Revised Common Lectionary (Semicontinuous)
104 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಯೆಹೋವನೇ, ನನ್ನ ದೇವರೇ, ನೀನು ಬಹಳ ದೊಡ್ಡವನು!
ನೀನು ಮಹಿಮೆಯನ್ನೂ ಘನತೆಯನ್ನೂ ಧರಿಸಿಕೊಂಡಿರುವೆ.
2 ನೀನು ಬೆಳಕನ್ನು ನಿಲುವಂಗಿಯಂತೆ ಧರಿಸಿಕೊಂಡಿರುವೆ
ನೀನು ಆಕಾಶಮಂಡಲವನ್ನು ಪರದೆಯಂತೆ ಹರಡಿರುವೆ.
3 ನಿನ್ನ ಮನೆಯನ್ನು ಅವುಗಳ ಮೇಲೆ ಕಟ್ಟಿರುವೆ.
ದಟ್ಟವಾದ ಮೋಡಗಳನ್ನು ರಥಗಳನ್ನಾಗಿ ಮಾಡಿಕೊಂಡು
ಗಾಳಿಯ ರೆಕ್ಕೆಗಳ ಮೇಲೆ ಆಕಾಶದಲ್ಲಿ ಸಂಚರಿಸುವೆ.
4 ಗಾಳಿಯನ್ನು ನಿನ್ನ ದೂತರನ್ನಾಗಿಯೂ
ಬೆಂಕಿಯನ್ನು ನಿನ್ನ ಸೇವಕರನ್ನಾಗಿಯೂ ಮಾಡಿರುವೆ.[a]
5 ಭೂಮಿಯನ್ನು ನೀನು ಅಸ್ತಿವಾರದ ಮೇಲೆ ಕಟ್ಟಿರುವುದರಿಂದ
ಅದೆಂದಿಗೂ ನಾಶವಾಗದು.
6 ನೀನು ಭೂಮಿಗೆ ನೀರನ್ನು ಕಂಬಳಿಯಂತೆ ಹೊದಿಸಿರುವೆ.
ಅದು ಬೆಟ್ಟಗಳನ್ನು ಮುಚ್ಚಿಕೊಂಡಿತು.
7 ನೀನು ಆಜ್ಞಾಪಿಸಲು ನೀರು ಹಿಂತಿರುಗಿತು.
ನೀನು ಬರ್ಜಿಸಲು ನೀರು ಓಡಿಹೋಯಿತು.
8 ಜಲರಾಶಿಗಳು ಬೆಟ್ಟಗಳಿಂದ ಇಳಿದು
ಕಣಿವೆಗಳಿಗೂ ನೀನು ಗೊತ್ತುಪಡಿಸಿದ ಸ್ಥಳಗಳಿಗೂ ಹರಿದುಹೋದವು.
9 ನೀನು ಸಮುದ್ರಗಳಿಗೆ ಮೇರೆಗಳನ್ನು ಗೊತ್ತುಪಡಿಸಿರುವುದರಿಂದ
ನೀರಿನಿಂದ ಭೂಮಿಯು ಮತ್ತೆಂದಿಗೂ ಆವೃತವಾಗದು.
10 ನೀನು ನೀರನ್ನು ಬುಗ್ಗೆಗಳಿಂದ ತೊರೆಗಳಿಗೆ ಹರಿಯಮಾಡುವೆ.
ಬೆಟ್ಟದ ತೊರೆಗಳ ಮೂಲಕ ನೀರು ಹರಿದುಹೋಗುವುದು.
11 ತೊರೆಗಳು ಎಲ್ಲಾ ಕಾಡುಪ್ರಾಣಿಗಳಿಗೆ ನೀರನ್ನು ಕೊಡುತ್ತವೆ.
ಕಾಡುಕತ್ತೆಗಳು ಸಹ ನೀರಿಗಾಗಿ ಅಲ್ಲಿಗೆ ಬರುತ್ತವೆ.
12 ಕಾಡುಪಕ್ಷಿಗಳು ಬಂದು ನೀರಿನ ಹಳ್ಳಗಳ ಬಳಿಯಲ್ಲಿ ವಾಸಿಸುತ್ತವೆ.
ಸಮೀಪದ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ.
13 ಆತನು ಬೆಟ್ಟಗಳ ಮೇಲೆ ಮಳೆಯನ್ನು ಸುರಿಸುವನು.
ಆತನ ಸೃಷ್ಟಿಗಳು ಭೂಮಿಗೆ ಅಗತ್ಯವಾದ ಪ್ರತಿಯೊಂದನ್ನೂ ಒದಗಿಸುತ್ತವೆ.
14 ನೀನು ಪಶುಗಳಿಗೋಸ್ಕರ ಹುಲ್ಲನ್ನು ಬೆಳೆಯ ಮಾಡುವೆ.
ನಾವು ದುಡಿದು ಬೆಳೆಸುವುದಕ್ಕಾಗಿ ಸಸಿಗಳನ್ನು ಕೊಟ್ಟಿರುವೆ.
ಅವು ಬೆಳೆದು ನಮಗೆ ಆಹಾರವನ್ನು ಒದಗಿಸುತ್ತವೆ.
15 ನಮ್ಮನ್ನು ಸಂತೋಷಪಡಿಸುವ ದ್ರಾಕ್ಷಾರಸವನ್ನೂ
ನಮ್ಮ ಚರ್ಮವನ್ನು ಮೃದುಗೊಳಿಸುವ[b] ಎಣ್ಣೆಯನ್ನೂ
ನಮ್ಮನ್ನು ಬಲಗೊಳಿಸುವ ಆಹಾರವನ್ನೂ ನಮಗೆ ದೇವರು ಕೊಡುತ್ತಾನೆ.
16 ಲೆಬನೋನಿನ ದೇವದಾರು ವೃಕ್ಷಗಳು ಯೆಹೋವನವೇ,
ಅವುಗಳನ್ನು ನೆಟ್ಟಾತನು ಯೆಹೋವನೇ.
ಆತನೇ ಅವುಗಳಿಗೆ ಬೇಕಾದ ನೀರನ್ನು ಒದಗಿಸುವನು.
17 ಪಕ್ಷಿಗಳು ಗೂಡುಗಳನ್ನು ಆ ಮರಗಳಲ್ಲಿ ಕಟ್ಟಿಕೊಳ್ಳುತ್ತವೆ.
ದೊಡ್ಡ ಕೊಕ್ಕರೆಗಳು ತುರಾಯಿ ಮರಗಳಲ್ಲಿ ಜೀವಿಸುತ್ತವೆ.
18 ಎತ್ತರವಾದ ಬೆಟ್ಟಗಳು ಕಾಡುಕುರಿಗಳಿಗೆ ವಾಸಸ್ಥಳವಾಗಿವೆ.
ದೊಡ್ಡ ಬಂಡೆಗಳು ಬೆಟ್ಟದ ಮೊಲಗಳಿಗೆ ಆಶ್ರಯಸ್ಥಾನಗಳಾಗಿವೆ.
19 ವಿಶೇಷಕಾಲಗಳ ಸೂಚನೆಗಾಗಿ ನೀನು ನಮಗೆ ಚಂದ್ರನನ್ನು ಕೊಟ್ಟಿರುವೆ.
ಸೂರ್ಯನಿಗೆ ತಾನು ಮುಳುಗತಕ್ಕ ಸಮಯವು ಯಾವಾಗಲೂ ತಿಳಿದಿದೆ.
20 ನೀನು ಕತ್ತಲೆಯನ್ನು ರಾತ್ರಿಯನ್ನಾಗಿ ಮಾಡಿದೆ.
ಕಾಡುಪ್ರಾಣಿಗಳು ರಾತ್ರಿಯಲ್ಲಿ ಹೊರಬಂದು ಸುತ್ತಮುತ್ತ ಓಡಾಡುತ್ತವೆ.
21 ಸಿಂಹಗಳು ಬೇಟೆಯಾಡುವಾಗ ಆಹಾರಕ್ಕಾಗಿ
ದೇವರನ್ನು ಕೇಳಿಕೊಳ್ಳುತ್ತಿವೆಯೊ ಎಂಬಂತೆ ಬರ್ಜಿಸುತ್ತವೆ.
22 ಸೂರ್ಯನು ಮೇಲೇರುವಾಗ,
ಪ್ರಾಣಿಗಳು ತಮ್ಮ ಗುಹೆಗಳಿಗೆ ಹೋಗಿ ವಿಶ್ರಮಿಸಿಕೊಳ್ಳುತ್ತವೆ.
23 ಬಳಿಕ ಜನರು ಕೆಲಸಕಾರ್ಯಗಳಿಗಾಗಿ ಹೊರಟು
ಸಾಯಂಕಾಲದವರೆಗೂ ದುಡಿಯುವರು.
24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
ಹಡಗು ಸಮುದ್ರದ ಮೇಲೆ ಸಂಚರಿಸುವುದು.
27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.
31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
ಅವು ಜ್ವಾಲಾಮುಖಿಗಳಾಗುತ್ತವೆ.
33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!
ಯೆಹೋವನನ್ನು ಕೊಂಡಾಡು!
ಎಲೀಯ ಮತ್ತು ಬರಗಾಲ
17 ಎಲೀಯನು ಗಿಲ್ಯಾದಿನ ತಿಷ್ಬೀ ಪಟ್ಟಣದ ಒಬ್ಬ ಪ್ರವಾದಿ. ಎಲೀಯನು ರಾಜನಾದ ಅಹಾಬನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಸೇವಕನಾಗಿದ್ದೇನೆ. ಮುಂದಿನ ಕೆಲವು ವರ್ಷಗಳವರೆಗೆ ಹಿಮವಾಗಲಿ ಮಳೆಯಾಗಲಿ ಬೀಳುವುದಿಲ್ಲವೆಂದು ನಾನು ಆತನ ಹೆಸರಿನ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ಬೀಳುವಂತೆ ಮಳೆಗೆ ಆಜ್ಞಾಪಿಸಿದರೆ ಮಾತ್ರ ಅದು ಬೀಳುತ್ತದೆ” ಎಂದು ಹೇಳಿದನು.
2 ನಂತರ ಯೆಹೋವನು ಎಲೀಯನಿಗೆ, 3 “ಈ ಸ್ಥಳವನ್ನು ತ್ಯಜಿಸಿ, ಪೂರ್ವದಿಕ್ಕಿಗೆ ಹೋಗು. ಕೆರೀತ್ ಹಳ್ಳದ ಹತ್ತಿರ ಅಡಗಿಕೊ. ಆ ಹಳ್ಳವು ಜೋರ್ಡನ್ ನದಿಯ ಪೂರ್ವದಲ್ಲಿದೆ. 4 ನೀನು ಆ ಹಳ್ಳದ ನೀರನ್ನು ಕುಡಿಯಬಹುದು. ಆ ಸ್ಥಳದಲ್ಲಿರುವ ನಿನಗೆ ಆಹಾರವನ್ನು ತಂದುಕೊಡಬೇಕೆಂದು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ” ಎಂದು ಹೇಳಿದನು. 5 ಆದ್ದರಿಂದ ಯೆಹೋವನು ಹೇಳಿದಂತೆ ಅವನು ಮಾಡಿದನು. ಅವನು ಜೋರ್ಡನ್ ನದಿಯ ಪೂರ್ವಕ್ಕಿರುವ ಕೆರೀತ್ ಹಳ್ಳದ ಹತ್ತಿರ ವಾಸಿಸಲು ಹೋದನು. 6 ಕಾಗೆಗಳು ಪ್ರತಿ ಮುಂಜಾನೆ ಮತ್ತು ಸಂಜೆ ಎಲೀಯನಿಗೆ ರೊಟ್ಟಿ ಮತ್ತು ಮಾಂಸವನ್ನು ತಂದುಕೊಡುತ್ತಿದ್ದವು. ಎಲೀಯನು ಹಳ್ಳದ ನೀರನ್ನು ಕುಡಿಯುತ್ತಿದ್ದನು.
7 ಅಲ್ಲಿಯೂ ಮಳೆಯಿಲ್ಲದ್ದರಿಂದ, ಸ್ವಲ್ಪಕಾಲದ ಬಳಿಕ ಹಳ್ಳವೂ ಬತ್ತಿಹೋಯಿತು. 8 ನಂತರ ಯೆಹೋವನು ಎಲೀಯನಿಗೆ, 9 “ಚೀದೋನ್ಯರ ಚಾರೆಪ್ತಗೆ ಹೋಗಿ ಅಲ್ಲಿ ವಾಸಮಾಡು. ಆ ಸ್ಥಳದಲ್ಲಿ ಒಬ್ಬ ವಿಧವೆಯು ವಾಸಿಸುತ್ತಾಳೆ. ನಿನಗೆ ಆಹಾರವನ್ನು ಕೊಡುವಂತೆ ಅವಳಿಗೆ ನಾನು ಆಜ್ಞಾಪಿಸಿದ್ದೇನೆ” ಎಂದು ಹೇಳಿದನು.
10 ಎಲೀಯನು ಚಾರೆಪ್ತಗೆ ಹೋದನು. ಅವನು ಊರು ಬಾಗಿಲಿಗೆ ಹೋದಾಗ, ಅಲ್ಲಿ ಒಬ್ಬ ವಿಧವೆಯನ್ನು ನೋಡಿದನು. ಆ ಸ್ತ್ರೀಯು ಬೆಂಕಿಗಾಗಿ ಸೌದೆಯನ್ನು ಒಟ್ಟುಗೂಡಿಸುತ್ತಿದ್ದಳು. ಎಲೀಯನು ಅವಳಿಗೆ, “ನನಗೆ ಕುಡಿಯುವುದಕ್ಕೆ ಚಂಬಿನಲ್ಲಿ ಸ್ವಲ್ಪ ನೀರನ್ನು ನೀನು ತರುವೆಯಾ?” ಎಂದು ಕೇಳಿದನು. 11 ಆ ಸ್ತ್ರೀಯು ಅವನಿಗೆ ನೀರನ್ನು ತರಲು ಹೋಗುತ್ತಿರುವಾಗ, ಎಲೀಯನು, “ದಯವಿಟ್ಟು ಒಂದು ತುಂಡು ರೊಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.
12 ಆ ಸ್ತ್ರೀಯು, “ನನ್ನಲ್ಲಿ ರೊಟ್ಟಿಯಿಲ್ಲವೆಂದು ನಿನ್ನ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಾನು ಪ್ರಮಾಣ ಮಾಡುತ್ತೇನೆ. ನನ್ನ ಮಡಕೆಯಲ್ಲಿ ಸ್ವಲ್ಪ ಹಿಟ್ಟು ಮಾತ್ರ ಇದೆ; ಪಾತ್ರೆಯಲ್ಲಿ ಸ್ವಲ್ಪ ಆಲೀವ್ ಎಣ್ಣೆಯಿದೆ. ಬೆಂಕಿ ಹೊತ್ತಿಸಲು ಸೌದೆ ಚೂರುಗಳನ್ನು ಆಯ್ದುಕೊಳ್ಳವುದಕ್ಕಾಗಿ ನಾನು ಈ ಸ್ಥಳಕ್ಕೆ ಬಂದೆ. ಸೌಧೆಯನ್ನು ನಾನು ಮನೆಗೆ ತೆಗೆದುಕೊಂಡು ಹೋಗಿ, ನಮ್ಮ ಕೊನೆಯ ಊಟವನ್ನು ಸಿದ್ಧಪಡಿಸುತ್ತೇನೆ. ನನ್ನ ಮಗ ಮತ್ತು ನಾನು ಅದನ್ನು ತಿಂದು, ನಂತರ ಹಸಿವಿನಿಂದ ಸಾಯುತ್ತೇವೆ” ಎಂದು ಹೇಳಿದಳು.
13 ಎಲೀಯನು ಆ ಸ್ತ್ರೀಗೆ, “ಚಿಂತಿಸದಿರು, ಮನೆಗೆ ಹೋಗಿ ನೀನು ಹೇಳಿದಂತೆ ಆಹಾರವನ್ನು ಸಿದ್ಧಪಡಿಸು. ಆದರೆ ನಿನ್ನಲ್ಲಿರುವ ಹಿಟ್ಟಿನಿಂದ ಮೊದಲು ಒಂದು ಚಿಕ್ಕ ರೊಟ್ಟಿಯನ್ನು ಮಾಡು. ಆ ರೊಟ್ಟಿಯನ್ನು ನನಗೆ ತಂದುಕೊಡು; ನಂತರ ನಿನಗೆ ಮತ್ತು ನಿನ್ನ ಮಗನಿಗೆ ಅಡಿಗೆ ಮಾಡಿಕೋ. 14 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ಆ ಮಡಕೆಯಲ್ಲಿರುವ ಹಿಟ್ಟು ಎಂದೆಂದಿಗೂ ಖಾಲಿಯಾಗುವುದಿಲ್ಲ. ಆ ಪಾತ್ರೆಯಲ್ಲಿ ಯಾವಾಗಲೂ ಎಣ್ಣೆಯಿರುತ್ತದೆ. ಯೆಹೋವನು ಭೂಮಿಯ ಮೇಲೆ ಮಳೆಯನ್ನು ಸುರಿಸುವ ತನಕ ಇದು ಹೀಗೆಯೇ ಮುಂದುವರಿಯುತ್ತದೆ’” ಎಂದು ಹೇಳಿದನು.
15 ಆ ಸ್ತ್ರೀಯು ತನ್ನ ಮನೆಗೆ ಹೋದಳು. ಎಲೀಯನು ಹೇಳಿದಂತೆ ಆಕೆಯು ಮಾಡಿದಳು. ಎಲೀಯನು, ಆ ಸ್ತ್ರೀಯು ಮತ್ತು ಅವಳ ಮಗನು ಅನೇಕ ದಿನಗಳಿಗಾಗುವಷ್ಟು ಆಹಾರವನ್ನು ಹೊಂದಿದ್ದರು. 16 ಮಡಕೆಯಲ್ಲಿದ್ದ ಹಿಟ್ಟು ಮತ್ತು ಪಾತ್ರೆಯಲ್ಲಿದ್ದ ಎಣ್ಣೆ ಎಂದೆಂದಿಗೂ ಖಾಲಿಯಾಗಲಿಲ್ಲ. ಯೆಹೋವನು ಎಲೀಯನ ಮೂಲಕ ಹೇಳಿದ್ದಂತೆಯೇ ಇದು ಸಂಭವಿಸಿತು.
6 ಸಹೋದರ ಸಹೋದರಿಯರೇ, ನಾನು ನಿಮಗೋಸ್ಕರ ಈ ವಿಷಯಗಳಲ್ಲಿ ಅಪೊಲ್ಲೋಸನನ್ನು ಮತ್ತು ನನ್ನನ್ನು ಉದಾಹರಿಸಿದ್ದೇನೆ. ಏಕೆಂದರೆ, “ಬರೆಯಲ್ಪಟ್ಟಿರುವ ನಿಯಮಗಳನ್ನು ಮಾತ್ರ ಅನುಸರಿಸು” ಎಂಬ ವಾಕ್ಯದ ಅರ್ಥವನ್ನು ನೀವು ನಮ್ಮಿಂದ ಕಲಿತುಕೊಳ್ಳಬೇಕು. ಆಗ ನೀವು ಒಬ್ಬನ ವಿಷಯದಲ್ಲಿ ಹೆಚ್ಚಳಪಟ್ಟು ಮತ್ತೊಬ್ಬನನ್ನು ದ್ವೇಷಿಸುವುದಿಲ್ಲ. 7 ನಿಮ್ಮನ್ನು ಇತರ ಜನರಿಗಿಂತಲೂ ಉತ್ತಮರೆಂದು ಯಾರು ಹೇಳುತ್ತಾರೆ? ನಿಮ್ಮಲ್ಲಿರುವ ಪ್ರತಿಯೊಂದನ್ನೂ ದೇವರೇ ನಿಮಗೆ ಕೊಟ್ಟಿದ್ದಾನೆ. ಹೀಗಿರುವಾಗ, ನಿಮ್ಮ ಸ್ವಂತ ಶಕ್ತಿಯಿಂದ ಅವುಗಳನ್ನು ಪಡೆದುಕೊಂಡವರಂತೆ ಏಕೆ ಜಂಬಕೊಚ್ಚಿಕೊಳ್ಳುವಿರಿ?
8 ನಿಮಗೆ ಅಗತ್ಯವಾದ ಪ್ರತಿಯೊಂದೂ ನಿಮಗಿದೆಯೆಂದು ನೀವು ಭಾವಿಸಿಕೊಂಡಿದ್ದೀರಿ. ನೀವು ನಿಮ್ಮನ್ನು ಐಶ್ವರ್ಯವಂತರೆಂದೂ ರಾಜರುಗಳೆಂದೂ ಭಾವಿಸಿಕೊಂಡಿದ್ದೀರಿ. ನೀವು ನಿಜವಾಗಿಯೂ ರಾಜರುಗಳಾಗಿದ್ದರೆ ನನಗೆ ಎಷ್ಟೋ ಸಂತೋಷವಾಗುತ್ತಿತ್ತು. ಆಗ ನಾವೂ ನಿಮ್ಮೊಂದಿಗೆ ರಾಜರುಗಳಾಗುತ್ತಿದ್ದೆವು. 9 ಆದರೆ ದೇವರು ನನಗೂ ಉಳಿದ ಅಪೊಸ್ತಲರಿಗೂ ಕಡೆಯ ಸ್ಥಾನವನ್ನು ಕೊಟ್ಟಿದ್ದಾನೆಂದು ನನಗೆ ತೋರುತ್ತದೆ. ಜನರೆಲ್ಲರ ಎದುರಿನಲ್ಲಿ ನಾವು ಮರಣದಂಡನೆಗೆ ಗುರಿಯಾದಂಥವರಾಗಿದ್ದೇವೆ. ನಾವು ದೇವದೂತರಿಗೂ ಮನುಷ್ಯರಿಗೂ ಒಟ್ಟಿನಲ್ಲಿ ಇಡೀ ಜಗತ್ತಿಗೇ ನೋಟವಾಗಿದ್ದೇವೆ. 10 ನಾವು ಕ್ರಿಸ್ತನಿಗೋಸ್ಕರ ಮೂರ್ಖರಾಗಿದ್ದೇವೆ. ಆದರೆ ನೀವು ನಿಮ್ಮನ್ನು ಕ್ರಿಸ್ತನಲ್ಲಿ ಬಹು ಜ್ಞಾನಿಗಳೆಂದು ಭಾವಿಸಿಕೊಂಡಿದ್ದೀರಿ. ನಾವು ಬಲಹೀನರಾಗಿದ್ದೇವೆ, ಆದರೆ ನೀವು ನಿಮ್ಮನ್ನು ಬಲಿಷ್ಠರೆಂದು ಭಾವಿಸಿಕೊಂಡಿದ್ದೀರಿ. ಜನರು ನಿಮಗೆ ಗೌರವವನ್ನು ಕೊಡುತ್ತಾರೆ; ನಮಗಾದರೋ ಅವರು ಗೌರವವನ್ನು ಕೊಡುವುದಿಲ್ಲ. 11 ಈಗಲೂ ಸಹ ನಾವು ಹಸಿದವರಾಗಿದ್ದೇವೆ; ಬಾಯಾರಿದವರಾಗಿದ್ದೇವೆ; ಧರಿಸಿಕೊಳ್ಳಲು ಸಾಕಷ್ಟು ಬಟ್ಟೆಯಿಲ್ಲದವರಾಗಿದ್ದೇವೆ. ಆಗಾಗ್ಗೆ ನಮಗೆ ಪೆಟ್ಟುಗಳು ಬೀಳುತ್ತಿರುತ್ತವೆ; ನಮಗೆ ಮನೆಗಳೂ ಇಲ್ಲ. 12 ನಾವು ಊಟಕ್ಕಾಗಿ ನಮ್ಮ ಕೈಯಾರೆ ಕಷ್ಟಪಟ್ಟು ದುಡಿಯುತ್ತೇವೆ. ಜನರು ನಮ್ಮನ್ನು ಶಪಿಸುತ್ತಾರೆ, ನಾವಾದರೋ ಅವರನ್ನು ಆಶೀರ್ವದಿಸುತ್ತೇವೆ. ಜನರು ನಮಗೆ ಹಿಂಸೆ ಕೊಟ್ಟರೂ ತಾಳಿಕೊಳ್ಳುತ್ತೇವೆ. 13 ಜನರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಮಾತಾಡುತ್ತಾರೆ. ನಾವಾದರೋ ಅವರಿಗೆ ಒಳ್ಳೆಯ ವಿಷಯಗಳನ್ನು ಹೇಳುತ್ತೇವೆ. ಇಂದಿನವರೆಗೂ ಜನರು ನಮ್ಮನ್ನು ಲೋಕದ ಕಸವೋ ಭೂಮಿಯ ಹೊಲಸೋ ಎಂಬಂತೆ ಪರಿಗಣಿಸಿದ್ದಾರೆ.
14 ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ನಾನು ಪ್ರಯತ್ನಿಸುತ್ತಿಲ್ಲ. ಆದರೆ ನೀವು ನನ್ನ ಪ್ರಿಯ ಮಕ್ಕಳಾಗಿರುವುದರಿಂದ ನಿಮ್ಮನ್ನು ಎಚ್ಚರಿಸುವುದಕ್ಕಾಗಿ ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. 15 ನಿಮಗೆ ಕ್ರಿಸ್ತನಲ್ಲಿ ಹತ್ತುಸಾವಿರ ಮಂದಿ ಉಪದೇಶಕರಿರಬಹುದು, ಆದರೆ ಬಹು ಮಂದಿ ತಂದೆಗಳು ಇಲ್ಲ. ಸುವಾರ್ತೆಯ ಮೂಲಕವಾಗಿ ಕ್ರಿಸ್ತ ಯೇಸುವಿನಲ್ಲಿ ನಾನೇ ನಿಮಗೆ ಆತ್ಮಿಕ ತಂದೆಯಾಗಿದ್ದೇನೆ. 16 ಆದ್ದರಿಂದ ನೀವು ನನ್ನಂತೆಯೇ ಇರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 17 ಆದಕಾರಣವೇ, ನಾನು ನಿಮ್ಮ ಬಳಿಗೆ ತಿಮೊಥೆಯನನ್ನು ಕಳುಹಿಸುತ್ತಿದ್ದೇನೆ, ಅವನು ಪ್ರಭುವಿನಲ್ಲಿ ನನ್ನ ಮಗನಾಗಿದ್ದಾನೆ. ನಾನು ಅವನನ್ನು ಪ್ರೀತಿಸುತ್ತೇನೆ. ಅವನು ನಂಬಿಗಸ್ತನಾಗಿದ್ದಾನೆ. ನಾನು ಕ್ರಿಸ್ತ ಯೇಸುವಿನಲ್ಲಿ ಜೀವಿಸುವ ರೀತಿಯನ್ನು ಅವನು ನಿಮ್ಮ ಜ್ಞಾಪಕಕ್ಕೆ ತರುವನು. ಪ್ರತಿಯೊಂದು ಕಡೆಯಲ್ಲಿಯೂ ಎಲ್ಲಾ ಸಭೆಗಳಲ್ಲಿಯೂ ನಾನು ಅದೇ ರೀತಿಯ ಜೀವನವನ್ನು ಉಪದೇಶಿಸುತ್ತೇನೆ.
18 ನಿಮ್ಮಲ್ಲಿ ಕೆಲವರು ಜಂಬಕೊಚ್ಚಿಕೊಳ್ಳುತ್ತಿದ್ದಾರೆ. ನಾನು ನಿಮ್ಮ ಬಳಿಗೆ ಮತ್ತೆ ಬರುವುದಿಲ್ಲವೆಂದು ಯೋಚಿಸಿ, ನೀವು ಜಂಬಪಡುತ್ತಿದ್ದೀರಿ. 19 ಆದರೆ ನಾನು ಬಹುಬೇಗನೆ ನಿಮ್ಮ ಬಳಿಗೆ ಬರುತ್ತೇನೆ. ಪ್ರಭುವಿನ ಚಿತ್ತವಾದರೆ, ನಾನು ಬಂದು ಜಂಬಕೊಚ್ಚಿಕೊಳ್ಳುವವರು ಹೇಳುವ ಮಾತನ್ನಲ್ಲ, ಅವರು ಏನು ಮಾಡಬಲ್ಲರೆಂಬುದನ್ನು ಗೊತ್ತುಮಾಡಿಕೊಳ್ಳುವೆನು. 20 ಏಕೆಂದರೆ ದೇವರ ರಾಜ್ಯವು ಕೇವಲ ಮಾತಲ್ಲ, ಅದು ಶಕ್ತಿಯಾಗಿದೆ. 21 ನೀವು ಯಾವುದನ್ನು ಇಷ್ಟಪಡುತ್ತೀರಿ? ನಾನು ಬೆತ್ತವನ್ನು ತೆಗೆದುಕೊಂಡು ಬರಬೇಕೇ? ಅಥವಾ ಪ್ರೀತಿ ಮತ್ತು ಸೌಮ್ಯಭಾವಗಳಿಂದ ಕೂಡಿದವನಾಗಿ ಬರಬೇಕೆ?
Kannada Holy Bible: Easy-to-Read Version. All rights reserved. © 1997 Bible League International