ದಿನ ತುಂಬಿದ ಮೇಲೆ ರೆಬೆಕ್ಕಳು ಅವಳಿಜವಳಿ ಮಕ್ಕಳನ್ನು ಹೆತ್ತಳು. 25 ಮೊದಲನೆಯ ಮಗುವು ಕೆಂಪಗಿತ್ತು. ಅವನ ಚರ್ಮವು ಕೂದಲಿನ ಉಡುಪಿನಂತಿತ್ತು. ಆದ್ದರಿಂದ ಅವನಿಗೆ “ಏಸಾವ್” ಎಂದು ಹೆಸರಿಡಲಾಯಿತು. 26 ಎರಡನೆಯ ಮಗು ಹುಟ್ಟಿದಾಗ ಅದು ಏಸಾವನ ಹಿಮ್ಮಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು. ಆದ್ದರಿಂದ ಆ ಮಗುವಿಗೆ “ಯಾಕೋಬ” ಎಂದು ಹೆಸರಿಡಲಾಯಿತು. ಯಾಕೋಬ ಮತ್ತು ಏಸಾವ ಹುಟ್ಟಿದಾಗ ಇಸಾಕನಿಗೆ ಅರವತ್ತು ವರ್ಷ ವಯಸ್ಸಾಗಿತ್ತು.
27 ಆ ಬಾಲಕರು ಬೆಳೆದು ದೊಡ್ಡವರಾದರು. ಏಸಾವನು ಚತುರ ಬೇಟೆಗಾರನಾದನು. ಹೊಲದಲ್ಲಿರುವುದು ಅವನಿಗೆ ಪ್ರಿಯವಾಗಿತ್ತು. ಆದರೆ ಯಾಕೋಬನು ಸಾಧು ಮನುಷ್ಯನಾಗಿದ್ದನು. ಅವನು ತನ್ನ ಗುಡಾರದಲ್ಲಿರುತ್ತಿದ್ದನು. 28 ಇಸಾಕನು ಏಸಾವನನ್ನು ಪ್ರೀತಿಸಿದನು. ಏಸಾವನು ಬೇಟೆಯಾಡಿ ತಂದ ಪ್ರಾಣಿಗಳ ಮಾಂಸ ಅವನಿಗೆ ಇಷ್ಟವಾಗಿತ್ತು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ
15 ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ.
ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ.
ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
16 ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು,
ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು,
ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.
17 ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು.
ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
18 ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ.
ಪ್ರತಿಯೊಂದೂ ಆತನಿಂದಲೇ ಬರುತ್ತದೆ.
ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.
19 ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
20 ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ
ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International