Old/New Testament
ಇಸ್ರೇಲರ ಮತ್ತು ಯೆಹೂದದವರ ಮಧ್ಯೆ ನಡೆದ ಯುದ್ಧ
3 ಸೌಲನ ವಂಶದವರ ಮತ್ತು ದಾವೀದನ ವಂಶದವರ ಮಧ್ಯೆ ಬಹಳ ಕಾಲದವರೆಗೆ ಯುದ್ಧವು ನಡೆಯಿತು. ದಾವೀದನು ಬಲಗೊಳ್ಳುತ್ತಲೇ ಇದ್ದನು. ಸೌಲನ ವಂಶವು ದುರ್ಬಲಗೊಳ್ಳುತ್ತಲೇ ಇದ್ದಿತು.
ದಾವೀದನಿಗೆ ಹೆಬ್ರೋನಿನಲ್ಲಿ ಹುಟ್ಟಿದ ಗಂಡುಮಕ್ಕಳು
2 ದಾವೀದನಿಗೆ ಹೆಬ್ರೋನಿನಲ್ಲಿ ಆರು ಮಂದಿ ಗಂಡುಮಕ್ಕಳು ಹುಟ್ಟಿದರು.
ಅಮ್ನೋನನು ಮೊದಲನೆಯ ಮಗ. ಇಜ್ರೇಲಿನವಳಾದ ಅಹೀನೋವಮಳು ಅಮ್ನೋನನ ತಾಯಿ.
3 ಕಿಲಾಬನು ಎರಡನೆಯ ಮಗ. ಕರ್ಮೆಲ್ಯನಾದ ನಾಬಾಲನ ವಿಧವೆಯಾದ ಅಬೀಗೈಲಳು ಕಿಲಾಬನ ತಾಯಿ.
ಅಬ್ಷಾಲೋಮನು ಮೂರನೆಯ ಮಗ. ಗೆಷೂರಿನ ರಾಜ ತಲ್ಮೈನ ಮಗಳಾದ ಮಾಕಳು ಅಬ್ಷಾಲೋಮನ ತಾಯಿ.
4 ಅದೋನೀಯನು ನಾಲ್ಕನೆಯ ಮಗ. ಹಗ್ಗೀತಳು ಅದೋನೀಯನ ತಾಯಿ. ಶೆಫಟ್ಯನು
ಐದನೆಯ ಮಗ. ಅಬೀಟಲಳು ಶೆಫಟ್ಯನ ತಾಯಿ.
5 ಇತ್ರಾಮನು ಆರನೆಯ ಮಗ. ದಾವೀದನ ಹೆಂಡತಿಯಾದ ಎಗ್ಲಳು ಇತ್ರಾಮನ ತಾಯಿ.
ದಾವೀದನಿಗೆ ಹೆಬ್ರೋನಿನಲ್ಲಿ ಆರುಮಂದಿ ಗಂಡುಮಕ್ಕಳಿದ್ದರು.
ಅಬ್ನೇರನು ದಾವೀದನ ಜೊತೆ ಸೇರಲು ತೀರ್ಮಾನಿಸಿದನು
6 ಸೌಲನ ವಂಶದವರಿಗೂ ದಾವೀದನ ವಂಶದವರಿಗೂ ಯುದ್ಧವು ನಡೆಯುತ್ತಿದ್ದಾಗ ಸೌಲನ ಸೈನ್ಯದಲ್ಲಿ ಅಬ್ನೇರನೇ ಬಲಶಾಲಿಯಾದನು. 7 ಸೌಲನಿಗೆ ರಿಚ್ಪಳೆಂಬ ಹೆಸರಿನ ದಾಸಿಯಿದ್ದಳು. ಅವಳು ಅವನಿಗೆ ಹೆಂಡತಿಯಂತೆ ಇದ್ದಳು. ರಿಚ್ಪಳು ಅಯಾಹನ ಮಗಳು. ಈಷ್ಬೋಶೆತನು ಅಬ್ನೇರನಿಗೆ, “ನನ್ನ ತಂದೆಯ ಸೇವಕಿಯೊಡನೆ ಲೈಂಗಿಕ ಸಂಬಂಧವನ್ನು ಏಕೆ ಮಾಡುತ್ತಿರುವೆ?” ಎಂದು ಕೇಳಿದನು.
8 ಈಷ್ಬೋಶೆತನ ಮಾತುಗಳಿಂದ ಅಬ್ನೇರನು ಬಹಳ ಕೋಪಗೊಂಡನು. ಅಬ್ನೇರನು, “ನಾನು ಸೌಲನಿಗೂ ಅವನ ವಂಶದವರಿಗೂ ನಂಬಿಗಸ್ತನಾಗಿದ್ದೆನು. ನಾನು ನಿನ್ನನ್ನು ದಾವೀದನಿಗೆ ಒಪ್ಪಿಸಲಿಲ್ಲ ಹಾಗೂ ಅವನಿಂದ ನೀನು ಸೋಲುವಂತೆ ಮಾಡಲಿಲ್ಲ. ನಾನು ಯೆಹೂದಕ್ಕಾಗಿ ಕೆಲಸ ಮಾಡುವ ದ್ರೋಹಿಯಲ್ಲ. ಆದರೆ ಈಗ ನಾನು ಇಂತಹ ಕೆಟ್ಟ ಕೆಲಸವನ್ನು ಮಾಡಿದೆನೆಂದು ಹೇಳುತ್ತಿರುವೆ. 9-10 ಯೆಹೋವನು ಹೇಳಿರುವ ಸಂಗತಿಗಳು ನಿಜವಾಗಿಯೂ ಸಂಭವಿಸುತ್ತವೆ ಎಂದು ನಾನು ಪ್ರಮಾಣ ಮಾಡುತ್ತೇನೆ. ಸೌಲನ ವಂಶದವರಿಂದ ರಾಜ್ಯಾಧಿಕಾರವನ್ನು ಕಿತ್ತುಕೊಂಡು ದಾವೀದನಿಗೆ ಕೊಡುವುದಾಗಿ ಯೆಹೋವನು ಹೇಳಿದ್ದಾನೆ. ಯೆಹೋವನು ಇಸ್ರೇಲಿಗೂ ಯೆಹೂದಕ್ಕೂ ದಾವೀದನನ್ನು ರಾಜನನ್ನಾಗಿ ಮಾಡುತ್ತಾನೆ. ಅವನು ದಾನಿನಿಂದ ಬೇರ್ಷೆಬದವರೆಗೆ[a] ಆಳುತ್ತಾನೆ. ಈ ಸಂಗತಿಗಳು ನೆರವೇರುವುದಕ್ಕೆ ನಾನು ಸಹಾಯ ಮಾಡದಿದ್ದರೆ ದೇವರು ನನಗೆ ಕೆಟ್ಟದ್ದನ್ನು ಮಾಡಲಿ” ಎಂದು ಹೇಳಿದನು. 11 ಈಷ್ಬೋಶೆತನು ಅಬ್ನೇರನಿಗೆ ಏನನ್ನೂ ಹೇಳಿಲಿಲ್ಲ. ಈಷ್ಬೋಶೆತನು ಅವನಿಗೆ ಬಹಳ ಭಯಪಟ್ಟನು.
12 ಅಬ್ನೇರನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿ, “ಈ ದೇಶವನ್ನು ಯಾರು ಆಳಬೇಕೆಂಬದು ನಿನ್ನ ಅಭಿಪ್ರಾಯ? ನನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡರೆ, ಇಸ್ರೇಲಿನ ಜನರೆಲ್ಲರನ್ನು ನೀನು ಆಳುವಂತೆ ಮಾಡಲು ನಾನು ಸಹಾಯ ಮಾಡುತ್ತೇನೆ” ಎಂದು ಹೇಳಿದನು.
13 ಅದಕ್ಕೆ ದಾವೀದನು, “ಒಳ್ಳೆಯದು! ನಾನು ನಿನ್ನೊಡನೆ ಒಪ್ಪಂದ ಮಾಡಿಕೊಳ್ಳುತ್ತೇನೆ. ಆದರೆ ನೀನು ನನಗಾಗಿ ಒಂದು ಕೆಲಸ ಮಾಡಬೇಕು. ಸೌಲನ ಮಗಳಾದ ಮೀಕಲಳನ್ನು ನನ್ನ ಬಳಿಗೆ ಕರೆತರುವ ತನಕ ನಾನು ನಿನ್ನನ್ನು ಸಂಧಿಸುವುದಿಲ್ಲ” ಎಂದು ಹೇಳಿದನು.
14 ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಹೆಂಡತಿಯಾದ ಮೀಕಲಳನ್ನು ನನ್ನ ಬಳಿಗೆ ಕಳುಹಿಸು. ಅವಳನ್ನು ನನಗೆ ಕೊಡುವುದಾಗಿ ಮಾತುಕತೆಯಾಗಿತ್ತು. ಅವಳನ್ನು ಪಡೆಯಲು ನಾನು ನೂರು ಜನ ಫಿಲಿಷ್ಟಿಯರನ್ನು ಕೊಂದಿದ್ದೇನೆ”[b] ಎಂದು ಹೇಳಿದನು.
15 ಆಗ ಈಷ್ಬೋಶೆತನು, ಲಯಿಷನ ಮಗನಾದ ಪಲ್ಟೀಯೇಲನ ಬಳಿಯಿಂದ ಮೀಕಲಳನ್ನು ಕರೆತರುವಂತೆ ತನ್ನ ಜನರಿಗೆ ಹೇಳಿದನು. 16 ಮೀಕಲಳ ಗಂಡನಾದ ಪಲ್ಟೀಯೇಲನೂ ಅವಳ ಜೊತೆಗೆ ಬಂದನು. ಮೀಕಲಳ ಜೊತೆಯಲ್ಲಿ ಬಹುರೀಮಿಗೆ ಬರುವಾಗ ಪಲ್ಟೀಯೇಲನು ಆಳುತ್ತಿದ್ದನು. ಆದರೆ ಅಬ್ನೇರನು, “ನಿನ್ನ ಮನೆಗೆ ಹಿಂದಿರುಗಿ ಹೋಗು” ಎಂದು ಪಲ್ಟೀಯೇಲನಿಗೆ ಹೇಳಿದನು. ಆದ್ದರಿಂದ ಪಲ್ಟೀಯೇಲನು ಮನೆಗೆ ಹಿಂದಿರುಗಿದನು.
17 ಅಬ್ನೇರನು ಇಸ್ರೇಲಿನ ನಾಯಕರಿಗೆ ಸಂದೇಶವೊಂದನ್ನು ಕಳುಹಿಸಿ, “ದಾವೀದನನ್ನು ನಿಮ್ಮ ರಾಜನನ್ನಾಗಿ ಮಾಡಲು ನೀವು ಕಾಯುತ್ತಿದ್ದೀರಿ. 18 ಅದನ್ನು ಈಗಲೇ ಮಾಡಿರಿ! ಯೆಹೋವನು ದಾವೀದನ ಬಗ್ಗೆ ಮಾತಾಡುತ್ತಾ, ‘ನನ್ನ ಜನರಾದ ಇಸ್ರೇಲರನ್ನು ಫಿಲಿಷ್ಟಿಯರಿಂದಲೂ ಬೇರೆಲ್ಲಾ ಶತ್ರುಗಳಿಂದಲೂ ನನ್ನ ಸೇವಕನಾದ ದಾವೀದನ ಮೂಲಕ ಸಂರಕ್ಷಿಸುತ್ತೇನೆ’” ಎಂದು ಹೇಳಿದ್ದಾನೆ.
19 ಅಬ್ನೇರನು ಹೆಬ್ರೋನಿನಲ್ಲಿ ದಾವೀದನಿಗೆ ಈ ಮಾತುಗಳನ್ನು ಹೇಳಿದನು. ಬೆನ್ಯಾಮೀನ್ ವಂಶದವರಿಗೂ ಅವನು ಈ ಮಾತುಗಳನ್ನು ಹೇಳಿದನು. ಅಬ್ನೇರನ ಮಾತುಗಳು ಬೆನ್ಯಾಮೀನ್ ವಂಶದವರಿಗೆ ಮತ್ತು ಇಸ್ರೇಲಿನ ಜನರಿಗೆಲ್ಲರಿಗೂ ಒಳ್ಳೆಯ ಮಾತುಗಳೆಂದು ಕಂಡುಬಂದವು.
20 ನಂತರ ಅಬ್ನೇರನು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದನು. ಅಬ್ನೇರನು ಇಪ್ಪತ್ತು ಜನರನ್ನು ತನ್ನ ಸಂಗಡ ಕರೆದು ತಂದನು. ಅಬ್ನೇರನಿಗೂ ಅವನ ಸಂಗಡಿಗರಿಗೂ ದಾವೀದನು ಔತಣಕೂಟವನ್ನು ಏರ್ಪಡಿಸಿದ್ದನು.
21 ಅಬ್ನೇರನು ದಾವೀದನಿಗೆ, “ರಾಜನಾದ ನನ್ನ ಒಡೆಯನೇ, ನಾನು ಹೋಗಿ ಎಲ್ಲಾ ಇಸ್ರೇಲರನ್ನೂ ನಿನ್ನ ಬಳಿಗೆ ಕರೆತರುತ್ತೇನೆ; ನಂತರ ಅವರು ನಿನ್ನೊಡನೆ ಒಂದು ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ನೀನು ನಿನ್ನ ಇಷ್ಟದಂತೆ ಸಮಸ್ತ ಇಸ್ರೇಲನ್ನು ಆಳಬಹುದು” ಎಂದು ಹೇಳಿದನು.
ದಾವೀದನು ಅಬ್ನೇರನನ್ನು ಕಳುಹಿಸಿದನು. ಅಬ್ನೇರನು ಸಮಾಧಾನದಿಂದ ಹೋದನು.
ಅಬ್ನೇರನ ಮರಣ
22 ಯೋವಾಬನೂ ದಾವೀದನ ಅಧಿಕಾರಿಗಳೂ ಯುದ್ಧರಂಗದಿಂದ ಹಿಂದಿರುಗಿದರು. ಶತ್ರುಗಳಿಂದ ವಶಪಡಿಸಿಕೊಂಡ ಅನೇಕ ಬೆಲೆಬಾಳುವ ವಸ್ತುಗಳು ಅವರ ಹತ್ತಿರವಿದ್ದವು. ದಾವೀದನು ಅಬ್ನೇರನನ್ನು ಆಗಲೇ ಸಮಾಧಾನದಿಂದ ಕಳುಹಿಸಿಕೊಟ್ಟಿದ್ದರಿಂದ ಯೋವಾಬನು ಬಂದಾಗ ಅವನು ಹೆಬ್ರೋನಿನಲ್ಲಿರಲಿಲ್ಲ. 23 ಯೋವಾಬನು ತನ್ನ ಎಲ್ಲಾ ಸೈನ್ಯದೊಂದಿಗೆ ಹೆಬ್ರೋನಿಗೆ ಬಂದನು. ಸೈನಿಕರು ಯೋವಾಬನಿಗೆ, “ನೇರನ ಮಗನಾದ ಅಬ್ನೇರನು ರಾಜನಾದ ದಾವೀದನ ಹತ್ತಿರಕ್ಕೆ ಬಂದಿದ್ದನು. ದಾವೀದನು ಅಬ್ನೇರನನ್ನು ಸಮಾಧಾನದಿಂದ ಕಳುಹಿಸಿಕೊಟ್ಟನು” ಎಂದು ಹೇಳಿದರು.
24 ಯೋವಾಬನು ರಾಜನ ಬಳಿಗೆ ಬಂದು, “ನೀನು ಮಾಡಿದ್ದೇನು? ಅಬ್ನೇರನು ನಿನ್ನ ಬಳಿಗೆ ಬಂದರೂ ಅವನನ್ನು ದಂಡಿಸದೆ ಯಾಕೆ ಕಳುಹಿಸಿಬಿಟ್ಟೆ? 25 ಅಬ್ನೇರನು ನೇರನ ಮಗನೆಂಬುದು ನಿನಗೆ ತಿಳಿದಿದೆ. ಅವನು ನಿನ್ನನ್ನು ವಂಚಿಸಲು ಬಂದಿದ್ದನು. ನೀನು ಮಾಡುತ್ತಿರುವುದನ್ನೆಲ್ಲಾ ತಿಳಿದುಕೊಳ್ಳಲು ಅವನು ಬಂದಿದ್ದನು” ಎಂದು ಹೇಳಿದನು.
26 ಯೋವಾಬನು ದಾವೀದನನ್ನು ಬಿಟ್ಟು, ಅಬ್ನೇರನನ್ನು ಸಿರಾ ಬಾವಿಯ ಬಳಿಯಿಂದ ಕರೆತರಲು ದೂತರನ್ನು ಕಳುಹಿಸಿದನು. ಅಬ್ನೇರನನ್ನು ದೂತರು ಹಿಂದಕ್ಕೆ ಕರೆತಂದರು. ಈ ಸಂಗತಿಯು ದಾವೀದನಿಗೆ ತಿಳಿದಿರಲಿಲ್ಲ. 27 ಅಬ್ನೇರನು ಹೆಬ್ರೋನಿಗೆ ಬಂದಾಗ, ಯೋವಾಬನು ಅವನ ಜೊತೆಯಲ್ಲಿ ಪ್ರತ್ಯೇಕವಾಗಿ ಮಾತನಾಡುವುದಕ್ಕಾಗಿ ಊರಬಾಗಿಲಿನ ಒಂದು ಪಕ್ಕಕ್ಕೆ ಕರೆದುಕೊಂಡು ಹೋದನು. ಆದರೆ ಯೋವಾಬನು ಅಬ್ನೇರನ ಹೊಟ್ಟೆಗೆ ತಿವಿದಿದ್ದರಿಂದ ಅವನು ಸತ್ತನು. ಹಿಂದೆ, ಅಬ್ನೇರನು ಯೋವಾಬನ ಸೋದರನಾದ ಅಸಾಹೇಲನನ್ನು ಕೊಂದಿದ್ದನು. ಆದ್ದರಿಂದ ಯೋವಾಬನು ಅಬ್ನೇರನನ್ನು ಕೊಂದನು.
ದಾವೀದನು ಅಬ್ನೇರನಿಗಾಗಿ ಗೋಳಾಡಿದನು
28 ತರುವಾಯ ದಾವೀದನಿಗೆ ಸುದ್ದಿಯು ತಿಳಿಯಿತು. ದಾವೀದನು, “ನನ್ನ ರಾಜ್ಯವಾಗಲಿ ನಾನಾಗಲಿ ನೇರನ ಮಗನಾದ ಅಬ್ನೇರನ ಸಾವಿಗೆ ಕಾರಣರಲ್ಲ. ಯೆಹೋವನಿಗೆ ಇದು ತಿಳಿದಿದೆ. 29 ಯೋವಾಬನು ಮತ್ತು ಅವನ ವಂಶದವರು ಇದಕ್ಕೆ ಜವಾಬ್ದಾರರು. ಅವನ ವಂಶದವರನ್ನು ಇದಕ್ಕಾಗಿ ದೂಷಿಸಬೇಕು. ಯೋವಾಬನ ವಂಶಕ್ಕೆ ಅನೇಕ ಕಷ್ಟಗಳು ಬರಲಿ. ಅವನ ವಂಶದವರಲ್ಲಿ ಕುಷ್ಠರೋಗಿಗಳು, ಊರುಗೋಲು ಬಳಸುವವರು. ಕತ್ತಿಯಿಂದ ಸಾಯುವವರು, ಭಿಕ್ಷೆ ಬೇಡುವವರು ಇದ್ದೇ ಇರಲಿ” ಎಂದು ಹೇಳಿದನು.
30 ಅಸಾಹೇಲನನ್ನು ಗಿಬ್ಯೋನ್ ಯುದ್ಧದಲ್ಲಿ ಅಬ್ನೇರನು ಕೊಂದುಹಾಕಿದನು. ಆದ್ದರಿಂದ ಅಸಾಹೇಲನ ಸಹೋದರರಾದ ಯೋವಾಬ ಮತ್ತು ಅಬೀಷೈ ಅಬ್ನೇರನನ್ನು ಕೊಂದರು.
31-32 ದಾವೀದನು ಯೋವಾಬನಿಗೆ ಮತ್ತು ಅವನ ಜೊತೆಯಲ್ಲಿದ್ದ ಜನರಿಗೆಲ್ಲ, “ನಿಮ್ಮ ಬಟ್ಟೆಗಳನ್ನು ಹರಿದುಕೊಂಡು ಮತ್ತು ಶೋಕಸೂಚಕ ವಸ್ತ್ರಗಳನ್ನು ಧರಿಸಿಕೊಂಡು ಅಬ್ನೇರನಿಗಾಗಿ ಶೋಕಿಸಿ” ಎಂದು ಹೇಳಿದನು. ರಾಜನಾದ ದಾವೀದನೂ ಶವಸಂಸ್ಕಾರಕ್ಕೆ ಹೋದನು. ಅವರು ಅಬ್ನೇರನನ್ನು ಹೆಬ್ರೋನಿನಲ್ಲಿ ಸಮಾಧಿ ಮಾಡಿದರು. ಅಬ್ನೇರನ ಸಮಾಧಿಯ ಹತ್ತಿರ ರಾಜನಾದ ದಾವೀದನೂ ಇತರ ಜನರೂ ಗೋಳಾಡಿದರು.
33 ರಾಜನಾದ ದಾವೀದನು ಅಬ್ನೇರನಿಗಾಗಿ ಈ ಶೋಕಗೀತೆಯನ್ನು ಹಾಡಿದನು:
“ಅಬ್ನೇರನು ಮೂರ್ಖ ಅಪರಾಧಿಯಂತೆ ಸತ್ತನೇ?
34 ಅಬ್ನೇರನೇ, ನಿನ್ನ ಕೈಗಳನ್ನು ಹಗ್ಗದಿಂದ ಬಿಗಿದಿರಲಿಲ್ಲ.
ನಿನ್ನ ಪಾದಗಳಿಗೆ ಸಂಕೋಲೆಯನ್ನು ತೊಡಿಸಿರಲಿಲ್ಲ.
ದುಷ್ಟಜನರೆದುರು ನೀನು ಬಿದ್ದೆಯಲ್ಲ, ನೀನು ಬಿದ್ದು ಸತ್ತೆಯಲ್ಲ.”
ಆಗ ಜನರೆಲ್ಲರೂ ಅಬ್ನೇರನಿಗಾಗಿ ಮತ್ತೆ ಗೋಳಾಡಿದರು. 35 ಅಂದು ಹೊತ್ತು ಇಳಿಯುವ ಮೊದಲೇ ಜನರು ದಾವೀದನಿಗೆ ಊಟ ಮಾಡುವಂತೆ ಒತ್ತಾಯಿಸಿದರು. ಆದರೆ ದಾವೀದನು, “ಸೂರ್ಯನು ಮುಳುಗುವುದಕ್ಕೆ ಮುಂಚಿತವಾಗಿ ನಾನು ರೊಟ್ಟಿಯನ್ನಾಗಲಿ ಇತರ ಆಹಾರವನ್ನಾಗಲಿ ತಿಂದರೆ, ದೇವರು ನನ್ನನ್ನು ದಂಡಿಸಲಿ ಅಥವಾ ನನಗೆ ಕೇಡು ಬರಮಾಡಲಿ” ಎಂದು ಪ್ರತಿಜ್ಞೆ ಮಾಡಿದನು. 36 ಇದನ್ನು ಕೇಳಿದ ಜನರೆಲ್ಲರೂ ರಾಜನಾದ ದಾವೀದನ ಈ ಕಾರ್ಯವನ್ನು ಮೆಚ್ಚಿಕೊಂಡರು. 37 ನೇರನ ಮಗನಾದ ಅಬ್ನೇರನನ್ನು ಕೊಲ್ಲಲು ರಾಜನಾದ ದಾವೀದನು ಆಜ್ಞಾಪಿಸಿರಲಿಲ್ಲವೆಂದು ಯೆಹೂದ್ಯರು ಮತ್ತು ಇಸ್ರೇಲಿನ ಜನರೆಲ್ಲರೂ ಅಂದು ಅರ್ಥಮಾಡಿಕೊಂಡರು.
38 ರಾಜನಾದ ದಾವೀದನು ತನ್ನ ಸೇವಕರಿಗೆ, “ಇಸ್ರೇಲಿನಲ್ಲಿ ಇಂದು ಮಹಾಪುರುಷನಾದ ನಾಯಕನೊಬ್ಬನು ಸತ್ತನೆಂಬುದು ನಿಮಗೆಲ್ಲ ತಿಳಿದಿದೆ. 39 ನಾನು ರಾಜನಾಗಿದ್ದರೂ ಏನೂ ಮಾಡಲಾರದ ಸ್ಥಿತಿಯಲ್ಲಿದ್ದೇನೆ. ಚೆರೂಯಳ ಗಂಡುಮಕ್ಕಳಾದ ಇವರು ನನಗೆ ಬಹಳ ಕೇಡನ್ನು ಮಾಡಿದರು. ಯೆಹೋವನು ಈ ಜನರಿಗೆ ತಕ್ಕ ದಂಡನೆಯನ್ನು ನೀಡಲಿ” ಎಂದು ಹೇಳಿದನು.
ಸೌಲನ ಸೈನ್ಯಾಧಿಪತಿಗಳಾಗಿದ್ದ ಬಾಣ ಮತ್ತು ರೇಕಾಬ್
4 ಹೆಬ್ರೋನಿನಲ್ಲಿ ಅಬ್ನೇರನು ಸತ್ತನೆಂಬುದು ಸೌಲನ ಮಗನಾದ ಈಷ್ಬೋಶೆತನಿಗೆ ತಿಳಿಯಿತು. ಈಷ್ಬೋಶೆತನು ಮತ್ತು ಅವನ ಜನರು ಬಹಳ ಭಯಗೊಂಡರು. 2 ಬಾಣ ಮತ್ತು ರೇಕಾಬ್ ಎಂಬವರು ಸೌಲನ ಮಗನ ಸೈನ್ಯದಲ್ಲಿ, ಸೇನಾಧಿಪತಿಗಳಾಗಿದ್ದರು. ಅವರಿಬ್ಬರೂ ಬೇರೋತಿನವನಾದ ರಿಮ್ಮೋನನ ಮಕ್ಕಳು. ಅವರು ಬೆನ್ಯಾಮೀನ್ ಕುಲದವರಾಗಿದ್ದರು. ಬೇರೋತ್ ಪಟ್ಟಣವು ಬೆನ್ಯಾಮೀನ್ ಕುಲದವರಿಗೆ ಸೇರಿತ್ತು. 3 ಬೇರೋತಿನ ಜನರು ಗಿತ್ತಯಿಮಿಗೆ ಓಡಿಹೋದರು. ಅವರು ಇವತ್ತಿನವರೆಗೂ ಅಲ್ಲಿ ನೆಲೆಸಿದ್ದಾರೆ.
4 ಸೌಲನ ಮಗನಾದ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಮಗನಿದ್ದನು. ಸೌಲನು ಮತ್ತು ಯೋನಾತಾನನು ಇಜ್ರೇಲಿನಲ್ಲಿ ಸತ್ತರೆಂಬ ವರ್ತಮಾನವು ಬಂದಾಗ ಯೋನಾತಾನನ ಮಗನಿಗೆ ಐದು ವರ್ಷವಾಗಿತ್ತು. ಅವನನ್ನು ಸಾಕುತ್ತಿದ್ದ ದಾದಿಯು ಭಯಪಟ್ಟು ಅವನನ್ನು ಎತ್ತಿಕೊಂಡು ಓಡತೊಡಗಿದಳು. ಆ ದಾದಿಯು ಅವಸರದಿಂದ ಓಡಿಹೋಗುತ್ತಿದ್ದಾಗ, ಯೋನಾತಾನನ ಮಗನು ಅವಳ ತೋಳುಗಳಿಂದ ಕೆಳಕ್ಕೆ ಬಿದ್ದನು. ಹೀಗೆ ಕೆಳಗೆ ಬಿದ್ದ ಯೋನಾತಾನನ ಮಗನ ಎರಡು ಕಾಲುಗಳು ಕುಂಟಾದವು. ಈ ಮಗನ ಹೆಸರೇ ಮೆಫೀಬೋಶೆತ್.
5 ಬೇರೋತಿನ ರಿಮ್ಮೋನನ ಮಕ್ಕಳಾದ ಬಾಣನು ಮತ್ತು ರೇಕಾಬನು ಈಷ್ಬೋಶೆತನ ಮನೆಗೆ ಮಧ್ಯಾಹ್ನದಲ್ಲಿ ಹೋದರು. ಈಷ್ಬೋಶೆತನು ಬಿಸಿಲಿನ ತಾಪದಿಂದ ವಿಶ್ರಾಂತಿ ಪಡೆಯುತ್ತಿದ್ದನು. 6-7 ಬಾಣನು ಮತ್ತು ರೇಕಾಬನು ಗೋಧಿಯನ್ನು ತೆಗೆದುಕೊಳ್ಳುವವರಂತೆ ಮನೆಯ ಮಧ್ಯಭಾಗಕ್ಕೆ ಬಂದರು. ಈಷ್ಬೋಶೆತನು ಮಲಗುವ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿದ್ದನು. ರೇಕಾಬನು ಮತ್ತು ಬಾಣನು ಈಷ್ಬೋಶೆತನನ್ನು ಇರಿದು ಕೊಂದರು. ನಂತರ ಅವರು ಅವನ ತಲೆಯನ್ನು ಕತ್ತರಿಸಿ ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಅವರು ಜೋರ್ಡನ್ ಕಣಿವೆಯಲ್ಲಿ ರಾತ್ರಿಯೆಲ್ಲಾ ಪ್ರಯಾಣಮಾಡಿ 8 ಹೆಬ್ರೋನಿಗೆ ಬಂದು ಈಷ್ಬೋಶೆತನ ತಲೆಯನ್ನು ದಾವೀದನಿಗೆ ಕೊಟ್ಟರು.
ರೇಕಾಬನು ಮತ್ತು ಬಾಣನು ರಾಜನಾದ ದಾವೀದನಿಗೆ, “ಸೌಲನ ಮಗನೂ ನಿನ್ನ ಶತ್ರುವೂ ಅದ ಈಷ್ಬೋಶೆತನ ತಲೆಯು ಇಲ್ಲಿದೆ. ಅವನು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದನು. ನಿನಗಾಗಿ ಯೆಹೋವನು ಈ ದಿನ ಸೌಲನನ್ನೂ ಅವನ ಕುಲವನ್ನೂ ದಂಡಿಸಿದನು” ಎಂದು ಹೇಳಿದರು.
9 ದಾವೀದನು ರಿಮ್ಮೋನನ ಮಕ್ಕಳಾದ ರೇಕಾಬನಿಗೂ ಅವನ ಸೋದರನಾದ ಬಾಣನಿಗೂ, “ಯೆಹೋವನಾಣೆಯಾಗಿಯೂ ಆತನು ಎಲ್ಲಾ ಕೇಡುಗಳಿಂದ ನನ್ನನ್ನು ರಕ್ಷಿಸಿದನು. 10 ಆದರೆ ಒಮ್ಮೆ ಒಬ್ಬ ವ್ಯಕ್ತಿಯು ತಾನು ಶುಭ ಸುದ್ದಿಯನ್ನು ನನಗೆ ತರುತ್ತಿದ್ದೇನೆಂದು ಯೋಚಿಸಿದನು. ಅವನು, ‘ನೋಡು, ಸೌಲನು ಸತ್ತನು’ ಎಂದು ನನಗೆ ಹೇಳಿದನು. ಈ ಸುದ್ದಿಯನ್ನು ನನಗೆ ತಿಳಿಸಿದ್ದರಿಂದ ನಾನು ಅವನಿಗೆ ಕೊಡುಗೆಗಳನ್ನು ಕೊಡಬಹುದೆಂದು ಅವನು ಭಾವಿಸಿದನು. ಆದರೆ ನಾನು ಅವನನ್ನು ಚಿಕ್ಲಗಿನಲ್ಲಿ ಕೊಂದೆನು. 11 ದುಷ್ಟರಾದ ನೀವು ಇಂದು ಒಬ್ಬ ನೀತಿವಂತನನ್ನು ಅವನ ಸ್ವಂತ ಮನೆಯಲ್ಲಿ ಅವನ ಸ್ವಂತ ಹಾಸಿಗೆಯ ಮೇಲೆಯೇ ಕೊಂದಿರುವುದರಿಂದ ನಿಮ್ಮನ್ನೂ ನಾನು ಕೊಂದು ನಿರ್ಮೂಲ ಮಾಡಬೇಕು” ಎಂದನು.
12 ದಾವೀದನು, ರೇಕಾಬನನ್ನು ಮತ್ತು ಬಾಣನನ್ನು ಕೊಲ್ಲಲು ಯುವಕರಿಗೆ ಆಜ್ಞಾಪಿಸಿದನು. ಆಗ ಆ ಯುವಕರು ರೇಕಾಬನ ಮತ್ತು ಬಾಣನ ಕೈಕಾಲುಗಳನ್ನು ಕತ್ತರಿಸಿಹಾಕಿ, ಹೆಬ್ರೋನಿನ ಕೊಳದ ಬಳಿಯಲ್ಲಿ ಅವರ ದೇಹಗಳನ್ನು ನೇತುಹಾಕಿದರು. ನಂತರ ಅವರು ಈಷ್ಬೋಶೆತನ ತಲೆಯನ್ನು ತೆಗೆದುಕೊಂಡು ಹೋಗಿ, ಹೆಬ್ರೋನಿನಲ್ಲಿ ಅಬ್ನೇರನನ್ನು ಸಮಾಧಿಮಾಡಿದ ಸ್ಥಳದಲ್ಲೇ ಸಮಾಧಿಮಾಡಿದರು.
ಇಸ್ರೇಲರು ದಾವೀದನನ್ನು ರಾಜನನ್ನಾಗಿ ಮಾಡುವರು
5 ಆಗ ಇಸ್ರೇಲಿನ ಕುಲಗಳವರೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು, “ನಾವೆಲ್ಲಾ ಒಂದೇ ಕುಲದವರಾಗಿದ್ದೇವೆ. 2 ಹಿಂದಿನ ದಿನಗಳಲ್ಲಿ, ಸೌಲನು ರಾಜನಾಗಿದ್ದಾಗಲೂ ನಮ್ಮನ್ನು ಯುದ್ಧದಲ್ಲಿ ಮುನ್ನಡೆಸಿದವನು ನೀನೇ. ಯೆಹೋವನು ನಿನ್ನನ್ನು ಕುರಿತು, ‘ನೀನು ನನ್ನ ಜನರಾದ ಇಸ್ರೇಲರ ನಾಯಕನೂ ಪಾಲಕನೂ ಆಗಿರುವೆ’ ಎಂದು ಹೇಳಿದ್ದಾನೆ” ಎಂದರು.
3 ರಾಜನಾದ ದಾವೀದನಿದ್ದ ಹೆಬ್ರೋನಿಗೆ ಇಸ್ರೇಲಿನ ಎಲ್ಲಾ ನಾಯಕರೂ ಬಂದರು. ಹೆಬ್ರೋನಿನಲ್ಲಿ ರಾಜನಾದ ದಾವೀದನು ಯೆಹೋವನ ಸನ್ನಿಧಿಯಲ್ಲಿ ಈ ನಾಯಕರೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಆಗ ನಾಯಕರು ದಾವೀದನನ್ನು ಇಸ್ರೇಲಿನ ರಾಜನನ್ನಾಗಿ ಅಭಿಷೇಕಿಸಿದರು.
4 ದಾವೀದನು ಆಳುವುದಕ್ಕೆ ಪ್ರಾರಂಭಿಸಿದಾಗ ಅವನಿಗೆ ಮೂವತ್ತು ವರ್ಷ ವಯಸ್ಸಾಗಿತ್ತು. ಅವನು ನಲವತ್ತು ವರ್ಷಗಳ ಕಾಲ ಆಳಿದನು. 5 ಅವನು ಏಳು ವರ್ಷ ಆರು ತಿಂಗಳ ಕಾಲ ಹೆಬ್ರೋನಿನಲ್ಲಿದ್ದು ಯೆಹೂದ್ಯರನ್ನು ಆಳಿದನು. ಅವನು ಮೂವತ್ತಮೂರು ವರ್ಷ ಜೆರುಸಲೇಮಿನಲ್ಲಿದ್ದು ಸಮಸ್ತ ಇಸ್ರೇಲನ್ನು ಮತ್ತು ಯೆಹೂದವನ್ನು ಆಳಿದನು.
ದಾವೀದನು ಜೆರುಸಲೇಮ್ ಪಟ್ಟಣವನ್ನು ಗೆಲ್ಲುವನು
6 ದಾವೀದನು ಯೆಬೂಸಿಯರಿಗೆ ವಿರುದ್ಧವಾಗಿ ಜೆರುಸಲೇಮಿಗೆ ತನ್ನ ಜನರೊಂದಿಗೆ ಹೋದನು. (ಯೆಬೂಸಿಯರು ಆ ದೇಶದ ಮೂಲನಿವಾಸಿಗಳು.) ಯೆಬೂಸಿಯರು ದಾವೀದನಿಗೆ, “ನೀನು ನಮ್ಮ ನಗರದೊಳಕ್ಕೆ ಬರಲಾಗದು.[c] ಕುರುಡರು ಮತ್ತು ಕುಂಟರು ಸಹ ನಿನ್ನನ್ನು ತಡೆಯಬಲ್ಲರು” ಎಂದು ಹೇಳಿದರು. (ದಾವೀದನು ಅವರ ನಗರದೊಳಕ್ಕೆ ಪ್ರವೇಶಿಸಲು ಸಮರ್ಥನಲ್ಲವೆಂದು ಅವರು ಈ ರೀತಿ ಹೇಳಿದರು. 7 ಆದರೆ ದಾವೀದನು ಚೀಯೋನ್ ಕೋಟೆಯನ್ನು ವಶಪಡಿಸಿಕೊಂಡನು. ಈ ಕೋಟೆಗೆ ದಾವೀದ ನಗರವೆಂದು ಹೆಸರಾಯಿತು.)
8 ದಾವೀದನು ತನ್ನ ಜನರಿಗೆ ಅಂದು, “ನೀವು ಯೆಬೂಸಿಯರನ್ನು ಸೋಲಿಸಬೇಕೆಂದಿದ್ದರೆ ಜಲಮಾರ್ಗದ ಮೂಲಕ[d] ಹೋಗಿ ಶತ್ರುಗಳಾದ ಕುಂಟರು ಮತ್ತು ಕುರುಡರನ್ನು ಎದುರಿಸಿ” ಎಂದು ಹೇಳಿದನು. ಆದ್ದರಿಂದಲೇ “ಕುರುಡರು ಮತ್ತು ಕುಂಟರು ಮನೆಯೊಳಕ್ಕೆ[e] ಬರಲಾಗದು” ಎಂಬ ನಾಣ್ಣುಡಿ ಉಂಟಾಯಿತು.
9 ದಾವೀದನು ಕೋಟೆಯಲ್ಲಿ ನೆಲೆಸಿದ್ದನು. ಅವನು ಆ ಕೋಟೆಗೆ “ದಾವೀದನ ನಗರ”ವೆಂದು ಕರೆದನು. ದಾವೀದನು ಮಿಲ್ಲೋವನ್ನು ಕಟ್ಟಿಸಿದನು. ಅವನು ನಗರದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿದನು. 10 ಸರ್ವಶಕ್ತನಾದ ಯೆಹೋವನು ದಾವೀದನೊಂದಿಗೆ ಇದ್ದುದರಿಂದ ಅವನು ಬಲಶಾಲಿಯಾಗುತ್ತಲೇ ಇದ್ದನು.
11 ತೂರಿನ ರಾಜನಾದ ಹೀರಾಮನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಹೀರಾಮನು ದೇವದಾರು ಮರಗಳನ್ನು, ಬಡಗಿಗಳನ್ನು ಮತ್ತು ಕಲ್ಲಿನಲ್ಲಿ ಕೆತ್ತನೆ ಮಾಡುವ ಶಿಲ್ಪಿಗಳನ್ನೂ ಸಹ ಕಳುಹಿಸಿದನು. ಅವರು ದಾವೀದನಿಗಾಗಿ ಒಂದು ಮನೆಯನ್ನು ಕಟ್ಟಿದರು. 12 ಯೆಹೋವನು ನಿಜವಾಗಿಯೂ ತನ್ನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದ್ದಾನೆಂಬುದನ್ನೂ ಆತನು ತನ್ನ ಜನರಾದ ಇಸ್ರೇಲರಿಗಾಗಿ ನನ್ನ ರಾಜ್ಯವನ್ನು ಸ್ಥಿರಪಡಿಸಿದ್ದಾನೆಂತಲೂ ದಾವೀದನು ಇದರ ಮೂಲಕ ತಿಳಿದುಕೊಂಡನು.
13 ದಾವೀದನು ಹೆಬ್ರೋನಿನಿಂದ ಜೆರುಸಲೇಮಿಗೆ ಹೋದನು. ದಾವೀದನಿಗೆ ಜೆರುಸಲೇಮಿನಲ್ಲಿ ಅನೇಕ ಪತ್ನಿಯರೂ ಉಪಪತ್ನಿಯರೂ ಇದ್ದರು. ಜೆರುಸಲೇಮಿನಲ್ಲಿ ದಾವೀದನಿಗೆ ಅನೇಕ ಮಕ್ಕಳು ಹುಟ್ಟಿದರು. 14 ಜೆರುಸಲೇಮಿನಲ್ಲಿ ದಾವೀದನಿಗೆ ಹುಟ್ಟಿದ ಗಂಡುಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, 15 ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ, 16 ಎಲೀಷಾಮ, ಎಲ್ಯಾದ, ಎಲೀಫೆಲೆಟ್.
ದಾವೀದನು ಫಿಲಿಷ್ಟಿಯರ ವಿರುದ್ಧ ಯುದ್ಧಕ್ಕೆ ಹೋಗುವನು
17 ಇಸ್ರೇಲರು ದಾವೀದನನ್ನು ತಮ್ಮ ರಾಜನನ್ನಾಗಿ ಅಭಿಷೇಕಿಸಿದ್ದಾರೆಂಬುದು ಫಿಲಿಷ್ಟಿಯರಿಗೆ ತಿಳಿದಾಗ, ಫಿಲಿಷ್ಟಿಯರೆಲ್ಲ ದಾವೀದನನ್ನು ಹಿಡಿಯಲು ಹಾಗೂ ಅವನನ್ನು ಕೊಲ್ಲಲು ಹೋದರು. ಆದರೆ ಈ ಸುದ್ದಿಯು ದಾವೀದನಿಗೆ ತಿಳಿಯಿತು. ಅವನು ಕೋಟೆಗೆ ಹೊರಟುಹೋದನು. 18 ಫಿಲಿಷ್ಟಿಯರು ಬಂದು ರೆಫಾಯೀಮ್ ಕಣಿವೆಯಲ್ಲಿ ಪಾಳೆಯವನ್ನು ಮಾಡಿದರು.
19 ದಾವೀದನು ಯೆಹೋವನಿಗೆ, “ಫಿಲಿಷ್ಟಿಯರ ವಿರುದ್ಧ ಹೋರಾಡಲು ನಾನು ಹೋಗಬಹುದೇ? ಫಿಲಿಷ್ಟಿಯರನ್ನು ಸೋಲಿಸಲು ನೀನು ಸಹಾಯ ಮಾಡುವೆಯಾ?” ಎಂದು ಕೇಳಿದನು.
ಯೆಹೋವನು ದಾವೀದನಿಗೆ, “ಹೋಗು, ಫಿಲಿಷ್ಟಿಯರನ್ನು ಸೋಲಿಸಲು ನಾನು ಖಂಡಿತವಾಗಿಯೂ ನಿನಗೆ ಸಹಾಯ ಮಾಡುತ್ತೇನೆ” ಎಂದು ಹೇಳಿದನು.
20 ಆಗ ದಾವೀದನು ಬಾಳ್ಪೆರಾಚೀಮ್ಗೆ ಬಂದನು. ಅಲ್ಲಿ ಅವನು ಫಿಲಿಷ್ಟಿಯರನ್ನು ಸೋಲಿಸಿದನು. ದಾವೀದನು, “ಕಟ್ಟೆಯೊಡೆದ ಪ್ರವಾಹವು ನುಗ್ಗಿ ನಾಶಮಾಡುವಂತೆ ಯೆಹೋವನು ನನ್ನ ಶತ್ರುಗಳನ್ನು ನನ್ನ ಎದುರಿನಲ್ಲೇ ನಾಶಪಡಿಸಿದನು” ಎಂದನು. ಆದ್ದರಿಂದ ಅವನು ಆ ಸ್ಥಳಕ್ಕೆ “ಬಾಳ್ಪೆರಾಚೀಮ್” ಎಂದು ಹೆಸರಿಟ್ಟನು. 21 ಫಿಲಿಷ್ಟಿಯರು ತಮ್ಮ ದೇವರ ವಿಗ್ರಹಗಳನ್ನು ಬಾಳ್ಪೆರಾಚೀಮ್ನಲ್ಲಿಯೇ ಬಿಟ್ಟುಹೋದರು. ದಾವೀದನು ಮತ್ತು ಅವನ ಜನರು ಈ ವಿಗ್ರಹಗಳನ್ನು ತೆಗೆದುಕೊಂಡು ಹೋದರು.
22 ಫಿಲಿಷ್ಟಿಯರು ಮತ್ತೆ ರೆಫಾಯೀಮ್ ಕಣಿವೆಗೆ ಬಂದು ಪಾಳೆಯವನ್ನು ಮಾಡಿದರು.
23 ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಈ ಸಮಯದಲ್ಲಿ ಯೆಹೋವನು ದಾವೀದನಿಗೆ, “ಅಲ್ಲಿಗೆ ಹೋಗಬೇಡ. ಅವರ ಸೈನ್ಯವನ್ನು ಸುತ್ತಿಕೊಂಡು ಹಿಂದಿನಿಂದ ಅವರನ್ನು ಸಮೀಪಿಸು. ಬಾಲ್ಯಾಮ್ ಮರಗಳಿರುವ ಮತ್ತೊಂದು ಕಡೆಯಿಂದ ಅವರ ಮೇಲೆ ಆಕ್ರಮಣ ಮಾಡು. 24 ಮರಗಳ ತುದಿಯಲ್ಲಿರುವ ನಿಮಗೆ ಫಿಲಿಷ್ಟಿಯರು ಯುದ್ಧಕ್ಕೆ ಹೊರಡುವುದು ಕೇಳಿಸುತ್ತದೆ. ಆಗ ನೀನು ತ್ವರಿತಗತಿಯಿಂದ ಕಾರ್ಯನಿರತನಾಗು. ಆಗ ಯೆಹೋವನಾದ ನಾನು ನಿನಗಾಗಿ ಅದೇ ಸಮಯದಲ್ಲಿ ಫಿಲಿಷ್ಟಿಯರನ್ನು ಸೋಲಿಸಲು ನಿಮ್ಮ ಮುಂದೆ ನಾನು ಹೋಗುತ್ತೇನೆ” ಎಂದು ಹೇಳಿದನು.
25 ಯೆಹೋವನು ಆಜ್ಞಾಪಿಸಿದಂತೆಯೇ ದಾವೀದನು ಮಾಡಿದನು. ಅವನು ಫಿಲಿಷ್ಟಿಯರನ್ನು ಸೋಲಿಸಿ ಗೆಬದಿಂದ ಗೆಜೆರಿನವರೆಗೆ ಅವರನ್ನು ಅಟ್ಟಿಸಿಕೊಂಡು ಹೋಗಿ ದಾರಿಯುದ್ದಕ್ಕೂ ಅವರನ್ನು ಕೊಂದನು.
ಯೋಜನೆಯ ಅಗತ್ಯತೆ
(ಮತ್ತಾಯ 10:37-38)
25 ಅನೇಕ ಜನರು ಯೇಸುವಿನೊಂದಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾಗ ಆತನು ಅವರಿಗೆ ಹೀಗೆಂದನು: 26 “ನನ್ನ ಬಳಿಗೆ ಬರುವವನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ತಂದೆತಾಯಿಗಳನ್ನು, ಹೆಂಡತಿಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನನ್ನು ಪ್ರೀತಿಸುವುದಾದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ. 27 ನನ್ನನ್ನು ಹಿಂಬಾಲಿಸುವವನು ತನಗೆ ಕೊಡಲ್ಪಟ್ಟಿರುವ ಶಿಲುಬೆಯನ್ನು (ಶ್ರಮೆ) ಹೊತ್ತುಕೊಂಡು ಹೋಗದಿದ್ದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.
28 “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು. 29 ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ, 30 ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.
31 “ಒಬ್ಬ ಅರಸನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವಾಗ, ಮೊದಲು ಅವನು ಕುಳಿತುಕೊಂಡು ಯೋಜನೆ ಮಾಡುವನು. ಅರಸನ ಬಳಿಯಲ್ಲಿ ಕೇವಲ ಹತ್ತುಸಾವಿರ ಮಂದಿ ಸೈನಿಕರಿದ್ದರೆ, ಇಪ್ಪತ್ತುಸಾವಿರ ಮಂದಿ ಸೈನಿಕರಿರುವ ಇನ್ನೊಬ್ಬ ಅರಸನನ್ನು ಸೋಲಿಸಲು ತನಗೆ ಸಾಧ್ಯವೇ ಎಂದು ಆಲೋಚಿಸುವನು. 32 ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.
33 “ಅದೇರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಬೇಕೆಂದಿದ್ದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ತ್ಯಜಿಸಿಬಿಡಬೇಕು. ಇಲ್ಲವಾದರೆ, ನನ್ನ ಶಿಷ್ಯರಾಗಲು ಸಾಧ್ಯವಿಲ್ಲ!
ನಿಮ್ಮ ಪ್ರಭಾವವನ್ನು ಕಳೆದುಕೊಳ್ಳಬೇಡಿರಿ
(ಮತ್ತಾಯ 5:13; ಮಾರ್ಕ 9:50)
34 “ಉಪ್ಪು ಒಳ್ಳೆಯ ಪದಾರ್ಥ. ಆದರೆ ಉಪ್ಪು ತನ್ನ ರುಚಿ ಕಳೆದುಕೊಂಡರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ನೀವು ಅದಕ್ಕೆ ಮತ್ತೆ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯವಿಲ್ಲ. 35 ಅದರಿಂದ ಮಣ್ಣಿಗಾಗಲಿ ಗೊಬ್ಬರಕ್ಕಾಗಲಿ ಪ್ರಯೋಜನವಿಲ್ಲ. ಜನರು ಅದನ್ನು ಹೊರಗೆ ಬಿಸಾಡುತ್ತಾರೆ.
“ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!”
Kannada Holy Bible: Easy-to-Read Version. All rights reserved. © 1997 Bible League International