Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ಸಮುವೇಲನು 15-16

ಸೌಲನಿಂದ ಅಮಾಲೇಕ್ಯರ ನಾಶನ

15 ಒಂದು ದಿನ ಸಮುವೇಲನು ಸೌಲನಿಗೆ, “ಯೆಹೋವನು ಇಸ್ರೇಲರ ಮೇಲೆ ನಿನ್ನನ್ನು ರಾಜನನ್ನಾಗಿ ಅಭಿಷೇಕಿಸಲು ನನ್ನನ್ನು ಕಳುಹಿಸಿದನು. ಈಗ ಯೆಹೋವನ ಸಂದೇಶವನ್ನು ಕೇಳು. ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಅಮಾಲೇಕ್ಯರು ಅವರನ್ನು ಕಾನಾನಿಗೆ ಹೋಗದಂತೆ ತಡೆಯಲು ಪ್ರಯತ್ನಿಸಿದರು. ಅಮಾಲೇಕ್ಯರು ಮಾಡಿದ್ದನ್ನು ನಾನು ನೋಡಿದೆ. ಈಗ, ನೀನು ಹೋಗಿ ಅಮಾಲೇಕ್ಯರ ವಿರುದ್ಧ ಹೋರಾಡು. ನೀನು ಅಮಾಲೇಕ್ಯರನ್ನೂ ಮತ್ತು ಅವರಿಗೆ ಸೇರಿದ ಎಲ್ಲವನ್ನೂ ನಾಶಗೊಳಿಸಬೇಕು. ಯಾರನ್ನೂ ಜೀವದಿಂದ ಉಳಿಸಬೇಡ, ನೀನು ಎಲ್ಲ ಗಂಡಸರನ್ನು ಮತ್ತು ಹೆಂಗಸರನ್ನು ಕೊಲ್ಲಬೇಕು. ನೀನು ಎಲ್ಲ ಮಕ್ಕಳನ್ನೂ ಎಳೆಕೂಸುಗಳನ್ನೂ ಕೊಲ್ಲಬೇಕು. ನೀನು ಅವರಿಗೆ ಸೇರಿದ ಎಲ್ಲ ಹಸುಗಳನ್ನೂ ಕುರಿಗಳನ್ನೂ ಒಂಟೆಗಳನ್ನೂ ಕತ್ತೆಗಳನ್ನೂ ಕೊಂದುಹಾಕಬೇಕು’” ಎಂದು ಹೇಳಿದನು.

ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದನು. ಅಲ್ಲಿ ಎರಡು ಲಕ್ಷ ಮಂದಿ ಭೂಸೈನಿಕರಿದ್ದರು ಮತ್ತು ಇತರ ಹತ್ತು ಸಾವಿರ ಮಂದಿ ಜನರಿದ್ದರು. ಯೆಹೂದ್ಯರೂ ಅವರೊಂದಿಗೆ ಸೇರಿಕೊಂಡಿದ್ದರು. ಸೌಲನು ಅಮಾಲೇಕ್ಯರ ನಗರಕ್ಕೆ ಹೋಗಿ ಅಲ್ಲಿನ ಕಣಿವೆಯಲ್ಲಿ ಹೊಂಚುಹಾಕುತ್ತಿದ್ದನು. ಸೌಲನು ಕೇನ್ಯದ ಜನರಿಗೆ, “ಅಮಾಲೇಕ್ಯರನ್ನು ತ್ಯಜಿಸಿ ಹೊರಗೆ ಹೋಗಿ, ಆಗ ನಿಮ್ಮನ್ನು ಅಮಾಲೇಕ್ಯರೊಂದಿಗೆ ನಾಶಗೊಳಿಸುವುದಿಲ್ಲ. ಇಸ್ರೇಲರು ಈಜಿಪ್ಟಿನಿಂದ ಹೊರ ಬಂದಾಗ ನೀವು ಅವರಿಗೆ ಅನುಕಂಪ ತೋರಿದ್ದೀರಿ” ಎಂದು ಹೇಳಿದನು. ಆದ್ದರಿಂದ ಕೇನ್ಯರು ಅಮಾಲೇಕ್ಯರನ್ನು ಬಿಟ್ಟುಹೋದರು.

ಸೌಲನು ಅಮಾಲೇಕ್ಯರನ್ನು ಸೋಲಿಸಿದನು. ಅವನು ಹವೀಲಾದಿಂದ ಈಜಿಪ್ಟಿನ ಗಡಿಯಲ್ಲಿರುವ ಶೂರಿನವರೆಗೂ ಅವರೊಡನೆ ಹೋರಾಡಿದನು. ಸೌಲನು ಅಮಾಲೇಕ್ಯರ ರಾಜನಾದ ಅಗಾಗನನ್ನು ಜೀವಸಹಿತ ಉಳಿಸಿದನು. ಆದರೆ ಉಳಿದ ಅಮಾಲೇಕ್ಯರನ್ನೆಲ್ಲ ಕೊಂದುಹಾಕಿದನು. ಹೀಗೆ ಸೌಲನು ಮತ್ತು ಇಸ್ರೇಲ್ ಸೈನಿಕರು ಅಗಾಗನಿಗೆ ಜೀವದಾನ ಮಾಡಿದರು. ಅವರು ಉತ್ತಮ ಕುರಿಗಳನ್ನೂ ದನಗಳನ್ನೂ ಆಡಿನ ಮರಿಗಳನ್ನೂ ಉಳಿಸಿದರು. ಅವರು ಉಪಯುಕ್ತವಾದುದನ್ನು ಉಳಿಸಿ, ಅನುಪಯುಕ್ತವಾದುದನ್ನು ನಾಶಗೊಳಿಸಿದರು.

ಸಮುವೇಲನು ಸೌಲನಿಗೆ ಅವನ ಪಾಪದ ಬಗ್ಗೆ ತಿಳಿಸುವನು

10 ಸಮುವೇಲನಿಗೆ ಯೆಹೋವನ ಸಂದೇಶ ಬಂದಿತು. 11 ಯೆಹೋವನು ಸಮುವೇಲನಿಗೆ, “ಸೌಲನು ನನ್ನ ಮಾರ್ಗವನ್ನು ತ್ಯಜಿಸಿದನು. ನಾನು ಸೌಲನನ್ನು ರಾಜನನ್ನಾಗಿ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತೇನೆ. ನಾನು ಆಜ್ಞಾಪಿಸಿದ ಕಾರ್ಯಗಳನ್ನು ಅವನು ಮಾಡುತ್ತಿಲ್ಲ” ಎಂದು ಹೇಳಿದನು. ಸಮುವೇಲನು ತಳಮಳಗೊಂಡನು. ಅವನು ರಾತ್ರಿಯೆಲ್ಲ ಅಳುತ್ತಾ ಯೆಹೋವನಲ್ಲಿ ಮೊರೆಯಿಟ್ಟನು.

12 ಸಮುವೇಲನು ಮಾರನೆಯ ದಿನ ಬೆಳಿಗ್ಗೆ ಮೇಲೆದ್ದು, ಸೌಲನನ್ನು ಭೇಟಿಮಾಡಲು ಹೋದನು. ಆದರೆ ಜನರೆಲ್ಲ ಸಮುವೇಲನಿಗೆ, “ಸೌಲನು ತನ್ನ ಗೌರವಾರ್ಥವಾಗಿ ಜ್ಞಾಪಕಸ್ತಂಭವನ್ನು ನಿರ್ಮಿಸಲು ಕರ್ಮೆಲ್ ಎಂಬ ಪಟ್ಟಣಕ್ಕೆ ಹೋದನು. ನಂತರ ಸೌಲನು ಕೆಲವು ಪ್ರದೇಶಗಳನ್ನು ಸುತ್ತಿಕೊಂಡು ಗಿಲ್ಗಾಲಿಗೆ ಹೋದನು” ಎಂದು ಹೇಳಿದರು.

ಸಮುವೇಲನು ಸೌಲನಿದ್ದ ಸ್ಥಳಕ್ಕೆ ಹೋದನು. ಸೌಲನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳನ್ನು ಪ್ರಥಮ ಸರ್ವಾಂಗಹೋಮವಾಗಿ ಯೆಹೋವನಿಗೆ ಅರ್ಪಿಸುತ್ತಿದ್ದನು. 13 ಸೌಲನು ಸಮುವೇಲನ ಹತ್ತಿರಕ್ಕೆ ಹೋಗಿ, “ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಯೆಹೋವನ ಆಜ್ಞೆಗಳನ್ನು ಪಾಲಿಸಿದ್ದೇನೆ” ಎಂದು ಹೇಳಿದನು.

14 ಅದಕ್ಕೆ ಸಮುವೇಲನು, “ಹಾಗಿದ್ದರೆ ನಾನು ಕೇಳುತ್ತಿರುವ ಶಬ್ದವೇನು? ದನಕುರಿಗಳ ಶಬ್ದವು ಕೇಳುತ್ತಿದೆಯಲ್ಲಾ!” ಎಂದನು.

15 ಸೌಲನು, “ಸೈನಿಕರು ಅಮಾಲೇಕ್ಯರಿಂದ ವಶಪಡಿಸಿಕೊಂಡ ಪಶುಗಳಲ್ಲಿ ಉತ್ತಮವಾದುದ್ದನ್ನು ನಿನ್ನ ದೇವರಾದ ಯೆಹೋವನಿಗೆ ಅರ್ಪಿಸುವುದಕ್ಕಾಗಿ ತೆಗೆದುಕೊಂಡು ಬಂದಿದ್ದಾರೆ. ಆದರೆ ನಾವು ಉಳಿದೆಲ್ಲವನ್ನು ನಾಶಪಡಿಸಿದೆವು” ಎಂದು ಉತ್ತರಿಸಿದನು.

16 ಸಮುವೇಲನು ಸೌಲನಿಗೆ, “ಯೆಹೋವನು ಕಳೆದ ರಾತ್ರಿ ನನಗೆ ಹೇಳಿದ್ದನ್ನು ನಿನಗೆ ತಿಳಿಸುತ್ತೇನೆ” ಎಂದನು.

ಸೌಲನು. “ಸರಿ, ತಿಳಿಸು” ಎಂದು ಉತ್ತರಿಸಿದನು.

17 ಸಮುವೇಲನು, “ನೀನು ಮೊದಲು ನಿನ್ನನ್ನು ಅಲ್ಪನೆಂದು ತಿಳಿದಿದ್ದೆ. ಯೆಹೋವನು ನಿನ್ನನ್ನು ಇಸ್ರೇಲರಿಗೆ ರಾಜನನ್ನಾಗಿ ಆರಿಸಿಕೊಂಡದ್ದರಿಂದ ಇಸ್ರೇಲ್ ಕುಲಗಳಿಗೆ ನಾಯಕನಾದೆ. 18 ಆತನು ನಿನಗೆ, ‘ಹೋಗು ದುಷ್ಟರಾದ ಅಮಾಲೇಕ್ಯರ ಮೇಲೆ ಯುದ್ಧ ಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಗೊಳಿಸು’ ಎಂದು ಆಜ್ಞಾಪಿಸಿದರು. 19 ಆದರೆ ನೀನು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ. ನೀನು ಅವುಗಳನ್ನು ನಿನ್ನ ಬಳಿಯಲ್ಲಿಟ್ಟುಕೊಳ್ಳಲು ಬಯಸಿದೆ. ಹೀಗೆ ಯೆಹೋವನು ಕೆಟ್ಟದೆಂದು ಹೇಳಿದ್ದನ್ನೇ ನೀನು ಮಾಡಿದೆ!” ಎಂದು ಹೇಳಿದನು.

20 ಸೌಲನು, “ಆದರೆ ನಾನು ಯೆಹೋವನಿಗೆ ವಿಧೇಯನಾದೆ. ಆತನು ಕಳುಹಿಸಿದಲ್ಲಿಗೆ ನಾನು ಹೋಗಿ ಅಮಾಲೇಕ್ಯರೆಲ್ಲರನ್ನು ನಾಶಗೊಳಿಸಿದೆ. ಆದರೆ ಒಬ್ಬನನ್ನೇ ನಾನು ತಂದೆನು. ಅವನೇ ರಾಜನಾದ ಅಗಾಗ. 21 ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞವನ್ನರ್ಪಿಸುವುದಕ್ಕಾಗಿ ಸೈನಿಕರು ಉತ್ತಮವಾದ ದನಕುರಿಗಳನ್ನು ವಶಪಡಿಸಿಕೊಂಡು ಬಂದರು” ಎಂದು ಉತ್ತರಿಸಿದನು.

22 ಆದಕ್ಕೆ ಸಮುವೇಲನು, “ಯೆಹೋವನಿಗೆ ಯಾವುದು ಹೆಚ್ಚು ಮೆಚ್ಚಿಗೆಯಾಗಿದೆ? ಸರ್ವಾಂಗಹೋಮಗಳೇ? ಯಜ್ಞಗಳೇ? ಇಲ್ಲವೆ ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವುದೇ? ದೇವರಿಗೆ ಯಜ್ಞವನ್ನು ಸಮರ್ಪಿಸುವುದಕ್ಕಿಂತ ಆತನ ಆಜ್ಞೆಗಳಿಗೆ ವಿಧೇಯರಾಗಿರುವುದೇ ಉತ್ತಮ. ಟಗರುಗಳ ಕೊಬ್ಬನ್ನು ಅರ್ಪಿಸುವುದಕ್ಕಿಂತ ಆತನ ಮಾತುಗಳನ್ನು ಆಲಿಸುವುದು ಉತ್ತಮ. 23 ಅವಿಧೇಯತೆಯು ಮಾಟಮಂತ್ರಗಳಷ್ಟೇ ಪಾಪಪೂರಿತವಾದುದು. ಮೊಂಡುತನದಿಂದ ತನ್ನ ಇಷ್ಟದಂತೆ ಮಾಡುವುದು ವಿಗ್ರಹಾರಾಧನೆಯಷ್ಟೇ ಪಾಪಪೂರಿತವಾದುದು. ನೀನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ. ಈ ಕಾರಣದಿಂದ ಈಗ ಯೆಹೋವನು ನಿನ್ನನ್ನು ರಾಜನನ್ನಾಗಿ ಸ್ವೀಕರಿಸಿಕೊಳ್ಳುವುದಿಲ್ಲ” ಎಂದು ಸೌಲನಿಗೆ ಉತ್ತರಿಸಿದನು.

24 ಆಗ ಸೌಲನು ಸಮುವೇಲನಿಗೆ, “ನಾನು ಪಾಪ ಮಾಡಿದ್ದೇನೆ. ನಾನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ; ನೀನು ಹೇಳಿದ್ದನ್ನು ನಾನು ಮಾಡಲಿಲ್ಲ. ನಾನು ಜನರಿಗೆ ಹೆದರಿ ಅವರು ಹೇಳಿದಂತೆ ಮಾಡಿದೆ. 25 ಈಗ ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ, ನನ್ನ ಪಾಪವನ್ನು ಕ್ಷಮಿಸು. ನನ್ನೊಂದಿಗೆ ಹಿಂದಿರುಗಿ ಬಾ, ಆಗ ನಾನು ಯೆಹೋವನನ್ನು ಆರಾಧಿಸಲು ಸಾಧ್ಯವಾಗುವುದು” ಎಂದು ಅವನನ್ನು ಬೇಡಿಕೊಂಡನು.

26 ಆದರೆ ಸಮುವೇಲನು ಸೌಲನಿಗೆ, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ನಿರಾಕರಿಸಿರುವೆ. ಈಗ ಆತನೂ ನಿನ್ನನ್ನು ಇಸ್ರೇಲಿನ ರಾಜತ್ವದಿಂದ ನಿರಾಕರಿಸುತ್ತಾನೆ” ಎಂದು ಹೇಳಿದನು.

27 ಸಮುವೇಲನು ಹೋಗಲು ತಿರುಗಿದಾಗ ಸೌಲನು ಸಮುವೇಲನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು. ಮೇಲಂಗಿಯು ಹರಿದುಹೋಯಿತು. 28 ಆಗ ಸಮುವೇಲನು ಸೌಲನಿಗೆ, “ನೀನು ನನ್ನ ಮೇಲಂಗಿಯನ್ನು ಹರಿದುಹಾಕಿದೆ. ಇದೇರೀತಿ ಯೆಹೋವನು ಈ ದಿನ ನಿನ್ನಿಂದ ಇಸ್ರೇಲ್ ರಾಜ್ಯವನ್ನು ಹರಿದುಹಾಕಿದನು. ನಿನ್ನ ಸ್ನೇಹಿತರಲ್ಲಿ ಒಬ್ಬನಿಗೆ ಯೆಹೋವನು ರಾಜ್ಯಾಧಿಕಾರವನ್ನು ಕೊಟ್ಟಿದ್ದಾನೆ. ಅವನು ನಿನಗಿಂತ ಉತ್ತಮ ವ್ಯಕ್ತಿ. 29 ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಯೆಹೋವನು ಸರ್ವಕಾಲದಲ್ಲೂ ಇರುವನು. ಯೆಹೋವನು ಸುಳ್ಳಾಡುವುದಿಲ್ಲ; ಆತನು ಮನುಷ್ಯನಂತೆ ಪದೇಪದೇ ಮನಸ್ಸನ್ನು ಬದಲಾಯಿಸುವವನಲ್ಲ” ಎಂದು ಹೇಳಿದನು.

30 ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆಂಬುದು ಸರಿ. ಆದರೆ ದಯವಿಟ್ಟು ನನ್ನ ಜೊತೆಯಲ್ಲಿ ಹಿಂದಿರುಗಿ ಬಾ. ಇಸ್ರೇಲಿನ ಜನರೆದುರು ಮತ್ತು ನಾಯಕರೆದುರು ಸ್ವಲ್ಪ ಗೌರವವನ್ನು ತೋರಿಸು. ನನ್ನ ಜೊತೆಯಲ್ಲಿ ನೀನು ಹಿಂದಿರುಗಿ ಬಂದರೆ, ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸಬಹುದು” ಎಂದು ಬೇಡಿಕೊಂಡನು. 31 ಆಗ ಸಮುವೇಲನು ಸೌಲನ ಜೊತೆಯಲ್ಲಿ ಹೋದನು. ಸೌಲನು ದೇವರನ್ನು ಆರಾಧಿಸಿದನು.

32 ಸಮುವೇಲನು, “ಅಮಾಲೇಕ್ಯರ ರಾಜನಾದ ಅಗಾಗನನ್ನು ನನ್ನ ಬಳಿಗೆ ಕರೆದುಕೊಂಡು ಬಾ” ಎಂದು ಹೇಳಿದನು.

ಅಗಾಗನು ಸಮುವೇಲನ ಹತ್ತಿರಕ್ಕೆ ಬಂದನು. ಅಗಾಗನನ್ನು ಸರಪಣಿಗಳಿಂದ ಬಂಧಿಸಲಾಗಿತ್ತು. ಅಗಾಗನು, “ಅವನು ನನ್ನನ್ನು ನಿಜವಾಗಿಯೂ ಕೊಲ್ಲುವುದಿಲ್ಲ” ಎಂದು ಆಲೋಚಿಸಿದನು.

33 ಆದರೆ ಸಮುವೇಲನು ಅಗಾಗನಿಗೆ, “ನಿನ್ನ ಕತ್ತಿಯು ಅನೇಕ ತಾಯಂದಿರಿಗೆ ಮಕ್ಕಳಿಲ್ಲದಂತೆ ಮಾಡಿದೆ. ಆದ್ದರಿಂದ ಈಗ ನಿನ್ನ ತಾಯಿಗೆ ಮಕ್ಕಳಿಲ್ಲದಂತಾಯಿತು” ಎಂದು ಹೇಳಿ ಅಗಾಗನನ್ನು ಗಿಲ್ಗಾಲಿನ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.

34 ನಂತರ ಸಮುವೇಲನು ಅಲ್ಲಿಂದ ಹೊರಟು ರಾಮಕ್ಕೆ ಹೋದನು. ಸೌಲನು ಗಿಬೆಯದ ತನ್ನ ಮನೆಗೆ ಹೋದನು. 35 ಅನಂತರ ಸಮುವೇಲನು ತನ್ನ ಜೀವಿತದ ಅವಧಿಯಲ್ಲಿ ಸೌಲನನ್ನು ನೋಡಲಿಲ್ಲ. ಸಮುವೇಲನು ಸೌಲನಿಗಾಗಿ ಬಹಳ ದುಃಖಪಟ್ಟನು. ಸೌಲನನ್ನು ಇಸ್ರೇಲರ ರಾಜನನ್ನಾಗಿ ಮಾಡಿದ್ದಕ್ಕೆ ಯೆಹೋವನು ಬಹಳ ಸಂತಾಪಪಟ್ಟನು.

ಸಮುವೇಲನು ಬೆತ್ಲೆಹೇಮಿಗೆ ಹೋಗುವನು

16 ಯೆಹೋವನು ಸಮುವೇಲನಿಗೆ, “ನೀನು ಸೌಲನಿಗಾಗಿ ಎಷ್ಟುಕಾಲ ಶೋಕಿಸುವೆ? ನಾನು ಸೌಲನನ್ನು ಇಸ್ರೇಲರ ರಾಜತ್ವದಿಂದ ತಿರಸ್ಕರಿಸಿರುತ್ತೇನೆ. ನೀನು ಕೊಂಬಿನಲ್ಲಿ ಎಣ್ಣೆಯನ್ನು ತುಂಬಿಕೊಂಡು ಬಾ. ನಾನು ನಿನ್ನನ್ನು ಇಷಯನೆಂಬ ಮನುಷ್ಯನ ಬಳಿಗೆ ಕಳುಹಿಸುತ್ತೇನೆ. ಇಷಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದನು. ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಹೊಸ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.

ಅದಕ್ಕೆ ಸಮುವೇಲನು, “ನಾನು ಹೊರಟರೆ ಸೌಲನಿಗೆ ಈ ಸುದ್ದಿಯು ತಿಳಿಯುತ್ತದೆ. ಆಗ ಅವನು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ” ಎಂದನು.

ಯೆಹೋವನು, “ಬೆತ್ಲೆಹೇಮಿಗೆ ಹೋಗು. ನಿನ್ನೊಡನೆ ಒಂದು ಎಳೆಕರುವನ್ನು ತೆಗೆದುಕೊಂಡು ಹೋಗು. ‘ನಾನು ಯೆಹೋವನಿಗೆ ಯಜ್ಞವನ್ನರ್ಪಿಸಲು ಬಂದಿದ್ದೇನೆ’ ಎಂದು ಹೇಳು. ಯಜ್ಞಕಾರ್ಯಕ್ಕೆ ಇಷಯನನ್ನು ಆಹ್ವಾನಿಸು. ಆ ಮೇಲೆ ನೀನು ಮಾಡಬೇಕಾದದ್ದನ್ನು ನಾನು ತೋರಿಸುತ್ತೇನೆ. ನಾನು ತೋರಿಸಿದ ಮನುಷ್ಯನಿಗೆ ನೀನು ಅಭಿಷೇಕವನ್ನು ಮಾಡಬೇಕು” ಎಂದು ಹೇಳಿದನು.

ಸಮುವೇಲನು ತನಗೆ ಯೆಹೋವನು ಹೇಳಿದಂತೆ ಮಾಡಿದನು. ಸಮುವೇಲನು ಬೆತ್ಲೆಹೇಮಿಗೆ ಹೋದನು. ಬೆತ್ಲೆಹೇಮಿನ ಹಿರಿಯರು ಭಯದಿಂದ ನಡುಗಿದರು. ಅವರು ಸಮುವೇಲನನ್ನು ಕಂಡು, “ನಿನ್ನ ಆಗಮನವು ಶುಭಕರವಾಗಿದೆಯೇ?” ಎಂದು ಕೇಳಿದರು.

ಸಮುವೇಲನು, “ಹೌದು, ಶುಭಕರವಾಗಿದೆ. ನಾನು ಯೆಹೋವನಿಗೆ ಯಜ್ಞವನ್ನು ಅರ್ಪಿಸಲು ಬಂದಿದ್ದೇನೆ. ನೀವೆಲ್ಲ ಸಿದ್ಧರಾಗಿ ಯಜ್ಞಕಾರ್ಯಕ್ಕಾಗಿ ನನ್ನೊಂದಿಗೆ ಬನ್ನಿ” ಎಂದು ಹೇಳಿದನು. ಸಮುವೇಲನು ಇಷಯನನ್ನೂ ಅವನ ಮಕ್ಕಳನ್ನೂ ಸಿದ್ಧಗೊಳಿಸಿದನು. ನಂತರ ಸಮುವೇಲನು ಅವರನ್ನು ಯಜ್ಞದಲ್ಲಿ ಭಾಗಿಗಳಾಗಲು ಆಹ್ವಾನಿಸಿದನು.

ಇಷಯನು ಮತ್ತು ಅವನ ಮಕ್ಕಳು ಬಂದಾಗ, ಸಮುವೇಲನು ಎಲೀಯಾಬನನ್ನು ನೋಡಿದನು. ಸಮುವೇಲನು ತನ್ನಲ್ಲೇ ಯೋಚಿಸುತ್ತಾ, “ಯೆಹೋವನು ಆಯ್ಕೆ ಮಾಡಿರುವವನು ನಿಜವಾಗಿಯೂ ಅವನೇ ಇರಬೇಕು” ಎಂದುಕೊಂಡನು.

ಆದರೆ ಯೆಹೋವನು ಸಮುವೇಲನಿಗೆ, “ಎಲೀಯಾಬನ ಎತ್ತರವನ್ನಾಗಲಿ ರೂಪವನ್ನಾಗಲಿ ಪರಿಗಣಿಸಬೇಡ. ಯಾಕೆಂದರೆ ನಾನು ಅವನನ್ನು ತಿರಸ್ಕರಿಸಿದ್ದೇನೆ. ಮನುಷ್ಯರಾದರೋ ಹೊರತೋರಿಕೆಯನ್ನು ಪರಿಗಣಿಸುತ್ತಾರೆ; ಯೆಹೋವನಾದರೋ ಹೊರತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಎಂದು ಹೇಳಿದನು.

ನಂತರ ಇಷಯನು ಎರಡನೆಯ ಮಗನಾದ ಅಬೀನಾದಾಬನನ್ನು ಕರೆದನು. ಅಬೀನಾದಾಬನು ಸಮುವೇಲನ ಹತ್ತಿರಕ್ಕೆ ಬಂದನು. ಸಮುವೇಲನು, “ಯೆಹೋವನು ಆರಿಸಿಕೊಂಡಿರುವ ವ್ಯಕ್ತಿ ಇವನಲ್ಲ” ಎಂದು ಹೇಳಿದನು.

ಅನಂತರ ಇಷಯನು ಶಮ್ಮನನ್ನು ಸಮುವೇಲನ ಬಳಿಗೆ ಕಳುಹಿಸಿದನು. ಆದರೆ ಸಮುವೇಲನು, “ಯೆಹೋವನು ಇವನನ್ನೂ ಆರಿಸಲಿಲ್ಲ” ಎಂದನು.

10 ಇಷಯನು ತನ್ನ ಏಳು ಜನ ಮಕ್ಕಳನ್ನು ಸಮುವೇಲನಿಗೆ ತೋರಿಸಿದನು. ಆದರೆ ಸಮುವೇಲನು, “ಯೆಹೋವನು ಇವರಲ್ಲಿ ಯಾರೊಬ್ಬನನ್ನೂ ಆರಿಸಿಕೊಳ್ಳಲಿಲ್ಲ” ಎಂದನು.

11 ನಂತರ ಸಮುವೇಲನು ಇಷಯನನ್ನು, “ನಿನಗೆ ಇರುವ ಮಕ್ಕಳು ಇಷ್ಟೆಯೋ?” ಎಂದು ಕೇಳಿದನು.

ಇಷಯನು, “ಇಲ್ಲ, ನನಗೆ ಇನ್ನೊಬ್ಬ ಕಿರಿಯ ಮಗನಿದ್ದಾನೆ. ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು.

ಆಗ ಸಮುವೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರಹೇಳು. ಅವನು ಬರುವತನಕ ನಾವು ಊಟಕ್ಕೆ ಕುಳಿತುಕೊಳ್ಳುವುದು ಬೇಡ” ಎಂದು ಹೇಳಿದನು.

12 ಇಷಯನು ಕಿರಿಯ ಮಗನನ್ನು ಕರೆತರಲು ಒಬ್ಬನನ್ನು ಕಳುಹಿಸಿದನು. ಇವನಾದರೋ ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು.

ಯೆಹೋವನು ಸಮುವೇಲನಿಗೆ, “ಮೇಲೆದ್ದು ನಿಲ್ಲು, ಅವನನ್ನು ಅಭಿಷೇಕಿಸು. ಇವನನ್ನೇ ನಾನು ಆರಿಸಿದ್ದು” ಎಂದು ಆಜ್ಞಾಪಿಸಿದನು.

13 ಸಮುವೇಲನು ಎಣ್ಣೆಯಿದ್ದ ಕೊಂಬನ್ನು ತೆಗೆದುಕೊಂಡು, ಅದರಲ್ಲಿದ್ದ ವಿಶೇಷವಾದ ಎಣ್ಣೆಯನ್ನು ಇಷಯನ ಕಿರಿಮಗನ ಮೇಲೆ, ಅವನ ಸೋದರರ ಎದುರಿನಲ್ಲೇ ಸುರಿದನು. ಆ ದಿನದಿಂದ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ದಾವೀದನಲ್ಲಿ ನೆಲೆಸಿತು. ಅನಂತರ ಸಮುವೇಲನು ರಾಮಕ್ಕೆ ಹಿಂದಿರುಗಿದನು.

ದುರಾತ್ಮವು ಸೌಲನನ್ನು ಪೀಡಿಸುವುದು

14 ಯೆಹೋವನ ಆತ್ಮವು ಸೌಲನನ್ನು ಬಿಟ್ಟುಹೋಯಿತು. ನಂತರ ಯೆಹೋವನು ದುರಾತ್ಮವೊಂದನ್ನು ಸೌಲನ ಬಳಿಗೆ ಕಳುಹಿಸಿದನು. ಅದು ಅವನಿಗೆ ಬಹಳ ತೊಂದರೆ ಮಾಡಿತು. 15 ಸೌಲನ ಸೇವಕರು ಅವನಿಗೆ, “ದೇವರು ಕಳುಹಿಸಿರುವ ದುರಾತ್ಮವು ನಿನ್ನನ್ನು ಪೀಡಿಸುತ್ತಿದೆ. 16 ನಮಗೆ ಆಜ್ಞಾಪಿಸುವುದಾದರೆ, ಕಿನ್ನರಿ ಬಾರಿಸುವವನನ್ನು ಹುಡುಕಿ ಕರೆದುಕೊಂಡು ಬರುತ್ತೇವೆ. ಯೆಹೋವನಿಂದ ಬಂದ ದುರಾತ್ಮವು ನಿನ್ನ ಮೈಮೇಲೆ ಬಂದಾಗ ಅವನು ಕಿನ್ನರಿ ಬಾರಿಸಿದರೆ, ದುರಾತ್ಮವು ನಿನ್ನನ್ನು ಬಿಟ್ಟುಹೋಗಿ ನಿನಗೆ ಉಪಶಮನವಾಗುತ್ತದೆ” ಎಂದು ಹೇಳಿದರು.

17 ಸೌಲನು ಅವನ ಸೇವಕರಿಗೆ, “ಚೆನ್ನಾಗಿ ಕಿನ್ನರಿ ಬಾರಿಸುವವನನ್ನು ಹುಡುಕಿಕೊಂಡು ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು.

18 ಅವನ ಸೇವಕರಲ್ಲಿ ಒಬ್ಬನು, “ಇಷಯ ಎಂಬ ಹೆಸರಿನ ಒಬ್ಬ ಮನುಷ್ಯನು ಬೆತ್ಲೆಹೇಮಿನಲ್ಲಿ ವಾಸಿಸುತ್ತಿದ್ದಾನೆ. ನಾನು ಇಷಯನ ಮಗನನ್ನು ನೋಡಿದ್ದೇನೆ. ಅವನು ಕಿನ್ನರಿ ಬಾರಿಸುತ್ತಾನೆ. ಅವನು ಧೈರ್ಯಶಾಲಿ ಮತ್ತು ಒಳ್ಳೆಯ ಹೋರಾಟಗಾರ; ಅವನು ಬುದ್ಧಿವಂತನೂ ರಣಶೂರನೂ ರೂಪವಂತನೂ ಆಗಿದ್ದಾನೆ. ಅದಲ್ಲದೆ ಯೆಹೋವನು ಅವನೊಂದಿಗಿದ್ದಾನೆ” ಎಂದು ಹೇಳಿದನು.

19 ಸೌಲನು ಸಂದೇಶಕರ ಮೂಲಕ ಇಷಯನಿಗೆ, “ನಿನಗೆ ದಾವೀದನೆಂಬ ಮಗನಿದ್ದಾನೆ. ಅವನು ನಿನ್ನ ಕುರಿಗಳನ್ನು ಕಾಯುತ್ತಾನೆ. ಅವನನ್ನು ನನ್ನ ಬಳಿಗೆ ಕಳುಹಿಸು” ಎಂದು ತಿಳಿಸಿದನು.

20 ಇಷಯನು ಕೆಲವು ರೊಟ್ಟಿಗಳನ್ನೂ ಒಂದು ಸೀಸೆ ದ್ರಾಕ್ಷಾರಸವನ್ನೂ ಒಂದು ಹೋತಮರಿಯನ್ನೂ ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕೊಡುಗೆಗಳಾಗಿ ಕಳುಹಿಸಿದನು. 21 ದಾವೀದನು ಸೌಲನ ಹತ್ತಿರಕ್ಕೆ ಹೋಗಿ, ಅವನ ಮುಂದೆ ನಿಂತನು. ಸೌಲನು ದಾವೀದನನ್ನು ಬಹಳ ಪ್ರೀತಿಸಿದನು. ದಾವೀದನು ಸೌಲನ ಆಯುಧಗಳನ್ನು ಹೊರುವ ಸಹಾಯಕನಾದನು. 22 ತರುವಾಯ ಸೌಲನು ಇಷಯನಿಗೆ, “ದಾವೀದನು ಇಲ್ಲಿಯೇ ನನ್ನ ಸೇವೆಯಲ್ಲಿ ಇರಲಿ. ನಾನು ಅವನನ್ನು ಬಹಳ ಪ್ರೀತಿಸುತ್ತೇನೆ” ಎಂಬ ಸುದ್ದಿಯನ್ನು ಹೇಳಿ ಕಳುಹಿಸಿದನು.

23 ದೇವರು ಕಳುಹಿಸಿದ ದುರಾತ್ಮವು ಸೌಲನ ಮೈಮೇಲೆ ಬಂದಾಗಲೆಲ್ಲಾ, ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ಆಗ ದುರಾತ್ಮವು ಸೌಲನನ್ನು ಬಿಟ್ಟುಹೋಗಿ ಅವನಿಗೆ ಉಪಶಮನವಾಗುತ್ತಿತ್ತು.

ಲೂಕ 10:25-42

ಒಳ್ಳೆಯ ಸಮಾರ್ಯದವನ ಸಾಮ್ಯ

25 ಆಗ ಧರ್ಮೋಪದೇಶಕನೊಬ್ಬನು ಯೇಸುವನ್ನು ಪರೀಕ್ಷಿಸಲು ಎದ್ದುನಿಂತು, “ಬೋಧಕನೇ, ನಾನು ನಿತ್ಯಜೀವ ಹೊಂದಲು ಏನು ಮಾಡಬೇಕು?” ಎಂದು ಕೇಳಿದನು.

26 ಯೇಸು ಅವನಿಗೆ, “ಧರ್ಮಶಾಸ್ತ್ರದಲ್ಲಿ ಇದರ ಕುರಿತು ಏನು ಬರೆದಿದೆ?” ಎಂದು ಕೇಳಿದನು.

27 ಅದಕ್ಕೆ ಅವನು, “‘ನೀನು ನಿನ್ನ ಪ್ರಭುವಾದ ದೇವರನ್ನು ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ಮತ್ತು ಪೂರ್ಣಮನಸ್ಸಿನಿಂದ ಪ್ರೀತಿಸಬೇಕು’(A) ಮತ್ತು ‘ನೀನು ನಿನ್ನನ್ನು ಪ್ರೀತಿಸುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು’(B) ಎಂದು ಬರೆದಿದೆ” ಎಂಬುದಾಗಿ ಹೇಳಿದನು.

28 ಯೇಸು, “ನಿನ್ನ ಉತ್ತರ ಸರಿಯಾಗಿದೆ. ನೀನು ಹಾಗೆಯೇ ಮಾಡು, ಆಗ ನಿನಗೆ ನಿತ್ಯಜೀವ ದೊರೆಯುವುದು” ಅಂದನು.

29 ಆದರೆ ಆ ಮನುಷ್ಯನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳಲು ಬಯಸಿ, ಯೇಸುವಿಗೆ, “ನಾನು ಪ್ರೀತಿಸಬೇಕಾದ ನೆರೆಯವರು ಯಾರು?” ಎಂದು ಕೇಳಿದನು.

30 ಆಗ ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬ ಮನುಷ್ಯನು ಜೆರುಸಲೇಮಿನಿಂದ ಇಳಿದು ಜೆರಿಕೊವಿನ ಮಾರ್ಗವಾಗಿ ಹೋಗುತ್ತಿದ್ದನು. ಕೆಲವು ದರೋಡೆಗಾರರು ಅವನನ್ನು ಸುತ್ತುಗಟ್ಟಿದರು. ಅವರು ಅವನ ಬಟ್ಟೆಯನ್ನು ಹರಿದುಹಾಕಿ ಅವನನ್ನು ಹೊಡೆದರು. ಅವನು ಮೇಲೇಳಲಾರದೆ ನೆಲದಮೇಲೆ ಬಿದ್ದುಕೊಂಡನು. ದರೋಡೆಗಾರರು ಅವನನ್ನು ನೆಲದ ಮೇಲೆಯೇ ಬಿಟ್ಟುಹೋದರು. ಅವನು ಸಾಯುವ ಸ್ಥಿತಿಯಲ್ಲಿದ್ದನು.

31 “ಅದೇ ಸಮಯದಲ್ಲಿ ಯೆಹೂದ್ಯ ಯಾಜಕನು ಆ ದಾರಿಯಲ್ಲಿ ಹೋಗುತ್ತಿದ್ದನು. ಯಾಜಕನು ಆ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯಮಾಡದೆ, ತನ್ನ ಪ್ರಯಾಣವನ್ನು ಮುಂದುವರಿಸಿದನು. 32 ನಂತರ, ಒಬ್ಬ ಲೇವಿಯು ಅದೇ ದಾರಿಯಲ್ಲಿ ಹೋಗುತ್ತಾ ಅವನ ಹತ್ತಿರ ಬಂದನು. ಲೇವಿಯು ಗಾಯಗೊಂಡಿದ್ದ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯ ಮಾಡದೆ ತನ್ನ ಪ್ರಯಾಣವನ್ನು ಮುಂದುವರಿಸಿದನು.

33 “ಬಳಿಕ ಒಬ್ಬ ಸಮಾರ್ಯದವನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಾ ಆ ಸ್ಥಳಕ್ಕೆ ಬಂದನು. ಅವನು ಗಾಯಗೊಂಡಿದ್ದ ಮತ್ತು ದಾರಿಯಲ್ಲಿ ಬಿದ್ದುಕೊಂಡಿದ್ದ ಮನುಷ್ಯನನ್ನು ನೋಡಿ ಬಹಳ ಮರುಕಗೊಂಡನು. 34 ಸಮಾರ್ಯದವನು ಅವನ ಬಳಿಗೆ ಹೋಗಿ ಅವನ ಗಾಯಗಳಿಗೆ ಆಲಿವ್ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಬಟ್ಟೆಯಿಂದ ಕಟ್ಟಿದನು. ಸಮಾರ್ಯದವನು ಒಂದು ಕತ್ತೆಯ ಮೇಲೆ ಪ್ರಯಾಣ ಮಾಡುತ್ತಾ ಅಲ್ಲಿಗೆ ಬಂದಿದ್ದನು. ಗಾಯಗೊಂಡಿದ್ದ ಆ ಮನುಷ್ಯನನ್ನು ಅವನು ತನ್ನ ಕತ್ತೆಯ ಮೇಲೆ ಕುಳ್ಳಿರಿಸಿ, ಛತ್ರಕ್ಕೆ ಕರೆದುಕೊಂಡು ಹೋಗಿ, ಅವನನ್ನು ಆರೈಕೆ ಮಾಡಿದನು. 35 ಮರುದಿನ, ಸಮಾರ್ಯದವನು ಎರಡು ಬೆಳ್ಳಿ ನಾಣ್ಯಗಳನ್ನು ಆ ಛತ್ರದವನಿಗೆ ಕೊಟ್ಟು, ‘ಗಾಯಗೊಂಡ ಇವನನ್ನು ಆರೈಕೆ ಮಾಡು. ಇದಕ್ಕಿಂತ ಹೆಚ್ಚಾಗಿ ಖರ್ಚಾದರೆ ನಾನು ಮತ್ತೆ ಬಂದಾಗ ನಿನಗೆ ಕೊಡುತ್ತೇನೆ’ ಎಂದು ಹೇಳಿದನು.”

36 ಯೇಸು ಅವನಿಗೆ, “ಈ ಮೂವರಲ್ಲಿ (ಯಾಜಕ, ಲೇವಿ ಮತ್ತು ಸಮಾರ್ಯದವನು) ಯಾವನು ದರೋಡೆಗಾರರಿಂದ ಗಾಯಗೊಂಡಿದ್ದ ಮನುಷ್ಯನಿಗೆ ಪ್ರೀತಿ ತೋರಿಸಿದನು?” ಎಂದು ಕೇಳಿದನು.

37 ಧರ್ಮೋಪದೇಶಕನು, “ಅವನಿಗೆ ಸಹಾಯ ಮಾಡಿದವನೇ” ಎಂದು ಉತ್ತರಿಸಿದನು.

ಆಗ ಯೇಸು ಅವನಿಗೆ, “ಹಾಗಾದರೆ, ನೀನು ಹೋಗಿ ನೆರೆಯವರಿಗೆ[a] ಹಾಗೆಯೇ ಮಾಡು!” ಎಂದನು.

ಮರಿಯಳು ಮತ್ತು ಮಾರ್ಥಳು

38 ಯೇಸು ಮತ್ತು ಆತನ ಶಿಷ್ಯರು ಪ್ರಯಾಣ ಮಾಡುತ್ತಾ ಒಂದು ಊರಿಗೆ ಬಂದರು. ಮಾರ್ಥಳೆಂಬ ಸ್ತ್ರೀ ಯೇಸುವನ್ನು ತನ್ನ ಮನೆಗೆ ಆಮಂತ್ರಿಸಿದಳು. 39 ಆಕೆಗೆ ಮರಿಯಳೆಂಬ ತಂಗಿ ಇದ್ದಳು. ಮರಿಯಳು ಯೇಸುವಿನ ಪಾದಗಳ ಬಳಿ ಕುಳಿತುಕೊಂಡು ಆತನ ಉಪದೇಶವನ್ನು ಕೇಳುತ್ತಿದ್ದಳು. ಆದರೆ ಆಕೆಯ ಸಹೋದರಿಯಾದ ಮಾರ್ಥಳು ಅತಿಥಿಸತ್ಕಾರ ಮಾಡುತ್ತಿದ್ದಳು. 40 ಮನೆಯಲ್ಲಿ ಬಹಳ ಕೆಲಸವಿದ್ದುದರಿಂದ ಮಾರ್ಥಳು ಕೋಪಗೊಂಡು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ತಂಗಿಯು ಮನೆಯ ಕೆಲಸವನ್ನೆಲ್ಲಾ ನನಗೇ ಬಿಟ್ಟುಬಂದಿದ್ದಾಳೆ. ಇದರ ಬಗ್ಗೆ ನಿನಗೆ ಚಿಂತೆಯಿಲ್ಲವೋ? ನನಗೆ ಸಹಾಯ ಮಾಡಲು ಆಕೆಗೆ ಹೇಳು?” ಎಂದಳು.

41 ಆದರೆ ಪ್ರಭುವು ಅವಳಿಗೆ, “ಮಾರ್ಥಾ, ಮಾರ್ಥಾ, ನೀನು ಅನೇಕ ಕೆಲಸಗಳ ಬಗ್ಗೆ ಚಿಂತಿಸುತ್ತಾ ಗಲಿಬಿಲಿಯಾಗಿರುವೆ. 42 ಒಂದೇ ಒಂದು ಮುಖ್ಯವಾದದ್ದು. ಮರಿಯಳು ಮಾಡಿದ ಆಯ್ಕೆ ಸರಿಯಾದದ್ದು. ಆಕೆಯಿಂದ ಅದು ಎಂದಿಗೂ ತೆಗೆಯಲ್ಪಡುವುದಿಲ್ಲ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International