Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 26:1-8

ರಚನೆಗಾರ: ದಾವೀದ.

26 ಯೆಹೋವನೇ, ನನಗೆ ನ್ಯಾಯವನ್ನು ನಿರ್ಣಯಿಸು; ನನ್ನ ಜೀವಿತ ಶುದ್ಧವಾಗಿತ್ತೆಂದು ನಿರೂಪಿಸು.
    ನಾನು ಯೆಹೋವನಲ್ಲಿಯೇ ಭರವಸವಿಟ್ಟಿದ್ದೆನು.
ಯೆಹೋವನೇ, ನನ್ನನ್ನು ಪರೀಕ್ಷಿಸಿ ತಿಳಿದುಕೊ.
    ನನ್ನ ಹೃದಯವನ್ನೂ ಮನಸ್ಸನ್ನೂ ಸೂಕ್ಷ್ಮವಾಗಿ ಪರಿಶೋಧಿಸು.
ನಿನ್ನ ಶಾಶ್ವತ ಪ್ರೀತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದೇನೆ.
    ನಿನ್ನ ಸತ್ಯಕ್ಕನುಸಾರವಾಗಿ ಜೀವಿಸುವೆನು.
ಅಯೋಗ್ಯರಾದ ಅವರಲ್ಲಿ ನಾನೂ ಒಬ್ಬನಲ್ಲ.
    ನಾನು ಕಪಟಿಗಳ ಜೊತೆ ಸೇರುವವನಲ್ಲ.
ಆ ದುಷ್ಟ ತಂಡಗಳನ್ನು ನಾನು ದ್ವೇಷಿಸುತ್ತೇನೆ.
    ಮೋಸಗಾರರ ಆ ತಂಡಗಳಿಗೆ ನಾನು ಸೇರುವುದಿಲ್ಲ.

ಯೆಹೋವನೇ, ನಾನು ನಿನ್ನ ಯಜ್ಞವೇದಿಕೆಯ[a] ಸುತ್ತಲೂ ನಡೆಯಲು
    ನನ್ನ ಕೈಗಳನ್ನು ತೊಳೆದುಕೊಳ್ಳುತ್ತೇನೆ.
ನಾನು ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
    ನಿನ್ನ ಅದ್ಭುತಕಾರ್ಯಗಳ ಕುರಿತು ಹಾಡುವೆನು.
ಯೆಹೋವನೇ, ನಿನ್ನ ಆಲಯವೂ ನಿನ್ನ ಮಹಿಮಾಗುಡಾರವೂ
    ನನಗೆ ಎಷ್ಟೋ ಪ್ರಿಯವಾಗಿವೆ.

ಯೆರೆಮೀಯ 15:1-9

15 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಯೆಹೂದದ ಜನರಿಗಾಗಿ ಪ್ರಾರ್ಥಿಸಿ, ಬೇಡಿಕೊಳ್ಳಲು ಮೋಶೆಯೂ ಸಮುವೇಲನೂ ಇದ್ದಿದ್ದರೂ ನಾನು ಈ ಜನರ ಬಗ್ಗೆ ಮರುಕಪಡುತ್ತಿರಲಿಲ್ಲ. ಯೆಹೂದದ ಜನರನ್ನು ನನ್ನಿಂದ ದೂರ ಕಳುಹಿಸು. ಅವರಿಗೆ ಹೋಗಲು ಹೇಳು. ‘ನಾವು ಎಲ್ಲಿಗೆ ಹೋಗಬೇಕು’ ಎಂದು ಅವರು ಕೇಳಬಹುದು. ಯೆಹೋವನು ಹೀಗೆ ಹೇಳಿದ್ದಾನೆ ಎಂದು ನೀನು ಅವರಿಗೆ ಹೇಳು.

“‘ಕೆಲವು ಜನರು ಮರಣಹೊಂದಬೇಕೆಂದು ನಾನು ಗೊತ್ತುಮಾಡಿದ್ದೇನೆ.
    ಅವರು ಮರಣಹೊಂದುತ್ತಾರೆ.
ಕೆಲವು ಜನರು ಖಡ್ಗಗಳಿಂದ ಕೊಲ್ಲಲ್ಪಡಬೇಕೆಂದು ನಾನು ಗೊತ್ತುಮಾಡಿದ್ದೇನೆ.
    ಅವರು ಖಡ್ಗಗಳಿಗೆ ಬಲಿಯಾಗುತ್ತಾರೆ.
ಕೆಲವು ಜನರು ಹೊಟ್ಟೆಗೆ ಅನ್ನವಿಲ್ಲದೆ ಸಾಯಬೇಕು ಎಂದು ನಾನು ಗೊತ್ತುಮಾಡಿದ್ದೇನೆ.
    ಅವರು ಹಸಿವಿನಿಂದ ಸಾಯುತ್ತಾರೆ.
ಕೆಲವು ಜನರನ್ನು ಶತ್ರುಗಳು ಸೆರೆಹಿಡಿದು ಪರದೇಶಕ್ಕೆ ತೆಗೆದುಕೊಂಡು ಹೋಗಲಿ ಎಂದು ಗೊತ್ತುಮಾಡಿದ್ದೇನೆ.
    ಅವರು ಪರದೇಶದಲ್ಲಿ ಸೆರೆಯಾಳುಗಳಾಗಿ ಇರುವರು.
ನಾನು ಅವರ ವಿರುದ್ಧ ನಾಲ್ಕು ರೀತಿಯ ವಿನಾಶಕರನ್ನು ಕಳುಹಿಸುತ್ತೇನೆ.’
ಇದು ಯೆಹೋವನ ನುಡಿ.
‘ಅವರನ್ನು ಕೊಲೆಮಾಡಲು ಖಡ್ಗಧಾರಿಗಳಾದ ಶತ್ರುಗಳನ್ನು ಕಳುಹಿಸುತ್ತೇನೆ.
ಅವರ ದೇಹಗಳನ್ನು ಎಳೆದುಕೊಂಡು ಹೋಗುವುದಕ್ಕಾಗಿ ನಾಯಿಗಳನ್ನು ಕಳುಹಿಸುತ್ತೇನೆ.
ಅವರ ದೇಹಗಳನ್ನು ತಿನ್ನಲು ಮತ್ತು ನಾಶಮಾಡಲು
    ಗಾಳಿಯಲ್ಲಿ ಹಾರಾಡುವ ಪಕ್ಷಿಗಳನ್ನೂ ಕಾಡುಪ್ರಾಣಿಗಳನ್ನೂ ಕಳುಹಿಸುತ್ತೇನೆ.
ಯೆಹೂದದ ಜನರನ್ನು ಭೂಲೋಕದ ಎಲ್ಲಾ ಜನರಿಗೆ
    ಒಂದು ಭಯಾನಕವಾದ ಉದಾಹರಣೆಯಾಗುವಂತೆ ಮಾಡುತ್ತೇನೆ.
ಮನಸ್ಸೆಯು ಜೆರುಸಲೇಮಿನಲ್ಲಿ ಮಾಡಿದ ಪಾಪಕೃತ್ಯಗಳ ಫಲವಾಗಿ
    ನಾನು ಯೆಹೂದದಲ್ಲಿ ಹೀಗೆ ಮಾಡುತ್ತೇನೆ.
    ಮನಸ್ಸೆಯು ರಾಜನಾದ ಹಿಜ್ಕೀಯನ ಮಗನಾಗಿದ್ದನು.
    ಮನಸ್ಸೆಯು ಯೆಹೂದದ ರಾಜನಾಗಿದ್ದನು.’

“ಜೆರುಸಲೇಮ್ ನಗರವೇ, ನಿನಗಾಗಿ ಯಾರೂ ವ್ಯಥೆಪಡುವದಿಲ್ಲ.
    ನಿನಗಾಗಿ ದುಃಖಪಡುವುದಿಲ್ಲ ಮತ್ತು ಆಳುವುದಿಲ್ಲ.
    ಯಾರೂ ತಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಬಿಟ್ಟು ನಿನ್ನ ಯೋಗಕ್ಷೇಮವನ್ನು ವಿಚಾರಿಸಲು ಬರುವುದಿಲ್ಲ.
ಜೆರುಸಲೇಮೇ, ನೀನು ನನ್ನನ್ನು ತ್ಯಜಿಸಿದೆ”
ಇದು ಯೆಹೋವನ ನುಡಿ.
“ಮತ್ತೆಮತ್ತೆ ನೀನು ನನ್ನನ್ನು ತ್ಯಜಿಸಿದೆ.
    ಆದ್ದರಿಂದ ನಾನು ನಿನ್ನನ್ನು ದಂಡಿಸುತ್ತೇನೆ ಮತ್ತು ನಾಶಮಾಡುತ್ತೇನೆ.
    ನಿನಗೆ ಸಲ್ಲಬೇಕಾದ ಶಿಕ್ಷೆಯನ್ನು ಪುನಃ ತಡೆಹಿಡಿದು ನಾನು ದಣಿದಿದ್ದೇನೆ.
ಯೆಹೂದದ ಜನರನ್ನು ನಾನು ಕವೆಗೋಲಿನಿಂದ ವಿಂಗಡಿಸಿದ
    ದೇಶದ ಎಲ್ಲಾ ನಗರಗಳ ದ್ವಾರದಲ್ಲಿ ಚದರಿಸುತ್ತೇನೆ.
ನನ್ನ ಜನರು ಬದಲಾಗಲಿಲ್ಲ.
    ನಾನು ಅವರನ್ನು ನಾಶಮಾಡುತ್ತೇನೆ.
    ನಾನು ಅವರ ಮಕ್ಕಳನ್ನು ಕಸಿದುಕೊಳ್ಳುತ್ತೇನೆ.
ಅನೇಕ ಹೆಂಗಸರು ತಮ್ಮ ಗಂಡಂದಿರನ್ನು ಕಳೆದುಕೊಳ್ಳುವರು.
    ಸಮುದ್ರದಡದಲ್ಲಿದ್ದ ಮರಳು ಕಣಗಳಿಗಿಂತ ವಿಧವೆಯರ ಸಂಖ್ಯೆ ಹೆಚ್ಚಾಗುವುದು.
ಮಧ್ಯಾಹ್ನದಲ್ಲಿಯೇ ನಾನು ಬಾತುಕನನ್ನು ತರುವೆನು.
    ಆ ಘಾತುಕನು ಯೆಹೂದದ ತಾಯಂದಿರ ಮೇಲೆರಗುವನು.
ನಾನು ಯೆಹೂದದ ಜನರಿಗೆ ನೋವನ್ನು ಮತ್ತು ಭಯವನ್ನು ತರುವೆನು;
    ಅತೀ ಶೀಘ್ರದಲ್ಲಿಯೇ ಹೀಗಾಗುವಂತೆ ಮಾಡುವೆನು.
ಶತ್ರುಗಳು ಖಡ್ಗಧಾರಿಗಳಾಗಿ ಬಂದು ಜನರ ಮೇಲೆರಗಿ ಕೊಲೆಮಾಡುವರು.
    ಯೆಹೂದದಲ್ಲಿ ಜೀವಂತ ಉಳಿದವರನ್ನು ಅವರು ವಧಿಸುವರು.
ಒಬ್ಬ ಸ್ತ್ರೀಗೆ ಏಳು ಜನ ಮಕ್ಕಳಿದ್ದರೂ ಅವರೆಲ್ಲ ಸತ್ತುಹೋಗುವರು.
    ಅವಳು ಅತ್ತೂಅತ್ತೂ ಬಳಲಿ ಉಸಿರಾಡದಂತಾಗುವಳು.
ಅವಳು ಕಳವಳಪಡುವಳು ಮತ್ತು ಗಾಬರಿಗೊಳ್ಳುವಳು.
    ಪ್ರಕಾಶಮಯವಾದ ದಿನವು ದುಃಖದ ನಿಮಿತ್ತ ಅವಳಿಗೆ ಕತ್ತಲಾಗುವುದು.”

2 ಥೆಸಲೋನಿಕದವರಿಗೆ 2:7-12

ರಹಸ್ಯವಾದ ದುಷ್ಟಶಕ್ತಿಯು ಈಗಾಗಲೇ ಪ್ರಪಂಚದಲ್ಲಿ ತನ್ನ ಕಾರ್ಯವನ್ನು ಸಾಧಿಸುತ್ತಾ ಇದೆ. ಆದರೆ ಆ ರಹಸ್ಯವಾದ ದುಷ್ಟಶಕ್ತಿಯನ್ನು ತಡೆಹಿಡಿಯುವ ಒಬ್ಬಾತನಿದ್ದಾನೆ. ಆತನು ತೆಗೆದುಬಿಡಲ್ಪಟ್ಟ ಕೂಡಲೇ ಅಧರ್ಮಸ್ವರೂಪನು ಕಾಣಿಸಿಕೊಳ್ಳುತ್ತಾನೆ. ಪ್ರಭುವಾದ ಯೇಸು ಅವನನ್ನು ತನ್ನ ಬಾಯಿಯ ಉಸಿರಿನಿಂದಲೇ ಕೊಲ್ಲುವನು; ತನ್ನ ಪ್ರತ್ಯಕ್ಷತೆಯ ಮಹಿಮೆಯಿಂದ ನಾಶಪಡಿಸುವನು.

ಆ ಅಧರ್ಮಸ್ವರೂಪನು ಸೈತಾನನ ಮಹಾಶಕ್ತಿಯಿಂದ ಕೂಡಿದವನಾಗಿರುತ್ತಾನೆ. ಅವನು ಅನೇಕ ಮೋಸದ ಪವಾಡಗಳನ್ನು, ಸೂಚಕಕಾರ್ಯಗಳನ್ನು, ಅದ್ಭುತಕಾರ್ಯಗಳನ್ನು ಮಾಡುತ್ತಾನೆ. 10 ಸತ್ಯವನ್ನು ಪ್ರೀತಿಸದೆ ತಪ್ಪಿಹೋಗಿರುವ ಜನರನ್ನು ಮೋಸಗೊಳಿಸಲು, ಅವನು ಎಲ್ಲಾ ವಿಧವಾದ ತಂತ್ರಗಳನ್ನು ಮಾಡುವನು. (ಅವರು ಸತ್ಯವನ್ನು ಪ್ರೀತಿಸಿದ್ದರೆ, ರಕ್ಷಣೆ ಹೊಂದುತ್ತಿದ್ದರು.) 11 ಆದರೆ ಆ ಜನರು ಸತ್ಯವನ್ನು ಪ್ರೀತಿಸಲಿಲ್ಲ. ಆದಕಾರಣ, ಸತ್ಯವನ್ನು ತೊರೆದು, ಸತ್ಯವಲ್ಲದ್ದನ್ನು ನಂಬುವಂತೆ ಮಾಡುವ ಶಕ್ತಿಯೊಂದನ್ನು ದೇವರು ಅವರ ಬಳಿಗೆ ಕಳುಹಿಸುತ್ತಾನೆ. 12 ಸತ್ಯವನ್ನು ನಂಬದೆ, ಕೆಟ್ಟಕಾರ್ಯಗಳನ್ನು ಮಾಡುವುದರಲ್ಲಿ ಸಂತೋಷಪಡುವ ಜನರೆಲ್ಲರೂ ದಂಡನೆಗೆ ಒಳಗಾಗುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International