Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 78:1-8

ರಚನೆಗಾರ: ಆಸಾಫ.

78 ನನ್ನ ಜನರೇ, ನನ್ನ ಉಪದೇಶಗಳಿಗೆ ಕಿವಿಗೊಡಿರಿ;
    ನನ್ನ ನುಡಿಗಳನ್ನು ಲಾಲಿಸಿರಿ.
ನಾನು ಬಾಯ್ದೆರೆದು ಸಾಮ್ಯರೂಪವಾಗಿ ಉಪದೇಶಿಸುವೆನು;
    ಪೂರ್ವಕಾಲದ ಗೂಡಾರ್ಥಗಳನ್ನು ಹೊರಪಡಿಸುವೆನು.
ನಾವು ಅವುಗಳನ್ನು ಕಿವಿಯಾರೆ ಕೇಳಿದ್ದೇವೆ.
    ನಮ್ಮ ಪೂರ್ವಿಕರೇ ಅವುಗಳನ್ನು ನಮಗೆ ಹೇಳಿದರು.
ನಾವು ಅವುಗಳನ್ನು ಮರೆಯುವುದೇ ಇಲ್ಲ.
    ನಮ್ಮ ಜನರು ಕೊನೆಯ ತಲೆಮಾರಿನವರೆಗೂ ಅವುಗಳನ್ನು ಹೇಳುತ್ತಲೇ ಇರುವರು.
ನಾವೆಲ್ಲರೂ ಯೆಹೋವನ ಪರಾಕ್ರಮವನ್ನೂ
    ಅದ್ಭುತಕಾರ್ಯಗಳನ್ನೂ ಹೇಳುತ್ತಾ ಕೊಂಡಾಡುವೆವು.
ಆತನು ಯಾಕೋಬನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
    ಆತನು ಇಸ್ರೇಲರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
    ಆತನು ನಮ್ಮ ಪೂರ್ವಿಕರಿಗೆ ಆಜ್ಞೆಗಳನ್ನು ಕೊಟ್ಟನು.
    ನಿಮ್ಮ ಸಂತತಿಗಳವರಿಗೆ ಧರ್ಮಶಾಸ್ತ್ರವನ್ನು ಉಪದೇಶಿಸಿರಿ ಎಂದು ಆತನು ನಮ್ಮ ಪೂರ್ವಿಕರಿಗೆ ಹೇಳಿದನು.
ಹೊಸ ತಲೆಮಾರುಗಳವರು ಬೆಳೆದು ದೊಡ್ಡವರಾದಾಗ ತಮ್ಮ ಮಕ್ಕಳಿಗೆ ಅವುಗಳನ್ನು ಹೇಳಿಕೊಡುವರು.
    ಹೀಗೆ ಜನರು ಕೊನೆಯ ತಲೆಮಾರಿನವರೆಗೂ ಧರ್ಮಶಾಸ್ತ್ರವನ್ನು ತಿಳಿದಿರುವರು.
ಆಗ ಅವರೆಲ್ಲರೂ ದೇವರಲ್ಲಿ ಭರವಸೆ ಇಡುವರು.
    ದೇವರ ಮಹತ್ಕಾರ್ಯಗಳನ್ನು ಅವರು ಮರೆಯುವುದೇ ಇಲ್ಲ.
    ಅವರು ಜಾಗ್ರತೆಯಿಂದ ದೇವರ ಆಜ್ಞೆಗಳಿಗೆ ವಿಧೇಯರಾಗುವರು.
ಜನರು ತಮ್ಮ ಮಕ್ಕಳಿಗೆ ದೇವರ ಆಜ್ಞೆಗಳನ್ನು ಉಪದೇಶಿಸಿದರೆ,
    ಮಕ್ಕಳು ತಮ್ಮ ಪೂರ್ವಿಕರಂತಾಗುವುದಿಲ್ಲ.
ಅವರ ಪೂರ್ವಿಕರು ದೇವರಿಗೆ ವಿಮುಖರಾಗಿ ಆತನಿಗೆ ವಿಧೇಯರಾಗಲಿಲ್ಲ.
    ಅವರು ಮೊಂಡರಾಗಿದ್ದರು.
    ಅವರು ದೇವರಿಗೆ ನಂಬಿಗಸ್ತರಾಗಿರಲಿಲ್ಲ.

ಕೀರ್ತನೆಗಳು 78:17-29

17 ಆದರೂ ಅವರು ಅರಣ್ಯದಲ್ಲಿ
    ಮಹೋನ್ನತನಾದ ಆತನ ವಿರೋಧವಾಗಿ ಪಾಪಮಾಡುತ್ತಾ ಬಂದರು.
18 ಬಳಿಕ ಅವರು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು
    ಇಷ್ಟಪದಾರ್ಥವನ್ನು ಕೇಳಿ ದೇವರನ್ನೇ ಪರೀಕ್ಷೆಗೊಡ್ಡಿದರು.
19 ಅವರು ಆತನಿಗೆ ವಿರೋಧವಾಗಿ ಮಾತಾಡಿ,
    “ದೇವರು ನಮಗೆ ಅರಣ್ಯದಲ್ಲಿ ಆಹಾರವನ್ನು ಕೊಡಬಲ್ಲನೇ?
20 ಆತನು ಬಂಡೆಯನ್ನು ಹೊಡೆದಾಗ ನೀರು ಪ್ರವಾಹದಂತೆ ಹೊರಬಂದದ್ದೇನೊ ನಿಜ!
    ಆದರೆ ಆತನು ನಮಗೆ ರೊಟ್ಟಿಯನ್ನೂ ಮಾಂಸವನ್ನೂ ಕೊಡಬಲ್ಲನೇ!” ಎಂದು ಹೇಳಿದರು.
21 ಆ ಜನರು ಹೇಳಿದ್ದನ್ನು ಕೇಳಿ
    ಯೆಹೋವನು ಕೋಪಗೊಂಡನು.
ಆತನು ಯಾಕೋಬ್ಯರ ಮೇಲೆಯೂ
    ಇಸ್ರೇಲರ ಮೇಲೆಯೂ ಕೋಪಗೊಂಡನು.
22     ಯಾಕೆಂದರೆ ಜನರು ಆತನಲ್ಲಿ ಭರವಸೆ ಇಡಲಿಲ್ಲ.
ದೇವರು ತಮ್ಮನ್ನು ರಕ್ಷಿಸಬಲ್ಲನೆಂದು ಅವರು ನಂಬಲಿಲ್ಲ.
23 ಆಗ ಆತನು ಉನ್ನತದಲ್ಲಿರುವ ಮೇಘಗಳನ್ನು ತೆರೆದನು,
    ಅವರ ಆಹಾರಕ್ಕಾಗಿ ಮನ್ನವನ್ನು ಮಳೆಗರೆಸಿದನು.
24 ಆಕಾಶದ ದ್ವಾರಗಳು ತೆರೆದು
    ಆಕಾಶದ ಉಗ್ರಾಣದಿಂದ ಧಾನ್ಯವು ಸುರಿದಂತೆ ಮನ್ನವು ಸುರಿಯಿತು.
25 ಜನರು ದೇವದೂತರ ಆಹಾರವನ್ನು ತಿಂದರು.
    ಅವರನ್ನು ತೃಪ್ತಿಗೊಳಿಸುವುದಕ್ಕಾಗಿ ಆತನು ಆಹಾರವನ್ನು ಹೇರಳವಾಗಿ ಒದಗಿಸಿದನು.
26 ಬಳಿಕ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು.
    ಆಗ ಲಾವಕ್ಕಿಗಳು ಮಳೆಯಂತೆ ಅವರಿದ್ದಲ್ಲಿಗೆ ಬಂದು ಬಿದ್ದವು.
27 ಆತನು ತೇಮಾನಿನಿಂದ ಗಾಳಿಬೀಸುವಂತೆ ಮಾಡಿದಾಗ
    ಪಕ್ಷಿಗಳು ಸಮುದ್ರದ ಮರಳಿನಷ್ಟು ಅವರಿದ್ದಲ್ಲಿ ಬಂದು ಬಿದ್ದವು.
28 ಪಕ್ಷಿಗಳು ಪಾಳೆಯದ ಮಧ್ಯಭಾಗದಲ್ಲಿ,
    ಆ ಜನರ ಗುಡಾರಗಳ ಸುತ್ತಲೆಲ್ಲಾ ಬಿದ್ದವು.
29 ಅವರಿಗೆ ತಿನ್ನಲು ಹೇರಳವಾಗಿತ್ತು.
    ಆದರೆ ತಮ್ಮ ಆಸೆಗಳೇ ತಮ್ಮನ್ನು ಪಾಪಕ್ಕೆ ನಡೆಸುವಂತೆ ಅವರು ಮಾಡಿದರು.

ಧರ್ಮೋಪದೇಶಕಾಂಡ 26:1-15

ಪ್ರಥಮ ಫಲ

26 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಬೇಗನೆ ಪ್ರವೇಶಿಸಲಿದ್ದೀರಿ. ಆ ದೇಶವನ್ನು ಸ್ವಾಧೀನಮಾಡಿಕೊಂಡು ಅಲ್ಲಿ ನೆಲೆಸುವಿರಿ. ಯೆಹೋವನು ಕೊಡುವ ಆ ದೇಶದಲ್ಲಿ ನೀವು ಪ್ರಥಮ ಬೆಳೆಯನ್ನು ಕೂಡಿಸುವಿರಿ. ಪುಟ್ಟಿಗಳಲ್ಲಿ ಧಾನ್ಯವನ್ನು ಕೂಡಿಸುವಾಗ ಪ್ರಥಮ ಭಾಗವನ್ನು ಪ್ರತ್ಯೇಕವಾಗಿಟ್ಟು ದೇವರಾದ ಯೆಹೋವನು ತನ್ನ ಆಲಯಕ್ಕಾಗಿ ಆರಿಸುವ ಸ್ಥಳಕ್ಕೆ ಅದನ್ನು ತೆಗೆದುಕೊಂಡು ಹೋಗಿ. ಅಲ್ಲಿ ಸೇವೆ ಮಾಡುತ್ತಿರುವ ಯಾಜಕನಿಗೆ, ‘ಯೆಹೋವನು ನನ್ನ ಪೂರ್ವಿಕರಿಗೆ ಒಂದು ದೇಶವನ್ನು ಕೊಡುವುದಾಗಿ ವಾಗ್ದಾನ ಮಾಡಿದನು. ನಾನು ಆ ದೇಶಕ್ಕೆ ಬಂದಿರುತ್ತೇನೆ’ ಎಂದು ಹೇಳಬೇಕು.

“ಯಾಜಕನು ನಿಮ್ಮ ಕೈಯಲ್ಲಿರುವ ಪುಟ್ಟಿಯನ್ನು ತೆಗೆದುಕೊಂಡು ಯೆಹೋವನ ಯಜ್ಞವೇದಿಕೆಯ ಎದುರು ಇಡುವನು. ಆಗ ನಿಮ್ಮ ದೇವರಾದ ಯೆಹೋವನ ಸನ್ನಿಧಾನದಲ್ಲಿ ನೀವು ಹೀಗೆ ಅರಿಕೆ ಮಾಡಬೇಕು: ‘ನಮ್ಮ ಪೂರ್ವಿಕರು ಊರೂರು ತಿರುಗುತ್ತಿದ್ದ ಅರಾಮ್ಯರಾಗಿದ್ದರು. ಅವರು ಈಜಿಪ್ಟನ್ನು ಸೇರಿ ಅಲ್ಲಿಯೇ ನೆಲೆಸಿದರು. ಅಲ್ಲಿಗೆ ಅವರು ಹೋದಾಗ ಅವರು ಕೆಲವರೇ ಆಗಿದ್ದರು. ಆದರೆ ಕಾಲಕ್ರಮೇಣ ಅವರು ದೊಡ್ಡ ಜನಾಂಗವಾಗಿ ಅಭಿವೃದ್ಧಿ ಹೊಂದಿದರು. ಈಜಿಪ್ಟಿನವರು ನಮ್ಮನ್ನು ಕಠಿಣವಾಗಿ ನೋಡಿಕೊಳ್ಳುತ್ತಿದ್ದರು. ನಮ್ಮನ್ನು ಗುಲಾಮರಾಗಿ ಉಪಯೋಗಿಸಿದರು. ನಮ್ಮನ್ನು ಹಿಂಸಿಸಿ, ಕಷ್ಟಕರವಾದ ಕೆಲಸವನ್ನು ಕೊಟ್ಟರು. ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಟ್ಟೆವು. ಆತನು ನಮ್ಮ ಕೂಗನ್ನು ಆಲಿಸಿದನು; ನಮ್ಮ ಸಂಕಟ, ವೇದನೆಗಳನ್ನು ನೋಡಿದನು. ಆಮೇಲೆ ಯೆಹೋವನು ತನ್ನ ಭುಜಪರಾಕ್ರಮದಿಂದ ನಮ್ಮನ್ನು ಈಜಿಪ್ಟಿನಿಂದ ಹೊರತಂದನು. ಆತನು ಅದ್ಭುತಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿದನು. ಅಲ್ಲಿಂದ ನಮ್ಮನ್ನು ಕರೆದುತಂದು ನಮಗೆ ಈ ಒಳ್ಳೆಯ ದೇಶವನ್ನು ಕೊಟ್ಟನು. 10 ಈಗ, ಯೆಹೋವನೇ, ನೀನು ಕೊಟ್ಟ ದೇಶದಲ್ಲಿ ಬೆಳೆದ ಬೆಳೆಯಲ್ಲಿ ಪ್ರಥಮ ಫಲಗಳನ್ನು ತಂದಿದ್ದೇನೆ.’

“ಆ ಪ್ರಥಮ ಬೆಳೆಯನ್ನು ನಿಮ್ಮ ದೇವರಾದ ಯೆಹೋವನ ಮುಂದೆ ಇಟ್ಟು ಆತನನ್ನು ಆರಾಧಿಸಬೇಕು. 11 ನೀವೂ ನಿಮ್ಮ ಹೆಂಡತಿ ಮಕ್ಕಳೂ ಸೇರಿ ಅಲ್ಲಿ ಊಟಮಾಡಿ ಸಂತೋಷಿಸಬೇಕು. ನಿಮ್ಮ ಊರಿನಲ್ಲಿರುವ ಲೇವಿಯರೊಂದಿಗೆ ಮತ್ತು ಪರದೇಶಸ್ಥರೊಂದಿಗೆ ನಿಮ್ಮ ಪ್ರಥಮ ಫಲಗಳನ್ನು ಹಂಚಿಕೊಳ್ಳಿರಿ.

12 “ಪ್ರತೀ ಮೂರನೆಯ ವರ್ಷವು ದಶಮಾಂಶದ ವರ್ಷವಾಗಿರುವುದು. ಆಗ ನಿಮ್ಮ ಬೆಳೆಯ ಹತ್ತನೆಯ ಒಂದು ಅಂಶವನ್ನು ಲೇವಿಯರಿಗೂ ಪರದೇಶಸ್ಥರಿಗೂ ಅನಾಥರಿಗೂ ವಿಧವೆಯರಿಗೂ ಕೊಡಬೇಕು. ಆಗ ಅವರಿಗೆ ಊಟಮಾಡಲು ಸಾಕಷ್ಟು ಇರುವುದು. 13 ನಿನ್ನ ದೇವರಾದ ಯೆಹೋವನಿಗೆ ನೀನು ಹೀಗೆ ಹೇಳಬೇಕು: ‘ನನ್ನ ಮನೆಯೊಳಗಿಂದ ನನ್ನ ಬೆಳೆಯ ಪರಿಶುದ್ಧ ಭಾಗವನ್ನು ತೆಗೆದು ಲೇವಿಯರಿಗೆ, ಪರದೇಶಸ್ಥರಿಗೆ, ಅನಾಥರಿಗೆ, ವಿಧವೆಯರಿಗೆ ಕೊಟ್ಟಿರುತ್ತೇನೆ. ನಿನ್ನ ಕಟ್ಟಳೆಗಳನ್ನೆಲ್ಲಾ ಅನುಸರಿಸಿದ್ದೇನೆ. ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನಿರಾಕರಿಸಲಿಲ್ಲ, ನಾನು ಅವುಗಳನ್ನು ಮರೆಯಲಿಲ್ಲ. 14 ನಾನು ದುಃಖದಲ್ಲಿರುವಾಗ ಆ ಆಹಾರವನ್ನು ಊಟಮಾಡಲಿಲ್ಲ. ಈ ಬೆಳೆಯನ್ನು ಶೇಖರಿಸುವಾಗ ನಾನು ಅಶುದ್ಧನಾಗಿರಲಿಲ್ಲ. ಸತ್ತವರಿಗಾಗಿ ಈ ಆಹಾರವನ್ನು ಅರ್ಪಿಸಲಿಲ್ಲ. ನನ್ನ ದೇವರಾದ ಯೆಹೋವನೇ, ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ. ನೀನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ನಾನು ಮಾಡಿದ್ದೇನೆ. 15 ನಿನ್ನ ಪರಿಶುದ್ಧ ನಿವಾಸದಿಂದ ನನ್ನನ್ನು ನೋಡು. ನಿನ್ನ ಜನಾಂಗವಾದ ಇಸ್ರೇಲನ್ನು ಆಶೀರ್ವದಿಸು. ನೀನು ನಮಗೆ ಕೊಟ್ಟಿರುವ ದೇಶವನ್ನು ಆಶೀರ್ವದಿಸು. ಸಮೃದ್ಧಿಯಿಂದ ಕೂಡಿದ ಈ ದೇಶವನ್ನು ನಮಗೆ ಕೊಡುವೆ ಎಂದು ನಮ್ಮ ಪೂರ್ವಿಕರಿಗೆ ನೀನು ವಾಗ್ದಾನ ಮಾಡಿರುವೆ.’

ಅಪೊಸ್ತಲರ ಕಾರ್ಯಗಳು 2:37-47

37 ಇದನ್ನು ಕೇಳಿದಾಗ, ಅವರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪೇತ್ರನನ್ನು ಮತ್ತು ಉಳಿದ ಅಪೊಸ್ತಲರನ್ನು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.

38 ಪೇತ್ರನು ಅವರಿಗೆ, “ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲದೆ ದೇವರು ವಾಗ್ದಾನ ಮಾಡಿರುವ ಪವಿತ್ರಾತ್ಮನನ್ನು ಹೊಂದಿಕೊಳ್ಳುವಿರಿ. 39 ಈ ವಾಗ್ದಾನವನ್ನು ನಿಮಗೂ ನಿಮ್ಮ ಮಕ್ಕಳಿಗೂ ಬಹು ದೂರದಲ್ಲಿರುವ ಜನರಿಗೂ ಕೊಡಲಾಗಿದೆ. ನಮ್ಮ ದೇವರಾದ ಪ್ರಭುವು ತನ್ನ ಬಳಿಗೆ ಕರೆಯುವ ಪ್ರತಿಯೊಬ್ಬರಿಗೂ ಈ ವಾಗ್ದಾನವನ್ನು ಕೊಟ್ಟಿದ್ದಾನೆ” ಎಂದು ಹೇಳಿದನು.

40 ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, “ಈ ದುಷ್ಟ ಸಂತತಿಯಿಂದ ತಪ್ಪಿಸಿಕೊಳ್ಳಿ” ಎಂದು ಬೇಡಿಕೊಂಡನು. 41 ಪೇತ್ರನು ಹೇಳಿದ್ದನ್ನು ಸ್ವೀಕರಿಸಿಕೊಂಡ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆ ದಿನ ಸುಮಾರು ಮೂರುಸಾವಿರ ಜನರು ವಿಶ್ವಾಸಿಗಳ ಗುಂಪಿಗೆ ಸೇರಿದರು.

ಅನ್ಯೋನ್ಯ ಜೀವನ

42 ಇವರೆಲ್ಲರೂ ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿಯುವುದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು. 43 ಅಪೊಸ್ತಲರು ಅನೇಕ ಶಕ್ತಿಯುತ ಮತ್ತು ಅದ್ಭುತಕಾರ್ಯಗಳನ್ನು ಮಾಡುತ್ತಿದ್ದರು; ಮತ್ತು ಪ್ರತಿಯೊಬ್ಬರಿಗೂ ದೇವರಲ್ಲಿ ಭಯಭಕ್ತಿ ಉಂಟಾಯಿತು. 44 ಎಲ್ಲಾ ವಿಶ್ವಾಸಿಗಳು ಒಟ್ಟಾಗಿ ವಾಸಿಸುತ್ತಿದ್ದರು. ಅವರು ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು. 45 ತಮ್ಮ ಜಮೀನನ್ನು ಮತ್ತು ತಾವು ಹೊಂದಿದ್ದ ವಸ್ತುಗಳನ್ನು ಮಾರಿ, ಬಂದ ಹಣವನ್ನೆಲ್ಲಾ ಕೊರತೆಯಲ್ಲಿದ್ದವರಿಗೆ ಹಂಚಿಕೊಡುತ್ತಿದ್ದರು; 46 ಪ್ರತಿದಿನ ದೇವಾಲಯದಲ್ಲಿ ಸೇರಿಬರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. ಅವರು ತಮ್ಮ ಮನೆಗಳಲ್ಲಿ ರೊಟ್ಟಿ ಮುರಿದು ಒಟ್ಟಾಗಿ ಊಟ ಮಾಡುತ್ತಿದ್ದರು. ಅವರ ಹೃದಯಗಳು ಆನಂದದಿಂದ ತುಂಬಿದ್ದವು. 47 ಅವರು ದೇವರನ್ನು ಕೊಂಡಾಡುತ್ತಿದ್ದರು ಮತ್ತು ಜನರೆಲ್ಲರೂ ಅವರನ್ನು ಇಷ್ಟಪಡುತ್ತಿದ್ದರು. ಪ್ರತಿದಿನವೂ ಹೆಚ್ಚುಹೆಚ್ಚು ಜನರು ರಕ್ಷಣೆ ಹೊಂದುತ್ತಿದ್ದರು; ಪ್ರಭುವು ಅವರನ್ನೆಲ್ಲಾ ವಿಶ್ವಾಸಿಗಳ ಸಭೆಗೆ ಸೇರಿಸುತ್ತಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International