Revised Common Lectionary (Complementary)
ರಚನೆಗಾರ: ದಾವೀದ.
32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
ಅವನೇ ಧನ್ಯನು.
2 ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
ಅವನೇ ಧನ್ಯನು.
3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
4 ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.
5 ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
6 ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
7 ನೀನು ನನಗೆ ಆಶ್ರಯದುರ್ಗವಾಗಿರುವೆ.
ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
8 ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
ಮಾರ್ಗದರ್ಶನ ನೀಡುವೆನು;
ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
9 ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”
10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.
30 “ನಾನು ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಯೆಹೋವನ ನುಡಿ. “ಈ ಪ್ರವಾದಿಗಳು ನನ್ನ ಪದಗಳನ್ನು ಒಬ್ಬರಿಂದೊಬ್ಬರು ಕದಿಯುತ್ತಿದ್ದಾರೆ.[a] 31 ನಾನು ಸುಳ್ಳುಪ್ರವಾದಿಗಳನ್ನು ವಿರೋಧಿಸುತ್ತೇನೆ.” ಇದು ಯೆಹೋವನ ನುಡಿ. “ಅವರು ತಮ್ಮ ಮಾತುಗಳನ್ನು ಹೇಳಿ ಅದು ನನ್ನ ಸಂದೇಶವೆಂಬುವಂತೆ ನಟನೆ ಮಾಡುತ್ತಾರೆ. 32 ನಾನು ಕಾಲ್ಪನಿಕ ಕನಸುಗಳನ್ನು ಬೋಧಿಸುವ ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಪ್ರಭುವಿನ ನುಡಿ. “ಅವರು ತಮ್ಮ ಸುಳ್ಳುಬೋಧನೆಗಳಿಂದ ನನ್ನ ಜನರನ್ನು ಅಡ್ಡದಾರಿಗೆಳೆಯುತ್ತಾರೆ. ನಾನು ಜನರಿಗೆ ಉಪದೇಶ ಮಾಡುವದಕ್ಕಾಗಿ ಆ ಪ್ರವಾದಿಗಳನ್ನು ಕಳುಹಿಸಿಲ್ಲ. ನನಗೋಸ್ಕರವಾಗಿ ಏನನ್ನಾದರೂ ಮಾಡಲು ನಾನು ಅವರಿಗೆ ಎಂದೂ ಆಜ್ಞಾಪಿಸಿಲ್ಲ. ಅವರು ಯೆಹೂದದ ಜನರಿಗೆ ಸ್ವಲ್ಪವೂ ಸಹಾಯವನ್ನು ಮಾಡಲಾರರು” ಇದು ಯೆಹೋವನ ನುಡಿ.
ಯೆಹೋವನಿಂದ ದುಃಖಕರ ಸಂದೇಶ
33 “ಯೆಹೂದದ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ‘ಯೆರೆಮೀಯನೇ, ಯೆಹೋವನು ದಯಪಾಲಿಸಿರುವ ಪ್ರಕಟನೆಯೇನು?’ ಎಂದು ನಿನ್ನನ್ನು ಕೇಳಬಹುದು. ನೀನು ಅವರಿಗೆ, ‘ಯೆಹೋವನಿಗೆ ನೀವೇ ದೊಡ್ಡ ಭಾರ.[b] ನಾನು ಆ ಭಾರವನ್ನು ಕೆಳಗೆ ಎಸೆದುಬಿಡುತ್ತೇನೆ’” ಎಂದು ಉತ್ತರಿಸು. ಇದು ಯೆಹೋವನ ನುಡಿ.
34 “ಒಬ್ಬ ಪ್ರವಾದಿಯಾಗಲಿ ಯಾಜಕನಾಗಲಿ ಸಾಮಾನ್ಯ ಮನುಷ್ಯನಾಗಲಿ ‘ಇದು ಯೆಹೋವನ ಭಾರ’ ಎಂದು ಹೇಳಿದರೆ ಅವನು ಸುಳ್ಳು ಹೇಳಿದಂತೆಯೇ. ಆದ್ದರಿಂದ ನಾನು ಆ ವ್ಯಕ್ತಿಯನ್ನು ಮತ್ತು ಅವರ ಇಡೀ ಕುಟುಂಬವನ್ನು ದಂಡಿಸುತ್ತೇನೆ. 35 ನೀವು ಪರಸ್ಪರ ‘ಯೆಹೋವನ ಉತ್ತರವೇನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಮಾತನಾಡಬೇಕು. 36 ನೀವು ಪುನಃ ಎಂದಿಗೂ ‘ಯೆಹೋವನ ಭಾರ’ ಎಂಬ ಮಾತನ್ನು ಉಪಯೋಗಿಸಕೂಡದು. ಏಕೆಂದರೆ ಯೆಹೋವನ ಸಂದೇಶವು ಯಾರಿಗೂ ಭಾರವಾಗಬೇಕಾಗಿಲ್ಲ. ಆದರೆ ನೀವು ನಿಮ್ಮ ದೇವರ ಮಾತುಗಳನ್ನು ತಲೆಕೆಳಗೆ ಮಾಡಿದ್ದೀರಿ. ಆತನು ಸರ್ವಶಕ್ತನಾಗಿದ್ದಾನೆ ಮತ್ತು ಜೀವಸ್ವರೂಪನಾದ ದೇವರಾಗಿದ್ದಾನೆ.
37 “ನೀವು ದೇವರ ಸಂದೇಶವನ್ನು ತಿಳಿದುಕೊಳ್ಳ ಬಯಸಿದರೆ ಪ್ರವಾದಿಯನ್ನು ಕುರಿತು ‘ಯೆಹೋವನು ನಿನಗೆ ಏನೆಂದು ಉತ್ತರವನ್ನು ಕೊಟ್ಟನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಕೇಳಿರಿ. 38 ಆದರೆ ‘ಯೆಹೋವನ ಭಾರವೇನು?’ ಎಂದು ಕೇಳಬೇಡಿರಿ. ನೀವು ಆ ಪದಗಳನ್ನು ಬಳಸಿದರೆ ಯೆಹೋವನು ನಿಮಗೆ ಹೀಗೆ ಹೇಳುವನು: ‘ನೀವು ನನ್ನ ಸಂದೇಶವನ್ನು “ಯೆಹೋವನ ಭಾರವೆಂದು” ಹೇಳಬಾರದಾಗಿತ್ತು. ಆ ಪದಗಳನ್ನು ಬಳಸಬಾರದೆಂದು ನಾನು ನಿಮಗೆ ಹೇಳಿದ್ದೇನೆ. 39 ಆದರೆ ನೀವು ನನ್ನ ಸಂದೇಶವನ್ನು ಭಾರವಾದ ಹೊರೆ ಎಂದು ಹೇಳಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಒಂದು ಭಾರವಾದ ಹೊರೆಯಂತೆ ಎತ್ತಿ ನನ್ನಿಂದ ದೂರ ಎಸೆಯುತ್ತೇನೆ. ನಾನು ನಿಮ್ಮ ಪೂರ್ವಿಕರಿಗೆ ಜೆರುಸಲೇಮ್ ನಗರವನ್ನು ಕೊಟ್ಟೆ. ಆದರೆ ನಾನು ನಿಮ್ಮನ್ನೂ ಆ ನಗರವನ್ನೂ ನನ್ನಿಂದ ದೂರ ಎಸೆಯುವೆನು. 40 ನಿಮಗೆ ಶಾಶ್ವತವಾದ ಅಪಕೀರ್ತಿಯನ್ನು ತರುವೆನು. ನೀವು ಈ ಅವಮಾನವನ್ನು ಎಂದಿಗೂ ಮರೆಯಲಾರಿರಿ.’”
ಸುಳ್ಳುಬೋಧಕರ ವಿರುದ್ಧ ಯೋಹಾನನ ಎಚ್ಚರಿಕೆ
4 ನನ್ನ ಪ್ರಿಯ ಸ್ನೇಹಿತರೇ, ಈಗ ಲೋಕದಲ್ಲಿ ಅನೇಕ ಸುಳ್ಳುಪ್ರವಾದಿಗಳಿದ್ದಾರೆ. ಆದ್ದರಿಂದ ಪ್ರತಿಯೊಂದು ಆತ್ಮವನ್ನು ನಂಬಬೇಡಿ. ಆದರೆ ಆ ಆತ್ಮಗಳು ದೇವರಿಂದ ಬಂದವುಗಳೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ. 2 ದೇವರಾತ್ಮವನ್ನು ನೀವು ಇದೇ ರೀತಿ ತಿಳಿದುಕೊಳ್ಳಲು ಸಾಧ್ಯ. “ಈ ಲೋಕಕ್ಕೆ ಮನುಷ್ಯನಾಗಿ ಬಂದ ಯೇಸುವೇ ಕ್ರಿಸ್ತನೆಂದು ನಾನು ನಂಬುತ್ತೇನೆ” ಎಂದು ಹೇಳುವ ಆತ್ಮವು ದೇವರಿಂದ ಬಂದದ್ದಾಗಿದೆ. 3 ಯೇಸುವಿನ ಬಗ್ಗೆ ಹೀಗೆ ಹೇಳದ ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮ. ಕ್ರಿಸ್ತವಿರೋಧಿಯು ಬರುತ್ತಾನೆ ಎಂಬುದನ್ನು ನೀವು ಕೇಳಿರುವಿರಿ. ಕ್ರಿಸ್ತವಿರೋಧಿಯು ಈಗಾಗಲೇ ಈ ಲೋಕದಲ್ಲಿದ್ದಾನೆ.
4 ನನ್ನ ಪ್ರಿಯ ಮಕ್ಕಳೇ, ನೀವು ದೇವರಿಗೆ ಸೇರಿದವರು. ಆದ್ದರಿಂದ ನೀವು ಅವರನ್ನು (ಸುಳ್ಳುಬೋಧಕರು) ಸೋಲಿಸಿದ್ದೀರಿ. ಏಕೆಂದರೆ ನಿಮ್ಮಲ್ಲಿರುವಾತನು (ದೇವರು) ಈ ಲೋಕದ ಜನರಲ್ಲಿರುವವನಿಗಿಂತ (ಸೈತಾನ) ದೊಡ್ಡವನಾಗಿದ್ದಾನೆ. 5 ಆ ಜನರು (ಸುಳ್ಳುಬೋಧಕರು) ಈ ಲೋಕಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಅವರು ಹೇಳುವುದೆಲ್ಲವೂ ಈ ಲೋಕಕ್ಕೆ ಸೇರಿವೆ. ಅವರು ಏನೇ ಹೇಳಿದರೂ ಲೋಕವು ಕೇಳುತ್ತದೆ. 6 ನಾವಾದರೋ ದೇವರಿಂದ ಬಂದವರು. ಆದ್ದರಿಂದ ದೇವರನ್ನು ಬಲ್ಲ ಜನರು ನಮಗೆ ಕಿವಿಗೊಡುತ್ತಾರೆ, ಆದರೆ ದೇವರಿಂದ ಬಂದಿಲ್ಲದ ಜನರು ನಮ್ಮ ಮಾತುಗಳನ್ನು ಕೇಳುವುದಿಲ್ಲ. ಯಾವುದು ಸತ್ಯವನ್ನು ಬೋಧಿಸುವ ಆತ್ಮ, ಯಾವುದು ಸುಳ್ಳನ್ನು ಬೋಧಿಸುವ ಆತ್ಮ ಎಂಬುದನ್ನು ಹೀಗೆ ತಿಳಿದುಕೊಳ್ಳುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International