Old/New Testament
ದಾವೀದನ ಕೊನೆಯ ಮಾತುಗಳು
23 ಇವು ಇಷಯನ ಮಗನಾದ ದಾವೀದನ ಕೊನೆಯ ಮಾತುಗಳು:
“ದಾವೀದನು ಈ ಹಾಡನ್ನು ಹಾಡಿದನು.
ದೇವರಿಂದ ಉನ್ನತಿಗೇರಿಸಲ್ಪಟ್ಟವನ ಸಂದೇಶವಿದು.
ಯಾಕೋಬನ ದೇವರಿಂದ ಆರಿಸಲ್ಪಟ್ಟ ರಾಜನೇ ಅವನು.
ಅವನು ಇಸ್ರೇಲಿನ ಒಳ್ಳೆಯ ಹಾಡುಗಾರ.
2 ಯೆಹೋವನ ಆತ್ಮವು ನನ್ನ ಮೂಲಕ ಮಾತನಾಡಿತು.
ಆತನ ನುಡಿಗಳು ನನ್ನ ನಾಲಿಗೆಯ ಮೇಲಿವೆ.
3 ಇಸ್ರೇಲಿನ ದೇವರು ಮಾತನಾಡಿದನು.
ಇಸ್ರೇಲಿನ ಬಂಡೆಯಾದಾತನು ನನಗೆ ತಿಳಿಸಿದನು.
‘ದೇವರಲ್ಲಿ ಭಯಭಕ್ತಿಯನ್ನಿಟ್ಟು
ಜನರನ್ನು ನ್ಯಾಯವಾಗಿ ಆಳುವ ವ್ಯಕ್ತಿಯು
4 ಹೊತ್ತಾರೆಯ ಬೆಳಕಿನ ಕಿರಣಗಳಂತೆಯೂ
ಮೋಡಗಳೇ ಇಲ್ಲದ ಮುಂಜಾನೆಯಂತೆಯೂ
ಮಳೆ ಬಿದ್ದನಂತರ ಬರುವ ಸೂರ್ಯನ ಬೆಳಕಿನಂತೆಯೂ
ಗರಿಕೆಯನ್ನು ನೆಲದಿಂದ ಮೂಡಿಸುವ ಮಳೆಯಂತೆಯೂ ಇದ್ದಾನೆ.’
5 “ಯೆಹೋವನು ನನ್ನ ಕುಟುಂಬವನ್ನು ಸ್ಥಿರಗೊಳಿಸಿದನು.
ಆತನು ನನ್ನೊಡನೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
ಆತನು ಈ ಒಡಂಬಡಿಕೆಯನ್ನು ಸಂಪೂರ್ಣವಾಗಿ ಸುಭದ್ರಗೊಳಿಸಿದನು.
ಆತನು ನನಗೆ ಎಲ್ಲೆಲ್ಲಿಯೂ ಜಯ ಕೊಡುವನು.
ಆತನು ನನಗೆ ಬೇಕಾದದ್ದನ್ನೆಲ್ಲಾ ಕೊಡುವನು.
6 “ಆದರೆ ಕೆಟ್ಟಜನರೆಲ್ಲರೂ ಮುಳ್ಳುಗಳಂತಿದ್ದಾರೆ.
ಜನರು ಮುಳ್ಳುಗಳನ್ನು ಹಿಡಿದುಕೊಳ್ಳುವುದಿಲ್ಲ;
ಅವರು ಅವುಗಳನ್ನು ಎಸೆದುಬಿಡುವರು.
7 ಒಬ್ಬ ವ್ಯಕ್ತಿಯು ಅವುಗಳನ್ನು ಮುಟ್ಟಿದರೆ,
ಅವು ಮರದ ಮತ್ತು ಕಬ್ಬಿಣದ ಕತ್ತಿಗಳಿಂದ ಚುಚ್ಚಿದಂತಾಗುತ್ತದೆ.
ಆ ಜನರು ಮುಳ್ಳುಗಳಂತಿದ್ದಾರೆ.
ಅವರನ್ನು ಬೆಂಕಿಯಲ್ಲಿ ಎಸೆದು ಸಂಪೂರ್ಣವಾಗಿ ಸುಟ್ಟುಬಿಡುವರು!”
ದಾವೀದನ ಶೂರ ಸೈನಿಕರು
8 ದಾವೀದನ ಶೂರಸೈನಿಕರ ಹೆಸರುಗಳು ಹೀಗಿವೆ:
ತಹ್ಕೆಮೋನ್ಯನಾದ ಯೋಷೆಬಷ್ಷೆಬೆತನು. ಮೂವರು ವೀರರಿಗೆ ಯೋಷೆಬಷ್ಷೆಬೆತನು ಮುಖ್ಯಸ್ಥನಾಗಿದ್ದನು. ಅವನನ್ನು ಎಚ್ನೀಯನಾದ ಅದೀನೋ ಎಂದೂ ಕರೆಯುತ್ತಿದ್ದರು. ಯೋಷೆಬಷ್ಷೆಬೆತನು ಏಕಕಾಲದಲ್ಲಿ ಎಂಟುನೂರು ಜನರನ್ನು ಕೊಂದನು.
9 ಎರಡನೆಯವನು ಅಹೋಹ್ಯನಾದ ದೋದೋ ಎಂಬವನ ಮಗನಾದ ಎಲ್ಲಾಜಾರ. ದಾವೀದನು ಫಿಲಿಷ್ಟಿಯರನ್ನು ಎದುರಿಸಿದ ಸಮಯದಲ್ಲಿ ಅವನೊಂದಿಗಿದ್ದ ಮೂರು ಮಂದಿ ವೀರರಲ್ಲಿ ಎಲ್ಲಾಜಾರನು ಒಬ್ಬನಾಗಿದ್ದನು. ಫಿಲಿಷ್ಟಿಯರು ಯುದ್ಧಕ್ಕೆ ಕೂಡಿಬಂದಾಗ, ಇಸ್ರೇಲ್ ಸೈನಿಕರು ಓಡಿಹೋಗಿದ್ದರು. 10 ಎಲ್ಲಾಜಾರನು ಆಯಾಸಗೊಳ್ಳುವ ತನಕ ಫಿಲಿಷ್ಟಿಯರೊಡನೆ ಹೋರಾಡಿದನು. ಆದರೆ ಅವನು ತನ್ನ ಕೈ ಸೋತು ಹೋಗುವವರೆಗೂ ಫಿಲಿಷ್ಟಿಯರನ್ನು ಕೊಂದನು. ಯೆಹೋವನು ಇಸ್ರೇಲರಿಗೆ ಅಂದು ಮಹಾವಿಜಯವನ್ನು ಉಂಟುಮಾಡಿದನು. ಎಲ್ಲಾಜಾರನು ಯುದ್ಧದಲ್ಲಿ ವಿಜಯಿಯಾದ ಮೇಲೆ ಜನರು ಹಿಂದಿರುಗಿದರು. ಆದರೆ ಅವರು ಶತ್ರುಗಳಿಂದ ಬೆಲೆಬಾಳುವ ವಸ್ತುಗಳನ್ನು ಅಪಹರಿಸಲು ಮಾತ್ರವೇ ಬಂದಿದ್ದರು.
11 ಮೂರನೆಯವನು, ಹರಾರ್ಯನಾದ ಆಗೇಯನ ಮಗನಾದ ಶಮ್ಮ. ಫಿಲಿಷ್ಟಿಯರು ದೊಡ್ಡಗುಂಪಾಗಿ ಬಂದು ಅಲಸಂದಿಯ ಹೊಲದಲ್ಲಿ ಹೋರಾಡಿದರು. ಇಸ್ರೇಲರು ಫಿಲಿಷ್ಟಿಯರಿಂದ ಓಡಿಹೋದರು. 12 ಆದರೆ ಶಮ್ಮನು ಹೊಲದ ಮಧ್ಯಭಾಗದಲ್ಲಿ ನಿಂತು ಅದನ್ನು ಉಳಿಸಿಕೊಂಡನು. ಅವನು ಫಿಲಿಷ್ಟಿಯರನ್ನು ಕೊಂದನು. ಆ ಸಮಯದಲ್ಲಿ ಯೆಹೋವನು ಮಹಾವಿಜಯವನ್ನು ಕೊಟ್ಟನು.
13 ಸುಗ್ಗಿಯ ಕಾಲದ ಒಂದು ಸಮಯದಲ್ಲಿ ಮೂವತ್ತು ಮಂದಿ ಶೂರರಲ್ಲಿ[a] ಮೂವರು ದಾವೀದನ ಬಳಿಗೆ ಬಂದರು. ಈ ಮೂವರು ಅದುಲ್ಲಾಮ್ ಗವಿಗೆ ಬಂದರು. ಫಿಲಿಷ್ಟಿಯರ ಸೈನ್ಯವು ರೆಫಾಯೀಮ್ ಕಣಿವೆಯಲ್ಲಿ ತನ್ನ ಪಾಳೆಯವನ್ನು ಮಾಡಿಕೊಂಡಿತ್ತು.
14 ಆ ಸಮಯದಲ್ಲಿ ದಾವೀದನು ಕೋಟೆಯಲ್ಲಿದ್ದನು. ಫಿಲಿಷ್ಟಿಯ ಸೈನಿಕರಲ್ಲಿ ಕೆಲವರು ಬೆತ್ಲೆಹೇಮಿನಲ್ಲಿದ್ದರು. 15 ದಾವೀದನಿಗೆ ತನ್ನ ಸ್ವಸ್ಥಳದ ನೀರನ್ನು ಕುಡಿಯಲು ಅತಿಯಾಸೆಯಾಯಿತು. ದಾವೀದನು, “ಬೆತ್ಲೆಹೇಮ್ ನಗರದ್ವಾರದ ಬಾವಿಯಿಂದ ಯಾರಾದರೂ ನೀರನ್ನು ನನಗೆ ತಂದುಕೊಟ್ಟರೆ ಎಷ್ಟು ಚೆನ್ನಾಗಿರುವುದು” ಎಂದು ಹೇಳಿದನು. 16 ಆದರೆ ಈ ಮೂವರು ಪರಾಕ್ರಮಿಗಳು ಫಿಲಿಷ್ಟಿಯ ಸೈನ್ಯದಲ್ಲಿ ನುಗ್ಗಿಹೋಗಿ, ಬೆತ್ಲೆಹೇಮ್ ನಗರದ್ವಾರದ ಬಾವಿಯಿಂದ ನೀರನ್ನು ತಂದುಕೊಟ್ಟರು. ಆದರೆ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಆ ನೀರನ್ನು ಅವನು ಯೆಹೋವನ ಸನ್ನಿಧಿಯಲ್ಲಿ ಸುರಿದು, 17 “ಯೆಹೋವನೇ, ನಾನು ಈ ನೀರನ್ನು ಕುಡಿಯುವುದಿಲ್ಲ. ನಾನು ಈ ನೀರನ್ನು ಕುಡಿದರೆ, ನನಗಾಗಿ ತಮ್ಮ ಪ್ರಾಣಗಳನ್ನೇ ಆಪತ್ತಿಗೀಡುಮಾಡಿಕೊಂಡಿದ್ದ ಜನರ ರಕ್ತವನ್ನು ಕುಡಿದಂತಾಗುತ್ತದೆ” ಎಂದು ಹೇಳಿದನು. ಈ ಕಾರಣದಿಂದಲೇ ದಾವೀದನು ಆ ನೀರನ್ನು ಕುಡಿಯಲು ನಿರಾಕರಿಸಿದನು. ಈ ಮೂವರು ಪರಾಕ್ರಮಿಗಳು ಈ ರೀತಿಯ ಅನೇಕ ಕಾರ್ಯಗಳನ್ನು ಮಾಡಿದರು.
18 ಚೆರೂಯಳ ಮಗನೂ ಯೋವಾಬನ ಸೋದರನೂ ಆದ ಅಬೀಷೈಯನು ಈ ಮೂವರು ಪರಾಕ್ರಮಿಗಳಿಗೆ ನಾಯಕನು. ಅಬೀಷೈಯನು ಮುನ್ನೂರು ಮಂದಿ ಶತ್ರುಗಳ ವಿರುದ್ಧ ತನ್ನ ಬರ್ಜಿಯನ್ನು ಬಳಸಿ ಅವರನ್ನು ಕೊಂದನು. ಅವನೂ ಈ ಮೂವರಂತೆಯೇ ಪ್ರಸಿದ್ಧನಾದನು. 19 ಅಬೀಷೈಯನು ಈ ಮೂವರಿಗಿಂತಲೂ ಹೆಚ್ಚು ಗೌರವಕ್ಕೆ ಪಾತ್ರನಾದನು. ಅವನು ಈ ಮೂವರಿಗೆ ನಾಯಕನಾದನು. ಆದರೆ ಅವನು ಈ ಮೂವರಲ್ಲಿ ಒಬ್ಬನಾಗಿರಲಿಲ್ಲ.
20 ಯೆಹೋಯಾದಾವನ ಮಗನಾದ ಬೆನಾಯನು ಅವರಲ್ಲಿ ಒಬ್ಬನು. ಅವನು ಬಲಿಷ್ಠ ವ್ಯಕ್ತಿಯಾಗಿದ್ದನು. ಅವನು ಕಬ್ಜಯೇಲಿನವನಾಗಿದ್ದನು. ಬೆನಾಯನು ಅನೇಕ ಸಾಹಸಕಾರ್ಯಗಳನ್ನು ಮಾಡಿದನು. ಬೆನಾಯನು ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಬೆನಾಯನು ಮಂಜುಸುರಿಯುವಾಗ ಒಂದು ತಗ್ಗಿನಲ್ಲಿ ಇಳಿದು ಸಿಂಹವನ್ನು ಕೊಂದನು. 21 ಬೆನಾಯನು ವೀರಯೋಧನಾದ ಈಜಿಪ್ಟಿನವನೊಬ್ಬನನ್ನು ಕೊಂದನು. ಈಜಿಪ್ಟಿನವನ ಕೈಯಲ್ಲಿ ಒಂದು ಬರ್ಜಿಯಿತ್ತು. ಬೆನಾಯನ ಕೈಯಲ್ಲಿ ಒಂದು ಲಾಠಿ ಮಾತ್ರವೇ ಇದ್ದಿತು. ಬೆನಾಯನು ಈಜಿಪ್ಟಿನವನ ಕೈಯಲ್ಲಿದ್ದ ಬರ್ಜಿಯನ್ನು ಕಿತ್ತುಕೊಂಡು ಆ ಬರ್ಜಿಯಿಂದಲೇ ಅವನನ್ನು ಕೊಂದುಬಿಟ್ಟನು. 22 ಯೆಹೋಯಾದಾವನ ಮಗನಾದ ಬೆನಾಯನು ಈ ರೀತಿಯ ಅನೇಕ ಕಾರ್ಯಗಳನ್ನು ಮಾಡಿದನು. ಬೆನಾಯನು ಆ ಮೂವರು ಪರಾಕ್ರಮಿಗಳಷ್ಟೇ ಪ್ರಸಿದ್ಧನಾಗಿದ್ದನು. 23 ಬೆನಾಯನು ಮೂವತ್ತು ಮಂದಿ ಪರಾಕ್ರಮಿಗಳಿಗಿಂತ ಹೆಚ್ಚು ಗೌರವಕ್ಕೆ ಪಾತ್ರನಾದರೂ ಆ ಮೂವರು ಪರಾಕ್ರಮಿಗಳಲ್ಲಿ ಒಬ್ಬನಾಗಿರಲಿಲ್ಲ. ದಾವೀದನು ತನ್ನ ಅಂಗರಕ್ಷಕ ಪಡೆಯ ನಾಯಕನನ್ನಾಗಿ ಬೆನಾಯನನ್ನು ನೇಮಿಸಿದನು.
ಮೂವತ್ತು ಮಂದಿ ಪರಾಕ್ರಮಿಗಳು
24 ಯೋವಾಬನ ಸೋದರನಾದ ಅಸಾಹೇಲನು ಮೂವತ್ತು ಮಂದಿ ಪರಾಕ್ರಮಿಗಳಲ್ಲಿ ಒಬ್ಬನಾಗಿದ್ದನು. ಮೂವತ್ತು ಮಂದಿ ಪರಾಕ್ರಮಿಗಳ ಗುಂಪಿನಲ್ಲಿದ್ದ ಇತರ ಜನರೆಂದರೆ:
ಬೆತ್ಲೆಹೇಮಿನ ದೋದೋವಿನ ಮಗನಾದ ಎಲ್ಹಾನಾನ,
25 ಹೆರೋದಿನವರಾದ ಶಮ್ಮ,
ಎಲೀಕ,
26 ಪೆಲೆಟಿನವನಾದ ಹೆಲೆಚ್,
ತೆಕೋವದ ಇಕ್ಕೇಷನ ಮಗನಾದ ಈರಾ,
27 ಅಣತೋತಿನವನಾದ ಅಬೀಯೆಜೆರ್,
ಹುಷಾ ಊರಿನವನಾದ ಮೆಬುನ್ನೈ,
28 ಅಹೋಹಿನವನಾದ ಚಲ್ಮೋನ್,
ನೆಟೋಫದವನಾದ ಮಹರೈ,
29 ನೆಟೋಫದವನಾದ ಬಾಣನ ಮಗ ಹೇಲೆದ್,
ಬೆನ್ಯಾಮೀನ್ ಕುಟುಂಬದ ಗಿಬೆಯದ ರೀಬೈ ಎಂಬವನ ಮಗನಾದ ಇತ್ತೈ,
30 ಪಿರಾತೋನ್ಯನಾದ ಬೆನಾಯ,
ನಹಲೇಗಾಷಿನವನಾದ ಹಿದ್ದೈ,
31 ಅರಾಬಾದ ಅಬೀಅಲ್ಬೋನ್,
ಬರ್ಹುಮ್ಯನಾದ ಅಜ್ಮಾವೇತ್,
32 ಶಾಲ್ಬೋನ್ಯನಾದ ಎಲೆಯಖ್ಬಾ,
ಯಾಷೇನನ ಗಂಡುಮಕ್ಕಳು,
ಯೋನಾತಾನ, 33 ಹರಾರ್ಯನಾದ ಶಮ್ಮ,
ಅರಾರ್ಯನಾದ ಶಾರಾರನ ಮಗ ಅಹೀಯಾಮ್,
34 ಮಾಕಾದ ಅಹಸ್ಬೈನ ಮಗನಾದ ಎಲೀಫೆಲೆಟ್,
ಗಿಲೋವಿನ ಅಹೀತೋಫೆಲನ ಮಗ ಎಲೀಯಾಮ್,
35 ಕರ್ಮೆಲ್ಯನಾದ ಹೆಚ್ರೋ,
ಅರ್ಬೀಯನಾದ ಪಾರೈ,
36 ಚೋಬದ ನಾತಾನನ ಮಗನಾದ ಇಗಾಲ್,
ಗಾದ್ಯನಾದ ಬಾನೀ,
37 ಅಮ್ಮೋನಿಯನಾದ ಚೆಲೆಕ್,
ಚೆರೂಯಳ ಮಗನಾದ ಯೋವಾಬನ ಸಹಾಯಕನೂ
ಬೇರೋತ್ಯನೂ ಆದ ನಹರೈ,
38 ಇತ್ರೀಯರಾದ ಈರಾ
ಮತ್ತು ಗಾರೇಬ,
39 ಹಿತ್ತಿಯನಾದ ಊರೀಯ.
ಹೀಗೆ ಒಟ್ಟು ಮೂವತ್ತೇಳು ಜನರಿದ್ದರು.
ಜನಗಣತಿ ಮತ್ತು ಅದರ ಫಲ
24 ಯೆಹೋವನು ಇಸ್ರೇಲರ ಮೇಲೆ ಮತ್ತೆ ಕೋಪಗೊಂಡು ಇಸ್ರೇಲರ ವಿರುದ್ಧನಾಗುವಂತೆ ದಾವೀದನನ್ನು ಪ್ರೇರೇಪಿಸಿದನು. ದಾವೀದನು, “ಇಸ್ರೇಲಿನ ಮತ್ತು ಯೆಹೂದದ ಜನಗಣತಿ ಮಾಡಿರಿ” ಎಂದು ಆಜ್ಞಾಪಿಸಿದನು.
2 ರಾಜನಾದ ದಾವೀದನು ಸೈನ್ಯದ ಸೇನಾಧಿಪತಿಯಾದ ಯೋವಾಬನಿಗೆ, “ದಾನ್ನಿಂದ ಬೇರ್ಷೆಬದವರೆಗಿನ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಸಂಚರಿಸಿ ಜನರನ್ನು ಲೆಕ್ಕಹಾಕಿರಿ. ಆಗ ಅಲ್ಲಿ ಎಷ್ಟು ಜನರಿದ್ದಾರೆಂಬುದು ನನಗೆ ತಿಳಿಯುತ್ತದೆ” ಎಂದು ಹೇಳಿದನು.
3 ಆದರೆ ಯೋವಾಬನು ರಾಜನಿಗೆ, “ಅಲ್ಲಿ ಎಷ್ಟು ಜನರಿದ್ದಾರೆಂಬುದು ಅಗತ್ಯವಿಲ್ಲ. ನಿನ್ನ ದೇವರಾದ ಯೆಹೋವನು ಈಗ ಇರುವುದಕ್ಕಿಂತ ನೂರರಷ್ಟು ಹೆಚ್ಚು ಜನರನ್ನು ದಯಪಾಲಿಸಲಿ! ಈ ಕಾರ್ಯವು ಸಂಭವಿಸುವುದನ್ನು ನಿನ್ನ ಕಣ್ಣುಗಳಿಂದಲೇ ನೋಡು. ಆದರೆ ನೀನು ಈ ಕಾರ್ಯವನ್ನು ಮಾಡಬೇಕೆಂದಿರುವುದೇಕೆ?” ಎಂದು ಕೇಳಿದನು.
4 ಆದರೆ ರಾಜನಾದ ದಾವೀದನು ಯೋವಾಬನಿಗೆ ಮತ್ತು ಸೈನ್ಯದ ಸೇನಾಪತಿಗಳಿಗೆ ಜನರನ್ನು ಲೆಕ್ಕಹಾಕಲು ಆಜ್ಞಾಪಿಸಿದನು. ಆದ್ದರಿಂದ ಯೋವಾಬನು ಸೈನ್ಯದ ಸೇನಾಪತಿಗಳೊಡನೆ ಇಸ್ರೇಲಿನ ಜನರನ್ನು ಲೆಕ್ಕಹಾಕಲು ಹೊರಟನು. 5 ಅವರು ಜೋರ್ಡನ್ ನದಿಯನ್ನು ದಾಟಿ ಅರೋಯೇರಿನಲ್ಲಿ ಪಾಳೆಯ ಮಾಡಿಕೊಂಡರು. ಅವರ ಪಾಳೆಯವು ನಗರದ ಬಲ ಅಂಚಿನಲ್ಲಿತ್ತು. (ಆ ನಗರವು ಗಾದ್ ಕಣಿವೆಯ ಮಧ್ಯಭಾಗದಲ್ಲಿಯೂ ಯಗ್ಜೇರಿನ ಮಾರ್ಗದಲ್ಲಿಯೂ ಇತ್ತು.)
6 ಆಗ ಅವರು ಗಿಲ್ಯಾದಿಗೆ ಮತ್ತು ತಖ್ತೀಮ್ ಹೊಜೀ ಪ್ರದೇಶಕ್ಕೂ ಯಾನಿನದಾನಿಗೂ, ಚೀದೋನಿನ ಸುತ್ತಲೂ ಹೋದರು. 7 ಅವರು ತೂರ್ ಕೋಟೆಗೂ ಹಿವ್ವಿಯರ ಮತ್ತು ಕಾನಾನ್ಯರ ಎಲ್ಲಾ ನಗರಗಳಿಗೂ ಯೆಹೂದದ ದಕ್ಷಿಣಕ್ಕಿರುವ ಬೇರ್ಷೆಬಕ್ಕೂ ಹೋದರು. 8 ಅವರು ದೇಶದಲ್ಲೆಲ್ಲಾ ಸಂಚರಿಸಿ ಒಂಭತ್ತು ತಿಂಗಳು ಮತ್ತು ಇಪ್ಪತ್ತು ದಿನಗಳ ತರುವಾಯ ಜೆರುಸಲೇಮಿಗೆ ಬಂದರು.
9 ಯೋವಾಬನು ರಾಜನಿಗೆ ಜನರ ಪಟ್ಟಿಯನ್ನು ಕೊಟ್ಟನು. ಇಸ್ರೇಲಿನಲ್ಲಿ ಕತ್ತಿಯನ್ನು ಬಳಸಬಲ್ಲ ಎಂಟು ಲಕ್ಷ ಜನರಿದ್ದರು. ಯೆಹೂದದಲ್ಲಿ ಐದು ಲಕ್ಷ ಜನರಿದ್ದರು.
ಯೆಹೋವನು ದಾವೀದನನ್ನು ದಂಡಿಸಿದನು
10 ದಾವೀದನು ಜನರನ್ನು ಲೆಕ್ಕಹಾಕಿದ ನಂತರ ಅವಮಾನಗೊಂಡಂತೆ ಭಾವಿಸಿದನು. ದಾವೀದನು ಯೆಹೋವನಿಗೆ, “ನಾನು ಈ ಕಾರ್ಯವನ್ನು ಮಾಡಿ ಮಹಾಪಾಪಕ್ಕೆ ಒಳಗಾದೆನು! ಯೆಹೋವನೇ, ನನ್ನ ಪಾಪಕ್ಕಾಗಿ ನನ್ನನ್ನು ಕ್ಷಮಿಸೆಂದು ಬೇಡುತ್ತೇನೆ. ನಾನು ಬಹಳ ಮೂರ್ಖನಾಗಿಬಿಟ್ಟೆ” ಎಂದು ಹೇಳಿದನು.
11 ದಾವೀದನು ಹೊತ್ತಾರೆಯಲ್ಲಿ ಎದ್ದಾಗ, ಅವನ ದರ್ಶಿಯಾದ ಗಾದನಿಗೆ ಯೆಹೋವನ ಮಾತುಗಳು ಬಂದವು. 12 ಯೆಹೋವನು ಅವನಿಗೆ, “ನೀನು ಹೋಗಿ, ದಾವೀದನಿಗೆ ಹೋಗಿ ಹೇಳು, ‘ಯೆಹೋವನು ಹೀಗೆ ಹೇಳುತ್ತಾನೆ, ನಾನು ಮೂರು ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಒಂದನ್ನು ಆರಿಸಿಕೋ’” ಎಂದು ಹೇಳಿದನು.
13 ಗಾದನು ದಾವೀದನ ಬಳಿಗೆ ಹೋಗಿ, “ಈ ಮೂರು ಶಿಕ್ಷೆಗಳಲ್ಲಿ ಒಂದನ್ನು ಆರಿಸಿಕೊ: ನಿನಗೆ ಮತ್ತು ನಿನ್ನ ದೇಶಕ್ಕೆ ಏಳು ವರ್ಷಗಳ ಕಾಲ ಬರಗಾಲ ಬರಬೇಕೇ? ಅಥವಾ ನಿನ್ನ ಶತ್ರುಗಳು ನಿನ್ನನ್ನು ಮೂರು ತಿಂಗಳ ಕಾಲ ಅಟ್ಟಿಸಬೇಕೇ? ಅಥವಾ ಮೂರು ದಿನಗಳ ಕಾಲ ನಿನ್ನ ದೇಶದಲ್ಲಿ ರೋಗರುಜಿನಗಳು ವ್ಯಾಪಿಸಬೇಕೇ? ಇವುಗಳ ಬಗ್ಗೆ ಯೋಚಿಸು, ನನ್ನನ್ನು ಕಳುಹಿಸಿದ ಯೆಹೋವನಿಗೆ ನಾನು ಏನು ಹೇಳಬೇಕೆಂಬುದನ್ನು ನೀನು ತೀರ್ಮಾನಿಸು” ಎಂದು ಹೇಳಿದನು.
14 ದಾವೀದನು ಗಾದನಿಗೆ, “ನಾನು ನಿಜವಾಗಿಯೂ ತೊಂದರೆಗೆ ಒಳಗಾದೆ! ಆದರೆ ಯೆಹೋವನು ಕೃಪಾಪೂರ್ಣನಾಗಿದ್ದಾನೆ. ಆದ್ದರಿಂದ ಆತನು ನನ್ನನ್ನು ದಂಡಿಸಲಿ; ಆದರೆ ಅದು ಜನರಿಂದ ಬಾರದಿರಲಿ” ಎಂದು ಹೇಳಿದನು.
15 ಆದ್ದರಿಂದ ಯೆಹೋವನು ಇಸ್ರೇಲಿಗೆ ರೋಗರುಜಿನಗಳನ್ನು ಬರಮಾಡಿದನು. ಇವು ಹೊತ್ತಾರೆಯಿಂದ ಆರಂಭವಾಗಿ ನಿಯಮಿತಕಾಲದವರೆಗೆ ಮುಂದುವರಿದವು. ದಾನ್ನಿಂದ ಬೇರ್ಷೆಬದವರೆಗೆ ಎಪ್ಪತ್ತುಸಾವಿರ ಜನರು ಸತ್ತರು. 16 ದೇವದೂತನು ಜೆರುಸಲೇಮನ್ನು ನಾಶಗೊಳಿಸಲು ಅದರತ್ತ ತನ್ನ ಕೈಯನ್ನು ಚಾಚಿದನು. ಆದರೆ ಸಂಭವಿಸಿದ ಕೆಟ್ಟಕಾರ್ಯಗಳ ಬಗ್ಗೆ ಯೆಹೋವನು ಪಶ್ಚಾತ್ತಾಪಪಟ್ಟನು. ಯೆಹೋವನು ಜನರನ್ನು ನಾಶಗೊಳಿಸಿದ ದೇವದೂತನಿಗೆ, “ಇಲ್ಲಿಗೆ ಸಾಕು! ನಿನ್ನ ಕೈಯನ್ನು ಕೆಳಗಿಳಿಸು” ಎಂದು ಹೇಳಿದನು. ಆಗ ಆ ಯೆಹೋವನ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.
ದಾವೀದನು ಅರೌನನ ಕಣವನ್ನು ಕೊಂಡುಕೊಂಡನು
17 ಜನರನ್ನು ಕೊಂದ ದೂತನನ್ನು ದಾವೀದನು ನೋಡಿ ಯೆಹೋವನೊಂದಿಗೆ ಮಾತನಾಡಿದನು. ದಾವೀದನು ಯೆಹೋವನಿಗೆ, “ನಾನು ಪಾಪ ಮಾಡಿದೆನು. ನಾನು ತಪ್ಪು ಮಾಡಿದೆನು. ಆದರೆ ಈ ಜನರು ಕೇವಲ ಕುರಿಗಳಂತೆ ನಿರಪರಾಧಿಗಳು. ಅವರು ಯಾವ ತಪ್ಪನ್ನೂ ಮಾಡಲಿಲ್ಲ. ದಯಮಾಡಿ ನಿನ್ನ ದಂಡನೆಯು ನನಗೆ ಮತ್ತು ನನ್ನ ತಂದೆಯ ಕುಲದ ವಿರುದ್ಧವಾಗಿರಲಿ” ಎಂದು ಹೇಳಿದನು.
18 ಆ ದಿನ ಗಾದನು ದಾವೀದನ ಬಳಿಗೆ ಬಂದು, “ಹೋಗಿ, ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸು” ಎಂದು ಹೇಳಿದನು. 19 ಅಂತೆಯೇ ದಾವೀದನು ಯೆಹೋವನ ಆಜ್ಞೆಗೆ ವಿಧೇಯನಾಗಿ ಅರೌನನನ್ನು ನೋಡಲು ಹೋದನು. 20 ರಾಜನು ಅವನ ಸೇವಕರೊಂದಿಗೆ ತನ್ನ ಕಡೆ ಬರುತ್ತಿರುವುದನ್ನು ಅರೌನನು ನೋಡಿದನು. ಅರೌನನು ಹೊರಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. 21 ಅರೌನನು, “ರಾಜನಾದ ನನ್ನ ಒಡೆಯನೇ, ನನ್ನ ಬಳಿ ಬಂದದ್ದೇಕೆ?” ಎಂದು ಕೇಳಿದನು.
ದಾವೀದನು, “ನಿನ್ನಿಂದ ಕಣವನ್ನು ಕೊಂಡುಕೊಳ್ಳುವುದಕ್ಕಾಗಿ ಬಂದೆನು. ನಾನು ಯೆಹೋವನಿಗೆ ಒಂದು ಯಜ್ಞವೇದಿಕೆಯನ್ನು ನಿರ್ಮಿಸುತ್ತೇನೆ. ಆಗ ರೋಗರುಜಿನಗಳು ನಿಲ್ಲುತ್ತವೆ” ಎಂದನು.
22 ಅರೌನನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ಯಜ್ಞವನ್ನು ಸಮರ್ಪಿಸಲು ನೀನು ಏನನ್ನು ಬೇಕಾದರೂ ತೆಗೆದುಕೊ. ಸರ್ವಾಂಗಹೋಮವನ್ನು ಅರ್ಪಿಸಲು ಇಲ್ಲಿ ಕೆಲವು ಹೋರಿಗಳಿವೆ, ನೊಗ ಮುಂತಾದ ಮರದ ಸಲಕರಣೆಗಳಿವೆ. 23 ರಾಜನೇ, ನಾನು ಎಲ್ಲವನ್ನೂ ನಿನಗೆ ಅರ್ಪಿಸುತ್ತೇನೆ” ಎಂದು ಹೇಳಿದನು. ಇದಲ್ಲದೆ ಅರೌನನು ರಾಜನಿಗೆ, “ನಿನ್ನ ದೇವರಾದ ಯೆಹೋವನು ನಿನ್ನನ್ನು ಮೆಚ್ಚಿಕೊಳ್ಳಲಿ” ಎಂದೂ ಹೇಳಿದನು.
24 ಆದರೆ ರಾಜನು ಅರೌನನಿಗೆ, “ಇಲ್ಲ, ನಾನು ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ನಾನು ನಿನ್ನ ಭೂಮಿಗೆ ಬೆಲೆಯನ್ನು ಕೊಟ್ಟು ಕೊಂಡುಕೊಳ್ಳುತ್ತೇನೆ. ಉಚಿತವಾಗಿ ಸಿಕ್ಕಿದ್ದನ್ನು ನಾನು ನನ್ನ ದೇವರಾದ ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸುವುದಿಲ್ಲ” ಎಂದು ಹೇಳಿದನು.
ಆದ್ದರಿಂದ ದಾವೀದನು ಕಣವನ್ನು ಮತ್ತು ಹೋರಿಗಳನ್ನು ಐವತ್ತು ಶೆಕೆಲ್ಗಳಿಗೆ ಕೊಂಡುಕೊಂಡನು. 25 ನಂತರ ದಾವೀದನು ಅಲ್ಲಿ ಯೆಹೋವನಿಗಾಗಿ ಯಜ್ಞವೇದಿಕೆಯನ್ನು ನಿರ್ಮಿಸಿದನು. ದಾವೀದನು ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಸಮರ್ಪಿಸಿದನು.
ಅವನು ದೇಶಕ್ಕಾಗಿ ಮಾಡಿದ ಪ್ರಾರ್ಥನೆಗೆ ಯೆಹೋವನು ಉತ್ತರಕೊಟ್ಟನು. ಯೆಹೋವನು ಇಸ್ರೇಲಿನ ರೋಗರುಜಿನಗಳನ್ನು ನಿಲ್ಲಿಸಿದನು.
ಜಕ್ಕಾಯ
19 ಒಮ್ಮೆ ಯೇಸು ಜೆರಿಕೊ ಪಟ್ಟಣದ ಮೂಲಕ ಹೋಗುತ್ತಿದ್ದನು. 2 ಆ ಪಟ್ಟಣದಲ್ಲಿ ಜಕ್ಕಾಯನೆಂಬ ಮನುಷ್ಯನಿದ್ದನು. ಅವನು ಐಶ್ವರ್ಯವಂತನೂ ಪ್ರಧಾನ ಸುಂಕವಸೂಲಿಗಾರನೂ ಆಗಿದ್ದನು. 3 ಅವನು ಯೇಸುವನ್ನು ನೋಡಲು ಬಯಸಿದನು. ಯೇಸುವನ್ನು ನೋಡುವುದಕ್ಕಾಗಿ ಇತರ ಅನೇಕ ಜನರೂ ಅಲ್ಲಿದ್ದರು. ಜಕ್ಕಾಯನು ಬಹಳ ಗಿಡ್ಡನಾಗಿದ್ದುದರಿಂದ ಆ ಜನರ ಗುಂಪಿನ ದೆಸೆಯಿಂದ ಯೇಸುವನ್ನು ನೋಡಲಾಗಲಿಲ್ಲ. 4 ಆದ್ದರಿಂದ ಅವನು ಬೇರೊಂದು ಸ್ಥಳಕ್ಕೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಕುಳಿತುಕೊಂಡನು. ಯೇಸು ಆ ಸ್ಥಳದ ಮೂಲಕ ಹೋಗುವನೆಂದು ಜಕ್ಕಾಯನಿಗೆ ಗೊತ್ತಿತ್ತು.
5 ಯೇಸು ಆ ಸ್ಥಳಕ್ಕೆ ಬಂದಾಗ, ಮರದ ಮೇಲೆ ಕುಳಿತಿದ್ದ ಜಕ್ಕಾಯನನ್ನು ಕಣ್ಣೆತ್ತಿ ನೋಡಿ ಅವನಿಗೆ, “ಜಕ್ಕಾಯನೇ ಬೇಗನೆ ಕೆಳಗಿಳಿದು ಬಾ! ಈ ದಿನ ನಾನು ನಿನ್ನ ಮನೆಯಲ್ಲಿ ಇಳಿದುಕೊಳ್ಳಬೇಕು” ಎಂದು ಹೇಳಿದನು.
6 ಆಗ ಜಕ್ಕಾಯನು ಬೇಗನೆ ಕೆಳಗಿಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. 7 ಜನರೆಲ್ಲರೂ ಇದನ್ನು ನೋಡಿ, “ಯೇಸು ಎಂಥವನ ಮನೆಯಲ್ಲಿ ಇಳಿದುಕೊಳ್ಳುತ್ತಾನೆ. ಜಕ್ಕಾಯನು ಪಾಪಿ!” ಎಂದು ಆಕ್ಷೇಪಣೆ ಮಾಡತೊಡಗಿದರು.
8 ಜಕ್ಕಾಯನು ಪ್ರಭುವಿಗೆ (ಯೇಸುವಿಗೆ), “ನಾನು ಜನರಿಗೆ ಉಪಕಾರ ಮಾಡಬೇಕೆಂದಿದ್ದೇನೆ. ನಾನು ನನ್ನ ಹಣದಲ್ಲಿ ಅರ್ಧವನ್ನು ಬಡವರಿಗೆ ಕೊಡುವೆನು. ನಾನು ಯಾರಿಗಾದರೂ ಮೋಸಮಾಡಿದ್ದರೆ, ಆ ವ್ಯಕ್ತಿಗೆ ಅದರ ನಾಲ್ಕರಷ್ಟು ಹೆಚ್ಚಾಗಿ ಕೊಡುತ್ತೇನೆ” ಎಂದು ಹೇಳಿದನು.
9 ಯೇಸು, “ಈ ಮನುಷ್ಯನು ಒಳ್ಳೆಯವನೇ ಸರಿ. ಇವನು ನಿಜವಾಗಿಯೂ ಅಬ್ರಹಾಮನ ಕುಟುಂಬಕ್ಕೆ ಸೇರಿದ್ದಾನೆ. ಇಂದೇ ಈ ಮನೆಗೆ ರಕ್ಷಣೆ ಆಯಿತು. 10 ಮನುಷ್ಯಕುಮಾರನು ಬಂದದ್ದು ತಪ್ಪಿಹೋದ ಜನರನ್ನು ಹುಡುಕಿ ರಕ್ಷಿಸುವುದಕ್ಕಾಗಿಯಷ್ಟೇ” ಎಂದು ಹೇಳಿದನು.
ದೇವರು ಕೊಡುವ ವರಗಳನ್ನು ಉಪಯೋಗಿಸಿರಿ
(ಮತ್ತಾಯ 25:14-30)
11 ಯೇಸು ಪ್ರಯಾಣ ಮಾಡುತ್ತಾ ಜೆರುಸಲೇಮಿನ ಸಮೀಪಕ್ಕೆ ಬಂದನು. ಕೆಲವು ಜನರು ದೇವರ ರಾಜ್ಯವು ಬೇಗನೆ ಬರಲಿದೆ ಎಂದುಕೊಂಡರು. 12 ಜನರ ಈ ಭಾವನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಈ ಸಾಮ್ಯವನ್ನು ಹೇಳಿದನು: “ಬಹಳ ಪ್ರಾಮುಖ್ಯನಾದ ಒಬ್ಬನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರುವುದಕ್ಕಾಗಿ ದೂರದೇಶಕ್ಕೆ[a] ಹೊರಟನು. ರಾಜ್ಯಾಧಿಕಾರವನ್ನು ಪಡೆದುಕೊಂಡ ಮೇಲೆ ಹಿಂತಿರುಗಿ ಬಂದು ತನ್ನ ಜನರನ್ನು ಆಳಬೇಕೆಂಬುದು ಅವನ ಬಯಕೆಯಾಗಿತ್ತು. 13 ಆದ್ದರಿಂದ ಅವನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಒಟ್ಟಾಗಿ ಕರೆದು ಅವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಾವಿರ ರೂಪಾಯಿ ಕೊಟ್ಟು, ‘ನಾನು ಹಿಂತಿರುಗಿ ಬರುವವರೆಗೆ ಈ ಹಣದಿಂದ ವ್ಯಾಪಾರ ಮಾಡಿರಿ’ ಎಂದು ಹೇಳಿದನು. 14 ಆದರೆ ಅವನ ದೇಶದ ಜನರು ಅವನನ್ನು ದ್ವೇಷಿಸಿ, ಜನರ ಒಂದು ಗುಂಪನ್ನು ಅವನ ಹಿಂದೆ ಕಳುಹಿಸಿದರು. ಆ ಗುಂಪಿನ ಜನರು ದೂರದೇಶದಲ್ಲಿ, ‘ಇವನು ನಮ್ಮ ರಾಜನಾಗುವುದು ನಮಗೆ ಇಷ್ಟವಿಲ್ಲ!’ ಎಂದು ಹೇಳಿದರು.
15 “ಆದರೂ ಅವನು ಅರಸನಾದನು. ಅವನು ತನ್ನ ದೇಶಕ್ಕೆ ಹಿಂತಿರುಗಿದಾಗ, ‘ನನ್ನ ಹಣ ಹೊಂದಿರುವ ಸೇವಕರನ್ನು ಕರೆಯಿರಿ. ಅವರು ಅದರಿಂದ ಎಷ್ಟು ಹೆಚ್ಚು ಹಣ ಸಂಪಾದಿಸಿದ್ದಾರೆಂದು ನಾನು ನೋಡಬೇಕು’ ಎಂದು ಹೇಳಿದನು. 16 ಮೊದಲನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿ ಸಂಪಾದಿಸಿದ್ದೇನೆ!’ ಎಂದು ಹೇಳಿದನು. 17 ಅರಸನು ಆ ಸೇವಕನಿಗೆ, ‘ಭಲೇ! ನೀನು ಒಳ್ಳೆಯ ಆಳು. ಚಿಕ್ಕವಿಷಯಗಳಲ್ಲಿ ನಾನು ನಿನ್ನ ಮೇಲೆ ಭರವಸೆ ಇಡಬಹುದೆಂದು ನನಗೆ ತಿಳಿಯಿತು. ಆದ್ದರಿಂದ ನನ್ನ ಹತ್ತು ಪಟ್ಟಣಗಳನ್ನು ಆಳುವುದಕ್ಕೆ ನಿನ್ನನ್ನು ನೇಮಿಸುವೆನು!’ ಎಂದು ಹೇಳಿದನು.
18 “ಎರಡನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿ ಸಂಪಾದಿಸಿದ್ದೇನೆ’ ಅಂದನು. 19 ಅರಸನು ಆ ಸೇವಕನಿಗೆ, ‘ನೀನು ನನ್ನ ಐದು ಪಟ್ಟಣಗಳಿಗೆ ಅಧಿಕಾರಿಯಾಗಿರು’ ಎಂದು ಹೇಳಿದನು.
20 “ಆ ಬಳಿಕ ಇನ್ನೊಬ್ಬ ಆಳು ಬಂದು ಅರಸನಿಗೆ, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿ ಇಲ್ಲಿದೆ. 21 ನೀನು ಬಲಿಷ್ಠನೂ ಕಠಿಣ ಮನುಷ್ಯನೂ ಸ್ವತಃ ಸಂಪಾದನೆ ಮಾಡದ ಹಣವನ್ನು ದೋಚಿಕೊಳ್ಳುವವನೂ ಸ್ವತಃ ನೀನೇ ಬೆಳೆಯದ ದವಸಧಾನ್ಯಗಳನ್ನು ಒಟ್ಟುಗೂಡಿಸುವವನೂ ಆಗಿರುವೆ. ಆದ್ದರಿಂದ ನಿನಗೆ ಹೆದರಿ ನಿನ್ನ ಹಣವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದೆ’ ಎಂದನು.
22 “ಆಗ ಅರಸನು ಆ ಸೇವಕನಿಗೆ, ‘ನೀನು ಕೆಟ್ಟ ಆಳು! ನಿನ್ನ ಸ್ವಂತ ಮಾತುಗಳಿಂದಲೇ ನಿನಗೆ ತೀರ್ಪು ಮಾಡುತ್ತೇನೆ. ನನ್ನನ್ನು ಕಠಿಣ ಮನುಷ್ಯನೆಂದು ನೀನು ಹೇಳಿದೆ. ಸ್ವತಃ ನಾನೇ ಸಂಪಾದನೆ ಮಾಡದ ಹಣವನ್ನು ನಾನು ತೆಗೆದುಕೊಳ್ಳುವುದಾಗಿಯೂ ಸ್ವತಃ ನಾನೇ ಬೆಳೆಯದ ದವಸಧಾನ್ಯಗಳನ್ನು ನಾನು ಸಂಗ್ರಹಿಸುವುದಾಗಿಯೂ ನೀನು ಹೇಳಿದೆ. 23 ಅದು ನಿಜವಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ನಾನು ಮರಳಿ ಬಂದಾಗ, ನನಗೆ ಸ್ವಲ್ಪ ಬಡ್ಡಿಯಾದರೂ ಸಿಕ್ಕುತ್ತಿತ್ತು’ ಎಂದನು. 24 ಬಳಿಕ ಅರಸನು ಅಲ್ಲಿದ್ದ ಜನರಿಗೆ, ‘ಈ ಸೇವಕನ ಒಂದುಸಾವಿರ ರೂಪಾಯಿ ತೆಗೆದುಕೊಂಡು ಹತ್ತುಸಾವಿರ ರೂಪಾಯಿ ಸಂಪಾದಿಸಿದವನಿಗೆ ಕೊಡಿರಿ’ ಎಂದು ಹೇಳಿದನು.
25 “ಆ ಜನರು ಅರಸನಿಗೆ, ‘ಸ್ವಾಮೀ, ಆ ಸೇವಕನ ಬಳಿ ಈಗಾಗಲೇ ಹತ್ತುಸಾವಿರ ರೂಪಾಯಿ ಇದೆಯಲ್ಲಾ!’ ಎಂದು ಹೇಳಿದರು.
26 “ಅರಸನು, ‘ತನ್ನಲ್ಲಿರುವುದನ್ನು ಉಪಯೋಗಿಸುವವನು ಹೆಚ್ಚು ಪಡೆಯುವನು. ಆದರೆ ತನ್ನಲ್ಲಿರುವುದನ್ನು ಉಪಯೋಗಿಸದವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು. 27 ಈಗ ನನ್ನ ವೈರಿಗಳೆಲ್ಲಿ? ನಾನು ಅರಸನಾಗುವುದನ್ನು ವಿರೋಧಿಸಿದ ಜನರೆಲ್ಲಿ? ನನ್ನ ವೈರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನನ್ನ ಕಣ್ಣೆದುರಿನಲ್ಲಿಯೇ ಕೊಲ್ಲಿರಿ!’ ಎಂದು ಹೇಳಿದನು.”
Kannada Holy Bible: Easy-to-Read Version. All rights reserved. © 1997 Bible League International