Revised Common Lectionary (Complementary)
ತುತಿಗೀತೆ. ರಚನೆಗಾರರು: ಕೋರಹೀಯರು.
87 ದೇವರು ತನ್ನ ಆಲಯವನ್ನು ಜೆರುಸಲೇಮಿನ ಪವಿತ್ರ ಪರ್ವತಗಳ ಮೇಲೆ ಕಟ್ಟಿದ್ದಾನೆ.
2 ಯೆಹೋವನು ಚೀಯೋನಿನ ಬಾಗಿಲುಗಳನ್ನು ಇಸ್ರೇಲಿನ ಇತರ ಸ್ಥಳಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
3 ದೇವರ ಪಟ್ಟಣವೇ, ಜನರು ನಿನ್ನ ಬಗ್ಗೆ ಆಶ್ಚರ್ಯಕರವಾದ ಸಂಗತಿಗಳನ್ನು ಹೇಳುವರು.
4 ದೇವಜನರು ಪ್ರಪಂಚದ ಅನೇಕ ಕಡೆಗಳಲ್ಲಿ ಈಗ ವಾಸವಾಗಿದ್ದಾರೆ.
ಅವರಲ್ಲಿ ಕೆಲವರು ಈಜಿಪ್ಟಿನಲ್ಲಿಯೂ ಬಾಬಿಲೋನಿನಲ್ಲಿಯೂ ನೆಲೆಸಿದ್ದಾರೆ.
ಇನ್ನು ಕೆಲವರು ಫಿಲಿಷ್ಟಿಯದಲ್ಲಿಯೂ ತೂರಿನಲ್ಲಿಯೂ ಇಥಿಯೋಪಿಯದಲ್ಲಿಯೂ ನೆಲೆಸಿದ್ದಾರೆ.
5 ಚೀಯೋನಿನಲ್ಲಿ ಜನಿಸಿದ ಪ್ರತಿಯೊಬ್ಬರೂ ದೇವರಿಗೆ ಗೊತ್ತು.
ಮಹೋನ್ನತನಾದ ದೇವರೇ ಆ ಪಟ್ಟಣವನ್ನು ಕಟ್ಟಿದನು.
6 ದೇವರು ತನ್ನ ಜನರೆಲ್ಲರ ಬಗ್ಗೆ ಪಟ್ಟಿಮಾಡಿದ್ದಾನೆ.
ಪ್ರತಿಯೊಬ್ಬನ ಹುಟ್ಟಿದ ಸ್ಥಳವು ದೇವರಿಗೆ ತಿಳಿದಿದೆ.
7 ದೇವರ ಮಕ್ಕಳು ಹಬ್ಬಗಳನ್ನು ಆಚರಿಸಲು ಜೆರುಸಲೇಮಿಗೆ ಹೋಗುವರು.
ಅವರು ಸಂತೋಷದಿಂದ ಹಾಡುತ್ತಾ ಕುಣಿದಾಡುವರು.
“ಒಳ್ಳೆಯವುಗಳೆಲ್ಲ ಬರುವುದು ಜೆರುಸಲೇಮಿನಿಂದಲೇ” ಎಂದು ಅವರು ಹೇಳುವರು.
18 “ಆ ಜನರಲ್ಲಿ ಕೆಟ್ಟ ಯೋಜನೆಗಳು ಇದ್ದು ಕೆಟ್ಟದ್ದನ್ನೇ ಮಾಡುವವರಾಗಿದ್ದಾರೆ. ಅದಕ್ಕಾಗಿ ನಾನು ಅವರನ್ನು ಶಿಕ್ಷಿಸಲು ಬರುತ್ತಿದ್ದೇನೆ. ನಾನು ಎಲ್ಲಾ ಜನಾಂಗಗಳನ್ನೂ ಎಲ್ಲಾ ಜನರನ್ನೂ ಒಟ್ಟುಗೂಡಿಸುವೆನು. ಎಲ್ಲಾ ಜನರು ಒಟ್ಟುಗೂಡಿ ನನ್ನ ಸಾಮರ್ಥ್ಯವನ್ನು ನೋಡುವರು. 19 ಅವರಲ್ಲಿ ಕೆಲವರಿಗೆ ನಾನು ಗುರುತು ಹಾಕುವೆನು. ನಾನು ಅವರನ್ನು ರಕ್ಷಿಸುವೆನು. ರಕ್ಷಿಸಲ್ಪಟ್ಟ ಕೆಲವರನ್ನು ನಾನು ತಾರ್ಷೀಷ್, ಲಿಬ್ಯ, ಲೂದ್, ತೂಬಾಲ್, ಗ್ರೀಸ್ ಮತ್ತು ದೂರದೇಶಗಳಿಗೆ ಕಳುಹಿಸುವೆನು. ಅಲ್ಲಿಯ ಜನರು ನನ್ನ ಬೋಧನೆಯನ್ನು ಎಂದೂ ಕೇಳಿರಲಿಲ್ಲ. ಅವರು ನನ್ನ ಮಹಿಮೆಯನ್ನು ಎಂದೂ ಕಂಡಿರಲಿಲ್ಲ. ಆದ್ದರಿಂದ ರಕ್ಷಿಸಲ್ಪಟ್ಟ ಜನರು ನನ್ನ ಮಹಿಮೆಯನ್ನು ಅವರಿಗೆ ತಿಳಿಸುವರು. 20 ಅವರು ನಿಮ್ಮ ಸಹೋದರಸಹೋದರಿಯರನ್ನು ಎಲ್ಲಾ ಜನಾಂಗಗಳೊಳಗಿಂದ ಕರೆದುಕೊಂಡು ನನ್ನ ಪವಿತ್ರ ಪರ್ವತವಾದ ಜೆರುಸಲೇಮಿಗೆ ಬರುವರು. ನಿನ್ನ ಸಹೋದರಸಹೋದರಿಯರು ಕುದುರೆ, ಕತ್ತೆ, ಒಂಟೆ, ರಥ ಮತ್ತು ಗಾಡಿಗಳಲ್ಲಿ ಕುಳಿತುಕೊಂಡು ಬರುವರು. ಯೆಹೋವನ ಮಂದಿರದೊಳಗೆ ಶುದ್ಧವಾದ ತಟ್ಟೆಯ ಮೇಲೆ ಕಾಣಿಕೆಗಳನ್ನು ತರುವಂತೆಯೇ ನಿನ್ನ ಸಹೋದರಸಹೋದರಿಯರಾದ ಇಸ್ರೇಲರು ಬರುವರು. 21 ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸುವೆನು.” ಇವು ಯೆಹೋವನ ನುಡಿಗಳು.
ಹೊಸ ಭೂಮ್ಯಾಕಾಶಗಳು
22 “ನಾನು ಹೊಸ ಪ್ರಪಂಚವನ್ನು ಸೃಷ್ಟಿಸುವೆನು; ಹೊಸ ಆಕಾಶವೂ ಹೊಸ ಭೂಮಿಯೂ ಶಾಶ್ವತವಾಗಿರುವವು. ಹಾಗೆಯೇ ನಿಮ್ಮ ಹೆಸರುಗಳು ಯಾವಾಗಲೂ ನನ್ನೊಂದಿಗೆ ಇರುತ್ತವೆ; ನಿಮ್ಮ ಮಕ್ಕಳು ನನ್ನೊಂದಿಗೆ ಯಾವಾಗಲೂ ಇರುತ್ತಾರೆ. 23 ಪ್ರತಿಯೊಂದು ಆರಾಧನಾ ದಿನದಲ್ಲಿ ಪ್ರತಿಯೊಬ್ಬರೂ ಬಂದು ನನ್ನನ್ನು ಆರಾಧಿಸುವರು. ಪ್ರತಿಯೊಂದು ಸಬ್ಬತ್ ದಿನದಲ್ಲೂ ತಿಂಗಳ ಮೊದಲ ದಿನದಲ್ಲೂ ಅವರು ನನ್ನ ಬಳಿಗೆ ಬರುವರು.”
ಗುಣಮುಖನಾದ ಕುಷ್ಠರೋಗಿ
(ಮಾರ್ಕ 1:40-45; 5:12-16)
8 ಯೇಸು ಬೆಟ್ಟದಿಂದ ಕೆಳಗೆ ಇಳಿದು ಬಂದನು. ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು. 2 ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದನು. ಅವನು ಯೇಸುವಿನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಇಷ್ಟಪಟ್ಟರೆ ನನ್ನನ್ನು ಗುಣಪಡಿಸಬಲ್ಲೆ” ಎಂದನು.
3 ಯೇಸು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸಿದೆ, ಗುಣವಾಗು” ಎಂದನು. ಆ ಕ್ಷಣವೇ ಅವನ ಕುಷ್ಠರೋಗ ವಾಸಿಯಾಯಿತು. 4 ಯೇಸು ಅವನಿಗೆ, “ಇದು ಹೇಗಾಯಿತೆಂಬುದನ್ನು ಯಾರಿಗೂ ಹೇಳಬೇಡ. ಈಗ ನೀನು ಹೋಗಿ ಯಾಜಕನಿಗೆ ನಿನ್ನ ಮೈಯನ್ನು ತೋರಿಸು. ಗುಣಹೊಂದಿದವರು ಮೋಶೆಯ ಆಜ್ಞೆಗನುಸಾರವಾಗಿ ಕೊಡತಕ್ಕ ಕಾಣಿಕೆಯನ್ನು ಅರ್ಪಿಸು. ನೀನು ಗುಣವಾದದ್ದಕ್ಕೆ ಅದು ಸಾಕ್ಷಿಯಾಗಿರುವುದು” ಎಂದು ಹೇಳಿದನು.[a]
ಆರೋಗ್ಯ ಹೊಂದಿದ ಅಧಿಕಾರಿಯ ಸೇವಕ
(ಲೂಕ 7:1-10; ಯೋಹಾನ 4:43-54)
5 ಯೇಸು ಕಪೆರ್ನೌಮ್ ಪಟ್ಟಣಕ್ಕೆ ಹೊರಟುಹೋದನು. ಆತನು ಪಟ್ಟಣಕ್ಕೆ ಪ್ರವೇಶಿಸಿದಾಗ ಸೈನ್ಯದ ಅಧಿಕಾರಿಯೊಬ್ಬನು ಬಂದು, 6 “ಪ್ರಭುವೇ, ನನ್ನ ಸೇವಕನು ಕಾಯಿಲೆಯಿಂದ ಹಾಸಿಗೆಯ ಮೇಲಿದ್ದಾನೆ. ಅವನು ಬಹಳ ನೋವಿನಿಂದ ನರಳುತ್ತಿದ್ದಾನೆ” ಎಂದು ಸಹಾಯಕ್ಕಾಗಿ ಬೇಡಿಕೊಂಡನು.
7 ಯೇಸು ಆ ಅಧಿಕಾರಿಗೆ, “ನಾನು ಬಂದು ಅವನನ್ನು ಗುಣಪಡಿಸುತ್ತೇನೆ” ಎಂದು ಹೇಳಿದನು.
8 ಅದಕ್ಕೆ ಆ ಅಧಿಕಾರಿ, “ಪ್ರಭುವೇ, ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ. ಅವನಿಗೆ ಗುಣವಾಗಲಿ ಎಂದು ನೀನು ಆಜ್ಞಾಪಿಸಿದರೆ ಸಾಕು, ಅವನಿಗೆ ಗುಣವಾಗುವುದು. 9 ನಾನು ಸಹ ಬೇರೆ ಅಧಿಕಾರಿಗಳ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿ ಸಿಪಾಯಿಗಳಿದ್ದಾರೆ. ನಾನು ಒಬ್ಬ ಸಿಪಾಯಿಗೆ ‘ಹೋಗು’ ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬ ಸಿಪಾಯಿಗೆ ‘ಬಾ’ ಅಂದರೆ ಅವನು ಬರುತ್ತಾನೆ. ನಾನು ನನ್ನ ಸೇವಕನಿಗೆ, ‘ಇದನ್ನು ಮಾಡು’ ಅಂದರೆ ಅವನು ವಿಧೇಯತೆಯಿಂದ ಮಾಡುತ್ತಾನೆ. ನಿನಗೂ ಇದೇ ರೀತಿಯ ಅಧಿಕಾರವಿದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.
10 ಇದನ್ನು ಕೇಳಿ ಯೇಸುವಿಗೆ ಆಶ್ಚರ್ಯವಾಯಿತು. ಯೇಸು ತನ್ನ ಸಂಗಡ ಇದ್ದವರಿಗೆ, “ನಾನು ಇಸ್ರೇಲಿನಲ್ಲಿಯೂ ಸಹ ಇಷ್ಟು ನಂಬಿಕೆಯುಳ್ಳ ವ್ಯಕ್ತಿಯನ್ನು ಕಾಣಲಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದನು. 11 ಅನೇಕ ಜನರು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಂದ ಬರುತ್ತಾರೆ. ಅವರು ಪರಲೋಕರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂಗಡ ಕುಳಿತುಕೊಂಡು ಊಟಮಾಡುತ್ತಾರೆ. 12 ಪರಲೋಕರಾಜ್ಯವನ್ನು ಹೊಂದತಕ್ಕವರು ಹೊರಗೆ ಕತ್ತಲೆಗೆ ಎಸೆಯಲ್ಪಡುವರು. ಅಲ್ಲಿ ಅವರು ಗೋಳಾಡುವರು ಮತ್ತು ನೋವಿನಿಂದ ಹಲ್ಲುಗಳನ್ನು ಕಡಿಯುವರು” ಎಂದನು.
13 ಬಳಿಕ ಯೇಸು ಆ ಅಧಿಕಾರಿಗೆ, “ಮನೆಗೆ ಹೋಗು, ನೀನು ನಂಬಿದಂತೆಯೇ ನಿನ್ನ ಸೇವಕನಿಗೆ ಗುಣವಾಗುವುದು” ಎಂದನು. ಅದೇ ಸಮಯದಲ್ಲಿ ಅವನ ಸೇವಕನಿಗೆ ಗುಣವಾಯಿತು.
Kannada Holy Bible: Easy-to-Read Version. All rights reserved. © 1997 Bible League International