Old/New Testament
ಹೊಸ ಕಲ್ಲಿನ ಹಲಗೆಗಳು
10 “ಆಗ ಯೆಹೋವನು ನನಗೆ, ‘ಮೊದಲಿನ ಎರಡು ಕಲ್ಲಿನ ಹಲಗೆಗಳಂತೆಯೇ ಎರಡು ಕಲ್ಲಿನ ಹಲಗೆಗಳನ್ನು ಮಾಡು. ಆಮೇಲೆ ಬೆಟ್ಟದ ಮೇಲೆ ನನ್ನ ಬಳಿಗೆ ಬಾ. ಅಲ್ಲದೆ ಒಂದು ಮರದ ಪೆಟ್ಟಿಗೆಯನ್ನೂ ತಯಾರು ಮಾಡು. 2 ನೀನು ಒಡೆದುಹಾಕಿದ ಮೊದಲಿನ ಕಲ್ಲು ಹಲಗೆಗಳ ಮೇಲೆ ಯಾವ ಪದಗಳನ್ನು ಬರೆದಿದ್ದೆನೋ ಅದೇ ಪದಗಳನ್ನು ಈ ಕಲ್ಲಿನ ಹಲಗೆಗಳ ಮೇಲೆ ಬರೆಯುತ್ತೇನೆ. ಈ ಹೊಸ ಕಲ್ಲಿನ ಹಲಗೆಗಳನ್ನು ನೀನು ಮರದ ಪೆಟ್ಟಿಗೆಯಲ್ಲಿಡಬೇಕು’ ಎಂದು ಹೇಳಿದನು.
3 “ನಾನು ಜಾಲೀಮರದಿಂದ ಪೆಟ್ಟಿಗೆಯನ್ನು ಮಾಡಿದೆನು. ಎರಡು ಕಲ್ಲಿನ ಹಲಗೆಗಳನ್ನು ತಯಾರಿಸಿ ಬೆಟ್ಟವನ್ನೇರಿದೆನು. 4 ಆಗ ಯೆಹೋವನು ಮುಂಚಿನಂತೆಯೇ ಇದರಲ್ಲೂ ದಶಾಜ್ಞೆಗಳನ್ನು ಬರೆದು ನನಗೆ ಕೊಟ್ಟನು. ನೀವು ಬೆಟ್ಟದ ಬಳಿ ಒಟ್ಟಾಗಿ ಸೇರಿ ಬಂದಿದ್ದಾಗ ಆತನು ಬೆಂಕಿಯೊಳಗಿಂದ ಹೇಳಿದ್ದ ದಶಾಜ್ಞೆಗಳೇ ಇವು. 5 ನಾನು ಬೆಟ್ಟದಿಂದಿಳಿದು ಆ ಕಲ್ಲಿನ ಹಲಗೆಗಳನ್ನು ಯೆಹೋವನ ಅಪ್ಪಣೆಯಂತೆ ನಾನು ಮಾಡಿದ ಪೆಟ್ಟಿಗೆಯೊಳಗಿಟ್ಟೆನು. ಆ ಕಲ್ಲಿನ ಹಲಗೆಗಳು ಈಗಲೂ ಇವೆ.”
6 (ಇಸ್ರೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪ್ರಯಾಣ ಮಾಡಿ ಮೋಸೇರಕ್ಕೆ ಬಂದರು. ಆರೋನನು ಸತ್ತುಹೋದದ್ದು ಮತ್ತು ಅವನ ಶವವನ್ನು ಹೂಳಿಟ್ಟದ್ದು ಅಲ್ಲಿಯೇ. ಆರೋನನ ಬದಲಿಗೆ ಅವನ ಮಗನಾದ ಎಲ್ಲಾಜಾರನು ಯಾಜಕನಾದನು. 7 ಆಮೇಲೆ ಇಸ್ರೇಲ್ ಜನರು ಮೋಸೇರದಿಂದ ಗುದ್ಗೋದ ಎಂಬ ಸ್ಥಳಕ್ಕೆ ಬಂದರು. ಆಮೇಲೆ ಗುದ್ಗೋದದಿಂದ ಯೊಟ್ಬಾತ ಎಂಬ ನದಿಗಳುಳ್ಳ ಸ್ಥಳದಲ್ಲಿ ಪಾಳೆಯ ಮಾಡಿದರು. 8 ಆ ಸಮಯದಲ್ಲಿ ಯೆಹೋವನು ಲೇವಿಕುಲದವರನ್ನು ಒಂದು ವಿಶೇಷವಾದ ಕೆಲಸಕ್ಕಾಗಿ ಬೇರೆ ಕುಲಗಳವರಿಂದ ಪ್ರತ್ಯೇಕಿಸಿದನು. ಅವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವ ಕೆಲಸ ಕೊಡಲ್ಪಟ್ಟಿತು. ಯೆಹೋವನ ಸನ್ನಿಧಾನದಲ್ಲಿ ಅವರು ಯಾಜಕರ ಕೆಲಸವನ್ನು ಮಾಡಿದರು. ಅಲ್ಲದೆ ಯೆಹೋವನ ಜನರಿಗೆ ದೇವರ ಆಶೀರ್ವಾದ ವಚನಗಳನ್ನು ಹೇಳುವ ಕೆಲಸವನ್ನು ಅವರು ಮಾಡಿದರು. 9 ಹೀಗಿದ್ದುದರಿಂದ ಅವರಿಗೆ ತಮ್ಮ ಸಹೋದರರ ಜೊತೆಯಲ್ಲಿ ವಾಗ್ದಾನದ ದೇಶದೊಳಗೆ ಸ್ವಾಸ್ತ್ಯವು ದೊರಕಲಿಲ್ಲ. ಅವರ ಸ್ವಾಸ್ತ್ಯವು ಯೆಹೋವನೇ ಆಗಿದ್ದನು. ಇದು ದೇವರಾದ ಯೆಹೋವನ ವಾಗ್ದಾನ.)
10 “ಹಿಂದಿನ ಪ್ರಕಾರ ಈ ಸಾರಿಯೂ ನಾನು ನಲವತ್ತು ದಿನ ಹಗಲಿರುಳು ಬೆಟ್ಟದ ಮೇಲಿದ್ದೆನು. ನನ್ನ ಮಾತುಗಳನ್ನು ಯೆಹೋವನು ಆಲೈಸಿದನು; ನಿಮ್ಮನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡಿದನು. 11 ಯೆಹೋವನು ನನಗೆ, ‘ನನ್ನ ಜನರನ್ನು ಪ್ರಯಾಣದಲ್ಲಿ ಮುನ್ನಡೆಸು; ನಾನು ಅವರ ಪೂರ್ವಿಕರಿಗೆ ವಾಗ್ದಾನ ಮಾಡಿದ ಆ ದೇಶದಲ್ಲಿ ಅವರು ನೆಲೆಸಬೇಕು’ ಎಂದು ಹೇಳಿದನು.
ಯೆಹೋವನು ಅಪೇಕ್ಷಿಸುವುದೇನೆಂದರೆ
12 “ಇಸ್ರೇಲ್ ಜನರೇ, ಕೇಳಿರಿ! ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ನಿಜವಾಗಿಯೂ ಅಪೇಕ್ಷಿಸುವುದೇನು? ನೀವು ಆತನನ್ನು ಗೌರವಿಸಬೇಕೆಂದೂ ಆತನ ಆಜ್ಞಾವಿಧಿಗಳಿಗೆ ವಿಧೇಯರಾಗಬೇಕೆಂದೂ ಅಪೇಕ್ಷಿಸುತ್ತಾನೆ. ನೀವು ಆತನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕೆಂದು ಆತನು ಅಪೇಕ್ಷಿಸುತ್ತಾನೆ. 13 ಆದ್ದರಿಂದ ನಾನು ನಿಮಗೆ ಕೊಡುವ ಆತನ ಕಟ್ಟಳೆ, ವಿಧಿನಿಯಮಗಳಿಗೆ ವಿಧೇಯರಾಗಿರಿ. ಇವೆಲ್ಲವೂ ನಿಮ್ಮ ಒಳ್ಳೆಯದಕ್ಕಾಗಿಯೇ ಇರುತ್ತದೆ.
14 “ಪ್ರತಿಯೊಂದೂ ಯೆಹೋವನದೇ, ಉನ್ನತವಾದ ಆಕಾಶವೂ ಯೆಹೋವನದೇ. ಈ ಭೂಮಿಯೂ, ಅದರಲ್ಲಿರುವ ಸಮಸ್ತವೂ ದೇವರಿಗೇ ಸೇರಿದ್ದು. 15 ಯೆಹೋವನು ನಿಮ್ಮ ಪೂರ್ವಿಕರನ್ನು ಎಷ್ಟು ಪ್ರೀತಿಮಾಡಿದ್ದನೆಂದರೆ, ಅವರ ಸಂತಾನದವರಾದ ನಿಮ್ಮನ್ನು ತನ್ನ ಜನರನ್ನಾಗಿ ಆರಿಸಿಕೊಳ್ಳುವಷ್ಟು ಪ್ರೀತಿಸಿದನು; ಬೇರೆ ಜನಾಂಗದವರ ಬದಲಾಗಿ ನಿಮ್ಮನ್ನೇ ಆರಿಸಿಕೊಂಡನು. ನೀವು ಇಂದಿಗೂ ಆತನಿಂದ ಆರಿಸಲ್ಪಟ್ಟ ಜನರಾಗಿದ್ದೀರಿ.
16 “ಆದ್ದರಿಂದ ಹಠಮಾರಿಗಳಾಗಬೇಡಿರಿ. ನಿಮ್ಮ ಹೃದಯಗಳನ್ನು ಯೆಹೋವನಿಗೆ ಕೊಡಿರಿ. 17 ಯಾಕೆಂದರೆ ಯೆಹೋವನೇ ನಿಮ್ಮ ದೇವರು. ಆತನು ದೇವರುಗಳ ದೇವರೂ ಪ್ರಭುಗಳ ಪ್ರಭುವೂ ಆಗಿದ್ದಾನೆ. ಆತನು ಮಹಾದೇವರೂ ಆಶ್ಚರ್ಯಕಾರನೂ ಪರಾಕ್ರಮಶಾಲಿಯೂ ಭಯಂಕರನೂ ಆಗಿದ್ದಾನೆ. ಆತನಿಗೆ ಎಲ್ಲಾ ಜನರೂ ಒಂದೇ. ಆತನು ತನ್ನ ತೀರ್ಮಾನವನ್ನು ಬದಲಾಯಿಸಲು ಲಂಚ ಸ್ವೀಕರಿಸುವವನಲ್ಲ. 18 ಅನಾಥಮಕ್ಕಳಿಗೂ ವಿಧವೆಯರಿಗೂ ಆತನು ಸಹಾಯಕನಾಗಿದ್ದಾನೆ. ನಮ್ಮ ದೇಶದಲ್ಲಿರುವ ಪರದೇಶಿಯರನ್ನೂ ಆತನು ಪ್ರೀತಿಸುತ್ತಾನೆ; ಅವರಿಗೆ ಊಟಬಟ್ಟೆಗಳನ್ನು ಒದಗಿಸುತ್ತಾನೆ. 19 ಆದ್ದರಿಂದ ನೀವೂ ಪರದೇಶಿಯರನ್ನು ಪ್ರೀತಿಸಬೇಕು. ನೀವೂ ಸಹ ಈಜಿಪ್ಟ್ ದೇಶದಲ್ಲಿ ಪರದೇಶಿಗಳಾಗಿದ್ದಿರಿ.
20 “ನೀವು ನಿಮ್ಮ ದೇವರಾದ ಯೆಹೋವನನ್ನು ಗೌರವಿಸಿ ಆತನೊಬ್ಬನನ್ನೇ ಆರಾಧಿಸಬೇಕು. ಆತನನ್ನು ಬಿಟ್ಟು ತೊಲಗದಿರಿ. ವಾಗ್ದಾನ, ಒಡಂಬಡಿಕೆಗಳನ್ನು ಮಾಡುವಾಗ ಆತನ ಹೆಸರಿನಲ್ಲಿಯೇ ಮಾಡಿರಿ. 21 ಯೆಹೋವನನ್ನು ಮಾತ್ರ ನೀವು ಸ್ತುತಿಸಬೇಕು. ಆತನೇ ನಿಮ್ಮ ದೇವರು. ಆತನು ನಿಮಗಾಗಿ ಭಯಂಕರವಾದ ಮಹತ್ಕಾರ್ಯಗಳನ್ನು ಮಾಡಿದ್ದಾನೆ. ಅವುಗಳನ್ನು ನೀವು ಕಣ್ಣಾರೆ ಕಂಡಿದ್ದೀರಿ. 22 ನಿಮ್ಮ ಪೂರ್ವಿಕರು ಈಜಿಪ್ಟಿಗೆ ಹೋದಾಗ ಅವರಲ್ಲಿ ಕೇವಲ ಎಪ್ಪತ್ತು ಮಂದಿ ಮಾತ್ರ ಇದ್ದರು. ಆದರೆ ನಿಮ್ಮ ದೇವರಾದ ಯೆಹೋವನು ಆಕಾಶದಲ್ಲಿರುವ ನಕ್ಷತ್ರಗಳಂತೆ ನಿಮ್ಮನ್ನು ಅನೇಕಾನೇಕ ಜನರನ್ನಾಗಿ ಮಾಡಿದ್ದಾನೆ.
ಯೆಹೋವನನ್ನು ಸ್ಮರಿಸಿರಿ
11 “ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿರಿ. ಆತನು ಹೇಳಿದವುಗಳನ್ನೆಲ್ಲ ಮಾಡಿರಿ. ನೀವು ಕಟ್ಟಳೆಗಳಿಗೆ, ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಯಾವಾಗಲೂ ವಿಧೇಯರಾಗಿರಬೇಕು. 2 ನಿಮಗೆ ಉಪದೇಶ ಮಾಡುವುದಕ್ಕಾಗಿ ನಿಮ್ಮ ದೇವರಾದ ಯೆಹೋವನು ಮಾಡಿದ ಮಹತ್ಕಾರ್ಯಗಳನ್ನು ನೆನಪುಮಾಡಿರಿ. ಆತನ ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಆತನು ಎಂಥಾ ಶಕ್ತಿಶಾಲಿ ಎಂದು ನೀವು ತಿಳಿದಿದ್ದೀರಿ. 3 ಆ ಮಹತ್ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಈಜಿಪ್ಟಿನಲ್ಲಿ ಫರೋಹನಿಗೂ ಅವನ ಸಮಸ್ತ ಪ್ರಜೆಗಳಿಗೂ ಮಾಡಿದ್ದನ್ನು ನೀವು ನೋಡಿದ್ದೀರಿ. 4 ಯೆಹೋವನು ಈಜಿಪ್ಟಿನ ಸೈನಿಕರಿಗೂ ಅವರ ಕುದುರೆ ರಥಗಳಿಗೂ ಮಾಡಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಅವರು ನಿಮ್ಮನ್ನು ಓಡಿಸಿಕೊಂಡು ಬರುತ್ತಿದ್ದರು. ಆದರೆ ಯೆಹೋವನು ಅವರನ್ನು ಸಮುದ್ರದ ನೀರಿನಲ್ಲಿ ಮುಳುಗಿಹೋಗುವಂತೆ ಮಾಡಿದುದ್ದನ್ನು ನೋಡಿದ್ದೀರಿ ಮತ್ತು ಅವರು ಸಂಪೂರ್ಣವಾಗಿ ನಾಶವಾಗುವುದನ್ನು ನೋಡಿದ್ದೀರಿ. 5 ನೀವು ಈ ಸ್ಥಳಕ್ಕೆ ಬರುವತನಕ ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಮರುಭೂಮಿಯಲ್ಲಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳನ್ನು ನೋಡಿದವರು, ನೀವೇ ಹೊರತು ನಿಮ್ಮ ಮಕ್ಕಳಲ್ಲ. 6 ರೂಬೇನ್ ಕುಲದ ಎಲೀಯಾಬನ ಮಕ್ಕಳಾದ ದಾತಾನನಿಗೆ ಮತ್ತು ಅಬೀರಾಮನಿಗೆ ಯೆಹೋವನು ಮಾಡಿದ್ದನ್ನು ನೀವೇ ನೋಡಿದ್ದೀರಿ. ನಿಮ್ಮ ಕಣ್ಣಮುಂದೆಯೇ ಭೂಮಿಯು ಬಾಯಿ ತೆರೆದು ಅವರನ್ನು, ಅವರ ಹೆಂಡತಿಮಕ್ಕಳನ್ನು, ಅವರ ಗುಡಾರವನ್ನು, ಸೇವಕರನ್ನು, ಅವರ ಪಶುಗಳನ್ನು ನುಂಗಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. 7 ಆತನು ಮಾಡಿದ ಎಲ್ಲಾ ಮಹಾಕೃತ್ಯಗಳನ್ನು ನೋಡಿದವರು ನೀವೇ.
8 “ಆದ್ದರಿಂದ ನಾನು ನಿಮಗೆ ನೀವು ಎಲ್ಲಾ ಕಟ್ಟಳೆಗಳಿಗೆ ವಿಧೇಯರಾಗಿ ನಡೆಯಬೇಕು; ಆಗ ನೀವು ಬಲವನ್ನು ಹೊಂದುವಿರಿ; ಜೋರ್ಡನ್ ನದಿಯನ್ನು ದಾಟಿ ದೇವರು ನಿಮಗೆ ಕೊಟ್ಟಿರುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ. 9 ಆ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ. ಆ ದೇಶವು ಎಲ್ಲಾ ಒಳ್ಳೆಯ ವಸ್ತುಗಳಿಂದ ತುಂಬಿದೆ. ಆ ದೇಶವನ್ನು ನಿಮ್ಮ ಪೂರ್ವಿಕರಿಗೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದಾನೆ. 10 ನಿಮಗೆ ದೊರಕಲಿರುವ ದೇಶವು ನೀವು ಹೊರಟುಬಂದ ಈಜಿಪ್ಟ್ ದೇಶದಂತಿಲ್ಲ. ಈಜಿಪ್ಟಿನಲ್ಲಿ ನೀವು ಬಿತ್ತನೆ ಮಾಡಿದ ಮೇಲೆ ನೀರನ್ನು ಹಾಯಿಸಲು ನಿಮ್ಮ ಕಾಲುಗಳನ್ನು ಬಳಸುತ್ತಿದ್ದಿರಿ. ನಿಮ್ಮ ತರಕಾರಿ ತೋಟಗಳಿಗೆ ನೀರು ಹಾಯಿಸುವಂತೆಯೇ ನಿಮ್ಮ ಗದ್ದೆಗಳಿಗೂ ನೀರನ್ನು ಹಾಯಿಸುತ್ತಿದ್ದಿರಿ. 11 ನಿಮಗೆ ಶೀಘ್ರದಲ್ಲಿಯೇ ದೊರಕಲಿರುವ ಭೂಮಿ ಅಂಥದ್ದಲ್ಲ. ಅದು ಬೆಟ್ಟತಗ್ಗುಗಳ ಪ್ರಾಂತ್ಯ; ಮಳೆಯ ನೀರು ಭೂಮಿಯನ್ನು ತೊಯಿಸುತ್ತದೆ. 12 ನಿಮ್ಮ ದೇವರಾದ ಯೆಹೋವನು ಆ ಭೂಮಿಯನ್ನು ಕಾಯುತ್ತಾನೆ. ಆ ದೇಶವನ್ನು ವರ್ಷದ ಪ್ರಾರಂಭದಿಂದ ಕೊನೆಯ ತನಕ ಪರಿಪಾಲಿಸುತ್ತಾನೆ.
13 “ಯೆಹೋವನು ಹೀಗೆನ್ನುತ್ತಾನೆ: ‘ಇಂದು ನಾನು ನಿಮಗೆ ಕೊಟ್ಟ ಆಜ್ಞೆಗಳನ್ನೆಲ್ಲ ಗಮನವಿಟ್ಟು ಕೇಳಿರಿ: ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕು. ಹೀಗೆ ಮಾಡಿದರೆ 14 ಕಾಲಕಾಲಕ್ಕೆ ಸರಿಯಾಗಿ ನಿಮ್ಮ ದೇಶಕ್ಕೆ ನಾನು ಮಳೆಯನ್ನು ಕಳುಹಿಸುತ್ತೇನೆ. ಹಿಂಗಾರು, ಮುಂಗಾರು ಮಳೆ ತಕ್ಕ ಸಮಯದಲ್ಲಿ ಬೀಳುವುದು. ಆಗ ನೀವು ನಿಮ್ಮ ಧಾನ್ಯಗಳನ್ನು, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಶೇಖರಿಸುವಿರಿ. 15 ನಿಮ್ಮ ಹೊಲಗಳಲ್ಲಿ ಮತ್ತು ನಿಮ್ಮ ಪಶುಗಳಿಗೆ ಹುಲ್ಲು ಹುಲುಸಾಗಿ ಬೆಳೆಯುವಂತೆ ಮಾಡುವೆನು. ನಿಮಗೆ ಆಹಾರವು ಸಮೃದ್ಧಿಕರವಾಗಿರುವುದು.’
16 “ಆದ್ದರಿಂದ ಜಾಗರೂಕರಾಗಿರಿ. ಬೇರೆ ದೇವರುಗಳನ್ನು ಸೇವೆಮಾಡಿ ಆರಾಧಿಸಬೇಡಿ. 17 ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಳ್ಳುವನು; ಆಕಾಶವನ್ನು ಮುಚ್ಚಿ ಮಳೆಬೀಳದಂತೆ ಮಾಡುವನು. ಆಗ ಹೊಲದಲ್ಲಿ ಧಾನ್ಯ ಬೆಳೆಯುವುದಿಲ್ಲ. ಆಗ ಆತನು ಕೊಡುವ ಒಳ್ಳೆಯ ದೇಶದಲ್ಲಿಯೇ ಊಟಕ್ಕಿಲ್ಲದೆ ಸಾಯುವಿರಿ.
18 “ನಾನು ಹೇಳಿದ ಆಜ್ಞೆಗಳನ್ನು ಯಾವಾಗಲೂ ಜ್ಞಾಪಕದಲ್ಲಿಡಿರಿ. ಅದನ್ನು ನಿಮ್ಮ ಹೃದಯದಲ್ಲಿಡಿರಿ. ಅವುಗಳನ್ನು ಬರೆದು ಕೈಗಳಲ್ಲಿ ಮತ್ತು ಹಣೆಯ ಮೇಲೆ ಕಟ್ಟಿರಿ. ಇದು ನಿಮಗೆ ಜ್ಞಾಪಕ ಕೊಡುವುದು. 19 ಈ ಕಟ್ಟಳೆಗಳನ್ನು ನಿಮ್ಮ ಮಕ್ಕಳಿಗೆ ಬೋಧಿಸಿರಿ. ಅವುಗಳ ವಿಷಯವಾಗಿ ನೀವು ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ದಾರಿಯಲ್ಲಿ ನಡೆಯುತ್ತಿರುವಾಗ, ಮಲಗುವಾಗ, ಏಳುವಾಗ ನೀವು ಮಾತನಾಡುತ್ತಾ ಇರಬೇಕು. 20 ಈ ಕಟ್ಟಳೆಗಳನ್ನು ನಿಮ್ಮ ಮನೆಯ ಬಾಗಿಲುಗಳ ಮತ್ತು ನಿಲುವುಗಳ ಮತ್ತು ಹೆಬ್ಬಾಗಿಲುಗಳ ಮೇಲೆ ಬರೆಯಿರಿ. 21 ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಲ್ಪಟ್ಟ ದೇಶದಲ್ಲಿ ಆಗ ನೀವು ಮತ್ತು ನಿಮ್ಮ ಮಕ್ಕಳು ಬಹುಕಾಲ ಬಾಳುವಿರಿ. ಆಕಾಶವು ಭೂಮಿಯ ಮೇಲೆ ಎಷ್ಟು ಕಾಲವಿರುವುದೋ ಅಷ್ಟುಕಾಲ ನೀವು ಬದುಕುವಿರಿ.
22 “ಅನುಸರಿಸಬೇಕೆಂದು ಹೇಳುವ ಪ್ರತಿಯೊಂದು ಕಟ್ಟಳೆಗಳಿಗೆ ವಿಧೇಯರಾಗಿರಿ. ನಿಮ್ಮ ಯೆಹೋವನನ್ನು ಪ್ರೀತಿಸಿ ಆತನ ಮಾರ್ಗದಲ್ಲಿ ನಡೆದು ಆತನಿಗೆ ನಂಬಿಗಸ್ತರಾಗಿರಿ. 23 ಆಗ ನೀವು ಹೋಗುವ ದೇಶದಲ್ಲಿ ವಾಸಿಸುವ ಜನರನ್ನು ಯೆಹೋವನಾದ ನಾನು ಹೊಡೆದೋಡಿಸುವೆನು. ಆ ಜನಾಂಗ ನಿಮಗಿಂತಲೂ ದೊಡ್ಡದು ಮತ್ತು ಬಲಿಷ್ಠವಾದದ್ದು. 24 ನೀವು ಹೆಜ್ಜೆಯಿಡುವ ಭೂಮಿಯೆಲ್ಲಾ ನಿಮ್ಮದಾಗುವುದು. ದಕ್ಷಿಣದ ಮರುಭೂಮಿಯಿಂದ ಹಿಡಿದು ಉತ್ತರದ ಲೆಬನೋನಿನ ತನಕ, ಪೂರ್ವದಲ್ಲಿರುವ ಯೂಫ್ರೇಟೀಸ್ ನದಿಯಿಂದ ಪಶ್ಟಿಮದ ಭೂಮಧ್ಯಸಮುದ್ರ ತೀರದ ತನಕ ವಿಸ್ತಾರವಾಗಿದೆ. 25 ನಿಮ್ಮ ವಿರುದ್ಧವಾಗಿ ಯಾರೂ ನಿಂತುಕೊಳ್ಳಲಾರರು. ನೀವು ಆಕ್ರಮಿಸಿಕೊಳ್ಳುವ ಪ್ರದೇಶದಲ್ಲೆಲ್ಲಾ ಯೆಹೋವನು ಅಲ್ಲಿಯ ಜನರು ನಿಮಗೆ ಭಯಪಡುವಂತೆ ಮಾಡುವನು. ಯೆಹೋವನು ಈ ವಾಗ್ದಾನವನ್ನು ನಿಮಗೆ ಮೊದಲೇ ಕೊಟ್ಟಿದ್ದಾನೆ.
ಆಶೀರ್ವಾದ ಅಥವಾ ಶಾಪ: ಇಸ್ರೇಲರ ಆರಿಸುವಿಕೆ
26 “ಈ ಹೊತ್ತು ನೀವು ಆಶೀರ್ವಾದವನ್ನಾಗಲಿ ಶಾಪವನ್ನಾಗಲಿ ಆರಿಸಬೇಕು. 27 ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾದರೆ ಆತನಿಂದ ಆಶೀರ್ವಾದ ಹೊಂದುವಿರಿ. 28 ಆದರೆ ನೀವು ವಿಧೇಯರಾಗದಿದ್ದರೆ ಶಾಪವನ್ನು ಹೊಂದುವಿರಿ. ನಾನು ನಿಮಗೆ ಕೊಡುವ ಯೆಹೋವನ ನಿಯಮಗಳನ್ನು ಅನುಸರಿಸುವುದನ್ನು ನಿಲ್ಲಿಸಬೇಡಿರಿ. ಅನ್ಯದೇವತೆಗಳನ್ನು ಪೂಜಿಸಬೇಡಿರಿ. ನಾನು ನಿಮಗೆ ಬೋಧಿಸುತ್ತಿರುವುದು ಯೆಹೋವನ ಮಾರ್ಗದ ಕುರಿತೇ ಹೊರತು ಬೇರೆ ದೇವರುಗಳ ಕುರಿತಲ್ಲ.
29 “ದೇವರಾದ ಯೆಹೋವನು ನಿಮ್ಮನ್ನು ನಿಮ್ಮ ದೇಶಕ್ಕೆ ನಡೆಸುವನು. ನೀವು ಬೇಗನೆ ಅದನ್ನು ಸ್ವಾಧೀನ ಮಾಡಿಕೊಳ್ಳುವಿರಿ. ಆ ಸಮಯದಲ್ಲಿ ನೀವು ಗೆರಿಜ್ಜೀಮ್ ಬೆಟ್ಟದ ತುದಿಗೇರಿ ಅಲ್ಲಿಂದ ಆಶೀರ್ವಾದ ವಚನಗಳನ್ನು ನುಡಿಯಿರಿ. ಅನಂತರ ನೀವು ಎಬಾಲ್ ಬೆಟ್ಟದ ಮೇಲೇರಿ ಅಲ್ಲಿಂದ ಜನರಿಗೆ ಶಾಪವಚನಗಳನ್ನು ನುಡಿಯಿರಿ. 30 ಈ ಬೆಟ್ಟಗಳು ಜೋರ್ಡನ್ ನದಿಯ ಆಚೆ ದಡದಲ್ಲಿವೆ. ಇವು ಜೋರ್ಡನ್ ಕಣಿವೆಯಲ್ಲಿ ವಾಸವಾಗಿರುವ ಕಾನಾನ್ಯರ ಪ್ರದೇಶದಲ್ಲಿವೆ. ಈ ಬೆಟ್ಟಗಳು ಪಶ್ಚಿಮ ದಿಕ್ಕಿನಲ್ಲಿವೆ. ಗಿಲ್ಗಾಲ್ ಊರಿನ ಸಮೀಪದಲ್ಲಿರುವ ಓಕ್ ಮರಗಳಿಗೆ ಇವು ದೂರವೇನೂ ಇಲ್ಲ. 31 ನೀವು ಜೋರ್ಡನ್ ನದಿಯನ್ನು ದಾಟಿ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ. ಈ ದೇಶವು ನಿಮ್ಮದೇ. 32 ಈ ದೇಶದಲ್ಲಿ ನೀವು ವಾಸಿಸುವಾಗ ನಾನು ಈ ಹೊತ್ತು ನಿಮಗೆ ಕೊಡುವ ಕಟ್ಟಳೆಗಳನ್ನೂ ವಿಧಿನಿಯಮಗಳನ್ನೂ ತಪ್ಪದೆ ಪರಿಪಾಲಿಸಬೇಕು.
ಯೆಹೋವನನ್ನು ಆರಾಧಿಸುವ ಸ್ಥಳ
12 “ನಿಮಗೆ ಸಿಗುವ ಹೊಸ ದೇಶದಲ್ಲಿ ಈ ಕಟ್ಟಳೆಗಳನ್ನು ನೀವು ಅನುಸರಿಸಬೇಕು. ನೀವು ಭೂಮಿಯ ಮೇಲೆ ಜೀವಿಸುವವರೆಗೆ ಆ ಕಟ್ಟಳೆಗಳನ್ನು ತಪ್ಪದೇ ಅನುಸರಿಸಬೇಕು. ನಮ್ಮ ಯೆಹೋವನು ನಮ್ಮ ಪೂರ್ವಿಕರ ದೇವರಾಗಿದ್ದಾನೆ. ಆತನೇ ಈ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. 2 ಈಗ ಆ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಜನರಿಂದ ತೆಗೆದುಕೊಂಡು ನಿಮಗೆ ಅದನ್ನು ಕೊಡುತ್ತಾನೆ. ಅಲ್ಲಿ ನೀವು ಹೋದಾಗ ಆ ಜನರ ವಿಗ್ರಹಾರಾಧನೆಯ ಸ್ಥಳಗಳನ್ನು ಸಂಪೂರ್ಣವಾಗಿ ಹಾಳುಮಾಡಬೇಕು. ಅವರ ಪೂಜಾಸ್ಥಳಗಳು ಎತ್ತರವಾದ ಬೆಟ್ಟಗುಡ್ಡಗಳ ಮೇಲೆಯೂ ಹಸುರಾಗಿರುವ ಮರಗಳ ಕೆಳಗೂ ಇರುತ್ತವೆ. 3 ನೀವು ಅವರ ಯಜ್ಞವೇದಿಕೆಗಳನ್ನು ಪುಡಿಪುಡಿಮಾಡಿ, ಅವರ ಸ್ಮಾರಕ ಕಲ್ಲುಗಳನ್ನು ಕೆಡವಬೇಕು. ಅವರ ಅಶೇರ ಕಂಬಗಳನ್ನು ಸುಟ್ಟುಬಿಡಬೇಕು ಮತ್ತು ದೇವರುಗಳ ವಿಗ್ರಹಗಳನ್ನು ಕತ್ತರಿಸಿಹಾಕಬೇಕು. ಹೀಗೆ ನೀವು ಅವುಗಳ ಹೆಸರನ್ನು ಆ ಸ್ಥಳದಿಂದ ನಿರ್ಮೂಲ ಮಾಡಬೇಕು.
4 “ಆ ಜನರು ತಮ್ಮ ದೇವರುಗಳನ್ನು ಆರಾಧಿಸುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬಾರದು. 5 ನಿಮ್ಮ ದೇವರಾದ ಯೆಹೋವನು ನಿಮ್ಮ ಕುಲದವರ ಪ್ರಾಂತ್ಯಗಳಿಂದ ಒಂದು ವಿಶೇಷ ಸ್ಥಳವನ್ನು ಆರಿಸಿಕೊಂಡು ಅದಕ್ಕೆ ತನ್ನ ಹೆಸರಿಡುವನು. ಅಲ್ಲಿ ಆತನ ಆಲಯ ಕಟ್ಟಲ್ಪಡುವುದು. ಆತನನ್ನು ಆರಾಧಿಸಲು ನೀವು ಅಲ್ಲಿಗೆ ಹೋಗಬೇಕು. 6 ಅಲ್ಲಿಗೆ ನೀವು ನಿಮ್ಮ ಸರ್ವಾಂಗಹೋಮಗಳನ್ನು, ಯಜ್ಞಗಳನ್ನು, ನಿಮ್ಮ ಬೆಳೆಗಳಲ್ಲಿ ಮತ್ತು ಪಶುಗಳಲ್ಲಿ ದಶಾಂಶವನ್ನು, ನಿಮ್ಮ ವಿಶೇಷ ಕಾಣಿಕೆಗಳನ್ನು, ಯೆಹೋವನಿಗೆ ನೀವು ಹರಕೆ ಹೊತ್ತುಕೊಂಡ ಯಾವುದೇ ಕಾಣಿಕೆಗಳನ್ನು, ನೀವು ಕೊಡಲಿಚ್ಛಿಸುವ ಯಾವುದೇ ವಿಶೇಷ ಕಾಣಿಕೆಗಳನ್ನು, ನಿಮ್ಮ ಮಂದೆ ಮತ್ತು ಹಿಂಡುಗಳ ಚೊಚ್ಚಲುಮರಿಗಳನ್ನು ತರಬೇಕು. 7 ನೀವೂ ಮತ್ತು ನಿಮ್ಮ ಕುಟುಂಬಗಳವರೂ ಅಲ್ಲಿ ಒಟ್ಟಿಗೆ ಊಟ ಮಾಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿರುವನು. ನೀವು ದುಡಿದು ಸಂಪಾದಿಸಿದ ಎಲ್ಲಾ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಂಡು ಆ ಸ್ಥಳದಲ್ಲಿ ಆನಂದಿಸುವಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ಆ ಎಲ್ಲಾ ಒಳ್ಳೆಯವುಗಳನ್ನು ನಿಮಗೆ ಕೊಟ್ಟನೆಂದು ನೀವು ಜ್ಞಾಪಿಸಿಕೊಳ್ಳುವಿರಿ.
8-9 “ನೀವು ಇನ್ನೂ ವಾಗ್ದಾನದ ದೇಶವನ್ನು ಪ್ರವೇಶಿಸಲಿಲ್ಲದ ಕಾರಣ ನೀವು ಯೆಹೋವನಿಗೆ ನಿಮ್ಮ ಇಷ್ಟಾನುಸಾರವಾಗಿ ಆರಾಧನೆ ಮಾಡುತ್ತಿದ್ದೀರಿ. ಆದರೆ ಇದನ್ನೇ ಮುಂದುವರಿಸಬೇಡಿ. 10 ನೀವು ಜೋರ್ಡನ್ ನದಿಯನ್ನು ದಾಟಿ, ಯೆಹೋವನು ನಿಮಗೆ ಕೊಡುವ ದೇಶದಲ್ಲಿ ವಾಸಿಸುವಿರಿ. ನಿಮ್ಮ ಎಲ್ಲಾ ವೈರಿಗಳಿಂದ ತಪ್ಪಿಸಿ ದೇವರು ನಿಮಗೆ ಸಮಾಧಾನವನ್ನು ಅನುಗ್ರಹಿಸುವನು; ನೀವು ಅಲ್ಲಿ ಸುರಕ್ಷಿತವಾಗಿರುವಿರಿ. 11 ಆಗ ನಿಮ್ಮ ಯೆಹೋವನು ತನ್ನ ಹೆಸರಿಗಾಗಿ ಒಂದು ಸ್ಥಳವನ್ನು ಆರಿಸಿಕೊಳ್ಳುವನು. ಆ ಸ್ಥಳಕ್ಕೆ ನೀವು ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ಯಜ್ಞಾದಿಗಳನ್ನು ಸಮರ್ಪಿಸಬೇಕು; ನಿಮ್ಮ ಹರಕೆಯ ಕಾಣಿಕೆಗಳನ್ನು, ಚೊಚ್ಚಲ ಪಶುಗಳನ್ನು, ದಶಾಂಶವನ್ನು ಸಲ್ಲಿಸಬೇಕು. 12 ಅಲ್ಲಿಗೆ ನಿಮ್ಮ ಹೆಂಡತಿ ಮಕ್ಕಳೊಂದಿಗೆ, ನಿಮ್ಮ ಸೇವಕರೊಂದಿಗೆ ಮತ್ತು ನಿಮ್ಮ ಪಟ್ಟಣದಲ್ಲಿ ಸ್ವಾಸ್ತ್ಯವನ್ನು ಹೊಂದದೆ ಇರುವ ಲೇವಿಯರೊಂದಿಗೆ ಹೋಗಿ ಯೆಹೋವನ ಸಮಕ್ಷಮದಲ್ಲಿ ಸಂತೋಷಪಡಬೇಕು. 13 ನಿಮಗೆ ಇಷ್ಟಬಂದ ಸ್ಥಳಗಳಲ್ಲಿ ನೀವು ಬಲಿಯನ್ನು ಅರ್ಪಿಸಬೇಡಿ. 14 ಯೆಹೋವನು ತನ್ನ ವಿಶೇಷವಾದ ಸ್ಥಳವನ್ನು ನಿಮ್ಮ ಕುಲಗಳವರ ಮಧ್ಯದಿಂದ ಆರಿಸಿಕೊಳ್ಳುವನು. ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ನಾನು ನಿಮಗೆ ಹೇಳಿದವುಗಳೆಲ್ಲವನ್ನು ಅದೇ ಸ್ಥಳದಲ್ಲಿ ಮಾಡಿರಿ.
15 “ನೀವು ನಿಮ್ಮ ಸ್ಥಳಗಳಲ್ಲಿ ವಾಸಿಸುವಾಗ ಅಲ್ಲಿರುವ ಜಿಂಕೆ, ಟಗರು ಇತ್ಯಾದಿ ಶುದ್ಧ ಪ್ರಾಣಿಗಳನ್ನು ಕೊಂದು ತಿನ್ನಬಹುದು. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವಷ್ಟು ಮಾಂಸದಲ್ಲಿ ಎಷ್ಟುಬೇಕಾದರೂ ತಿನ್ನಿರಿ. ಶುದ್ಧರೂ ಅಶುದ್ಧರೂ ಯಾರು ಬೇಕಾದರೂ ಆ ಮಾಂಸವನ್ನು ತಿನ್ನಬಹುದು. 16 ಆದರೆ ಅದರ ರಕ್ತವನ್ನು ಮಾತ್ರ ತಿನ್ನಬಾರದು. ಅದರ ರಕ್ತವನ್ನು ನೀರಿನಂತೆ ನೆಲದ ಮೇಲೆ ಚೆಲ್ಲಿಬಿಡಬೇಕು.
17 “ನೀವು ವಾಸಿಸುವ ಆ ಸ್ಥಳದಲ್ಲಿ ಕೆಲವನ್ನು ತಿನ್ನಕೂಡದು. ಅವು ಯಾವುವೆಂದರೆ: ದೇವರಿಗೆ ಮೀಸಲಿಟ್ಟ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಯ ಪಾಲು; ದೇವರಿಗೆ ಸಮರ್ಪಿಸಲು ಇಟ್ಟಿರುವ ಚೊಚ್ಚಲ ಪಶುಗಳು ಮತ್ತು ಹಿಂಡಿನ ಮರಿಗಳು, ನೀವು ಹರಕೆ ಹೊತ್ತುಕೊಂಡ ಕಾಣಿಕೆಗಳು ಮತ್ತು ದೇವರಿಗಾಗಿ ಮೀಸಲಿಟ್ಟಿದ್ದ ವಸ್ತುಗಳು. 18 ನಿಮ್ಮ ದೇವರಾದ ಯೆಹೋವನು ಆರಿಸಿಕೊಂಡಿರುವ ಮತ್ತು ಆತನು ನಿಮ್ಮೊಂದಿಗಿರುವ ಆ ವಿಶೇಷ ಸ್ಥಳದಲ್ಲಿಯೇ ನೀವು ಆ ಕಾಣಿಕೆಗಳನ್ನು ತಿನ್ನಬೇಕು. ನೀವು ಅಲ್ಲಿಗೆ ನಿಮ್ಮ ಗಂಡುಹೆಣ್ಣು ಮಕ್ಕಳೊಂದಿಗೆ, ನಿಮ್ಮ ಎಲ್ಲಾ ಸೇವಕರೊಂದಿಗೆ ಮತ್ತು ನಿಮ್ಮ ಊರುಗಳಲ್ಲಿ ವಾಸವಾಗಿರುವ ಲೇವಿಯರೊಂದಿಗೆ ಹೋಗಿ ನಿಮ್ಮ ದೇವರಾದ ಯೆಹೋವನೊಂದಿಗೆ ಆನಂದಿಸಿರಿ; ನೀವು ದುಡಿದು ಸಂಪಾದಿಸಿದವುಗಳನ್ನು ಅನುಭವಿಸಿರಿ. 19 ಆದರೆ ಯಾವಾಗಲೂ ಈ ಊಟವನ್ನು ಲೇವಿಯರೊಂದಿಗೆ ಹಂಚಿಕೊಂಡು ತಿನ್ನಬೇಕೆಂಬುದನ್ನು ಜ್ಞಾಪಕದಲ್ಲಿಡಿರಿ. ನೀವು ನಿಮ್ಮ ದೇಶದಲ್ಲಿ ವಾಸಿಸುವಷ್ಟು ಕಾಲ ಹೀಗೆ ಮಾಡಿರಿ.
20-21 “ನಿಮ್ಮ ದೇವರಾದ ಯೆಹೋವನು ನಿಮ್ಮ ದೇಶವನ್ನು ವಿಸ್ತಾರ ಮಾಡುವನು. ಆ ಸಮಯದಲ್ಲಿ ನೀವು ಇರುವ ಸ್ಥಳಗಳು ಆತನು ತನ್ನ ಹೆಸರಿಗಾಗಿ ಆರಿಸಿದ ಸ್ಥಳದಿಂದ ತುಂಬಾ ದೂರವಿರಬಹುದು. ಆಗ ನಿಮಗೆ ಮಾಂಸ ಊಟಮಾಡಲು ಆಸೆಯಾದರೆ ನಿಮ್ಮ ಹಿಂಡಿನಿಂದಾಗಲಿ ಹಟ್ಟಿಯಿಂದಾಗಲಿ ಪ್ರಾಣಿಯನ್ನು ಕೊಂದು ತಿನ್ನಬಹುದು. ನಾನು ತಿಳಿಸುವ ರೀತಿಯಲ್ಲಿ ತಿನ್ನಿರಿ. ನಿಮಗೆ ಬೇಕಾದಾಗಲೆಲ್ಲಾ ಹೀಗೆ ಮಾಡಿರಿ. 22 ಜಿಂಕೆಯನ್ನಾಗಲಿ ಸಾರಂಗವನ್ನಾಗಲಿ ತಿನ್ನುವಂತೆ ನೀವು ಈ ಮಾಂಸವನ್ನು ತಿನ್ನಬಹುದು. ಶುದ್ಧರಾಗಿರುವವರೂ ಅಶುದ್ಧರಾಗಿರುವವರೂ ಈ ಮಾಂಸವನ್ನು ತಿನ್ನಬಹುದು. 23 ಆದರೆ ರಕ್ತವನ್ನು ಮಾತ್ರ ತಿನ್ನಬಾರದು. ಯಾಕೆಂದರೆ ರಕ್ತವು ಪ್ರಾಣಕ್ಕೆ ಆಧಾರ. ಮಾಂಸದಲ್ಲಿ ಇನ್ನೂ ಜೀವಕಣಗಳು ಇರುವುದರಿಂದ ರಕ್ತದೊಂದಿಗೆ ಮಾಂಸವನ್ನು ತಿನ್ನಬೇಡಿರಿ. 24 ರಕ್ತವನ್ನು ನೀರಿನಂತೆ ನೆಲದಲ್ಲಿ ಚೆಲ್ಲಿಬಿಡಬೇಕು. 25 ಆದ್ದರಿಂದ ನೀವು ಅದನ್ನು ತಿನ್ನದೆ ಯೆಹೋವನು ನಿಮಗೆ ತಿಳಿಸಿದಂತೆ ಮಾಡಿರಿ. ಆಗ ನಿಮಗೂ ನಿಮ್ಮ ಸಂತತಿಯವರಿಗೂ ಶುಭ ಉಂಟಾಗುವುದು.
26 “ನೀವು ನಿಮ್ಮ ದೇವರಿಗೆ ವಿಶೇಷ ಕಾಣಿಕೆಗಳನ್ನು ಸಮರ್ಪಿಸಲು ಇಷ್ಟಪಟ್ಟರೆ ಆಗ ನೀವು ದೇವರು ಆರಿಸಿರುವ ಸ್ಥಳಕ್ಕೆ ಹೋಗಿ ಅಲ್ಲಿ ಅದನ್ನು ಸಮರ್ಪಿಸಿರಿ. ನಿಮ್ಮ ಸರ್ವಾಂಗಹೋಮವನ್ನೂ ಆ ಸ್ಥಳದಲ್ಲಿಯೇ ಸಮರ್ಪಿಸಬೇಕು. 27 ನಿಮ್ಮ ದೇವರಾದ ಯೆಹೋವನ ಯಜ್ಞವೇದಿಕೆಯ ಮೇಲೆ ನಿಮ್ಮ ಸರ್ವಾಂಗಹೋಮದ ಪಶುವಿನ ಮಾಂಸವನ್ನು ಮತ್ತು ರಕ್ತವನ್ನು ಸಮರ್ಪಿಸಬೇಕು. ನಿಮ್ಮ ಯಜ್ಞಗಳಲ್ಲಿ ರಕ್ತವನ್ನು ಬಲಿಪೀಠದಲ್ಲಿ ಸುರಿದು ಮಾಂಸವನ್ನು ನೀವು ತಿನ್ನಬಹುದು. 28 ಯೆಹೋವನು ಕೊಡುವ ಕಟ್ಟಳೆಗಳನ್ನು ನೀವು ಅನುಸರಿಸಿರಿ. ನಿಮ್ಮ ದೇವರಾದ ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡುವಾಗ ನಿಮಗೂ ನಿಮ್ಮ ಸಂತತಿಯವರಿಗೂ ಶುಭ ಉಂಟಾಗುವುದು.
29 “ನೀವು ಬೇರೆಯವರ ದೇಶವನ್ನು ವಶಪಡಿಸಿಕೊಳ್ಳಲು ಹೋಗುತ್ತಿದ್ದೀರಿ. ನಿಮ್ಮ ದೇವರಾದ ಯೆಹೋವನು ಆ ಜನರನ್ನು ನಿಮಗಾಗಿ ನಾಶಮಾಡುವನು. ಆ ಜನರನ್ನು ಅಲ್ಲಿಂದ ಹೊಡೆದೋಡಿಸಿ ಅವರ ಸ್ಥಳದಲ್ಲಿ ನೀವು ವಾಸಿಸುವಿರಿ. 30 ಅಲ್ಲಿ ವಾಸಿಸುವ ಅನ್ಯಜನರನ್ನು ನೀವು ನಾಶಮಾಡಬೇಕು. ಇಲ್ಲದಿದ್ದಲ್ಲಿ ಅವರು ನಿಮಗೆ ಉರುಲಾಗುವರು; ಅವರ ವಿಗ್ರಹಗಳನ್ನು ಪೂಜಿಸದಂತೆ ಎಚ್ಚರಿಕೆಯಿಂದಿರಿ. ಆ ಸುಳ್ಳುದೇವರುಗಳಿಗೆ ಪ್ರಾರ್ಥಿಸಬೇಡಿ. ‘ಆ ಜನರು ಆ ಸುಳ್ಳುದೇವರುಗಳನ್ನು ಪೂಜಿಸಿದ ಹಾಗೆ ನಾನೂ ಪೂಜಿಸುವೆನು’ ಎಂದು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳಬೇಡಿ! 31 ನಿಮ್ಮ ದೇವರಾದ ಯೆಹೋವನಿಗೆ ನೀವು ಆ ರೀತಿ ಮಾಡಬಾರದು. ಆ ರೀತಿಯಾಗಿ ಆತನನ್ನು ಆರಾಧಿಸಬಾರದು. ಯಾಕೆಂದರೆ ಅವರು ತಮ್ಮ ದೇವರೆದುರಿನಲ್ಲಿ ಅಸಹ್ಯವಾದ ಕಾರ್ಯಗಳನ್ನು ಮಾಡುತ್ತಾರೆ. ಅದನ್ನು ನಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ. ಅವರು ತಮ್ಮ ಮಕ್ಕಳನ್ನೇ ದೇವರಿಗೆ ಬಲಿ ಅರ್ಪಿಸುತ್ತಾರೆ.
32 “ನಾನು ಆಜ್ಞಾಪಿಸಿದ ಪ್ರಕಾರವೇ ನೀವು ಮಾಡಿರಿ. ಅದಕ್ಕೆ ಏನೂ ಕೂಡಿಸಬಾರದು; ಅದರಿಂದ ಏನೂ ತೆಗೆಯಬಾರದು.
ದೇವರ ಮಗನ ಆಗಮನ
(ಮತ್ತಾಯ 21:33-46; ಲೂಕ 20:9-19)
12 ಯೇಸು ಜನರಿಗೆ ಸಾಮ್ಯಗಳ ಮೂಲಕ ಉಪದೇಶಿಸುತ್ತಾ ಅವರಿಗೆ ಹೇಳಿದ್ದೇನೆಂದರೆ: “ಒಬ್ಬನು ದ್ರಾಕ್ಷಿಯ ತೋಟವನ್ನು ಮಾಡಿ, ಸುತ್ತಲೂ ಗೋಡೆ ಹಾಕಿಸಿ, ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದನು. ಅವನು ಕೆಲವು ರೈತರಿಗೆ ತೋಟವನ್ನು ಗುತ್ತಿಗೆಗೆ ಕೊಟ್ಟು ಪ್ರವಾಸಕ್ಕೆ ಹೊರಟನು.
2 “ತರುವಾಯ ಫಲಕಾಲವು ಬಂದಾಗ ತನ್ನ ಪಾಲಿನ ದ್ರಾಕ್ಷಿಯನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದನು. 3 ಆದರೆ ರೈತರು ಆ ಸೇವಕನನ್ನು ಹಿಡಿದುಕೊಂಡು ಹೊಡೆದು ಏನನ್ನೂ ಕೊಡದೆ ಅವನನ್ನು ಕಳುಹಿಸಿಬಿಟ್ಟರು. 4 ಆಗ ಯಜಮಾನನು ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಅವನಿಗೂ ತಲೆಯ ಮೇಲೆ ಹೊಡೆದು ಅವಮಾನ ಮಾಡಿದರು. 5 ಆದ್ದರಿಂದ ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನು ಕೊಂದುಹಾಕಿದರು. ಆ ಯಜಮಾನನು ಇತರ ಅನೇಕ ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಕೆಲವು ಸೇವಕರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.
6 “ಆ ಯಜಮಾನನಿಗೆ ರೈತರ ಬಳಿಗೆ ಕಳುಹಿಸಲು ಪ್ರಿಯ ಮಗನೊಬ್ಬನೇ ಉಳಿದಿದ್ದನು. ಅವನು ಕಳುಹಿಸಬಹುದಾದ ಕೊನೆಯ ವ್ಯಕ್ತಿ ಅವನ ಸ್ವಂತ ಮಗನಾಗಿದ್ದನು. ‘ರೈತರು ನನ್ನ ಮಗನಿಗೆ ಗೌರವ ಕೊಡುತ್ತಾರೆ’ ಎಂದುಕೊಂಡು ಯಜಮಾನನು ಅವನನ್ನೇ ಕಳುಹಿಸಿದನು.
7 “ಆದರೆ ರೈತರು ಒಬ್ಬರಿಗೊಬ್ಬರು, ‘ಇವನು ಯಜಮಾನನ ಮಗನು. ಈ ದ್ರಾಕ್ಷಿತೋಟದ ಹಕ್ಕುದಾರ. ನಾವು ಇವನನ್ನು ಕೊಂದರೆ, ದ್ರಾಕ್ಷಿತೋಟ ನಮ್ಮದಾಗುತ್ತದೆ’ ಎಂದುಕೊಂಡು, 8 ಮಗನನ್ನು ಹಿಡಿದು ಕೊಂದುಹಾಕಿ, ದ್ರಾಕ್ಷಿತೋಟದ ಹೊರಗೆ ಎಸೆದುಬಿಟ್ಟರು.
9 “ಹೀಗಿರುವಾಗ ಆ ದಾಕ್ಷಿತೋಟದ ಯಜಮಾನನು ಏನು ಮಾಡುತ್ತಾನೆ? ಅವನು ತೋಟಕ್ಕೆ ಹೋಗಿ, ಆ ರೈತರನ್ನು ಕೊಂದು ತೋಟವನ್ನು ಬೇರೆ ರೈತರಿಗೆ ಒಪ್ಪಿಸಿಕೊಡುತ್ತಾನೆ. 10 ಪವಿತ್ರಗ್ರಂಥದಲ್ಲಿ ಬರೆದಿರುವಂತೆ,
‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
11 ಇದು ಪ್ರಭುವಿನಿಂದ ಆಯಿತು. ಇದು ನಮಗೆ ಆಶ್ಚರ್ಯವಾಗಿ ತೋರುತ್ತದೆ.’(A)”
12 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯನಾಯಕರು ಕೇಳಿ ತಮ್ಮನ್ನು ಕುರಿತಾಗಿಯೇ ಇದನ್ನು ಹೇಳಿದನೆಂದು ತಿಳಿದುಕೊಂಡು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರೂ ಜನರಿಗೆ ಹೆದರಿಕೊಂಡು ಆತನನ್ನು ಬಿಟ್ಟುಹೋದರು.
ಯೇಸುವನ್ನು ವಂಚಿಸಲು ಯೆಹೂದ್ಯನಾಯಕರ ಪ್ರಯತ್ನ
(ಮತ್ತಾಯ 22:15-22; ಲೂಕ 20:20-26)
13 ಅನಂತರ ಯೆಹೂದ್ಯನಾಯಕರು ಕೆಲವು ಫರಿಸಾಯರನ್ನು ಹಾಗೂ ಹೆರೋದ್ಯರ ಗುಂಪಿನಿಂದ ಕೆಲವರನ್ನು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲು ಕಳುಹಿಸಿದರು. 14 ಫರಿಸಾಯರು ಮತ್ತು ಹೆರೋದ್ಯರು ಯೇಸುವಿನ ಬಳಿಗೆ ಬಂದು, ಆತನಿಗೆ, “ಉಪದೇಶಕನೇ, ನೀನು ಯಥಾರ್ಥನೆಂಬುದು ನಮಗೆ ತಿಳಿದಿದೆ. ನಿನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬುದರ ಬಗ್ಗೆ ನಿನಗೆ ಹೆದರಿಕೆಯಿಲ್ಲ. ಜನರೆಲ್ಲರೂ ನಿನಗೆ ಒಂದೇ. ಮತ್ತು ನೀನು ದೇವರ ಮಾರ್ಗವನ್ನು ಕುರಿತು ಸತ್ಯವನ್ನೇ ಉಪದೇಶಿಸುತ್ತಿರುವೆ ಎಂದು ನಮಗೆ ಗೊತ್ತಿದೆ. ಆದ್ದರಿಂದ ನಮಗೆ ಹೇಳು: ಸೀಸರನಿಗೆ ತೆರಿಗೆ ಕೊಡುವುದು ಸರಿಯೋ? ಅಥವಾ ತಪ್ಪೋ? ನಾವು ತೆರಿಗೆಗಳನ್ನು ಕೊಡಬೇಕೇ ಅಥವಾ ಕೊಡಬಾರದೇ?” ಎಂದರು.
15 ಈ ಜನರು ನಿಜವಾಗಿಯೂ ತನ್ನನ್ನು ವಂಚಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ನನ್ನ ಮಾತಿನಲ್ಲಿ ತಪ್ಪನ್ನು ಕಂಡುಹಿಡಿಯಲು ಏಕೆ ಪ್ರಯತ್ನಿಸುತ್ತೀರಿ? ನನಗೆ ಒಂದು ಬೆಳ್ಳಿನಾಣ್ಯವನ್ನು[a] ಕೊಡಿರಿ, ನಾನು ಅದನ್ನು ನೋಡಬೇಕು” ಎಂದನು. 16 ಅವರು ಆತನಿಗೆ ಒಂದು ನಾಣ್ಯವನ್ನು ಕೊಟ್ಟರು. ಯೇಸು ಅವರಿಗೆ, “ನಾಣ್ಯದ ಮೇಲೆ ಯಾರ ಚಿತ್ರವಿದೆ? ಮತ್ತು ಅದರ ಮೇಲೆ ಯಾರ ಹೆಸರಿದೆ?” ಎಂದು ಕೇಳಿದನು. ಅವರು, “ಇದು ಸೀಸರನ ಚಿತ್ರ ಮತ್ತು ಸೀಸರನ ಹೆಸರು” ಎಂದು ಉತ್ತರಿಸಿದರು.
17 ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿ. ದೇವರದನ್ನು ದೇವರಿಗೆ ಕೊಡಿ” ಎಂದು ಹೇಳಿದನು. ಯೇಸು ಹೇಳಿದ್ದನ್ನು ಕೇಳಿ ಅವರು ಅತ್ಯಾಶ್ಚರ್ಯಪಟ್ಟರು.
ಯೇಸುವನ್ನು ವಂಚಿಸಲು ಸದ್ದುಕಾಯರ ಪ್ರಯತ್ನ
(ಮತ್ತಾಯ 22:23-33; ಲೂಕ 20:27-40)
18 ನಂತರ ಸದ್ದುಕಾಯರಲ್ಲಿ (ಸದ್ದುಕಾಯರು ಪುನರುತ್ಥಾನವಿಲ್ಲವೆಂದು ನಂಬುತ್ತಾರೆ.) ಕೆಲವರು ಯೇಸುವಿನ ಬಳಿಗೆ ಬಂದು, 19 “ಉಪದೇಶಕನೇ, ವಿವಾಹಿತನೊಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ಸಹೋದರನು ಮದುವೆ ಮಾಡಿಕೊಂಡು ಸತ್ತುಹೋದ ಸಹೋದರನಿಗಾಗಿ ಸಂತಾನ ಪಡೆಯಬೇಕೆಂದು ಮೋಶೆಯು ಬರೆದಿದ್ದಾನೆ.[b] 20 ಏಳು ಜನ ಸಹೋದರರಿದ್ದರು. ಮೊದಲನೆಯ ಸಹೋದರನು ಮದುವೆ ಮಾಡಿಕೊಂಡು ಮಕ್ಕಳಿಲ್ಲದೆ ಸತ್ತುಹೋದನು. 21 ಆದ್ದರಿಂದ ಎರಡನೆಯ ಸಹೋದರನು ಆಕೆಯನ್ನು ಮದುವೆಯಾದನು. ಆದರೆ ಅವನೂ ಮಕ್ಕಳಿಲ್ಲದೆ ಸತ್ತುಹೋದನು. ಮೂರನೆಯ ಸಹೋದರನಿಗೂ ಹೀಗೆಯೇ ಆಯಿತು. 22 ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿ ಆಕೆಯಲ್ಲಿ ಮಕ್ಕಳಿಲ್ಲದೆ ಸತ್ತುಹೋದರು. ಕೊನೆಗೆ ಆಕೆಯೂ ಸತ್ತುಹೋದಳು. 23 ಹೀಗಿರಲು ಜನರು ಪುನರುತ್ಥಾನ ಹೊಂದಿದಾಗ ಆಕೆಯು ಯಾರ ಹೆಂಡತಿಯಾಗುವಳು?” ಎಂದರು.
24 ಯೇಸು, “ನೀವು ಇಂಥಾ ತಪ್ಪನ್ನು ಮಾಡುವುದೇಕೆ? ಪವಿತ್ರಗ್ರಂಥವಾಗಲಿ, ದೇವರ ಶಕ್ತಿಯಾಗಲಿ ನಿಮಗೆ ಗೊತ್ತಿಲ್ಲ. 25 ಸತ್ತ ಜನರು ಪುನರುತ್ಥಾನ ಹೊಂದಿದಾಗ ಸ್ತ್ರೀಯರು ಮತ್ತು ಪುರುಷರು ಮದುವೆ ಮಾಡಿಕೊಳ್ಳುವುದೂ ಇಲ್ಲ. ತಮ್ಮ ಮಕ್ಕಳಿಗೂ ಮದುವೆ ಮಾಡಿಸುವುದೂ ಇಲ್ಲ. ಅವರೆಲ್ಲರೂ ಪರಲೋಕದಲ್ಲಿರುವ ದೇವದೂತರಂತಿರುತ್ತಾರೆ. 26 ಸತ್ತಜನರ ಪುನರುತ್ಥಾನದ ಬಗ್ಗೆ ದೇವರು ಹೇಳಿರುವುದನ್ನು ನೀವು ಖಂಡಿತವಾಗಿ ಓದಿದ್ದೀರಿ. ದೇವರು ಮೋಶೆಗೆ, ‘ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(B) ಎಂದು ಹೇಳಿದ್ದನ್ನು ಮೋಶೆಯ ಪುಸ್ತಕದಲ್ಲಿರುವ ಉರಿಯುವ ಪೊದೆಯ ಅಧ್ಯಾಯದಲ್ಲಿ ಕಾಣಬಹುದು. 27 ದೇವರು ತನ್ನನ್ನು ಅಬ್ರಹಾಮನ, ಇಸಾಕನ, ಯಾಕೋಬನ ದೇವರು ಎಂದು ಹೇಳಿಕೊಂಡಿರುವುದರಿಂದ ಇವರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ, ದೇವರು ಜೀವಿತರಿಗೆ ದೇವರಾಗಿದ್ದಾನೆಯೇ ಹೊರತು ಸತ್ತವರಿಗೆ ಅಲ್ಲ.”[c]
Kannada Holy Bible: Easy-to-Read Version. All rights reserved. © 1997 Bible League International