Revised Common Lectionary (Complementary)
2 ವ್ಯರ್ಥವೇ ವ್ಯರ್ಥ, ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ!
ಜ್ಞಾನದಿಂದ ಸಂತೋಷವಾಗುವುದೇ?
12 ಪ್ರಸಂಗಿಯಾದ ನಾನು ಜೆರುಸಲೇಮಿನಲ್ಲಿ ಇಸ್ರೇಲರಿಗೆ ರಾಜನಾಗಿದ್ದೆನು. 13 ಈ ಜೀವಿತದ ಎಲ್ಲಾ ವಿಷಯಗಳನ್ನು ಜ್ಞಾನದಿಂದ ವಿಮರ್ಶಿಸಿ ಕಲಿತುಕೊಳ್ಳಲು ನಿರ್ಧರಿಸಿದೆನು. ದೇವರು ಮನುಷ್ಯರಿಗೆ ಕೊಟ್ಟಿರುವ ಕೆಲಸವೆಲ್ಲ ಬಹು ಪ್ರಯಾಸವೇ. 14 ಈ ಲೋಕದ ಕೆಲಸಗಳನ್ನೆಲ್ಲ ನೋಡಿದಾಗ ಅವೆಲ್ಲ ಕೇವಲ ವ್ಯರ್ಥವೆಂದು ಕಂಡುಕೊಂಡೆನು. ಅವು ಗಾಳಿಯನ್ನು ಹಿಡಿಯಲು ಪ್ರಯತ್ನಿಸಿದಷ್ಟೇ ವ್ಯರ್ಥವಾಗಿವೆ.
18 ನನ್ನ ಪ್ರಯಾಸದ ಫಲವನ್ನು ನನ್ನ ತರುವಾಯ ಬೇರೆಯವರು ಪಡೆದುಕೊಳ್ಳುವುದರಿಂದ ನಾನು ಲೋಕದಲ್ಲಿ ಪಟ್ಟ ಪ್ರಯಾಸಕ್ಕೆ ಬೇಸರಗೊಂಡೆನು. 19 ನಾನು ಜ್ಞಾನವನ್ನೂ ಪ್ರಯಾಸವನ್ನೂ ಯಾವುದರಲ್ಲಿ ವಿನಿಯೋಗಿಸಿದ್ದೇನೋ ಅದರ ಮೇಲೆ ಬೇರೊಬ್ಬನು ದೊರೆತನ ಮಾಡುವನು. ಅವನು ಜ್ಞಾನಿಯೋ ಮೂಢನೋ ನನಗೆ ಗೊತ್ತಿಲ್ಲ. ಇದೂ ವ್ಯರ್ಥವೇ.
20 ಆದ್ದರಿಂದ, ನಾನು ಈ ಲೋಕದಲ್ಲಿ ಪ್ರಯಾಸಪಟ್ಟ ಕೆಲಸಗಳ ಬಗ್ಗೆ ವ್ಯಸನಗೊಂಡೆನು. 21 ಒಬ್ಬನು ತನ್ನ ಜ್ಞಾನದಿಂದಲೂ ತಿಳುವಳಿಕೆಯಿಂದಲೂ ಕಾರ್ಯವನ್ನು ಸಫಲಗೊಳಿಸಿದ ಮೇಲೆ ಅದರ ಫಲವನ್ನು ಪ್ರಯಾಸಪಡದ ಬೇರೊಬ್ಬನಿಗೆ ಬಿಟ್ಟು ಹೋಗಬೇಕಾಗುವುದು. ಇದೂ ವ್ಯರ್ಥವೂ ಅನ್ಯಾಯವೂ ಆಗಿದೆ.
22 ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ಪ್ರಯೋಜನವೇನು? 23 ಅವನ ಜೀವಮಾನವೆಲ್ಲಾ ಅವನಿಗೆ ವ್ಯಸನವಿರುವುದು; ಕೆಲಸದಲ್ಲೆಲ್ಲಾ ಕಷ್ಟವಿರುವುದು; ರಾತ್ರಿಯಲ್ಲಿಯೂ ಮನಸ್ಸಿಗೆ ವಿಶ್ರಾಂತಿಯಿರದು. ಇದೂ ವ್ಯರ್ಥವೇ.
ರಚನೆಗಾರರು: ಕೋರಹೀಯರು.
49 ಸರ್ವಜನಾಂಗಗಳೇ, ಕೇಳಿರಿ,
ಭೂನಿವಾಸಿಗಳೆಲ್ಲರೇ, ಆಲಿಸಿರಿ.
2 ಸಾಮಾನ್ಯ ಜನರೇ, ಅಧಿಪತಿಗಳೇ, ಬಡವರೇ, ಶ್ರೀಮಂತರೇ, ನೀವೆಲ್ಲರೂ ಒಂದಾಗಿ ಬಂದು ಕೇಳಿರಿ.
3 ನಾನು ನಿಮಗೆ ಸುಜ್ಞಾನವನ್ನೂ
ವಿವೇಕವನ್ನೂ ಬೋಧಿಸುವೆನು.
4 ನಾನು ಅವುಗಳನ್ನು ಕಿವುಗೊಟ್ಟು ಕೇಳಿದ್ದೇನೆ.
ನಾನು ಹಾರ್ಪ್ವಾದ್ಯವನ್ನು ನುಡಿಸುತ್ತಾ ಅವುಗಳನ್ನು ನಿಮಗಾಗಿ ಹಾಡುವೆನು.
5 ಆಪತ್ತು ಬಂದಾಗ ನಾನೇಕೆ ಭಯಪಡಬೇಕು?
ದುಷ್ಟರು ನನ್ನನ್ನು ಆವರಿಸಿ ಮೋಸದಿಂದ ಹಿಡಿಯಲು ಪ್ರಯತ್ನಿಸುವಾಗ ನಾನೇಕೆ ಭಯಪಡಬೇಕು?
6 ಅವರು ತಮ್ಮ ಸ್ವಂತ ಬಲದಲ್ಲಿಯೂ ಐಶ್ವರ್ಯದಲ್ಲಿಯೂ ಭರವಸೆಯಿಟ್ಟಿದ್ದಾರೆ;
ಅವರು ಬುದ್ಧಿಹೀನರಾಗಿದ್ದಾರೆ.
7 ಯಾವ ಮಾನವ ಸ್ನೇಹಿತನೂ ನಿನ್ನನ್ನು ರಕ್ಷಿಸಲಾರನು.
ಅಲ್ಲದೆ ದೇವರಿಗೆ ಈಡನ್ನು ಕೊಟ್ಟು ನಿನ್ನನ್ನು ಬಿಡಿಸಿಕೊಳ್ಳಲಾರನು.
8 ಸ್ವಂತ ಪ್ರಾಣವನ್ನು ಖರೀದಿಸಲು ಬೇಕಾಗುವಷ್ಟು
ಹಣ ಯಾವನಿಗೂ ದೊರೆಯುವುದಿಲ್ಲ.
9 ಸದಾಕಾಲ ಬದುಕುವ ಹಕ್ಕನ್ನು ಖರೀದಿಸಲು
ಮತ್ತು ತನ್ನ ಸಮಾಧಿಯಲ್ಲಿ ತನ್ನ ಸ್ವಂತ ದೇಹ ಕೊಳೆಯದಂತೆ ಮಾಡಲು
ಬೇಕಾಗುವಷ್ಟು ಹಣವನ್ನು ಯಾವನೂ ಪಡೆದುಕೊಳ್ಳಲಾರನು.
10 ಬುದ್ಧಿಹೀನರೂ ಮೂಢರೂ ಸಾಯುವಂತೆ ಜ್ಞಾನಿಗಳೂ ಸಾಯುವರು.
ಅವರು ಸತ್ತಾಗ ಅವರ ಆಸ್ತಿಯು ಬೇರೆಯವರ ಪಾಲಾಗುವುದು.
11 ಸಮಾಧಿಯೇ ಅವರ ಶಾಶ್ವತವಾದ ಹೊಸ ಮನೆ.
ಅವರೆಷ್ಟೇ ಭೂ ಆಸ್ತಿಯನ್ನು ಹೊಂದಿದ್ದರೂ ಅದರಿಂದೇನೂ ಪ್ರಯೋಜನವಿಲ್ಲ.
12 ಜನರು ಐಶ್ವರ್ಯವಂತರಾಗಿದ್ದರೂ ಭೂಲೋಕದಲ್ಲಿ ಶಾಶ್ವತವಾಗಿ ಇರಲಾಗದು.
ಎಲ್ಲರೂ ಪ್ರಾಣಿಗಳಂತೆಯೇ ಸಾಯುವರು.
ಕ್ರಿಸ್ತನಲ್ಲಿ ನಿಮ್ಮ ಹೊಸಜೀವನ
3 ನೀವು ಕ್ರಿಸ್ತನ ಜೊತೆಯಲ್ಲಿ ಜೀವಂತವಾಗಿ ಎದ್ದುಬಂದಿರುವುದರಿಂದ ಪರಲೋಕದವುಗಳನ್ನು ಪಡೆಯಲು ಪ್ರಯತ್ನಿಸಿರಿ. ಕ್ರಿಸ್ತ ಯೇಸು ಪರಲೋಕದಲ್ಲಿ ದೇವರ ಬಲಗಡೆ ಆಸನಾರೂಢನಾಗಿದ್ದಾನೆ. 2 ಪರಲೋಕದವುಗಳನ್ನು ಮಾತ್ರ ಆಲೋಚಿಸಿ, ಭೂಲೋಕದವುಗಳನ್ನು ಆಲೋಚಿಸಬೇಡಿ. 3 ನಿಮ್ಮ ಹಳೆಯ ಸ್ವಭಾವ ಸತ್ತುಹೋಗಿದೆ, ನಿಮ್ಮ ಹೊಸ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿದೆ. 4 ಕ್ರಿಸ್ತನೇ ನಿಮ್ಮ ಜೀವ, ಆತನು ಮರಳಿ ಪ್ರತ್ಯಕ್ಷನಾದಾಗ, ನೀವೂ ಆತನ ಪ್ರಭಾವದೊಂದಿಗೆ ಪ್ರತ್ಯಕ್ಷರಾಗುವಿರಿ.
5 ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ. 6 ಇವು ದೇವರನ್ನು ಕೋಪಗೊಳಿಸುತ್ತವೆ. 7 ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.
8 ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. 9 ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ. 10 ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ. 11 ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.
ಸ್ವಾರ್ಥತೆಯ ಬಗ್ಗೆ ಯೇಸುವಿನ ಎಚ್ಚರಿಕೆ
13 ಸಮೀಪದಲ್ಲಿದ್ದ ಒಬ್ಬನು ಯೇಸುವಿಗೆ, “ಬೋಧಕನೇ, ನಮ್ಮ ತಂದೆ ಇದೀಗ ಸತ್ತುಹೋದನು. ನಮ್ಮ ತಂದೆಯ ಆಸ್ತಿಯಲ್ಲಿ ನನಗೆ ಪಾಲುಕೊಡಬೇಕೆಂದು ನನ್ನ ಅಣ್ಣನಿಗೆ ಹೇಳು” ಎಂದು ಹೇಳಿದನು.
14 ಆದರೆ ಯೇಸು ಅವನಿಗೆ, “ನಾನು ನಿಮ್ಮ ನ್ಯಾಯಾಧಿಪತಿ ಎಂದಾಗಲಿ ನಿಮ್ಮ ತಂದೆಯ ಆಸ್ತಿಯನ್ನು ನಿಮ್ಮಿಬ್ಬರಿಗೆ ಹಂಚಿಕೊಡುವವನು ಎಂದಾಗಲಿ ನಿನಗೆ ಯಾರು ಹೇಳಿದರು?” ಎಂದು ಕೇಳಿದನು. 15 ಬಳಿಕ ಯೇಸು ನೆರೆದಿದ್ದ ಜನರಿಗೆ, “ಎಚ್ಚರಿಕೆ, ಯಾವ ವಿಧವಾದ ಸ್ವಾರ್ಥಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಒಬ್ಬನಿಗೆ ಎಷ್ಟೇ ಆಸ್ತಿಯಿದ್ದರೂ ಅದರಿಂದ ಅವನು ಜೀವವನ್ನು ಪಡೆದುಕೊಳ್ಳಲಾರನು” ಎಂದನು.
16 ಬಳಿಕ ಯೇಸು ಈ ಸಾಮ್ಯವನ್ನು ಹೇಳಿದನು: “ಒಬ್ಬ ಐಶ್ವರ್ಯವಂತನಿದ್ದನು. ಅವನಿಗೆ ಬಹಳ ಜಮೀನಿತ್ತು. ಒಮ್ಮೆ ಅವನ ಜಮೀನಿನಲ್ಲಿ ಸಮೃದ್ಧಿಯಾದ ಬೆಳೆ ಆಯಿತು. 17 ಆಗ ಐಶ್ವರ್ಯವಂತನು, ‘ನಾನೇನು ಮಾಡಲಿ? ನನ್ನ ಬೆಳೆಯನ್ನೆಲ್ಲಾ ತುಂಬಿಡಲು ನನಗೆ ಸ್ಥಳವಿಲ್ಲವಲ್ಲಾ!’ ಎಂದುಕೊಂಡನು.
18 “ಬಳಿಕ ಅವನು, ‘ನಾನೇನು ಮಾಡಬೇಕೆಂಬುದು ನನಗೆ ತಿಳಿದದೆ. ನನ್ನ ಕಣಜಗಳನ್ನು ಕೆಡವಿ, ದೊಡ್ಡ ಕಣಜಗಳನ್ನು ಕಟ್ಟುವೆನು! ನನ್ನ ಹೊಸ ಕಣಜಗಳಲ್ಲಿ ಗೋಧಿಯನ್ನೂ ಒಳ್ಳೆಯ ಪದಾರ್ಥಗಳನ್ನೂ ತುಂಬಿಸಿಡುವೆನು.’ 19 ಆ ಬಳಿಕ ನಾನು ‘ನನಗೆ ಅನೇಕ ವರ್ಷಗಳವರೆಗೆ ಬೇಕಾದಷ್ಟು ಸರಕನ್ನು ಕೂಡಿಸಿಟ್ಟಿದ್ದೇನೆ. ವಿಶ್ರಮಿಸಿಕೊ, ತಿನ್ನು, ಕುಡಿ, ಸಂತೋಷಪಡು! ಎಂದು ಹೇಳಿಕೊಳ್ಳುವೆನು’ ಎಂಬುದಾಗಿ ಆಲೋಚಿಸಿಕೊಂಡನು.
20 “ಆದರೆ ದೇವರು ಅವನಿಗೆ, ‘ನೀನು ಬುದ್ಧಿಹೀನ! ಈ ರಾತ್ರಿ ನೀನು ಸಾಯುವೆ! ಈಗ ಹೇಳು, ನೀನು ಕೂಡಿಟ್ಟ ಪದಾರ್ಥಗಳ ಗತಿ ಏನಾಗುವುದು? ಅವು ಯಾರ ಪಾಲಾಗುತ್ತವೆ?’ ಎಂದು ಕೇಳಿದನು.
21 “ತನಗೋಸ್ಕರ ಮಾತ್ರ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವವನ ಗತಿ ಇದೇ. ದೇವರ ದೃಷ್ಟಿಯಲ್ಲಿ ಅವನು ಐಶ್ವರ್ಯವಂತನಲ್ಲ.”
Kannada Holy Bible: Easy-to-Read Version. All rights reserved. © 1997 Bible League International