New Testament in a Year
ದೇವರ ಮಗನ ಆಗಮನ
(ಮತ್ತಾಯ 21:33-46; ಲೂಕ 20:9-19)
12 ಯೇಸು ಜನರಿಗೆ ಸಾಮ್ಯಗಳ ಮೂಲಕ ಉಪದೇಶಿಸುತ್ತಾ ಅವರಿಗೆ ಹೇಳಿದ್ದೇನೆಂದರೆ: “ಒಬ್ಬನು ದ್ರಾಕ್ಷಿಯ ತೋಟವನ್ನು ಮಾಡಿ, ಸುತ್ತಲೂ ಗೋಡೆ ಹಾಕಿಸಿ, ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದನು. ಅವನು ಕೆಲವು ರೈತರಿಗೆ ತೋಟವನ್ನು ಗುತ್ತಿಗೆಗೆ ಕೊಟ್ಟು ಪ್ರವಾಸಕ್ಕೆ ಹೊರಟನು.
2 “ತರುವಾಯ ಫಲಕಾಲವು ಬಂದಾಗ ತನ್ನ ಪಾಲಿನ ದ್ರಾಕ್ಷಿಯನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದನು. 3 ಆದರೆ ರೈತರು ಆ ಸೇವಕನನ್ನು ಹಿಡಿದುಕೊಂಡು ಹೊಡೆದು ಏನನ್ನೂ ಕೊಡದೆ ಅವನನ್ನು ಕಳುಹಿಸಿಬಿಟ್ಟರು. 4 ಆಗ ಯಜಮಾನನು ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಅವನಿಗೂ ತಲೆಯ ಮೇಲೆ ಹೊಡೆದು ಅವಮಾನ ಮಾಡಿದರು. 5 ಆದ್ದರಿಂದ ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನು ಕೊಂದುಹಾಕಿದರು. ಆ ಯಜಮಾನನು ಇತರ ಅನೇಕ ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಕೆಲವು ಸೇವಕರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.
6 “ಆ ಯಜಮಾನನಿಗೆ ರೈತರ ಬಳಿಗೆ ಕಳುಹಿಸಲು ಪ್ರಿಯ ಮಗನೊಬ್ಬನೇ ಉಳಿದಿದ್ದನು. ಅವನು ಕಳುಹಿಸಬಹುದಾದ ಕೊನೆಯ ವ್ಯಕ್ತಿ ಅವನ ಸ್ವಂತ ಮಗನಾಗಿದ್ದನು. ‘ರೈತರು ನನ್ನ ಮಗನಿಗೆ ಗೌರವ ಕೊಡುತ್ತಾರೆ’ ಎಂದುಕೊಂಡು ಯಜಮಾನನು ಅವನನ್ನೇ ಕಳುಹಿಸಿದನು.
7 “ಆದರೆ ರೈತರು ಒಬ್ಬರಿಗೊಬ್ಬರು, ‘ಇವನು ಯಜಮಾನನ ಮಗನು. ಈ ದ್ರಾಕ್ಷಿತೋಟದ ಹಕ್ಕುದಾರ. ನಾವು ಇವನನ್ನು ಕೊಂದರೆ, ದ್ರಾಕ್ಷಿತೋಟ ನಮ್ಮದಾಗುತ್ತದೆ’ ಎಂದುಕೊಂಡು, 8 ಮಗನನ್ನು ಹಿಡಿದು ಕೊಂದುಹಾಕಿ, ದ್ರಾಕ್ಷಿತೋಟದ ಹೊರಗೆ ಎಸೆದುಬಿಟ್ಟರು.
9 “ಹೀಗಿರುವಾಗ ಆ ದಾಕ್ಷಿತೋಟದ ಯಜಮಾನನು ಏನು ಮಾಡುತ್ತಾನೆ? ಅವನು ತೋಟಕ್ಕೆ ಹೋಗಿ, ಆ ರೈತರನ್ನು ಕೊಂದು ತೋಟವನ್ನು ಬೇರೆ ರೈತರಿಗೆ ಒಪ್ಪಿಸಿಕೊಡುತ್ತಾನೆ. 10 ಪವಿತ್ರಗ್ರಂಥದಲ್ಲಿ ಬರೆದಿರುವಂತೆ,
‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
11 ಇದು ಪ್ರಭುವಿನಿಂದ ಆಯಿತು. ಇದು ನಮಗೆ ಆಶ್ಚರ್ಯವಾಗಿ ತೋರುತ್ತದೆ.’(A)”
12 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯನಾಯಕರು ಕೇಳಿ ತಮ್ಮನ್ನು ಕುರಿತಾಗಿಯೇ ಇದನ್ನು ಹೇಳಿದನೆಂದು ತಿಳಿದುಕೊಂಡು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರೂ ಜನರಿಗೆ ಹೆದರಿಕೊಂಡು ಆತನನ್ನು ಬಿಟ್ಟುಹೋದರು.
ಯೇಸುವನ್ನು ವಂಚಿಸಲು ಯೆಹೂದ್ಯನಾಯಕರ ಪ್ರಯತ್ನ
(ಮತ್ತಾಯ 22:15-22; ಲೂಕ 20:20-26)
13 ಅನಂತರ ಯೆಹೂದ್ಯನಾಯಕರು ಕೆಲವು ಫರಿಸಾಯರನ್ನು ಹಾಗೂ ಹೆರೋದ್ಯರ ಗುಂಪಿನಿಂದ ಕೆಲವರನ್ನು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಲು ಕಳುಹಿಸಿದರು. 14 ಫರಿಸಾಯರು ಮತ್ತು ಹೆರೋದ್ಯರು ಯೇಸುವಿನ ಬಳಿಗೆ ಬಂದು, ಆತನಿಗೆ, “ಉಪದೇಶಕನೇ, ನೀನು ಯಥಾರ್ಥನೆಂಬುದು ನಮಗೆ ತಿಳಿದಿದೆ. ನಿನ್ನ ಬಗ್ಗೆ ಜನರು ಏನು ಯೋಚಿಸುತ್ತಾರೆಂಬುದರ ಬಗ್ಗೆ ನಿನಗೆ ಹೆದರಿಕೆಯಿಲ್ಲ. ಜನರೆಲ್ಲರೂ ನಿನಗೆ ಒಂದೇ. ಮತ್ತು ನೀನು ದೇವರ ಮಾರ್ಗವನ್ನು ಕುರಿತು ಸತ್ಯವನ್ನೇ ಉಪದೇಶಿಸುತ್ತಿರುವೆ ಎಂದು ನಮಗೆ ಗೊತ್ತಿದೆ. ಆದ್ದರಿಂದ ನಮಗೆ ಹೇಳು: ಸೀಸರನಿಗೆ ತೆರಿಗೆ ಕೊಡುವುದು ಸರಿಯೋ? ಅಥವಾ ತಪ್ಪೋ? ನಾವು ತೆರಿಗೆಗಳನ್ನು ಕೊಡಬೇಕೇ ಅಥವಾ ಕೊಡಬಾರದೇ?” ಎಂದರು.
15 ಈ ಜನರು ನಿಜವಾಗಿಯೂ ತನ್ನನ್ನು ವಂಚಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಅವರಿಗೆ, “ನನ್ನ ಮಾತಿನಲ್ಲಿ ತಪ್ಪನ್ನು ಕಂಡುಹಿಡಿಯಲು ಏಕೆ ಪ್ರಯತ್ನಿಸುತ್ತೀರಿ? ನನಗೆ ಒಂದು ಬೆಳ್ಳಿನಾಣ್ಯವನ್ನು[a] ಕೊಡಿರಿ, ನಾನು ಅದನ್ನು ನೋಡಬೇಕು” ಎಂದನು. 16 ಅವರು ಆತನಿಗೆ ಒಂದು ನಾಣ್ಯವನ್ನು ಕೊಟ್ಟರು. ಯೇಸು ಅವರಿಗೆ, “ನಾಣ್ಯದ ಮೇಲೆ ಯಾರ ಚಿತ್ರವಿದೆ? ಮತ್ತು ಅದರ ಮೇಲೆ ಯಾರ ಹೆಸರಿದೆ?” ಎಂದು ಕೇಳಿದನು. ಅವರು, “ಇದು ಸೀಸರನ ಚಿತ್ರ ಮತ್ತು ಸೀಸರನ ಹೆಸರು” ಎಂದು ಉತ್ತರಿಸಿದರು.
17 ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿ. ದೇವರದನ್ನು ದೇವರಿಗೆ ಕೊಡಿ” ಎಂದು ಹೇಳಿದನು. ಯೇಸು ಹೇಳಿದ್ದನ್ನು ಕೇಳಿ ಅವರು ಅತ್ಯಾಶ್ಚರ್ಯಪಟ್ಟರು.
ಯೇಸುವನ್ನು ವಂಚಿಸಲು ಸದ್ದುಕಾಯರ ಪ್ರಯತ್ನ
(ಮತ್ತಾಯ 22:23-33; ಲೂಕ 20:27-40)
18 ನಂತರ ಸದ್ದುಕಾಯರಲ್ಲಿ (ಸದ್ದುಕಾಯರು ಪುನರುತ್ಥಾನವಿಲ್ಲವೆಂದು ನಂಬುತ್ತಾರೆ.) ಕೆಲವರು ಯೇಸುವಿನ ಬಳಿಗೆ ಬಂದು, 19 “ಉಪದೇಶಕನೇ, ವಿವಾಹಿತನೊಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ಸಹೋದರನು ಮದುವೆ ಮಾಡಿಕೊಂಡು ಸತ್ತುಹೋದ ಸಹೋದರನಿಗಾಗಿ ಸಂತಾನ ಪಡೆಯಬೇಕೆಂದು ಮೋಶೆಯು ಬರೆದಿದ್ದಾನೆ.[b] 20 ಏಳು ಜನ ಸಹೋದರರಿದ್ದರು. ಮೊದಲನೆಯ ಸಹೋದರನು ಮದುವೆ ಮಾಡಿಕೊಂಡು ಮಕ್ಕಳಿಲ್ಲದೆ ಸತ್ತುಹೋದನು. 21 ಆದ್ದರಿಂದ ಎರಡನೆಯ ಸಹೋದರನು ಆಕೆಯನ್ನು ಮದುವೆಯಾದನು. ಆದರೆ ಅವನೂ ಮಕ್ಕಳಿಲ್ಲದೆ ಸತ್ತುಹೋದನು. ಮೂರನೆಯ ಸಹೋದರನಿಗೂ ಹೀಗೆಯೇ ಆಯಿತು. 22 ಏಳು ಮಂದಿ ಸಹೋದರರೂ ಆಕೆಯನ್ನು ಮದುವೆಯಾಗಿ ಆಕೆಯಲ್ಲಿ ಮಕ್ಕಳಿಲ್ಲದೆ ಸತ್ತುಹೋದರು. ಕೊನೆಗೆ ಆಕೆಯೂ ಸತ್ತುಹೋದಳು. 23 ಹೀಗಿರಲು ಜನರು ಪುನರುತ್ಥಾನ ಹೊಂದಿದಾಗ ಆಕೆಯು ಯಾರ ಹೆಂಡತಿಯಾಗುವಳು?” ಎಂದರು.
24 ಯೇಸು, “ನೀವು ಇಂಥಾ ತಪ್ಪನ್ನು ಮಾಡುವುದೇಕೆ? ಪವಿತ್ರಗ್ರಂಥವಾಗಲಿ, ದೇವರ ಶಕ್ತಿಯಾಗಲಿ ನಿಮಗೆ ಗೊತ್ತಿಲ್ಲ. 25 ಸತ್ತ ಜನರು ಪುನರುತ್ಥಾನ ಹೊಂದಿದಾಗ ಸ್ತ್ರೀಯರು ಮತ್ತು ಪುರುಷರು ಮದುವೆ ಮಾಡಿಕೊಳ್ಳುವುದೂ ಇಲ್ಲ. ತಮ್ಮ ಮಕ್ಕಳಿಗೂ ಮದುವೆ ಮಾಡಿಸುವುದೂ ಇಲ್ಲ. ಅವರೆಲ್ಲರೂ ಪರಲೋಕದಲ್ಲಿರುವ ದೇವದೂತರಂತಿರುತ್ತಾರೆ. 26 ಸತ್ತಜನರ ಪುನರುತ್ಥಾನದ ಬಗ್ಗೆ ದೇವರು ಹೇಳಿರುವುದನ್ನು ನೀವು ಖಂಡಿತವಾಗಿ ಓದಿದ್ದೀರಿ. ದೇವರು ಮೋಶೆಗೆ, ‘ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(B) ಎಂದು ಹೇಳಿದ್ದನ್ನು ಮೋಶೆಯ ಪುಸ್ತಕದಲ್ಲಿರುವ ಉರಿಯುವ ಪೊದೆಯ ಅಧ್ಯಾಯದಲ್ಲಿ ಕಾಣಬಹುದು. 27 ದೇವರು ತನ್ನನ್ನು ಅಬ್ರಹಾಮನ, ಇಸಾಕನ, ಯಾಕೋಬನ ದೇವರು ಎಂದು ಹೇಳಿಕೊಂಡಿರುವುದರಿಂದ ಇವರು ನಿಜವಾಗಿಯೂ ಸತ್ತಿಲ್ಲ. ಏಕೆಂದರೆ, ದೇವರು ಜೀವಿತರಿಗೆ ದೇವರಾಗಿದ್ದಾನೆಯೇ ಹೊರತು ಸತ್ತವರಿಗೆ ಅಲ್ಲ.”[c]
Kannada Holy Bible: Easy-to-Read Version. All rights reserved. © 1997 Bible League International