Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ.
ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ.
ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ
ಮಾಡಲು ನಾನು ಪ್ರಯತ್ನಿಸುವುದಿಲ್ಲ.
2 ನಾನು ಸಮಾಧಾನದಿಂದಿರುವೆ.
ನನ್ನ ಆತ್ಮವು ನೆಮ್ಮದಿಯಿಂದಿದೆ.
ತನ್ನ ತಾಯಿಯ ತೋಳುಗಳಲ್ಲಿ ಸಂತೃಪ್ತಿಯಾಗಿರುವ ಮಗುವಿನಂತೆ
ನನ್ನ ಆತ್ಮವು ಸಮಾಧಾನದಿಂದಲೂ ನೆಮ್ಮದಿಯಿಂದಲೂ ಇದೆ.
3 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಈಗಲೂ ಆತನಲ್ಲಿ ಭರವಸವಿಡು.
ಎಂದೆಂದಿಗೂ ಆತನಲ್ಲಿ ಭರವಸವಿಡು!
ದೇವರಿಗೆ ಸ್ತೋತ್ರ ಗೀತೆ
26 ಆ ಸಮಯದಲ್ಲಿ ಜನರು ಈ ಹಾಡನ್ನು ಯೆಹೂದದಲ್ಲಿ ಹಾಡುವರು:
ಯೆಹೋವನು ನಮಗೆ ರಕ್ಷಣೆಯನ್ನು ಕೊಡುತ್ತಾನೆ.
ನಮಗೆ ಬಲವಾದ ಪಟ್ಟಣವಿದೆ. ಅದಕ್ಕೆ ಬಲವಾದ ಗೋಡೆಗಳೂ ಕೋಟೆಗಳೂ ಇವೆ.
2 ದ್ವಾರಗಳನ್ನು ತೆರೆಯಿರಿ. ಒಳ್ಳೆಯ ಜನರು ಅದರಲ್ಲಿ ಪ್ರವೇಶಿಸುವರು.
ಅವರು ದೇವರ ನಿಯಮಗಳನ್ನು ಅನುಸರಿಸುತ್ತಾರೆ.
3 ಯೆಹೋವನೇ, ನಿನ್ನಲ್ಲಿ ಭರವಸವಿಟ್ಟವರಿಗೆ
ನೀನು ನಿಜವಾದ ಸಮಾಧಾನವನ್ನು ಅನುಗ್ರಹಿಸುವೆ.
4 ಆದ್ದರಿಂದ ಯೆಹೋವನ ಮೇಲೆ ಯಾವಾಗಲೂ ಭರವಸವಿಡಿರಿ.
ಯಾಕೆಂದರೆ ನಿಮಗೆ ದೇವರಾದ ಯೆಹೋವನಲ್ಲಿ ಸುರಕ್ಷತೆಯ ಸ್ಥಳವಿದೆ.
5 ಆದರೆ ಯೆಹೋವನು ಗರ್ವದ ನಗರವನ್ನು ನಾಶಮಾಡುವನು.
ಅಲ್ಲಿ ವಾಸಿಸುವವರನ್ನು ಆತನು ಶಿಕ್ಷಿಸುತ್ತಾನೆ.
ಯೆಹೋವನು ಆ ಉನ್ನತವಾದ ನಗರವನ್ನು ಧೂಳಿಗೆ ಹಾಕಿಬಿಡುವನು.
6 ಅದು ಕಾಲುತುಳಿತಕ್ಕೆ ಈಡಾಗಿದೆ.
ಆಗ ದೀನರೂ ಬಡಜನರೂ ಆ ಅವಶೇಷಗಳ ಮೇಲೆ ನಡೆಯುವರು.
25 ಎಪಫ್ರೊದೀತನು ಕ್ರಿಸ್ತನಲ್ಲಿ ನನ್ನ ಸಹೋದರನಾಗಿದ್ದಾನೆ. ಕ್ರಿಸ್ತನ ಸೈನ್ಯದಲ್ಲಿ ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಮತ್ತು ಸೇವೆ ಮಾಡುತ್ತಿದ್ದಾನೆ. ನನಗೆ ಸಹಾಯಬೇಕಿದ್ದಾಗ, ನೀವು ಅವನನ್ನು ನನ್ನ ಬಳಿಗೆ ಕಳುಹಿಸಿಕೊಟ್ಟಿರಿ. ಈಗ ನಾನು ಅವನನ್ನು ನಿಮ್ಮ ಬಳಿಗೆ ಮತ್ತೆ ಕಳುಹಿಸಬೇಕೆಂದಿದ್ದೇನೆ. 26 ಏಕೆಂದರೆ ಅವನು ನಿಮ್ಮೆಲ್ಲರನ್ನು ನೋಡಲು ಬಹು ತವಕಪಡುತ್ತಿದ್ದಾನೆ. ತಾನು ಅಸ್ವಸ್ಥನಾಗಿದ್ದದ್ದು ನಿಮಗೆ ತಿಳಿದದ್ದರಿಂದ ಅವನಿಗೆ ಚಿಂತೆಯಾಗಿದೆ. 27 ಅವನು ಅನಾರೋಗ್ಯದಿಂದ ಸಾಯುವ ಸ್ಥಿತಿಯಲ್ಲಿದ್ದನು. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನ್ನನ್ನು ಸಹ ಕರುಣಿಸಿದನು. 28 ಆದ್ದರಿಂದ ಅವನನ್ನು ನಿಮ್ಮ ಬಳಿಗೆ ಕಳುಹಿಸಿಕೊಡಲು ನಾನು ಬಹಳ ತವಕಪಡುತ್ತಿದ್ದೇನೆ. ನೀವು ಅವನನ್ನು ನೋಡಿದಾಗ ಸಂತೋಷಪಡುತ್ತೀರಿ ಮತ್ತು ನಿಮ್ಮ ವಿಷಯದಲ್ಲಿ ನನಗಿರುವ ಚಿಂತೆಯು ಕೊನೆಗೊಳ್ಳುತ್ತದೆ. 29 ಮಹಾ ಆನಂದದಿಂದ ಪ್ರಭುವಿನಲ್ಲಿ ಅವನನ್ನು ಸ್ವಾಗತಿಸಿರಿ. ಎಪಫ್ರೊದೀತನಂಥ ಜನರನ್ನು ಗೌರವಿಸಿರಿ. 30 ಅವನು ಕ್ರಿಸ್ತನ ಕೆಲಸಕ್ಕಾಗಿ ಬಹುಮಟ್ಟಿಗೆ ತನ್ನ ಪ್ರಾಣವನ್ನೇ ಕೊಟ್ಟದ್ದರಿಂದ ಅವನಿಗೆ ಮಾನ್ಯತೆ ದೊರೆಯಬೇಕು. ನನಗೆ ಸಹಾಯಮಾಡಲು ಅವನು ತನ್ನ ಪ್ರಾಣವನ್ನೇ ಅಪಾಯಕ್ಕೆ ಈಡುಮಾಡಿಕೊಂಡನು. ಈ ರೀತಿಯ ಸಹಾಯ ಮಾಡಲು ನಿಮಗೆ ಸಾಧ್ಯವಾಗಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International