Revised Common Lectionary (Complementary)
ರಚನೆಗಾರ: ಜೇರಹ ಕುಟುಂಬದ ಏತಾನ.
89 ಯೆಹೋವನೇ, ನಿನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
2 ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.
3 ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
4 ‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”
5 ಯೆಹೋವನೇ, ನಿನ್ನ ಮಹತ್ಕಾರ್ಯಗಳ ಕುರಿತು ಆಕಾಶಮಂಡಲವು ಸ್ತುತಿಸುತ್ತಿದೆ.
ಪರಿಶುದ್ಧರ ಸಭೆಯು ಅವುಗಳ ಕುರಿತು ಹಾಡಿಕೊಂಡಾಡುವುದು.
6 ಪರಲೋಕದಲ್ಲಿ ಯಾವನೂ ಯೆಹೋವನಿಗೆ ಸಮಾನನಲ್ಲ.
ಯಾವ ದೇವರುಗಳನ್ನೂ ಯೆಹೋವನಿಗೆ ಹೋಲಿಸಲಾಗದು.
7 ದೇವರು ಪರಿಶುದ್ಧರ ಸಭೆ ಸೇರಿಸುವನು.
ಆ ದೇವದೂತರೆಲ್ಲಾ ಆತನ ಸುತ್ತಲೂ ಸೇರಿಬರುವರು.
ಅವರು ದೇವರಲ್ಲಿ ಭಯಭಕ್ತಿಯಿಂದಿರುವರು.
ಆತನಿಗೆ ಭಯಪಡುತ್ತಾ ಆತನ ಸನ್ನಿಧಿಯಲ್ಲಿ ನಿಂತುಕೊಳ್ಳುವರು.
8 ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
ನೀನು ನಮ್ಮ ಸಂಪೂರ್ಣಭರವಸೆಗೆ ಯೋಗ್ಯನಾಗಿರುವೆ.
9 ಸಮುದ್ರವು ನಿನ್ನ ಅಧೀನದಲ್ಲಿದೆ.
ಅದರ ರೋಷದ ಅಲೆಗಳನ್ನು ನೀನು ಶಾಂತಗೊಳಿಸುವೆ.
10 ರಹಾಬನನ್ನು ಸೋಲಿಸಿದಾತನು ನೀನೇ.
ನಿನ್ನ ಭುಜಬಲದಿಂದ ನೀನು ಶತ್ರುಗಳನ್ನು ಚದರಿಸಿಬಿಟ್ಟಿ.
11 ದೇವರೇ, ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ.
ಪ್ರಪಂಚವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
12 ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ.
ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ.
13 ದೇವರೇ, ಬಲವು ನಿನ್ನಲ್ಲೇ ಇದೆ.
ನಿನ್ನ ಬಲವು ಮಹಾ ಬಲವೇ ಸರಿ!
ಜಯವಂತೂ ನಿನ್ನದೇ!
14 ನಿನ್ನ ರಾಜ್ಯವು ಸತ್ಯದ ಮೇಲೆಯೂ ನ್ಯಾಯದ ಮೇಲೆಯೂ ಕಟ್ಟಲ್ಪಟ್ಟಿದೆ.
ನಿನ್ನ ಸಿಂಹಾಸನದ ಮುಂದೆ ಪ್ರೀತಿಯೂ ನಂಬಿಗಸ್ತಿಕೆಯೂ ಸೇವಕರುಗಳಾಗಿವೆ.
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ.
ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ.
ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ.
ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು.
ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.
ಯೆಹೂದದ ಅರಸನಾದ ಮನಸ್ಸೆ
33 ಮನಸ್ಸೆಯು ಪಟ್ಟಕ್ಕೆ ಬಂದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ರಾಜನಾಗಿ ಐವತ್ತೈದು ವರ್ಷ ರಾಜ್ಯಭಾರ ಮಾಡಿದನು. 2 ಯೆಹೋವನು ದುಷ್ಟತನವೆಂದು ಪರಿಗಣಿಸಿದ್ದನ್ನೇ ಮನಸ್ಸೆ ಮಾಡಿದನು. ಇಸ್ರೇಲರು ಆ ದೇಶವನ್ನು ವಶಪಡಿಸುವದಕ್ಕಿಂತ ಮುಂಚೆ ಅಲ್ಲಿ ವಾಸಿಸುತ್ತಿದ್ದ ಜನರ ಪಾಪಕೃತ್ಯಗಳನ್ನು ಅನುಸರಿಸಿದನು. 3 ಮನಸ್ಸೆಯ ತಂದೆಯಾದ ಹಿಜ್ಕೀಯನು ಕೆಡವಿದ ಉನ್ನತಸ್ಥಳಗಳನ್ನು ಅವನು ಮತ್ತೆ ಕಟ್ಟಿಸಿದನು. ಬಾಳ್ ದೇವರ ವೇದಿಕೆಯನ್ನು ಕಟ್ಟಿಸಿ ಅಶೇರಸ್ತಂಭಗಳನ್ನು ನಿಲ್ಲಿಸಿದನು. ಆಕಾಶದ ನಕ್ಷತ್ರಸಮೂಹಗಳನ್ನು ಪೂಜಿಸಿದನು. 4 ದೇವಾಲಯದೊಳಗೆ ಮನಸ್ಸೆಯು ವಿಗ್ರಹಗಳಿಗೆ ವೇದಿಕೆಯನ್ನು ಕಟ್ಟಿಸಿದನು. ಯೆಹೋವನು ದೇವಾಲಯದ ವಿಷಯವಾಗಿ, “ನನ್ನ ಹೆಸರು ಜೆರುಸಲೇಮಿನಲ್ಲಿ ನಿರಂತರಕ್ಕೂ ಸ್ಥಾಪಿತವಾಗುವದು” ಎಂದು ಹೇಳಿದ್ದನು. 5 ಮನಸ್ಸೆಯು ದೇವಾಲಯದ ಎರಡು ಅಂಗಳಗಳಲ್ಲಿ ಎಲ್ಲಾ ನಕ್ಷತ್ರಸಮೂಹಗಳಿಗೆ ವೇದಿಕೆಗಳನ್ನು ಕಟ್ಟಿಸಿದನು. 6 ಬೆನ್‌ಹಿನ್ನೋಮ್ ಕಣಿವೆಯಲ್ಲಿ ಮನಸ್ಸೆಯು ತನ್ನ ಸ್ವಂತ ಮಕ್ಕಳನ್ನು ಅನ್ಯದೇವತೆಗಳಿಗೆ ಯಜ್ಞವಾಗಿ ಅರ್ಪಿಸಿದನು; ಮಾಟಮಂತ್ರಗಳನ್ನು ಮಾಡಿದನು; ಪಿಶಾಚಿಗಳೊಂದಿಗೂ ದುರಾತ್ಮಗಳೊಂದಿಗೂ ಸಂಪರ್ಕವನ್ನಿಟ್ಟುಕೊಂಡಿದ್ದನು. ಯೆಹೋವನು ಕೆಟ್ಟದ್ದು ಎಂದು ಹೇಳಿದ್ದನ್ನೆಲ್ಲಾ ಅವನು ಮಾಡಿದ್ದರಿಂದ ಆತನು ಅವನ ಮೇಲೆ ಬಹಳವಾಗಿ ಕೋಪಗೊಂಡನು. 7 ಮನಸ್ಸೆಯು ಒಂದು ವಿಗ್ರಹವನ್ನು ಯೆಹೋವನ ಮಂದಿರದೊಳಗೆ ಪ್ರತಿಷ್ಠಾಪಿಸಿದನು. ಆ ಮಂದಿರದ ಬಗ್ಗೆ ಯೆಹೋವನು ದಾವೀದನೊಂದಿಗೂ ಸೊಲೊಮೋನನೊಂದಿಗೂ ಮಾತನಾಡಿ, “ನನ್ನ ಹೆಸರನ್ನು ಈ ಆಲಯದಲ್ಲಿಯೂ ಜೆರುಸಲೇಮಿನಲ್ಲಿಯೂ ಸ್ಥಾಪಿಸುವೆನು. ಈ ಪಟ್ಟಣವನ್ನು ಎಲ್ಲಾ ಕುಲಗಳ ಎಲ್ಲಾ ಪಟ್ಟಣಗಳಿಂದ ಆರಿಸಿಕೊಂಡಿರುತ್ತೇನೆ. ಇಲ್ಲಿ ನನ್ನ ನಾಮಸ್ಮರಣೆಯು ಸದಾಕಾಲ ನಡಿಯುವುದು. 8 ನಾನು ಮೋಶೆಯ ಮೂಲಕ ಕೊಟ್ಟಿರುವ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಇಸ್ರೇಲರು ವಿಧೇಯರಾಗಿರುವುದಾದರೆ, ಅವರ ಪೂರ್ವಿಕರಿಗೆ ಕೊಡಲು ನಾನು ಆರಿಸಿಕೊಂಡ ದೇಶದಿಂದ ಅವರನ್ನು ತೆಗೆದುಬಿಡುವುದೇ ಇಲ್ಲ” ಎಂದು ಹೇಳಿದನು.
9 ಮನಸ್ಸೆಯು ಯೆಹೂದದ ಜನರನ್ನೂ ಜೆರುಸಲೇಮಿನಲ್ಲಿದ್ದ ಜನರನ್ನೂ ಕೆಟ್ಟಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಿದನು. ಇಸ್ರೇಲರು ಬರುವದಕ್ಕಿಂತ ಮೊದಲು ಆ ದೇಶದಲ್ಲಿದ್ದ ಜನರಿಗಿಂತಲೂ ಅತ್ಯಂತ ಕೆಟ್ಟವನಾಗಿ ವರ್ತಿಸಿದನು. ಆ ದೇಶದಲ್ಲಿದ್ದ ಜನರನ್ನು ಯೆಹೋವನು ನಾಶಮಾಡಿದ್ದನು.
10 ಯೆಹೋವನು ಮನಸ್ಸೆಯ ಮತ್ತು ಅವನ ಜನರ ಸಂಗಡ ಮಾತಾಡಿದರೂ ಅವರು ಆತನ ಮಾತನ್ನು ಕೇಳಲಿಲ್ಲ. 11 ಆದ್ದರಿಂದ ಅಶ್ಶೂರ್ ದೇಶದ ಅರಸನ ಸೇನಾಪತಿಗಳು ಬಂದು ಯೆಹೂದದ ಮೇಲೆ ಯುದ್ಧ ಮಾಡುವಂತೆ ಯೆಹೋವನು ಮಾಡಿದನು. ಆ ಸೇನಾಪತಿಗಳು ಮನಸ್ಸೆಯನ್ನು ಬಂಧಿಸಿ ಸೆರೆಯಲ್ಲಿಟ್ಟರು. ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬಿಲೋನಿಗೆ ಒಯ್ದರು.
12 ಈ ಸಂಕಷ್ಟಗಳು ಅವನಿಗೆ ಒದಗಿದಾಗ ಅವನು ದೇವರಾದ ಯೆಹೋವನನ್ನು ತನಗೆ ಸಹಾಯ ಮಾಡಲು ಬೇಡಿದನು. ತನ್ನ ಪೂರ್ವಿಕರ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡನು. 13 ಯೆಹೋವನು ಮನಸ್ಸೆಯ ಬೇಡಿಕೆಗಳನ್ನು ಕೇಳಿ ಅವನಿಗೆ ಕರುಣೆ ತೋರಿದನು. ಅವನು ಜೆರುಸಲೇಮಿಗೂ ತನ್ನ ಸಿಂಹಾಸನಕ್ಕೂ ಹಿಂತಿರುಗಿ ಬರುವಂತೆ ಮಾಡಿದನು. ಆಗ ಮನಸ್ಸೆಯು ಯೆಹೋವನೇ ನಿಜ ದೇವರೆಂದು ಅರಿತನು.
14 ಇದಾದ ನಂತರ ಮನಸ್ಸೆಯು ದಾವೀದನಗರಕ್ಕೆ ಹೊರಗಿನ ಗೋಡೆಯನ್ನು ಕಟ್ಟಿಸಿದನು. ಈ ಗೋಡೆಯು ಕಿದ್ರೋನಿನಲ್ಲಿದ್ದ ಗೀಹೋನ್ ಬುಗ್ಗೆಯ ಪಶ್ಚಿಮ ದಿಕ್ಕಿನಿಂದ ಮೀನು ಬಾಗಿಲಿನ ಮುಂದೆ ಹೋಗಿ, ಅಲ್ಲಿಂದ ಓಫೆಲ್ ಗುಡ್ಡಕ್ಕೆ ಸುತ್ತುಹಾಕಿತು. ಅವನು ಗೋಡೆಯನ್ನು ಬಹು ಎತ್ತರವಾಗಿ ಕಟ್ಟಿದನು. ಆಮೇಲೆ ಯೆಹೂದದಲ್ಲಿದ್ದ ಎಲ್ಲಾ ಕೋಟೆಗಳಲ್ಲಿ ಸೇನಾಪತಿಗಳನ್ನು ನೇಮಿಸಿದನು; 15 ಅನ್ಯದೇವತೆಗಳ ವಿಗ್ರಹವನ್ನು ತೆಗಿಸಿದನು; ದೇವಾಲಯದೊಳಗಿದ್ದ ವಿಗ್ರಹವನ್ನು ತೆಗೆದುಹಾಕಿಸಿದನು. ಜೆರುಸಲೇಮಿನಲ್ಲಿಯೂ ದೇವಾಲಯದ ಗುಡ್ಡದಲ್ಲಿಯೂ ಪ್ರತಿಷ್ಠಾಪಿಸಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಕಟ್ಟಿಸಿದ ಎಲ್ಲಾ ವೇದಿಕೆಗಳನ್ನು ಜೆರುಸಲೇಮಿನಿಂದ ಹೊರಗೆ ಬಿಸಾಡಿಸಿದನು. 16 ಯೆಹೋವನ ಯಜ್ಞವೇದಿಕೆಯನ್ನು ಕಟ್ಟಿಸಿ ಅದರಲ್ಲಿ ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿದನು. ಯೆಹೂದದಲ್ಲಿದ್ದ ಎಲ್ಲಾ ಜನರೂ ದೇವರಾದ ಯೆಹೋವನ ಸೇವೆಮಾಡುವಂತೆ ಆಜ್ಞೆ ವಿಧಿಸಿದನು. 17 ಜನರು ಉನ್ನತಸ್ಥಳಗಳಲ್ಲಿ ಯಜ್ಞವನ್ನು ಮಾಡುತ್ತಿದ್ದರೂ ಅದನ್ನು ಯೆಹೋವನಿಗೋಸ್ಕರವೇ ಮಾಡುತ್ತಿದ್ದರು.
ನಂಬಿಕೆ
11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. 2 ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.
3 ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.
4 ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
5 ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. 6 ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.
7 ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.
Kannada Holy Bible: Easy-to-Read Version. All rights reserved. © 1997 Bible League International