Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 131

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ.
    ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ.
ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ
    ಮಾಡಲು ನಾನು ಪ್ರಯತ್ನಿಸುವುದಿಲ್ಲ.
ನಾನು ಸಮಾಧಾನದಿಂದಿರುವೆ.
    ನನ್ನ ಆತ್ಮವು ನೆಮ್ಮದಿಯಿಂದಿದೆ.
ತನ್ನ ತಾಯಿಯ ತೋಳುಗಳಲ್ಲಿ ಸಂತೃಪ್ತಿಯಾಗಿರುವ ಮಗುವಿನಂತೆ
    ನನ್ನ ಆತ್ಮವು ಸಮಾಧಾನದಿಂದಲೂ ನೆಮ್ಮದಿಯಿಂದಲೂ ಇದೆ.

ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಈಗಲೂ ಆತನಲ್ಲಿ ಭರವಸವಿಡು.
    ಎಂದೆಂದಿಗೂ ಆತನಲ್ಲಿ ಭರವಸವಿಡು!

ಯೆಶಾಯ 31

ಇಸ್ರೇಲು, ದೇವರ ಶಕ್ತಿಯ ಮೇಲೆ ಅವಲಂಬಿಸಬೇಕು

31 ಸಹಾಯಕ್ಕಾಗಿ ಈಜಿಪ್ಟಿಗೆ ಹೋಗುವ ಜನರನ್ನು ನೋಡಿರಿ. ಆ ಜನರು ಕುದುರೆಗಳಿಗಾಗಿ ಕೇಳುತ್ತಿದ್ದಾರೆ. ಕುದುರೆಗಳು ಅವರನ್ನು ರಕ್ಷಿಸುತ್ತವೆ ಎಂದು ಅವರು ಭಾವಿಸುತ್ತಾರೆ. ಈಜಿಪ್ಟಿನ ಬಹಳ ರಥಗಳು ಮತ್ತು ಬಹಳ ಕುದುರೆಗಳು ಅವರನ್ನು ಕಾಪಾಡುವವು ಎಂದು ಜನರು ತಿಳಿದುಕೊಳ್ಳುತ್ತಾರೆ. ಸೈನ್ಯವು ದೊಡ್ಡದಾಗಿರುವದರಿಂದ ಯಾವ ಅಪಾಯವೂ ಬಾರದು ಎಂದು ಅವರು ತಿಳಿದುಕೊಳ್ಳುತ್ತಾರೆ. ಜನರು ಇಸ್ರೇಲಿನ ಪರಿಶುದ್ಧನನ್ನು ನಂಬುವದಿಲ್ಲ. ಅವರು ಯೆಹೋವನ ಸಹಾಯವನ್ನು ಕೋರುವದಿಲ್ಲ. ಆದರೆ ಯೆಹೋವನು ಜ್ಞಾನವಂತನಾಗಿದ್ದಾನೆ. ಆತನೇ ಅವರಿಗೆ ವಿರುದ್ಧವಾಗಿ ಸಂಕಟಗಳನ್ನು ಬರಮಾಡುವನು. ದೇವರ ಆಜ್ಞೆಯನ್ನು ಜನರು ಬದಲಾಯಿಸಲಾಗುವದಿಲ್ಲ. ಯೆಹೋವನು ಎದ್ದು ದುಷ್ಟಜನರ (ಯೆಹೂದ) ವಿರುದ್ಧ ಯುದ್ಧ ಮಾಡುವನು. ಅವರಿಗೆ ಸಹಾಯ ಕೊಡುವವರ (ಈಜಿಪ್ಟ್) ವಿರುದ್ಧವಾಗಿಯೂ ಯುದ್ಧ ಮಾಡುವನು.

ಈಜಿಪ್ಟಿನ ಜನರು ಮನುಷ್ಯಮಾತ್ರದವರೇ. ಅವರು ದೇವರಲ್ಲ. ಈಜಿಪ್ಟಿನ ಕುದುರೆಗಳು ಪ್ರಾಣಿಗಳಾಗಿವೆ. ಅವುಗಳು ಆತ್ಮವಲ್ಲ. ಯೆಹೋವನು ತನ್ನ ಕೈಯನ್ನು ಚಾಚುವಾಗ ಸಹಾಯ ಮಾಡುವವನು (ಈಜಿಪ್ಟ್) ಸೋಲುವನು. ಸಹಾಯ ಪಡೆದವನು (ಯೆಹೂದ) ಬೀಳುವನು. ಅವರೆಲ್ಲರೂ ಒಟ್ಟಿಗೆ ನಾಶವಾಗುವರು.

ಯೆಹೋವನು ನನಗೆ ಹೀಗೆ ಹೇಳಿದನು: “ಸಿಂಹವು ಅಥವಾ ಪ್ರಾಯದ ಸಿಂಹವು ಒಂದು ಪ್ರಾಣಿಯನ್ನು ಹಿಡಿದು ಕೊಂದಾಗ ಅದರ ಮೇಲೆ ನಿಂತು ಗರ್ಜಿಸುವದು. ಆ ಸಮಯದಲ್ಲಿ ಯಾವುದೂ ಆ ಸಿಂಹವನ್ನು ಹೆದರಿಸಲಾರದು. ಜನರು ಬಂದು ಗಟ್ಟಿಯಾಗಿ ಚೀರಿಕೊಂಡರೂ ಸಿಂಹಕ್ಕೆ ಹೆದರಿಕೆಯುಂಟಾಗದು; ದೊಡ್ಡ ಶಬ್ದ ಮಾಡಿದರೂ ಸಿಂಹವು ಓಡಿಹೋಗದು.”

ಅದೇ ರೀತಿಯಲ್ಲಿ ಸರ್ವಶಕ್ತನಾದ ಯೆಹೋವನು ಚೀಯೋನ್ ಪರ್ವತಕ್ಕೆ ಬಂದು ಯುದ್ಧ ಮಾಡುವನು. ಆತನು ಜೆರುಸಲೇಮನ್ನು ಹಕ್ಕಿಯು ತನ್ನ ಗೂಡಿನ ಸುತ್ತಲೂ ಹಾರಾಡುತ್ತಾ ಕಾಪಾಡುವಂತೆ ಸಂರಕ್ಷಿಸುವನು. ಯೆಹೋವನು ಜೆರುಸಲೇಮನ್ನು ರಕ್ಷಿಸುವನು. ಯೆಹೋವನು “ಹಾದುಹೋಗಿ” ಜೆರುಸಲೇಮನ್ನು ರಕ್ಷಿಸುವನು.

ದೇವರಿಗೆ ವಿರುದ್ಧವಾಗಿರುವ ಇಸ್ರೇಲಿನ ಮಕ್ಕಳೇ, ನೀವು ದೇವರ ಬಳಿಗೆ ಹಿಂತಿರುಗಿ ಬನ್ನಿರಿ. ಆಗ ಜನರು ತಯಾರಿಸಿರುವ ಬೆಳ್ಳಿಬಂಗಾರದ ವಿಗ್ರಹಗಳನ್ನು ಪೂಜಿಸುವದನ್ನು ನಿಲ್ಲಿಸುವರು. ನೀವು ಆ ವಿಗ್ರಹಗಳನ್ನು ತಯಾರಿಸಿದಾಗ ನಿಜವಾಗಿಯೂ ಪಾಪಮಾಡಿದಿರಿ.

ಅಶ್ಶೂರವು ಕತ್ತಿಯಿಂದ ನಾಶವಾಗುವದು ಖಂಡಿತ. ಆದರೆ ಆ ಕತ್ತಿಯು ಮನುಷ್ಯನ ಕತ್ತಿಯಲ್ಲ. ಖಡ್ಗವು ಅವರನ್ನು ನುಂಗುವುದು, ಆದರೆ ಅದು ಮನುಷ್ಯನ ಖಡ್ಗವಲ್ಲ. ಅಶ್ಶೂರವು ದೇವರ ಖಡ್ಗದಿಂದ ಓಡಿಹೋಗುವದು. ಅದರ ಯೌವನಸ್ಥರು ಸೆರೆಹಿಡಿಯಲ್ಪಟ್ಟು ಗುಲಾಮರನ್ನಾಗಿ ಮಾಡಲ್ಪಡುವರು. ಅವರ ಸುರಕ್ಷತೆಯ ಸ್ಥಳ ನಾಶವಾಗುವದು. ಅವರ ಅಧಿಪತಿಗಳು ಧ್ವಜವನ್ನು ಬಿಟ್ಟು ಸೋತುಹೋಗುವರು.

ಯೆಹೋವನೇ ಇದನ್ನು ನುಡಿದಿದ್ದಾನೆ. ಆತನ ಅಗ್ನಿವೇದಿಕೆಯು ಚೀಯೋನಿನಲ್ಲಿದೆ. ಆತನ ಒಲೆಯು ಜೆರುಸಲೇಮಿನಲ್ಲಿದೆ.

ಲೂಕ 11:14-23

ಯೇಸುವಿನ ಶಕ್ತಿ ದೇವರಿಂದ ಬಂದದ್ದು

(ಮತ್ತಾಯ 12:22-30; ಮಾರ್ಕ 3:20-27)

14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.

16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.

21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.

23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International